ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್‌ ಎಂವಿ, ಜೋಗ ಮತ್ತು ಲಾರ್ಡ್‌ ಕರ್ಜನ್

Last Updated 9 ಮಾರ್ಚ್ 2019, 19:37 IST
ಅಕ್ಷರ ಗಾತ್ರ

ಮೈಸೂರು ಬಂಗಲೆಯ ಸುತ್ತ ಹಾಕಿದ ಇರಸಲು ತಟ್ಟಿಯನ್ನು ತಳ್ಳಿಕೊಂಡು ಗಾಳಿ ಒಳ ನುಗ್ಗುತ್ತಲಿತ್ತು. ಗಾಳಿಯ ಜೊತೆಗೆ ನೀರು ರಭಸವಾಗಿ ರಾಚುತ್ತಿತ್ತು. ಒಳಹೋಗಿ ಬರಲೆಂದು ಇರಿಸಲು ತಟ್ಟಿಯಲ್ಲಿ ಇರಿಸಿದ ಬಾಗಿಲಲ್ಲಿ ಬಂಗಲೆ ಮೇಟಿ ಜೂಜ ಕೈಯಲ್ಲಿ ಪ್ರವಾಸಿಮಂದಿರದ ವಿಸಿಟರ್ಸ್‌ ಬುಕ್ಕನ್ನು ಹಿಡಿದು ಬಹಳ ಹೊತ್ತಿನಿಂದ ನಿಂತಿದ್ದ. ಸರ್‌ ಎಂವಿ ಒಳಗೆ ಸೋಫಾದ ಮೇಲೆ ಕುಳಿತು ತಮ್ಮ ಮುಂದಿದ್ದ ಒಂದು ನಕ್ಷೆಯನ್ನ ನೋಡುವುದರಲ್ಲಿ ಮಗ್ನರಾಗಿದ್ದರು. ಅವರು ತಲೆಎತ್ತಿ ನೋಡುವುದಿಲ್ಲ. ಇವನ ಕೆಲಸ ಆಗುವುದಿಲ್ಲ ಅನ್ನುವಂತಹಾ ಸ್ಥಿತಿ. ಸರ್‌ ಎಂವಿ ಅವರನ್ನ ಕೂಗಿ ಕರೆದು ಕೆಲಸ ಮಾಡಿಸಿ ಕೊಳ್ಳುವುದುಂಟೆ? ತಾನು ಅಷ್ಟು ದೊಡ್ಡವನಲ್ಲ ಎಂಬುದು ಇವನಿಗೂ ಗೊತ್ತು. ಹೀಗಾಗಿ ಬಾಗಿಲಲ್ಲಿ ನಿಂತೇ ಇದ್ದ.

ಅಲ್ಲಿ ಕಣಿವೆಯಲ್ಲಿ ಜಲಪಾತ ಒಂದೇ ಸಮನೆ ಧುಮುಕುತ್ತಲಿತ್ತು. ಅದರ ರಭಸಕ್ಕೆ ಬಂಗಲೆ ಬಾಗಿಲು ಸಣ್ಣಗೆ ಕಂಪಿಸುತ್ತಿತ್ತು. ಅದಕ್ಕೆ ಸಿಕ್ಕಿಸಿದ್ದ ಬೀಗ ಅಲುಗಾಡುತ್ತಲಿತ್ತು. ಹೀಗೆಯೇ ಬಹಳ ಹೊತ್ತು ಕಳೆಯಿತು. ಜೂಜ ತುಸು ಅಲುಗಾಡಿದ. ಆಗ ಸರ್‌ ಎಂವಿ ಇವನನ್ನ ನೋಡಿದರು.

‘ಯಾರು?’
ಮೆದುವಾದ ಅವರ ದನಿಗೆ ಜೂಜ ರೋಮಾಂಚನಗೊಂಡ.
‘ಸರ್... ನಾನು.’
‘ಏನು?’
‘ವಿಸಿಟರ್ಸ್‌ ಬುಕ್‌ನಲ್ಲಿ ನಿಮ್ಮ ಅಭಿಪ್ರಾಯ ಬರೀ ಬೇಕಿತ್ತು.’
‘ನಾನು ಮತ್ತೂ ಎರಡು ದಿನ ಇರತೀನಿ... ಬರೆದರಾಯ್ತಲ್ಲ...’ ಸರ್‌ ಎಂವಿ ಮತ್ತೆ ತಮ್ಮ ಮುಂದಿನ ನಕ್ಷೆ ನೋಡುತ್ತ ನುಡಿದರು.
‘ಮರೆತು ಹೋಗುತ್ತೆ ಸಾರ್.’
‘ಯಾರಿಗೆ ನನಗೋ, ನಿನಗೋ?’ ಅವರು ತುಸು ನಕ್ಕರು.‘ನನಗೆ ಸಾರ್.
.. ಹೀಗೆ ಬಹಳ ಜನರ ಅಭಿಪ್ರಾಯ ಬರೆಸಿಕೊಳ್ಳಲಿಕ್ಕೆ ಮರೆತುಬಿಟ್ಟಿದೀನಿ...’

‘ಹಾಂ...’ಎಂದು ಸೋಫಾಕ್ಕೆ ಒರಗಿದರು ಸರ್‌ ಎಂವಿ. ಅವರಿಗೂ ಕೊಂಚ ವಿಶ್ರಾಂತಿ ಬೇಕಿತ್ತೇನೋ. ಕೈಚಾಚಿ ಜೂಜ ನಿಂದ ದಪ್ಪರಟ್ಟಿನ ಆ ಪುಸ್ತಕವನ್ನ ಈಸಿಕೊಂಡರು. ಹಾಗೇ ಅದನ್ನ ತಿರುವಿ ಹಾಕುತ್ತ ಅಲ್ಲಲ್ಲಿ ಓದಿದರು. ತಲೆದೂಗಿದರು. ನಕ್ಕರು. ಭೇಷ್‌ ಎಂದರು. ಕೈಗೆ ಪಾರ್ಕರ್ ಪೆನ್ ತೆಗೆದುಕೊಳ್ಳುತ್ತ ಅದರ ಹಿಂಬದಿಯನ್ನ ಸೋಫಾಕ್ಕೆ ಕುಟ್ಟುತ್ತ ಏನು ಬರೆಯಲಿ ಎಂದು ಬಾಗಿಲ ಹೊರಗೆ ಘರ್ಜಿಸುತ್ತಿದ್ದ ಜಲಪಾತವನ್ನ ನೋಡಿದರು. ಮತ್ತೆ ಅದರಲ್ಲಿ ಬರೆದ ಕೆಲವರ ಅಭಿಪ್ರಾಯವನ್ನು ಓದಿದರು. ‌

ರಾಜ ಎದೆ ನಡುಗಿಸುವ ಹಾಗೆ ಮಳೆಗಾಲದಲ್ಲಿ ಬಂದು ಸೇರಿಕೊಂಡ ಕೆಂಪುನೀರನ್ನು ಜೊತೆಗೆ ತೆಗೆದುಕೊಂಡೇ ಧುಮುಕುತ್ತಲಿದ್ದ. ಅವನ ಮೇಲೊಂದು ತುಂಡು ಮೋಡ ತೇಲುತ್ತಲಿತ್ತು. ರೋರರ್ ಪಕ್ಕದಿಂದ ಬಂದು ರಾಜನಿಗೆ ತೆಕ್ಕೆ ಬೀಳುತ್ತಲಿದ್ದ, ರಾಕೆಟ್ ಕೆಳಮುಖವಾಗಿ ಹತ್ತು ಬಾಣಗಳನ್ನ ರಾಚುತ್ತಲಿತ್ತು. ರಾಣಿ ಅಲ್ಲಿ ಬಾಗಿ ಇಲ್ಲಿ ಬಳುಕಿ ಬಂಡೆಗಳ ಮೇಲಿನಿಂದ ಜಾರಿ ಇಳಿಯುತ್ತಲಿತ್ತು. ಇದೆಲ್ಲವನ್ನೂ ಕಣ್ಣುಗಳಲ್ಲಿ ತುಂಬಿಕೊಂಡರು ಸರ್‌ ಎಂವಿ. ಓ... ಎಂದು ಉದ್ಗರಿಸಿದರು. ಏಕೆಂದರೆ ಮುಂದೆ ಮೇಟಿ ಜೂಜ ನಿಂತಿದ್ದ.

ಕೈಯಲ್ಲಿ ಪ್ರವಾಸಿಗಳ ಅಭಿಪ್ರಾಯದ ಪುಸ್ತಕ. ಅವರು ಏನನ್ನಾದರೂ ಬರೆಯಲೇಬೇಕಿತ್ತು. ಅವರು ಸಣ್ಣಗೆ ನಕ್ಕರು. ಪೆನ್ನಿನ ಹಿಂದಿರುಗಿ ಸೋಫಾದ ಮೈಗೆ ಚುಚ್ಚುತ್ತ ಅವರು ಏನು ಬರೆಯಲಿ ಎಂದು ಯೋಚಿಸಿ ಕೊನೆಗೂ ಪುಸ್ತಕದ ಪುಟದ ನಡುಭಾಗದಲ್ಲಿ ಪೆನ್ನಿನಿಂದ ಬರೆದರು.

‘ವಾಟ್ ಏ ಗ್ರೇಟ್ ಲಾಸ್ ಟು ಮೈ ಕಂಟ್ರಿ, ಮ್ಯಾನ್’ (ನನ್ನ ದೇಶಕ್ಕೆ ಎಂತಹಾ ನಷ್ಟವಾಗುತ್ತಿದೆಯಲ್ಲಪ್ಪಾ) –ಸರ್‌ ಎಂವಿ.

ತಾವು ಬರೆದುದನ್ನ ಮತ್ತೆ ಓದಿದರು. ಅಲ್ಲಿ ಇಲ್ಲಿ ಅಕ್ಷರಗಳನ್ನ ತಿದ್ದಿದರು. ಸಹಿ ಮಾಡಿ ಪುಸ್ತಕವನ್ನ ಜೂಜನ ಕೈಗಿತ್ತು ಸಣ್ಣಗೆ ನಕ್ಕರು. ಜೂಜ ಅದೊಂದು ಅತ್ಯಮೂಲ್ಯ ವಸ್ತು ಅನ್ನುವಂತೆ ವಹಿಯನ್ನ ತೆಗೆದುಕೊಂಡ. ಥ್ಯಾಂಕ್ಸ್‌ ಇತ್ಯಾದಿ ಏನೂ ಹೇಳಲು ಆತ ಹೋಗಲಿಲ್ಲ. ಅವನಿಗೆ ತನ್ನ ಸ್ಥಾನಮಾನಗಳ ಅರಿವಿತ್ತು. ಕೈ ಮುಗಿದು ಅಲ್ಲಿಂದ ಹೊರಟವ ತನ್ನ ಕೋಣೆಯ ಗೋಡೆ ಬೀರುವಿನಲ್ಲಿ ಆ ಪುಸ್ತಕವನ್ನ ಭದ್ರವಾಗಿ ಇರಿಸಿ ಒಂದು ಕೆಲಸವಾಯಿತು ಎಂಬಂತೆ ನಿಟ್ಟುಸಿರು ಬಿಟ್ಟ. ಸರ್‌ ಎಂವಿ ಅವರಿಂದ ಈ ಕೆಲಸ ಮಾಡಿಸಿ ಕೊಂಡುದ್ದಕ್ಕೆ ಅವನಿಗೆ ಸಂತಸವಾಗಿತ್ತು.
ಈ ಘಟನೆ ಆದ ಒಂದೆರಡು ದಿನಗಳಲ್ಲಿ ಸರ್‌ ಎಂವಿ ಜೋಗದಿಂದ ತಿರುಗಿಹೋದರು. ದಿವಾನರು ಬಂದಿದ್ದಾರೆಂಬ ಗೌಜಿ ಗದ್ದಲ ಕಡಿಮೆ ಅಗಿ ಜೋಗ ಜಲಪಾತದ ಸುತ್ತ ಒಂದು ಬಗೆಯ ಮೌನ ನೆಲೆಸಿತು.

***

ಜಲಪಾತ ಧುಮುಕುತ್ತಲೇ ಇತ್ತು. ಇಡೀ ವಾತಾವರಣ ಮಂಜಿನಿಂದ ತುಂಬಿ ಕೊಂಡಿತ್ತು. ಸುತ್ತಲಿನ ಮರಗಳು, ಪೊದೆಗಳು, ಗಿಡಬಳ್ಳಿ ಯಾವುದೂ ಕಾಣುತ್ತಿರಲಿಲ್ಲ. ಹಕ್ಕಿಗಳ ಗದ್ದಲ ಇರಲಿಲ್ಲ. ದೂರದಲ್ಲಿ ಅದಾರೋ ಕಾಣಿಸಿಕೊಂಡರೂ ಅವರು ಬಳಿ ಬಂದ ನಂತರವೇ ಯಾರು ಎಂಬುದು ಅರಿವಾಗುತ್ತಿತ್ತು. ಹೀಗೆ ಬಂದವನು ಮ್ಯಾನೇಜರ್ ಕೆಂಪಣ್ಣ. ಮೈಸೂರಿಗೆ ಹತ್ತಿರದ ಶಿವನಸಮುದ್ರದಲ್ಲಿ ನೀರಿನಿಂದ ವಿದ್ಯುತ್ತನ್ನ ತಯಾರಿಸಲು ಪ್ರಾರಂಭಿಸಿದ ನಂತರ ಶರಾವತಿಯಲ್ಲಿ ಕೂಡ ಹಾಗೆಯೇ ವಿದ್ಯುತ್ ತಯಾರಿಸಬಹುದೇ ಎಂದು ಪರಿಶೀಲಿಸಲು ಒಂದು ಕಚೇರಿಯನ್ನ ಮಹಾರಾಜರ ಸರ್ಕಾರ ಇಲ್ಲಿ ತೆರೆದಿತ್ತು. ಅದರ ಮ್ಯಾನೇಜರ್ ಕೆಂಪಣ್ಣ.

ಕೆಂಪಣ್ಣ ಮಂಜಿನೊಳಗಿನಿಂದ ಮೂಡಿ ಬಂದವನಂತೆ ಬಂದು ಎದಿರು ನಿಂತ. ಆಗ ಜೂಜನಿಗೆ ತಟ್ಟನೆ ನೆನಪಾದದ್ದು ಸರ್‌ ಎಂವಿ ಅವರ ಹತ್ತಿರ ತಾನು ಅವರ ಅಭಿಪ್ರಾಯವನ್ನ ಪಡೆದುಕೊಂಡದ್ದು. ಆತ ಥಟ್ಟನೆ ಅಡುಗೆ ಮನೆ ಪ್ಲ್ಯಾಟ್ ಫಾರಂನಿಂದ ಮುಂದೆ ಹಾರಿ ‘ಸಾರ್, ಸಾಹೇಬ್ರಿಂದ ಅವರ ಅಭಿಪ್ರಾಯಾನ ಬರೆಸಿಕೊಂಡೆ’ ಎಂದ ಸಂಭ್ರಮದಿಂದ. ಈ ಕೆಲಸ ಹಲವರಿಂದ ಮಾಡಿಸಿಕೊಂಡಿಲ್ಲ ಅನ್ನುವ ಕಾರಣಕ್ಕೆ ಬಹಳ ಸಾರಿ ಕೆಂಪಣ್ಣನಿಂದ ಬೈಸಿಕೊಂಡಿದ್ದ ಜೂಜ.

‘ಮೇಟಿ ಅಂದ್ರೆ ಅಡುಗೆ ಮಾಡಿ ಹಾಕೋದು ಮಾತ್ರ ಅಲ್ಲ. ಇಲ್ಲಿನ ವ್ಯವಸ್ಥೆ ಬಗ್ಗೆ, ಊಟ ತಿಂಡಿ ಬಗ್ಗೆ, ಇತರೇ ವಿಷಯಗಳ ಬಗ್ಗೆ ಅವರ ಅಭಿಪ್ರಾಯ ಏನು ಎತ್ತ ಅಂತ ರೈಟಿಂಗ್‌ನಲ್ಲಿ ಪಡೀಬೇಕು...’ ಎಂದಿದ್ದ ಕೆಂಪಣ್ಣ. ಈ ಕೆಲಸವನ್ನ ತಾನು ಮಾಡಿದ್ದೆನಲ್ಲ.

‘ಹೌದಾ.. ಏನಂತ ಬರೆದಿದ್ದಾರೆ ಸಾಹೇಬ್ರು?’ ಎಂದು ಕೇಳಿದ ಕೆಂಪಣ್ಣ.

‘ಅದು ನಿಮಗೇ ಗೊತ್ತಾಗುತ್ತೆ ನೋಡಿ’ ಗೋಡೆ ಬೀರುವಿನಿಂದ ಆ ವಹಿ ತೆಗೆದು ಕೆಂಪಣ್ಣನ ಕೈಗಿತ್ತ ಜೂಜ. ಕೆಂಪಣ್ಣನಿಗೆ ಸರ್‌ ಎಂವಿ ಬರೆದದ್ದು ಮೊದಲು ಅರ್ಥವಾಗಲಿಲ್ಲ. ಸಾಹೇಬರು ಶಿವನಸಮುದ್ರದಲ್ಲಿ ಕೆಲಸ ಮಾಡಿದವರು ಅನ್ನುವುದು ನೆನಪಿಗೆ ಬಂದು ಕ್ರಮೇಣ ನೀರಿನ ಶಕ್ತಿಯ ಬಗ್ಗೆ ಅವರು ಬರೆದಿರಬೇಕು ಅನಿಸಿ ಆ ಒಂದು ಸಾಲು ಸ್ವಲ್ಪಸ್ವಲ್ಪ ಅರ್ಥವಾಯಿತು. ತನಗೆ ಅರ್ಥವಾದುದನ್ನ ಕೆಂಪಣ್ಣ ಜೂಜನಿಗೂ ಕೊಂಚ ಹೇಳಿದ.

ಸರ್‌ ಎಂವಿ ಬರೆದುದನ್ನ ಓದಿ ಅರ್ಥವಿಸಿಕೊಂಡೆ ಎಂಬ ಅಭಿಪ್ರಾಯ ಮನಸ್ಸಿನಲ್ಲಿ ಮೂಡಿದ ನಂತರ ಈ ಬಗ್ಗೆ ಲಾರ್ಡ್‌ ಕರ್ಜನ್ ಬರೆದದ್ದು ನೆನಪಿಗೆ ಬಂದಿತು ಕೆಂಪಣ್ಣನಿಗೆ. ಅದು ಸರ್‌ ಎಂವಿ ಬರೆದ ಹಾಗೆ ಒಂದು ಸಾಲಲ್ಲ ಒಂದು ಪತ್ರ. ಶಿವನ ಸಮುದ್ರದಲ್ಲಿ ವಿದ್ಯುತ್ ಉತ್ಪಾದನೆ ಪ್ರಾರಂಭವಾದ ಮೇಲೆ ಕೆಲ ಇಂಗ್ಲಿಷ್ ಕಂಪನಿಗಳು ತಾವಾಗಿ ಮುಂದೆ ಬಂದು ಜೋಗದ ಸುತ್ತಮುತ್ತ ಅದೇ ಕೆಲಸ ಮಾಡಲು ಸರ್ಕಾರದ ಅನುಮತಿ ಕೇಳಿದ್ದವು. ಸರ್ಕಾರ ಈ ಕಡತಗಳನ್ನ ವೈಸರಾಯ್ ಆಗಿದ್ದ ಲಾರ್ಡ್‌ ಕರ್ಜನ್‌ಗೆ ಅಭಿಪ್ರಾಯಕ್ಕಾಗಿ ಕಳುಹಿಸಿತು. ಈ ಸೂಚನೇ ಬಂದದ್ದೇ ಕರ್ಜನ್ ಜೋಗಕ್ಕೆ ಭೇಟಿ ನೀಡಿದರು.

ಮುಂಬಯಿಯಲ್ಲಿ ಹಡಗು ಹತ್ತಿ ಅವರು ಹೊನ್ನಾವರಕ್ಕೆ ಬಂದರು. ಅಲ್ಲಿಂದ ಕುದುರೆ ಸಾರೋಟಿನಲ್ಲಿ ಜೋಗಕ್ಕೆ ಬಂದ ಅವರ ಪ್ಲಟೂನ್ ಅವರನ್ನ ಹಿಂಬಾಲಿಸಿತು.

ಜೋಗ್ ಜಲಪಾತದ ನೆತ್ತಿಯ ಮೇಲೆ ದೊಡ್ಡ ದೊಡ್ಡ ಮರದ ದಿಮ್ಮಿಗಳನ್ನ ಹಾಕಿ, ಮಣ್ಣು ತುಂಬಿಸಾರೋಟು ರಸ್ತೆಯನ್ನ ಮಾಡಲಾಯಿತು. ಆಳಿಗೊಬ್ಬರಂತೆ ನಿಂತು ಜನ ಕರ್ಜನ್ ಸಾಹೇಬರನ್ನ ಸ್ವಾಗತಿಸಿದರು. ಉದ್ದಕ್ಕೂ ತೋರಣಗಳು ಕಂಗೊಳಿಸಿದವು. ಜಲಪಾತದ ಬಳಿ ಬರುತ್ತಿದ್ದಂತೆಯೇ ಎದುರಾದ ಗುಡ್ಡ ಒಂದರ ಬಳಿ ದೊಡ್ಡದೊಂದು ಹಸಿರೆಲೆ ಚಪ್ಪರ ಹಾಕಲಾಗಿತ್ತು.

‘ವೆಲ್‌ಕಮ್ ಟು ಲಾರ್ಡ್‌ ಕರ್ಜನ್’ ಎಂಬ ಒಂದು ಬರಹ ಅಲ್ಲಿ ಕರ್ಜನ್ ಅವರನ್ನ ಸ್ವಾಗತಿಸಿತು. ಆ ಸ್ವಾಗತ ಕಮಾನು ನೋಡಿದ್ದೇ ಕರ್ಜನ್ ಅತ್ತ ತಿರುಗಿ ಆಯಿತು. ಹತ್ತು ಮೆಟ್ಟಿಲು ಏರಲಿಕ್ಕಿಲ್ಲ ಹತ್ತಿರದ ಕಣಿವೆಯಲ್ಲಿ ಧುಮುಕುವ ಜಲಪಾತ ಅವರ ಕಣ್ಣಿಗೆ ಬಿದ್ದು ಅವರು ಅಲ್ಲಿಯ ಆಸನದ ಮೇಲೆ ಕುಳಿತು ಮೈ ಮರೆತರು. ಹಸಿರು ಕಾನನದ ನಡುವೆ, ಹಲವಾರು ಗುಡ್ಡ, ಕಣಿವೆಗಳ ನಡುವೆ ನೊರೆ ನೊರೆಯಾಗಿ ಬೀಳುತ್ತಲಿತ್ತು ಜಲಪಾತ. ರಾಶಿ ರಾಶಿ ನೀರನ್ನ ಮೊಗೆದಂತೆ, ಬಿಳಿಯ ಹಾಲಿನ ಕಡಲ ಬಾಗಿಲು ತೆರೆದಂತೆ, ಹಸಿರು ಕಾಡಿನ ನಡುವೆ ಅಚ್ಚ ಬಿಳಿಯ ರೇಶಿಮಯ ಒಂದು ಶುಭ್ರ ಬಟ್ಟೆಯನ್ನ ತೇಲಿ ಬಿಟ್ಟಂತೆ, ಕಾನನ, ಗುಡ್ಡ, ಮೇಡು, ಪೊದೆ ಬಳ್ಳಿ ಮೋಡ ಅಕಾಶ, ಎಲ್ಲವೂ ಈ ನೋಟವನ್ನ ಮೈಮರೆತು ನೋಡುತ್ತಿರಲು ಇಲ್ಲಿ ತಾನೊಬ್ಬಳೇ ಜೀವಂತ ಅನ್ನುವ ಹಾಗೆ ಜಲಪಾತ ಧುಮುಕುತ್ತಿತ್ತು.

ಲಾರ್ಡ್‌ ಕರ್ಜನ್ ಕುಳಿತಲ್ಲಿಂದ ಏಳಲಿಲ್ಲ. ಗಂಟೆಗಳು ಉರುಳಿದವು. ಅವರ ಕಟ್ಲರಿಯವರು ಬಿಸಿ
ಬಿಸಿ ಪಾನೀಯ ಮಾಡಿ ಅವರಿಗೆ ತಂದುಕೊಟ್ಟರು. ಈತ ಕಣ್ಣಿನ ನೋಟಕ್ಕೆ ನಾಲಿಗೆಯ ರುಚಿ ಸೇರಿಸಿ ಕುಡಿಯುವವರಂತೆ ಒಂದೊಂದೇ ಸಿಪ್ಪನ್ನ ಸವಿಯುತ್ತ ಜಲಪಾತವನ್ನ ನೋಡಿಯೇ ನೋಡಿದರು.

ಮಾರನೇ ದಿನವೂ ಅವರು ಅಲ್ಲಿಗೆ ಬಂದರು, ಸಾಲಲಿಲ್ಲ. ಜಲಪಾತವನ್ನ ನೋಡಬಹುದಾದ ಇನ್ನೂ ಕೆಲ ಸ್ಥಳಗಳಿಗೂ ಅವರು ಹೋಗಿ ಬಂದರು. ಜಲಪಾತ ಅಲ್ಲಿಂದೆಲ್ಲ ಇನ್ನೂ ಅದ್ಭುತವಾಗಿ ಕಂಡಿತು.

ಸಂಜೆ ಆಗುತ್ತಿರಲು ಅವರು ತಮ್ಮ ಬಿಡದಿ ಮನೆಗೆ ಬಂದರು. ಅಲ್ಲಿ ಬಂದ ಕೂಡಲೇ ಅವರು ಮಾಡಿದ ಮೊದಲ ಕೆಲಸ ಸರ್ಕಾರಕ್ಕೆ ಒಂದು ಪತ್ರ ಬರೆಸಿದ್ದು. ಶರಾವತಿ ನದಿಯ ಪರಿಚಯ ಇತ್ಯಾದಿ ಮಾಡಿಕೊಟ್ಟು, ತಮಗೆ ಇತ್ತೀಚೆಗೆ ಶರಾವತಿ ನೀರನ್ನ ವಿದ್ಯುತ್ ಶಕ್ತಿಯ ಉತ್ಪಾದನೆಗೆ ಬಳಸಿಕೊಳ್ಳಬಹುದೇ ಎಂಬುದನ್ನ ಪರಿಶೀಲಿಸುವಂತೆ ಕೋರಿ ಬಂದ ಪತ್ರವನ್ನ ಪ್ರಸ್ತಾಪಿಸಿ, ‘ಶರಾವತಿ ನದಿಯಿಂದ ವಿದ್ಯುತ್ತನ್ನ ಉತ್ಪಾದಿಸಲು ಕೆಲ ಆಂಗ್ಲ ಕಂಪನಿಗಳು ಸಲ್ಲಿಸಿದ ಅರ್ಜಿಯನ್ನ ಪರಿಶೀಲಿಸಿದ್ದೇನೆ’ ಎಂದು ಹೇಳಿ, ‘ಇದೊಂದು ಮೂರ್ಖ ಯೋಜನೆ. ಈ ಕೆಲಸ ಕಾರ್ಯಗತಗೊಳಿಸಿದ್ದೇ ಆದರೆ ಮುಂದಿನ ದಿನಗಳಲ್ಲಿ ವಿಶ್ವವಿಖ್ಯಾತವಾದ ಜಲಪಾತ ಸಂಪೂರ್ಣವಾಗಿ ನಾಶವಾಗುತ್ತದೆ. ಒಂದು ವೇಳೆ ಯಾರಿಗಾದರೂ ಈ ಯೋಜನೆಗೆ ಅನುಮತಿ ನೀಡಬೇಕು ಎಂದೆನಿಸಿದರೆ, ದಯವಿಟ್ಟು ಅವರು ಇಲ್ಲಿಗೆ ಬಂದು ಜಲಪಾತವನ್ನ ಒಂದು ಬಾರಿ ಕಣ್ಣಾರೆ ನೋಡಿ ಈ ಬಗ್ಗೆ ನಿರ್ಧಾರ ಕೈಕೊಳ್ಳ ಬೇಕು ಎಂದು ವಿನಂತಿ ಮಾಡಿಕೊಳ್ಳುತ್ತೇನೆ’ ಎಂದು ಬರೆಸಿ, ತಮ್ಮ ಖಾಸಾ ಸಹಾಯಕ ಉಡ್ಸಟಕ್ ಟೈಪರೇಟರಿನ ಮೇಲೆ ಟೈಪ್ ಮಾಡಿ ತಂದ ಪತ್ರವನ್ನ ಮತ್ತೆ ಮತ್ತೆ ಓದಿ ಕರ್ಜನ್ ಸಹಿ
ಮಾಡಿದರು.

‘ಈ ಪತ್ರ ಕೂಡಲೇ ಸರ್ಕಾರಕ್ಕೆ ತಲುಪಬೇಕು ಅನ್ನುವುದು ನನ್ನ ಇರಾದೆ’ ಎಂದು ತಮ್ಮ ಖಾಸಾ ಸಹಾಯಕನಿಗೆ ತಿಳಿಸಲು ಕರ್ಜನ್ ಮರೆಯಲಿಲ್ಲ. ಮುಂದಿನ ಕೆಲ ದಿನಗಳಲ್ಲಿ ಲಾರ್ಡ್‌ ಕರ್ಜನರ ಪತ್ರದ ಸಾರಾಂಶ ಮೈಸೂರು ಸರ್ಕಾರಕ್ಕೆ, ಸರ್‌ ಎಂವಿ ಅವರಿಗೆ ತಲುಪದೆ ಇರಲಿಲ್ಲ. ಇದು ಅಲ್ಲಿ ಇಲ್ಲಿ ಚರ್ಚೆಗೆ ಒಳಗಾಯಿತು ಕೂಡ. ಆದರೂ, ಇಲ್ಲಿ ವಿದ್ಯುತ್ ಉತ್ಪಾದನೆಯ ಬಗ್ಗೆ ಸರ್ಕಾರದ ಯತ್ನ ಮುಂದುವರಿಯಿತು. ಇಂತಹ ಒಂದು ಕಾರ್ಯದ ಪರಿಶೀಲನೆಗೇ ಸರ್‌ ಎಂವಿ ಇಲ್ಲಿಗೆ ಬಂದಿದ್ದು.

ಕೆಂಪಣ್ಣನ ಮನಸ್ಸಿನಲ್ಲಿ ಈ ಎಲ್ಲ ವಿಷಯಗಳೂ ಬಂದುಹೋದವು. ಲಾರ್ಡ್‌ ಕರ್ಜನ್ ಇಲ್ಲಿ ಬಂದಾಗ ಬರೆದ ಪತ್ರ ಇತ್ಯಾದಿ ತನ್ನ ಬಳಿ ಇರುವ ಕಡತದಲ್ಲಿ ಜೋಪಾನವಾಗಿ ಇರಿಸಿರುವುದು ಅವನ ನೆನಪಿಗೆ ಬಂದು ಆತ ತನ್ನ ಕಚೇರಿಗೆ ಬಂದು ಆ ಕಡತವನ್ನ ಎದಿರು ಇರಿಸಿಕೊಂಡು ಕುಳಿತ.

ಲಾರ್ಡ್‌ ಕರ್ಜನ್ ಸರ್ಕಾರಕ್ಕೆ ಬರೆದ ಪತ್ರ ಅವನ ಎದುರಿತ್ತು. ಆ ಪತ್ರದ ಕೆಲ ಸಾಲುಗಳನ್ನ ಆತ ಕುತೂಹಲದಿಂದ ಓದಿದ ‘...ಈ ಕೆಲಸವನ್ನ ಕಾರ್ಯಗತಗೊಳಿಸಿದ್ದೇ ಆದರೆ ಮುಂದಿನ ದಿನಗಳಲ್ಲಿ ವಿಶ್ವವಿಖ್ಯಾತವಾದ ಈ ಜಲಪಾತ...’ಮುಂದಿನ ಶಬ್ದಗಳನ್ನ ಅವನು ಓದಲು ಹೋಗಲಿಲ್ಲ. ಆದರೆ ನಿಧಾನವಾಗಿ ಅವನ ಮುಖ ಕಪ್ಪಿಟ್ಟಿತು.

ಮುಂದೆ ನಿಂತ ಜೂಜನನ್ನ ನೋಡುತ್ತ ಅವನೆಂದ ‘ಜೂಜ, ಈತ ಈ ದೇಶದವನಲ್ಲ... ಇಲ್ಲಿಯ ನದಿ, ಮರ ಗಿಡಗಳ ಬಗ್ಗೆ ತಿಳಿದವನಲ್ಲ. ಆದರೆ, ಎಂತಹ ನಿಸರ್ಗ ಪ್ರೇಮ. ಜೊತೆಗೆ ಅವನು ಹೇಳುವ ಈ ಮಾತು. ಜೋಗ್ ಜಲಪಾತ ಮಾಯವಾಗುವುದು ಸತ್ಯವಾಗಲೂಬಹುದು...’ ನಿರುತ್ಸಾಹದಿಂದ ಎದ್ದ ಕೆಂಪಣ್ಣ ಆ ಕಡತವನ್ನ ಬೀರುವಿನಲ್ಲಿ ಇರಿಸಿದ. ಹಾಗೇ ಪ್ರವಾಸಿಮಂದಿರದಿಂದ ಹೊರ ಬಂದು ಜಗಲಿಯ ಮೇಲೆ ನಿಂತಾಗ ಕವಿದ ಮಂಜು ಕಾಣೆಯಾಗಿ ಬಿರುಬಿಸಿಲಿಗೆ ಜಲಪಾತ ಮೈಯೊಡ್ಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT