ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವ್ಯಕ್ತ (ಕಥೆ)

Last Updated 30 ಮೇ 2020, 21:53 IST
ಅಕ್ಷರ ಗಾತ್ರ

ಬಸ್ ಸ್ಟ್ಯಾಂಡಿನಲ್ಲಿ ಅನ್ಯ ಮನಸ್ಕಳಾಗಿ ಕುಳಿತ ಧೃತಿ, ತನ್ನ ಮನದ ಆತಂಕವನ್ನು ಹೃದಯದ ಪರದೆಯಲ್ಲೇ ಬಚ್ಚಿಡಲು ಅಂದು ಜೊತೆಯಾದದ್ದು ಅಂದಿನ ದಿನ ಪತ್ರಿಕೆ. ಅದನ್ನೇ ಮುಖದ ಮುಂದೆ ಹಿಡಿದು, ಒತ್ತರಿಸಿ ಬರುತ್ತಿದ್ದ ದುಃಖವನ್ನು ಹೊರಚಿಮ್ಮುತ್ತಿದ್ದ ಕಣ್ಣೀರನ್ನು, ಬೇಡವೆಂದರೂ ಕಣ್ಣೀರಿಗೆ ಜನುಮದ ಜೋಡಿಯಂತೆ ಜೊತೆಯಾಗುವ ಮೂಗಿನ ಸೋರಿಕೆಗೆ ಕರ್ಚಿಫಿನಿಂದ ಎಷ್ಟೇ ತಡೆಗೋಡೆ ಕಟ್ಟಲು ಪ್ರಯತ್ನಿಸಿದರೂ ಕುಸಿದ ಗೋಡೆಯ ಮಗ್ಗುಲಿಂದ ಕೃಷ್ಣ, ಮಲಪ್ರಭೆ, ಘಟಪ್ರಭೆಯರ ಸಂಗಮದ ಅಗಾಧ ಜಲಧಾರೆ ತನಗರಿವಿಲ್ಲದೇ ಪ್ರವಹಿಸುತ್ತಿತ್ತು. ಪರ್ಸಿನಲ್ಲಿದ್ದ ಗರಿಗರಿಯಾದ ನೋಟುಗಳು, ಭರ್ತಿಯಾಗಿದ್ದ ಅಕೌಂಟಿನ ಎ.ಟಿ.ಎಮ್ ಶೂನ್ಯವೆನಿಸುತ್ತಿದ್ದವು. ಕೂಗಳತೆಯಲ್ಲಿ ಸಹಾಯದ ಆಪ್ತಹಸ್ತಗಳಿದ್ದರೂ ಕೇಳಲು ದನಿಯೇ ಬಿದ್ದು ಹೋಗಿತ್ತು. ಕುಳಿತ ಜಾಗೆಯಿಂದ ಎದ್ದು ಬಸ್ಸು ವಿಚಾರಿಸಲು ಕಾಲುಗಳು ರಸ ಹಿಂಡಿ ಒಗೆದ ಸಿಪ್ಪೆಗಳಾಗಿದ್ದವು. ಸಹದ್ಯೋಗಿಗಳೆಲ್ಲ ಆಗಲೇ ಬಸ್ಸು ಹಿಡಿದು ಹೋಗಿದ್ದಾಗಿತ್ತು.

ಅಂದು ನಿತೇಶನ ಆಗಮನದ ನಿರೀಕ್ಷೆಯಲ್ಲಿ ಉಲ್ಲಸಿತಳಾಗಿದ್ದ ಧೃತಿ, ಸಂಜೆ ಕತ್ತಲಾಗುತ್ತಿದ್ದಂತೆ ಕಸಿವಿಸಿಗೊಳ್ಳತೊಡಗಿದ್ದಳು. ಫೋನಾಯಿಸಲು… ಡ್ರೈವಿಂಗ್‌ನಲ್ಲಿ ತೊಂದರೆಯಾಗಬಹುದು… ಬಹುಶಃ ದಾರಿಯಲ್ಲಿರಬೇಕು ಎನ್ನುತ್ತಲೇ ಹೊತ್ತು ಕಳೆದು ಸಂಜೆ ದೀಪಗಳು ಹೊತ್ತಿಕೊಳ್ಳಲು ಪ್ರಾರಂಭಿಸಿದವು. ಅನ್ಯ ಮಾರ್ಗವಿಲ್ಲದೇ ತಾನೇ ಫೋನಾಯಿಸಿದಾಗ ‘ಹಲೋ ಹೇಳು ಧೃತಿ…’ ಎಂದಾಗ ಅವಳಿಗೆ ಎದೆ ಒಡೆದಂತೆ ಭಾಸವಾಯಿತು… ಫೋನಿನಲ್ಲಿ ಹಿಂದೆ ಮನೆಯ ಟಿವಿಯ ಶಬ್ದ, ಮಕ್ಕಳ ಚಿಲಿಪಿಲಿ….ಎಲ್ಲೋ ಎಡವಟ್ಟಾಯಿತೆಂದು ಖಾತ್ರಿಯಿಂದಲೇ ಅಳುಕುತ್ತ… ‘ಎಲ್ಲಿದೀರಿ?’ ಎಂದ ತಕ್ಷಣ ‘ಅಯ್ಯೋ ನೆನಪ ಇಲ್ಲಾ… ಸಂಜೀಕ ನಿನ್ನ ಪಿಕಪ್ ಮಾಡಾಕ ನಾನ ಬರ್ತೇನಿ. ಹಂಗ ಬರೋವಾಗ ‘ಕಾಫೀ ಡೇ’ಯೊಳಗ ಇವನಿಂಗ್ ಕಾಫೀ……ಅಲ್ಲೇ ನಿನ್ನ ಬರ್ತಡೇ ಸೆಲೆಬ್ರೇಷನ್…ನೆನಪೇ ಇಲ್ಲ….ಇನ್ನೂ ಮನಿಯೊಳಗ ಅದೇನಿ’ ಎಂಬ ಮಾತುಗಳು ಕಿವಿಯಲ್ಲಿ ಕೆಂಡ ಸುರಿದಂತಾದವು. ಅಲ್ಲಿಯವರೆಗೆ ಆ ಸಂಜೆಯ ಬಗ್ಗೆ ಆಕೆ ಕಟ್ಟಿದ್ದ ಆಸೆಯ ಮಹಲು ಟಳ್ಳೆಂದು ಗಾಜಿನಂತೆ ಒಡೆದ ಹಾಗಾಯಿತು. ಕಾಫೀಯ ಮನೆ ಹಾಳಾಗಲಿ ತನ್ನ ಊರಿಗೆ ಹೋಗುವ ಬಸ್ಸು ಆಗಲೇ ಹೋಗಿಯಾಗಿತ್ತು. ಮುಂದಿನ ಬಸ್ಸು ರಾತ್ರಿ ಒಂಭತ್ತಕ್ಕಿತ್ತು. ಧೃತಿಗೆ ಊರಿಗೆ ಹೋಗಿತಲುಪುವ ಚಿಂತೆಗಿಂತ ತಾ ಅಷ್ಟು ಪ್ರೀತಿಸುವ ಪತಿ, ತನ್ನನ್ನು ಮರೆಯುವುದೇ….? ಎಂಬುದೇ ಅವಳ ಹೃದಯವನ್ನು ಒಡೆದು ಹಾಕಿತ್ತು.

ಭಾರವಾದ ಹೃದಯದಿಂದ ಬಸ್ ಸ್ಟ್ಯಾಂಡ್‌ ತಲುಪಿದ್ದ ಧೃತಿ, ಹೊರಗಡೆ ತನ್ನೂರ ಕಡೆಗೆ ಹೊರಡುವ ಟಾಟಾ ಸುಮೋ ಏರಿ ಕುಳಿತಳು. ಮಬ್ಬುಗತ್ತಲಲ್ಲಿ ಗಾಡಿಯಲ್ಲಿ ಯಾರೂ ಇಲ್ಲದೇ ಬಿಕೋ ಅನ್ನುತ್ತಿತ್ತು. ಪಡ್ಡೆ ಹುಡುಗರ ನಗು, ಮಾತು ಅವಳಿಗೆ ಅಸಹನೀಯವಾಗಿದ್ದವು… ಗಾಡಿ ಪ್ರಯಾಣಿಕರಿಂದ ತುಂಬಿ ಹೊರಡಬೇಕೆಂದರೆ ರಾತ್ರಿ ಎಷ್ಟಾಗುತ್ತದೋ…. ಎಂಬ ಆತಂಕಕ್ಕಿಂತ ಹೆಚ್ಚು ಪತಿ ತನ್ನನ್ನು ಮರೆತದ್ದು ಹೃದಯವನ್ನು ಘಾಸಿಗೊಳಿಸಿತ್ತು. ನಿತೇಶ್ ಮರಳಿ ಮಾಡಿದ ಫೋನುಗಳ ಕರೆಯನ್ನು ದುಃಖ ಮತ್ತು ಆಕ್ರೋಶ ಭರಿತ ಆವೇಶದಲ್ಲಿ ತಿರಸ್ಕರಿತ್ತ, ದಿನಪತ್ರಿಕೆಯ ಹಿಂದೆ ಕಣ್ಣು- ಮೂಗು ಒರೆಸುತ್ತ ಗಾಡಿ ಬಿಡುವ ದಾರಿ ನೋಡುತ್ತ ಕುಳಿತಿದ್ದಳು…… ಆವೇಶದಲ್ಲಿ ‘ಹೆಂಡತಿಯನ್ನು ನಡುನೀರಲ್ಲಿ ಕೈ ಬಿಡತೀಯ…. ಹೇಟ್ ಯು… ನನ್ನ ಹೆಂಡತಿ ಬರ್ತಡೇ ಹೊಗಲಿ, ನನ್ನ ಪಿಕ್ ಉಪ್ ಮಾಡೋದು ನೆನಪಿಲ್ವಾ?’ ಎಂಬ ಸಂದೇಶ ಕಳಿಸಿ, ಮರು ಉತ್ತರಕ್ಕೆ ಕಾಯತೊಡಗಿದಳು. ಆದರೆ ಮರಳಿ ಉತ್ತರವೇ ಬರಲಿಲ್ಲ…! ಇದು ಮತ್ತಷ್ಟು ಘಾಸಿಗೊಳಿಸಿತ್ತು ಅವಳನ್ನು. ಇಲ್ಲದ ಎಲ್ಲ ಧೈರ್ಯವನ್ನು ಒಟ್ಟುಗೂಡಿಸಿ ತುಟಿ ಕಚ್ಚಿ ಮನೆಸೇರುವ ತವಕದಲ್ಲಿದ್ದಳು. ಸಮಯ ಕಳೆದಂತೆ ಜನ ಗಾಡಿ ಏರತೊಡಗಿದ್ದರು. ಜೊತೆಯಲ್ಲಿ ಹಳ್ಳಿಯ ಹೆಣ್ಣು ಮಕ್ಕಿಳಿದ್ದಾರೆಂಬುದು ಅವಳಿಗೆ ಗೊತ್ತಿತ್ತು. ಅಂತೂ ಗಾಡಿ ಚಲಿಸತೊಡಗಿತು…… ಗಾಳಿಗೆ ಸಂಜೆಯವರೆಗೆ ದಣಿದಿದ್ದ ಮನಸಿಗೆ ಮುಂಗುರುಳು ಮುದ್ದಾಡುವಂತೆ ಹಣೆಯ ಮೇಲೆ ಓಲಾಡುತ್ತಿದ್ದವು… ಗಾಳಿಯಲ್ಲಿ ಹಾಗೇ ದುಃಖವೂ ಕರಗತೊಡಗಿತ್ತು…. ಆದರೆ ಪತಿಯ ಮೇಲಿನ ಬೇಸರ ಮಾತ್ರ ಹಸಿಯಾಗೇ ಇತ್ತು.

ಧೃತಿ ಬಾಗಲಕೋಟೆಯ ಸಹಕಾರಿ ಬ್ಯಾಂಕ್ ಒಂದರಲ್ಲಿ ಕ್ಲರ್ಕ್‌ ಆಗಿದ್ದಳು. ತುಂಬಾ ಮೃದು ಸ್ವಭಾವ. ಭಾವನಾತ್ಮಕ ಜೀವಿ. ಗಂಡ ನಿತೇಶ ಮತ್ತು ಪ್ರಾಥಮಿಕ ಶಾಲೆ ಓದುವ ಎರಡು ಮಕ್ಕಳು ಇಷ್ಟೇ ಅವಳ ಪ್ರಪಂಚ. ಬಾಗಲಕೋಟೆಯಿಂದ ಹತ್ತು ಕಿಲೋಮೀಟರ ದೂರದ ಭಗವತಿ ನಿತೇಶನ ಊರು. ಅಪ್ಪನ ಆಸ್ತಿಗೆ ಒಬ್ಬನೇ ಮಗನಾಗಿದ್ದು ಅಪ್ಪ ಅವ್ವ ಬೇಗ ತೀರಿಹೋದ ಕಾರಣ ಹೆಚ್ಚು ಓದಿದ್ದರೂ ನೌಕರಿ ಬೇಡವೆಂದು ಊರಲ್ಲೇ ಹೊಲ ಮನೆ ನೋಡಿಕೊಳ್ಳುತ್ತಿದ್ದ. ಸಂಜೆ ಶಾಲೆಯಿಂದ ಮಕ್ಕಳು ಹಸಿದು ಬಂದು ಬಹಳ ಹೊತ್ತಾಗಿರಬೇಕು. ಅವರನ್ನೂ ಕರೆದುಕೊಂಡು ಬಾಗಲಕೋಟೆಗೆ ಬರಬೇಕಿದ್ದ ಪತಿರಾಯ ಎಲ್ಲವನ್ನೂ ಮರೆತು ಮನೆಯಲ್ಲಿ ಕುಳಿತಿದ್ದು ಅವಳಿಗೆ ನುಂಗಲಾರದ ತುತ್ತಾಗಿತ್ತು.

ಜೊತೆಯಿದ್ದ ಹೆಣ್ಣು ಮಕ್ಕಳು ಒಂದೇ ಊರಿನವರಿರಬೇಕು. ಗಾಡಿ ಏರಿದಾಗಿನಿಂದ ಮಾತನಾಡುತ್ತಲೇ ಇದ್ದರು. ‘ಎರಡು ದಿನಾ ಆತು ಮನ್ಯಾಗ ಒಲಿ ಉರದಿಲ್ಲ. ವಯಸ್ಸಿಗೆ ಬಂದ ಮಗಳ ಅದಾಳ ಮನಿಯಾಗ ಅನ್ನೋದೂ ಖಬರಿಲ್ಲ ಇವಗ. ದಿನಾ ಕುಡದ ಬಂದ ಓಣಿಯಾಗ ಹೋಗೋರು ಬರೋರಿಗೆ ಒದರಾಡ್ತಾನಾ. ಮೊನ್ನೆ ಓಣ್ಯಾಗ ಜನ ಸೇರಿ ಬಡದ ಬಿಟ್ಟಾರ. ಅದಕ್ಕ ಇದ್ದ ಒಬ್ಬ ಮಗಾನೂ ಮರ್ಯಾದಿ ಹೋದ ಮ್ಯಾಲ ಊರಾಗ ಏನಿರೋದು ಅಂತ ಮನಿ ಬಿಟ್ಟ ಹೋಗ್ಯಾನ. ಅದಕ ದಿಕ್ಕ ತಿಳೀದ ತಮ್ಮನೂರಿಗೆ ಹೊಂಟೇನಿ’ ಎಂಬ ಮಾತುಗಳು ಕಿವಿಗೆ ಬಿದ್ದೊಡನೆ ಬೇಡವೆಂದರೂ ಆ ಹೆಣ್ಣು ಮಕ್ಕಳ ಬಳಿ ಅವಳ ಚಿತ್ತ ವಾಲಿತು. ‘ಏನವಾ ಹೆಣ್ಣ ಮಕ್ಕಳ ಬಾಳೆ ಹಿಂಗ. ಗಂಡ ಚೊಲೊ ಇದ್ರ ಎಲ್ಲಾ ಚೊಲೊ. ಆ ಕುಡಿಯೋ ಚಟ ಕಲತು ಮನಿನ ಮುರಾಬಟ್ಟಿ ಮಾಡತಾರಾ’ ಎಂದು ಮಗ್ಗುಲಿನ ಮತ್ತೊಬ್ಬಳು ಸೋ ಎಂದಳು. ‘ಹೋದ ವರ್ಷ ಪಾಟೀಲರ ಮಗಳ ಮದವಿ ಮಾಡಿದ್ರಲ್ಲ… ವಿದೇಶದಾಗ ಇರ್ತಾನ ಹುಡುಗ ಅಂತ ಭರ್ಜರಿ ಲಗ್ನ ಮಾಡಿದ್ರಲ್ಲ. ಕೇಳೀರೆನ ಆ ಹುಡಗಿ ಕಥಿ. ಅಕಿನ್ನ ಹೊಳ್ಳಿ ತವರ ಮನ್ಯಾಗ ಇಟಕೊಂಡಾರ.’ ಎಂದು ಮತ್ತೊಬ್ಬಳಿಂದ ಮಾತು ಬಂತು. ‘ಆ ಹುಡುಗ ವಿದೇಶದಾಗ ಮೊದ್ಲ ಮತ್ತೊಂದ ಮದವಿ ಮಾಡಿಕೊಂಡಿದ್ನಂತ. ಪಾಪಾ! ಹೆಸರು, ಹಣ ಎಲ್ಲಾ ಇದ್ರೂ ಮಗಳ ಬಾಳ ಹಾಳಾತು ಅಂತ ಪಾಟೀಲರು ಕೊರಗಿ ಕೊರಗಿ ಸಣ್ಣಾಗ್ಯಾರ. ಇದು ಯಾರನ್ನೂ ಬಿಟ್ಟಿಲ್ಲವಾ…! ಎಲ್ಲಾರ ಮನಿ ದೋಸಿನೂ ತೂತ’ ಈ ಮಾತುಗಳನ್ನ ಕೇಳುತ್ತ ಧೃತಿ ತನ್ನ ಕಷ್ಟದ ಪರಿಧಿಯಿಂದ ಹೊರಬಂದು ಅವರ ಮಾತುಗಳನ್ನು ಭಾವ ಪರವಶಳಾಗಿ ಆಲಿಸತೊಡಗಿದ್ದಳು. ಇದನ್ನು ಗಮನಿಸಿ ‘ನೀವೇನ ಮಾಡ್ತೀರಿ? ಯಾವ ಊರಿಗೆ ಹೊಂಟೀರಿ? ಲೇಟಾತಲ್ಲ?’ ಎಂದು ಎದುರಿನವಳು ತನ್ನನ್ನೇ ಕೇಳಿದಾಗ ತಡವರಿಸಿದಳು. ‘ಆಫೀಸಿನ್ಯಾಗ ಕೆಲಸ ಇತ್ರಿ. ತಡಾ ಆತು. ಇಲ್ಲೇ ಭಗವತಿಗೆ ಹೋಗಬೇಕು’ ಎಂದು ಮಾತಿಗೆ ಅವಕಾಶ ಕೊಡದೆ ಮುಖ ಹೊರಳಿಸಿದಳು. ಆದರೆ ಕಿವಿ ಮಾತ್ರ ಅಲ್ಲೇ ಇದ್ದವು. ‘ಓದಿದವರ್ದ ಚೊಲೊ ಬಿಡು. ನೌಕರಿ ಮಾಡಕೊಂತ ಅರಾಮ ಇರ್ತಾರ. ನಾವ ಶಾಲಿ ಕಲಿಲಾರ್ದ ಹೆಬ್ಬಟ್ಟಾಗಿ ಕಷ್ಟ ಸೋಸ್ತೇವಿ’. ‘ಮಂಜವ್ವಾ ನಿನ್ನ ತಂಗಿ ಹೊಟ್ಟೀಲಿದ್ದಂಗ ಇದ್ಲಲ್ಲ. ಹೆರಿಗಿ ಆತನ.?ಅಕಿನೂ ನೌಕರಿ ಮಾಡತಾಳಾ. ಅಕಿದೂ ಚಿಂತಿ ಇಲ್ಲಾ ಬಿಡು ನಿಮಗ.’ ಅನ್ನೋದ ತಡ ಮಂಜವ್ವ ಆವೇಶ ಭರಿತಳಾಗಿ ದುಃಖದ ಕಟ್ಟೆಯೊಡೆದು ಮಾತಾಡತೊಡಗಿದಳು, ‘ಅಯ್ಯೋ ಅದೂ ದೊಡ್ಡ ಕಥಿ ಐತಿ. ಎಲ್ಲಾ ನಾವ ಅನಕೊಂಡಂಗ ಆಗಿದ್ರ ಈಗ ನಾ ಬಾಣೇತನ ಮಾಡಾಕ ಹೋಗಿರ್ತಿದ್ದೆ. ಅಕಿ ಗಂಡಾನೂ ದೊಡ್ಡ ನೌಕರಿ ಮಾಡತಾನಾ… ಬಾಳಾ ಓದ್ಯಾನ ಅಂತ ಕೊಟ್ಟರ, ಅವನ ಸುಳಿನೂ ಸುಮಾರ ಐತಿ. ಆಫೀಸಿನ್ಯಾಗ ಜೊತಿ ಕೆಲಸಾ ಮಾಡಕಿ ಯಾವಕೀದ ಮಾತ ಕೇಳಿ ಹೊಟ್ಯಾಗಿನ ಕೂಸು ಹೆಣ್ಣ –ಗಂಡ ಪರೀಕ್ಷಾ ಮಾಡಿಸಿ ಹೆಣ್ಣು ಅಂದಿದಕ್ಕ ನನ್ನ ತಂಗೀಗೆ ಗೊತ್ತಿಲ್ಲದಂಗ ತಗಸಿ ಬಿಟ್ಟಾನ.’ ಎಂದು ಕಣ್ಣಲ್ಲಿ ನೀರು ತೆಗೆದಳು.

‘ಯೇ ಅದೆಂಗಾಕೇತಿ. ಹಂಗೆಲ್ಲ ಮಾಡಂಗಿಲ್ಲ ಅಂತ ಅಂಗನವಾಡಿ ಅಕ್ಕವ್ವ ಮೊನ್ನೆರ ಭಾಷಣ ಮಾಡ್ಯಾಳಲ್ಲ.’

‘ಅವೆಲ್ಲ ಭಾಷಣದಾಗ ಚಂದ. ಎಂಜಲ ಆಸೆ ನಾಯಿಗಳು ಇದ್ದ ಇರ್ತಾವಲ್ಲಾ. ಇಂತಾ ಕೆಲಸಾ ಮಾಡಾಕ. ಗೊತ್ತಾದ ಮ್ಯಾಲೆ ನನ್ನ ತಂಗಿ ಹಾಸಗೀನ ಹಿಡದಿದ್ಲು. ಅವಾಗ ಅವಗ ಬುದ್ಧಿ ಬಂದಿತ್ತು. ಇನ್ನು ರಂಪಾ ಮಾಡಿದ್ರ ಕೆಲಸಾ ಹೊಕ್ಕೇತಿ, ಕೇಸ್ ಆಕೇತಿ ಅಂತ ಕೈ ಕಾಲ ಹಿಡಕೊಂಡ’ ಎಂದು ಸೆರಗಿಂದ ಕಣ್ಣೀರು ಒರೆಸಿಕೊಂಡಳು. ಇವನ್ನೆಲ್ಲ ಕೇಳುತ್ತಿದ್ದ ಧೃತಿ ಅವರಲ್ಲೇ ಒಬ್ಬಳಾಗಿದ್ದಳು. ಆದರೆ ಮಾತು ಮಾತ್ರ ಮುದುರಿದ್ದವು.

‘ನೋಡವಾ ನೌಕರಿ ಮಾಡೋರ ಬಾಳೆ ಬಾಳ ಚಂದ ಅನ್ನಾಕತ್ತಿದ್ದೆಲ್ಲ! ಕೇಳತನ… ಎಲ್ಲಾರ ಮನಿ ದೋಸಿನೂ ತೂತ. ಇವರೇನ ಹೆಣ್ಣ ಮಕ್ಳು ಕಡಿಮಿ ಇರಂಗಿಲ್ಲ ಬಿಡು’ ಎಂದು ಎಡಕ್ಕಿದ್ದ ಮತ್ತೊಂದು ದನಿ ಜೊತೆ ಆಯಿತು. ‘ನಮ್ಮೂರ ಗೌಡ್ರ ಮಗಳ ಎಂಜನೀಯರ ಕಲತಾಳಂತ. ಬೆಂಗಳೂರಾಗ ತಮ್ಮ ಮನಿ ಕಸಾ ಒಂದಿನಾ ಅಕಿ ಹೊಡೆಯದಂತ. ಒಂದಿನಾ ಅಕಿ ಗಂಡ ಹೊಡಿಬೇಕಂತ. ಹಿಂಗ ಎಲ್ಲಾದಕ್ಕೂ ಪಾಳಿ ಅಂತ. ಗಂಡ ಒಂದಿನಾ ಒಲ್ಲೆ ಅಂದಿದ್ದಕ್ಕ ಡೈವರ್ಸ ಅಪ್ಲಿಕೇಶನ್ ಕೊಟ್ಟಾಳಂತ.!’ ಎಂದಾಗ ಎಲ್ಲರೂ ಜೋರಾಗಿ ನಗ ತೊಡಗಿದರು. ಧೃತಿ ಎಷ್ಟು ತಡೆಯಲು ಪ್ರಯತ್ನಿಸಿದರೂ ನಕ್ಕೇ ಬಿಟ್ಟಳು. ‘ಸೀಮ್ಯಾಗ ಇಲ್ದಕಿ ಅಕಿ’ ಎಂದು ಮತ್ತೊಬ್ಬಳು ಸೋ ಅಂದಳು.

‘ನನಗೂ ಈಗ ನೆನಪಾತ ನೋಡ್ರಿ. ನಮ್ಮನಿ ಹತ್ರ ರಮ್ಯಾ ಅನ್ನೋ ಹುಡಗಿನ ಚೊಲೋ ಮನಿಗೆ ಮದ್ವಿ ಮಾಡಿ ಕೊಟ್ಟಿದ್ರು. ಬಾಳ ಬೋಳೆ ಗಂಡ. ಇಕಿ ತನ್ನ ಚೈನಿಗೆ ಬ್ಯಾರೆ ಮನಿ ಮಾಡಿ, ಬಂದ ಆಸ್ತಿ ಎಲ್ಲಾ ಮಾರಿ, ಗಂಡನ್ನೂ ಹಾಳ ಮಾಡಿ, ಗಂಡಾ ಕುಡದ ಬಡಿತಾನ ಅಂತ ಮತ್ತ ತವರ ಸೇರಿ, ಇರೋ ಒಬ್ಬ ತಮ್ಮನ್ನ, ತಮ್ಮನ ಹೆಂಡ್ತಿನ ಹೊರಗಹಾಕ್ಯಾಳ ನೋಡ್ರಿ. ಇವರೆಲ್ಲ ಬಾಳೆ ಮಾಡಕೊಂಡ ತಿನ್ನೋರನ್ರಿ. ಇದ್ದೋರ ಜೀವಾ ಹಿಂಡೋರು’ ಎಂದು ಕಡ್ಡಿತುಂಡು ಮಾಡಿದಂತೆ ಮತ್ತೊಬ್ಬಳು ಪಟ ಪಟನೇ ಮಾತಾಡಿದಳು. ಇವರೆಲ್ಲರ ನಡುವೆ ಧೃತಿ ಬೇರೆಯದೇ ಲೋಕಕ್ಕೆ ಹೋಗಿದ್ದಳು. ‘ಭಗವತಿ ಬಂತು ಇಳ್ಕೊಳ್ರಿ’ ಎಂದು ಕ್ಲೀನರ್ ಕೂಗಿದಾಗ ಬೆಚ್ಚಿದಳು. ಎಲ್ಲರಿಗೂ ಆತ್ಮೀಯ ನಗೆ ಬೀರುತ್ತ ವಿದಾಯ ಹೇಳಿದಳು.

ಅದ್ಯಾಕೋ ಅವಳಿಗೆ ಪುನಃ ಪುನಃ ಮತ್ತದೇ ಸಂಭಾಷಣೆಗಳು ಸ್ಮೃತಿ ಪಟಲದಲ್ಲಿ ಕಾಡತೊಡಗಿದ್ದವು. ಭಾರವಾಗಿದ್ದ ಹೆಜ್ಜೆಗಳು ಹಗುರವೆನಿಸಿದ್ದವು. ಕರುಳಿನ ಕೂಗು ಸೆಳೆಯುತ್ತಿತ್ತು. ಮನೆಯ ಬಾಗಿಲನ್ನು ಬಾರಿಸುತ್ತಲೇ, ‘ಅವ್ವ ಬಂದಳು…!’ ಅಂತ ಮಕ್ಕಳು ಕುಣಿಯತೊಡಗಿದರು. ಮಕ್ಕಳನ್ನು ಆಲಂಗಿಸಿದ ಧೃತಿ, ‘ಶಾಲೆಯಿಂದ ಬಂದು ಹಾಲು ಕುಡದ್ರ್ಯಾ? ತಿಂಡಿ ಏನರ ತಿಂದ್ರ್ಯಾ? ಹಸಿವಿ ಆಗಿತ್ತಾ?’ ಎಂದು ಎಷ್ಟೋ ದಿನಗಳಿಂದ ಬಿಟ್ಟು ಹೋದ ಮಕ್ಕಳನ್ನು ಪುನಃ ಸೇರಿದಂತೆ ಸಂಭ್ರಮಿಸಿದಳು. ಮಕ್ಕಳ ಕಣ್ತಪ್ಪಿಸಿ ಅಡುಗೆ ಮನೆಯಲ್ಲಿ ಸೆರಗನ್ನು ಹಿಡಿದು ‘ಹ್ಯಾಪಿ ಬರ್ತಡೇ. ಯಾವ ಗಾಡಿಗೆ ಬಂದಿ’ ಎಂದು ಕೇಳುವಾಗ ಅವನ ದನಿಯ ಕಂಪನವನ್ನು ಸಹಜವಾಗೇ ಗುರುತಿಸಿದ್ದಳು ಧೃತಿ. ‘ಹೆಂಗೋ ಬಂದೆ ಬಿಡ್ರಿ’ ಎಂದು ಸೆರಗು ಬಿಡಿಸಿಕೊಂಡು ಹೊರನಡೆದಳು. ಮತ್ತೊಮ್ಮೆ ಸೆರಗು ಹಿಡಿಯಲಿ, ಮುದ್ದಿಸಿ ರಮಿಸಲಿ ಎಂದುಕೊಳ್ಳುತ್ತ ಹೊರ ನಡೆಯುತ್ತಿದ್ದವಳಿಗೆ ನಿರಾಶೆ ಆಯಿತು. ನಿತೇಶ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ಮನೆಯಿಂದ ಆಚೆ ಹೊರಟೇಬಿಟ್ಟ. ‘ಅವ್ವ ನಿನ್ನ ಹುಟ್ಟಿದ ಹಬ್ಬ. ಅಪ್ಪಾ ಕೇಕ್ ತರಲೇ ಇಲ್ಲಾ? ಕಾಫಿ ಡೇ ಕರಕೊಂಡ ಹೋಗ್ತೇನಿ ಅಂದಿದ್ರು’ ಎಂದು ಮಕ್ಕಳು ಹಠ ಹಿಡಿದರು. ಅವರನ್ನು ರಮಿಸಿ ಮಲಗಿಸುವಲ್ಲಿ ಆಗಲೇ ಹತ್ತಾಗಿತ್ತು. ಮನೆಗೆ ಬಂದ ನಿತೇಶ ಊಟಕ್ಕೆ ಕುಳಿತ. ಏನೂ ಆಗೇ ಇಲ್ಲ ಎನ್ನುವಂತೆ ನಗುತ್ತಲೇ ಬೇಕಾದ್ದನ್ನೆಲ್ಲ ಕೇಳಿ ನೀಡಿಸಿಕೊಳ್ಳುತ್ತ ದಿನಕ್ಕಿಂತ ಒಂದು ರೊಟ್ಟಿ ಹೆಚ್ಚೇ ತಿಂದ. ಧೃತಿಯೋ ಒಳಗೊಳಗೇ ಕುದಿಯುತ್ತಿದ್ದಳು. ‘ನೀನೂ ಊಟ ಮಾಡು. ಬಾಳಾ ಹೊತ್ತಾತು’ ಎಂದವನೇ ಮಲಗಿದ ಮಕ್ಕಳನ್ನ ಮುದ್ದಿಸುತ್ತ ಮಂಚಕ್ಕೆ ಒರಗಿ ಗೊರಕಿ ಪ್ರಾರಂಭಿಸಿಯೇ ಬಿಟ್ಟ. ‘ಅಬ್ಬಾ! ಯಾವ ಹುಚ್ಚರ ಆಸ್ಪತ್ರೆ ಸೇರಕೊಳ್ಳಲಿ’ ಎಂದುಕೊಳ್ಳುತ್ತ, ‘ಎಷ್ಟ ಸಲ ಅಂತ ಊಟಾ ಬಿಡೋದು. ಇವರ ಹಾಳ ಮರೆವು’ ಎಂದುಕೊಂಡು ಊಟ ಮಾಡಿ ತಾನೂ ಮಂಚಕ್ಕೆ ಒರಗಿದಳು… ಹಾಗೇ ಚಿಕ್ಕ ಮಗುವಿನಂತೆ ಮಲಗಿದ್ದ ನಿತೇಶನ ಮುಖವನ್ನೇ ನೋಡುತ್ತ ಮಂದಹಾಸ ಬೀರಿದಳು. ‘ಪ್ರತಿ ಸಲ ನಾನ ಸೋಲಬೇಕು! ಸೋಲಿಸೇ ಬಿಡತೀರಿ ನೀವು!’ ಎನ್ನುತ್ತ ಮಕ್ಕಳನ್ನು ತಬ್ಬಿ ಮಲಗಿದ್ದ ಅವನ ಹಣೆಗೆ ಮುತ್ತಿಕ್ಕಿ ಕಣ್ಣು ಮುಚ್ಚಿದಳು. ಮತ್ತೂ ಅವಳ ಮನದಲ್ಲಿ ಆಟೋದ ಹೆಣ್ಣು ಮಕ್ಕಳ ಮಾತುಗಳೇ ರಿಂಗಣಿಸುತ್ತಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT