ಕುರಿಂಜಿ

7
ಕಥೆ

ಕುರಿಂಜಿ

Published:
Updated:
Deccan Herald

ಸಂಜೆಯ ನಾಲ್ಕೂವರೆ ಸುಮಾರಿಗೆ ಮನೆಗೆ ಬಂದವನೇ ಅಂದಿನ ಗಳಿಕೆಯ ಸುಮಾರು ಮುನ್ನೂರನ್ನು ಅಮ್ಮನ ಕೈಗೆ ಕೊಟ್ಟು ಬಟ್ಟೆ ಬದಲಾಯಿಸತೊಡಗಿದ.
 ‘ಉಳಕೀದ ದುಡ್ಡು ಖರ್ಚಿಗೆ ಇಟ್ಕಂಡ್ಯ?’.
‘ಇಲ್ಲ, ಮಾಣಿಕ್‌ ಧಾರಾಕ್ಕೆ ಹೋಗ್ತಿದೀನಿ. ದಾದಿ ನೋಡಿ ಬಾಳ ದಿಸ ಆಯ್ತು’ ಎಂದು ಉತ್ತರಿಸಿದ ಕಲಂದರ್.
‘ಊಟ ಮಾಡ್ಕಂಡರ ಹೋಗು. ಅಲ್ಲಿ ನಿಮ್ಮ ದಾದಿ ಬೇಯಿಸಿ ಹಾಕದು ಅಷ್ಟರಾಗ ಐತಿ’

‘ಒಂದು ಹಲಸಿನ ಪ್ಯಾಕೆಟ್ಟು ಉಳಿದಿತ್ತಬೆ. ಅದ್ನ ತಿಂಕಂಡೆ ಬರ್ತಾ... ಅಲ್ಲಿ ಅಕಿಗರ ಯಾರಾದರೇಳು? ಯಾರ ಸಹಾಯ ಇಲ್ದೇನೆ ಬದ್ಕಾಕತ್ತಾಳಾಕಿ!’ ಮುಂದೆ ಮಾತಾಗಿ ಬರುತ್ತಿದ್ದುದನ್ನು ಅದುಮಿ ‘ಬರ್ತೇನಿ’ ಅಂದು ದರಬರನೆ ಹೊರಬಂದ. ಮಗನ ಕೊಂಕು ನಯವಾಗಿ ತಾಕಿದಂತಾಗಿ ತಾಯಿ ಹಸೀನಾ ಬರುತ್ತಿದ್ದ ಕಣ್ಣೀರನ್ನು ತೋರಗೊಡದೆ ಅವನು ಗೇಟಿನ ತನಕ ಹೋಗುವುದನ್ನೇ ನೋಡುತ್ತಾ ನಿಂತಳು. ಕಲಂದರ್ ಗೇಟಿನ ಚಿಲಕ ಹಾಕುತ್ತಾ, ತಾಯಿಯ ಕಡೆಗೆ ನೋಡದೆ ತುಸುಕೋಪದಿಂದ ‘ಸಲೀಂ ಬರ್ತಾರಂತೆ. ಅವ್ರು ಹೋದಮೇಲೆ ಒಂದು ಫೋನ್ ಮಾಡು’ ಎಂದವನೇ ವಾಚು ನೋಡಿಕೊಳ್ಳುತ್ತ ಬಸ್‌ಸ್ಟ್ಯಾಂಡಿನ ಹಾದಿ ಹಿಡಿದ.

 ಹಸೀನಾ ಮತ್ತು ಕಲಂದರ್ ಎಂಬ ತಾಯಿ ಮಕ್ಕಳಿದ್ದ ಚಿಕ್ಕಮಗಳೂರಿನಿಂದ ಕಲಂದರನ ದಾದಿ ಇರುವುದು ಚಂದ್ರದ್ರೋಣ ಪರ್ವತ ಶ್ರೇಣಿಯ ಮಾಣಿಕ್‌ ಧಾರೆ ಎಂಬ ಜಲಪಾತದ ಹತ್ತಿರ ಒಂದು ಸಣ್ಣ ಗುಡಿಸಲಿನಲ್ಲಿ. ರಾತ್ರಿ ಏಳರ ನಂತರ ಯಾವುದೇ ವಾಹನವನ್ನೂ ಪರ್ವತವನ್ನು ಏರಲು ಅಲ್ಲಿನ ಸೆಕ್ಯುರಿಟಿಗಳು ಬಿಡುವುದಿಲ್ಲವಾದ್ದರಿಂದ ಅದಕ್ಕಿಂತ ಮುಂಚೆಯೇ ಆ ಜಾಗ ಸೇರುವುದು ಅವನಿಗೆ ಅನಿವಾರ್ಯವಾಗಿತ್ತು. ಹೇಗೇಗೋ ಒಂದು ಟ್ಯಾಕ್ಸಿ ಸಿಕ್ಕಿತು. ಅದನ್ನೇರಿದ. ಡ್ರೈವರ್ ಪಕ್ಕದ ಕಿಟಕಿ ಬದಿಯ ಸೀಟು ಸಿಕ್ಕ ಖುಷಿಗಿಂತಲೂ ‘ಈ ಸಲೀಂ ಎಂಬವ್ರು ಈವತ್ತು ಸಿಕ್ಕಬಾರದಾಗಿತ್ತು, ನಾಳೆ ಚೆಲ್ವಿಗೆ ಮೀಟಾಗ್ತಿನಿ ಅಂತ ಮಾತು ಕೊಟ್ಟಿದ್ದೆ, ಈಗ ಎಲ್ಲಾ ಬಿಟ್ಟು ದಾದಿ ಹತ್ರ ಹೋಗಂಗಾಯ್ತು' ಎಂದು ಮುಖ ಸಿಂಡರಿಸಿಕೊಂಡೇ ಕೂತುಕೊಂಡ. ಟ್ಯಾಕ್ಸಿ ಆಗಲೇ ಕೈಮರದ ಹತ್ತಿರತ್ತಿರಕ್ಕೆ ಸಾಗತೊಡಗಿತ್ತು.

ಅವನಿಗೂ ಆ ಪರ್ವತಕ್ಕೂ ವಿಶೇಷವಾದ ನಂಟಿದೆ. ಅದು ಕೇವಲ ಅವನ ದಾದಿ ವಾಸವಿದ್ದ ಪ್ರದೇಶ ಅನ್ನುವುದಕ್ಕಿಂತಲೂ ಮೀರಿದ್ದೇ ಎನ್ನಬೇಕು. ಮಣ್ಣಿನ ಬಣ್ಣದ ಇಪ್ಪತ್ತೊಂದು ವರ್ಷದ ಕಲಂದರ್ ಹುಟ್ಟಿದ್ದು ಈ ಪಹಾಡಿನ ಮಧ್ಯೆಯೇ ಅಲ್ಲವೇ? ಪ್ರತಿ ಬಾರಿ ಟ್ಯಾಕ್ಸಿ ಹತ್ತುವಾಗ ಕಿಟಕಿ ಪಕ್ಕದ ಸೀಟು ಸಿಕ್ಕುವಂತಿದ್ದರೆ ಮಾತ್ರ ನೋಡಿ ಕಾದು ಹತ್ತುತ್ತಾನೆ. ಘಟ್ಟದ ಸೊಳ್ಳಂಬೊಳ್ಳ ರಸ್ತೆಯಲ್ಲಿ ಟ್ಯಾಕ್ಸಿ ತಿರುಗುತ್ತಿದ್ದರೆ ಅವನ ಕತ್ತು ಮಾತ್ರ ಕಿಟಕಿಯಾಚೆಯ ಹಸಿರಿನ ಕಡೆಗೇ ಇರುತ್ತದೆ. ಇಷ್ಟೂ ವರ್ಷಗಳಲ್ಲಿ ತಿಂಗಳಿಗೊಮ್ಮೆ ಬರುತ್ತಾನಾದರೂ ಒಮ್ಮೆಯೂ ಟ್ಯಾಕ್ಸಿಯಲ್ಲಿ ಕೂತು ನಿದ್ರೆ ಹೋಗಿದ್ದು ಅವನ ಇತಿಹಾಸದಲ್ಲೇ ಇಲ್ಲವೆನ್ನಬೇಕು. ಪಹಾಡಿಯ ಆ ರಮ್ಯ ನೋಟ, ಮಂಜು ಮುಸುಕಿ ಆಕಾಶ ಮತ್ತು ಭೂಮಿ ಒಂದೇ ಆದಂತೆ ಕಾಣುವ ಆ ದೃಶ್ಯಗಳು ಪ್ರತಿಬಾರಿಯೂ ಅದೇ ಮೊದಲೆಂಬಂತೆ ಅವನನ್ನು ಸೆಳೆಯುತ್ತವೆ. ಅವನ ತಾಯಿ ಹಸೀನಾ, ದಾದಿ ಹನೀಫಾ ಮತ್ತು ಇತ್ತೀಚೆಗೆ ಅವನಲ್ಲಿ ಪ್ರೀತಿಯ ಹುಚ್ಚು ಹಚ್ಚಿದ ಚೆಲ್ವಿಗಿಂತಲೂ ತುಸು ಹೆಚ್ಚೇ ಪ್ರೀತಿ ಆ ಪಹಾಡಿನ ಮೇಲೆ!

ಪಿಯುಸಿನೇ ಎರಡೆರಡು ವರ್ಷ ತೆಗೆದುಕೊಂಡು ಪಾಸಾದ. ಮುಂದೆ ಹಣ ಹೊಂದಿಸುವುದು ಕಷ್ಟ ಅನ್ನಿಸಿದ್ದರಿಂದ ಓದುವುದನ್ನು ಬಿಟ್ಟುಬಿಟ್ಟಿದ್ದ. ಆನಂತರ ಮುಂದೇನು ಅನ್ನೋ ಪ್ರಶ್ನೆ ಬಂದಾಗ ಅವನ ಗೆಳೆಯರಂತೆ ಹಲಸಿನ ಹಣ್ಣಿನ ವ್ಯಾಪಾರ ಶುರು ಮಾಡಿಕೊಂಡಿದ್ದ. ಬೆಳಿಗ್ಗೆ ದಿನಪತ್ರಿಕೆ ಹಾಕುತ್ತಿದ್ದ. ಸಲೀಂ ಚಿಕ್ಕಮಗಳೂರಿನಲ್ಲಿಯೇ ಒಂದು ಪುಸ್ತಕದ ಅಂಗಡಿ ನಡೆಸುತ್ತಿದ್ದರು. ಬೇಕಾದರೆ ಅಂಗಡಿಯಲ್ಲಿ ಬಂದು ಕೆಲಸ ಮಾಡಲಿ ಎಂದು ಸಲೀಂ, ಹಸೀನಾಳಿಗೆ ಹೇಳಿದ್ದುಂಟು. ಹಸೀನಾ ಈ ಬಗ್ಗೆ ಕಲಂದರನ ಬಳಿ ಪ್ರಸ್ತಾಪಿಸಿದಾಗ ಮೊದಲೇ ಸಲೀಂ ಕಂಡರೆ, ಅವರ ಹೆಸರು ಕೇಳಿದರೆ ಉರಿದು ಬೀಳುತ್ತಿದ್ದವನು ‘ಅವರು ಈಗ ಮಾಡುತ್ತಿರುವ ಉಪಕಾರವೇ ಸಾಕು’ ಎಂದಾಗ ಹಸೀನಾ ಕಣ್ಣಲ್ಲಿ ನೀರಿತ್ತು.

 ಬಾಬಾಬುಡನಗಿರಿಯನ್ನು ಅವನು ತಲುಪಿದ. ಟ್ಯಾಕ್ಸಿಯಿಂದಿಳಿದು ಹಣ ಕೊಡುತ್ತಿದ್ದಾಗ ಯಾರೋ ಟೀವಿ ಹೆಣ್ಣುಮಗಳೊಬ್ಬಳು ಕ್ಯಾಮೆರಾವನ್ನು ನೋಡುತ್ತಾ ‘‘ನಮಸ್ಕಾರ. ನಾವಿರೋದು ಬಾಬಾಬುಡನಗಿರಿಯಲ್ಲಿ. ಇದರ ಮೂಲ ಹೆಸರು ‘ಚಂದ್ರದ್ರೋಣ ಪರ್ವತ’ ಅಂತ. ಇದು ಸಾವಿರದ ಎಂಟುನೂರ ತೊಂಭತ್ತೈದು ಕಿಲೋಮೀಟರು ಎತ್ತರದಲ್ಲಿದೆ. ಇದನ್ನ ‘ದಾದಾ ಪಹಾಡ್’ ಅಂತಾನೂ ಕರೀತಾರೆ. ನಮಗೆಲ್ಲರಿಗೂ ಗೊತ್ತಿರುವಂತೆ ದತ್ತಪೀಠದ ವಿವಾದ ಇನ್ನು ಕಟಕಟೆಯ ...’’ ಹೀಗೆ ಮಾತಾಡುತ್ತಿದ್ದವಳನ್ನು ಕ್ಷಣಕಾಲ ನೋಡುತ್ತಾ ನಿಂತ. ಸ್ವಲ್ಪ ದೂರದಲ್ಲಿಯೇ ಮತ್ತೊಬ್ಬ ಟ್ಯಾಕ್ಸಿಯವನು ‘ಮಾಣಿಕ್ ಧಾರೆ, ಮಾಣಿಕ್ ಧಾರೆ’ ‘ಇದೇ ಕೊನೆ ಟ್ರಿಪ್ಪು... ಬರೋದಿದ್ರೆ ಬಂದು ಬಿಡಿ’ ಇಷ್ಟರಲ್ಲಿ ‘ಕೊನೆ ಟ್ರಿಪ್ಪು’ ಅಂತ ಕರೆಯುವುದನ್ನು ಕೇಳಿಸಿಕೊಂಡೊಡನೇ ಕಲಂದರ್ ಈ ಕೊನೆ ಟ್ಯಾಕ್ಸಿ ತಪ್ಪಿಸಿಕೊಂಡ್ರೆ ಅಲ್ಲಿಯವರೆಗೂ ರಾತ್ರಿಯಲ್ಲಿ ನಡೆದು ಹೋಗುವುದು ಅಷ್ಟು ಸುರಕ್ಷಿತವಲ್ಲ ಅಂತಂದುಕೊಂಡು ಲಗುಬಗನೆ ಹೋಗಿ ಹತ್ತಿಕೊಂಡ. ತೆರೆದ ಟ್ಯಾಕ್ಸಿ ಮಾಣಿಕ್‌ಧಾರೆಯ ಆ ದುರ್ಗಮ ರಸ್ತೆಯೆಡೆಗೆ ಚಲಿಸತೊಡಗಿತು. ಇವರ ಹಿಂದೆಯೇ ಆ ಟೀವಿಯವರ ಟ್ಯಾಕ್ಸಿ ಕೂಡ ಬರುತ್ತಿದ್ದುದನ್ನು ಕಲಂದರ್ ಗಮನಿಸಿದ.

 ಕಲಂದರನ ತಂದೆ ಸಿದ್ದಕಲಿಗೆ ಈ ಚಿಕ್ಕಮಗಳೂರೆಂದರೆ ಅದರಲ್ಲೂ ಈ ಬಾಬಾಬುಡನಗಿರಿ ಅಂತಂದ್ರೆ ತುಂಬಾ ಪ್ರೀತಿ. ಹಾಗೆ ನೋಡಿದರೆ ಇವರು ಬಳ್ಳಾರಿಯ ಹೊಸಪೇಟೆ ಕಡೆಯವರು. ಅಲ್ಲಿ ಈತ ಲಾರಿ ಡ್ರೈವರ್ ಆಗಿ ಕೆಲಸ ಮಾಡ್ತಿದ್ದ. ಮದುವೆಯಾದ ಹೊಸತರಲ್ಲಿ ಈ ಹನಿಮೂನಿಗೆ ಅಂತ ಅವನ ಹೆಂಡ್ತಿ ಹಸಿನಾಳನ್ನು ಕರೆದುಕೊಂಡುಬಂದದ್ದು ಇದೇ ಚಿಕ್ಕಮಗಳೂರಿಗೆ. ಅವರಿಬ್ಬರೂ ಸೇರಿ ನೋಡಿದ ಮೊದಲ ಊರು ಈ ಬಾಬಾಬುಡನಗಿರಿ. ಗಂಡ-ಹೆಂಡತಿ ಇಬ್ಬರೂ ಮಾಣಿಕ್‌ಧಾರೆಯಲ್ಲಿ ಮಿಂದದ್ದು, ಇದೇ ಊರಿನಲ್ಲಿ ಮೂರು ದಿನ ರೂಮು ಹಿಡಿದು ತಂಗಿದ್ದು ಎಲ್ಲವೂ ಹಸೀನಾಳಲ್ಲಿ ಹಚ್ಚ ಹಸಿರಾಗಿಯೇ ಉಳಿದಿದೆ. ಚಳಿಗಾಲದ ಬೆಳದಿಂಗಳ ಒಂದು ರಾತ್ರಿಯ ಏಕಾಂತದ ಸಮಯದಲ್ಲಿ ಹಸೀನಾ ಕಿವಿಯಲ್ಲಿ ಉಸುರಿದ್ದನಂತೆ ‘ಇಗಾ... ನಂದಿನ್ನೊಂದು ಆಸೆ ಐತಿ. ನನಗೆ ಹುಟ್ಟೋ ಮಗೂ ಜವಳ ಇಲ್ಲೇ ಆಗಬಕು ಅಂತ. ಮಗ ಹುಟ್ಟಿದರೆ ಕಲಂದರ್ ಅಂತ ಹೆಸರಿಡನ, ಮಗಳು ಹುಟ್ಟಿದರೆ ಫಾತಿಮಾ ಅಂತ ಹೆಸರಿಡನ ಆತ?’ ಅಂತಂದು ಒಂದು ಹೂಮುತ್ತನಿಕ್ಕಿದ್ದ. ಅವಳು ಮುಗುಳ್ನಕ್ಕಿದ್ದಳು. ‘ನಿನ್ನ ಜವಳದ ಕಾರ್ಯೆವು ಇಲ್ಲೇ ಆಗಿತ್ತಪಾ ಕಲಂದರ’ ಅಂತ ಅವನ ದಾದಿ ಹೇಳಿದ್ದಿದೆ. ‘ನಿಮ್ಮಪ್ಪ ಇಲ್ಲೇ ಸತ್ತು ಹೋಗ್ಯಾನಪ’ ಅಂತಂದು ಅಲ್ಲಿಯದೇ ಯಾವುದೋ ಒಂದು ಗೋರಿಯನ್ನು ತಾಯಿ ಹಸೀನಾ ತೋರಿಸಿದ್ದನ್ನ ಬಿಟ್ರೆ ವರ್ಷ ವರ್ಷ ಯಾವ ಕಾರ್ಯವನ್ನೂ ಮಾಡಿದ ನೆನಪಾಗುವುದಿಲ್ಲ. ಇಷ್ಟೆಲ್ಲಾ ಆದ ಮೇಲೂ ಯಾಕೆ ಅವರು ತಮ್ಮೂರಾದ ಹೊಸಪೇಟೆಗೆ ವಾಪಸಾಗಲಿಲ್ಲ ಅಂತ ಪ್ರಶ್ನೆ ಅವನ ತಲೆಯಲ್ಲಿ ಸುಳಿದರೂ ಅವನಿಗೆ ಈ ಪಹಾಡನ್ನು ಬಿಟ್ಟು ಹೋಗುವುದು ಊಹಿಸಲೂ ಸಾಧ್ಯವಿಲ್ಲವಾದ್ದರಿಂದ ಅವನು ಆ ಪ್ರಶ್ನೆಯನ್ನು ತನ್ನಲ್ಲೇ ಇಟ್ಟುಕೊಂಡಿದ್ದಾನೆ.

ಈ ಸಲೀಂ ಅನ್ನೋ ಸೂಳೆಮಗ ಯಾವಾಗ ಅಮ್ಮಿಗೆ ಗಂಟು ಬಿದ್ದನೋ ಏನೋ ಅಂತ ಕೋಪ ಉಕ್ಕಿ ಬರುತ್ತದೆ ಕಲಂದ್ರನಿಗೆ. ಹಸೀನಾ ಕೂಡ ಯಾವತ್ತೂ ಸಲೀಂನನ್ನು ಬೈದಿದ್ದು, ಅವನ ಮೇಲೆ ಬೇಜಾರು ಮಾಡಿಕೊಂಡದ್ದು ಇಲ್ಲವೇ ಇಲ್ಲ. ಈ ಸಲೀಂ ಮನೆಗೆ ಬರ್ಲಿಕತ್ತಿದ ಮೇಲೆ ಅಪ್ಪನನ್ನು ತಾನು ಮರೆತು ನನಗೂ ಮರೆಸಿಬಿಟ್ಟಿದ್ದಾಳೆ ಅಮ್ಮಿ ಅಂತ ಅವಳ ಮೇಲೆ ಕೋಪಗೊಳ್ಳುವುದೂ ಇದೆ. ಅಪ್ಪನ ಬಗ್ಗೆ ಯಾರೂ ವಿವರವಾಗಿ ಹೇಳುವುದೇ ಇಲ್ಲ. ಅವನ ಫೋಟೊ ಕಳೆದುಹೋಗಿಬಿಟ್ಟಿದೆ ಅಂತಾರೆ. ಅವನ ಸಾವಿನ ಕಾರಣವನ್ನು ಇದೇ ನಿಜ ಅಂತ ಯಾರೂ ಹೇಳಿಯೇ ಇಲ್ಲ. ಅಷ್ಟಕ್ಕೂ ದಾದಿ ಮಾತ್ರ ಯಾಕೆ ಮಾಣಿಕ್‌ಧಾರೆಯಲ್ಲಿಯೇ ವಾಸಿಸಬೇಕು. ಅಮ್ಮ ಏಕೆ ಪ್ರತ್ಯೇಕವಾಗಿ ಚಿಕ್ಕಮಗಳೂರಿನಲ್ಲಿ ವಾಸವಾಗಿದ್ದಾರೆ. ಈ ಎಲ್ಲ ‘ಯಾಕೆ’ಗಳಿಗೆ ಪರಸ್ಪರ ಹಾರಿಕೆಯ ಉತ್ತರಗಳು ಸಿಕ್ಕಿವೆಯೇ ಹೊರತು ಅವನಿಗೆ ಸಮಾಧಾನ ಅನಿಸುವಂತಹ ಉತ್ತರ ಸಿಕ್ಕೇ ಇಲ್ಲ. ಇದೆಲ್ಲಾ ಯೋಚಿಸಿದಾಗ ದಾದಿ ಮತ್ತು ಅಮ್ಮಿ ಇಬ್ಬರೂ ಆಳದಲ್ಲಿ ಯಾವುದೋ ರಹಸ್ಯಗಳನ್ನ ಬಚ್ಚಿಟ್ಟುಕೊಂಡ ನಿಗೂಢಗಳಂತೆಯೇ ಅನಿಸಿಬಿಡುತ್ತಾರೆ. ಈಗೀಗ ಆ ಪಟ್ಟಿಯಲ್ಲಿ ತಾನು ಪ್ರೀತಿಸುತ್ತಿದ್ದ ಚೆಲ್ವಿಯೂ ಸೇರಿಕೊಳ್ಳುತ್ತಿದ್ದಾಳೆ ಅನಿಸುತ್ತದೆ ಅವನಿಗೆ.

ಮಾಣಿಕ್‌ಧಾರೆ ತಲುಪಿದಾಗ ಗಂಟೆ ಸಂಜೆಯ ಏಳನ್ನು ಸಮೀಪಿಸುತ್ತಿತ್ತು. ಅವನ ದಾದಿಯ ಗುಡಿಸಲಿನತ್ತ ನಡೆದ. ಗುಡಿಸಲ ಬಾಗಿಲ ಮಧ್ಯದ ಪೊಳಕಿನಿಂದ ಒಂದು ಸಣ್ಣ ಲಾಂದ್ರದ ದೀಪದ ಬೆಳಕು ಹೊರಗೆ ಚೆಲ್ಲಿತ್ತು. ಅದು ಮಲಗಲಿಕ್ಕಷ್ಟೇ ಕಟ್ಟಿಕೊಂಡ ನೆರಕೆಯಂಥ ಗುಡಿಸಲು. ಅಲ್ಲಿ ಒಂದು ಟ್ರಂಕು. ಅದರ ಪಕ್ಕದಲ್ಲಿ ಕೌದಿ ಮತ್ತು ಹೊಚ್ಚಿಕೊಳ್ಳಲು ರಗ್ಗು. ಟ್ರಂಕಿನ ಮುಂದೆಯೆ ಅಡುಗೆ ಮಾಡಿಕೊಳ್ಳಲು ಒಂದು ಚಿಕ್ಕ ಸ್ಟವ್ವು. ಮುಚ್ಚಿದ ಬಾಗಿಲನ್ನು ಸಮೀಪಿಸಿದ ಕಲಂದರ್ ಇಷ್ಟೊತ್ತಿನಾಗೆ ಈ ದಾದಿಯಾದರು ಎಲ್ಲಿಗೆ ಹೋದಳು ಎಂದು ಕಸಿವಿಸಿಗೊಳ್ಳುತ್ತಿರುವಾಗಲೇ ಮಾಣಿಕ್‌ ಧಾರೆಯ ಕಡೆಯಿಂದ ಬರುವುದನ್ನು ಗಮನಿಸಿದ. ಅವಳು ಉಟ್ಟುಕೊಂಡಿದ್ದ ಕಾಟನ್ ಸೀರೆ ತೋಯ್ದು ಅವಳ ಮೈಗೆ ಅಂಟಿಕೊಂಡಿತ್ತು. ಅವಳ ಬೆಳ್ಳಿ ಕೂದಲು ಹರಡಿಕೊಂಡಿದ್ದವು. ಸುಕ್ಕುಗಟ್ಟಿದ್ದರೂ ಅವಳ ಮುಖದಲ್ಲಿ ಯಾವುದೋ ವಿಶಿಷ್ಟ ಕಾಂತಿ ಇತ್ತು.  ಹನೀಫಾ ತನ್ನ ಮೊಮ್ಮಗ ಬಂದಿರುವುದನ್ನ ಗಮನಿಸಿದೊಡನೆ ‘ಯಪಾ... ಬಂಗಾರಿ. ಬಾಳ ಒತ್ತಾತೆನಲೆ ಬಂದು? ಕೆಳಗ್ ಬಂದು ಕರೀಬಾರದೇನೋ ನಮ್ಮಪ್ಪ’

‘ಬೆ... ದದೀ... ನೀನು ಅಮ್ಮಿ ಹೇಳಿದಂಗೆನೆ ಮಾಡ್ತಿ ಬಿಡಬೆ. ಟೈಮ್ ಸಿಕ್ಕಾಗೆಲ್ಲ ಆ ಮಾಣಿಕ್ ಧಾರೆಯಲ್ಲಿ ನೆನೆದು ಬರ್ಲಿಲ್ಲ ಅಂದ್ರೆ ನಿಂಗ ಸಮಾಧಾನನ ಆಗಂಗಿಲ್ಲ ಹೌದಲ್ಲೋ!’ ಎಂದು ಚೂರು ಜಬರಿಸುವ ದನಿಯಲ್ಲೇ ಹೇಳಿದ. ದಾದಿ ಹನೀಫಾ ತನ್ನ ಮೊಮ್ಮಗ ತನ್ನನ್ನು ಜಬರಿಸಿ ಕಾಳಜಿ ಮಾಡುವಷ್ಟು ಬೆಳೆದಿದ್ದಾನೆ ಎಂದು ಒಳಗೊಳಗೇ ಹೆಮ್ಮೆಪಟ್ಟಳು.

‘ಇಲ್ಬುಡೋ ನಮ್ಮಪ್ಪ... ಇಷ್ಟು ದಿನಾ ಇಲ್ಲದ್ದು ಈಗ ಆಕ್ಕತೇನ ನನಿಗೆ’ ಇಂತಹ ಉತ್ತರಗಳಿಗೆ ಕಲಂದರನಿಗೆ ಮುಂದೆ ಏನು ಹೇಳಬೇಕೆಂದೇ ತಿಳಿಯುವುದಿಲ್ಲ.

‘ಏನು.. ಟಣಕ್ ಅಂತ ದಾದಿ ನೋಡಕ್ಕಂತ ಬಂದಬಿಟ್ಟಿ? ಸಲೀಂ ಬರ್ತಾರಂತೇನು? ಅದಕ್ಕ ದಾದಿ ಮನಿ ಕಡಿ ಹಾದಿ ತಿರುಗೇತಿ ಅನ್ನು!’

 ‘ಇಲ್ಲಬೆ ಯವ್ವ. ನಿನ್ನ ನೋಡಂಗಾತು ಅದಕ್ಕ ಬಂದುಬಿಟ್ಟೆ ಎಂದು ಅವನ ದಾದಿ ಗಲ್ಲ ಹಿಡಿದು ಮುತ್ತು ಕೊಟ್ಟ’

‘ಇತ್ಲಾಗ ಬಾ ನಮ್ಮಪನೆ. ನಾ ಈ ಸೀರಿ ಬಿಟ್ಟು ಅನ್ನಕಿಡ್ತೀನಿ ಬಾ. ಅಷ್ಟರಾಗ ನೀನು ಒಂಚಾವತ್ತು ಅಡ್ಡಾಕ್ಕಿಯೇನು ನೋಡು’ ಎಂದವಳೇ ಸೀರೆ ಬದಲಾಯಿಸತೊಡಗಿದಳು. ಕಲಂದರ ಅಲ್ಲೇ ಇದ್ದ ಕೌದಿಯ ಮೇಲೆ ಅಡ್ಡಾದ. ಅವಳು ಸೀರೆ ಬದಲಿಸುತ್ತಲೇ ಚೆಲ್ವಿಯ ವಿಷ್ಯ ಪ್ರಸ್ತಾಪಿಸಿದಳು. ಕಲಂದರ ತನ್ನ ಪ್ರೀತಿಯ ವಿಷ್ಯ ಮೊದಲಿಗೆ ಹೇಳಿದ್ದು ಹನೀಫಾಳ ಬಳಿಯೇ. ಅದಕ್ಕವಳು ತನ್ನ ಅಭ್ಯಂತರವಿಲ್ಲವೆಂದೂ ಆದರೂ ಅವನ ಅವ್ವ ಹಸೀನಾಳ ಒಮ್ಮೆ ಕೇಳಿ ಮುಂದಡಿಯಿಡಬೇಕೆಂದು ಹೇಳಿದ್ದಳು. ಒಂದು ಬಾರಿ ಕಲಂದರ ತಾಯಿ ಹಸೀನಾಳ ಬಳಿ ಚೆಲ್ವಿಯ ವಿಷಯ ಪ್ರಸ್ತಾಪಿಸಿದ್ದ. ಅವನಲ್ಲಿ ಭಯವಿತ್ತು. ಅವಳದು ಜಾತಿ ಬೇರೆಯಾದ ಕಾರಣ ಎಲ್ಲಿ ತನ್ನ ತಾಯಿ ಬೇಡ ಎಂದುಬಿಡುತ್ತಾಳೋ ಎಂಬ ಅಳುಕಿನಿಂದಲೇ ಕೇಳಿದ್ದ. ಆಶ್ಚರ್ಯ ಎನ್ನುವ ರೀತಿಯಲ್ಲಿ ಹಸೀನಾ ಒಪ್ಪಿಗೆ ಸೂಚಿಸಿದ್ದಳು. ಆದರೆ ಕೊನೆಗೆ ‘ನಿನ್ನ ಸುಖಾನೇ ನನ್ನ ಸುಖ ಕಲಂದ್ರ. ನಿನಗೋಸ್ಕರನ ಈ ಜೀವ ಹಿಡ್ಕಂಡಿರದು. ಕೊನಿಗಾಲ್ದಗೆ ನನ್ನ ಕೈ ಬಿಡಬ್ಯಾಡ ಅಷ್ಟೇ’ ಎಂದು ಕಣ್ಣೀರಾಗಿದ್ದಳು. ಅವನ ಕಣ್ಣಲ್ಲೂ ನೀರಿತ್ತು. ಅವತ್ತು ಕಲಂದರ ನಿದ್ದೆ ಬರುವವರೆಗೂ ತನ್ನ ತಾಯಿಯ ತೊಡೆಯ ಮೇಲೆಯೇ ಮಲಗಿದ್ದ. ಹಸೀನಳು ಕೂಡ ಇನ್ನು ಮುಂದಿನ ದಿನಗಳಲ್ಲಿ ತನ್ನ ಪ್ರೀತಿಯ ಮಗ ಬೇರೊಂದು ಜೀವದ ಆಸರೆಯಲ್ಲಿರುತ್ತಾನೆ ಎಂಬ ಅರ್ಧ ಖುಷಿ ಮತ್ತು ಭವಿಷ್ಯದ ಬಗ್ಗೆ ಕೊಂಚ ಅಳುಕಿನಿಂದಲೇ ಅವನು ನಿದ್ದೆ ಹೋಗುವವರೆಗೂ ತಟ್ಟಿದಳು. ಕಲಂದರ ಹನೀಫಾಳಿಗೆ ಅವ್ವ ಒಪ್ಪಿದ ವಿಷಯವನ್ನು ತಿಳಿಸಿದ ಕೂಡಲೇ ಅದರಲ್ಲೇನು ಆಶ್ಚರ್ಯ ಇಲ್ಲ ಎಂಬಂತೆ ಮುಗುಳ್ನಕ್ಕಳು.

‘ನಿಮ್ಮವ್ವ ಒಪ್ಪಿದ್ರಾಗ ಏನೂ ಆಶ್ಚರ್ಯ ಅನ್ನೋದಾ ಇಲ್ಲ ನೋಡು ಕಲಂದ್ರ. ನಿಮ್ಮಪ್ಪ ಹೋದ ಕಾಲಕ್ಕ ನೀನಿನ್ನೂ ತುಂಬಾ ಸಣ್ಣವ. ಅವರಿವರ ಮನಿ ಮುಸುರಿ ತಿಕ್ಕಿ ನಿನ್ನ ಸಾಕ್ಯಾಳ. ಅಕಿ ಶಕ್ತಿ ಮೀರಿ ನಿನ್ನ ಇದ್ಯಾವಂತನಾಗಿ ಮಾಡ್ಯಾಳ. ಇನ್ನಮ್ಯಾಕ ನೀನಾ ಜವಾಬದಾರಿಯಿಂದ ಬದುಕಬಕು’ ಎಂದು ಹೇಳುತ್ತಿದ್ದಂತೆ ಟೀವಿ ಹುಡುಗಿ ಬಾಗಿಲು ತಟ್ಟಿದಳು. ತೆರೆದ ಬಾಗಿಲಿಗೆ ಅವಳ ಮುಖವೂ ದೀಪದ ಬೆಳಕಿಗೆ ಹೊಳೆಯುತ್ತಿತ್ತು. ಆ ಟೀವಿ ಹುಡುಗಿ ತಾನು ಈ ಜಲಪಾತದ ಬಗ್ಗೆ ಒಂದು ಡಾಕ್ಯುಮೆಂಟರಿ ಮಾಡುವುದಕ್ಕಾಗಿ ಬಂದಿರುವುದಾಗಿಯೂ ಅದರ ಬಗ್ಗೆ ಮಾಹಿತಿ ಕೊಡಬೇಕೆಂದೂ ವಿನಂತಿಸಿಕೊಂಡಳು. ಅಷ್ಟಕ್ಕೇ ‘ನಂಗೇನೂ ಗೊತ್ತಿಲ್ಲ’ ಎಂದು ಅವಳ ಮುಖಕ್ಕೆ ಬಾಗಿಲು ಬಡಿದು ಅನ್ನಕ್ಕಿಡಲು ಪಾತ್ರೆಗೆ ಅಕ್ಕಿ ಮತ್ತು ನೀರು ಬೆರೆಸಿ ಸ್ಟವ್ವಿನ ಮೇಲಿಟ್ಟು ಬೆಂಕಿ ಹೊತ್ತಿಸಿದಳು. ಹೊರಗಿನಿಂದ ಟೀವಿ ಹುಡುಗಿ ಕದ ಬಡಿದು ‘ಅಜ್ಜಿ... ಇಲ್ಲಿ ಸುತ್ತಾ ಮುತ್ತಾ ಯಾರನ್ನೇ ಕೇಳಿದ್ರೂ ನಿಮ್ಮ ಹೆಸರೇಳಿ ಎಲ್ರೂ ಇಲ್ಲಿಗೆ ಕಳುಹಿಸಿದರು. ಇಲ್ಲ ಅನ್ನಬೇಡಿ ಅಜ್ಜಿ. ನಿಮ್ಮಿಂದ ಬಹಳ ಉಪಕಾರ ಆಗತ್ತೆ. ನಿಮ್ಮ ಮಗನ ಸುದ್ದಿಯನ್ನ ಕೇಳಿ ಬೇರೆ ಯಾರೂ ಹಾಗೆ ಮಾಡಿಕೊಳ್ಳದೆ ಇದ್ರೆ ಅದು ನೀವು ಎಲ್ಲರಿಗೂ ಮಾಡುವಂತ ಉಪಕಾರನೇ ಅಲ್ಲವಾ’ ಅವಳು ಅಂದಿದ್ದರಲ್ಲಿ ಹೇಗಾದರೂ ಮಾಡಿ ಈ ಸುದ್ದಿಯನ್ನು ಹೆಕ್ಕಬೇಕು ಅನ್ನುವ ಮಸಲತ್ತಿತ್ತು. ಕಲಂದರ ಹಾಗೇ ಅಡ್ಡಾದವನು ಧಡಕ್ಕನೆ ಎದ್ದು ಕೂತ. ಹನೀಫಾ ಏನು ಮಾಡಬೇಕೆಂದು ತೋಚದೆ ಕಲ್ಲು ಕೂತವಳಂತೆ ಹಾಗೆಯೇ ಕೂತಿದ್ದಳು. ಕಲಂದರ ಅವನ ದಾದಿಯ ಮುಖವನ್ನೊಮ್ಮೆ ನೋಡಿದ. ಅವಳು ಗುಡಿಸಲಿನಲ್ಲಿ ಬಿದ್ದ ತಮ್ಮ ನೆರಳುಗಳನ್ನೇ ನೋಡುತ್ತಾ ಕೂತಿದ್ದಳಾದ್ದರಿಂದ ಇವನ ಕಣ್ಣುಗಳಲ್ಲಿದ್ದ ದೈನ್ಯದ ಬೇಡಿಕೆ ಇವಳಿಗೆ ಕಾಣಲಿಲ್ಲ. ಟೀವಿ ಹುಡುಗಿ ಮಾತ್ರ ಬಾಗಿಲು ತೆರೆಯುವಂತೆ ಗೋಗರೆಯುತ್ತಲೇ ಇದ್ದಳು. ಅಷ್ಟರಲ್ಲಿ ಕಲಂದರ ಏನೋ ಹೊಳೆದವನಂತೆ ಎದ್ದು ಬಾಗಿಲು ತೆರೆದಿದ್ದ...

 ‘ನನ್ನ ಮಗ ಸಿದ್ದಕಲಿ. ಇವನ ಅಪ್ಪ. ನಾವೆಲ್ಲಾ ಇವನ ಜವಳ ತಗಸ್ಬಕು ಅಂತ ಇಲ್ಲಿಗೆ ಬಂದಿದ್ವಿ. ಈ ಮಾಣಿಕ್‌ಧಾರೆ ಬಗ್ಗೆ ಆಗಲೇ ಸಾಕಷ್ಟು ಕಥೆಗಳಿದ್ವು. ಇಂಗ್ಲೀಸ್ನೋರು ತುಂಬಾ ಹಿಂದೆ ಈ ಮಾಣಿಕ್‌ಧಾರೆಯ ನೀರಿನ ಮೂಲ ಯಾವ್ದು ಅಂತ ನೋಡಾಕ ಇಮಾನ ತಕಂಡು ಹೋದೋರು ವಾಪಾಸು ಬರಲೇ ಇಲ್ಲ ಅಂತ ಕತಿ. ಈ ಕತಿ ಸಿದ್ದಕಲಿಗೂ ಗೊತ್ತಿತ್ತು. ಇದ್ಯಾ ತಲೀಗೆ ಹತ್ತಲಿಲ್ಲ. ತಾನು ಊರೂರು ಸುತ್ತಬಕು ಅಂತಾನ ಲಾರಿ ಡ್ರೈವರ್ ಆಗಿದ್ದ. ಮೊದ್ಲಿನಿಂದಾನೂ ಇವ್ನಿಗೆ ಕೆದುಕೊ ಗುಣ. ನಾವೆಲ್ರೂ ಇಲ್ಲಿ ಸ್ನಾನಕ್ಕೆ ಅಂತ ಬಂದಿದ್ವಿ. ಹಸೀನಾ ಹುಡುಗಗೆ ನೀರೆರೀತ ಇದ್ದಳು. ಇವ್ನು ಲಗುಲಗು ಜಳಕ ಮಾಡಿ ಹಿಂಗ ಹೋಗಿ ಬರ್ತೀನಿ ಅಂತಾ ಹೋದೋನು ತಿರುಗಿ ವಾಪಸ್ಸು ಬರ್ಲೇ ಇಲ್ಲ‘ ಫಳಕ್ಕೆಂದು ಕಣ್ಣೀರು ಕಪಾಳದಿಂದ ಜಾರಿ ಸೀರೆಯ ಮೇಲೆ ಬಿತ್ತು. ತನ್ನ ಸೆರಗಿನಿಂದ ಕಣ್ಣೊರೆಸಿಕೊಂಡಳು. ಕಲಂದರನಿಗೆ ಮಾತೇ ಹೊರಡದೆ ಕುಳಿತಿದ್ದ. ಪಹಾಡಿನ ತಣ್ಣನೆ ಗಾಳಿ ಸುಯ್ಯೋ ಎಂದು ಬೀಸುತ್ತಿತ್ತು. ಮೋಡಗಳು ಚಲಿಸುತ್ತಿದ್ದುದು ಉಚ್ವಾಸ ನಿಶ್ವಾಸದಷ್ಟೇ ಸ್ಪಷ್ಟವಾಗಿ ಕೇಳಿಸುತ್ತಿತ್ತು. ಕೂಡಲೇ ಮತ್ತೇನೋ ನೆನಪಿಸಿಕೊಂಡವಳಂತೆ ಟೀವಿ ಹುಡುಗಿಗೆ ಕೈ ಮುಗಿದಳು. ಕಲಂದರನಿಗೆ ತನ್ನ ದಾದಿ ಕೈಮುಗಿದದ್ದು ಯಾಕೆಂದು ಹೊಳೆಯಲಿಲ್ಲ. ಬೀಸುವ ಗಾಳಿಗೆ ಬುಡ್ಡಿ ಆರಿ ಹೋಯಿತು. ಕಲಂದರ ಬೆಂಕಿ ಪಟ್ಟಣಕ್ಕೆ ಹುಡುಕಹತ್ತಿದ. ಟೀವಿ ಹುಡುಗಿ ಕತ್ತಲಲ್ಲೇ ತನ್ನ ಪರ್ಸನ್ನು ತಡಕಾಡಿ ಒಂದಿಷ್ಟು ಹಣ ತೆಗೆದು ಹನೀಫಾಳ ಕೈಗಿತ್ತು ಬರುತ್ತೇನೆಂದು ತನ್ನಲ್ಲಿದ್ದ ಪುಟ್ಟ ಮೊಬೈಲಿನಲ್ಲಿ ಬೆಳಕು ಮೂಡಿಸಿಕೊಂಡು ಹೊರಡಲು ಅನುವಾಗುತ್ತಿರುವಾಗ ಕಲಂದರನಿಗೆ ಟೀವಿ ಹುಡುಗಿ ತಂಗಿದ್ದ ಚೂರು ದೂರದ ಗುಡಿಸಲಿನವರೆಗೂ ಬಿಟ್ಟು ಬರಲು ಹೇಳಿದಳು.

ದಾರಿಯುದ್ದಕ್ಕೂ ಟೀವಿ ಹುಡುಗಿ ಮತ್ತು ಕಲಂದರ ಮಾತಾಡಲಿಲ್ಲ. ಅವನ ತಲೆಯಲ್ಲಿ ಅವನ ತಂದೆ ಮಾಯವಾಗಿದ್ದೇ ಸುಳಿದಾಡುತ್ತಿತ್ತು. ಈಗ ನಿಧಾನವಾಗಿ ಅವನಿಗೆ ಎಲ್ಲ ಅರ್ಥವಾಗತೊಡಗಿತ್ತು. ತನ್ನ ದಾದಿ ಇಲ್ಲೇ ಇರುವುದಕ್ಕೆ, ತಾಯಿ ದೂರದ ಚಿಕ್ಕಮಗಳೂರಿನಲ್ಲಿರುವುದಕ್ಕೆ ಸಣ್ಣಗೆ ಅರ್ಥ ಹೊಳೆಯಲಾರಂಭಿಸಿತ್ತು. ಒಬ್ಬಳು ನೆನಪುಗಳ ದಾಟಲು ಹವಣಿಸುತ್ತಾ ಬದುಕಿಗೆ ಮುಖಾಮುಖಿಯಾದವಳು, ನೆನಪುಗಳಲ್ಲೇ ಬದುಕುತ್ತಾ ಕಳೆದುಕೊಂಡಿದ್ದನ್ನು ಕಳೆದ ಜಾಗದಲ್ಲಿಯೇ ಹುಡುಕುತ್ತ ಬದುಕಿನ ಹೊಸ ಆಯಾಮಗಳಿಗೆ ತನ್ನನ್ನೊಡ್ಡಿಕೊಳ್ಳುವ ತನ್ನ ದಾದಿ. ಇಬ್ಬರೂ  ಬದುಕಿನೊಂದಿಗೆ ಎರಡು ಬೇರೆ ರೀತಿಯಲ್ಲಿ ಅನುಸಂಧಾನಕ್ಕೆ ತೊಡಗಿದ್ದಾರೆಂದು ಅವನಿಗೆ ಅನ್ನಿಸದೆ ಇರಲಿಲ್ಲ. ದೂರದಲ್ಲಿ ಒಂದು ಕ್ಯಾಂಪ್ ಫೈರ್ ಕಂಡಿತು. ಟೀವಿ ಹುಡುಗಿ ಇವನನ್ನು ನೋಡಿ ‘ನಾನು ಹೋಗ್ತೀನಿ ಇಲ್ಲಿಂದ! ನೀವೂ ಹೋಗಿ... ಕತ್ತಲಾಗಿದೆ’ ಎಂದು ಅವನ ಕೈಕುಲುಕಿದಳು.

 ವಾಪಸು ಅವನ ದಾದಿಯ ಗುಡಿಸಲು ಸೇರುವುದರೊಳಗೆ ಹನೀಫಾ ತಟ್ಟೆಗೆ ಊಟ ಬಡಿಸುತ್ತಿದ್ದಳು. ಒಳಗೆ ಬಂದು ಕದವಿಕ್ಕಿದ. ಅಜ್ಜಿ ಮತ್ತು ಮೊಮ್ಮಗ ಊಟಕ್ಕೆ ಕುಳಿತರು. ಲಾಂದ್ರದ ಬೆಳಕು ಇಬ್ಬರ ಮುಖದ ಮೇಲೂ ಸಮವಾಗಿ ಬಿದ್ದು ಅವರ ಪಕ್ಕದಲ್ಲಿ ನೆರಳುಗಳು ಮೂಡಿ ಆ ಪುಟ್ಟ ಮನೆಯಲ್ಲಿ ಇಬ್ಬರು ನಾಲ್ಕಾದಂತಿದ್ದರು. ಕಲಂದರನೇ ಮೌನ ಮುರಿದು ಕೇಳಿದ..

‘ದಾದಿ... ಬಾಬಾ ಮಾಡಿದ್ದು ತಪ್ಪು ಅಂತೀಯಾ?’

‘ತಪ್ಪು ಅಂತ ಹೆಂಗೇಳ್ಳಿ? ಸರಿ ಅಂತ ಹೆಂಗೇಳ್ಳಿ? ಈ ಭೂಮಿ ಮ್ಯಾಲೆ ಈ ಪವಾಡದಂಗಿರೋ ‘ತಾವು’ಗಳು ಬೇಕಾದಷ್ಟಿರಬಹುದು. ಅದರ ಮೂಲ ಹಿಡಿಯೋ ಮನ್ಸರ ಮನಸ್ಸಿನ್ಯಾಗೆ ಏನೈತಿ ಅನ್ನೋದರ ಮ್ಯಾಲೆ ಯಸನಾ? ದೆಸಾನಾ? ಅನ್ನೋದು ಇರ್ತಾತಾ? ಗೊತ್ತಿಲ್ಲಪ್ಪ!’

ಇಷ್ಟು ಎತ್ತರದಲ್ಲಿರುವ ಈ ಪಹಾಡಿ, ಈ ಹಸಿರು, ಗಾಳಿ, ನೀರು ಎಲ್ಲಕ್ಕೂ ಒಂದು ಸೂತ್ರ ಅಂತಿದ್ದು ಅದು ಏ ಮನ್ಸಾ, ನೀ ಬರಿ ಸುಖವಾಗಿರು. ಮೂಲದ ಪ್ರಶ್ನಿ ನಿನಗ್ಯಾಕ ಅಂತಿರ್ತಾದ? ಯಾರಿಗ್ಗೊತ್ತು? ಮನ್ಸಾ ಮಾತ್ರ ಎಲ್ಲವನ್ನೂ ಹಿಡಿದುಬಿಡ್ತೀನಿ ಅಂತ ಹೊರಟುಬಿಡ್ತಾನ. ಅಷ್ಟಕ್ಕೂ ಈ ತಪ್ಪು- ಸರಿ ಎಲ್ಲ ದೊರಕೊ ಯಸ-ದೆಸಿಯಿಂದ ಮಾತ್ರ ಅಂಕೋಬೋದು ಅಷ್ಟೆ. ಎಲ್ಲಾನೂ ನಾವಂಕಂಡಂಗೆ ಅಲ್ಲೇನು...?’ ಅವಳ ಈ ಪ್ರಶ್ನೆಗಳಿಗೆ ಅವನಲ್ಲಿ ಯಾವ ಉತ್ತರವೂ ಇರಲಿಲ್ಲ.

‘ನಿನ್ನ ಮಗನ್ನ ತಿನ್ಕಂಡ ಈ ಧಾರೆ ಬಗ್ಗೆ ಎಷ್ಟಂದ್ರ ಎಷ್ಟೂ ಸಿಟ್ಟಿಲ್ಲೇನಬೆ?’

‘ಸಿಟ್ಟಿತ್ತು... ಅದಕ್ಕೆ ಉಳಿದೆ. ಅಷ್ಟಕ್ಕೂ ಈ ಧಾರೇನಾ ತಿಂಕಂಡತಿ ಅಂತ ಹೆಂಗೇಳದು? ಅದಕ್ಕ ದಿನಾಲು ಅದರ ಕೆಳಗ್ ಕೂತು ಮಾತಾಡ್ತೀನಿ. ಮಗ ಹೋದ ದಾರಿಯಲ್ಲೇ ಕೂತು ಅವನು ಮತ್ತೆ ಬಂದರೂ ಬರಬಹುದು ಅಂತ ಕಾಯ್ತೀನಿ ಕಣಪ್ಪ’ ಇಲ್ಲಿಯವರೆಗೂ ಅದುಮಿಟ್ಟುಕೊಂಡಿದ್ದ ದುಃಖದ ಕಟ್ಟೆ ಒಡೆಯಿತು. ಅಲ್ಲಿಂದ ಇಬ್ಬರು ಊಟವನ್ನೇ ಮಾಡಲಿಲ್ಲ. ರಾತ್ರಿಯ ಎಷ್ಟೋ ಹೊತ್ತು ಅವನ ಅಳು ನಿಂತಿರಲಿಲ್ಲ. ಕೊನೆಗೆ ಹನೀಫಾ ತನ್ನ ತೊಡೆಯ ಮೇಲೆಳೆದುಕೊಂಡು ತಟ್ಟಿ ಮಲಗಿಸಿದಳು.

 ಚುಮು ಚುಮು ಬೆಳಕು ಥಂಡಿಯ ಹವೆಯೊಂದಿಗೆ ಬೆರೆತು ತೆರೆದ ಬಾಗಿಲೊಂದಿಗೆ ನುಸುಳಿದಾಗ ಇವಳಿಗೆ ಎಚ್ಚರವಾಯಿತು. ಇವನು ಮಲಗಿದ್ದ ಜಾಗದಲ್ಲಿರಲಿಲ್ಲ. ಸೀದಾ ಧಾರೆಯ ಜಾಗಕ್ಕೆ ಹೋದಳು. ಅವನು ಮಾಣಿಕ್‌ ಧಾರೆಯ ಕೆಳಗಡೆ ಕೂತಿದ್ದ. ಇವಳಿಗೊಂದು ಕ್ಷಣ ಕರುಳು ಚುರ್ ಎಂದಂಗಾಯಿತು. ಸೀದಾ ಹೋದವಳೇ ಅವನನ್ನು ಎಳೆದು ಅಲ್ಲಿಯೇ ಪಕ್ಕದ ಮೆಟ್ಟಿಲಿನಲ್ಲಿ ಕುಳ್ಳಿರಿಸಿ ಅವನನ್ನ ತಬ್ಬಿಕೊಂಡಳು. ಅಲ್ಲಿ, ಆ ಹೊತ್ತು ಧಾರೆಯ ಎಂದಿನ ನಿಷ್ಕರುಣ ಸದ್ದು ಇದ್ದರೂ ಇಡೀ ಪಹಾಡಿಯೇ ಇವನನ್ನ ಸಂತೈಸುತ್ತಿರುವಂತೆ ಅನ್ನಿಸುತ್ತಿತ್ತು.

 ಅವನು ಹೊರಡಲು ಅಣಿಯಾದ. ಹೋಗುವುದಕ್ಕಿಂತ ಮುಂಚೆ ತನ್ನ ದಾದಿಯನ್ನು ಕುರಿತು ‘ಇನ್ನೊಂದು ಗಂಟು ಉಳಿದಿದೆ ದಾದಿ’

‘ಸಲೀಂ..? ಹ್ಮ್, ಬಾಯಾರಿಕೆ ಆದಾಗ ನೀರು ಕುಡಿಯೋದು ತಪ್ಪಾ ನನ್ನಪ್ಪ? ಇಲ್ಲೇ ಇದ್ದಿದ್ರೆ ಸಿದ್ದಾಕಲಿ ನೆಪ್ಪು ಅವಳನ್ನು ಬದುಕಕ್ಕೆ ಬಿಡ್ತಾ ಇರ್ಲಿಲ್ಲ. ನೀನು ಇಷ್ಟು ಬೆಳೀತಾನೂ ಇರ್ಲಿಲ್ಲ. ನಿನಗೆ ಮುಂದೆ ಒಂದಿನ ಎಲ್ಲಾ ಅರ್ಥ ಆಗತ್ತೆ. ಕಾಯಬೇಕು ಅಷ್ಟೇ... ಮುಂದಿನ ಸರ್ತಿ ಬರುವಾಗ ನಿನ್ನ ಹುಡುಗಿನೂ ಕರ್ಕಂಡು ಬಾ, ಆತ?’

‘ಹೂ ದಾದಿ.. ಅಷ್ಟ್ರಾಗೆ ಕುರಿಂಜಿ ಹೂ ಕೂಡ ಅರಳಿರ್ತದೆ ಅಲ್ಲಾ. ಎಷ್ಟೋ ವರ್ಷಕ್ಕೊಂದು ಸಾರ್ತಿ ಅರಳೋ ಹೂವು. ಚೆಲ್ವಿಗೆ ಆ ಹೂವಿನ ಬಗ್ಗೆ ಹೇಳ್ತಾನೆ ಇರ್ತೀನಿ’

‘ನೀನು ಮುಂದಿನ ಸರ್ತಿ ಬರೋ ಅಷ್ಟೊತ್ತಿಗೆ ಈ ಪಹಾಡಿನಲ್ಲಿ ಕುರಿಂಜಿ ಅರಳಿ ಪಹಾಡಿಗೆ ಪಹಾಡೀನೇ ಸೆಂಟು ಹೊಡ್ಕೊಂಡು ಇರ್ತದೆ’

ಟೀವಿ ಹುಡುಗಿ ಕೊಟ್ಟು ಹೋಗಿದ್ದ ದುಡ್ಡನ್ನೆಲ್ಲ ಅವನ ಕೈಗಿತ್ತು ಅವನು ದೂರ ಸಾಗಿ ಟ್ಯಾಕ್ಸಿ ಹಿಡಿಯುವವರೆಗೂ ನೋಡುತ್ತಾ ನಿಂತಳು. ಕುರಿಂಜಿ ಅರಳಿ ಗಂಧ ಪಹಾಡಿನ ತುಂಬಾ ಹರಡುವುದನ್ನೇ ನೆನೆಸಿಕೊಂಡೇ ಪುಳಕಿತಗೊಂಡ.

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !