ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಯಲ ಸದ್ದು

Last Updated 23 ಫೆಬ್ರುವರಿ 2019, 19:45 IST
ಅಕ್ಷರ ಗಾತ್ರ

ಹೊರಗೆ ಧಾರಾಕಾರ ಮಳೆ. ಒಳಗೆ ಧಗಧಗಿಸುವ ಕಾವು. ಗೊಂದಲಕ್ಕೆ ಬಿದ್ದಿದ್ದೆ; ಅರಳಲೋ? ಕೆರಳಲೋ? ಸಿಡಿಲು- ಗುಡುಗೆಲ್ಲ ಆಕಾಶಕ್ಕಷ್ಟೇ ಸೀಮಿತವಾಗಿರಲು ಸಾಧ್ಯವಿಲ್ಲ. ಮೋಡಗಳನ್ನು ಭೇದಿಸಲು ಮಿಂಚು ಸಂಚು ರೂಪಿಸುತ್ತಲೇ ಇತ್ತು. ಸಂಚು ಸಫಲಗೊಳ್ಳಲು ಬಿಡಬಾರದೆಂದು ಕುದಿ ಕುದಿಯುತ್ತಿದ್ದ ನಾನು ಪ್ರವಾಹಕ್ಕೆ ಬಂದು ಮೈಯೊಡ್ಡಿ ನಿಂತುಬಿಟ್ಟೆ. ನಾನೂ ಕೆಲಹೊತ್ತು ಪ್ರವಾಹವಾಗಿಬಿಟ್ಟೆ. ಬಂಧಮುಕ್ತಗೊಂಡಂತೆ ಆತ್ಮ ಹುಚ್ಚು ಕುದುರೆಯ ಬೆನ್ನೇರಿ ಓಡಲಾರಂಭಿಸಿತು... ಓಡು ಓಡುತ್ತಾ ಅದೊಂದು ಪ್ರಪಾತಕ್ಕೆ ಹಾರೇಬಿಟ್ಟಿತು!

ಛಕ್ ಅಂತ ಎದ್ದು ಕುಳಿತುಬಿಟ್ಟೆ. ಇದೆಂಥಾ ಕನಸು? ಭಯಾನಕ ಪಾಂಡಿತ್ಯವನ್ನೇ ಹೊದ್ದು ಬಂತಲ್ಲಾ ಈ ಕನಸು. ಕನಸಿಗೂ ಅರ್ಥವಿರುತ್ತೆ ಅನ್ನೋರ ಮುಂದೆ ಈ ಕನಸಿನ ವಿವರ ಕೊಟ್ಟುಬಿಟ್ಟರೆ ಅವರೂ ದಿಕ್ಕು-ದೆಸೆ ನೋಡದೇ ಓಟ ಕಿತ್ತಾರು! ಯೌವ್ವನದ ವಯಸ್ಸಲ್ಲಿ ಗವ್ವೆನ್ನುವ ಇಂಥ ವಿಚಿತ್ರ, ವಿಕಾರ, ಅರ್ಥಸಾಧ್ಯತೆ ಇಲ್ಲದ ಕನಸು ಬೀಳೋದೆಂದರೆ ನಾನೆಷ್ಟು ಬರಡು? ಒಂದು ರಾತ್ರಿ ಮಾತ್ರ ಈ ಕನಸು ಬಿತ್ತಾ? ಊಹ್ಞುಂ... ಪ್ರತಿರಾತ್ರಿಯೂ ಅದೇ ಕನಸು. ಕನಸೊಳಗೆ ಅದೇ ಮಳೆ, ಕಾವು, ಗೊಂದಲ, ಮಿಂಚಿನ ಸಂಚು, ಪ್ರವಾಹ, ಹುಚ್ಚು ಕುದುರೆ ಏರಿದ ಆತ್ಮ, ಆತ್ಮ ಪ್ರಪಾತಕ್ಕೆ ಹಾರಿದಂತೆ... ಇನ್ನೆಷ್ಟು ರಾತ್ರಿ ಈ ಕನಸನ್ನು ಸಹಿಸಿಕೊಳ್ಳುವುದು? ನನ್ನ ಮೇಲೆ ದ್ವೇಷ ಸಾಧಿಸಲೆಂದೇ ಯಾರೋ ಶತ್ರುಗಳು ಈ ವಿಕಾರ ಕನಸನ್ನು ನನ್ನ ತಲೆಯೊಳಗೆ, ನಿದ್ದೆಯೊಳಗೆ ತುರುಕಿಬಿಟ್ಟಿದ್ದಾರಾ? ಈಗೀಗೇಕೋ ಅನುಮಾನಗಳು ದಟ್ಟವಾಗುತ್ತಿವೆ. ಹಾಗೆ ನೋಡಿದರೆ, ಅನುಮಾನಗಳೂ ಅರ್ಥವೇ ಇಲ್ಲದಂಥವು!

‘ಮಿಸ್ಟರ್ ನಿಮಗೊಂದು ವಿಚಾರ ಗೊತ್ತಿಲ್ಲ ಅನಿಸುತ್ತೆ. ಗೊತ್ತಿದ್ದರೂ ಮತ್ತೊಮ್ಮೆ ಕೇಳಿಬಿಡಿ’ ಅನಾಮಿಕನೊಬ್ಬ ನಾನು ಮಲಗಿದ್ದ ಹಾಸಿಗೆ ಪಕ್ಕದಲ್ಲೇ ಕುಳಿತು ಇದ್ದಕ್ಕಿದ್ದ ಹಾಗೆ ಮಾತಾಡತೊಡಗಿದ. ನಾನು ಅವನಿಗೆ ಪರಿಚಯವಿದ್ದಂತಿರಲಿಲ್ಲ. ಇದ್ದಿದ್ದರೆ ಮಿಸ್ಟರ್ ಬದಲಿಗೋ ಮಿಸ್ಟರ್ ಜೊತೆಗೋ ಹೆಸರನ್ನು ಬಳಸಿಯೇ ಬಳಸುತ್ತಿದ್ದ. ನನಗೂ ಇವನ್ಯಾರೆಂದು, ಇಲ್ಲಿಗ್ಯಾಕೆ ಬಂದನೆಂದು, ಹೀಗೇಕೆ ಮಾತಾಡುತ್ತಿದ್ದಾನೆಂದು ಅರ್ಥವಾಗದೇ ಅವನದೇ ಮುಖಮುಖ ನೋಡುತ್ತಿದ್ದೆ, ಬಿಟ್ಟ ಕಣ್ಣು ಬಿಟ್ಟುಕೊಂಡು.
ನಾನವನ ಮಾತುಗಳನ್ನು ಕೇಳಿಯೇ ಕೇಳುತ್ತೇನೆಂಬಂತೆ ಅವನು ಮಾತಾಡತೊಡಗಿದ. ಅವನು ಮಾತಾಡಿದ್ದಾದರೂ ಏನು? ನೀಲು ಪದ್ಯವನ್ನು ಉಚ್ಚರಿಸಿದ.

‘ಬಡತನದ ನೆಮ್ಮದಿಯ ಬಗ್ಗೆ

ಹಾಡು ಕಟ್ಟಿ ಹಾಡಬೇಡ

ಎಲ್ಲಾ ಹಾಡುಗಳೂ ಬಡತನದ

ಅವಮಾನವನ್ನು ಮುಚ್ಚಿಡುತ್ತವೆ’

ಅಯ್ಯೋ ಕಥೆಯೇ! ನನ್ನೊಂದಿಗೆ ಇದೇನು ನಡೀತಿದೆ? ಕನಸು ನೋಡಿದ್ರೆ ಹಾಗೆ ಬೆನ್ನುಹತ್ತಿ ಕೂತಿದೆ. ಇವನ್ಯಾರೋ ಪ್ರತ್ಯಕ್ಷನಾಗಿ ಈ ಹೊತ್ತಲ್ಲಿ ನೀಲು ಪದ್ಯ ಹೇಳ್ತಾ ಕುಂತಿದಾನಲ್ಲ! ಆಶ್ಚರ್ಯದ ಮೇಲೆ ಆಶ್ಚರ್ಯ ಘಟಿಸುತ್ತಿದೆ. ನನಗೇನಾದ್ರು ಹುಚ್ಚು ಹಿಡಿದಿದೆಯಾ? ಅಥವಾ ನಾನೇನಾ ಇದನ್ನೆಲ್ಲ ಅನುಭವಿಸ್ತಿರೋನು? ಯಾವುದೂ ಸ್ಪಷ್ಟವಾಗುತ್ತಿಲ್ಲ. ವ್ಯಕ್ತಿಯ ಕೈಹಿಡಿದು ಕೇಳಿದೆ-

‘ಈ ಹೊತ್ತಲ್ಲಿ ನೀಲು ಪದ್ಯ ಹಿಡಿದು ಬಂದಿರೋ ನೀನ್ಯಾರು?’

‘ಪದ್ಯ ಎಂದರೆ ಉನ್ಮಾದ. ನಾನೂ ಒಂದು ಪದ್ಯ ಅಂದುಕೋ. ಪದ್ಯ ಹಿಡಿದು ತಂದು ನಿನ್ನ ಹೃದಯದೊಳಕ್ಕೆ ತೂರಿಬಂದು ನಿನ್ನೊಳಗೆ ಸಂಭ್ರಮ ಹಾಕಲು ಪ್ರಯತ್ನಿಸುತ್ತಿದ್ದೇನಲ್ಲ ಅದು ನಿನ್ನ ಪುಣ್ಯ. ಯಾವ ಮನುಷ್ಯ ತಾನೇ ಈಗ ಮತ್ತೊಬ್ಬನಿಗೆ ಕಷ್ಟಕ್ಕೆ ಆಗ್ಯಾನು? ನೀನು ಅದೃಷ್ಟವಂತ!’

ನಾನು ಕೇಳಿದ್ದಕ್ಕೆ ಉತ್ತರಿಸದೇ ಅವನೂ ಒಂದು ಪದ್ಯದಂತೆಯೇ ತನ್ನನ್ನು ತಾನು ಬಿಂಬಿಸಿಕೊಳ್ಳಲು ಪ್ರಯತ್ನಿಸಿದ. ಅವನನ್ನು ಗುರಾಯಿಸಿಕೊಂಡೇ ಸ್ವಲ್ಪ ಆತಂಕದಿಂದ ಪ್ರಶ್ನಿಸಿದೆ.

‘ನನಗೆ ಕಷ್ಟವೆ?’

ಅಷ್ಟೇ ನಿರ್ಭಾವುಕತನದಿಂದ ಅವನಂದ-

‘ನಿನಗೆ ಕನಸೇ ಒಂದು ಕಷ್ಟ. ಒಬ್ಬಂಟಿ ರಾತ್ರಿಗಳಲ್ಲಿ ನೀನು ಹಗಲಿಗಾಗಿ ಪರಿತಪಿಸುತ್ತಿದ್ದೀಯ. ಕವಿ ನೀನು, ಕವಿಯ ಬೇಕಾದವನು. ನಾಲ್ಕು ಗೋಡೆಗಳ ಮಧ್ಯೆ, ಈ ನಾಲ್ಕು ಕಾಲಿನ ಮಂಚದ ಮೇಲೆ ಮಲಗಿ, ಯಾವಾಗಲೋ ತಿರುಗುವುದನ್ನೇ ನಿಲ್ಲಿಸಿ, ಉಸಿರುಗಟ್ಟಿ ದೂಳಿನಿಂದಲೇ ಸತ್ತು ಹೋಗಿರುವ ಈ ಫ್ಯಾನಿನ ಕೆಳಗೆ, ನಿನಗೆ ನೀನೇ ಬೇಯಿಸಿಕೊಂಡು, ಮತ್ತದೇ ಅದೇ ಕನಸನ್ನು ಪದೇ ಪದೇ ಕಾಣುತ್ತಾ, ಕಾಲಹರಣ ಮಾಡುತ್ತಾ, ಸಾಯುತ್ತಾ ಇದ್ದೀಯಲ್ಲ ಮಾರಾಯ. ಅದಕ್ಕೆ ಕನಿಕರದಿಂದ ಇಲ್ಲಿ ಬಂದು ಕುಳಿತೆ. ಹೇಳು, ಯಾವ ಪದ್ಯವಾಗಲಿ ನಿನಗೆ? ಯಾವುದರಿಂದ ನೀನು ಅರಳೋದು? ಯಾವುದರಿಂದ ಸಂಭ್ರಮಿಸೋದು?

ಇಷ್ಟೆಲ್ಲ ಹೇಳುತ್ತಲೇ ಅವನು ರೆಕ್ಕೆ ಬಡಿದು ಅಲ್ಲಲ್ಲೇ ಸಣ್ಣ ಹಾರಾಟ ಆರಂಭಿಸಿದ. ನನ್ನ ಅಂತಃಪುರದ ತುಂಬಾ ಮಿಂಚು ಹುಳುಗಳು ಮಿಣುಮಿಣುಕಿ ಕ್ಷಣಾರ್ಧ ದಲ್ಲೇ ಅಲ್ಲೊಂದು ಸ್ವರ್ಗ ಸೃಷ್ಟಿ ಆಗಿಹೋಗಿತ್ತು. ಅದೊಂದು ಭ್ರಮೇನಾ? ಕನಸು, ಪದ್ಯ ಹಿಡಿದು ಬಂದ ಇವನು, ಈ ಅಂತಃಪುರದ ಸ್ವರ್ಗ

ಸೃಷ್ಟಿ- ಯಾವುದು ನಿಜ? ನಿಜವೋ, ಭ್ರಮೆಯೋ ನನಗಂತೂ ಯಾವುದೂ ಸುಲಭ ಎನಿಸುತ್ತಿರಲಿಲ್ಲ. ಎಲ್ಲವೂ ಅನಿರೀಕ್ಷಿತ. ಅಸ್ಪಷ್ಟ ಬೇರೆ. ಯಾಕೋ ಮೌನವಾಗಿದ್ದುಬಿಡಬೇಕೆನಿತು. ಮಂಚದ ಮೂಲೆಯಲ್ಲಿದ್ದ ಮಿಂಚುಹುಳುಗಳನ್ನು ಅತ್ಲಾಗೆ ಅಟ್ಟಿ ಅಲ್ಲಿ ಉದ್ಭವಿಸಿದ ಕತ್ತಲಲ್ಲಿ ಮಂಡಿ ಹಿಡಿದು ಕುಳಿತುಬಿಟ್ಟೆ. ನನ್ನ ಸುತ್ತಲೆಲ್ಲ ಈಗ ಖಾಲಿ ಖಾಲಿ. ಹಾದಿತಪ್ಪಿದ ಮನಸಿನ ಜೊತೆ ಈಗ ನಾನೊಬ್ಬನೇ. ತಪ್ಪಿದ ಹಾದಿಯಲ್ಲಿ ನನ್ನ ಹೆಜ್ಜೆ ಗುರುತುಗಳೇನಾದರೂ ಇವೆಯೇ? ಹುಡುಕುತ್ತಾ ಸಾಗಿಬಿಟ್ಟೆ.

ಇನ್ನೇನು ಮತ್ತೆ ಕನಸು ಅದೇ ರೂಪತಾಳಿ ಬೀಳುವುದಿತ್ತು. ಅಷ್ಟರಲ್ಲಿಯೇ ಕಾಣಿಸಿಕೊಂಡಿದ್ದಳು ಅವಳು. ಅವಳೆಂದರೆ ಪ್ರೇಮದ ಪರ್ವತ. ಅವಳೆಂದರೆ ಕಾಮದ ಪ್ರಪಾತ. ಒಂದೇ ಹೊತ್ತಲ್ಲಿ ಪ್ರಪಾತವೂ ಪರ್ವತವೂ ಆಗಬಲ್ಲ ದ್ಯೆತ್ಯ ಸುಂದರಿ ಈಗೇಕೆ, ಈ ಹೊತ್ತಲ್ಲಿ ಕಾಣಿಸಿಕೊಂಡಳೋ? ನನಗೀಗ ಕನಸು ಬೀಳುವ ಹೊತ್ತು. ಪ್ರೇಮಿಸಲು ಅದಕ್ಕಿಂತ ಹೆಚ್ಚಾಗಿ ಕಾಮಿಸಲೂ ಸಾಧ್ಯವಾಗದ ಹೊತ್ತು.

‘ಈ ಹೊತ್ತಲ್ಲಿ ಇಲ್ಲಿ?’

ಪ್ರಶ್ನಿಸಿದೆ. ಅವಳು ಮೈತುಂಬಾ ಮಿಂಚುಗಳನ್ನು ಹೊದ್ದಿಯೇ ಬಂದಿದ್ದಳು. ಅವಳೇ ಒಂದು ಮಿಂಚಿನಂತಿದ್ದಳು. ನನ್ನನ್ನೇ ದಿಟ್ಟಿಸಿ ಮುದ್ದಿಸುವ ಆಸೆ ಹೊತ್ತಂತೆ ನೋಡಿದಳು. ನೋಡುತ್ತಲೇ ಇದ್ದಳು.

‘ಈ ಹೊತ್ತೇ ಸೂಕ್ತವೆಂದು ಬಂದೆ. ಪ್ರೀತಿಸುವುದು ಉಸಿರಾಡುವಷ್ಟೇ ಸಹಜ ಮತ್ತು ಉಸಿರಿನಷ್ಟೇ ಮುಖ್ಯ ಎನ್ನುತ್ತಾನೆ ಕವಿಚಂದ್ರ’- ಮುಗುಳ್ನಕ್ಕು ಒಂದು ಹೆಜ್ಜೆ ನನ್ನತ್ತ ಎತ್ತಿಟ್ಟಳು. ಇವಳೀಗ ಇಲ್ಲಿಂದ ತೊಲಗಿದರೆ ಸಾಕಾಗಿತ್ತು ನನಗೆ. ಕನಸು ಬರುವ ಹೊತ್ತಲ್ಲಿ ಇದೇನು ಅಪಶಕುನ? ಪ್ರೀತಿಯಂತೆ, ಉಸಿರಂತೆ...

‘ಮೊದ್ಲು ತೊಲಗಿಲ್ಲಿಂದ’ ಘರ್ಜಿಸಿಬಿಟ್ಟೆ ಜೋರಾಗಿ. ಅವಳ ಕಿವಿಗಳಿಂದ ರಕ್ತ ಸೋರಿರಬೇಕು. ಕಿವಿಯೊಳಗೆ ಬೆರಳಾಡಿಸಿಕೊಂಡು ನೋಡಿದಳು. ಮಿಂಚಿನ ಅವಳ ಶರೀರ ಒಮ್ಮೆ ಅಲುಗಾಡಿ ಹೋಗಿತ್ತು ನನ್ನ ಘರ್ಜನೆಯಿಂದ. ಒಂದಿಷ್ಟು ಕ್ಷಣಗಳೇ ಬೇಕಾದವು ಅವಳಿಗೆ ಸುಧಾರಿಸಿಕೊಳ್ಳಲು...

‘ನೀ ಕವಿ ತಾನೆ? ಹೀಗೆಲ್ಲ ಶಬ್ದಗಳನ್ನು ಹಿಡಿದು ಘರ್ಜಿಸಲು ಹೋಗಬಾರದು. ಘರ್ಜನೆಯ ಗತ್ತು ಹಾಳಾಗಿಬಿಡುತ್ತೆ. ಫರ್ಮಾನ್ ಕವಿಯ ಸಾಲುಗಳನ್ನೊಮ್ಮೆ ಉಚ್ಛರಿಸಿದ್ದೆ ನೀ...

ನಿನ್ನ ಕಿರುನಗೆಯೆಂಬ ನಶೆಗೆ

ಆಕಾಶದಲ್ಲಿರುವ ನಕ್ಷತ್ರಗಳೇ

ಕಾಲ್ಜಾರಿ ಧರೆಗೆ ಬೀಳುವಾಗ

ನಾ ನಿನ್ನ ಪ್ರೀತಿಯಲ್ಲಿ

ಬೀಳದಿರಲು ಸಾಧ್ಯವೇ ಗೆಳತಿ..!

ಮರೆತು ಹೋಗಿರಬಹುದು ನಿನಗೆ. ನೆನಪಿಗಾಗಿ ಮತ್ತೆ ಹೇಳಿದೆ. ನಿನ್ನ ಘರ್ಜನೆಯಿಂದ ನಾನಷ್ಟೇ ಅಲ್ಲ ನನ್ನೊಳಗಿನ ಶಬ್ದಗಳೂ ಸೋತು ಹೋದವು. ಚೇತನ್ ನಾಗರಾಳನ ಗಝಲಿನ ನಾಲ್ಕು ಸಾಲು ನಿನಗೆಂದು ತಂದಿರುವೆ. ಕಿವಿ ಇದ್ದರೆ ನೆಟ್ಟಗೆ ಕೇಳಿಸಿಕೋ...

ಸಾಲು ನಕ್ಷತ್ರಗಳ ಪೋಣಿಸಿಟ್ಟಿದ್ದರೂ ಎದೆಯ

ತುಂಬಾ ಕತ್ತಲಿತ್ತು

ಬೊಗಸೆಯೊಡ್ಡಿದ್ದರೂ ಸಾಕಿತ್ತು, ಆದರೆ ನೀ

ದೀಪವನ್ನು ಉಳಿಸಿಕೊಳ್ಳಲಿಲ್ಲ...

-ತೊಲಗುತ್ತಿದ್ದೇನೆ ನೋಡೀಗ. ನಿನ್ನ ಮುಂದೆ ಮತ್ತೆ ಕತ್ತಲಾವರಿಸಿದಾಗ ನನ್ನ ನೆನಪಾಗಬಹುದು. ನೆನಪು ಆಗಿದ್ದೇ ಆದರೆ ನಾನಾಗ ಹೆಣವೆಂದೇ ಕಲ್ಪಿಸಿಕೋ. ಆ ಮೂಲಕ ನನ್ನನ್ನು ಋಣಮುಕ್ತಗೊಳಿಸಿಬಿಡು...’

ಮಾತು ಮುಗಿದಿರಲಿಲ್ಲ ಇನ್ನೂ, ಅದೆಷ್ಟೋ ಸಾವಿರ ವರ್ಷಗಳ ಬರಗಾಲ ಹೊತ್ತಂತಿದ್ದ ನನ್ನ ಮುಂದೆ ಮಿಂಚೊಂದು ಸುಳಿದು ಮಾಯವಾಯಿತು. ಈಗಿಲ್ಲಿ ದಟ್ಟ ಕತ್ತಲು. ಭಯಾನಕ ರಾಕ್ಷಸ ಕತ್ತಲು. ಮಿಂಚು ಮಿಂಚೇ- ಕತ್ತಲು ಕತ್ತಲೇ! ಅವಳನ್ನು ನೆನಪಿಸಿಕೊಂಡುಬಿಟ್ಟಿದ್ದರೆ ನನ್ನಿಂದ ಋಣಮುಕ್ತಳಾಗಿಬಿಡುತ್ತಿದ್ದಳವಳು. ಅದು ನನಗೆ ಬೇಕಿರಲಿಲ್ಲ. ಆಕಾಶವೆಂದ ಮೇಲೆ ಮೋಡ ಕಟ್ಟೋದು, ಮಿಂಚು ಸುಳಿಯೋದು, ಗಾಳಿ ಬೀಸೋದು, ಮಳೆ ಬರೋದು ನಡೆಯುತ್ತಲೇ ಇರಬೇಕು. ಈಗ ಮಿಂಚು, ಮಿಂಚಂಥ ಅವಳು ಮುನಿಸಿಕೊಂಡಿದ್ದಾಳೆ. ಬೀಳಬಹುದಾದ ಅಯೋಗ್ಯ ಕನಸು ಅವಳನ್ನೂ ಪ್ರಭಾವಿಸಬಹುದು. ಅವಳಿಗೆ ನನ್ನ ಪ್ರೇಮದ, ಕಾಮದ ಕನಸುಗಳಷ್ಟೇ ಬೀಳಲಿ, ಬೀಳುತ್ತಿರಲಿ ಎಂದಷ್ಟೇ ಪ್ರಯತ್ನಿಸಿದೆ, ಘರ್ಜಿಸಿದೆ. ಮತ್ತೇನಿದ್ದೀತು ಅವಳ ಮೇಲೆ ಕೋಪ?!

ಧಾರಾಕಾರ ಮಳೆ. ಮತ್ತದೇ ಕನಸು. ನನಗೇ ಇಷ್ಟವಿಲ್ಲದ ಈ ಕನಸಿಗೆ ಅದು ಹೇಗೋ ನಾನು ಇಷ್ಟವಾಗಿಬಿಟ್ಟಿದ್ದೀನಿ. ಕನಸಿಗೆ ಅದೇನು ರುಚಿಸಿತೋ ನನ್ನಲ್ಲಿ? ನನ್ನ ಪ್ರೇಮಮಯವಾದ, ಏಕಾಂತದೊಳಗಿನ ಮೌನಮಯವಾದ, ಅಪರೂಪಕ್ಕೆಂಬಂತೆ ಕಾಮಮಯವಾದ ರಾತ್ರಿಗಳನ್ನೆಲ್ಲ ಗುಡಿಸಿ ಎಸೆದುಬಿಟ್ಟಿದೆ ಅತ್ತ ಈ ಏಕತಾನತೆಯ ಕನಸು. ಮೊದಲೆಲ್ಲ ಕನಸು ಬೀಳುವ ಭಯದಿಂದ ನನಗೆ ನಿದ್ರೆಯೂ ಬರುತ್ತಿರಲಿಲ್ಲ. ನಿದ್ರೆ ಬಂದರೂ ಅದರ ತೊಡೆ ಮೇಲೆ ಮಲಗಲು ಹೋಗುತ್ತಿರಲಿಲ್ಲ. ನಿದ್ರೆ ಆವರಿಸತೊಡಗಿದ ಕಣ್ಣುಗಳನ್ನೇ ಪರಚಿ ಪರಚಿ ಗಾಯ ಮಾಡಿಬಿಡುತ್ತಿದ್ದೆ. ದಿನದಿನವೂ ಇದೇ ಮಾಡುವುದು ಕಷ್ಟವಾಗಿ, ಇರುವ-ಎದುರಾಗುವ ವಾಸ್ತವಗಳೊಂದಿಗೆ ಬದುಕಬೇಕೆಂದು ಅದೊಂದು ದಿನ ನಿರ್ಧರಿಸಿಬಿಟ್ಟೆ.

ಆ ನಿರ್ಧಾರ ತೆಗೆದುಕೊಂಡ ದಿನ ನನ್ನೊಳಗೆ ಹುಲಿ ಧೈರ್ಯ ಬಂದುಬಿಟ್ಟಿತ್ತು. ಅವತ್ತು ರಾತ್ರಿ ಬೀಳಲೆಂದೇ ಬರುವ ಕನಸಿಗೆ ನಾನೇ ಕಾಯತೊಡಗಿದೆ. ಅವತ್ತೂ ಅದೇ ಕನಸು ಬಿತ್ತು. ಆ ಕನಸಿನ ಮುಖ ನೋಡುವಂತಿತ್ತು; ಬಿಳುಚಿಕೊಂಡಿತ್ತು. ಹೆದರಿಸುವ ಹುಮ್ಮಸ್ಸು ಕಳೆದುಕೊಂಡಂತಿತ್ತು. ನಾನೇ ಲವಲವಿಕೆಯಿಂದ ಎದ್ದುಬಿಟ್ಟಿದ್ದೆ!

ಮತ್ತದೇ ಕನಸು ನನ್ನೆದುರು ಪ್ರತ್ಯಕ್ಷವಾಗಿದೆ. ಇವತ್ತು ಕೊನೆ ಹಾಡಿಬಿಡಬೇಕು. ಈ ಕನಸು ಮತ್ತೆ ನನ್ನ ಮಸ್ತಿಷ್ಕದೊಳಗೆ ಮೂಡಲು ಸ್ಥಳಾವಕಾಶವೇ ಸಿಗಬಾರದು. ಈ ಕನಸಿನ ಧೈರ್ಯಕ್ಕೆ ಕೊಡಲಿಪೆಟ್ಟು ಕೊಟ್ಟುಬಿಡಬೇಕು. ಕಿಟಕಿ ಹಾಕಿಕೊಂಡೆ. ಬಾಗಿಲು ಹಾಕಿಕೊಂಡೆ. ಮಳೆ ಸದ್ದು, ಮೋಡದ ಸದ್ದು, ಮಿಂಚಿನ ಸದ್ದು, ಹೊಳೆ, ಭೂಮಿ, ಬಾನಿನ ಸದ್ದು, ನಕ್ಷತ್ರಗಳ ಸದ್ದನ್ನೆಲ್ಲ ಹುಡುಹುಡುಕಿ ದೂರ ಎಸೆದೆ ಮೊದಲು. ಆಗಲೇ ಅಲ್ಲಿ ಉಳಿದಿದ್ದು ನಾನು ಮತ್ತು ಆ ಕನಸು.

ನಾಲ್ಕು ಗೋಡೆಗಳ ನಡುವೆ ಇದೆಲ್ಲ ಬಗೆಹರಿಯಲೇಬಾರದೆಂದು ಕನಸನ್ನು ಬಿಗಿಹಿಡಿದು ಬಯಲಿಗೆ ಎಳೆದು ತಂದೆ. ದರದರನೆ ಎಳೆದು ತಂದ ಸದ್ದು ಇಡೀ ಜಗತ್ತಿಗೇ ಕೇಳಿಸಿತೇನೋ! ಜಗತ್ತು ಆದರೂ ಸುಮ್ಮನಿತ್ತು. ಯಾಕೆ ಹೀಗೆ? ಏನಕ್ಕೆ? ಎಂಬಿತ್ಯಾದಿ ಪ್ರಶ್ನೆಗಳನ್ನು ಕೇಳುತ್ತಿದ್ದ ಜಗತ್ತು ಈಗ ಭರಪೂರ ಮೌನವಹಿಸಿಬಿಟ್ಟಿತ್ತು! ಇದೇ ಮೊದಲೇನೋ ಜಗತ್ತಿನ ಜನರ ಬಾಯಿಗೆ ಬೀಗ ಬಿದ್ದಿರುವುದು?!

ನನಗೂ ಕನಸಿಗೂ ಈಗ ಯುದ್ಧ. ಯಾವುದಕ್ಕಾಗಿ ಯುದ್ಧ? ಇಬ್ಬರಿಗೂ ಗೊತ್ತಿಲ್ಲ. ಆದರೆ, ಯುದ್ಧ ಮಾಡಲೇಬೇಕಿದೆ. ಕನಸು ಗೆದ್ದರೆ ನನ್ನದೇನು ಕಿತ್ತುಕೊಳ್ಳುತ್ತೆ? ನಾನು ಗೆದ್ದರೆ ಕನಸಿನದೇನು ಕಿತ್ತುಕೊಳ್ಳಲು ಸಾಧ್ಯ? ಇಬ್ಬರಿಗೂ ಇದು ಗೊತ್ತು. ಆದರೂ, ಮಾಡಬೇಕು ಯುದ್ಧ. ಯಾಕಾಗಿ? ಯಾವುದಕ್ಕಾಗಿ? ಯಾರಿಗಾಗಿ? ಪ್ರಶ್ನೆಗಳಿಗೆ ಅರ್ಥವಿಲ್ಲ. ಪ್ರಶ್ನೆಗಳಿದ್ದರೂ ಉತ್ತರವಿಲ್ಲ. ಉತ್ತರವಿರಬಹುದೇನೋ? ಉತ್ತರಿಸಲಿಕ್ಕಾಗಿ ನಾವೇ ಸಿದ್ಧರಿಲ್ಲ...

‘ಯುದ್ಧಕ್ಕೇನು ಬೇಕು ನಿಮಗೆ?’

ಮಾತಾಡಿದ್ಯಾರು? ಕನಸೋ? ನಾನೋ? ಇಬ್ಬರ ಮೈಯನ್ನೂ ಯಾರೋ ತಡವಿದಂತಾಯ್ತು. ತಡವಿ ಮುಗುಳ್ನಗುತ್ತಾ ನಿಂತಿತ್ತು ಬಯಲು.

‘ಪ್ರಶ್ನಿಸಿದ್ದು ನಾನೇ. ಏನು ಬೇಕು ಯುದ್ಧಕ್ಕೆ ನಿಮಗೆ? ಪರಮಾಣು, ಗನ್ನು, ಬಾಂಬು, ಕೊನೇಪಕ್ಷ ಬಿಲ್ಲು, ಬಾಣ, ಚಾಕು, ಕತ್ತಿ... ಏನು ಬೇಕೋ ಅದು ಕೊಡುವೆ’

-ಬಯಲು ತನ್ನ ಮಾತುಗಳನ್ನು ಮುಗುಳ್ನಗುತ್ತಲೇ ಮುಕ್ತವಾಗಿ ಬಯಲು ಮಾಡುತ್ತಿತ್ತು.

ನಾನು ಮತ್ತು ಕನಸು ಮುಖಮುಖ ನೋಡಿಕೊಂಡೆವು. ಅಲ್ಲಿ ಬೆವರ ಬೆಳದಿಂಗಳು ಕತ್ತಲ ಗರ್ಭವನ್ನು ಸೀಳಿ ಬಯಲ ಮೇಲೆ ಸರೋವರವಾಗಿ, ಕೆರೆಯಾಗಿ, ನದಿಯಾಗಿ, ಸಮುದ್ರವೂ ಆಗಿ
ಮೂಡತೊಡಗಿತ್ತು.

ನಾನೀಗ ಇಷ್ಟ ಬಂದ ಕಡೆ ಹೋಗಿಬಿಡುವ ಸ್ವಾತಂತ್ರ್ಯ ಪಡೆದುಬಿಟ್ಟಿದ್ದೆ. ಕನಸು ಅಷ್ಟದಿಕ್ಕುಗಳಿಗೂ ಚಲಿಸತೊಡಗಿತು. ಎಲ್ಲೆಲ್ಲೂ ಈಗ ಜೀವಚೈತನ್ಯದ ರಸದೂಟ... ಗಹಗಹಿಸಿ ನಗುವ ಬಯಲ ಸದ್ದು ಈಗ ಎಲ್ಲೆಲ್ಲೂ ಕೇಳಿಸುತ್ತಿತ್ತು. ಯುದ್ಧ ಪರಿಕರಗಳು ತುಕ್ಕು ಹಿಡಿಯಲು ಶುರುಮಾಡಿದ್ದವು...

ಅವಳು ಕಾಣದಾದಂತೆಲ್ಲ

ಹೊಸ ನೋವಿಗೆ

ತಯಾರುಗೊಳ್ಳುವ

ನನ್ನತನವು

ಬೇಸರವೂ ಯಥಾಪ್ರಕಾರ

ಬದುಕಲು ಕಲಿಯುತ್ತದೆ

ನಿರಾಯಾಸವಾಗಿ ಎಂದ ಅವಿಜ್ಞಾನಿ ಕೂಡ ಇಲ್ಲೇ ಎಲ್ಲೋ ಇರಬಹುದು ಸಾವಿರ, ಕೋಟಿ ಕವಿಗಳ
ಸಂತೆಯಲ್ಲಿ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT