ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಬ್ಬರ ಕೂಳು ಇನ್ನೊಬ್ಬರ ಕುತ್ತು

Last Updated 14 ಜುಲೈ 2018, 19:30 IST
ಅಕ್ಷರ ಗಾತ್ರ

ಹಿಂದೆ ಕಳಿಂಗ ರಾಜ್ಯದಲ್ಲಿ ಯಾರೂ ಯೋಚನೆ ಮಾಡದಷ್ಟು ತೀವ್ರವಾದ ಬರಗಾಲ ಬಂದು, ಅಲ್ಲಿನ ಜನ ಊಟ ತಿಂಡಿಗೆ ಪರಿತಪಿಸುವಂತಾಗಿತ್ತು‌. ಎಲ್ಲರೂ ಆಹಾರ ಹುಡುಕುತ್ತಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ಅಲೆದಾಡಲು ಆರಂಭ ಮಾಡಿದರು. ಹೀಗಿರುವಾಗ ರಾಜನ ಒಂಟೆಯೊಂದು ತಪ್ಪಿಸಿಕೊಂಡು ಎತ್ತಲೋ ಮಾಯವಾಗಿ ಹೋಯಿತು. ಆ ಒಂಟೆಯನ್ನು ಹುಡುಕಲು ರಾಜ ತನ್ನ ಭಟರಿಗೆ ಆಜ್ಞೆ ಮಾಡಿದನು.

ರಾಜ ಭಟರು ಒಂಟೆಯನ್ನು ಹುಡುಕಿಕೊಂಡು ಆ ಊರಿನಲ್ಲಿ ವಾಸವಾಗಿದ್ದ ಒಬ್ಬಳು ಹೆಂಗಸಿನ ಮನೆ ಮುಂದೆ ಬಂದರು. ಆ ಹೆಂಗಸಿಗೆ ಮೂವರು ಗಂಡು ಮಕ್ಕಳು. ಅವರಲ್ಲಿ ಮೊದಲನೆಯವನು ಕೃಷಿಯಲ್ಲಿ ತೊಡಗಿಸಿಕೊಂಡಿದ್ದ. ಎರಡನೆಯವನು ತನ್ನಲ್ಲಿರುವ ತೋಟ ನೋಡಿಕೊಳ್ಳುತ್ತಿದ್ದ. ಮೂರನೆಯ ಮಗ ಮನೆಯಲ್ಲಿ ಬಟ್ಟೆಗಳನ್ನು ನೇಯ್ಗೆ ಮಾಡುತ್ತಿದ್ದ.

ತಪ್ಪಿಸಿಕೊಂಡು ಬಂದ ಒಂಟೆ ಇವರಿರುವ ಮನೆಯ ಬಳಿ ಬಂದಿತ್ತು. ಅದನ್ನು ನೋಡಿದ ಮೂವರು ಸಹೋದರರು ಒಂಟೆಯನ್ನು ಕಟ್ಟಿಹಾಕಿ ಹೊಡೆದು ಕೊಂದು ಹಾಕಿದ್ದರು. ಒಂಟೆಯ ಮಾಂಸವನ್ನು ಜಾಡಿನಲ್ಲಿ ಮುಚ್ಚಿಟ್ಟು ಅದರ ಮೂಳೆ–ಚರ್ಮವನ್ನು ಯಾರಿಗೂ ಗೊತ್ತಾಗದಂತೆ ಮುಚ್ಚಿ ಹಾಕಿದ್ದರು. ಮಕ್ಕಳ ಈ ಗುಣವನ್ನು ಅವರ ತಾಯಿ ಕಣ್ಣಾರೆ ನೋಡುತ್ತಿದ್ದಳು. ಇದನ್ನು ಗಮನಿಸಿದ ಮಕ್ಕಳು ‘ನಮ್ಮ ತಾಯಿ ನಾವು ಮಾಡಿರುವ ಕೆಟ್ಟ ಕೆಲಸವನ್ನು ಯಾರಲ್ಲಾದರೂ ಬಾಯಿಬಿಟ್ಟರೆ ನಮಗೇ ಕಷ್ಟ’ ಎಂದು ಮಾತನಾಡಿಕೊಂಡರು.

ತಾಯಿಯ ಬಾಯಲ್ಲಿ ಯಾವ ಗುಟ್ಟೂ ನಿಲ್ಲುವುದಿಲ್ಲವೆಂಬುದು ಅವರಿಗೆ ಗೊತ್ತಿತ್ತು. ಅದಕ್ಕಾಗಿ ಅವರು ಒಂದು ಉಪಾಯ ಮಾಡಿದರು. ಮೂವರೂ ತಾಯಿ ಬಳಿ ಬಂದು, ‘ಅಮ್ಮ, ಈ ದಿನ ನಾವು ನಿನ್ನನ್ನು ಮದುಮಗಳನ್ನಾಗಿ ಮಾಡುತ್ತೇವೆ. ಅದಕ್ಕೆ ಒಂಟೆಯನ್ನು ಕೊಂದು ಅದರ ಮಾಂಸವನ್ನು ಜಾಡಿಗಳಲ್ಲಿ ಮುಚ್ಚಿಟ್ಟಿದ್ದೇವೆ. ಆ ಮಾಂಸದಿಂದ ನಿನಗೆ ಇಂದು ಔತಣ ಬಡಿಸುತ್ತೇವೆ’ ಎಂದರು. ಆ ತಾಯಿ ಬುದ್ಧಿಮಾಂದ್ಯಳಾಗಿದ್ದಳು. ಮಕ್ಕಳು ಹೇಳಿದ್ದು ಸರಿಯೆಂದು ನಂಬಿದಳು.

ರಾಜ ಭಟರು ಒಂಟೆ ಹುಡುಕಿಕೊಂಡು ಇವರಿರುವ ಮನೆಗೆ ಬಂದರು. ಕೃಷಿಯಲ್ಲಿ ತೊಡಗಿಕೊಂಡಿದ್ದ ಮೊದಲನೆಯವನಲ್ಲಿ, ‘ನಮ್ಮ ರಾಜರ ಒಂಟೆಯೊಂದು ತಪ್ಪಿಸಿಕೊಂಡು ಬಂದಿದೆ. ನಿಮ್ಮ ಹೊಲದ ಬಳಿ ಏನಾದರೂ ಬಂದಿದೆಯಾ’ ಎಂದು ಕೇಳಿದರು.

ಅದಕ್ಕೆ ಜೋರು ದನಿಯಲ್ಲಿ ಉತ್ತರಿಸಿದ ಮೊದಲನೆಯವ, ‘ನಿಮಗೆ ಕಾಣಿಸುತ್ತಿಲ್ಲವೇ? ನಾನು ಹೊಲ ಉಳುತ್ತಿದ್ದೇನೆ’ ಎಂದ. ಅವನಿಗೆ ತಮ್ಮ ಮಾತು ಅರ್ಥವಾಗಿಲ್ಲವೆಂದು ತಿಳಿದ ರಾಜ ಭಟರು ಮತ್ತೆ ಅವನಲ್ಲಿ, ‘ಹೌದು, ಕಾಣಿಸುತ್ತಿದೆ. ನಮ್ಮ ರಾಜರ ಒಂಟೆ ತಪ್ಪಿಸಿಕೊಂಡಿದೆ. ಇಲ್ಲಿ ಅದು ಬಂದಿದೆಯಾ’ ಎಂದು ಕೇಳಿದರು.

ಅದಕ್ಕೆ ಉತ್ತರವಾಗಿ ಆತ, ‘ಪ್ರತಿದಿನ ಎಷ್ಟು ಎಕರೆ ಹೊಲ ಉಳುತ್ತೇನೆಂದು ಹೇಳಲು ಖಂಡಿತ ಸಾಧ್ಯವಿಲ್ಲ. ಒಂದು ದಿನ ಒಂದು ಎಕರೆ ಉಳುವುದಕ್ಕೆ ಆಗುತ್ತದೆ. ಇನ್ನೊಂದು ದಿನ ಅಷ್ಟು ಆಗುವುದಿಲ್ಲ, ಕಡಿಮೆ ಉಳುತ್ತೇನೆ’ ಎಂದ. ರಾಜ ಭಟರು ಕೇಳುವ ಪ್ರಶ್ನೆಗೆ ಸರಿಯಾದ ಉತ್ತರ ಕೊಡದೆ ಅವರನ್ನು ಕಕ್ಕಾಬಿಕ್ಕಿ ಮಾಡಿದ. ಕೊನೆಯಲ್ಲಿ ರಾಜ ಭಟರು ಇವನ್ಯಾರೋ ತಲೆ ಸರಿಯಿಲ್ಲದವನೆಂದು ಭಾವಿಸಿ ಅಲ್ಲಿಂದ ಹೊರಟರು.

ಭಟರು ತೋಟದಲ್ಲಿ ಕೆಲಸ ಮಾಡುತ್ತಿದ್ದವನ ಬಳಿ ಬಂದು, ‘ನಮ್ಮ ರಾಜರ ಒಂಟೆ ಕಾಣೆಯಾಗಿದೆ. ನೀನು ಅದನ್ನು ನೋಡಿದ್ದೀಯಾ’ ಎಂದು ಕೇಳಿದರು. ಅದಕ್ಕೆ ಉತ್ತರವಾಗಿ ಅವನು, ‘ನಿಮಗೆ ಕಾಣಿಸುತ್ತಿಲ್ಲವೇ? ಮರದಿಂದ ಮಾವಿನ ಕಾಯಿ ಇಳಿಸುತ್ತಿದ್ದೇನೆ’ ಎಂದನು.

ರಾಜ ಭಟರು, ‘ನೋಡು, ನಾವು ಮಾವಿನ ಕಾಯಿ ಕೇಳಿಲ್ಲ. ತಪ್ಪಿಸಿಕೊಂಡು ಬಂದ ಒಂಟೆ ಇಲ್ಲಿಗೆ ಬಂದಿದೆಯಾ ಎಂದು ಕೇಳಿದೆವು’ ಎಂದರು. ಅದಕ್ಕೆ ಉತ್ತರವಾಗಿ ಈತ ‘ಈ ಮರದಲ್ಲಿ ಫಸಲು ಕಡಿಮೆ. ಪಕ್ಕದ ಮರದಲ್ಲಿ ದೊಡ್ಡ ದೊಡ್ಡ ಮಾವಿನ ಕಾಯಿಗಳಿವೆ. ಬೇಕೆಂದರೆ ಮರದಿಂದ ಇಳಿಸಿ ಕೊಡುವೆ’ ಎಂದನು. ರಾಜ ಭಟರು ಇವನ ಉತ್ತರ ಕೇಳಿ ಇವನು ಸಹ ಮೊದಲಿನವನಂತೆಯೇ ಮೂರ್ಖನಿರಬೇಕು ಎಂದು ಭಾವಿಸಿ ಅಲ್ಲಿಂದ ಹೊರಟರು.

ಬಟ್ಟೆ ನೇಯುತ್ತಿದ್ದ ಮೂರನೆಯವನ ಬಳಿ ಬಂದ ರಾಜ ಭಟರು, ‘ರಾಜರ ಒಂಟೆ ತಪ್ಪಿಸಿಕೊಂಡು ಹೋಗಿದೆ. ನೀನು ನೋಡಿದಿಯಾ’ ಎಂದು ಪ್ರಶ್ನಿಸಿದರು. ಮೂರನೆಯವ ಸಹ ವಿರುದ್ಧ ಉತ್ತರ ಕೊಡಲು ಪ್ರಾರಂಭ ಮಾಡಿದ. ‘ಕೆಲವೊಮ್ಮೆ ನೇಯ್ಗೆ ಚೆನ್ನಾಗಿರುತ್ತದೆ. ಒಂದೊಂದು ದಿನ ಮಾತು ಮಾತಿಗೂ ತುಂಡಾಗಿ ಹೋಗುತ್ತದೆ’ ಎಂದನು! ರಾಜ ಭಟರು ಅವನ ಮಾತಿಗೆ ಸಿಟ್ಟಾಗಿ ‘ನೀನು ರಾಜನ ಒಂಟೆ ನೋಡಿದಿಯಾ ತಿಳಿಸು. ಇದೇನು ನಿನ್ನ ಉತ್ತರ’ ಎಂದು ಗುಡುಗಿದರು. ಮೂರನೆಯವನು ಆ ಮಾತಿಗೆ, ‘ನನಗೆ ಮದುವೆ ಸಮಯದಲ್ಲಿ ನೇಯ್ಗೆ ಕೆಲಸ ಜಾಸ್ತಿಯಿರುತ್ತದೆ. ಆಗ ಕೈಯಲ್ಲಿ ಸ್ವಲ್ಪ ಹಣವಿರುತ್ತದೆ. ಬೇರೆ ದಿನಗಳಲ್ಲಿ ಜೀವನ ನೆಡೆಸುವುದು ತುಂಬಾ ಕಷ್ಟ. ವರ್ತಕರು ನಮ್ಮನ್ನು ತುಳಿದು ಹಾಕುತ್ತಾರೆ’ ಎಂದನು.

ಇವನು ಸಹ ಉಳಿದಿಬ್ಬರಂತೆಯೇ ತಲೆಕೆಟ್ಟವ ಎಂದು ಭಾವಿಸಿ ಅಲ್ಲಿಯೇ ಇದ್ದ ಈ ಮೂವರ ತಾಯಿಯ ಬಳಿ ಬಂದರು. ‘ಅಮ್ಮಾ, ನಮ್ಮ ಮಹಾರಾಜರ ಒಂಟೆಯನ್ನು ನೋಡಿದ್ದೀರಾ’ ಎಂದು ವಿಚಾರಿಸಿದರು. ಆ ತಾಯಿಯು ‘ಹೌದು, ನೋಡಿದ್ದೇನೆ. ನನ್ನ ಮಕ್ಕಳು ಆ ಒಂಟೆಯನ್ನು ಹೊಡೆದು ಕೊಂದು, ಬಚ್ಚಿಟ್ಟಿದ್ದಾರೆ’ ಎಂದಳು. ರಾಜ ಭಟರಿಗೆ ಅವಳ ಉತ್ತರ ಕೇಳಿ ತವಕ ಹೆಚ್ಚಾಯಿತು. ಮಹಾರಾಜರ ಒಂಟೆ ಬಗ್ಗೆ ಕೊನೆಗೂ ತಿಳಿಯಿತು ಎಂದುಕೊಂಡರು.

‘ಹೌದಾ?! ಎಲ್ಲಿ? ಯಾವಾಗ? ತಿಳಿಸು’ ಎಂದರು. ರಾಜ ಭಟರಿಗೆ ಆ ತಾಯಿಯು ‘ಮೂವರು ಮಕ್ಕಳು ಸೇರಿ ನನ್ನನ್ನು ಮದುಮಗಳಾಗಿ ಮಾಡಿದ ದಿನ!’ ಎಂದಳು. ರಾಜ ಭಟರು ಇಲ್ಲಿರುವ ಜನರೆಲ್ಲಾ ಮೂರ್ಖರಿರಬೇಕೆಂದು, ಅವಳನ್ನು ವಿಚಾರಿಸಿ ಪ್ರಯೋಜನವಿಲ್ಲವೆಂದು ಅಲ್ಲಿಂದ ಮುಂದೆ ಹೊರಟರು. ಎಲ್ಲಿಯೂ ಒಂಟೆಯ ಸುಳಿವು ಸಿಗದೆ ಅರಮನೆ ಕಡೆಗೆ ಪಯಣ ಹೊರಟರು.

ನೀತಿ: ಪ್ರಪಂಚದಲ್ಲಿ ಬಹಳಷ್ಟು ಕೆಟ್ಟ ಕೆಲಸಗಳು ನಡೆಯುವುದು ಹೊಟ್ಟೆ ಪಾಡಿಗಾಗಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT