ಕೊನೆಯ ಪ್ರಶ್ನೆ

7
ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆ

ಕೊನೆಯ ಪ್ರಶ್ನೆ

Published:
Updated:

ಹಿಂದಣ ಹೆಜ್ಜೆಯ ನೋಡಿ ಕಂಡಲ್ಲದೆ
ನಿಂದ ಹೆಜ್ಜೆಯನರಿಯಬಾರದು -ಅಲ್ಲಮ

ನಾಯಕ್ ಗಡಿಯಾರದ ಕಾರ್ಖಾನೆಯ ಮುಂದಿನ ಮೈದಾನವನ್ನು ನಾಯಕ್ ಮೈದಾನ ಅಂತಲೇ ಕರೆಯುವುದು ರೂಢಿ. ವಿಶಾಲವಾದ ಆ ಮೈದಾನದ ಮಧ್ಯದಲ್ಲಿ ಹಾಕಿದ್ದ ಸಣ್ಣ ಚಪ್ಪರದ ಕೆಳಗೆ ನಿಲ್ಲಿಸಿದ್ದ ಸೈಕಲನ್ನು ಬೆಳಿಗ್ಗೆ ಎಂಟು ಗಂಟೆಗೆ ಸರಿಯಾಗಿ ಹತ್ತಿದ ನಾರಾಯಣ. ಆಗ ಅಲ್ಲಿದ್ದುದು ಹತ್ತನ್ನೆರಡು ಜನ.

ನಾಯಕ್ ಮೈದಾನದಿಂದ ಮಾರ್ನಮಿಕಟ್ಟೆ ಸರ್ಕಲ್, ಕಾಸಿಯಾ ಹೈಸ್ಕೂಲ್ ದಾಟಿ, ಜಪ್ಪು ಮಾರ್ಕೆಟಿನ ಇಳಿಜಾರಿನ ಮೂಲಕ ಗುಜ್ಜೆರಕೆರೆಯವರೆಗೆ ನಿರಂತರವಾಗಿ ಸೈಕಲ್ ಬ್ಯಾಲನ್ಸ್ ಮಾಡಲಾಗುವುದೆಂದು ವಾರದಿಂದ ಕರಪತ್ರಗಳನ್ನು ಹಂಚಿದ್ದರೂ ಯಾರೂ ಅದರ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. ಕೈ ಬಿಟ್ಟು ಸೈಕಲ್ ಓಡಿಸುವವರು, ಸೈಕಲ್ ಮೇಲೆ ಅಂಗಾತ ಮಲಗಿ ಸವಾರಿ ಮಾಡುವವರು ಆಗಾಗ್ಗೆ ಮಾರ್ನಮಿಕಟ್ಟೆಗೆ ಬಂದು ಹೋಗುತ್ತಿದ್ದುದುಂಟು. ನೆಹರೂ ಮೈದಾನಕ್ಕೆ ಬರುತ್ತಿದ್ದ ಕಮಲಾ ಸರ್ಕಸ್, ಜೈಹಿಂದ್ ಸರ್ಕಸ್‌ಗಳಲ್ಲೂ ಸೈಕಲ್ ಬ್ಯಾಲನ್ಸ್ ಇರುತ್ತಿದ್ದುದರಿಂದ ಅಲ್ಲಿ ಕೆಲಸ ಬಿಟ್ಟವರು, ಇಲ್ಲವೇ ಸೈಕಲ್ ಬ್ಯಾಲನ್ಸ್ ಕಲಿತ, ಮಾಡಲು ಬೇರೆ ಕೆಲಸ ಇಲ್ಲದ ಹುಡುಗರು ಇವೆಲ್ಲಾ ಮಾಡುತ್ತಾರೆಂದು ಜನ ವಿಶೇಷ ಆಸಕ್ತಿ ತೋರಿಸುತ್ತಿರಲಿಲ್ಲ; ತಟ್ಟೆ ಹಿಡಿದು ಬಂದ ಸಹಾಯಕನಿಗೆ ಚಿಲ್ಲರೆ ಕಾಸಷ್ಟೇ ಬೀಳುತ್ತಿತ್ತು.

ನಾರಾಯಣನ ಸೈಕಲ್ ಬ್ಯಾಲನ್ಸ್ ಕೂಡಾ ಹತ್ತರೊಟ್ಟಿಗೆ ಹನ್ನೊಂದು ಅಂದುಕೊಂಡವರಿಗೆ ಅವನು ಸೀಟ್ ಮೇಲೆ ನಿಂತುಕೊಂಡು, ಕೈ ಅಗಲಿಸಿ ಸೈಕಲ್ ಬಿಡುವುದು, ಪೆಡಲ್ ಮೇಲೆ ಎರಡೂ ಕೈ ಇಟ್ಟು ತಲೆ ಕೆಳಗೆ, ಕಾಲು ಮೇಲೆ ಮಾಡಿ ಸೈಕಲ್ ಓಡಿಸುವುದು, ಮೊದಮೊದಲು ಕುತೂಹಲ ಹುಟ್ಟಿಸಿದರೂ ಅಚ್ಚರಿಗೆ ಕಾರಣವಾಗಿದ್ದು ಅಹೋರಾತ್ರಿ ಸೈಕಲ್ ಮೇಲಿರುತ್ತಾನೆನ್ನುವುದು.

ಡಾಂಬರ್ ಹಾಕಿದ್ದ ಆ ರಸ್ತೆಯಲ್ಲಿ ಬಸ್ಸುಗಳು ಓಡಾಡುತ್ತಿದ್ದುದು ಕಮ್ಮಿ. ಶಂಕರ್ ವಿಠಲ್‌ನ ಮೂರು ಬಸ್ಸುಗಳು ಮಾರ್ನಮಿಕಟ್ಟೆ ಸರ್ಕಲ್‌ನಲ್ಲಿ ತಿರುಗಿಕೊಂಡರೆ, ಆರು ನಂಬರ್‌ನ ಕೃಷ್ಣಾನಂದ, ಇಪ್ಪತ್ತೇಳು ನಂಬರಿನ ಎಸ್‌ಸಿಎಸ್, ಜಪ್ಪು ಶಾಲೆಯಿಂದ ಬಲಕ್ಕೆ ಹೋಗುತ್ತಿತ್ತು. ಅದಕ್ಕಿಂತ ಮುಂದೆ ಗುಜ್ಜರ ಕೆರೆವರೆಗೆ ಬಸ್ಸುಗಳಿಲ್ಲ. ಕೆಲವೊಮ್ಮೆ ಬಾಬುರಾಯರದ್ದೋ, ಕೃಷ್ಣಪ್ಪಣ್ಣನದ್ದೋ, ಹೋಟೆಲ್ ವೆಂಕಪ್ಪಣ್ಣನದ್ದೋ ಕಾರು ಬರುವುದಿತ್ತು. ಸೈಕಲ್ ಬ್ಯಾಲನ್ಸ್ ನಡೆಯುತ್ತಿರುವುದು ಗೊತ್ತಾದ ಮೇಲೆ ಅವರೆಲ್ಲಾ ತಮ್ಮ ವಾಹನಗಳ ವೇಗ ತಗ್ಗಿಸಿ, ಮುಂದುಗಡೆ ನಾರಾಯಣನ ಸೈಕಲ್ ಇಲ್ಲ ಎಂದು ಖಚಿತಪಡಿಸಿಕೊಂಡು ಹೋಗುತ್ತಿದ್ದರು.

ವಾರದಿಂದ ನಿರಂತರವಾಗಿ ಸೈಕಲ್ ತುಳಿಯುತ್ತಿದ್ದ ನಾರಾಯಣ, ರಾತ್ರಿ ಜನರಿಲ್ಲದಿರುವಾಗ ಬ್ಯಾಲನ್ಸ್ ಮಾಡುತ್ತಿರಲಿಲ್ಲ. ಸೈಕಲ್ ನಿಧಾನವಾಗಿ ಚಲಿಸುತ್ತಿತ್ತು. ಕಾಲನ್ನು ನೆಲಕ್ಕೆ ಊರದೇ ರಾತ್ರಿ– ಹಗಲು ಸೈಕಲ್ ಮೇಲೆ ಇರುತ್ತಿದ್ದ ಆತ ನಿದ್ದೆ ಮಾಡುವುದು ಹೇಗೆ ಎನ್ನುವುದು ಆಶ್ಚರ್ಯಕ್ಕೆ ಕಾರಣವಾಗಿತ್ತು. ಸೈಕಲನ್ನು ಸ್ಥಿರವಾಗಿ ನಿಲ್ಲಿಸಿ ನಿದ್ದೆ ಮಾಡುತ್ತಾನೆ ಅನ್ನುತ್ತಿದ್ದವರುಂಟು; ಕಂಡವರಿಲ್ಲ.

ಅದಕ್ಕಿಂತ ಹೆಚ್ಚಾಗಿ ಜನ ತಲೆ ಕೆಡಿಸಿಕೊಂಡಿದ್ದು ಅವನು ಹೇಗೆ ಕಕ್ಕಸು ಮಾಡುತ್ತಾನೆ ಎಂಬುದರ ಬಗೆಗೆ. ಹೊಟ್ಟೆಗೇನೂ ತಿನ್ನುವುದಿಲ್ಲ ಎನ್ನುವ ಅಭಿಪ್ರಾಯ ಕೆಲವರದಾಗಿದ್ದರೆ, ವಾಸ್ತವವಾದಿಗಳು ಹೊಟ್ಟೆಗೆ ತಿನ್ನದೆ ಸೈಕಲ್ ತುಳಿಯಲು ಸಾಧ್ಯವೇ, ಏನೋ ಕೊಂಚ ಸೇವಿಸುತ್ತಿರಬಹುದೆನ್ನುತ್ತಿದ್ದರು. ಇನ್ನು ಕೆಲ ಪಂಡಿತರು ಪರರಾಜ್ಯದಿಂದ ಮೂಲಿಕೆ ತರಿಸಿ ಅದರ ಕಷಾಯ ಕುಡಿಯುತ್ತಾನೆ. ಅದನ್ನು ಕುಡಿದು ಉಚ್ಚೆ ಮಾಡಿದರೆ ಸಾಕು, ಪಾಯಿಖಾನೆ ಮಾಡಬೇಕಿಲ್ಲ ಅನ್ನುತ್ತಿದ್ದರು. ಇನ್ನು ಕೆಲವರು ಅತಿರೇಕಕ್ಕೆ ಹೋಗಿ ಗೋಣಿಚೀಲ, ಹಳೆ ಪೇಪರ್ ಉಪಯೋಗಿಸುತ್ತಾನೆ ಎಂದು ಕುಹಕವಾಡುತ್ತಿದ್ದರು. ಯಾರಿಗೂ ಇಪ್ಪತ್ತನಾಲ್ಕು ಗಂಟೆ ಸೈಕಲಿನ ಹಿಂದೆ ಬಿದ್ದು ಅವನು ಏನು ಮಾಡುತ್ತಾನೆ ಎಂದು ನೋಡುವಷ್ಟು ಪುರುಸೊತ್ತಿರಲಿಲ್ಲ.

ನಾರಾಯಣ ಒಬ್ಬಂಟಿಯಲ್ಲ. ಸೈಕಲ್ ಸವಾರಿ ಪ್ರಾರಂಭದ ಸಮಯದಲ್ಲಿ ಜತೆಯಲ್ಲಿ ಇದ್ದವರು ಇಬ್ಬರು. ಸೈಕಲ್ ಹೋಗುತ್ತಿರುವ ದಾರಿಯಲ್ಲಿ ತಟ್ಟೆ ತೆಗೆದುಕೊಂಡು ಹೋಗಿ ದಾರಿ ಬದಿಯಲ್ಲಿ ನಿಂತು ನೋಡುವವರಿಂದ, ಇಕ್ಕಡೆಯ ಅಂಗಡಿಗಳಿಂದ ಕಾಣಿಕೆ ಪಡೆಯುವುದು ಅವರ ಕೆಲಸ. ಕೆಲ ದಿನಗಳಾದ ಮೇಲೆ ಮತ್ತಿಬ್ಬರು ಸೇರಿಕೊಂಡರು. ಅದರಲ್ಲಿ ಒಬ್ಬರು ಮಹಿಳೆ. ಆಕೆಗೆ ಅಡುಗೆಯ ಕೆಲಸ. ಮೈದಾನದ ಒಂದು ಮೂಲೆಯಲ್ಲಿ ಸಣ್ಣ ಟೆಂಟ್ ಹಾಕಿ ಅಲ್ಲಿ ಮೂರು ಕಲ್ಲುಗಳನ್ನಿಟ್ಟು ಬೇಯಿಸಲಾಗುತ್ತಿತ್ತು. ನಾರಾಯಣನನ್ನು ಬಿಟ್ಟು ಉಳಿದವರು ವಿರಮಿಸುತ್ತಿದ್ದುದು ಅಲ್ಲಿಯೇ.

ಒಂದೆರಡು ವಾರ ಸೈಕಲ್ ಬ್ಯಾಲನ್ಸ್ ಮಾಡಿ ಹೋಗುತ್ತಾನೆ ಎಂದುಕೊಂಡಿದ್ದ ಜನ ತಿಂಗಳ ಮೇಲಾದರೂ ನಾರಾಯಣ ಸೈಕಲ್‌ನಿಂದ ಇಳಿಯದಿದ್ದಾಗ ಪೂರ್ವಾಪರ ವಿಚಾರಿಸತೊಡಗಿದರು.

ಇಪ್ಪತ್ತೈದರಿಂದ ಮೂವತ್ತರೊಳಗಿನ ನಾರಾಯಣ ಸಣ್ಣಗೆ ಇದ್ದು, ಕೋಲು ಮುಖ, ಉದ್ದನೆಯ ಕತ್ತಿನಿಂದಾಗಿ ಅಡಿಕೆ ಮರದಂತೆ ಎತ್ತರವಾಗಿ ಕಾಣುತ್ತಿದ್ದ. ಬಿಸಿಲಲ್ಲಿ ಸೈಕಲ್ ಹೊಡೆಯುತ್ತಿದ್ದರಿಂದಲೋ ಏನೋ, ಮೈಬಣ್ಣ ಕಪ್ಪಾಗಿತ್ತು. ಹೆಚ್ಚು ಮಾತಾಡದಿದ್ದುದರಿಂದ ಯಾವ ಊರಿನವ ಎನ್ನುವುದು ಗೊತ್ತಾಗುತ್ತಿರಲಿಲ್ಲ.

ಬಿಜಾಪುರದಲ್ಲಿ ಹೋಟೆಲಿಟ್ಟಿದ್ದ ಗೋಪಾಲ ಪೂಜಾರಿ ಊರಿಗೆ ಬಂದವರು, ‘ಅವನನ್ನು ನಾನು ಬಿಜಾಪುರ ಬಸ್‌ಸ್ಟಾಂಡಿನಲ್ಲಿ ನೋಡಿದ್ದೇನೆ’ ಅಂದರು. ಬೆಳಗಾಮಿನಲ್ಲಿ ಬ್ಯಾಂಕ್ ಕೆಲಸದಲ್ಲಿರುವ ಕಾಮತರು ‘ಓ ಮರಾಟಿ ಒಲೈತ ಮಾರಾಯ’ ಅಂದುಬಿಟ್ಟರು. ಬಣ್ಣ ನೋಡಿ ತಮಿಳಿನವನೆಂದೂ, ಚುರುಕಾಗಿರುವುದನ್ನು ನೋಡಿ ಮಲೆಯಾಳಿ ಎಂದವರೂ ಉಂಟು.

ಅದೇನೋ ಜಾಗತಿಕ ದಾಖಲೆ ಮಾಡುತ್ತಾನಂತೆ, ಈ ಹಿಂದೆ ಅವನೇ ಇಪ್ಪತ್ತೈದು ದಿನ ಮಾಡಿದ್ದಾನಂತೆ, ಅದನ್ನು ಮುರಿಯುವವರೆಗೆ ಇಳಿಯುವುದಿಲ್ಲ ಎನ್ನುವ ಸುದ್ದಿ ಇತ್ತು. ಜನರಿಗೆ ಬೇಜಾರು ಬಂದಿತ್ತು. ಸೈಕಲ್‌ನಲ್ಲಿ ತಿರುಗಾಮುರುಗ ಕುಳಿತುಕೊಳ್ಳುವುದು, ಒಂದೇ ಚಕ್ರದಲ್ಲಿ ಹೋಗುವುದು ಇದೆಲ್ಲಾ ಸಾಮಾನ್ಯ ಅನ್ನಿಸಿಬಿಟ್ಟಿತ್ತು. ಕೆಲವು ಹೈಸ್ಕೂಲ್ ಹುಡುಗರೂ ಅದನ್ನು ಮಾಡತೊಡಗಿದರು.

ನಾರಾಯಣ ಹೊಟ್ಟೆಗೆ ತಿನ್ನುತ್ತಾನೋ ಇಲ್ಲವೋ. ಅವನ ಜತೆಗಿದ್ದ ನಾಲ್ಕು ಜನರ ಹೊಟ್ಟೆ ತುಂಬಿಸುವ ಕೆಲಸವನ್ನಂತೂ ಅವನು ಮಾಡಬೇಕಿತ್ತು. ರಸ್ತೆ ಮೇಲೆ ನೋಟು ಇಟ್ಟು ಅದನ್ನು ಬಾಯಲ್ಲಿ ಎತ್ತಿಕೊಳ್ಳುವುದು, ಉರಿಯುವ ರಿಂಗ್‌ನೊಳಗಿಂದ ಹಾರುವುದು, ತಲೆ ಮೇಲೆ ಕಪ್, ಸಾಸರ್‌ಗಳನ್ನು ಇಟ್ಟುಕೊಂಡು ಓಡಿಸುವುದು ಮುಂತಾದ ಹೊಸ ಹೊಸ ವರಸೆಗಳನ್ನು ನಾರಾಯಣ ಪ್ರದರ್ಶಿಸತೊಡಗಿದ. ಅದು ಕೂಡಾ ಹೆಚ್ಚು ಜನರನ್ನು ಆಕರ್ಷಿಸಲಿಲ್ಲ.

ಶಿವರಾತ್ರಿಯ ಸಮಯದಲ್ಲಿ ಸೈಕಲ್ ಬ್ಯಾಲನ್ಸ್ ಜತೆಗೆ ನಾಯಕ್ ಮೈದಾನದಲ್ಲಿ ಭಜನಾ ಸಪ್ತಾಹ ಏರ್ಪಡಿಸುವ ಯೋಜನೆಯನ್ನು ಹಾಕಿಕೊಂಡ ನಾರಾಯಣ. ತನ್ನ ಜತೆಯಲ್ಲಿರುವವರನ್ನು ಕಳುಹಿಸಿ ಮಾರ್ನಮಿಕಟ್ಟೆಯ ಭಜನಾ ಮಂಡಳಿಗಳನ್ನು ಸಂಪರ್ಕಿಸಿದ. ಕೆಲವರು ಪಕ್ಕದ ಊರಿಗೂ ಹೋಗಿ ಬಂದರು. ನಾರಾಯಣನ ಯೋಚನೆಗೆ ಸರ್ವಾನುಮತದ ಒಪ್ಪಿಗೆ ಸಿಕ್ಕಿತು. ಒಂದು ವಾರ ರಾತ್ರಿ– ಹಗಲು ಭಜನೆ ಮಾಡುವುದೆಂದು ನಿರ್ಧರಿಸಿದರು.

ನಾಯಕ್ ಮೈದಾನದಲ್ಲಿ ವಿಶಾಲವಾದ ಟೆಂಟ್ ಹಾಕಿ, ಭಾಗವಹಿಸುವವರು ಕುಳಿತು ಭಜನೆ ಮಾಡಲು ಅವಕಾಶ ಕಲ್ಪಿಸಲಾಯಿತು. ಟೆಂಟ್ ಹಾಕಿದ ಜಾಗದ ಸುತ್ತ ಟ್ರ್ಯಾಕ್ ನಿರ್ಮಿಸಿ ನಾರಾಯಣನ ಸೈಕಲ್ ಸವಾರಿಗೆ ಪ್ರತ್ಯೇಕವಾದ ವ್ಯವಸ್ಥೆ ಮಾಡಿದರು.

ಭಜನಾ ಸಪ್ತಾಹ ಪ್ರಾರಂಭವಾದ ಮೊದಲನೆ ದಿನವೇ ನೂರಾರು ಜನರು ಭಾಗವಹಿಸಿದರು. ಅಂತಹದೊಂದು ಕಾರ್ಯಕ್ರಮ ಹಿಂದೆಂದೂ ಆಗಿರಲಿಲ್ಲ. ವಿವಿಧೆಡೆಯ ಭಜನಾ ಮಂಡಳಿಗಳು ಉತ್ಸಾಹದಿಂದ ಪಾಲ್ಗೊಂಡವು. ತಾಳ, ಜಾಗಟೆ, ಗಂಟೆ, ತಮಟೆಗಳ ಸದ್ದಿಗೆ ಜನ ಮೈಮರೆತು ಕುಣಿಯುತ್ತಿದ್ದರು. ಅಕ್ಕಪಕ್ಕದ ಊರುಗಳಿಂದಲೂ ಜನರು ಬಂದು ರಾತ್ರಿಯೆಲ್ಲಾ ಜಾಗರಣೆ ಮಾಡಿ ಭಜನೆ ಮಾಡುತ್ತಿದ್ದರು. ಪುಣ್ಯಾತ್ಮರೊಬ್ಬರು ಬಂದವರ ಊಟದ ವೆಚ್ಚ ವಹಿಸಿಕೊಂಡರು. ಉಪಾಹಾರಕ್ಕೆ ಸ್ವಯಂ ಸ್ಫೂರ್ತಿಯಿಂದ ನೆರವು ಒದಗಿ ಬಂತು. ಭಜನಾ ತಂಡಗಳು ದೇವರ ಪಟಕ್ಕೆ ಹಾರ ಹಾಕುವಾಗ ನಾರಾಯಣನಿಗೂ ಹಾಕುತ್ತಿದ್ದುದುಂಟು.

ಭಜನಾ ಸಪ್ತಾಹದ ಕೊನೆಯ ದಿನ ಪ್ರತಿಷ್ಠಿತ ದೇಗುಲದ ಪ್ರಧಾನ ಅರ್ಚಕರೊಬ್ಬರನ್ನು ಅತಿಥಿಯಾಗಿ ಆಹ್ವಾನಿಸಿ ಅವರ ಅಮೃತ ಹಸ್ತದಿಂದ ಭಾಗವಹಿಸಿದ ತಂಡಗಳಿಗೆ ಸನ್ಮಾನ ಮಾಡಲಾಯಿತು. ಆಶೀರ್ವಚನದಲ್ಲಿ ಅವರು ಧರ್ಮಗ್ಲಾನಿಯಾಗುತ್ತಿರುವ ಸಂದರ್ಭದಲ್ಲಿ ನಾರಾಯಣನಂತವರು ಹುಟ್ಟುತ್ತಾರೆ. ಅವರಿಂದ ಸಂಸ್ಕೃತಿ ಉಳಿಯುತ್ತದೆ ಎಂದು ಗುಣಗಾನ ಮಾಡಿದರು.

ಸೈಕಲ್‌ನಲ್ಲಿಯೇ ಇದ್ದ ನಾರಾಯಣ ಸ್ಥಿತಪ್ರಜ್ಞನಂತಿದ್ದ. ಪ್ರಧಾನ ಅರ್ಚಕರು ಆತ ಕುಳಿತಿದ್ದ ಸೈಕಲಿನ ಹತ್ತಿರವೇ ಹೋಗಿ ಶಾಲು ಹೊದಿಸಿ ಗೌರವಾರ್ಪಣೆ ಮಾಡಿದರು.

ನಾರಾಯಣ ತನ್ನ ವೇಷಭೂಷಣಗಳಲ್ಲಿ ಬದಲಾವಣೆ ಮಾಡಿಕೊಂಡ. ಶುಭ್ರ ಬಿಳಿಯ ಬಟ್ಟೆ. ಪ್ಯಾಂಟಿನ ಬದಲು ಪೈಜಾಮ. ಉದ್ದ ಕೈನ ಜುಬ್ಬಾಹಾಕಿ ಹೆಗಲ ಮೇಲೆ ಶಾಲು ಹಾಕತೊಡಗಿದ. ಹಣೆಗೆ ಎದ್ದು ಕಾಣುವಂತೆ ಗಂಧ ಹಚ್ಚಿದ.

ಜನರು ನಾರಾಯಣನನ್ನು ನೋಡುವ ರೀತಿ ಬದಲಾಯಿತು. ಮೂರು ತಿಂಗಳಿಂದ ಹಗಳಿರುಳು ಸೈಕಲ್ ಮೇಲಿರುವುದು ಮನುಷ್ಯ ಮಾತ್ರರಿಗೆ ಅಸಾಧ್ಯ. ಅವನಲ್ಲಿ ಅತೀಂದ್ರಿಯ ಶಕ್ತಿಯಿದೆ ಎನ್ನುವ ಅಭಿಪ್ರಾಯ ಮೂಡತೊಡಗಿತು. ಸೈಕಲ್‌ನಲ್ಲಿ ದೇವದೂತ ಬಂದಂತೆ ಭಕ್ತಿ, ಗೌರವಗಳಿಂದ ಕೈ ಮುಗಿಯುತ್ತಿದ್ದರು. ಮಾರ್ನಮಿಕಟ್ಟೆಯ ಸುತ್ತಲಿನ ಪ್ರದೇಶಗಳಲ್ಲಿ ನಾರಾಯಣನಿಲ್ಲದ ಕಾರ್ಯಕ್ರಮವಿರುತ್ತಿರಲಿಲ್ಲ. ಅವನನ್ನು ಕೇಳಿಯೇ ಸಭೆ, ಸಮಾರಂಭಗಳನ್ನು ಗೊತ್ತು ಮಾಡುತ್ತಿದ್ದರು.

ಮಾಕಳಿಪಡ್ಪಿನ ಕಬಡ್ಡಿ ಪಂದ್ಯ ಆರಂಭವಾಗಿದ್ದು ನಾರಾಯಣ ಟಚಿಂಗ್ ಲೈನ್‌ನ ಮೇಲೆ ಸೈಕಲಲ್ಲಿ ನಿಂತು ಸೀಟಿ ಊದಿದ ನಂತರ. ಫುಟ್‌ಬಾಲ್ ಟೂರ್ನಮೆಂಟ್ ಶುರುವಾಗುವಾಗ ನಾರಾಯಣ ಸೈಕಲ್ ಮೇಲಿಂದ ಹೆಡ್ ಮಾಡಿದ್ದು ನೇತ್ರಾನಂದಕರವಾಗಿತ್ತು. ಮಕ್ಕಳನ್ನು ತೊಟ್ಟಿಲಿಗೆ ಹಾಕುವಾಗ ನಾರಾಯಣ ಸೈಕಲಲ್ಲಿ ಬಂದು ತೊಟ್ಟಿಲು ತೂಗುತ್ತಿದ್ದ. ಗೃಹಪ್ರವೇಶಕ್ಕೆ ಗೋವಿನ ಜತೆಗೆ ಸೈಕಲೂ ಇರುತ್ತಿತ್ತು.

ಇವೆಲ್ಲವನ್ನು ಸಂಶಯದ ದೃಷ್ಟಿಯಿಂದ ನೋಡುವವರು ಕೂಡಾ ಇದ್ದರು. ಎಲ್ಲಿಂದಲೋ ಬಂದ ಒಬ್ಬ ಯಕಶ್ಚಿತ್ ಸೈಕಲ್ ಸವಾರನಿಗೆ ಇಲ್ಲಸಲ್ಲದ ಮಹತ್ವವನ್ನು ನೀಡುವುದಕ್ಕೆ ಕೆಲವರ ವಿರೋಧವಿತ್ತು. ಅವರಲ್ಲಿ ತ್ಯಾಂಪಣ್ಣನ ಗೆಳೆಯರ ಗುಂಪು ಕೂಡಾ ಇತ್ತು. ಆದರೆ, ಆ ಯುವಕರ ಮಾತಿಗೆ ಜನ ಲಕ್ಷ್ಯ ಕೊಡುತ್ತಿರಲಿಲ್ಲ. ಹತ್ತಾರು ಹುಡುಗರನ್ನು ಸೇರಿಸಿ ಭಾಷಣಗಳನ್ನು ಮಾಡಿ, ಬೀದಿ ನಾಟಕಗಳನ್ನು ಆಡಿಸುವವರ ಮಾತು ಕೇಳಿದರೆ ಆಗುತ್ತದಾ?

ಭಜನಾ ಸಪ್ತಾಹ ಜನರನ್ನು ಸೆಳೆದಿದ್ದು ನಾರಾಯಣನನ್ನು ಉತ್ತೇಜಿಸಿತ್ತು. ವಾರಕ್ಕೊಂದು ದಿನ, ಶನಿವಾರ ಸಂಜೆ ಏಳು ಗಂಟೆಯಿಂದ ರಾತ್ರಿ ಹತ್ತರ ತನಕ, ನಾಯಕ್ ಮೈದಾನದಲ್ಲಿ ಸಾಮೂಹಿಕ ಭಜನೆ ಮಾಡುವ ಅವನ ಪ್ರಸ್ತಾಪಕ್ಕೆ ಸಾರ್ವಜನಿಕರು ಸಮ್ಮತಿಸಿದರು.

ನಾಯಕ್ ಮೈದಾನ ಜಾತ್ರೆಯ ತಾಣವಾಯಿತು. ಪುಗ್ಗೆ, ಗಿರಿಗಿಟಿ ಮಾರುವವರು, ಕಾರಕಡ್ಡಿ, ಪೋಡಿ, ಈರುಳ್ಳಿ, ಬಜ್ಜಿ ಮಾಡುವವರು ಸೇರಿಕೊಂಡರು. ಭಜನೆಯಲ್ಲಿ ಪಾಲ್ಗೊಳ್ಳುವವರಿಗೆ ಅನುಕೂಲವಾಗುವಂತೆ ಜಮಖಾನ, ಚಾಪೆಗಳ ಕಾಯಂ ವ್ಯವಸ್ಥೆ ಮಾಡಲಾಯಿತು. ಪ್ರಮುಖ ಭಜನಾ ಮಂಡಳಿಗಳವರು ನಾಯಕ್ ಮೈದಾನದ ಭಜನೆಯಲ್ಲಿ ಭಾಗವಹಿಸಲು ತುದಿಗಾಲಲ್ಲಿ ನಿಂತಿರುತ್ತಿದ್ದರು.

ನಾರಾಯಣ ಆಗಾಗ್ಗೆ ವೇದಿಕೆಯ ಮುಂದೆ ಕಾಣಿಸಿಕೊಂಡು, ಸೈಕಲ್ ಅಲುಗಾಡದಂತೆ ನಿಲ್ಲಿಸಿ, ಎರಡೂ ಕೈಗಳಿಂದ ತಾಳ ಕುಟ್ಟುತ್ತಿದ್ದ. ಆಗ ಅವನ ಮುಖ ವಿಶೇಷ ಪ್ರಭೆಯಿಂದ ಬೆಳಗುತ್ತಿತ್ತೆನ್ನುವುದು ಕಂಡವರ ಅಂಬೋಣ.

ನಾರಾಯಣನ ಆಭಿಮಾನಿಗಳು ಅವನ ಹೆಸರಿನಲ್ಲಿ ಸಂಘ ಸ್ಥಾಪನೆ ಮಾಡಿದರು. ಅವನ ಸಹವರ್ತಿಯೊಬ್ಬ ಅಧ್ಯಕ್ಷನಾದ. ಇಂತಹ ಕೆಲಸಕ್ಕೆ ನಾರಾಯಣನ ಒಪ್ಪಿಗೆ ಇರಲಿಲ್ಲವೆಂದು, ಜನರ ಒತ್ತಾಯಕ್ಕೆ ಮಣಿದು ಸಂಘ ಸ್ಥಾಪನೆ ಮಾಡಲು ಒಪ್ಪಿಕೊಂಡನೆಂದು ಹೇಳಲಾಗುತ್ತಿತ್ತು. ಸಂಘದ ಯುವವೃಂದದವರು ಕಾರ್ಯಕ್ರಮದ ಉಸ್ತುವಾರಿ ನೋಡಿಕೊಳ್ಳುವುದು, ಗಣ್ಯರನ್ನು ಆಮಂತ್ರಿಸುವುದು, ನಾರಾಯಣನನ್ನು ಭೇಟಿ ಮಾಡಲು ಬರುವ ಅತಿಥಿಗಳಿಗೆ, ಪತ್ರಿಕೆಯವರಿಗೆ ಸೌಕರ್ಯ ಒದಗಿಸುವುದು ಮುಂತಾದ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು.

ಜನರಿಗೆ ನಾರಾಯಣ ಎಷ್ಟು ದಿನಗಳಿಂದ ಸೈಕಲ್ ಮೇಲಿದ್ದಾನೆ ಎನ್ನುವುದು ಮರೆತುಹೋಗಿತ್ತು. ಶನಿವಾರದ ಭಜನಾ ಕಾರ್ಯಕ್ರಮದಲ್ಲಿ ತೊಂಬತ್ತೊಂದು ದಿನಗಳಿಂದ ಸೈಕಲ್ ಮೇಲೆ ಇದ್ದೇನೆ ಎಂದು ಅವನು ಉದ್ಘೋಷಿಸಿದಾಗ, ಕೈಯಲ್ಲಿದ್ದ ತಾಳ ಕೆಳಗಿಟ್ಟು ಜನ ಚಪ್ಪಾಳೆ ತಟ್ಟಿದರು. ಚಪ್ಪಾಳೆ, ಶಿಳ್ಳೆಯ ಸದ್ದು ನಿಂತ ಮೇಲೆ ಅವನು ಹೇಳಿದ್ದು ಜನರನ್ನು ಇನ್ನಷ್ಟು ಆಶ್ಚರ್ಯಕ್ಕೀಡುಮಾಡಿತು.

ದೇವತೆಯೊಬ್ಬಳು ಕನಸಲ್ಲಿ ಬಂದು, ‘ಹಲವು ವರ್ಷಗಳ ಹಿಂದೆ ನಡೆದ ದಾಳಿಯಲ್ಲಿ ನೆಲದೊಳಗೆ ಸೇರಿಹೋದ ನನ್ನನ್ನು ಉದ್ಧರಿಸುವರಿಲ್ಲ. ಸಲ್ಲಬೇಕಾಗಿದ್ದ ಪೂಜೆ ಪುನಸ್ಕಾರಗಳು ನಿಂತು ಹೋಗಿವೆ. ತನಗೆ ಬೆಳಕು ತೋರಿಸಿದರೆ, ತಾನು ಎಲ್ಲರ ಬಾಳನ್ನು ಬೆಳಗುತ್ತೇನೆ ಎಂದು ದುಃಖದಿಂದ ನುಡಿದಳು’ ಎಂದು ನೆರೆದವರ ಮನ ಮುಟ್ಟುವಂತೆ ನಾರಾಯಣ ಹೇಳಿದ.

‘ನೆಲದಲ್ಲಿ ಸೇರಿಹೋದ ನಮ್ಮ ದೇವತೆಯನ್ನು ಉದ್ಧರಿಸುವುದು ನಮ್ಮ ಕೆಲಸವಲ್ಲವೇ’ ಎಂದು ದೀನತೆಯಿಂದ ಕೇಳಿದ. ಅವನು ಕೇಳಿದ ರೀತಿಗೆ ಜನರು ಭಾವುಕರಾದರು. ‘ಇಲ್ಲ, ಇಲ್ಲ, ದೇವತೆಯನ್ನು ಮೇಲೆತ್ತಬೇಕು’, ‘ನೆಲೆ ಕಲ್ಪಿಸಬೇಕು’ಎಂದು ಗಟ್ಟಿಯಾಗಿ ಕೂಗಿದರು.

‘ಅವಳಿರುವ ಜಾಗದ ಸೂಚನೆಯನ್ನೂ ಕೊಟ್ಟಿದ್ದಾಳೆ’ ಎಂದು ನಾರಾಯಣ ತಿಳಿಸಿದಾಗ ಜನರ ಸಂಭ್ರಮ ಮೇರೆ ಮೀರಿತು. ಕನಸು ಕಾಣಲು ಮಲಗಿದ್ದೆಲ್ಲಿ ಎಂದು ಯಾರೂ ಕೇಳಲಿಲ್ಲ.

ಮಾರನೆಯ ದಿನ ದೇವತೆ ಭೂಗತಳಾಗಿರುವ ಜಾಗ ಹುಡುಕಲು ನಾರಾಯಣನ ಸೈಕಲ್ ಹಿಂದೆ ಜನರು ಹಿಂಡುಹಿಂಡಾಗಿ ಹೋದರು. ತ್ಯಾಂಪಣ್ಣನ ಗೆಳೆಯರೂ ಅವರ ನಡುವೆ ಇದ್ದರು. ನಾರಾಯಣ ನಡಿಗೆಯ ವೇಗದಲ್ಲಿ ಸೈಕಲ್ ಚಲಾಯಿಸುತ್ತಿದ್ದ. ಜೈ, ಜೈ, ಉಘೇ, ಉಘೇ ಘೋಷಣೆಗಳೊಂದಿಗೆ ಹೊರಟ ಮೆರವಣಿಗೆ ಮಧ್ಯಾಹ್ನದ ಸುಡುಬಿಸಿಲಿಗೆ ಗೋಳಿಪಡ್ಪನ್ನು ಮುಟ್ಟಿತು.

ನಾರಾಯಣ ತನ್ನ ಹಿಂದೆ ಬಂದವರನ್ನು ನಿಲ್ಲಲು ಹೇಳಿ ಎಲ್ಲಾ ಗೋಳಿ ಮರಗಳಿಗೆ ಸೈಕಲಲ್ಲಿ ಸುತ್ತು ಹೊಡೆದ. ಹೀಗೆ ಏಳೆಂಟು ಸಲ ಮಾಡಿದ ಮೇಲೆ ಇದ್ದ ಮರಗಳಲ್ಲೇ ದೊಡ್ಡದಾದ ಸುಮಾರು ನಾಲ್ಕುನೂರು- ಐದುನೂರು ವರ್ಷ ಹಳೆಯದಾದ ವೃಕ್ಷವೊಂದರ ಕೆಳಗೆ ನಿಶ್ಚಲನಾದ. ಅವನು ಕಣ್ಣುಗಳು ಬಹಳ ಹೊತ್ತು ನೆಲವನ್ನು ದಿಟ್ಟಿಸುತ್ತಿದ್ದವು. ಕೊನೆಗೆ ಎರಡೂ ಕೈಗಳನ್ನು ಮೇಲೆತ್ತಿ ಜನರಿಗೆ ಹತ್ತಿರ ಬರುವಂತೆ ಸನ್ನೆ ಮಾಡಿದ.

ಜನರೆಲ್ಲಾ ಪ್ರವಾಹದೋಪಾದಿಯಲ್ಲಿ ನುಗ್ಗಿದರು. ನಾರಾಯಣ ಆ ಭೂರಿ ವೃಕ್ಷದ ಬುಡದಲ್ಲಿ ಒಂದು ಗುರುತು ಮಾಡಿ ‘ಇಲ್ಲಿ ದೇವತೆ ಧರಾಶಾಹಿಯಾಗಿದ್ದಾಳೆ’ ಎಂದು ಹೇಳಿದ.

ಈ ಸುದ್ದಿ ಕರಾವಳಿಯ ಮಳೆಯಂತೆ ಎಲ್ಲೆಡೆ ಪಸರಿಸಿತು. ಗುರುತು ಮಾಡಿದ ಜಾಗದ ಸುತ್ತ ಬೇಲಿ ಹಾಕಲಾಯಿತು. ಅಲ್ಲಿ ಅಗೆದು ನಾರಾಯಣ ಹೇಳಿದಂತೆ ದೇವತೆಯ ಮೂರ್ತಿ ಇದೆಯೋ, ಇಲ್ಲವೋ ಎನ್ನುವುದನ್ನು ಪತ್ತೆ ಮಾಡಬೇಕಿತ್ತು.

ತ್ಯಾಂಪಣ್ಣನ ಹಿಂಬಾಲಕರು ‘ಇದೊಂದು ಮೋಸ, ಎಲ್ಲರೂ ಮಲಗಿದ ಸಮಯದಲ್ಲಿ ಅಲ್ಲಿ ಮೂರ್ತಿಯನ್ನು ಹುಗಿದಿಟ್ಟು ಪುಕಾರು ಹಬ್ಬಿಸುತ್ತಿದ್ದಾರೆ’ ಎಂದೆಲ್ಲಾ ಹೇಳತೊಡಗಿದರು. ‘ನಾರಾಯಣ ಸೈಕಲ್ ಬ್ಯಾಲನ್ಸ್ ಶುರು ಮಾಡುವಾಗಲೇ ಗುಂಡಿ ತೋಡಿ ಮೂರ್ತಿ ಇಟ್ಟಿದ್ದ’ ಅನ್ನುವವರಿದ್ದರು. ನಾರಾಯಣನ ಜನಪ್ರಿಯತೆಯನ್ನು ಇಷ್ಟಪಡದೆ ಅವನನ್ನು ಓಡಿಸಲು ನೋಡುವವರಿಗೂ ಒಂದು ಅವಕಾಶ ಸಿಕ್ಕಿದಂತಿತ್ತು.

ನಾರಾಯಣನ ಅಭಿಮಾನಿಗಳು ಕಿಂಚಿತ್ತೂ ಎದೆಗುಂದಲಿಲ್ಲ. ಕಣ್ವತೀರ್ಥಕ್ಕೆ ಹೋಗಿ, ಅಲ್ಲಿದ್ದ ಪ್ರಸಿದ್ಧ ಜ್ಯೋತಿಷಿಗಳನ್ನು ಕಂಡು ಭೂಮಿ ತೋಡುವ ದಿನ ನಿಶ್ಚಯಿಸಿದರು. ಶಾಸ್ತ್ರಿಗಳು ಸುಮುಹೂರ್ತದಲ್ಲಿ ಪೂಜೆ ನೆರವೇರಿಸಿದ ಮೇಲೆ ಭೂಮಿಗೆ ಪಿಕಾಸಿಯಿಂದ ಮೊದಲ ಏಟು ಹಾಕಲಾಯಿತು.

ನಿಧಾನಕ್ಕೆ ಹಾರೆಯಿಂದ ಅಗೆದು, ಕೈಗಳಿಂದ ಮಣ್ಣು ತೋಡಬೇಕಿತ್ತು. ‘ಸಬ್ಬಲ್ ಉಪಯೋಗಿಸಿದರೆ ಮೂರ್ತಿ ಭಗ್ನವಾಗಬಹುದು’ ಎಂದು ಹೇಳಿದ್ದ ಶಾಸ್ತ್ರಿಗಳು, ‘ಜೋರಾಗಿ ಏಟು ಬಿದ್ದು ರಕ್ತ ಹೊಮ್ಮಿದ ಉದಾಹರಣೆಗಳಿವೆ’ ಎಂದು ಎಚ್ಚರಿಸಿದ್ದರು. ಅದಲ್ಲದೆ ನೆಲವನ್ನು ತೋಡುವವರಿಗೆ ಮಧು, ಮಾಂಸ ವರ್ಜ್ಯವೆಂದು ಅಪ್ಪಣೆ ನೀಡಿದ್ದರು. ಗೋರಿಗುಡ್ಡೆಯಿಂದ ಬಂದ ಕೂಲಿಗಳಿಗೆ ಮಾಂಸ ಅಂದಿದ್ದೇನೋ ಅರ್ಥವಾಗಿತ್ತು, ಮಧು ಅಂದರೆ ಗಂಗಸರ ಅಂತ ತಿಳಿಯಲಿಲ್ಲ.

ಮೂರು ದಿನದ ನಂತರ ‘ಹಾರೆಗೆ ಏನೋ ತಗಲಿದಂತಾಗುತ್ತದೆ’ ಎಂದು ಹಾರೆಯಿಂದ ಅಗೆಯುತ್ತಿದ್ದ ಸೋಂಪ ಹೇಳಿದ. ನೀರು ಹಾಕಿ ನೆಲ ನೆನೆಸಿ, ಟಾಪಿಯಿಂದ ಮಣ್ಣು ಎತ್ತಿದಾಗ ಗಟ್ಟಿ ಕಲ್ಲು ಕಂಡಿತು. ಮತ್ತಷ್ಟು ಆಳ ತೋಡಿದಂತೆ ಪ್ರತಿಮೆಯಂತಿರುವ ಕಲ್ಲು ಗೋಚರಿಸಿತು. ಜನರು ಉದ್ವೇಗಕ್ಕೊಳಗಾದರು. ಶಿಲೆಯನ್ನು ಮೇಲೆತ್ತುವಾಗ ‘ಕೆಳಗೊಂದು ಹಗ್ಗ ಕಟ್ಟಿ’, ‘ಬಗ್ಗಿಸಬೇಡಿ’, ‘ಮೆಲ್ಲಗೆ ಎತ್ತಿ’, ‘ಮುಖ ಮೇಲಿರಲಿ’, ‘ಜಾರಕ್ಕೆ ಬಿಡಬೇಡಿ’ ಎಂಬೆಲ್ಲಾ ಉದ್ಗಾರಗಳು ಹೊರಟವು. ಮಣ್ಣು ಮೆತ್ತಿಕೊಂಡಿದ್ದ ಆ ಶಿಲಾರೂಪ ಪೂರ್ತಿಯಾಗಿ ಮೇಲಕ್ಕೆ ಬಂದಾಗ ನೆರೆದವರಿಗೆಲ್ಲ ಕೊಪ್ಪರಿಗೆ ಸಿಕ್ಕಷ್ಟು ಖುಷಿಯಾಯಿತು.

ಮಣ್ಣಿನಲ್ಲಿ ಸೇರಿ ಮಲಿನವಾಗಿದ್ದರಿಂದ ಶುದ್ಧಿಯಾಗುವವರೆಗೆ ಪೂಜೆ ಮಾಡುವಂತಿಲ್ಲವೆಂದು ಬಲ್ಲವರು ಅಭಿಪ್ರಾಯಪಟ್ಟರು. ಅದರಂತೆ ಗೋಳಿಮರದ ಬುಡವನ್ನು ಶುಚಿಗೊಳಿಸಿ, ಅಂಟಿಕೊಂಡಿದ್ದ ಮಣ್ಣನ್ನು ತೊಳೆದು ತಾತ್ಕಾಲಿಕವಾಗಿ ನೆಲೆಗೊಳಿಸಲಾಯಿತು.

ನಾರಾಯಣನ ಜನಪ್ರಿಯತೆ ಇನ್ನಷ್ಟು ಹೆಚ್ಚಿತು. ಎಲ್ಲರ ಉದ್ಧಾರಕ್ಕಾಗಿ ಅವತರಿಸಿದ ಮಹಾಪುರುಷ ಎನ್ನುವ ರೀತಿಯಲ್ಲಿ ಮಾರ್ಕೆಟ್, ಬಸ್‌ಸ್ಟ್ಯಾಂಡ್, ರೈಲ್ವೆ ಸ್ಟೇಷನ್ ಹೀಗೆ ಜನ ಸೇರುವೆಡೆಗಳಲ್ಲಿ ಅವನ ಗುಣಗಾನ ನಡೆಯುತ್ತಿತ್ತು.

ಶಿಲಾದೇವತೆಯ ಪ್ರತಿಷ್ಠಾಪನೆಯನ್ನು ಅತ್ಯಂತ ವೈಭವಪೂರ್ಣವಾಗಿ ನಡೆಸಬೇಕು, ನಾಡಿನ ಗಣ್ಯವ್ಯಕ್ತಿಗಳನ್ನು ಆಮಂತ್ರಿಸಬೇಕೆಂಬುದು ಜನರ ಅಪೇಕ್ಷೆಯಾಗಿತ್ತು. ಊರಿನ ಹತ್ತು ಸಮಸ್ತರ ಪರವಾಗಿ ಸಮಿತಿಯೊಂದು ರಚನೆಯಾಗಿ ಪ್ರಭಾವಿ ಧುರೀಣರೊಬ್ಬರನ್ನು ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷರನ್ನಾಗಿ ಆರಿಸಲಾಯಿತು. ನಾರಾಯಣನನ್ನು ಧರ್ಮದರ್ಶಿಯೆಂದು ಹೆಸರಿಸಿದರು.

ತ್ಯಾಂಪಣ್ಣ ಮತ್ತವರ ಗೆಳೆಯರಿಗೆ ತಿಂದ ಅನ್ನ ಅರಗುತ್ತಿರಲಿಲ್ಲ. ಗೋಳಿಪಡ್ಪಿಗೆ ಹೋಗಿ ಶಿಲಾಕೃತಿಯನ್ನು ಸೂಕ್ಷ್ಮವಾಗಿ ನೋಡಿದರು. ಎಡಭಾಗದಲ್ಲಿ ಶಿರಸ್ತ್ರಾಣ ಧರಿಸಿ ಕತ್ತಿಯನ್ನು ಹಿಡಿದ ವ್ಯಕ್ತಿಯ ಚಿತ್ರ ಇದ್ದಂತಿತ್ತು. ಅದರ ಪಕ್ಕದಲ್ಲಿ ಮುಡಿಯಿರುವ ವ್ಯಕ್ತಿಯ ಕೈಗಳಲ್ಲಿ ಗುರಾಣಿ, ತಲವಾರುಗಳಿದ್ದವು. ಬಲಪಾರ್ಶ್ವದಲ್ಲಿ ಅಭಯ ನೀಡುತ್ತಿರುವ ದೇವತೆಗೆ ಚಾಮರ ಬೀಸುವಂತಿತ್ತು. ಶಿಲೆಯ ಕೆಳಭಾಗದ ಆಕೃತಿಗಳು ಸವೆದು ಹೋಗಿದ್ದವು.

ಅದೊಂದು ದೇವತೆಯ ರೂಪವೇ? ಶಿಲಾಶಾಸನವೇ? ಭೂತದ ಕಲ್ಲೇ? ತ್ಯಾಂಪಣ್ಣನ ಪ್ರಶ್ನೆಗಳಿಗೆ ಉತ್ತರ ಕೊಡುವವರು ಯಾರೂ ಇರಲಿಲ್ಲ. ಎಲ್ಲರಿಗೂ ದೇವತೆ ಎನ್ನುವುದು ಖಚಿತವಾದಂತಿತ್ತು.

ಗುರುಪುರದ ಗುರುರಾಜಾಚಾರ್ಯರು ಇತಿಹಾಸವನ್ನು ಆಳವಾಗಿ ಅಧ್ಯಯನ ಮಾಡಿದ್ದು, ಶಿಲಾಶಾಸನಗಳ ಮೇಲೆ ಸಂಶೋಧನೆಯನ್ನು ಕೂಡಾ ಮಾಡಿದ್ದರು. ವಯೋಮಾನದ ಕಾರಣದಿಂದ ಸಾರ್ವಜನಿಕವಾಗಿ ಕಾಣಿಸಿಕೊಳ್ಳುತ್ತಿರಲಿಲ್ಲ. ಸ್ಥಪತಿಗಳ ವಂಶದವರಾದ ಅವರು ಶಿಲಾಕೃತಿಯ ಬಗ್ಗೆ ನಿಖರವಾಗಿ ಹೇಳಬಲ್ಲರು ಎನ್ನುವುದನ್ನು ಅರಿತುಕೊಂಡ ತ್ಯಾಂಪಣ್ಣ ದಾಮೋದರನನ್ನು ಕರೆದುಕೊಂಡು ಹೋಗಿ ಭೇಟಿ ಮಾಡಿದರು.

ಎಂಬತ್ತು ದಾಟಿದ್ದ ಗುರುರಾಜಾಚಾರ್ಯರು ದೈಹಿಕವಾಗಿ ಬಳಲಿದ್ದರೂ ಸಂಶೋಧನೆಯ ಕುರಿತಾದ ಆಸಕ್ತಿಯನ್ನು ಉಳಿಸಿಕೊಂಡಿದ್ದರು. ಸಲಹೆ ಕೇಳಿ ಚರಿತ್ರಾಕಾರರು ಅವರನ್ನು ಭೇಟಿ ಮಾಡುವುದಿತ್ತು. ಗೋಳಿಪಡ್ಪಿನಲ್ಲಿ ಶಿಲಾಮೂರ್ತಿ ಸಿಕ್ಕಿದ್ದು ಪತ್ರಿಕೆಗಳ ಮೂಲಕ ಅವರ ಗಮನಕ್ಕೆ ಬಂದಿತ್ತು.

‘ಅದು ದೇವರ ವಿಗ್ರಹವೇ ಆದರೆ ನಮ್ಮ ಅಡ್ಡಿಯೇನೂ ಇಲ್ಲ. ಸುಮ್ಮನೇ ಜನರನ್ನು ಮರುಳು ಮಾಡಬಾರದು ಎನ್ನುವುದಷ್ಟೇ ನಮ್ಮ ಉದ್ದೇಶ’ ಎಂದು ತ್ಯಾಂಪಣ್ಣ ತಾವು ಬಂದ ಕಾರಣವನ್ನು ಆಚಾರ್ಯರಿಗೆ ನಿವೇದಿಸಿದರು.

ಪತ್ರಿಕೆಯಲ್ಲಿ ಬಂದ ಚಿತ್ರವನ್ನು ಪರಾಮರ್ಶಿಸಿದ ಆಚಾರ್ಯರು, ‘ನೋಡಿ, ಇದರಲ್ಲಿ ಮೂರ್ತಿ ಸ್ಪಷ್ಟವಾಗಿಲ್ಲ. ಇದರ ಮೇಲೆ ಏನೂ ಹೇಳುವ ಹಾಗಿಲ್ಲ’ ಎಂದರು.

‘ಆ ಬಗ್ಗೆ ಯೋಚಿಸಬೇಡಿ. ನಿಮ್ಮನ್ನು ಕರೆದುಕೊಂಡು ಹೋಗಿ ತೋರಿಸುತ್ತೇವೆ’ ಎಂದರು ತ್ಯಾಂಪಣ್ಣ.

‘ನನಗೀಗ ಎಲ್ಲೂ ಹೋಗಲಾಗುತ್ತಿಲ್ಲ. ಮೈ ನಡುಕ ಬರುತ್ತದೆ. ಹೆಚ್ಚು ಹೊತ್ತು ನಿಂತುಕೊಳ್ಳಲೂ ಆಗುವುದಿಲ್ಲ’ ಎಂದು ಆಚಾರ್ಯರು ಹೇಳಿದಾಗ ತ್ಯಾಂಪಣ್ಣನಿಗೆ ಚಿಂತೆಯಾಯಿತು.

ಅದನ್ನು ಗಮನಿಸಿದ ಆಚಾರ್ಯರು ‘ನೀವು ಒಂದು ಕೆಲಸ ಮಾಡಿ. ಒಳ್ಳೆಯ ಫೋಟೊಗ್ರಾಫರ್ ಹತ್ತಿರ ಎರಡು ಮೂರು ಬೇರೆ, ಬೇರೆ ಕೋನಗಳಲ್ಲಿ ಫೋಟೊ ತೆಗೆಸಿ. ಅದರ ಮೇಲೆ ಹೇಳಲು ಸಾಧ್ಯವೇ ನೋಡುತ್ತೇನೆ’ ಎಂದರು.

ಅದಕ್ಕೆ ಒಪ್ಪಿದ ತ್ಯಾಂಪಣ್ಣ ‘ಎರಡು ಮೂರು ದಿನಗಳಲ್ಲಿ ಬರುತ್ತೇನೆ’ ಎಂದು ಹೊರಟರು.

ಶಿಲಾಮೂರ್ತಿಯ ಫೋಟೊ ಹೊಡೆಯುವುದು ಸುಲಭದ ಮಾತಾಗಿರಲಿಲ್ಲ. ಗೋಳಿಕಟ್ಟೆಯನ್ನು ಮಲಗುವ ತಾಣವನ್ನಾಗಿ ಮಾಡಿದ್ದ ನಾಯಿಗಳಿಂದಲ್ಲದೆ, ತ್ಯಾಂಪಣ್ಣನಂತ ಕಿಡಿಗೇಡಿ ಗ್ಯಾಂಗ್‌ಗಳಿಂದ ಪ್ರತಿಮೆಯನ್ನು ರಕ್ಷಿಸಲು ಕಾವಲು ಸಮಿತಿಯಿತ್ತು. ಅದರ ಸದಸ್ಯರು ಹಗಳಿರುಳು ಗೋಳಿಕಟ್ಟೆಯಲ್ಲಿರುತ್ತಿದ್ದರು.

ಅದಲ್ಲದೆ, ‘ದಾಳಿಯಿಂದಾಗಿ ದೇವತೆ ಭೂಗತಳಾದಳು’ ಎಂದು ನಾರಾಯಣ ಹೇಳಿದ್ದು ಊಹಾಪೋಹಗಳಿಗೆ ಕಾರಣವಾಗಿತ್ತು. ಯಾರಿಂದ ದಾಳಿಯಾಗಿರಬಹುದು ಎಂದು ಜನ ಚಿಂತಿಸುತ್ತಿದ್ದರು. ಪರಸ್ಪರರಲ್ಲಿ ಅನುಮಾನದ ಹುತ್ತ ಬೆಳೆಯತೊಡಗಿತ್ತು. ಕಲ್ಲಿನ ಮೂರ್ತಿಯ ಫೋಟೊ ತೆಗೆದು ಪತ್ರಿಕೆಯಲ್ಲಿ ಮೊದಲು ಹಾಕಿದ್ದು ಕೇಶವ. ಅವರು ಪತ್ರಿಕಾ ಛಾಯಾಗ್ರಾಹಕ. ಹೇಗಾದರೂ ಮಾಡಿ ಫೋಟೊ ತೆಗೆದುಕೊಡಿ ಎಂದು ಕೇಶವನಿಗೆ ದುಂಬಾಲು ಬಿದ್ದರು ತ್ಯಾಂಪಣ್ಣ.

ಕೇಶವ ಅಂತದರಲ್ಲಿ ಪಳಗಿದ ಕೈ. ನಿಮ್ಮ ಫೋಟೊ ಪೇಪರ್‌ನಲ್ಲಿ ಬರುತ್ತದೆ ಎಂದು ಕಾವಲು ಸಮಿತಿಯವರನ್ನು ಫೋಟೊಗೆ ನಿಲ್ಲಿಸಿ, ಫ್ಲ್ಯಾಶ್ ಹೊಡೆದು ಖುಷಿಪಡಿಸಿದರು. ತ್ಯಾಂಪಣ್ಣನಿಗೆ ಬೇಕಾದ ಕೋನಗಳಲ್ಲಿ ಫೋಟೊಗಳು ದೊರೆತವು.

ಫೋಟೊಗಳನ್ನು ನೋಡಿ ಮೆಚ್ಚಿದ ಗುರುರಾಜಾಚಾರ್ಯರು ಪರಿಶೀಲಿಸಲು ಕಾಲಾವಕಾಶ ಬೇಕೆಂದರು. ವಾರ ಬಿಟ್ಟು ಹೋದಾಗ ಅನಾರೋಗ್ಯದಿಂದ ಅಸ್ವಸ್ಥರಾಗಿದ್ದ ಅವರು ‘ಕೆಲವು ದಾಖಲೆಗಳು ದೊರಕಿವೆ, ಇನ್ನಷ್ಟು ಮಾಹಿತಿಗಳನ್ನು ಸಂಗ್ರಹಿಸುತ್ತಿದ್ದೇನೆ, ನಾನು ಹೇಳಿದಾಗ ಬನ್ನಿ, ಪದೇ ಪದೇ ಬರಬೇಡಿ’ ಎಂದುಬಿಟ್ಟರು.

ಶಿಲಾ ಪ್ರತಿಮೆಯ ಪ್ರತಿಷ್ಠಾಪನೆಗಾಗಿ ಸಿದ್ಧತೆಗಳು ಭರದಿಂದ ನಡೆಯುತ್ತಿದ್ದವು. ಪ್ರತಿಷ್ಠಾಪನಾ ಸಮಿತಿಯ ಅಧ್ಯಕ್ಷರು ಸಾರ್ವಜನಿಕ ಹೇಳಿಕೆಯಲ್ಲಿ ‘ಹಿಂದೆ ದಾಳಿ ನಡೆದ ರೀತಿಯಲ್ಲಿ ಮುಂದೆಯೂ ನಡೆಯಬಹುದು’ ಎಂದು ನಿರ್ದಿಷ್ಟ ಪಂಗಡವೊಂದನ್ನು ಗುರಿಮಾಡಿ ಹೇಳಿದ್ದು ಉದ್ವಿಗ್ನತೆಗೆ ಕಾರಣವಾಗಿತ್ತು. ಸದ್ಯದಲ್ಲಿ ನಡೆಯಲಿದ್ದ ಚುನಾವಣೆಯಲ್ಲಿ ಇದು ಲಾಭ ತಂದುಕೊಡಬಹುದು ಎಂದವರ ಲೆಕ್ಕಾಚಾರ.

ಅವರೇ ಮುತುವರ್ಜಿಯಿಂದ ಕೇರಳಕ್ಕೆ ಹೋಗಿ ಅಲ್ಲಿಯ ಪ್ರಸಿದ್ಧ ಆಗಮಿಕರನ್ನು ಕಂಡು ಪ್ರತಿಷ್ಠಾಪನೆಗೆ ದಿನ ನಿಗದಿ ಮಾಡಿದ್ದರು. ಮಲೆಯಾಳಿ ಆಗಮಿಕರು ಖುದ್ದು ತಮ್ಮ ತಂಡದೊಂದಿಗೆ ಗೋಳಿಪಡ್ಪಿಗೆ ಬಂದು ಶಿಲೆಯಲ್ಲಿ ಪ್ರಾಣ ಪ್ರತಿಷ್ಠಾಪನೆ ಮಾಡುವವರಿದ್ದರು.
ಆತಂಕದಲ್ಲಿದ್ದ ತ್ಯಾಂಪಣ್ಣ ಗುರುರಾಜಾಚಾರ್ಯರ ಕರೆಯನ್ನೇ ನಿರೀಕ್ಷಿಸುತ್ತಿದ್ದರು. ಕೆಲ ದಿನಗಳಾದ ಮೇಲೆ ಬರಹೇಳಿದಾಗ ದಾಮೋದರ ಮತ್ತು ತಿಮ್ಮಪ್ಪನ ಜತೆಯಲ್ಲಿ ಗುರುಪುರಕ್ಕೆ ದೌಡಾಯಿಸಿದರು.

‘ಅದೊಂದು ವೀರಗಲ್ಲು, ಅದರಲ್ಲಿ ಸಂಶಯವೇ ಇಲ್ಲ’ ತ್ಯಾಂಪಣ್ಣ ಮತ್ತವರ ಗೆಳೆಯರನ್ನು ಕೂರಿಸಿಕೊಂಡು ಗುರುರಾಜಾಚಾರ್ಯರೆಂದರು.

‘ವೀರಗಲ್ಲು ಅಂದರೆ?’ ದಾಮೋದರ ಕೇಳಿದ.

‘ಯುದ್ಧದಲ್ಲಿ ಕಾದಾಡುತ್ತಾ ಮೃತರಾದ ಸೈನಿಕರ ನೆನಪಿನಲ್ಲಿ ಆ ಕಾಲದಲ್ಲಿ ಅರಸರು ನೆಡುತ್ತಿದ್ದ ಕಲ್ಲುಗಳು. ಅವುಗಳಲ್ಲಿ ವೀರರ ಚಿತ್ರಗಳು, ಯುದ್ಧದಲ್ಲಿ ಮಡಿದ ಯೋಧರನ್ನು ಸ್ವರ್ಗಕ್ಕೊಯ್ಯುವ ದೇವತೆಯ ಚಿತ್ರವಿರುತ್ತದೆ. ಬರಹ ಇರುವುದಿಲ್ಲ’
‘ಇದು ಯಾರ ಕಾಲದ ವೀರಗಲ್ಲಾಗಿರಬಹುದು?’ ತ್ಯಾಂಪಣ್ಣ ವಿಚಾರಿಸಿದರು.

‘ಒಳ್ಳೆಯ ಪ್ರಶ್ನೆ ಕೇಳಿದ್ದೀರಿ. ಅದಕ್ಕೊಂದು ಚರಿತ್ರೆಯಿದೆ. ಅದನ್ನು ತಿಳಿದುಕೊಳ್ಳಲು ನನಗೆ ಇಷ್ಟು ದಿನ ಬೇಕಾಯಿತು’ ಆಚಾರ್ಯರೆಂದರು.

ತ್ಯಾಂಪಣ್ಣ ಕುತೂಹಲದಿಂದ ‘ನಮಗೂ ಆ ಚರಿತ್ರೆ ಹೇಳಿ’ ಎಂದರು.

ಕಾಯಿಲೆಯಿಂದ ಬಳಲಿದ್ದರೂ ಗುರುರಾಜಾಚಾರ್ಯರು ಉತ್ಸಾಹಗೊಂಡರು. ‘ನಿಮಗೆ ರಾಣಿ ಅಬ್ಬಕ್ಕ ಗೊತ್ತಿದೆಯಲ್ಲ...’ ಎಂದು ನಾನೂರು ವರ್ಷಗಳ ಹಿಂದಕ್ಕೆ ಹೋದರು. ಗೋವೆಯನ್ನು ವಶಪಡಿಸಿಕೊಂಡ ಪೋರ್ಚುಗೀಸರಿಗೆ ಉಳ್ಳಾಲದ ಮೇಲೆ ಕಣ್ಣಿತ್ತು. ಕರಿಮೆಣಸು, ಜವಳಿ, ಸಂಬಾರ ಪದಾರ್ಥಗಳು ಅರಬ್ ದೇಶಗಳಿಗೆ ರಫ್ತಾಗುತ್ತಿದ್ದ ಪ್ರಮುಖ ಬಂದರು ಉಳ್ಳಾಲ. ಅದು ವಶವಾದರೆ ಸಮುದ್ರ ವ್ಯಾಪಾರವೆಲ್ಲಾ ಅವರ ಅಂಕೆಗೆ ಬರುತ್ತಿತ್ತು. ಅದಕ್ಕೆ ಅಡ್ಡಿಯಾಗಿ ನಿಂತಿದ್ದು ಉಳ್ಳಾಲದ ರಾಣಿ ಅಬ್ಬಕ್ಕ. ಪೋರ್ಚುಗೀಸರು ಸಮುದ್ರ ವ್ಯಾಪಾರದಲ್ಲಿ ಪಾಲು ಕೇಳಿದರು, ತೆರಿಗೆ ವಿಧಿಸಿದರು. ರಾಣಿ ಕೊಡಲೊಪ್ಪಲಿಲ್ಲ.

ರಾಣಿ ಅಬ್ಬಕ್ಕನನ್ನು ಮಣಿಸಬೇಕೆಂದು ಪೋರ್ಚುಗೀಸರು ಎರಡು ಬಾರಿ ಉಳ್ಳಾಲದ ಮೇಲೆ ಸಮುದ್ರ ಮಾರ್ಗವಾಗಿ ದಂಡೆತ್ತಿ ಬಂದರು. ರಾಣಿ ಅಬ್ಬಕ್ಕ ಗಂಡ, ಮಂಗಳೂರಿನ ಅರಸ ಲಕ್ಷ್ಮಪ್ಪ ಬಂಗರಸನ ಜತೆ ಸೇರಿ ಎರಡು ಸಲವೂ ಸೋಲಿಸಿ, ಹಿಮ್ಮೆಟ್ಟಿಸಿದಳು. ಯುದ್ಧದಲ್ಲಿ ಪೋರ್ಚುಗೀಸರಿಗೆ ಸಾಕಷ್ಟು ನಷ್ಟವಾಗಿತ್ತು. ಸಾವು, ನೋವೂ ಸಂಭವಿಸಿತ್ತು.

ನೇರ ಯುದ್ಧದಲ್ಲಿ ರಾಣಿ ಅಬ್ಬಕ್ಕನನ್ನು ಮಣಿಸಲಾಗುವುದಿಲ್ಲವೆನ್ನುವುದು ಪೋರ್ಚುಗೀಸರಿಗೆ ಅರಿವಾಗಿತ್ತು. ಸ್ಥಳೀಯರ ನೆರವಿನಿಂದ ಕಾಲಾಳುಗಳು ಉಳ್ಳಾಲ ಪ್ರವೇಶಿಸುವಂತೆ ಹಂಚಿಕೆ ಮಾಡಿದರು. ಪೋರ್ಚುಗೀಸ್ ಜನರಲ್ ಜೊವೋ ಫಿಕ್ಸೊಟೋ 1568ರಲ್ಲಿ ಪೋರ್ಚುಗೀಸ್ ಪಡೆಯೊಂದಿಗೆ ಅರಮನೆಗೆ ನುಗ್ಗಿದ. ರಾಣಿ ಯುದ್ಧಕ್ಕೆ ಸನ್ನದ್ಧಳಾಗಿರಲಿಲ್ಲ. ಹೋರಾಟದಲ್ಲಿ ಅರಮನೆ ಪೋರ್ಚುಗೀಸರ ವಶವಾಯಿತು. ರಾಣಿ ತಪ್ಪಿಸಿಕೊಂಡಳು.

ಅರಮನೆಯಿಂದ ತಪ್ಪಿಸಿಕೊಂಡ ರಾಣಿ ಅಬ್ಬಕ್ಕ ಮಸೀದಿ ಒಂದರಲ್ಲಿ ಆಶ್ರಯ ಪಡೆದಳು. ಮಸೀದಿಯ ಮೌಲ್ವಿ ಮತ್ತು ಬ್ಯಾರಿಗಳು ಆಕೆಗೆ ಎಲ್ಲಾ ರೀತಿಯ ನೆರವನ್ನೂ ನೀಡಿದರು. ಅಲ್ಲಿದ್ದುಕೊಂಡು ರಾಣಿ ಸೈನಿಕರನ್ನು ಸಜ್ಜುಗೊಳಿಸಿದಳು. ಇನ್ನೂರು ಮಂದಿ ನಂಬಿಕಸ್ತ, ಧೈರ್ಯಶಾಲಿ ಬಿಲ್ಲವ, ಮಾಪಿಳ್ಳೆ, ಮೊಗವೀರ, ಬ್ಯಾರಿ ಸೈನಿಕರನ್ನು ಸಿದ್ಧಮಾಡಿ ಅಪರಾತ್ರಿಯಲ್ಲಿ ಅರಮನೆಗೆ ನುಗ್ಗುವಂತೆ ಮಾಡಿದಳು. ಘೋರಕಾಳಗ ನಡೆದು ಜನರಲ್ ಜೊವೋ ಫಿಕ್ಸೊಟೋ ಹತನಾದ. ಪೋರ್ಚುಗೀಸರಲ್ಲಿ ಎಪ್ಪತ್ತು ಮಂದಿ ಅಸುನೀಗಿದರೆ ಉಳಿದವರು ಹಡಗುಗಳನ್ನೇರಿ ಪರಾರಿಯಾದರು.

ರಾಣಿ ಅಬ್ಬಕ್ಕನಿಗಾಗಿ ಪ್ರಾಣವನ್ನು ಒತ್ತೆ ಇಟ್ಟು ಹೋರಾಡಿದ ಧೀರ ಸೈನಿಕರಲ್ಲಿ ಹಲವರು ಮೃತ ಪಟ್ಟಿದ್ದರು. ಉಳ್ಳಾಲ ಮತ್ತೆ ರಾಣಿಯ ವಶವಾದರೂ ಈ ನೋವು ಆಕೆಯನ್ನು ಕಾಡಿತು. ತನ್ನ ನಂಬುಗೆಯ ಯೋಧರ ಸ್ಮರಣೆಗಾಗಿ ಆಕೆ ವೀರಗಲ್ಲುಗಳನ್ನು ನೆಡಿಸಿದಳು.
ಗುರುರಾಜಾಚಾರ್ಯರು ಹೇಳುವುದನ್ನು ಆಲಿಸುತ್ತಾ ರಾಣಿ ಅಬ್ಬಕ್ಕನ ಸೈನಿಕರಲ್ಲಿ ಒಂದಾಗಿ ಹೋಗಿದ್ದರು ತ್ಯಾಂಪಣ್ಣನ ಗೆಳೆಯರು.
‘ಈಗ ಇತಿಹಾಸವನ್ನು ತಿಳಿದುಕೊಳ್ಳುವುದಕ್ಕೆ ಯಾರಿಗೂ ಆಸಕ್ತಿ ಇಲ್ಲ. ಹಿಂದಿನ ಘಟನೆಗಳನ್ನು ಅವರ ಮೂಗಿನ ನೇರಕ್ಕೆ ವ್ಯಾಖ್ಯಾನ ಮಾಡುತ್ತಾರೆ’ ಎಂದ ಗುರುರಾಜಾಚಾರ್ಯರು, ‘ನಿಮಗೀಗ ಎಲ್ಲಾ ಸ್ಪಷ್ಟವಾಯಿತಲ್ಲ?’ಎಂದು ಕೇಳಿದರು.

ತಿಮ್ಮಪ್ಪ ಗುರುಪುರಕ್ಕೆ ಬರುವ ಮೊದಲು ಗೋಳಿಪಡ್ಪಿಗೆ ಹೋಗಿದ್ದ. ಶಿಲಾ ಪ್ರತಿಮೆಯ ಪ್ರತಿಷ್ಠಾಪನೆಗೆ ಒಂದೆರಡು ದಿನಗಳು ಉಳಿದಿದ್ದು, ಕೆಲಸ ಭರದಿಂದ ಸಾಗುತ್ತಿತ್ತು.

ಪ್ರತಿಮೆಯ ಪಕ್ಕದಲ್ಲಿ ನಿಲ್ಲಿಸಲು ಸೈಕಲ್ ಮೇಲೆ ನಿಂತು ಕೈ ಮುಗಿಯುವ ನಾರಾಯಣನ ಇಪ್ಪತ್ತು ಅಡಿ ಎತ್ತರದ ಕಟೌಟ್ ನಿರ್ಮಾಣವಾಗುತ್ತಿತ್ತು. ಬೆಂಗಳೂರಿನಿಂದ ಬಂದಿದ್ದ ಕಟೌಟ್ ಪರಿಣತರು ಹಗಲೂ ರಾತ್ರಿ ಕೆಲಸ ಮಾಡುತ್ತಿದ್ದರು.
ಹೊರಡುವ ಸಮಯದಲ್ಲಿ ತಿಮ್ಮಪ್ಪ ಗುರುರಾಜಾಚಾರ್ಯರನ್ನು ಕೇಳಿದ: ‘ನೀವು ಹೇಳಿದುದು ನಮಗೆ ಮನವರಿಕೆಯಾಗಿದೆ. ಆದರೆ ಅದನ್ನು ಜನರಿಗೆ ತಿಳಿಸುವುದು ಹೇಗೆ?’ 

***
ಎಂ. ನಾಗರಾಜ ಶೆಟ್ಟಿ ಕುರಿತು: ಬದುಕಿನ ಅರ್ಧ ಸವೆಸಿದ್ದು ಮಂಗಳೂರು ಮತ್ತು ತುಮಕೂರಲ್ಲಿ. ಪ್ರಸ್ತುತ ಬೆಂಗಳೂರಲ್ಲಿ ವಾಸ. ಕೆಲಸ ಮಾಡಿದ್ದು ಸಿಂಡಿಕೇಟ್ ಬ್ಯಾಂಕ್‌ನಲ್ಲಿ.  ನೌಕರ ಸಂಘಟನೆಗಳಲ್ಲಿ, ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯ ಪಾಲು. ಬರೆದದ್ದಕಿಂತ ಓದಿದ್ದು ಜಾಸ್ತಿ. ಪ್ರಜಾವಾಣಿ 2017 ದೀಪಾವಳಿ ಕಥಾಸ್ಪರ್ಧೆಯಲ್ಲಿ ಮೀಸಲು ಕತೆಗೆ ತೀರ್ಪುಗಾರರ ಮೆಚ್ಚುಗೆ. ವಿಕ್ರಾಂತ ಕರ್ನಾಟಕ, ಕನ್ನಡಪ್ರಭ ಕಥಾಸ್ಪರ್ಧೆಗಳಲ್ಲಿ ಬಹುಮಾನ. ಅಲ್ಲಲ್ಲಿ ಬಿಡಿ ಲೇಖನಗಳು ಪ್ರಕಟವಾಗಿವೆ.

Tags: 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !