ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡವಾಳವಿಲ್ಲದ ಬಡಾಯಿ

ಬಂಡವಾಳ
Last Updated 18 ಫೆಬ್ರುವರಿ 2019, 12:16 IST
ಅಕ್ಷರ ಗಾತ್ರ

ಒಂದು ಕಾಡಿನ ಮಧ್ಯೆ ಒಂದು ದೊಡ್ಡ ಸಿಹಿ ನೀರಿನ ಕೊಳವಿತ್ತು. ಅದರ ನೀರನ್ನು ಕುಡಿದು ಕಾಡಿನ ಪಶು ಪಕ್ಷಿಗಳು ತಮ್ಮ ಬಾಯಾರಿಕೆಯನ್ನು ನೀಗಿಸಿಕೊಳ್ಳುತ್ತಿದ್ದವು. ಆ ಕೊಳದಲ್ಲಿ ಒಂದು ತರುಣ ಕಪ್ಪೆ ವಾಸಿಸುತ್ತಿತ್ತು.

ಅದಕ್ಕೆ ಎಲ್ಲಿಲ್ಲದ ಜಂಭ! ತಾನೇ ಮಹಾ ಬಲಶಾಲಿ ಎಂಬ ಪೊಳ್ಳು ನಂಬಿಕೆ ಬೇರೆ! ಕೊಳಕ್ಕೆ ನೀರು ಕುಡಿಯಲು ಬಂದ ಪಶು– ಪಕ್ಷಿಗಳ ಜೊತೆ ಕಾಲು ಕೆರೆದು ಜಗಳ ತೆಗೆಯುತ್ತಿತ್ತು. ಬಾಯಿಗೆ ಬಂದಂತೆ ಬೈಯ್ಯುತ್ತಿತ್ತು. ಈ ದುಷ್ಟ– ಕ್ಷುದ್ರ ಜಂತುವಿನ ಕೆಟ್ಟ ಮಾತುಗಳಿಗೆ ತಾವು ಏಕೆ ಬೆಲೆ ಕೊಡಬೇಕು ಎಂದು ಬಲಿಷ್ಠ ಪ್ರಾಣಿಗಳು ಉದಾಸೀನದಿಂದ ಅವು ಮಾತನಾಡದೆ ತಮ್ಮ ಪಾಡಿಗೆ ತಾವು ನೀರು ಕುಡಿದು ಸುಮ್ಮನೆ ಹೊರಟು ಹೋಗುತ್ತಿದ್ದವು. ತಾನು ಬಲಶಾಲಿಯಾಗಿದ್ದುದರಿಂದಲೇ ತನ್ನ ಬಾಯಿಗೆ ಹೆದರಿ ದೂಸರಾ ಮಾತನಾಡದೆ ಆ ಪಶು ಪಕ್ಷಿಗಳು ಬಾಲ ಮುದುರಿಕೊಂಡು ಹೋಗುತ್ತಿವೆ ಎಂದು ಭಾವಿಸಿದ ಆ ಕಪ್ಪೆ ಎದೆಯುಬ್ಬಿಸಿ ಗಹಗಹಿಸಿ ನಗುತ್ತಿತ್ತು!

ಒಂದು ಮಧ್ಯಾಹ್ನ ಆ ಕಪ್ಪೆ ಕೊಳದ ದಡದ ಬಳಿ ತಲೆ ಮೇಲೆತ್ತಿಕೊಂಡು ಕೊಳಕ್ಕೆ ಬಂದು ಹೋಗುತ್ತಿದ್ದ ಪ್ರಾಣಿ– ಪಕ್ಷಿಗಳನ್ನು ನೋಡುತ್ತಾ ಕುಳಿತುಕೊಂಡಿತ್ತು. ಪಕ್ಕದ ಪೊದೆಯೊಳಗೆ ವಾಸಿಸುತ್ತಿದ್ದ ಒಂದು ಮುಂಗುಸಿ ಬಂದು ಆ ಕಪ್ಪೆ ಕುಳಿತಿದ್ದ ಜಾಗದಲ್ಲಿ ನೀರು ಕುಡಿಯದೆ ಅಲ್ಲಿಂದ ಸ್ವಲ್ಪ ಮೇಲ್ಭಾಗಕ್ಕೆ ಹೋಗಿ ನೀರು ಕುಡಿಯ ತೊಡಗಿತು. ಅದಕ್ಕೆ ತುಂಬಾ ಬಾಯಾರಿಕೆಯಾಗಿದ್ದುದರಿಂದ ಅದು ಪಕ್ಕದಲ್ಲಿ ಕುಳಿತಿದ್ದ ಕಪ್ಪೆಯನ್ನು ಗಮನಿಸಲೇ ಇಲ್ಲ. ಮುಂಗುಸಿಯ ಈ ವರ್ತನೆಯಿಂದ ಕಪ್ಪೆಗೆ ಅಸಾಧ್ಯ ಕೋಪ ಬಂತು.

‘ಏಯ್‌, ದುರುಳ ಮುಂಗುಸಿಯೇ! ನಿನಗೆ ನಾನಾರೆಂಬುದು ಗೊತ್ತಿಲ್ಲವೇ? ಈ ಕೊಳ ನನ್ನ ಅಧೀನದಲ್ಲಿದೆಯೆಂಬುದು ನಿನಗೆ ತಿಳಿಯದೇ? ನನ್ನನ್ನು ಕಂಡೂ ಕಾಣದಂತೆ ಅಲಕ್ಷಿಸಿ, ನನ್ನ ಅನುಮತಿ ಇಲ್ಲದೆ ಕಳ್ಳನಂತೆ ನೀರು ಕುಡಿಯುತ್ತಿರುವೆಯಾ? ಎಂತಹ ಉದ್ಧಟತನ ನಿನ್ನದು? ಇನ್ನೊಮ್ಮೆ ನೀನೇನಾದರೂ ಇತ್ತ ಕಡೆ ಬಂದು ಇಂತಹ ಉದ್ಧಟತನವನ್ನು ತೋರಿದರೆ, ನಿನ್ನ ಬಾಲವನ್ನು ಕತ್ತರಿಸಿ ಬಿಟ್ಟೇನು ಹುಷಾರ್’ ಎಂದು ಉಚ್ಚ ಸ್ವರದಲ್ಲಿ ಸಿಕ್ಕಾಪಟ್ಟೆ ವಟಗುಟ್ಟಿತು.

ಮುಂಗುಸಿಯು ತನ್ನ ಬಾಯಾರಿಕೆಯನ್ನು ನೀಗಿಕೊಂಡಿತ್ತು. ಈ ಮೂರ್ಖ, ಅಹಂಕಾರಿ ಕಪ್ಪೆಯೊಡನೆ ತನ್ನದೇನು ವ್ಯವಹಾರ ಅಂದುಕೊಂಡು, ಯಾವ ಉತ್ತರವನ್ನೂ ಕೊಡದೇ ಮುಸಿ ಮುಸಿ ನಗುತ್ತಾ ತನ್ನ ಪೊದೆಯತ್ತ ಹೊರಟು ಹೋಯಿತು. ಆ ಕಪ್ಪೆಗಂತೂ ಹೇಳತೀರದಷ್ಟು ಆನಂದವಾಯಿತು. ಆ ಮುಂಗುಸಿ ನಿಜಕ್ಕೂ ತನ್ನ ಬಾಯಿಗೆ ಹೆದರಿಯೇ ಪಲಾಯನ ಮಾಡಿರಬೇಕು ಎಂದು ಭಾವಿಸಿತು ಮತ್ತು ತಾನೆಂಥಾ ಬಲಶಾಲಿ ಎಂದು ಹಿರಿ ಹಿರಿ ಹಿಗ್ಗಿತು!

ಇದಾದ ಸ್ವಲ್ಪ ಹೊತ್ತಿನ ಬಳಿಕ ಕೊಳದ ದಡದ ಬಳಿ ಪುನಃ ಏನೋ ಸದ್ದಾಯಿತು. ಕಪ್ಪೆ ತಲೆ ಎತ್ತಿ ನೋಡಿತು. ಒಂದು ದೊಡ್ಡ ನಾಗರಹಾವು ತನ್ನ ಸೀಳು ನಾಲಿಗೆಯನ್ನು ಹೊರಚಾಚಿ, ‘ಚಪ್, ಚಪ್’ ಎಂದು ಸದ್ದು ಮಾಡುತ್ತಾ ನೀರು ಕುಡಿಯುತ್ತಿತ್ತು. ಹಾವನ್ನು ನೋಡಿ ಕಪ್ಪೆ ಒಂದು ಕ್ಷಣ ಕಂಪಿಸಿತು. ಆದರೆ ಈ ಹಾವು ನೀರಿನೊಳಕ್ಕೆ ಬರಲು ಹೇಗೆ ಸಾಧ್ಯ ಎಂದು ಯೋಚಿಸಿ ಕೊಳದೊಳಕ್ಕೆ ಧುಮುಕಿತು. ಇದೀಗ ತಾನೇ ಹಾವಿನ ಕಡು ವೈರಿಯಾದ ಮುಂಗುಸಿಯನ್ನೇ ಹೆದರಿಸಿ ಕಳುಹಿಸಿದ ಧೀರ ತಾನಲ್ಲವೇ ಎಂದು ಆಲೋಚಿಸಿ, ತನ್ನನ್ನು ತಾನೇ ಸಮಾಧಾನಪಡಿಸಿಕೊಂಡಿತು. ಅದರ ಒಳಗಿನ ಅಹಂಕಾರ ತಲೆ ಎತ್ತಿತು. ಅದರ ಎದೆ ಗರ್ವದಿಂದ ಹಿಗ್ಗತೊಡಗಿತು.

ತನ್ನ ಗಂಟಲನ್ನು ಸರಿಪಡಿಸಿಕೊಂಡು ಒಳ್ಳೇ ಠೀವಿಯಿಂದ ನುಡಿಯಿತು, ‘ಏಯ್, ತುಚ್ಛ ಹಾವೇ! ನನ್ನ ವಾಸ ಸ್ಥಳದ ಬಳಿಗೆ ಬಂದು ನನ್ನ ಅನುಮತಿ ಇಲ್ಲದೇ ಕೊಳದ ನೀರನ್ನು ಕುಡಿಯುವ ಧೈರ್ಯವೇ ನಿನಗೆ? ಈ ಕೊಳದ ಅಧಿಪತಿ ನಾನು ಎನ್ನುವ ವಿಷಯ ನಿನಗೆ ತಿಳಿಯದೇ? ಬಾಲ ಮುದುರಿಕೊಂಡು ಓಡಿ ಹೋಗು, ತಡಮಾಡಿದರೆ ನಾನು ಒಳ್ಳೆಯವನಲ್ಲ ನೋಡು, ನಿನ್ನನ್ನು ನುಂಗಿ ನೀರು ಕುಡಿದುಬಿಟ್ಟೇನು, ಹುಷಾರ್...!’

ಕಪ್ಪೆಯ ಮಾತುಗಳನ್ನು ಕೇಳಿ ಆ ನಾಗರಹಾವು ತಲೆಯೆತ್ತಿ ನೋಡಿತು. ಆ ಕಪ್ಪೆಯ ಸುಪುಷ್ಟ ಶರೀರವನ್ನು ಕಂಡು ಅದರ ಬಾಯಲ್ಲಿ ನೀರೂರಿತು. ‘ಓಹ್, ನನ್ನದು ತಪ್ಪಾಯಿತು. ನೀವು ಈ ಕೊಳದ ಸರ್ವಾಧಿಕಾರಿಗಳೋ? ನನಗೆ ಈ ವಿಷಯ ತಿಳಿದೇ ಇರಲಿಲ್ಲ! ದಯವಿಟ್ಟು ಕ್ಷಮಿಸಬೇಕು! ನೀವು ಅಲ್ಲೇ ಇರಿ, ನಿಮ್ಮ ಅನುಮತಿ ಪಡೆಯಲು ಬರುತ್ತೇನೆ ಎಂದು ವ್ಯಂಗ್ಯವಾಗಿ ನುಡಿದು ನೀರೊಳಗೆ ಧುಮುಕಿ ಈಜುತ್ತಾ ಕಪ್ಪೆಯ ಕಡೆ ನುಗ್ಗಿತು. ಈಗ ಕಪ್ಪೆ ಜೀವ ಭಯದಿಂದ ನಡುಗುತ್ತಾ ನೀರಲ್ಲಿ ಮುಳುಗಿ ತಪ್ಪಿಸಿಕೊಳ್ಳಲು ನೋಡಿತು. ಆದರೆ ಮಿಂಚಿನ ವೇಗದಿಂದ ಮುನ್ನುಗ್ಗಿದ ಹಾವು ತನ್ನ ಬಲಿಷ್ಠ ದವಡೆಯೊಳಗೆ ಆ ಕಪ್ಪೆಯನ್ನು ಹಿಡಿದುಕೊಂಡು ನಿಧ–ನಿಧಾನವಾಗಿ ನುಂಗಿ ಬಿಟ್ಟಿತು!

ಬಂಡವಾಳವಿಲ್ಲದೆ ಬಡಾಯಿ ಕೊಚ್ಚುವವರ ಪಾಡೆಲ್ಲ ಇಷ್ಟೇ ತಾನೇ? ಒಳ್ಳೇ ಮಾತುಗಳನ್ನಾಡಿ ಮುಂಗುಸಿಯನ್ನು ಇನ್ನಷ್ಟು ಹೊತ್ತು ಕೊಳದ ದಡದಲ್ಲಿ ನಿಲ್ಲಿಸಿಕೊಂಡಿದ್ದರೆ, ಹಾವು ಅತ್ತ ಸುಳಿಯುತ್ತಲೇ ಇರಲಿಲ್ಲವಲ್ಲ! ಅಥವಾ ತನಗಿಂತ ಬಲಿಷ್ಠವಾದ ಹಾವು ಕೊಳಕ್ಕೆ ನೀರು ಕುಡಿಯಲು ಬಂದಿದ್ದ ಸಂದರ್ಭದಲ್ಲಿ ಆ ಕಪ್ಪೆ ತನ್ನ ಪಾಡಿಗೆ ತಾನು ಬಾಯಿ ಮುಚ್ಚಿಕೊಂಡು ತೆಪ್ಪಗಿದ್ದಿದದ್ದರೆ ತನ್ನ ಪ್ರಾಣವನ್ನು ಉಳಿಸಿಕೊಳ್ಳಬಹುದಿತ್ತಲ್ಲ!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT