ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇವರು ಬಂದ ದಾರಿ ಬಿಡಿ

Last Updated 6 ಜುಲೈ 2019, 19:31 IST
ಅಕ್ಷರ ಗಾತ್ರ

“ಗಂಗವ್ವ... ಗಂಗವ್ವ... ಅ...ಅ... ನಿನ್ ಗಂಡನ್ನಾ ಪೊಲೀಸ್ನೋರು ಹಿಡ್ಕೊಂಡೋದ್ರು...” ಒಂದೇ ಉಸಿರಿಗೆ ದಮ್ಮು ಕಟ್ಟಿಕೊಂಡು ಓಡೋಡಿ ಬಂದ ಫಾರೆಸ್ಟರ್‌ ಆಂಜನಪ್ಪ ವಿಷಯ ಮುಟ್ಟಿಸಿದವನೇ ಜಗುಲಿಗೊರಗಿ ಕುಸಿದು ಕುಂತುಬಿಟ್ಟ.ಏನಾತೋ... ? ಎತ್ತಾತೋ... ? ಮೂರು ಹೆಜ್ಜೆಗೆ ಮುಗಿದು ಹೋಗುವ ಗುಡಿಸಲಿನಿಂದ ಓಣಿಗೆ ಜಿಗಿದ ಗಂಗವ್ವ ಕಂಗಾಲಾಗಿ ‘ಏನಣ್ಣ. ನನ್ನ ಗಂಡನ್ನಾ ಯಾಕಿ ಹಿಡ್ಕೊಂಡೋದ್ರು ಸೂಳೆಮಕ್ಳು ..., ಅಂತದ್ದೇನು ಮಾಡ್ದ ನನ್ನ ಗಂಡ? ಬೆಳಿಗ್ಗೆನೆ ರಂಪಿಗೆ, ಉಳಿ ಕೈಚೀಲ ತಗೊಂಡು ಹೋದೋರು, ..ಏನಾತು ಹೇಳಣ್ಣ...” ಗಂಗವ್ವನ ಕಣ್ಣ ಕೆರೆಯ ಕೋಡಿ ಬಿದ್ದು ಕೇರಿ- ಕೊಂಪೆನೆಲ್ಲಾ ಒಂದು ಮಾಡಿ ಬಾರಾಡತೊಡಗಿದಳು.

ನೀರು ಕುಡಿದು ಸುಧಾರಿಸಿಕೊಂಡು ಕುಂತಿದ್ದ ಫಾರೆಸ್ಟರ್‌ ಆಂಜಿನಪ್ಪನ ಮುಖದಲ್ಲಿ ಭಯ ಹೋಗಿರಲಿಲ್ಲ.“ನಾನು.. ಉ... ಗಾರ್ಡನ್‍ ಏರಿಯಾ ಕಡಿಕೋಗಿ ಸಿವನೇ ಅಂತ ಒಂದು ಸೀಸ ಹೆಂಡ ಕುಡ್ಕೊಂಡು ವಿನಾಯಕ ಟಾಕೀಸ್ ತವ ಇರೋ ಬಾಲನ ಚಪ್ಲಿ ಪೆಟ್ಟಿಗಿಗೆ ಬಂದು ಕುಂತ್ಕೊಂಡಿದ್ದೇ ಕಣವ್ವ, ನಾಗಣ್ಣ ಚಪ್ಲಿ ಹೋಲಿತಿದ್ದ ಪಾಪ..!, ‘ಬಾ ನಾಗಣ್ಣ ಹೊತ್ತಾತು. ಮನೀಕಡಿಕೆ ಹೋಗಾನ’ ಅಂದೆ. ‘ಇರ್ಲಾ ಆಂಜಿನಿ, ಇನ್ನೊಂದೆರೆಡು ಜೊತೆ ಅವೆ ಹೊಲ್ದಾಕಿ ಬತ್ತಿನಿ’ ಅಂದ ನಾಗಣ್ಣ. ಅಷ್ಟರೊಳಗೆ ಅದೆಲ್ಲಿದ್ರೋ ಕಣವ್ವ, ಈ ಪಾಪ್ರುನನ್ಮಕ್ಳು ಪೊಲೀಸ್ನೋರು! ಬಂದ್ ಬಂದೋರೆ ಅಂಗಡಿ, ಮುಂಗಟ್ಟನ್ನೆಲ್ಲಾ ಬಾಗ್ಲಾಕ್ಸಿ ಸಿಕ್ಕುಸಿಕ್ಕೊದೋರ‍್ನೆಲ್ಲಾ ಬಡಿದು ಓಡಾಡುಸುದ್ರು. ಕೈಗೆ ಸಿಕ್ಕಿದೋರ‍್ನೆಲ್ಲಾ ವ್ಯಾನಿಗೆ ತುಂಬ್ಕೋಂಡ್ ಹೋದ್ರು. ನಾಗಣ್ಣನ್ನ ಕೈಯಾಗಿದ್ದ ರಂಪಿಗೆ ಸಮೇತ ಹಿಡ್ಕೊಂಡ್ ಓಗ್ಬುಟ್ರು ಕಣವ್ವ.... ಅ.... ನಾನು ಖಾಕಿ ಪ್ಯಾಂಟ್ ಹಾಕ್ಕೊಂಡಿದ್ನಲ್ಲ ಅದ್ಕೆ ನನ್ನ ಮುಟ್ಲಿಲ್ಲ. ಹೆಂಗೋ ತಪ್ಸ್ಕೊಂಡು ಓಡು ಬಂದೆ. ಲಷ್ಕರ್‍ಮೊಹಲ್ಲಾದಾಗೆ ಸಾಬ್ರುಗೂ, ಹಿಂದೂಗಳಿಗೂ ಜಗಳ ಆತಂತೆ. ಅದ್ಕೆಯಾ ಊರ‍್ನೆಲ್ಲಾ ಪೊಲೀಸ್ರು ಬಾಗ್ಲಾಕುಸ್ತಾವ್ರೆ” ಫಾರೆಸ್ಟರ್‌ ಆಂಜನಪ್ಪ ಪಟ್ಟಣದ ಚಿತ್ರಕಥೆಯನ್ನು ಸವಿಸ್ತಾರವಾಗಿ ಬಿಚ್ಚಿಟ್ಟ. ‘ಏನ್ಮಾಡ್ಲಪ್ಪ..., ನನ್ನ ಗಂಡ ಒಬ್ರಿಗೆ ಅಂದೋರಲ್ಲ, ಆಡ್ದೋರಲ್ಲ, ಅವ್ರರನ್ನೆ ಮುಂಡೆ ಮಕ್ಳು ಪೊಲೀಸ್ನೋರು ಹಿಡ್ಕೊಂಡೊಗವ್ರೆ…, ಹಾಳಾದ್ ಈ ಗಣಪತಿ ಹಬ್ಬ ಯಾಕಾರ ಬತ್ತದೋ, ನಮ್ಗೆ ಬಾಳು ಕೂಳು ಕೊಡೋದಿಲ್ಲ...’ ಗಂಗವ್ವ ಒಂದೇ ಸಮನೆ ಐದು ಮಕ್ಕಳನ್ನು ಎದೆಗವುಚಿಕೊಂಡು ಕಣ್ಣೀರಿಡುತ್ತಿದ್ದಳು. ಸೂರ್ಯ ದಿಕ್ಕು ದಾರಿ ಹಿಡಿದು ಬಹಳ ಹೊತ್ತಾಗಿತ್ತು. ಈ ಪಟ್ಟಣಕ್ಕೆ ಗಣಪತಿ ಹಬ್ಬ ಎಂದರೆ ಊರಿನ ಶಾಂತಿ, ಸೌಹಾರ್ದಕ್ಕೆ ಕೊಳ್ಳಿ ಬಿತ್ತೆಂದೆ ಅರ್ಥ.

ಊರು ತುಂಬಾ ಪೊಲೀಸ್ ವ್ಯಾನು, ಜೀಪುಗಳು ಓಡಾಡತೊಡಗಿದ್ದವು. ಓಣಿಯ ದಬ್ಬೆಗೋಡೆಗೊರಗಿ ಗಂಡ ಬಂದಾನೇನೋ ಎಂದು ಗಂಗವ್ವ ಇಣುಕಿ ದಾರಿ ದಾರಿ ನೋಡುತ್ತಲೆ ಇದ್ದಳು. ಗಂಡಿಗೆ ಗಂಡಾಗಿ, ಹೆಣ್ಣಿಗೆ ಹೆಣ್ಣಾಗಿ ದುಡಿದು ಸಂಸಾರ ಕಟ್ಟಿದವಳು ಗಂಗವ್ವ. ಮೇಗಳಟ್ಟಿಯ ಗಣಪತಿ ಪೆಂಡಾಲಿನಲ್ಲಿ ನಿಶ್ಯಬ್ದ. ಕೋಳಿಗಳನ್ನು ಗೂಡಿಗೆ ಗುಡ್ಡೆ ಹಾಕಿ ಕೌಚಿದಂತೆ ಮಕ್ಕಳನ್ನು ಮಲಗಿಸಿದ್ದಾಗಿದೆ. ಸೊರ ಸೊರ ಅಳುತ್ತಾ, ತನಗೆ ತಾನೆ ಸಮಾಧಾನಪಡಿಸಿಕೊಳ್ಳುತ್ತಾ ದಾರಿ ಕಾಯುತ್ತಲೆ ಇದ್ದಳು. ಕಲ್ಲು ಕರಗುವ ಹೊತ್ತು. ದೂರದಲ್ಲಿ ನಿರ್ಜನ ರಸ್ತೆಯಲ್ಲಿ ನೆರಳೊಂದು ಅಲುಗಾಡಿದಂತಾಯಿತು. ಮಸುಕು ಮಸುಕು ಸರಿದಂತೆ ಚಿತ್ರ ಸ್ಪಷ್ಟವಾಗುತ್ತಾ ಹೋಯಿತು, ಗಂಗವ್ವನ ಮುಖದ ಗೆರೆಗಳು ಸಡಿಲಗೊಂಡವು. ನಾಗಣ್ಣ ಓಣಿಯ ತಲೆ ಬಾಗಿಲಿಗೆ ಬಂದು ನಿಂತಿದ್ದ, ಊರಲ್ಲಿ ಗಲಾಟೆ ಕಂಟ್ರೋಲ್‌ಗೆ ಬಂದ ನಂತರ ಪೊಲೀಸರು ನಾಗಣ್ಣನನ್ನು ಬಿಟ್ಟು ಕಳುಹಿಸಿದ್ದರು.

‘ನಿನ್ಯಾಕೆ ಹಿಡ್ಕೊಂಡೊಗಿದ್ರು..?’ ನೀನೇನು ಮಾಡ್ದೆ?ಗಂಗವ್ವ ವಿಚಾರಣೆ ಶುರು ಮಾಡಿದಳು..‘ನನ್ನ ಪಾಡಿಗೆ ನಾನು ಮೋರಿ ಕಟ್ಟೆ ಮೇಲೆ ಗಿರಾಕಿದು ಚಪ್ಲಿ ಹೊಲಿತಿದ್ದೆ... ಪೊಲೀಸ್ರು ಬಂದು ಬಂದೋರೆ ಜನನೆಲ್ಲಾ ಓಡಾಡ್ಸೋಕೆ ಸುರು ಮಾಡಿದ್ರು, ನಾನು ಮನೆ ಕಡೀಕೆ ಓಡಿಬತ್ತಿದ್ದೆ, ಮೊದ್ಲೆ ಕಾಲಾಗಲ್ಲ ನಂಗೆ, ನನ್ನ ಕೈಯಲ್ಲಿದ್ದ ರಂಪಿಗೆ ನೋಡಿ ನಾನೇ ಗಲಾಟೆ ಮಾಡೋಕೆ ಬಂದೋನು ಅಂತ ಓಡ್ಸ್ಕೊಂಡು ಬಂದು ಹಿಡ್ಕೊಂಡು ಹೋದ್ರು. ಆಮೇಲೆ ‘ನಾನು ಗಲಭೆಕೋರನಲ್ಲ, ಚಪ್ಲಿ ಹೊಲಿಯೋನು ಸಾಮಿ, ಈತರಕ್ಕೆ ಈತರ.. ಅಂತ ಹೇಳಿದ್ಮೇಲೆ ಜೇಬಗಿದ್ದ ಹನ್ನೆರೆಡಾಣೆ ಕಿತ್ಕೊಂಡು ಬುಟ್ಟು ಕಳ್ಸಿದ್ರು..’ ನಾಗಣ್ಣ ಹೆಂಡತಿಯ ವಿಚಾರಣೆಯನ್ನು ಸವಿಸ್ತಾರವಾಗಿ ಎದುರಿಸಿದ.‘ಹೊಡುದ್ರಾ..?! ‘ಹೇ ಹಂಗೇನಿಲ್ಲ ಕಣೆ, ಸುಮ್ನೆ ನೂಕಾಡಿದ್ರು..’ ಉಸಿರುಗಟ್ಟಿ ಸಣ್ಣಗೆ ನರಳುತ್ತಾ ಪಕ್ಕೆ ಹಿಡಿದುಕೊಂಡ ನಾಗಣ್ಣ ಒಲೆ ಕಡೆ ನೋಡಿದ. ಒಲೆಯೂ ತಣ್ಣಗೆ ಮಲಗಿತ್ತು. ತನ್ನ ಕಾಲಬುಡದಲ್ಲಿದ್ದ ಚೊಂಬನ್ನು ಎತ್ತಿ ಗಟಗಟನೆ ಕುಡಿದು ಗೋಣಿ ಚೀಲ ಮೇಲೆಳೆದುಕೊಂಡು ಹೊಟ್ಟೆಗೆ ಕಾಲು ಕವುಚಿಕೊಂಡು ಮಲಗಿದ್ದ ಮಕ್ಕಳ ಮೈದಡುವುದತ್ತಾ ‘ಪರಮಾತ್ಮಾ...’ ದೊಡ್ಡ ನಿಟ್ಟುಸಿರು ಉಯ್ಯುತ್ತಾ ಮೂಲೆಗೆ ಒರಗಿದ. ಮತ್ತೆ ಪೊಲೀಸರು ಯಾವ ಹೊತ್ತಿನಲ್ಲಿ ಬಂದಾರೋ, ಏನೋ..? ಎಂಬ ಆತಂಕದಲ್ಲೇ ಜಾಕಾಯಿ ಪಟ್ಟಿಗೆಯ ಮೂರು ರೀಪೀಸಿನ ಸೊಂಟ ಮುರಿದ ಬಾಗಿಲನ್ನು ಮುಂದಕ್ಕೆ ತಳ್ಳಿದ ಗಂಗವ್ವ ಮೋಟು ಗೋಡೆಗೆ ಮೈ ಕೊಟ್ಟು ಛಾವಣಿಯ ಕಂಡಿಯಲ್ಲಿ ಸ್ವಚ್ಛಂದವಾಗಿ ಕಾಣುತ್ತಿದ್ದ ಆಗಸಕ್ಕೆ ದಿಟ್ಟಿಸಿ ಕುಳಿತಳು.

‘ರಾಜಾಧಿರಾಜ, ರಾಜಾ ಗಂಭೀರ... ವೀರಾಧಿ ವೀರ.. ವಿರಾಟ ಕುಲತಿಲಕ ವಿರಾಟನಗರ ಮಹಾರಾಜ ವಿಜಯೀ ಭವಃ.. ವಿಜಯೀ ಭವಃ...’ ವಿರಾಟನಗರ ಸಾಮ್ರಾಜ್ಯವೊಂದು ವೈಭೋಗದ ದರ್ಬಾರು ಆರಂಭಗೊಂಡಿತು.

‘ಮಂತ್ರಿಗಳೆ.., ನಮ್ಮ ರಾಜ್ಯದ ಕ್ಷೇಮ- ಸಮಾಚಾರವನ್ನು ಹೇಳುವಂತವರಾಗಿ..’

‘ಅಪ್ಪಣೆ ಪ್ರಭು’

‘ಪ್ರಭುಗಳೇ... ಕಾಲ ಕಾಲಕ್ಕೆ ಮಳೆ, ಬೆಳೆಯಾಗಿ ಪ್ರಜೆಗಳು ತಿಂದುಂಡು ಸುಖವಾಗಿದ್ದಾರೆ. ಹಾಲು ಹಳ್ಳವಾಗಿ ಹರಿದು, ತುಪ್ಪ ಕೊಪ್ಪರಿಗೆಯಲ್ಲಿ ಸೋರುತ್ತಿದೆ. ಕಳ್ಳ-ಕಾಕರು ಅಡವಿ ಸೇರಿ ಜನ ನೆಮ್ಮದಿಯಿಂದ ನಿಮ್ಮ ಸ್ಮರಣೆಯಲ್ಲಿದ್ದಾರೆ. ಕಷ್ಟಗಳೆಂಬುದು ಅಷ್ಟ ದಿಕ್ಕುಗಳ ಪಾಲಾಗಿ ಸುಖ, ಸಮೃದ್ಧಿರಾಜ್ಯದಲ್ಲಿ ಕಾಲು ಮುರಿದುಕೊಂಡು ಬಿದ್ದಿದೆ. ಹಸಿದು ನೊಂದವರಿಲ್ಲ, ಬಸವಳಿದು ಬೆಂದವರಿಲ್ಲ... ನಿಮ್ಮ ಆಡಳಿತದ ಸಕಲವೂ ರಾಜ್ಯವನ್ನು ಸುಭಿಕ್ಷವಾಗಿರಿಸಿದೆ.’

ಬೇಷ್..!

‘ಯಾರಲ್ಲಿ?’

‘ಅಪ್ಪಣೆ ಪ್ರಭು’

‘ರಾಜನರ್ತಕಿಯನ್ನು ಕರೆ ತನ್ನಿ...

ದರ್ಬಾರಿನಲ್ಲಿ ನೃತ್ಯ ಮುಗಿಯಿತು. ವೈಭವೋಪೋಷಿತ ರಾಜದರ್ಬಾರಿನಲ್ಲಿ ವಜ್ರ ವೈಢೂರ್ಯದ, ನವರತ್ನ ಕೀರೀಟತೊಟ್ಟ ರಾಜ ವಿರಾಟರಾಯ ಪಟ್ಟದ ರಾಣಿಯನ್ನು ಪಕ್ಕದಲ್ಲಿ ನಿಲ್ಲಿಸಿಕೊಂಡು ಸಾಲುಗಟ್ಟಿ ನಿಂತ ಪುರದ ಜನರಿಗೆ ಸೇರಿನಲ್ಲಿ ಚಿನ್ನ, ಮುತ್ತು, ರತ್ನಗಳು, ದವಸ-ಧಾನ್ಯಗಳ ಅಳೆದಳೆದು ದಾನಂಗೈಯುತ್ತಿರಲು...

ಮಗ್ಗಲು ಮನೆ ಕೆಂಪವ್ವನ ಕೋಳಿಗಳು ರೆಕ್ಕೆ ಬಡಿದು ಮೈಮುರಿದವು. ಕೂಗಳತೆಯಲ್ಲಿನ ಮಿನಾರಿನ ಮೇಲೆ ನಮಾಜು ಕೂಗಿತು. ವಿರಾಟರಾಯನ ಪಕ್ಕದಲ್ಲಿ ಪಟ್ಟದ ರಾಣಿಯಂತೆ ನಿಂತಿದ್ದ ಗಂಗವ್ವನಿಗೆ ಬೆಚ್ಚು ನೀರು ಬಡಿದಂತಾಗಿ ಎದ್ದು ಕುಳಿತಳು. ಹಟ್ಟಿ ನಾಟಕದಾಗೆ ಕುರುಕ್ಷೇತ್ರದಲ್ಲಿ ವಿರಾಟರಾಯನಾಗಿದ್ದ ನಾಗಣ್ಣ ಗಂಗವ್ವನ ಕನಸಿನಲ್ಲಿ ಬಂದಿದ್ದ. ಕಣ್ಣು ಉಜ್ಜಿಕೊಂಡ ಗಂಗವ್ವ ಮೂಲೆ ಕಡೆ ನೋಡಿದಳು. ಪಟ್ಟ, ಪಲ್ಲಂಗ, ಕಿರೀಟ, ಕವಚ, ಕಂಠಿಹಾರ, ಬಹುಪರಾಕುಗಳಿಲ್ಲದ ‘ವಿರಾಟರಾಯ’ ಗೋಣಿಚೀಲದೊಳಗೆ ಕೈ–ಕಾಲು ತೂರಿಸಿಕೊಂಡು ಕೆಮ್ಮುತ್ತಿದ್ದ. ಹಿಂದಿನ ದಿನ ನಡೆದದ್ದೆಲ್ಲಾ ತಣ್ಣಗಾದಂತೆ ಕಾಣುತ್ತಿತ್ತು.

“ಏನಯ್ಯ, ವರ್ಷ್ಕೊಂದುಹಬ್ಬ, ಮಕ್ಳಿಗೆ ಬಟ್ಟೆಬರೆಯಂತೂ ತರಕಾಗಿಲ್ಲ, ಇವತ್ತಾದ್ರೂ ಹೊಟ್ಟಿಗೆ ಏನಾದ್ರೂ ಹೊಂಚ್ಕೊಂಡ್ ಬಾ.., ಮೂರು ದಿನದ್ ಹೊತ್ತಾತು ಅಗ್ಳು ಅನ್ನ ಕಾಣ್ದೆ......” ಗಂಗವ್ವ ಗಂಡನಿಗೆ ಸೋತ ಸ್ವರದಲ್ಲಿ ಉಸಿರಿದಳು.

ಈಚಲ ಚಾಪೆ ಸರಿದಾಡಿತು. ಸಣ್ಣಗೆ ಕೊರಗುತ್ತ ಮಗ್ಗಲು ಹೊರಳಿಸಿದ ಕೂಸ ಕಂಡೊಡನೆ ದಿಗಿಲು ಬಿದ್ದವಳಂತೆ ಎದೆಗವುಚಿಕೊಂಡು ತಟ್ಟಿ ಮತ್ತೆ ನಿದ್ದೆಗೆ ದೂಡಿದಳು. ಎದ್ದರೆ ‘ಅವ್ವ, ಅನ್ನ...’ ಎನ್ನುತ್ತದೆ. ಎಂದೋ ತೊಳೆದಿಟ್ಟ ಮಡಿಕೆ ಸಾಲಿನಲ್ಲಿ ಇಲಿಗಳ ಸದ್ದು.

ಒಲೆ ಬೂದಿಯೊಳಗೆ ಬೆಕ್ಕು ಮೈಮರೆತು ಮಲಗಿತ್ತು. ತೂತುಕಂಡಿಯ ತಗಡು ಸೀಳಿ ಒಳಗಿಳಿದ ಸೂರ್ಯನ ಕೋಲು ಬೆಳಕಿನಲ್ಲಿ ಗುದ್ದಲಿ, ಮಂಕರಿಗೆ ಜೋಡಿಸಿಕೊಂಡು ಹೊರಟ ನಾಗಣ್ಣ ‘ಸಂಜೆಗೆ ಬೇಗ ಬತ್ತಿನಿ’ ಎಂದು ಗಂಗವ್ವನಿಗೆ ಮಾತು ಕೊಟ್ಟ. ಬಾಮೈದ ಚಿಕ್ಕಾಂಜಿನಿ, ಗೊಬ್ಬರದ ಹನುಮಣ್ಣ ಲಾರಿ ಜೊತೆ ಕಾದಿದ್ದ. ನಾಗಣ್ಣ ಸಗಣಿಗೊಬ್ಬರದ ಲೋಡಿಗೆ ಲಾರಿ ಹತ್ತಿ ಹೋಗಿದ್ದಾಯ್ತು.. ಲಾರಿ ಬುರ‍್ರನೆ ಬೂದಿ ಹಾರಿಸಿಕೊಂಡು ಹೋದ ಸದ್ದು ಓಣಿ ಮನೆಯ ಗಂಗವ್ವನ ಕಿವಿಗೆ ಸಣ್ಣದಾಗುವವರೆಗೂ ಕೇಳುತ್ತಲೇಹೋಯಿತು.

‘ಇವತ್ತು ನಿಮ್ಮಪ್ಪ ಲಾರಿಗೋಗವ್ರೆ, ಬೈಗಾನುಕ್ಕೆ ಹೊಸಬಟ್ಟೆ ತಕ್ಕೊಂಡು ಬತ್ತಾರೆ. ಗೊತ್ತಾ,? ಕರಗಡುಬು ಮಾಡಿ ಗಣಪತಿ ನೋಡಾಕ್ ಹೋಗಾಣ...” ಸೆರಗ ಚುಂಗ ಹಿಡಿದು ಜಗ್ಗಿದ ಕುಡಿಗಳಿಗೆ ಗಂಗವ್ವ ಮತ್ತದೆ ಕಥೆ ಹೇಳುತ್ತಿದ್ದಳು. ಮುಂಬಾಗಿಲಿಗೆ ಸಗಣಿ ಸಾರಿಸಿ, ರಂಗೋಲಿ ಹಾಕಿ ಜೋತಾಡುತ್ತಿದ್ದ ತಲೆಬಾಗಿಲ ಗಳಕ್ಕೆ ಎರಡೆಲೆ ಮಾವಿನಸೊಪ್ಪ ಸಿಕ್ಕಿಸಿ, ಮನೆಗೆ ಹಬ್ಬವ ಉಡಿಸಿ ಮಂಕರಿ ಕಂಕಳಿಗಿರಿಸಿಕೊಂಡು ಸಾಹುಕಾರ್‍ರು ಮನೆ ಕೊಟ್ಟಿಗೆ ದಾರಿ ಹಿಡಿದಳು ಗಂಗವ್ವ.

ಇತ್ತ ಪಟ್ಟಣದ ನಡು ಸರ್ಕಲ್‍ನಲ್ಲಿ ಗಣಪತಿ ಮೆರವಣಿಗೆಯಲ್ಲಿ ಚಪ್ಪಲಿಯೊಂದು ತೂರಿ ಬಂದು ಗಲಭೆ ಭುಗಿಲೆದ್ದಿತು. ಗುಡಿಸಲುಗಳಿಗೆ, ಪೆಟ್ಟಿಗೆ ಅಂಗಡಿಗಳಿಗೆ, ಹಣ್ಣು-ಹಂಪಲು ಮಾರುವ ತಳ್ಳುಗಾಡಿಗಳಿಗೆಲ್ಲಾ ಬೆಂಕಿ ಹಚ್ಚುವ, ಕಲ್ಲು ತೂರಾಟ ಶುರುವಾಯಿತು. ಮೇಗಳಟ್ಟಿಯಲ್ಲಿ ಅಂಬೇಡ್ಕರ್ ಯುವಕರ ಸಂಘದ ಕಟ್ಟಾಳುಗಳು ದೊಣ್ಣೆ, ಕಲ್ಲುಗಳೊಂದಿಗೆ ಸಜ್ಜಾದರು. ಗಂಗವ್ವ ಸಾಹುಕಾರ‍್ರ ಕೊಟ್ಟಿಗೆ ಕ್ಲೀನ್ ಮಾಡಿ ದಡಬಡನೇ ಮನೆ ಸೇರಿಕೊಂಡು ಮಕ್ಕಳ ಜೋಪಾನಕ್ಕೆ ನಿಂತಳು... ಅವಳ ದುಗಡ ಹೆಚ್ಚಾಗುತ್ತಲೆ ಇತ್ತು.

ಹಮಾಲಿಗೋದ ನಾಗಣ್ಣನ ಚಿಂತೆ ಅವಳನ್ನು ತಳಮಳಗೊಳಿಸಿತ್ತು. ಪೊಲೀಸ್ ಜೀಪುಗಳು, ಫೈರ್ ಇಂಜಿನ್‍ಗಳು ಬರ‍್ರನೆ ಓಡಾಟ, ಸೈರನ್ ಒಂದೇ ಸಮನೆ ಅರಚುತ್ತಿತ್ತು. ಪಟ್ಟಣದಲ್ಲಿ ಕರ್ಪ್ಯೂ. ರಸ್ತೆಯಲ್ಲಿ ಪೊಲೀಸರು ಕಂಡ ಕಂಡವರನ್ನು ಚಚ್ಚಿ ಬಡಿಯುತ್ತಿದ್ದರು. ಊರು ನಿರ್ಜನ, ಓಣಿ ಅಂಚಿನಿಂದ ಮೈನ್ ರೋಡ್ ಕಡೆಗೆ ನೋಡಿದರೆ ಸ್ಮಶಾನಮೌನ. ಎಲ್ಲೆಲ್ಲೂ ಖಾಕಿಗಳದ್ದೇ ಸದ್ದು. ಗಂಗವ್ವ ಇಣುಕಿ ನೋಡುತ್ತಲೆ ಇದ್ದಳು... ಒಳಗೆ- ಹೊರಗೆ ಜಡ್ಡುಗಟ್ಟಿದ ಪಾದಗಳ ಸವೆಸುತ್ತಾ.

ಹೊತ್ತು ಮುಳುಗುತ್ತಾ ಬಂತು ಮೋಟು ಗೋಡೆಯ ಮೇಲಿನ ಚಿಮಣಿಬುಡ್ಡಿ ಹೊತ್ತಿಕೊಂಡಿತು. ಗಂಗವ್ವಳ ಕಳವಳ ಹೆಚ್ಚಾಗುತ್ತಲೆ ಹೋಯಿತು. ‘ಅಲ್ಯಾರಿಗೋ ಚಾಕು ಚುಚ್ಚಿದ್ರಂತೆ, ಇಲ್ಲ್ಯಾರದ್ದೋ ತಲೆ ಒಡೆದ್ರಂತೆ, ಲಾರಿಗೆ ಬೆಂಕಿ ಹಚ್ಚಿದರಂತೆ...’ ಕಂಡವರಂತೆ ಹೇಳುತ್ತಿದ್ದವರು ಒಬ್ಬರೇ ಇಬ್ಬರೆ.., ಗಂಗವ್ವನ ಎದೆ ಹೊಡೆದುಕೊಳ್ಳತೊಡಗಿತು. ಬೆಳಿಗ್ಗೆ ನಾಗಣ್ಣ, ಚಿಕ್ಕಾಂಜನಿಯನ್ನು ಕರೆದೊಯ್ದ ಲಾರಿನೆ ಉರಿತಿರೋದಾ? ನಾಗಣ್ಣನ ತಲೆ ಯಾರಾದರೂ ಹೊಡೆದು ಬಿಟ್ಟರಾ? ಹೀಗೆ... ಹತ್ತಾರು ಯೋಚನೆಗಳು ಗಂಗವ್ವನ ತಲೆಯನ್ನು ಗಿರ‍್ರೆನಿಸುತ್ತಿತ್ತು. ಕಣ್ಣ ದಡ ಒಡೆದು ನುಗ್ಗುವ ನೀರನ್ನು ಸೆರಗ ತುದಿಗೆ ಕುಡಿಸಿ ಮಕ್ಕಳನ್ನು ಬಾಚಿ ತಬ್ಬುತ್ತಾ ತನಗೆ ತಾನೇ ಧೈರ್ಯ ತುಂಬಿಕೊಳ್ಳುತ್ತಿದ್ದಳು.

‘ಅಪ್ಪ ಬತ್ತಾನೆ. ಕರಗಡುಬು ಮಾಡಾನ..’ ಗಂಗವ್ವನ ಹಿಂದಿಂದೆನೆ ಓಡಾಡುತ್ತಿದ್ದ ಮಕ್ಳಿಗೆಲ್ಲಾ ಸಬೂಬು ಹೇಳುತ್ತಲೆ ಇದ್ದಳು. ಕಣ್ಣಳತೆಯಲ್ಲೇ ಕಾಣುವ ಮುಖ್ಯರಸ್ತೆಯಲ್ಲಿ ಪೆಟ್ರೋಲ್ ಬಂಕ್‍ವೊಂದು ಧಗ ಧಗ ಹೊತ್ತಿ ಉರಿಯುತ್ತಿರುವ ಜ್ವಾಲೆ ನೇರವಾಗಿ ಕಣ್ಣಿಗೆ ಕಾಣುತ್ತಿತ್ತು. ಕತ್ತಲು ಮುತ್ತಿಕೊಂಡೆ ಬಿಟ್ಟಿತ್ತು. ಲಾರಿ ಇಳಿ ಸಂಜೆಗೆ ವಿದ್ಯಮಾನ ಗೊತ್ತಿಲ್ಲದೆ ಪಟ್ಟಣದೊಳಗೆ ಬಂದು ನಡು ದಾರಿಯಲ್ಲೇ ನಾಗಣ್ಣ, ಚಿಕ್ಕಾಂಜಿನಿಯನ್ನು ಕೆಳಗಿಳಿಸಿ ತಲೆಮರೆಸಿಕೊಂಡಿತು. ಊರಿಗೆ ಊರೇ ಕರ್ಫ್ಯೂಗೆ ತುತ್ತಾಗಿ ಎಲ್ಲೆಲ್ಲೂ ಪೊಲೀಸರ ಲಾಠಿ, ಬೂಟುಗಳದ್ದೇ ಕಾರುಬಾರು. ಹೆಗಲ ಮೇಲೆ ಗುದ್ದಲಿ, ಮಂಕರಿ, ಗಂಟೊಂದು ಇಟ್ಟುಕೊಂಡು ಸಂದಿ-ಮೂಲೆ ಹಾದು ಹಟ್ಟಿ ಕಾಣುವ ದೂರಕ್ಕೆ ಬಂದ ನಾಗಣ್ಣ, ಚಿಕ್ಕಾಂಜನಿಯನ್ನು ಹತ್ತಾರು ಪೊಲೀಸರು ಬೋರೇಗೌಡರ ಬಾಳೆ ಹಣ್ಣು ಮಂಡಿ ಮುಂದೆ ಮುತ್ತಿಕೊಂಡು ಬಿಟ್ಟರು. ಎಲ್ಲಿಗೆ ಹೋಗಿದ್ದೀರಿ ಎಂದು ಕೇಳುವ ಗೋಜಿಗಾಗಲಿ ಅಥವಾ ನಾವು ಹಮಾಲಿ ಕೆಲಸಕ್ಕೆ ಹೋಗಿದ್ದೆವು ಸಾಮಿ ಎನ್ನುತ್ತಿದ್ದ ನಾಗಣ್ಣ, ಚಿಕ್ಕಾಂಜನಿಯ ದೀನ ದನಿಯನ್ನಾಗಲಿ ಪೊಲೀಸರು ಕೇಳುವ ಸ್ಥಿತಿಯಲ್ಲಿರಲಿಲ್ಲ. ಸುತ್ತುವರಿದವರೆ ಲಾಠಿ, ಬೂಟುಗಳಿಗೆ ಕೆಲಸ ಕೊಟ್ಟುಬಿಟ್ಟರು. ಹೆಗಲ ಮೇಲಿದ್ದ ಗುದ್ದಲಿ ಪೊಲೀಸರ ಕಣ್ಣಿಗೆ ದೊಡ್ಡದ್ದೊಂದು ಅನಾಹುತಕಾರಿ ಅಸ್ತ್ರದಂತೆ ಕಾಣುತ್ತಿತ್ತೇನೋ,! ಹೊಡೆತ ತಪ್ಪಿಸಿಕೊಳ್ಳಲು ಗುದ್ದಲಿಗಳನ್ನು ಒಡ್ಡುತ್ತಿದ್ದು ಟಣ್ ಟಣ್ ಎಂಬ ಶಬ್ದ ಕೂಗಳೆತೆಯಲ್ಲಿದ್ದ ಹಟ್ಟಿಯ ಗಂಗವ್ವನ ಕರುಳ ತಟ್ಟುತ್ತಿತ್ತು. ಸಂಕಟ ಹೊಟ್ಟೆ ಕಿವುಚುತ್ತಿತ್ತು.

ಚಿಕ್ಕಾಂಜಿನಿ ಇನ್ನೂ ಪ್ರಾಯದ ಹುಡುಗ ಹೇಗೊ ಕಸರತ್ತು ಮಾಡಿ ಸೀಳುನಾಯಿಗಳಂತೆ ಸುತ್ತುವರಿದಿದ್ದ ಪೊಲೀಸರ ಕೋಟೆಯನ್ನು ಬೇಧಿಸಿ ಓಡಿ ಬಿಟ್ಟ. ನಾಗಣ್ಣ ಐದು ಮಕ್ಕಳ ತಂದೆ. ಸೋತು ಸೊರಗಿದ ಚಕ್ಕಳದಂತ ಮೈ. ಶಕ್ತಿಯಲ್ಲಾ ಅನ್ನದ ಹೋರಾಟಕ್ಕೆ ಕಳೆದುಕೊಂಡವನು, ಪಾದಗಳಲ್ಲಿ ಆಣೆಗಾಯ ಬೇರೆ, ಓಡಲು ಸಾಧ್ಯವೇ ಇಲ್ಲ. ಪೊಲೀಸರ ಲಾಠಿ ಏಟುಗಳಿಗೆ ಗುರಾಣಿಯಂತೆ ಅಡ್ಡ ನಿಲ್ಲುತ್ತಿದ್ದ ಗುದ್ದಲಿ ಕಾವು ಮುರಿದುಕೊಂಡು ಆತನನ್ನು ರಕ್ಷಿಸಲು ಹೆಣಗಾಡಿ ಕೊನೆಗೂ ಸೋತು ನೆಲಕ್ಕೊರಗಿತು. ಬಿದರ ಮಂಕರಿ ಪೊಲೀಸರ ಹೊಡೆತಕ್ಕೆ ಚೂರು ಚೂರಾಗಿ ದಿಕ್ಕಾಪಾಲಾಗಿದ್ದವು. ನಾಗಣ್ಣನ ರಕ್ಷಣೆಗೆ ಇನ್ನಾರು ಇರಲಿಲ್ಲ. ಸಂಜೆಗೆ ಕರಗಡುಬು ಮಾಡಬೇಕು, ಗಂಗವ್ವ ಕಾಯುತ್ತಿದ್ದಾಳೆ. ಮಕ್ಕಳು ನನ್ನ ದಾರಿ ನೋಡುತ್ತಿದ್ದರು. ಬೇಗ ಹೋಗಲೇ ಬೇಕು. ನಾಗಣ್ಣ ಪರದಾಡುತ್ತಿದ್ದ. ಪೊಲೀಸರ ಪೌರುಷಕ್ಕೆ ನಾಗಣ್ಣನ ಪುಡುಪಂಚೆಯ ಗಂಟು ಹರಿದು ಹಾರಿತ್ತು. ರಸ್ತೆಯ ತುಂಬೆಲ್ಲಾ ಚಿಮ್ಮಿ ಚೆಲ್ಲಾಡಿದ್ದ ಉಪ್ಪು, ಮೆಣಸು, ಕಾಳು, ಬೇಳೆ-ಬೆಲ್ಲವನ್ನೆಲ್ಲಾ ಕಣ್ಣೀರ ಕುಡಿಯುತ್ತಾ ಆಯುತ್ತಿದ್ದ ನಾಗಣ್ಣನಿಗೆ ಬೆನ್ನ ಮೇಲೆ ಮೆರೆಯುತ್ತಿದ್ದ ಲಾಠಿ, ಬೂಟುಗಳ ಮೆರವಣಿಗೆಯ ಪರಿವೆ ಇರಲಿಲ್ಲ.

ಹಣುಗಾಯಿ-ನೀರುಗಾಯಿಯಾದ ನಾಗಣ್ಣ ಹೇಗೋ ಪೊಲೀಸರಿಂದ ಪಾರಾಗಿ ತಟ್ಟಾಡಿಕೊಂಡು ಮನೆ ಸೇರಿಕೊಂಡ. ಕತ್ತಲು.... ಕತ್ತಲು, ಮಕ್ಕಳು ಎಂದಿನಂತೆ ಕಾಲುಗಳನ್ನು ಕಿಬ್ಬೊಟ್ಟೆಗೆ ಊಡು ಮಾಡಿಕೊಂಡು ನಿದ್ದೆಗೆ ಜಾರಿದ್ದವು. ಬುಡ್ಡಿ ದೀಪ ಎಣ್ಣೆ ಇಲ್ಲದೆ ಅಸುನೀಗುವ ಅವಸರದಲ್ಲಿತ್ತು. ಗಂಡನ ಮುಖ ನೋಡುತ್ತಲೆ ಗಂಗವ್ವ ನಿಟ್ಟುಸಿರು ಬಿಟ್ಟು ದಡದಡನೆ ನೀರು ಕೊಟ್ಟಳು. ಹೆಗಲು ಖಾಲಿ ಇತ್ತು, ಬರ‍್ರನೆ ಬಾಚಿ ತಬ್ಬಿಕೊಂಡು ತಡಕಾಡಿದಳು. ಅವಳ ಕೈಗೆ ಬಾಸುಂಡೆಗಳೆ ಸಿಕ್ಕವು, ಕರುಳ ಕೋಣೆಯಿಂದ, ಕಣ್ಣ ತಡಿಯಿಂದ ಧುಮ್ಮಿಕ್ಕಿದ ದುಃಖ ದಿಕ್ಕು ದಿಕ್ಕಿಗೂ ಮೋಡವಾಗಿ ಚದುರಿ ಮಳೆ ಸುರಿದಿತ್ತು. ಸುಕ್ಕು ಚರ್ಮದ ಮೇಲೆ ಸೊಕ್ಕಿದ ಹಾವಂತೆ ಮಲಗಿದ್ದ ಬಾಸುಂಡೆಗಳಿಗೆ ಕಾವು ಕೊಡಲು ಒಂದರಳು ಕಲ್ಲು ಉಪ್ಪಿಗಾಗಿ ಕುಡಿಕೆಯ ಗಬರಾಡುತ್ತಲೆ ಇದ್ದಳು.. ಗಂಗವ್ವ.

ಅಲ್ಯಾರೋ ಆಟೋ ಡ್ರೈವರೊಬ್ಬನನ್ನು ಇರಿದು ಕೊಂದ ವರ್ತಮಾನ ಓಣಿಗೆ ಬಂತು.

... ಓಣಿಯೊಳಗೆ ದಡದಡನೆ ಜನ ಓಡಿದರು. ಹತ್ತಾರು ಸೈರನ್‍ಗಳು ಒಂದೇ ಬಾರಿಗೆ ಅರಚಿಕೊಂಡು ದಿಕ್ಕು ದಿಕ್ಕಿಗೂ ನುಗ್ಗತೊಡಗಿದವು. ನಾಗಣ್ಣ ‘ದೇವ್ರೇ.....’ ಎಂದು ನರಳುತ್ತಾ ಬಂದ ದಿಕ್ಕಿನ ಕಡೆ ಬಾಗಿಲ ಕಿಂಡಿಯಿಂದ ಇಣುಕಿದ ಬಾಲಣ್ಣನ ಚರ್ಮ ಕುಟೀರ ಅಂಬೇಡ್ಕರ್ ಪಟದೊಂದಿಗೆ ಧಗಧಗನೆ ಉರಿಯುತಿತ್ತು. ಬೆಳಕಿನಲ್ಲಿ ಗಣಪತಿಯ ವೈಭವದ ಮೆರವಣಿಗೆ ಸಾಗುತ್ತಿತ್ತು...

‘ಗಣಪತಿ ಬಪ್ಪ ಮೋರಿಯಾ, ಭಾರತ್ ಮಾತಾ ಕೀ ಜೈ...
‘... , ... ನಾವೆಲ್ಲಾ ಒಂದು’

ಮೋಟು ಗೋಡೆಯ ಮೇಲಿನ ಒಣಬತ್ತಿಯ ದೀಪ ಕೊನೆಯುಸಿರೆಳೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT