ಗೋಡೆಗೆ ಸಾಚಿದ ಬೆನ್ನು

7

ಗೋಡೆಗೆ ಸಾಚಿದ ಬೆನ್ನು

Published:
Updated:

ಕುಟ್ಟಣ್ಣನಿಗೆ ಆಗಿನ್ನೂ ಬೆಳಗಾಗಿರಲಿಲ್ಲ. ಬಹುತೇಕ ಎಲ್ಲ ದಿನಗಳಲ್ಲೂ ಹೀಗೇ. ಅವನಿಗೆ ಬೇಗ ಬೆಳಗಾಗದು. ಕೊಟ್ಟಿಗೆಯಲ್ಲಿ ಕ್ಷಣವೂ ಬಿಡದೇ ಬೆನ್ನು ಕಾಲು ಮೈಗೆಲ್ಲ ಕಚ್ಚುವ ಹುಳಗಳಿಗೆ ರಾತ್ರಿಯಿಡೀ ಬಾಲದಿಂದ ರಪ್ಪನೆ ಹೊಡೆಯುತ್ತ ಕಣ್ಣು ಮುಚ್ಚಿದರೂ ನಿದ್ದೆಹೋಗದ ಆದರೆ ನಮಗೆ ಮನುಷ್ಯರಿಗೆ ಮಾತ್ರ ನಿದ್ದೆ ಹೋದಂತೆ ಗಡದ್ದಾಗಿ ನಿದ್ದೆ ಹೊಡೆದಂತೆ ಕಾಣುವ ಕುಟ್ಟಣ್ಣನ ಆಕಳು ಭೋಗುಟ್ಟು ಬೆಳಗಾಯಿತು ಬೆಳಗಾಯಿತು ಎಂದು ಕೂಗುವಾಗೆಲ್ಲ ಕುಟ್ಟಣ್ಣನ ಬೆಳಗು ನಿಧಾನವಾಗಿ ಆಗುವುದು. ನಂತರವೇ ಅವನು ಎದ್ದು ಕಣ್ಣು ತೊಳೆದು ಯಾವತ್ತೋ ಖಾಲಿಯಾದ ಟೂತ್‌ಪೇಸ್ಟನ್ನು ಖರೀದಿಸಿ ಎಷ್ಟು ತಿಂಗಳಾಯಿತೆಂದೂ ನೆನಪಿಗೆ ಬಾರದ ಬ್ರಷ್ಷಿನ ಮೂತಿಗೆ ಸವರಿ ಯಾವತ್ತೋ ಉದುರಿಹೋದ ಹಲ್ಲುಗಳೂ ಇವೆಯೆಂಬಂತೆ ಯೌವನದ ಹುರುಪು ತಂದುಕೊಂಡು ತಿಕ್ಕುವುದು. ಆಗೆಲ್ಲ ಅವನಿಗೆ ಮನೆಯ ಒಂದು ಮೂಲೆಗೆ ತೆಪ್ಪಗೆ ಬಿದ್ದುಕೊಂಡ ಲ್ಯಾಂಡ್ ಲೈನ್ ಫೋನು ಹೆಂಗಸರ ಅಪರಾವತಾರದಂತೆ ಮಾತನಾಡುವುದು ಕೇಳಿಸುವುದು.

ಕೇಳಿಸುವುದು ಅಂದೆನಲ್ಲ, ಕುಟ್ಟಣ್ಣನ ದಿನಬೆಳಗಿನ ಪ್ರಶ್ನೆಯೂ ಅದೇ. ನೆರೆಮನೆಯ ಪರಮಜ್ಜನಿಗೂ ತನ್ನಷ್ಟೇ ವಯಸ್ಸು. ಊರ ಭಾನಗೇಡಿಗಳ ಸುದ್ದಿಯನ್ನು ಬಾಯಿಗೆ ಬಂದಂತೆ ಹೇಳುತ್ತ ಕೇಳುತ್ತ ಎಷ್ಟು ಮಳೆಯ ಬೆಳಗುಗಳನ್ನು, ತಾಪದ ಮಧ್ಯಾಹ್ನಗಳನ್ನು, ಹೊದ್ದ ಕಂಬಳಿಯಿಂದ ಹೊರಗೆ ಮುಖ ಹಾಕಲು ಮನಸ್ಸಾಗದ ಎಷ್ಟು ಚಳಿಯ ರಾತ್ರಿಗಳನ್ನು ಅವರಿಬ್ಬರೂ ಕಂಡಿದ್ದಾರೊ. ಅದು ಕುಟ್ಟಣ್ಣನಿಗಾಗಿ ಪರಮಜ್ಜನಿಗಾಗಿ ಕೊನೆಗೆ ಹುಟ್ಟಿ ನಾಕು ಸೋಮವಾರವೂ ಕಳೆದಿರದ ಈ ಕತೆ ಆಗಬಹುದಾದ ಕತೆಯನ್ನು ಬರೆಯುತ್ತಿರುವ ನನಗಾಗಲಿ ನಿಜಕ್ಕೂ ಗೊತ್ತಿಲ್ಲ. ಹೀಗೆ ನಮ್ಮೂರಿನ ಎಷ್ಟೋ ಕುಟ್ಟಣ್ಣರಿಗೆ ವಯಸ್ಸಿನ ನೆನಪಿಲ್ಲ. ನಮ್ಮ ಕಥಾನಾಯಕ ಕುಟ್ಟಣ್ಣನೂ ಅದೇ ಮರೆವಿನ ಜಾತಿಯವ. ಆದರೆ ಹೇಳಲೇಬೇಕೆಂದರೆ ಈ ಕತೆಯಂಥದ್ದು ಮುಂದುವರೆಯಲೇಬೇಕೆಂದರೆ ಕುಟ್ಟಣ್ಣನಿಗೆ ಅವರ ತೋಟದ ಮಧ್ಯ ಮರಗಳಂತೆಯೇ ಬದುಕುವ ಕುಟ್ಟಣ್ಣನಿಗೂ ಅಪರಾತ್ರಿಯ ಹೊತ್ತಲ್ಲೂ ಯಾವ ಸಂದಿಯಲ್ಲಿ ಹತ್ತಿಯ ತುಂಡು ಬಿದ್ದರೂ ಕೇಳುತ್ತದೆ. ಅವನು ಯಾವತ್ತೂ ತನಗ್ಯಾಕೆ ಹೀಗೆ ಕಿವಿ ಇನ್ನೂ ಚುರುಕು ಎಂದು ಯೋಚಿಸುತ್ತಲೇ ಮಲಗುವುದು ಮತ್ತೆ ಏನೋ ಸಣ್ಣ ಸದ್ದು ಕೇಳಿ ರಾತ್ರಿಯ ಎಷ್ಟೋ ಹೊತ್ತಿಗೆ ಏಳುವುದು.

ಈಗ ಮಾತಾಡಿದ್ದು ಲ್ಯಾಂಡ್ ಲೈನ್ ಫೋನು ಅಂದೆನಲ್ಲ. ಹಲ್ಲು ತಿಕ್ಕುತ್ತಿರುವ ಕುಟ್ಟಣ್ಣ ನಿನ್ನೆಯಷ್ಟೇ ನಿಧಾನವಾಗಿ ಎದ್ದು ಎತ್ತಲು ಯಾವ ಗಡಿಬಿಡಿಯೂ ಇಲ್ಲದವರಷ್ಟು ನಿಧಾನವಾಗಿ ಫೋನೆತ್ತಿದ. ಅವನಿಗೆ ಗೊತ್ತು, ಕೇಳಿಸುವುದು ಮಗ ವೆಂಕಟನದೇ ಮಾತು. ಅವನು ಫೋನು ಮಾಡಿದಾಗೆಲ್ಲ ಧ್ವನಿಯ ಸುತ್ತ ಯಾವುದೋ ಮಹಾನಗರದ ಸಕಲ ಚರಾಚರಗಳ ಕೂಗು ಪ್ರಭಾವಳಿಯಾಗಿ ಕುಟ್ಟಣ್ಣನ ಕಿವಿಗೆ ಬಡಿಯುತ್ತದೆ.

ಹಲೋ ಎಂದು ಮಗ ಕರೆದದ್ದು ಕುಟ್ಟಣ್ಣನಿಗೆ ಕೇಳಿಸಿದರೂ ಅವನು ಯಾಕೆ ಮಾರುತ್ತರ ಹೇಳಲಿಲ್ಲ? ಗೊತ್ತಿಲ್ಲ.

ಮತ್ತೆ...

‘ಹಲೋ..ಹಲೋ ಅಪ್ಪಾ ಆರಾಮಿದ್ಯಾ?’                        

ಹೂಂ ಕುಟ್ಟಣ್ಣನ ಉತ್ತರಕ್ಕೆ ಫೋನು ಮೈಕೊಡವಿಕೊಂಡು ನಿದ್ದೆಯ ಗುಂಗಿನಿಂದ ಎಚ್ಚೆತ್ತಿತು.

ಮತ್ತೆ ಎರಡು ಅಥವಾ ಮೂರು ಸೆಕೆಂಡು ಮೌನ. ಅದು ಐದು ಸೆಕೆಂಡಿಗೂ ವಿಸ್ತರಿಸಿರಬಹುದು. ಗೋಡೆಗೆ ಜೋಲುತ್ತಿದ್ದ ಲೋಲಕದ ಗಡಿಯಾರಕ್ಕೂ ಜೀವಹೋಗಿ ಬಹಳವೇ ಕಾಲವಾಗಿತ್ತು.

ಮೌನ ಮತ್ತೆ ಸತ್ತ ಹಾಗೆ...

ಮತ್ತೆ...

‘ಹೆಲೋ...ಕೇಳ್ತಿದ್ದಾ?’ ಮಗನಲ್ಲಿರುವುದು ಬರೀ ಪ್ರಶ್ನೆ

‘ಹೇಳು,ಕೇಳ್ತಿದೆ’

‘ಗುಳಿಗೆ ಗಿಳಿಗೆ ಸರಿಯಾಗಿ ತಿಂತಿದ್ಯಾ ಇಲ್ಯಾ? ಖಾಲಿ ಆದ್ರೆ ಹೇಳು’

‘ಹು’

‘ಆಸ್ರಿಂಗೆ ಕುಡದ್ಯಾ?’

‘ಹು’

ಪ್ರಾಯಕಾಲದಲ್ಲಿ ಸತ್ಯದ ಮಾತುಗಳಿಂದ ಊರ ಜನರ ವಿರುದ್ಧ ಮಾಡಿಕೊಂಡಿದ್ದ ಕುಟ್ಟಣ್ಣ ಈಗೀಗ ಸುಳ್ಳು ಹೇಳುವುದನ್ನು ಕಲಿತಿದ್ದಾನೆ.

‘ಮತ್ತೆ?’ ಮೊದಲೇ ಹೇಳಿದ್ದೆನಲ್ಲ; ಮಗ ಪರಮನ ಬಳಿ ಇರುವುದು ಬರೀ ಪ್ರಶ್ನೆಗಳಷ್ಟೆ.

‘ಮತ್ತೇನಿಲ್ಲ’ ಮಗನ ಪ್ರಶ್ನೆಯನ್ನು ಸರಿಯಾಗಿ ಕೇಳಿ ಆಗಷ್ಟೆ ನಿದ್ದೆಯಿಂದ ಎದ್ದು ಬಂದವರಂತೆ ಸರಿಯಾಗಿ ಉತ್ತರ ಕುಟ್ಟಣ್ಣನದು.

‘ಹಂಗಾರೆ ಫೋನ್ ಇಡುವೆ...’

ಹು ಅಂದನೋ ಬಿಟ್ಟನೋ ಗೊತ್ತಿಲ್ಲ. ಬಹುತೇಕ ಹ ಹಾ ಬಳ್ಳಿಗಳಲ್ಲೆ ಮಾತುಕತೆ ಮುಗಿಯಿತು. ಫೋನು ಮತ್ತೆ ಸತ್ತವರಂತೆ ಬಿದ್ದುಕೊಂಡಿತು. ಆಗಲೇ ಕುಟ್ಟಣ್ಣನಿಗೆ ತನಗೆ ಹಸಿವಾಗುವಷ್ಟು ಹೊತ್ತಾಯಿತು ಎಂದು ನೆನಪಾದದ್ದು.

ಛೇ! ಈ ಹಸಿವಾದರೂ ಯಾಕೆ ಆಗುತ್ತದೋ ಎಂದು ಬಡಬಡಿಸುತ್ತ ಅಡುಗೆಕೋಣೆ ಹೊಕ್ಕ ಕುಟ್ಟಣ್ಣನಿಗೆ ಹೆಂಡತಿಯ ಫೋಟೋ ಪ್ರಿಂಟ್ ಹಾಕಿಸಿ ಅಲ್ಲೆಲ್ಲಾದರೂ ಇಡಬೇಕಿತ್ತು ಅನಿಸಿತು. ಅವನಿಗೆ ಮೊದಲಿಂದಲೂ ಹಾಗೇ, ಹೆಂಡತಿಯ ಮೇಲೆ ರಾಶಿ ಪ್ರೀತಿ.

ಹೋದರೆ ಏನುಂಟು ಅಡುಗೆ ಕೋಣೆಯಲ್ಲಿ? ಖಾಲಿ ಡಬ್ಬಗಳಿಗೆ ಕುಟ್ಟಣ್ಣನದೇ ಸ್ವರೂಪ ಅಂಟಿಹೋಗಿದೆ. ಕುಟ್ಟಣ್ಣನ ಹೆಂಡತಿ ಎಂಬ ಸತ್ತುಹೋದ ಹೆಂಗಸಿನ ಕೈ ಅವುಗಳಿಗೆ ತಾಕದೆ ಬಳೆಗಳ ಗಲಗಲ ಶಬ್ದ ಅಲ್ಲೆಲ್ಲೂ ಕೇಳದೆ ಹದಿನೈದು ವರ್ಷ, ಬರುವ ತಿಂಗಳಿಗೆ. ಕುಟ್ಟಣ್ಣನೋ ಬರೀ ಅಡುಗೆಕೋಣೆಗೆ ಹೋಗುವುದು. ತಿನ್ನಲು ಏನಾದರೂ ಉಂಟಾ ಎಂದು ನೋಡುವುದು. ಕೊನೆಗೆ ಏನೂ ಇಲ್ಲ ಎಂದು ದಿನವೂ ಅಂದುಕೊಂಡು ಥೇಟು ನಿನ್ನೆಯ ಹಾಗೆಯೇ ಮೆತ್ತಿನ ಕಪ್ಪಿನ ಕೋಣೆಯಲ್ಲಿ ದಿನವಿಡೀ ಹಾಸಿಕೊಂಡಿರುವ ಹಾಸಿಗೆಯ ಮೇಲೆ ತಲೆ– ಮೈ– ಕಾಲು ಚಾಚುವುದು. ಆಗಲೂ ಮನೆಯಿಡೀ ಹಾಯಾಗಿ ತಮ್ಮ ಪಾಡಿಗೆ ತಾವು ಓಡಾಡುವ ಜಿರಲೆಗಳ ಗೌಜೇ ಅವನ ಸೂಕ್ಷ್ಮಕಿವಿಗೆ ದಂಡಿಯಾಗಿ ಬಡಿಯುವುದು. ಆಗೆಲ್ಲ ಆ ಕಿವಿಯನ್ನು ಕೊಯ್ದು ಎಲ್ಲಾದರೂ ದೂರ ಅಥವಾ ಗೊಬ್ಬರಗುಂಡಿಗೆ ಎಸೆಯಬೇಕೆಂದು ಅನಿಸಿದರೂ ಹಾಗೆಲ್ಲ ಮಾಡಲು ಆಗದೇ ಮತ್ತೆ ಸುಮ್ಮನೆ ಮಲಗುವುದು. ಕಣ್ಣು ತನ್ನಿಂತಾನೇ ಮುಚ್ಚಿದರೆ, ಅವನಿಗೆ ನಿದ್ದೆ ಬಂದರೆ ಅವನಿಗೆ ಈ ಜಿರಲೆಗಳ ಕೂಗಾಟ ಕೇಳಿಸದು.

ಇಂದೂ ಹಾಗೆಯೇ ಮಲಗಿದ ಕುಟ್ಟಣ್ಣ ಸತ್ತು ಹೋದ. ಈಗಷ್ಟೇ ಪರಮಜ್ಜ ನಮ್ಮ ಮನೆಗೆ ಓಡೋಡಿ ಬಂದು ಸುದ್ದಿ ಹೇಳಿ ‘ಇನ್ನೂ ಬಹಳ ಜನರಿಗೆ ಹೇಳಲಿಕ್ಕುಂಟು’ ಎಂದು ಬಂದಷ್ಟೇ ಜೋರಿನಲ್ಲಿ ಕೂಗುತ್ತ ಹೊರಟುಹೋದ.

‘ಹೋದ್ನಾ ಹಂಗಾದ್ರೆ, ನೋಡೂದೆಲ್ಲ ನೋಡಾದ ಮೇಲೆ ಇನ್ನೂ ಎಂಥ ಬದುಕುವುದು ಅವ, ಸಮ ಆತು. ಅಲ್ದನಾ?’ ಎದುರಿಗೆ ಕವಳ ಪುಡಿ ಮಾಡುತ್ತಿದ್ದ ರಾಜಾರಾಮ ಒಂದು ಹಡಬೆ ನಗೆ ಆಡುತ್ತ ಆಡುತ್ತ ಕೇಳಿದ. ಏನು ಹೇಳಬೇಕೋ ತಿಳಿಯಲಿಲ್ಲ. ‘ಕುಟ್ಟಣ್ಣನ ಮನೆಯ ಇಲಿ, ಜಿರಲೆಗಳು ಕೂಗುವುದನ್ನು ಇನ್ನು ಯಾರು ಕೇಳಿಸಿಕೊಳ್ಳುತ್ತಾರೋ ಏನೋ ಎಂದು ಗೊಣಗಿಕೊಂಡೆ. ಈಗಿನ ಕಾಲದವರು ಜಿರಲೆಗಳನ್ನು ಹಾಗೆಲ್ಲ ಮನೆಯಲ್ಲಿ ಇಟ್ಟುಕೊಳ್ಳುವುದಿಲ್ಲ. ಕೆಂಪು ಹಿಟ್ಟೊ, ಕಪ್ಪು ಹಿಟ್ಟೊ ಏನನ್ನೋ ಹಾಳು ಮದ್ದು ಹೊಡೆದು ಕ್ರಿಮಿಗಳನ್ನು ನಿಕಾಲಿ ಮಾಡುತ್ತಾರೆ’ ಗಂಭೀರವಾಗಿ ಅಂದ. ಹೌದು ಅನಿಸಿತು. ಬರುವಾಗ ಇಲಿ ಮದ್ದು ತಕೊಂಡೇ ಬಾ ಎಂದು ಹೇಳಲು ವೆಂಕಟನ ಫೋನ್ ನಂಬರವೂ ಇಲ್ವಲ್ಲ ಎಂದು ನೆನಪಾಗಿ ಏನು ಮಾಡುವುದು ತಿಳಿಯದೆ ಸುಮ್ಮನೆs ಗೋಡೆಗೆ ಬೆನ್ನು ಸಾಚಿ ಕೂತೆ. ‘ಥೊಥೋಥೋ ಗೋಡೆಗೆ ಸುಣ್ಣ ಬಡಿದು ಎರಡು ದಿನವೂ ಆಗಿಲ್ಲ ಮಾರಾಯ, ಬೆನ್ನು ನೋಡಿಕೊ ಈಗ’ ಅವ ಕವಳ ತುಂಬಿದ ಬಾಯಿಂದ ಅಡಿಕೆ ಹೋಳು ಸಿಡಿಸುತ್ತ ಹೇಳುತ್ತಲೇ ಇದ್ದ.

ಒಳಪಡಿಯಿಂದ ಬರುತ್ತಿದ್ದ ಜಿರಲೆಗಳ ಸದ್ದನ್ನು ಕೇಳುತ್ತ ಮೊದಲು ಕೂತಿದ್ದ ಹಾಗೇ ಕೂತೆ.

ಬರಹ ಇಷ್ಟವಾಯಿತೆ?

 • 0

  Happy
 • 2

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !