ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆವರ್ತ

Last Updated 29 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

‘ಒ ಡಿನೇ ಗಂಡ ಬಂದಿದ್ರಾ ಇಲ್ಲಿ? ನಿನ್ನೆಯಿಂದ ಕಾಣುಕೆ ಇಲ್ಲ’ ರುಕ್ಕು ಕೇಳಿದಾಗ ‘ನಂಗೆ ಎಂತಾ ಗೊತ್ತಿತ, ನಡಿ ಇಲ್ಲಿಂದ’ ಪಟೇಲರು ರೇಗಿದರು.

ಆರು ಅಡಿ ಉದ್ದದ, ಎಂಟೆದೆಯ ಶ್ರೀನಿವಾಸ ನಾಯ್ಕ ಉರುಫ್‌ ಸೀನನಿಗೆ ಮರ ಹತ್ತುವ ಕಲೆ ಒಲಿದಿತ್ತು. ಎಂತಹ ಎತ್ತರೆತ್ತರದ ತೆಂಗು, ಅಡಿಕೆ ಮರವನ್ನಾದರೂ ಕಾಲಿಗೆ ಹಗ್ಗದ ಕುಣಿಕೆ ಮಾಡಿಕೊಂಡು ಸರಸರನೆ ಹತ್ತಿ ಮರದ ಸೊಕ್ಕು ಮುರಿಯುವಂತೆ ಕಾಯಿಗಳನ್ನು ಉದುರಿಸುತ್ತಿದ್ದ. ಯಾರಿಗೂ, ಯಾವುದಕ್ಕೂ ಹೆದರದ ಸೀನ ಬಗ್ಗುವುದು ಎರಡು ಬಾಟಲ್ ಸೇಂದಿ ಹೊಟ್ಟೆಗೆ ಹೋದಾಗಲೇ.

ಅಂತಹ ಸೀನ ಕಾಣೆಯಾದ ಎಂದರೆ; ಸೀನನಿಗೆ ವೈರಿಗಳಾರೂ ಇಲ್ಲವೆಂದಲ್ಲ. ಇದ್ದರು ಇಲ್ಲ. ಆರಡಿ ಉದ್ದದವನನ್ನೇ ಮಾಯ ಮಾಡುವಷ್ಟೋ, ಕೊಂದು ಮುಗಿಸುವಷ್ಟೋ ಸಿಟ್ಟು ಯಾರಿಗೂ ಇಲ್ಲ. ಹೆಂಡತಿ ರುಕ್ಕು ಎರಡು ದಿನದಿಂದ ಗಂಡನನ್ನು ಕಾಣದೆ ಹೈರಣವಾದರೆ, ಅವನ ಮೂರು ಶಾಲೆಗೆ ಹೋಗುವ ಮಕ್ಕಳು ಯಾವ ಆಲೋಚನೆಗಳಿಲ್ಲದೆ ಆಡಿಕೊಂಡಿದ್ದವು.

ರುಕ್ಕುವೂ ಸುಮ್ಮನೆ ಕೂತುಕೊಳ್ಳುವವಳಲ್ಲ. ತಲೆ ಬಿಸಿ ಇದ್ದರೂ ಹಿಡಿದುಕೊಂಡಿದ್ದ ಮನೆಗಳ ಕೆಲಸವನ್ನಂತೂ ಮಾಡುತ್ತಿದ್ದಳು. ರುಕ್ಕುವಿಗೆ ತಲೆಬಿಸಿಯ ವಿಚಾರ ಸಾಲ ಮಾಡಿ ತೆಗೆದುಕೊಂಡ ನಾಲ್ಕು ಸೆಂಟ್ಸ್ ಜಾಗ ಮತ್ತು ಹೋದ ವರ್ಷವಷ್ಟೇ ಕಟ್ಟಿದ ಎರಡು ಕೋಣೆಯ ಹಂಚಿನ ಮನೆ. ಸೀನ ಕೈಯಲ್ಲಿ ದುಡ್ಡಿದ್ದರೆ ಎಲ್ಲವೂ ಒಂದೇ ಕಳ್ಳಂಗಡಿಗೆ, ಇಲ್ಲವೇ ‘ಅಯ್ಯೋ’ ಎಂದವರಿಗೆ ಕೈಎತ್ತಿ ಕೊಟ್ಟು ತಿಂಗಳಿಗೆ ಸಾವಿರಾರು ಮರ ಹತ್ತಿದರೂ ಉಳಿತಾಯ ಮಾತ್ರ ಸೊನ್ನೆ ಎನಿಸಿದಾಗ ರುಕ್ಕುವಿಗೆ ಹೇಗಾದರೂ ಮಾಡಿ ಸ್ವಂತದ ಸೂರು ಕಟ್ಟುವ ಆಲೋಚನೆ ಬಂತು.

ತಾನು ಕೂಡಿಟ್ಟ ದುಡ್ಡು, ಕೆಲಸ ಮಾಡುವ ಮನೆಯಲ್ಲಿ ಸಾಲ ಮಾಡಿ ಗಂಡನ ಕೈಯಲ್ಲಿ ಐವತ್ತು ಸಾವಿರ ಇಟ್ಟು ಜಾಗ, ಮನೆ ಎಂದು ಅತ್ತು ಕರೆದಾಗ ಸೀನ ಉಪಾಯವಿಲ್ಲದೆ ಉಳಿದ ಹಣಕ್ಕೆ ಬ್ಯಾಂಕಿನಲ್ಲಿ ಸಾಲ ಮಾಡಿ ಊರಿನ ಹೊರಬದಿಯಲ್ಲಿ ಚಿಕ್ಕ ಜಾಗ ಖರೀದಿಸಿ, ಎರಡು ಕೋಣೆಯ ಮನೆ ಕಟ್ಟಿಸಿದ. ಆದರೆ, ಸಾಲದಲ್ಲಿ ಮುಳುಗಬೇಕಾಗಿ ಬಂತು. ಈಗ ಸೀನ ಸಡನ್ ಆಗಿ ಕಾಣೆಯಾಗಿ ಹೊಸ ಚಿಂತೆ ಶುರುವಾಯಿತು. ಭಟ್ಟರಲ್ಲಿ ‘ನಿಮಿತ್ಯ’ ಕೇಳಿದರೆ ‘ಜಕಣಿ ಉಪದ್ರ, ಉತ್ತರ ದಿಕ್ಕಿಗೆ ಹೋಗಿದ್ದಾನೆ. ಇನ್ನಾರು ತಿಂಗಳಿಗೆ ಬರ್ತಾನೆ’ ಭಟ್ಟರ ಉತ್ತರ ರುಕ್ಕುವಿಗೆ ಸ್ವಲ್ಪ ಸಮಾಧಾನವಾಯಿತು.

ಪಟೇಲರ ದೊಡ್ಡ ಮಗಳು ಸುಮನ ಹೆರಿಗೆಗೆ ಬಂದಿದ್ದಳು. ಹೆರಿಗೆ ಮುಗಿದು ಮುದ್ದಾದ ಹೆಣ್ಣು ಮಗು ಕೈಗೆ ಬಂದಾಗ ರುಕ್ಕುವೇ ಸುಮನನ ಬಾಣಂತನ ಮುಗಿಸಿದಳು. ‘ಅಮ್ಮ, ಮುಂದಿನ ಸಾಲದ ಕಂತ ಕಟ್ಟದಿದ್ದರೆ ಬ್ಯಾಂಕಿನವರ ಮನೇನ ಜಪ್ತಿ ಮಾಡ್ತ್ರ’ ರುಕ್ಕು ಪಟೇಲರ ಹೆಂಡತಿಯೊಡನೆ ಎಂದಾಗ, ‘ನನ್ನ ಹತ್ರ ಹೇಳಿದ್ರೆ ಎಂತ ಪ್ರಯೋಜ್ನ? ನಮ್ಮ ಹೆಂಗಸರ ಹತ್ರ ದುಡ್ಡ ಎಲ್ಲಿಂದ ಬರತ್ತ‘ ಎಂಬ ಉತ್ತರ ಬಂತು. ಅಲ್ಲೇ ಇದ್ದ ಪಟೇಲರು ‘ರುಕ್ಕು, ಆ ದಿವ್ಸವೇ ಹೇಳಿದ್ದೆ ನಾ ಸೀನನಿಗೆ, ಸಾಲ ಎಷ್ಟಾದ್ರೂ ಶೂಲ, ಈಗ ಕಾಣ ಸಾಲ ಮಾಡಿ ಎತ್ಲಾಯೋ ಓಡಿ ಹೋದ’ ಪಟೇಲರು ಅಬ್ಬರಿಸಿದಾಗ, ರುಕ್ಕು ಅಳುತ್ತಲೇ ‘ಒಡಿನೇ ನೀವ ಹಾಂಗಿನ ಮಾತು ಆಡುಕಾಗ, ನನ್ನ ಗಂಡ ಹೆದ್ರಿ ಓಡಿ ಹೋಗೋ ಮನುಷ್ಯ ಅಲ್ಲ. ಜಕಣಿ ಉಪದ್ರ ಅಂಬ್ರ, ಇನ್ನ ಆರು ತಿಂಗಳಿಗೆ ಬತ್ತ’.

ಏನೋ ಆಲೋಚಿಸಿದ ಪಟೇಲರು ‘ನೀ ಹೇಳ್ದಾಂಗೆ ಆ ದೇವ್ರ ನಡ್ಸಿ ಕೊಡ್ಲಿ, ನಿನ್ನ ಬಿಡುಕೆ ಆಗತ್ತಾ, ನಿಂಗೆ ಇಪ್ಪತ್ತೈದು ಸಾವ್ರ ಕೊಡ್ತೆ. ಬ್ಯಾಂಕಿನ ಸಾಲದ ಹಿಂದಿನ ಕಂತ ತೀರ್ಸಿ ಬಿಡ. ಉಳಿದ ಹಣ ಮತ್ತ ಕಾಂಬ’ ಎಂದಾಗ ರುಕ್ಕು ಸ್ವಲ್ಪ ಚಿಗುರಿದಳು. ಪಟೇಲರು ಕ್ಯಾಕರಿಸಿ ತೆಂಗಿನ ಕಟ್ಟೆಗೆ ಉಗಿದು ಗಂಟಲನ್ನು ಸರಿಪಡಿಸುಕೊಳ್ಳುತ್ತಾ, ‘ರುಕ್ಕು, ನಿನ್ನ ದೊಡ್ಡ ಮಗ ಸತೀಶನಿಗೆ 13 ವರ್ಷ ಅಲ್ದಾ? ಶಾಲೆಗೆ ಹೊತ್ನಾ’. ‘ಹೌದ ಒಡಿನೇ’, ‘ಮರದ ತೆಂಗಿನ ಕಾಯೆಲ್ಲಾ ಒಣಗಿ ಕೆಳಗೆ ಬೀಳ್ತಾ ಇತ್ತ, ಯಾರ ತಲೆ ಮೇಲೆ ಬಿದ್ರೆ ಕಷ್ಟ. ಸತೀಶನನ್ನೇ ಮರ ಹತ್ತಸ್ಲಕ್ಕಿತ್ತ. ಕಾಯಿ ಕೊಯ್ಯೊ ಕೆಲಸ ಏನ ಕಡ್ಮೆ ಅಲ್ಲ ಕಾಣ. ಒಂದ ಮರ ಹತ್ತಿದ್ರೆ 50 ರೂಪಾಯಿ, ನಿಂಗಂತೂ ಮೂರೂ ಗಂಡ ಮಕ್ಳ, ಮೂರೂ ಮಕ್ಳೂ ಮರ ಹತ್ತುಕೆ ಕಲಿತ್ರೆ ನಿಂಗೆ ಎಂತ ಕಡ್ಮೆ ಮಾರಾಯ್ತಿ?’, ರುಕ್ಕುವಿಗೆ ಗಾಬರಿ ‘ಬೇಡ ಒಡಿನೇ ಸತೀಶ ಇನ್ನೂ ಸಣ್ಣವ’. ‘ಬ್ಯಾಡ ಬಿಡ, ನಿನ್ನ ಗಂಡ ವಾಪಸ್ಸ ಬರುವವರೆಗಾದ್ರೂ ಮರ ಹತ್ತೊ ಕೆಲ್ಸ ಮಾಡ್ಲಿ. ಸೀನ ಬಂದ್ರ ಮ್ಯಾಲೆ ಸತೀಶ ಶಾಲೆಗೆ ಹೊಯ್ಲಿ’. ರುಕ್ಕಿವಿಗೆ ಇಲ್ಲವೆನ್ನಲಾಗಲಿಲ್ಲ.

ಸಂಕ್ರಾಂತಿಯ ದಿನ ಒಳ್ಳೆಯದೆಂದು ಪಟೇಲರು ಮೊಮ್ಮಗಳಿಗೆ ನಾಮಕರಣದ ಶಾಸ್ತ್ರ ಇಟ್ಟುಕೊಂಡರು. ಅಂದೇ ರುಕ್ಕು ಮಗ ಸತೀಶನನ್ನು ಪಟೇಲರ ಮನೆಯ ತೆಂಗಿನ ಮರ ಹತ್ತಿಸಲು ತೀರ್ಮಾನಿಸಿದಳು. ಸತೀಶನಿಗೆ ಶಾಲೆಗೆ ಹೋಗುವುದು ಇಷ್ಟವಿದ್ದರೂ ಮನೆಯ ಪರಿಸ್ಥಿತಿಯನ್ನೂ ಅರ್ಥ ಮಾಡಿಕೊಂಡಿದ್ದ. ಮನೆಯ ಪಕ್ಕದ ಹೆಚ್ಚು ಎತ್ತರವಿಲ್ಲದ ಕೆಂದಳಿಯದ ತೆಂಗಿನ ಮರವನ್ನೇ ಸತೀಶ ಮೊದಲು ಹತ್ತುವುದೆಂದು ತೀರ್ಮಾನವಾಯಿತು. ಈ ಗಡಿಬಿಡಿಯಲ್ಲಿ ಲಕ್ಷಕ್ಕೆ ಹತ್ತಿರ ಹತ್ತಿರ ದುಡ್ಡು ಕೊಟ್ಟು ತಂದ ಜರ್ಸಿ ದನ ಹೆಣ್ಣು ಕರುವನ್ನು ಹಾಕಿತು. ಖುಷಿಯಲ್ಲಿದ್ದ ಪಟೇಲರು ಅಡ್ವಾನ್ಸ್ ಎಂಬಂತೆ ರುಕ್ಕುವಿನ ಕೈಗೆ ಸಾವಿರ ರೂಪಾಯಿಯನ್ನು ತುರುಕಿದರು.

ಸಂಕ್ರಾಂತಿಯ ಹಿಂದಿನ ದಿನ ರುಕ್ಕು ಮಗನನ್ನು ಚೌಳಿಕೆರೆಯ ಗಣಪತಿಯಲ್ಲಿಗೆ ಕರೆದುಕೊಂಡು ಹೋದಳು. ‘ದೇವ್ರೇ ಬೇಗ ಗಂಡನನ್ನು ವಾಪಾಸ್ಸು ಕರೆಸಿ ಕೊಡ. ನೂರ ಕಾಯಿ ಒಡೆಸ್ತೆ. ಮಕ್ಳಿಗೆ ಮರ ಹತ್ತೊ ಕೆಲ್ಸ ಮಾತ್ರ ಕೊಡ್ಬೇಡ’ ಎನ್ನತ್ತಾ ಅಡ್ಡ ಬಿದ್ದಳು.

ವಾಪಸ್‌ ಮನೆಯ ಕಡೆಗೆ ಹೊರಟಾಗ ಕತ್ತಲಾಗಿತ್ತು. ಹಿಂದಿನಿಂದ ಯಾರೋ ಕರೆದಂತಾಯಿತು ‘ರುಕ್ಕಕ್ಕ, ನಿಂತ್ಕಣಿ, ನಿಂತ್ಕಣಿ, ಎಂತದೋ ಹೇಳುಕಿತ್ತ’. ನೋಡಿದರೆ ಮೂಗಿನ ತನಕ ಕುಡಿದು ತೂರಾಡುತ್ತಿದ್ದ ಶಂಕ್ರ. ರುಕ್ಕು ‘ಮನೇಲ ಮಕ್ಕಳ ಕಾಯ್ತಾ ಇದ್ದೋ, ಹೊಯ್ಕ ಬೇಗ, ನಾಳೆಗೆ ನಮ್ಮ ಸತೀಶ ಮರ ಹತ್ತತ. ಸೀನ ವಾಪಸ್ಸ ಬರುವವರೆಗೆ ಸತೀಶ ಅಪ್ಪನ ಕೆಲ್ಸ ಮುಂದೊರಸಕೊಂಡ ಹೋತ. ಆಮೇಲೆ ವಾಪಾಸ್ಸು ಶಾಲೆಗೆ ಹೊಪುದೇ‘ ಸಂತಸದಿಂದ ರುಕ್ಕು ಎಂದಾಗ, ಶಂಕ್ರ ತುರಾಡುತ್ತಾ ‘ರುಕ್ಕಕ್ಕ ಸತ್ತವ್ರ ವಾಪಾಸ್ಸ ಬತ್ರೇ?’ ಎಂದಾಗ ರುಕ್ಕುವಿಗೆ ಗಾಬರಿ.

‘ಎಂತ ಅಂತ್ರಿ ನೀವ?’

‘ರುಕ್ಕಕ್ಕ ನಿನ್ನ ಗಂಡ ಇನ್ನ ಬತ್ತಿಲ್ಲ’

ರುಕ್ಕು ಅಳುತ್ತಾ ‘ಇನ್ನಾರು ತಿಂಗಳಿಗೆ ನಾಗದೇವ್ರ ಕರ್ಸಿ ಕೊಡ್ತ ಅಂದ್ರಪ್ಪ ಭಟ್ರು’.

ಶಂಕ್ರ ಗಟ್ಟಿಯಾಗೇ ಎಂಬಂತೆ ‘ನಿಂಗೆ ಮಂಡೆ ಸಮ ಇಲ್ಲ. ಪಟೇಲ್ರ ಮನೇಯ ಬೇಲಿ ಬದಿಯ ಮರ ಹತ್ತಿದವನಿಗೆ ಕಾಲ ಜಾರಿತ, ಬಿದ್ದದ ಬೇಲಿ ಮೇಲೆ ನೆಟ್ಟಿದ್ದ ಗಳದ ಮೇಲೆ, ಗಳ ಸೀನನ ಎದೆ ಒಟ್ಟೆ ಮಾಡ್ತ, ಕೂಡ್ಲೇ ಡಾಕ್ಟ್ರ ಹತ್ತ ಕರ್ಕಂಡ ಹೋಗಿದ್ರ ಬದುಕುತ್ತಿದ್ದನೋ ಏನೋ, ಒಡೇರ ಮನ್ಸ ಮಾಡಲಿಲ್ಲ. ಅವನನ್ನ ಸಾಯುಕ ಬಿಟ್ರ, ಅಲ್ಲೇ ತೆಂಗಿನ ಕಾಯಿ ಹೆಕ್ಕತ್ತಿದ್ದ ನನ್ನ ಹತ್ತಿರ ಕಲ್ಲ ಕಟ್ಟಿ ಕೆರೆಗೆ ಎಸೆಯುಕೆ ಹೇಳ್ರ’.

‘ಅಲ್ಲಾ ಶಂಕ್ರ ಇದನ್ನ ಮೊದಲೇ ನಂಗ ಯಾಕ ಹೇಳಲ್ಲೇ?’

‘ಹೇಳಿದ್ರ ಒಡೇರ ಸುಟ್ಟ ಬೂದಿ ಮಾಡ್ತೆ ಅಂದ್ರ. ನೀನೂ ಅಷ್ಟೇ ಕೇಳುಕೆ ಹೊಗಬ್ಯಾಡ, ನಿನ್ನನ್ನೂ ತುಂಡ ಮಾಡಿ ಕೆರೆಗೆ ಎಸಿತ್ರ ಕಾಣ’ ಎಂದಾಗ ರುಕ್ಕು ಮತ್ತು ಮಗನಿಗೆ ಅಳುವೊಂದೇ ಗತಿಯಾಯಿತು.

ಸಂಕ್ರಾಂತಿಯ ದಿನ ಪಟೇಲರ ಮನೆಯಲ್ಲಿ ಮಗುವಿನ ನಾಮಕರಣದ ಗೌಜು. ನೆಂಟರಿಸ್ಟರು ಬರತೊಡಗಿದರು. ಸತೀಶ ಏನೂ ಆಗದವರಂತೆ ಇದ್ದರೆ ರುಕ್ಕುವಿನ ಕಣ್ಣಲ್ಲಿ ಕಣ್ಣೀರು ಹೆಪ್ಪುಗಟ್ಟಿತ್ತು. ಮುಹೂರ್ತ ನೋಡಿ ಭಟ್ಟರು ಪೂಜೆ ಮಾಡುತ್ತಿದ್ದಂತೆ ಸತೀಶ ಮರ ಹತ್ತಿದ. ಮರ ಹೆಚ್ಚು ಎತ್ತರವಿರಲಿಲ್ಲ. ಸರಾಗವಾಗಿ ಮರ ಹತ್ತಿದ ಸತೀಶ ಬೆಳೆದ ಒಂದೊಂದೇ ಕೊನೆಯನ್ನು ಸೊಂಟಕ್ಕೆ ಸಿಕ್ಕಿಸಿದ ಕತ್ತಿಯಿಂದ ಕಡಿಯುತ್ತಾ ಬಂದ.

‘ಸತೀಶ, ಇಲ್ಲೊಂದು ಕೊನೆ ಬಿಟ್ಟು ಹೋಯ್ತ, ಕಾಯಿ ಎಲ್ಲಾ ಒಣಗಿತ್ತ. ಅದೊಂದ ಕತ್ತರಿಸಿ ಬಿಡು ಕಾಂಬ’ ಪಟೇಲರೆಂದಾಗ ‘ಸೈ ಒಡೇರೇ’ ಎಂದವನ ಕೈಯಿಂದ ಕಾಯೊಂದು ಮರದಿಂದ ಸ್ವಲ್ಪವೇ ದೂರ ನಿಂತಿದ್ದ ಪಟೇಲರ ನೆತ್ತಿಯ ಮೇಲೆ ಬಿತ್ತು. ಎಲ್ಲರೂ ಹುಡುಗನ ಕೈಯಿಂದ ತೆಂಗಿನಕಾಯಿ ಜಾರಿತೆಂದು ಭಾವಿಸಿದರೆ, ರುಕ್ಕುವಿಗೆ ಮಾತ್ರ ಅನುಮಾನ.

ರಕ್ತದ ಮಡುವಿನಲ್ಲಿ ಬಿದ್ದ ಪಟೇಲರನ್ನು ಆಸ್ಪತ್ರೆಗೆ ಐದೇ ನಿಮಿಷದಲ್ಲಿ ಕರೆದುಕೊಂಡು ಹೋದರು. ಪಟೇಲರು ಬದುಕಿ ಉಳಿದು ಮನೆಗೆ ಬಂದರೂ ಮೆದುಳಿಗೆ ಪೆಟ್ಟು ಬಿದ್ದು ಚಿತ್ರ ವಿಚಿತ್ರವಾಗಿ ವರ್ತಿಸುತ್ತಿದ್ದರು. ಮೈ ಮೇಲೆ ಧ್ಯಾನ ಇಲ್ಲ. ಬಾಯಿಗೆ ಬಂದ ಮಾತುಗಳು. ಸತೀಶನನ್ನು ಮತ್ಯಾರು ತೆಂಗಿನ ಕಾಯಿ ಕೊಯ್ಯಲು ಹೇಳಲಿಲ್ಲ. ಸತೀಶ ಮತ್ತೆ ಶಾಲೆಗೆ ಹೋಗಲು ಶುರು ಮಾಡಿದ. ತಲೆಕೆಟ್ಟ ಪಟೇಲರ ಹೆಣ ಒಂದು ದಿನ ಕೆರೆಯಲ್ಲಿ ತೇಲುತ್ತಿದ್ದದನ್ನು ಊರವರು ನೋಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT