ಚಿಣ್ಣರೇ… ಕತೆ ಕೇಳುವ ಬನ್ನಿ

7

ಚಿಣ್ಣರೇ… ಕತೆ ಕೇಳುವ ಬನ್ನಿ

Published:
Updated:
Deccan Herald

ಕತೆ ಎಂದಾಕ್ಷಣ, ಅಮ್ಮ ತನ್ನ ಮಡಿಲಲ್ಲಿ ಗುಬ್ಬಚ್ಚಿಯಂತೆ ಮಲಗಿಸಿಕೊಂಡು ಎದೆ ತಟ್ಟುತ್ತಾ ‘ಕಾಗೆ-ಗುಬ್ಬಚ್ಚಿಯ ಕತೆ ಹೇಳುತ್ತಿದ್ದದ್ದು ನೆನಪಿಗೆ ಬರುತ್ತದೆ. ಆಹಾ…ಅದೆಷ್ಟು ಚೆಂದ ಇತ್ತು ಆಕೆಯ ಕತೆ ಹೇಳುವ ಶೈಲಿ. ಅದನ್ನು ನೆನೆದಾಗ ಕಣ್ಮುಂದೆ ಸುಪ್ತವಾಗಿ ಸುಳಿದಾಡುತ್ತವೆ ಆ ಕ್ಷಣಗಳು.

ಅಮ್ಮನ ಮಡಿಲಲ್ಲಿ ಮಲಗಿ ಕತೆ ಕೇಳುವ ಸೌಭಾಗ್ಯ ಎಷ್ಟು ಮಂದಿಗೆ ಸಿಗುತ್ತದೆ ಹೇಳಿ. ಆ ಭಾಗ್ಯ ಸಿಕ್ಕವರು ಪುಣ್ಯವಂತರು... ಈಚೆಗೆ ಮನೆಗಳಲ್ಲಿ ಕತೆ ಹೇಳುವ ಪ್ರವೃತ್ತಿ ದೂರ ಸರಿಯುತ್ತಿದೆ. ಕತೆ ಹೇಳುವುದಕ್ಕಾಗಲಿ... ಕತೆ ಕೇಳುವುದಕ್ಕೂ ಈಗಿನ ಪೋಷಕರಿಗೆ ಪುರುಸೊತ್ತಿಲ್ಲ. ಕತೆಗಳು ಗೊತ್ತಿಲ್ಲ, ಗೊತ್ತಿದ್ದರೂ ಅವನ್ನು ಹೇಳಲಿಕ್ಕೂ ಬರೋದಿಲ್ಲ. ನಗರ ಪ್ರದೇಶದಲ್ಲಂತೂ ಈ ಕೊರತೆ ಹೇರಳ.

ಈ ಕೊರತೆ ನೀಗಿಸಲು ‘ಕತೆ ಹೇಳುವ ನಿಮಗೊಂದು ಕತೆ ಹೇಳುವೆ’ ಎಂದು ಬರುತ್ತಿದೆ ಪರಂಪರಾ ಸಾಂಸ್ಕೃತಿಕ ಫೌಂಡೇಷನ್. ಶಾಲೆಗಳಿಗೆ ಹೋಗಿ ಚಿಣ್ಣರಿಗೆ ಅರ್ಥವಾಗುವ ಧಾಟಿಯಲ್ಲಿ ರಸವತ್ತಾಗಿ ಕತೆ ಕಟ್ಟಿಕೊಡುವುದು ಹಾಗೂ ಮಕ್ಕಳಲ್ಲಿನ ಕತೆ ಹೇಳುವ ಪ್ರತಿಭೆ ಗುರುತಿಸುವುದು ಅದರ ಉದ್ದೇಶ.

‘ಅವಿಭಕ್ತ ಕುಟುಂಬದಿಂದ ವಿಭಕ್ತ ಕುಟುಂಬಕ್ಕೆ ಜಾರಿದ್ದೇವೆ. ಇಲ್ಲಿ ಅಜ್ಜ ಇಲ್ಲ, ಅಜ್ಜಿ ಇಲ್ಲ. ಅಪ್ಪ ಅಮ್ಮನಿಗೆ ಕತೆ ಹೇಳುವಷ್ಟು ಪುರುಸೊತ್ತಿಲ್ಲ. ವ್ಯವದಾನವೂ ಇಲ್ಲ. ಇಂದಿನ ಅಪ್ಪ ಅಮ್ಮನಿಗೆ ಕಥೆಗಳೂ ಗೊತ್ತಿಲ್ಲ. ಗೊತ್ತಿದ್ದರೂ ಹೇಳಲು ಬರಲ್ಲ. ಕತೆ ಹೇಳುವ ಹಾಗೂ ಕತೆ ಕೇಳುವ ಕ್ರಮ ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ’ ಎಂದು ಬೇಸರದಿಂದ ಮಾತು ಆರಂಭಿಸಿದರು ಫೌಂಡೇಷನ್‌ನ ಗೌರವಾಧ್ಯಕ್ಷ ಜಿ.ಪಿ.ರಾಮಣ್ಣ

ಮಕ್ಕಳಲ್ಲಿ ಮೌಲ್ಯಗಳನ್ನು ತುಂಬುವಂತಹ ಕೆಲಸ ಶಾಲೆಗಳಲ್ಲಿ ಆಗುತ್ತಿಲ್ಲ. ನೀತಿ ತರಗತಿಗಳು ಕಾಣೆಯಾಗುತ್ತಿವೆ. ಅದರೊಟ್ಟಿಗೆ ಕನ್ನಡ ಭಾಷೆಯ ಬೆಳವಣಿಗೆಯೂ ಆಗುತ್ತಿಲ್ಲ. ಹೀಗಾಗಿ, ಮಕ್ಕಳಲ್ಲಿ ತನ್ನ ಭಾಷೆಯೆಂಬ ಬೀಜ ಬಿತ್ತಿ ಪೋಷಿಸುವ, ಅದರ ಉಚ್ಛಾರ ಹಾಗೂ ಧ್ವನಿ ಸಂಸ್ಕಾರವನ್ನು ಮಕ್ಕಳಲ್ಲಿ ಹುಟ್ಟುಹಾಕುವ ಸಲುವಾಗಿ ಈ ಕಾರ್ಯಕ್ರಮ ಶುರುಮಾಡಿದ್ದೇವೆ ಎನ್ನುವ ಅವರು ನಗರದ ಶಾಲೆಗಳಿಗೆ ಹೋಗಿ ಈ ಕಾರ್ಯಕ್ರಮ ಆಯೋಜಿಸುತ್ತಿದ್ದಾರೆ. ಇಳಿಸಂಜೆ ಹಾಗೂ ರಾತ್ರಿ ವೇಳೆ ನಗರದ ಸಾರ್ವಜನಿಕ ಸ್ಥಳಗಳಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳುವ ಇಚ್ಛೆ ಹೊಂದಿದ್ದಾರೆ.

ಜುಲೈ, ಸೆಪ್ಟೆಂಬರ್ ಹಾಗೂ ಡಿಸೆಂಬರನಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಆಗ ಮಕ್ಕಳು ಹಾಗೂ ಶಾಲಾ ಆಡಳಿತ ಮಂಡಳಿಯಿಂದ ವ್ಯಕ್ತವಾದ ಉತ್ತಮ ಪ್ರತಿಕ್ರಿಯೆ ಹುಮ್ಮಸ್ಸಿನಿಂದಲೇ ಮತ್ತೆ ಕತೆ ಹೇಳಲು ಫೌಂಡೇಷನ್ ಬಂದಿದೆ. ಈ ಬಾರಿ ಕತೆ ಹೇಳುವವರು ವ್ಯಕ್ತಿತ್ವ ವಿಕಸನದ ತರಬೇತುದಾರ ಎಂ.ಆರ್.ಸುಬ್ರಮಣ್ಯ. ಪೌರಾಣಿಕ ಕತೆ, ನೀತಿ ಕತೆ, ಚೆಂದ ಮಾಮಾ, ಬಾಲಮಿತ್ರ ಕತೆಗಳು ಹಾಗೂ ಮಕ್ಕಳಿಗೆ ಹೆಚ್ಚು ಒಗ್ಗುವಂತಹ ಕತೆಗಳನ್ನು ಆಯ್ದುಕೊಂಡು ಅವುಗಳನ್ನು ಇಲ್ಲಿ ಹೇಳಲಾಗುತ್ತದೆ.

ಮಕ್ಕಳು ಎಷ್ಟರ ಮಟ್ಟಿಗೆ ಕತೆ ಆಲಿಸಿದ್ದಾರೆ, ಅದರಲ್ಲಿನ ಸಂದೇಶವನ್ನು ಹೇಗೆ ಗ್ರಹಿಸಿದ್ದಾರೆ ಎಂಬುದನ್ನು ತಿಳಿಯಲು ಸಂಪನ್ಮೂಲ ವ್ಯಕ್ತಿಯೂ ಮಕ್ಕಳಿಗೆ ಸಂವಾದ ರೀತಿಯಲ್ಲಿ ಪ್ರಶ್ನೆಗಳನ್ನು ಕೇಳುತ್ತಾರೆ. ಹತ್ತಾರು ಮಂದಿಯ ಎದುರು ನಿಂತು ತನಗೆ ಅನಿಸಿದ್ದನ್ನು ಹೇಳುವ ಧೈರ್ಯ ಬರಲೆಂದು ಮಕ್ಕಳಿಂದಲೇ ಕತೆ ಹೇಳಿಸುತ್ತಾರೆ. ಚೆನ್ನಾಗಿ ಕತೆ ಹೇಳುವ ಮಕ್ಕಳಿಗೆ ನಗದು ಹಾಗೂ ಪುಸ್ತಕ ಬಹುಮಾನ ನೀಡಲಾಗುತ್ತದೆ.

ಜಯನಗರ ಬಳಿಯ ಭೈರಸಂದ್ರದ ಸೋಮೇಶ್ವರ ವಿದ್ಯಾ ಸಂಸ್ಥೆಯಲ್ಲಿ ಈ ಹಿಂದೆ ಈ ಕಾರ್ಯಕ್ರಮ ಆಯೋಜಿಸಿದ್ದೆವು. ಕಾರ್ಯಕ್ರಮ ಮುಕ್ತಾಯ ಹಂತಕ್ಕೆ ಬಂತು. 7ನೇ ತರಗತಿ ವಿದ್ಯಾರ್ಥಿ ದಿಲೀಪ್ ಎಂಬಾತ ಅಳುತ್ತಲೇ ನಿಂತ. ಯಾಕಪ್ಪ ಅಳುತ್ತಾ ಇದ್ದೀಯಾ ಏನಾಯ್ತು ಅಂತ ಕೇಳಿದೆ. ‘ನನಗೆ ಕತೆ ಹೇಳಲು ಅವಕಾಶ ನೀಡಿಲ್ಲ. ನಾನೂ ಚೆನ್ನಾಗಿ ಕತೆ ಹೇಳುತ್ತೇನೆ’ ಅವಕಾಶ ಕೊಡಿ ಎಂದು ಗೋಗರೆದ. ಸಿಕ್ಕ ಅವಕಾಶ ಬಳಸಿಕೊಂಡ ಅವನು ಸಂಪನ್ಮೂಲ ವ್ಯಕ್ತಿಯೂ ನಾಚುವಂತೆ ಕತೆ ಹೇಳಿದ. ಅದು ನಮಗೆ ತುಂಬಾ ಖುಷಿ ಕೊಟ್ಟಿತು ಅಂದರು ಜಿ.ಪಿ.ರಾಮಣ್ಣ.


ಜಿ.ಪಿ.ರಾಮಣ್ಣ.

*******

ಮಕ್ಕಳಲ್ಲಿ ಸುಪ್ತವಾಗಿರುವ ಅಡಗಿರುವ ಪ್ರತಿಭೆಗೆ ಸ್ಪಷ್ಟವಾದ ವೇದಿಕೆ ಸಿಗುತ್ತಿಲ್ಲ. ಅವರಿಗೆ ವೇದಿಕೆ ಕಲ್ಪಿಸಿಕೊಡಲು ಚಿಣ್ಣರ ಮೇಳ ಕಾರ್ಯಕ್ರಮ ಮಾಡುವ ಉದ್ದೇಶವಿದೆ.
- ಪಾರ್ವತಿ, ಫೌಂಡೇಷನ್‌ ಕಾರ್ಯದರ್ಶಿ

***

ಕತೆ ಹೇಳುವೆ ನಿಮಗೊಂದು ಕತೆ ಹೇಳುವೆ: ಎಂ.ಆರ್.ಸುಬ್ರಮಣ್ಯ ಶಾಸ್ತ್ರಿ. ಕತೆ ಕೇಳುವವರು–ಎಂಇಎಸ್ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ವಿದ್ಯಾರ್ಥಿಗಳು. ಅತಿಥಿಗಳು–ಎಚ್.ಜಿ.ಲಕ್ಷ್ಮೀನಾರಾಯಣಗೌಡ, ಟಿ.ಆರ್.ವೆಂಕಟರೆಡ್ಡಿ, ಜಿ.ಪಿ.ರಾಮಣ್ಣ, ಮಹಾಬಲ ಬಿಲ್ಲವ. ಸ್ಥಳ–ಎಂಇಎಸ್ ವಿದ್ಯಾಸಂಸ್ಥೆ ಆವರಣ, 7ನೇ ಅಡ್ಡರಸ್ತೆ, 16ನೇ ಮುಖ್ಯರಸ್ತೆ, ಬಿಟಿಎಂ ಲೇಔಟ್ 2ನೇ ಹಂತ. ಬೆಳಿಗ್ಗೆ 10. ಬೇರೆ ಶಾಲೆಗಳ ಮಕ್ಕಳಿಗೂ ಕತೆ ಕೇಳಲು ಅವಕಾಶವಿದೆ.

 

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !