ಹುತಾತ್ಮ ಕುರುಬನ ಕಥೆ

7

ಹುತಾತ್ಮ ಕುರುಬನ ಕಥೆ

Published:
Updated:
Deccan Herald

ಹೆಡ್‌ಲೈಟ್‌ ಹಾಕದಿದ್ದರೆ ಮುಂದೆ ಏನೂ ಕಾಣಿಸದಂಥ ಮಂಜಿನ ಆವರಣ. ಮೊಬೈಲ್‌ ಸ್ಕ್ರೀನ್‌ನಲ್ಲಿರುವ ಗಡಿಯಾರ ನೋಡಿದರೆ ಸಮಯ ಬೆಳಿಗ್ಗೆ ಹತ್ತೂವರೆ. ಕೋಯಿಕ್ಕೋಡ್‌ನಿಂದ ಹೊರಟು ವಯನಾಡ್ ‘ಚುರಂ’ನ (ತಿರುವುಗಳು) ಹಾವು–ಏಣಿ ಆಟ ಮುಗಿಸಿ ಗುಡ್ಡದ ತುದಿಗೆ ತಲುಪುತ್ತಿದ್ದಂತೆ ಚಾಲಕ ಜಾಫರ್ ಏಕಾಏಕಿ ಟ್ಯಾಕ್ಸಿ ನಿಲ್ಲಿಸಿ ‘ಈ ಜಾಗವನ್ನು ನೀವು ನೋಡಲೇಬೇಕು’ ಎಂದರು.

ಹೊರಗೆ ನೋಡಿದರೆ ಕತ್ತಲು; ಅಸ್ಟಷ್ಟ. ಅದರ ನಡುವೆ ಅರಳಿ ಮರವೊಂದಕ್ಕೆ ಸಂಕಲೆ ಬಿಗಿದಿರುವುದು ಕಾಣಿಸಿತು. ಕೆಳಗೆ ಚೈನ್ ಟ್ರೀ ಎಂದು ಇಂಗ್ಲಿಷ್‌ನಲ್ಲೂ ‘ಚಂಙಲಯಿಟ್ಟ ಮರಂ’ ಎಂದು ಮಲಯಾಳಂನಲ್ಲೂ ಬರೆದ ಫಲಕವೂ. ಕೋಯಿಕ್ಕೋಡ್‌–ವಯನಾಡ್‌ ನಡುವಿನ ಅಪಾಯಕಾರಿ ತಿರುವುಗಳ ಬಗ್ಗೆ ಮತ್ತು ವರ್ಷದಲ್ಲಿ ಬಹುತೇಕ ಪ್ರತಿದಿನವೂ ಮಳೆ ಬೀಳುವ ಲಕ್ಕಿಡಿ ಪ್ರದೇಶದ ಬಗ್ಗೆ ಕೇಳಿ ತಿಳಿದಿದ್ದರೂ ಈ ಮರದ ಬಗ್ಗೆ ಗೊತ್ತಿರಲಿಲ್ಲ. ಹೀಗಾಗಿ ಕುತೂಹಲ ಮೂಡಿತು.

‘ಕಾನ’ ಎಂಬ ಪದ್ಧತಿ ಹುಟ್ಟು ಹಾಕಿ ಹಿಂದಿನವರು ಕಾಡು ಉಳಿಸಿದ್ದರ ಉದಾಹರಣೆ ಕಂಡಿದ್ದೆ. ಇದು ಕೂಡ ಇಂಥದೇ ಪ್ರಯತ್ನದ ಭಾಗ ಆಗಿರಬಹುದು ಎಂದುಕೊಂಡು ‘ಇದೇನಿದು? ಮರವನ್ನು ಯಾರೂ ಕಡಿಯಬಾರದು ಎಂದು ಸಂಕಲೆ ಹಾಕಿ ಬಿಗಿದಿದ್ದಾರೆಯೇ’ ಎಂದು ಜಾಫರ್‌ಗೆ ಕೇಳಿದೆ.

ಪ್ರಶ್ನೆ ಪೂರ್ಣಗೊಳ್ಳುವುದಕ್ಕೂ ಮೊದಲು ಈ ಮರದ ಕಥೆ ಹೇಳಲು ತಯಾರಾಗಿದ್ದ ಜಾಫರ್‌ ‘ಸಾಕಷ್ಟು ಫೋಟೊಗಳನ್ನು ತೆಗೆದುಕೊಳ್ಳಿ. ನಂತರ ರೋಚಕ ಕಥೆ ಹೇಳುತ್ತೇನೆ’ ಎಂದರು.

ಫ್ಲಾಷ್ ಹಾಕಿದರೂ ಸರಿಯಾಗಿ ಫೋಕಸ್ ಆಗದೇ ಇದ್ದ ಕತ್ತಲಲ್ಲಿ ಒಂದೆರಡು ಫೋಟೊ ತೆಗೆದುಕೊಂಡು ಟ್ಯಾಕ್ಸಿಯಲ್ಲಿ ಕುಳಿತೆ. ಜಾಫರ್ ಮಲಯಾಳಂನಲ್ಲಿ ಸಾಹಿತ್ಯಕವಾಗಿ ಕಥೆ ಹೇಳಲು ಆರಂಭಿಸಿದರು.

‘ಇದು, ಲಕ್ಕಿಡಿ. ವಯನಾಡ್‌ ಮತ್ತು ಕೋಯಿಕ್ಕೋಡ್ ಜಿಲ್ಲೆಯ ಗಡಿ. ಇಲ್ಲಿ ನೂರಾರು ವರ್ಷಗಳ ಹಿಂದೆ ಈಗ ಇರುವುದಕ್ಕಿಂತಲೂ ದಟ್ಟವಾದ ಕಾನನ ಇತ್ತು. ಈ ಭಾಗದಲ್ಲಿ ಪನಿಯ ಎಂಬ ಆದಿವಾಸಿ ಜನಾಂಗವಿತ್ತು. ಈ ಜನಾಂಗದ ಕರಿಂದಂಡನ್‌ ಎಂಬ ಯುವಕನ ಜೀವನದೊಂದಿಗೆ ಈ ಮರಕ್ಕೆ ನಂಟು ಇದೆ. ಬ್ರಿಟಿಷರ ದೌರ್ಜನ್ಯ, ತಳ ಸಮುದಾಯವನ್ನು ವಂಚಿಸಿದ ಧನಿಕರ ಕುಯುಕ್ತಿಯ ಕರಾಳ ನೆನಪು, ಮುಗ್ದ ಯುವಕನ ಬಲಿದಾನದ ರಕ್ತದ ಕಲೆಗಳೂ ಈ ಮರಕ್ಕೆ ಅಂಟಿಕೊಂಡಿವೆ...’

ದಟ್ಟ ಕಾನನದ ವ್ಯಾಪ್ತಿ ದಾಟಿದ ಟ್ಯಾಕ್ಸಿ, ಜನವಾಸವಿರುವ ಜಾಗಕ್ಕೆ ತಲುಪಿತು. ಮರಗಳಲ್ಲಿ, ಕೆಂಪು ಕಲ್ಲಿನ ಕಟ್ಟೆಗಳಲ್ಲಿ ಕಮ್ಯುನಿಸ್ಟ್‌ ಪಕ್ಷದ ಕೆಂಪು ಧ್ವಜಗಳು ರಾರಾಜಿಸುತ್ತಿದ್ದವು. ಜಾಫರ್‌ ಕಥೆ ಮುಂದುವರಿಸಿದರು.

‘ಕರಿಂದಂಡನ್‌ ಕುರಿಗಾಹಿ. ನಿತ್ಯವೂ ಕುರಿಗಳ ಹಿಂಡಿನೊಂದಿಗೆ ಈ ಗುಡ್ಡ ಏರಿ ಆಚೆಗೆ ಹೋಗುತ್ತಿದ್ದ ಆತ ಸಂಜೆ ವಾಪಸ್ ಬರುತ್ತಿದ್ದ. ಕಾಡಿನ ನಡುವೆ ಆಚೆ ಭಾಗಕ್ಕೆ ಹೋಗುವ ಸುಲಭದ ದಾರಿ ಆ ಸಂದರ್ಭದಲ್ಲಿ ಆತನಿಗೆ ಮತ್ತು ಆತನ ಸಂಬಂಧಿಕರ ಪೈಕಿ ಕೆಲವರಿಗೆ ಮಾತ್ರ ಗೊತ್ತಿತ್ತು. ಎರಡು ಪ್ರದೇಶಗಳ ನಡುವೆ ಸಂಪರ್ಕ ಬೆಳೆಸಿ ವ್ಯವಹಾರ ನಡೆಸಲು ಬಯಸಿದ್ದ ಬ್ರಿಟಿಷರಿಗೆ ಅದ್ಹೇಗೋ ಕರಿಂದಂಡನ ವಿಷಯ ತಿಳಿಯಿತು. ಸುಲಭ ದಾರಿಯ ರಹಸ್ಯ ಬಿಚ್ಚಿಡುವಂತೆ ಅವರು ಕರಿಂದಂಡನ ಬೆನ್ನು ಬಿದ್ದರು. ಆದರೆ ಅಪಾರ ವನ ಸಂಪತ್ತು ನಾಶವಾಗಬಹುದು ಎಂಬ ಆತಂಕದಿಂದ ಆತ ಗುಟ್ಟು ಬಿಟ್ಟುಕೊಡಲು ಸಿದ್ಧ ಇರಲಿಲ್ಲ. ಈ ಸಂದರ್ಭದಲ್ಲಿ ಬ್ರಿಟಿಷರು ಈ ಭಾಗದ ಧನಿಕರ ನೆರವು ಕೋರಿದರು. ಅವರು ಕರಿಂದಂಡನ ಮನವೊಲಿಸುವಲ್ಲಿ ಯಶಸ್ವಿಯಾದರು. ಆದರೆ ದಾರಿ ಹೇಳಿಕೊಟ್ಟಿದ್ದೇ ತಡ, ಬ್ರಿಟಿಷರು ಕರಿಂದಂಡನನ್ನು ಕೊಂದು ಹಾಕಿದರು...’

ಟ್ಯಾಕ್ಸಿಯ ವೇಗವನ್ನು ಕಡಿಮೆ ಮಾಡಿದ ಜಾಫರ್‌ ಒಂದು ಕ್ಷಣ ಸುಮ್ಮನಾಗಿ ಕಥೆ ಮುಂದುವರಿಸಿದರು.

‘ಇದಿಷ್ಟು ವಾಸ್ತವ ಎಂದು ಹೇಳಲಾಗುತ್ತಿದೆ. ಈ ಕಥೆಯನ್ನು ಆಧಿರಿಸಿ ಮತ್ತೊಂದು ಕಥೆ ಹುಟ್ಟಿಕೊಂಡಿತು. ಆ ಕಥೆ ಈಗ ತುಂಬ ಪ್ರಚಲಿತವಾಗಿದೆ. ಅದು ಹೀಗಿದೆ: ಕರಿಂದಂಡನ್‌ ಕುರಿಗಳ ಹಿಂಡನ್ನು ಕರೆದುಕೊಂಡು ಹೋಗುತ್ತಿದ್ದ ದಾರಿಯಲ್ಲೇ ಬ್ರಿಟಿಷರು ವಾಣಿಜ್ಯ ಸಂಪರ್ಕಕ್ಕೆ ‘ಮಾರ್ಗ’ ನಿರ್ಮಿಸಿದರು. ಅದುವೇ ನಾವೀಗ ಸಾಗಿ ಬಂದ ರಸ್ತೆ. ತಾನು ತೋರಿಸಿಕೊಟ್ಟ ದಾರಿಯಲ್ಲಿ ನಿರ್ಮಿಸಿದ ರಸ್ತೆಯಲ್ಲಿ ವಾಹನಗಳು ಓಡಾಡುವುದನ್ನು ಕಂಡ ಕರಿಂದಂಡನ ಆತ್ಮ ಸುಮ್ಮನಿರಲಿಲ್ಲ. ಈ ದಾರಿಯಾಗಿ ಸಾಗುವ ವಾಹನಗಳನ್ನು ನಿತ್ಯವೂ ಕಾಡತೊಡಗಿತು. ಆತನ ಆತ್ಮದ ಕಾಟ ಹೆಚ್ಚಾದಾಗ ಅದನ್ನು ಬಂಧಿಸುವ ಪ್ರಯತ್ನ ನಡೆಯಿತು. ಒಬ್ಬ ನಂಬೂದಿರಿ ಮತ್ತು ಮೊಯ್ಲ್ಯಾರ್‌ (ಮುಸ್ಲಿಂ ಧರ್ಮಗುರು) ನಡೆಸಿದ ಜಂಟಿ ಮಂತ್ರ–ತಂತ್ರದ ಫಲವಾಗಿ ಆತ್ಮವು ಬಲೆಗೆ ಬಿತ್ತು. ಕಾಡುಬಳ್ಳಿಯಿಂದ ಅದನ್ನು ಬಂಧಿಸಿ ಮರಕ್ಕೆ ಕಟ್ಟಿಹಾಕಲಾಯಿತು....’

ಜಾಫರ್ ಕಥೆಯನ್ನು ಮುಗಿಸುತ್ತಿದ್ದಂತೆ, ಅಲ್ಲಿ ಕಂಡ ಮರಕ್ಕೆ ಸುತ್ತಿದ್ದ ಕಾಡಿನ ಬಳ್ಳಿ ಮತ್ತೆ ಕಣ್ಣಿಗೆ ಕಟ್ಟಿತು. ‘ಮರಕ್ಕೆ ಸುತ್ತಿದ ಬಳ್ಳಿ ಬೆಳೆಯುತ್ತಲೇ ಇದೆ. ಕರಿಂದಂಡನ್‌ ಮತ್ತು ಆತನ ಕರಾಳ ಬದುಕಿನ ಕಥೆಯನ್ನು ನೆನಪಿಸುವುದಕ್ಕಾಗಿ ಕಬ್ಬಿಣದ ಸಂಕಲೆಯನ್ನು ಮರಕ್ಕೆ ಜೋತು ಬಿಡಲಾಗಿದೆ’ ಎಂದರು ಜಾಫರ್‌.

‘ವಯನಾಡಿನ ತಿರುವುಗಳು, ಲಕ್ಕಿಡಿಯ ಸಂಕಲೆ ಮರ ಮತ್ತು ಕರಿಂದಂಡನ್‌ ಬೇರೆ ಬೇರೆಯಲ್ಲ. ಎಲ್ಲವೂ ಒಂದೇ. ಎಲ್ಲವೂ ಒಂದೇ ಕಥೆಯ ಬೇರುಗಳು. ಧನಿಕರು, ಉಳ್ಳವರ ಪೈಶಾಚಿಕ ಮನಸ್ಸಿನ, ಆಧುನಿಕತೆ ಎಂಬ ವಿಕೃತಿಯ ಬಗೆ ಬಗೆಯ ರೂಪಗಳು’ ಎಂದು ಹೇಳಿದ ಜಾಫರ್‌ ನನ್ನ ಮುಂದೆ ಬರೀ ಚಾಲಕನಾಗಿ ಅಲ್ಲ, ದೊಡ್ಡ ಪರಿಸರವಾದಿ ಅಥವಾ ದಾರ್ಶನಿಕನಾಗಿ ಬೆಳೆದು ನಿಂತರು. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !