ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತ್ಯಾಗ ಎಂಬ ಅಮೃತ

ತತ್ವಜ್ಞಾನ
Last Updated 7 ಜೂನ್ 2019, 19:30 IST
ಅಕ್ಷರ ಗಾತ್ರ

‘‘ಗೀತೆಯ ಸಾರಾಂಶವೇ ತ್ಯಾಗ. ಹತ್ತಾರು ಬಾರಿ ‘ಗೀತಾ, ಗೀತಾ’ ಎನ್ನುತ್ತಿದ್ದರೆ ಅದು ತ್ಯಾಗಿ ತ್ಯಾಗಿ ಎಂದು ಕೇಳಲಾರಂಭಿಸುತ್ತದೆ” ಎಂದಿದ್ದಾರೆ ಶ್ರೀರಾಮಕೃಷ್ಣ ಪರಮಹಂಸರು. ತ್ಯಾಗ ಎಂಬ ಮೌಲ್ಯವನ್ನು ಗೀತೆಯೊಂದೇ ಅಲ್ಲದೆ ಬಹುತೇಕ ಎಲ್ಲ ಶಾಸ್ತ್ರಗ್ರಂಥಗಳು ಎತ್ತಿಹಿಡಿದಿವೆ. ಅದು ನಿಜದ ಮನುಷ್ಯರ ಲಕ್ಷಣ. ತ್ಯಾಗಲೇಪವಿಲ್ಲದ ವ್ಯಕ್ತಿತ್ವ ಪಶುಸಮಾನ. ಪಶುಗಳಲ್ಲಿ ಡಾರ್ವಿನ್ ಹೇಳುವಂತೆ ಬಲಾಢ್ಯರು ಮಾತ್ರ ಬದುಕುತ್ತಾರೆ. ಆದರೆ ಮನುಷ್ಯರಲ್ಲಿ ಬಲವನ್ನು ಶಾರೀರಿಕ ಮಟ್ಟಕ್ಕಿಂತ ಹೃನ್ಮನಗಳ, ಭಾವನೆಗಳ ಎತ್ತರದ ಮೂಲಕ ಅಳೆಯಲಾಗುವುದು. ಹೀಗಾಗಿ ಒಂದು ಪಾರಿವಾಳವನ್ನು ಉಳಿಸಲು ತನ್ನ ಮೈಯನ್ನೇ ತ್ಯಾಗಮಾಡಲು ಸಿದ್ಧನಾದ ಶಿಬಿ ಚಕ್ರವರ್ತಿ ನಮಗೆ ಮಾದರಿ, ಸ್ವತಃ ಸಾವಿನ ಅಂಚಿನಲ್ಲೂ ನೀರಿನ ತತ್ತಿಯನ್ನು ಗಾಯಗೊಂಡ ಯೋಧನಿಗೆ ನೀಡಿ ಪ್ರಾಣ ಬಿಡುವ ಸರ್ ಫಿಲಿಪ್ ಸಿಡ್ನಿ ನಮಗೆ ಮಾದರಿ, ಕೊಲ್ಲುವನಿಗಿಂತ ಕಾಯುವನೇ ಹೆಚ್ಚು ಎಂಬ ಬುದ್ಧ ನಮಗೆ ಮಾದರಿ. ಸ್ವಂತಕ್ಕಾಗಲೀ ಜಗತ್ತಿನ ಹಿತಕ್ಕಾಗಲೀ ಸಂಕುಚಿತತೆಯನ್ನು ಮೀರಿ ವೈಶಾಲ್ಯದತ್ತ ನಡೆವ ಹೆಜ್ಜೆಯೇ ತ್ಯಾಗ. ಬಹುಜನ ಹಿತಾಯ ಬಹುಜನ ಸುಖಾಯದ ಆಧಾರದ ಮೇಲೆ ನಮ್ಮ ಬದುಕು ಯಜ್ಞವಾಗಬೇಕು, ನಾವೇ ಸಮಿತ್ತಾಗಬೇಕು ಎಂಬುದೇ ಇಲ್ಲಿನ ತತ್ತ್ವ.

ತ್ಯಾಗಿಯಾಗಬೇಕು ಎಂದ ಕೂಡಲೇ ನಮ್ಮ ಬಳಿ ತ್ಯಾಗ ಮಾಡಲು ದೊಡ್ಡ ಸಂಪತ್ತು, ರಾಜ್ಯ, ಆಸ್ತಿ ಇರಬೇಕು ಎಂದಲ್ಲ. ತನ್ನ ಬಳಿ ಏನಿದೆಯೋ ಅದನ್ನೇ ಸಂತೋಷದಿಂದ ಮತ್ತೊಬ್ಬರ ಹಿತಕ್ಕಾಗಿ ನೀಡಬಲ್ಲವನೇ ತ್ಯಾಗಿ.

ರಾಮಕೃಷ್ಣಾಶ್ರಮದ ಎದುರು ಒಬ್ಬ ಭಿಕ್ಷುಕಿ. ಆಶ್ರಮಕ್ಕೆ ಬರುವ ಭಕ್ತರಿಂದ ಬೇಡುವ ಕಾಯಕ. ಸಂಜೆ ಭಜನೆ ಮುಗಿದು ಭಕ್ತರೆಲ್ಲ ತೆರಳಿದ ಮೇಲೆ ಇನ್ನೇನು ದೇವಸ್ಥಾನದ ಬಾಗಿಲು ಮುಚ್ಚಲಿದೆ, ಅರ್ಧ ಮುಚ್ಚಿದೆ ಎಂದಾಗ ಆಕೆ ಓಡುತ್ತಾಳೆ, ಅಂದಿನ ಭಿಕ್ಷೆಯಲ್ಲಿ ತನ್ನ ಅಂದಿನ ಖರ್ಚಿಗೆ ಬೇಕಾದಷ್ಟನ್ನು ಮಾತ್ರ ಉಳಿಸಿಕೊಂಡು ಉಳಿದುದನ್ನು ಹುಂಡಿಗೆ ಸುರಿದು ಆತುರಾತುರವಾಗಿ ಕೈ ಮುಗಿದು ಬಂದಷ್ಟೇ ವೇಗವಾಗಿ ಹಿಂದಿರುಗಿ ಓಡಿಬಿಡುತ್ತಾಳೆ. ಈ ದೃಶ್ಯವನ್ನು ಒಂದು ದಿನವಲ್ಲ, ಒಂದು ತಿಂಗಳಲ್ಲ, ಇದನ್ನು ವರ್ಷಗಟ್ಟಲೆ ಗಮನಿಸಿದ ಸ್ವಯಂಸೇವಕರಿದ್ದಾರೆ.

ತ್ಯಾಗದಿಂದ ಅಮೃತತ್ವವನ್ನು ಪಡೆಯಬಹುದೆನ್ನುತ್ತದೆ ಉಪನಿಷತ್ತು (ನ ಕರ್ಮಣಾ, ನ ಪ್ರಜಯಾ, ನ ಧನೇನ, ತ್ಯಾಗೇನೈಕೇ ಅಮೃತತ್ವ ಮಾನಷುಃ; ನಾವು ಮಾಡುವ ಕೆಲಸದಿಂದಲ್ಲ, ನಮ್ಮ ಹಿಂದೆ ಬರುವ ಜನರ ಗುಂಪಿನಿಂದಲ್ಲ ಅಥವಾ ನಾವು ಅರ್ಜಿಸಿದ ಸಂಪತ್ತಿನಿಂದಲ್ಲ, ತ್ಯಾಗದಿಂದ ಮಾತ್ರ ಅಮೃತತ್ವ ದೊರೆಯುತ್ತದೆ). ಮಹಾತ್ಯಾಗಗಳಿಂದ ಮಾತ್ರ ಮಹಾಕಾರ್ಯಗಳು ಸಾಧ್ಯ ಎನ್ನುತ್ತಾರೆ ಸ್ವಾಮಿ ವಿವೇಕಾನಂದರು.

ದಧೀಚಿಯ ತ್ಯಾಗ ಇಂದ್ರನ ವಜ್ರಾಯುಧವಾಯಿತು, ಶ್ರೀರಾಮನ ರಾಜ್ಯತ್ಯಾಗ ಪಿತೃವಾಕ್ಯ ಪರಿಪಾಲನೆಗೆ ಲೋಕೋತ್ತರವಾಯಿತು. ಏಸುಕ್ರಿಸ್ತನ ದೇಹತ್ಯಾಗ ಕ್ರಿಶ್ಚಿಯನ್ನರ ಶ್ರದ್ಧೆಯ ಬುನಾದಿಯಾಯಿತು. ಸಿದ್ಧಾರ್ಥನ ತ್ಯಾಗದಿಂದ ಬುದ್ಧನ ನಿರ್ಮಾಣವಾಯಿತು. ತ್ಯಾಗ ಸಾರ್ವಜನಿಕ ಬದುಕಿನ ಸೌರಭವಾಗಿ ಅರಳಲು ಇದು ಸಕಾಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT