ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೌನಗರ್ಭದ ಮನ್ವಂತರ

Last Updated 18 ಮೇ 2019, 19:46 IST
ಅಕ್ಷರ ಗಾತ್ರ

ಒಮ್ಮೆ ಮದುವೆಗೂ ಮುಂಚೆ ಕ್ವಾರ್ಟರ್ಸ್‌ನಲ್ಲಿ ನಿನ್ನನ್ನು ತಬ್ಬಿಕೊಂಡಾಗಲೂ ಆ ರಾತ್ರಿಯ ಕೆಟ್ಟ ಗಳಿಗೆಯೇ ಕಣ್ಣ ಮುಂದೆ ಬಂದಿತ್ತು. ಒಮ್ಮೆಲೇ ನನ್ನ ನೋವೆಲ್ಲವೂ ಸ್ಫೋಟಗೊಂಡು ನಿನ್ನನ್ನು ದೂರ ತಳ್ಳುವಂತೆ ಮಾಡಿತ್ತು. ಮದುವೆಯಾದ ಮೇಲಂತೂ ನೀನು ಸನಿಹಕ್ಕೆ ಸುಳಿವಾಗ ನಾನು ಮತ್ತೆಮತ್ತೆ ಓಡುತ್ತಿದ್ದೆ; ಆ ರಾತ್ರಿಯ ಕರಾಳ ನೋವುಗಳಿಂದ ಕಳಚಿಕೊಳ್ಳಲು....

***

ನಿನ್ನನ್ನು ಶಾಲೆಗೆ ಕಳುಹಿಸಿದರೆ ಜಮಾಹತಿನವರು ಏನೆಂದಾರೊ? ಅವರೇನಾದರೂ ಅಂದುಕೊಳ್ಳಲಿ. ನನ್ನ ಮೋಳು ಓದಬೇಕು. ನನ್ನಂತಾಗಬಾರದು. ನಿನ್ನ ಬಾಪ ಮೈಯತ್ತಾದಾಗಿನಿಂದ ಬಂಧು ಬಳಗಕ್ಕೆ ಬೇಡದವರಾಗಿ ತಿರುಗಿ ನೋಡುವವರಿಲ್ಲದೆಯೂ ನಮಗ್ಯಾರು ಗತಿ ಎಂದು ಕೈಕಟ್ಟಿ ಕುಳಿತುಕೊಳ್ಳದೆ ಕಷ್ಟಪಟ್ಟು ಅವರಿವರ ಮನೆಯ ಚಾಕರಿ ಮಾಡಿ ಈ ಕ್ಷಣದವರೆಗೂ ಉಸಿರು ಬಿಗಿ ಹಿಡಿದುಕೊಂಡಿದ್ದೇನೆ. ಎಲ್ಲ ನನ್ನ ಮಗಳಿಗಾಗಿ. ನೀನು ಚೆನ್ನಾಗಿ ಓದಿ ಯಾರ ಹಂಗೂ ಇಲ್ಲದೆ ಬದುಕಬೇಕು. ಇನ್ನು ನಿನ್ನ ನಿಖಾ..! ಸಮಯ ಬಂದಾಗ ತನ್ನಿಂದ ತಾನೇ ನಡೆಯುತ್ತದೆ. ಆ ಕುರಿತು ನನಗ್ಯಾವ ಭಯವೂ ಇಲ್ಲ. ನಿನ್ನ ಕನಸಿನ ಗೋಪುರವನ್ನು ಕಟ್ಟಲು ಸಹಾಯ ಮಾಡುವುದೇ ನನ್ನ ಬದುಕಿನ ಬಹುದೊಡ್ಡ ಗುರಿ.

ನೀನು ನನ್ನಂತಲ್ಲ. ಹೌದು ನನ್ನಂತೆಯೂ ಆಗಬಾರದು. ಈ ಜಮಾಹತ್‍ನಲ್ಲಿ ಹೆಣ್ಣುಮಕ್ಕಳು ಶಾಲೆಗೆ ಹೋಗುವಾಗ ಬುರ್ಕಾ ಹಾಕಿಕೊಂಡೇ ಹೋಗಬೇಕು ಎಂಬ ಫರ್ಮಾನು ಹೊರಡಿಸಿದ್ದಾರೆ. ಕಾರಣ ಧರ್ಮ ರಕ್ಷಣೆಯಂತೆ. ನಮ್ಮ ಕಾಲದಲ್ಲಿ ಇಂತಹ ಕಟ್ಟಳೆಗಳಿರಲಿಲ್ಲ. ಈಗ ಬಡವರಿಗೊಂದು ಶ್ರೀಮಂತರಿಗೊಂದು ನ್ಯಾಯ. ಜಮಾಹತ್ತಿನ ಅಧ್ಯಕ್ಷ ರೆಹ್ಮಾನ್ ಬ್ಯಾರಿಯ ಮಗಳು ಬೆಂಗಳೂರಿನಲ್ಲಿ ಓದ್ತಾ ಇದ್ದಾಳೆ. ಅವಳಿಗೆ ಬುರ್ಕಾದ ಫರ್ಮಾನು ಅನ್ವಯಿಸಲ್ಲ; ಕಾರಣ ಅವರ ಬಳಿ ಹಣ ಅಧಿಕಾರ ಎರಡೂ ಇದೆ. ಮತ್ತದು ಬೆಂಗಳೂರು. ಅಲ್ಲಿ ಹೇಳುವ ಕೇಳುವ ಕೊಂಕು ನುಡಿಯುವ ಬಾಯಿಗಳು ಕಡಿಮೆ. ನಮ್ಮ ಬಳಿ ಯಾರಿಗೂ ಬೇಡದ ಆತ್ಮಾಭಿಮಾನ ಮಾತ್ರ. ಸ್ವಾಭಿಮಾನದ ಬದುಕಿಗೆ ನಿನ್ನ ವಿದ್ಯೆ ಸೇರಿದರೆ ಖಂಡಿತವಾಗಿ ನಾವು ತಲೆಎತ್ತಿ ನಡೆಯಬಹುದು. ಅದಕ್ಕಾಗಿಯಾದರೂ ಚೆನ್ನಾಗಿ ಓದಿ ಕೆಲಸಕ್ಕೆ ಸೇರಬೇಕು ಎಂಬ ಉಮ್ಮನ ಮಾತು ಇಂದಿಗೂ ಕಿವಿಯಲ್ಲಿ ಹಾಗೇ ಪ್ರತಿಧ್ವನಿಸುತ್ತಿದೆ.

ಉಮ್ಮನ ಕಷ್ಟಕಾರ್ಪಣ್ಯ ಕಂಡ ನನಗೆ, ಶಿಕ್ಷಣ ಸುಖದ ಸಮ್ಮೋಹನ ನೀಡಿತ್ತು. ಬಿ.ಎ ಪತ್ರಿಕೋದ್ಯಮದ ಜೊತೆಗೆ ಇಂಗ್ಲಿಷ್‌ ಸಾಹಿತ್ಯವನ್ನು ಅಧ್ಯಯನ ಮಾಡಿದೆ. ಎಂ.ಎ ಇಂಗ್ಲಿಷ್‌ ಅಧ್ಯಯನಕ್ಕಾಗಿ ವಿಶ್ವವಿದ್ಯಾನಿಲಯದ ಮೆಟ್ಟಿಲು ಹತ್ತಿದಾಗಲಂತೂ ಸ್ವಾತಂತ್ರ್ಯದ ಅನುಭೂತಿ. ಶೆಲ್ಲಿ, ಷೇಕ್ಸ್‌ಪಿಯರ್, ಕೀಟ್ಸ್, ಹಾರ್ವೆಲ್, ಕಮಲಾಸುರಯ್ಯ, ಅರುಂಧತಿರಾಯ್ ಕುರಿತ ಓದು ಒಡನಾಡಿಗಳಂತೆ ಜೀವನದ ರೂಪಕ ಪ್ರತಿಮೆಗಳಾಗಿ ಹೊಸತನವನ್ನಿತ್ತಿತು. ಆಗಲೇ ಕ್ಯಾಂಪಸ್‍ನಲ್ಲಿ ಆತನ ಪರಿಚಯವಾದದ್ದು. ತಿಳಿನೀಲಿ ಕಣ್‌ಗಳ ಹಾಲು ಮೊಗದ ಮೇಲೆ ಸಣ್ಣದಾಗಿ ರಾರಾಜಿಸುತ್ತಿರುವ ಗಡ್ಡ; ಮೌನವನ್ನೂ ಹುರಿದುಮುಕ್ಕಿ ಮಾತನಾಡುವ ಡಾ. ಅಯಾನ್ ಮಲ್ಲಿಕ್ ನನಗಂತೂ ವಿಪರೀತ ಇಷ್ಟವಾಗಿದ್ದ. ಆಗತಾನೆ ಇಂಗ್ಲಿಷ್‌ ಸಹಾಯಕ ಪ್ರಾಧ್ಯಾಪಕನಾಗಿ ಸೇರಿದ್ದ ಡಾ. ಅಯಾನ್ ‘ಎ ಕಂಪ್ಯಾರಿಟಿವ್ ಲಿಟರೇಚರ್ ಆಂಡ್ ಟ್ರಾನ್ಸ್‌ಲೇಷನ್’ ಎಂಬ ತೌಲನಿಕ ಪತ್ರಿಕೆಯನ್ನು ಬೋಧಿಸುತ್ತಿದ್ದ. ದಿನೇ ದಿನೇ ಅಯಾನ್ ಹತ್ತಿರವಾಗುತಲಿದ್ದ. ನಮ್ಮ ಪ್ರಣಯ ಕ್ಯಾಂಪಸ್‍ನ ಕಿಟಕಿ ಬಾಗಿಲುಗಳಿಗೂ ಗೊತ್ತಾಗಿತ್ತು. ಶ್ರೀಮಂತ ಕುಟುಂಬದ ಅಯಾನ್ ಕೊನೆಗೂ ಮದುವೆಯಾಗುವ ಭರವಸೆಯನ್ನಿತ್ತಿದ್ದ. ನನಗಿಂತ ಏಳು ವರ್ಷ ದೊಡ್ಡವನಾಗಿದ್ದ ಆತನ ಮೇಲೆ ಪ್ರೀತಿಗರೆದಷ್ಟೂ ಜಗತ್ತಿನ ಯಾವೊಂದರ ಮೇಲೂ ಮನಸ್ಸು ಬಿತ್ತಿರಲಿಲ್ಲ.

ಅಂದು ಅಯಾನ್ ನಿನ್ನ ಜೊತೆ ಮಾತನಾಡಬೇಕು ಯುನಿವರ್ಸಿಟಿ ಕ್ವಾರ್ಟರ್ಸ್‌ಗೆ ಬಾ ಎಂದಾಗ ಏನನ್ನೂ ಯೋಚಿಸದೆ ಆತನ ಬೈಕ್‍ನ ಹಿಂದೆ ಕುಳಿತು ಕ್ವಾರ್ಟರ್ಸ್‌ಗೆ ಹೋಗಿದ್ದೆ. ನೀನು ಅಂದ್ರೆ ನನ್ನ ಪ್ರಾಣ. ನಿನ್ನ ಈ ಪ್ರೀತಿಯ ಬೆರಗಿಗೆ ಮರುಳಾಗಿದ್ದೇನೆ. ಒಂದೇ ಒಂದು ಸಲ ನಿನ್ನನ್ನು ತಬ್ಬಿಕೊಳ್ಳಲೇ ಎಂದು ಅನುಮತಿ ಕೇಳುತ್ತಲೇ ತನ್ನ ಬಲಾಢ್ಯ ಕಬಂಧ ಬಾಹುಗಳನ್ನು ನನ್ನದೆಯ ಮೇಲೆ ಅದುಮಿಟ್ಟಂತೆ ಅಪ್ಪಿಕೊಂಡ. ಅನುಮತಿ ಇಲ್ಲದೆ ತಬ್ಬಿದ ಅವನ ಸ್ಪರ್ಶ ಒಂದಿನಿತೂ ಸಹ್ಯವೆನಿಸಲಿಲ್ಲ. ಪ್ರೀತಿಯನ್ನು ಕೆರಳಿಸಲಿಲ್ಲ. ಒಮ್ಮೆಲೆ ಅವನ ಬಲಾಢ್ಯ ದೇಹವನ್ನು ಕಿತ್ತು ಬಿಸುಟಬೇಕು ಎಂದೆನ್ನಿಸಿತು. ಆದರೆ ನನಗೆ ಗಾಬರಿಯಾಗುವಷ್ಟು ವೇಗದಲ್ಲಿ ಆತನೇ ನನ್ನನ್ನು ಬದಿಗೆ ಸರಿಸಿ ಮುಗ್ಧನೋಟವನ್ನು ಬೀರಿ ಕ್ಷಮಿಸು ಇಶಾನ ಎಂದಾಗ, ಯಾಕೋ ತಡೆಯಲಾಗದೆ ನಾನೇ ಆತನನ್ನು ತಬ್ಬಿಕೊಂಡೆ. ಆದರೆ ಆ ಸುಮಧುರ ಸ್ಪರ್ಶಕ್ಕೆ ಆತ ಮತ್ತೆ ಸ್ಪಂದಿಸದೆ ಕೈಗಳೆರಡನ್ನೂ ಮೃದುವಾಗಿಯೇ ಭುಜಗಳಿಂದ ಬಿಡಿಸಿಕೊಂಡ. ಒಬ್ಬರ ಮುಖವನ್ನು ಮತ್ತೊಬ್ಬರು ನೋಡುತ್ತಲೇ ಕೆಲವು ಕ್ಷಣ ಕಳೆದೆವು. ಇಬ್ಬರಲ್ಲೂ ಮುಜುಗರ ಆತಂಕ. ‘ಇಶಾನ ಕಾಫಿ ಮಾಡಲೇ ಕುಡಿಯುತ್ತೀಯ ತಾನೆ?’ ಯೋಚಿಸುತ್ತಿದ್ದ ನನ್ನ ಮನಸ್ಸನ್ನು ವಾಸ್ತವಕ್ಕೆ ತರುವ ಪ್ರಯತ್ನ; ನಾನು ತಲೆಯಲ್ಲಾಡಿಸಿದೆ. ಕಾಫಿ ಕುಡಿದು ಅವನ ಜೊತೆಯಲ್ಲಿ ಮಾತನಾಡುತ್ತಾ ಹಾಗೇ ಮನೆತುಂಬಾ ಓಡಾಡಿ ಮತ್ತೆ ಕ್ಯಾಂಪಸ್‍ಗೆ ಮರಳಿದೆವು.

ಉಮ್ಮನ ಬಳಿ ಅಯಾನ್‍ನ ವಿಚಾರ ಪ್ರಸ್ತಾಪಿಸಿದೆ. ನಿಖಾ ಪ್ರಸ್ತಾಪವನ್ನು ಒಪ್ಪಿಕೊಂಡರು. ಎಂ.ಎ ಪರೀಕ್ಷೆ ಮುಗಿದ ಹತ್ತುದಿನಗಳೊಳಗಾಗಿ ನನ್ನ ಮತ್ತು ಅಯಾನ್ ನಡುವಿನ ದಾಂಪತ್ಯ ಬದುಕು ಸಹಜವಾಗಿಯೇ ಶುರುವಾಯಿತು. ಅಯಾನ್‍ನ ಉಮ್ಮ, ಬಾಪ, ಅಣ್ಣಂದಿರು, ಅತ್ತಿಗೆಯಂದಿರು, ಮಕ್ಕಳಿಂದ ಗಿಜಿಗುಡುತ್ತಿದ್ದ ತುಂಬಿದ ಸಂಸಾರವದು. ಬದುಕಿನೂದ್ದಕ್ಕೂ ಉಮ್ಮನ ಜೊತೆ ಒಂಟಿಯಾಗಿ ಕಳೆದವಳಿಗೆ ಮನೆಮಂದಿ ಪ್ರೀತಿಯ ಸವಿಯನ್ನು ಉಣಿಸಹೊರಟರು. ಅಯಾನ್ ಮಾತ್ರ ಒಂಟಿ ಬದುಕನ್ನು ಅಪೇಕ್ಷಿಸುವ ಮನುಷ್ಯ. ತನ್ನ ಓದು, ಬರಹಗಳಿಗಾಗಿ ಪ್ರಶಾಂತವಾದ ವಾತಾವರಣವನ್ನು ಅಪೇಕ್ಷಿಸುವ, ಕುಟುಂಬ ಸದಸ್ಯರನ್ನು ಅಷ್ಟಾಗಿ ಹಚ್ಚಿಕೊಳ್ಳದ ಮೌನಮುಖಿ. ಅವನ ಮಾತುಗಳೇನಿದ್ದರೂ ತರಗತಿಯ ಹುಡುಗರ ಮುಂದೆ. ಅಯಾನ್ ಇತ್ತೀಚೆಗೆ ಮನೆಯೊಳಗೆ ಅಪರಿಚಿತನಂತೆ ವರ್ತಿಸುತ್ತಿದ್ದ. ಒಮ್ಮೆಯೂ ನನ್ನನ್ನು ಮುಟ್ಟುವ ಪ್ರಯತ್ನ ಮಾಡಿರಲಿಲ್ಲ. ಇದು ನನಗೆ ಮತ್ತಷ್ಟು ದಿಗಿಲನ್ನು ಉಂಟುಮಾಡಿತ್ತು. ಸನಿಹ ಸಮೀಪಿಸಿದಾಗಲೆಲ್ಲಾ ಇಶಾನ ಈ ಪ್ರೀತಿಯ ಸವಿಯನ್ನು ಒಂದಿಷ್ಟು ದಿನಗಳಾದರೂ ಹಾಗೇ ಉಳಿಸಿಕೊಳ್ಳುವಾ. ನಮ್ಮ ನಡುವೆ ಸದ್ಯ ದೈಹಿಕ ಸಂಬಂಧಕ್ಕಿಂತಲೂ ಪರಸ್ಪರ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವುದು ಮುಖ್ಯವೆಂದು ಸಮಜಾಯಿಷಿ ನೀಡುತ್ತಿದ್ದ.

ಸೆಕ್ಸ್ ಎಂಬುದು ಕೇವಲ ಸುಖದ ಉತ್ತುಂಗ ಸ್ಥಿತಿ ಎಂದು ಭಾವಿಸಿ ದೇಹವನ್ನು ಆರ್ಪಿಸುವ ಜಾಯಮಾನದವಳಲ್ಲ. ದೇಹ ದೇಹ ಸೇರುವ ಆ ಕ್ಷಣ ಎಲ್ಲದರೊಳಗೊಂದಾಗಿ ಮನಸ್ಸು ಮನಸ್ಸುಗಳು ಕೂಡಿಕೊಳ್ಳುತ್ತವಲ್ಲ ಆ ಆಧ್ಯಾತ್ಮಿಕ ನಲುಮೆಗೆ ಹಾತೊರೆಯುವ ಹೆಣ್ಣು ನಾನು. ಜಗದ ಸಕಲ ನೋವಿಗೆ ಮದ್ದಾಗಬಲ್ಲ, ಲೋಕದ ಕೇಡನ್ನು ಕಳಚಿಡುವ ಶಕ್ತಿ ತನ್ನ ಇನಿಯನ ತೋಳಿಗಿದೆ ಎಂಬ ನಂಬಿಕೆಯನ್ನು ಪ್ರೀತಿ ಮೂಡಿಸುತ್ತದಷ್ಟೇ. ಅಷ್ಟೇ ಸಾಕು ನನಗೆ ಬದುಕನು ಬೆಳಕಾಗಿಸಲು. ಅವನ ಮಾತಿನಂತೆ ನಡೆದುಕೊಂಡೆ. ಆದರೂ ಆತನ ಒಂಟಿತನ ನನಗ್ಯಾಕೋ ಕಸಿವಿಸಿ ಉಂಟುಮಾಡುತ್ತಿತ್ತು.

ಅಯಾನ್‍ನ ಉಮ್ಮನ ಬಳಿ ಕೇಳಿದೆ, ಅಯಾನ್ ಯಾಕಿಷ್ಟು ಒಂಟಿಯಾಗಿ ಎಲ್ಲರಿಂದಲೂ ದೂರ ಸರಿದು ಏಕಾಂತ ಬಯಸುತ್ತಾನೆಂದು. ಅದಕ್ಕವರ ಉತ್ತರ ಒಂದೇ: ಅಯಾನ್ ಓದಿದ್ದೆಲ್ಲವೂ ರೆಸಿಡೆನ್ಸಿಯಲ್ ಶಾಲೆಯಲ್ಲಿ. ಅವನ ಬಾಪನಿಗೆ ಅವನು ಓದಿ ಉನ್ನತ ಮಟ್ಟ ತಲುಪಬೇಕೆಂಬ ಆಸೆ. ಜೊತೆಗೆ ಹಣಕ್ಕೆ ಕೊರತೆಯು ಇರಲಿಲ್ಲ. ಪಾಪ ಅಯಾನ್ ಊರಿನಲ್ಲಿದ್ದುಕೊಂಡೆ ಓದಿಕೊಳ್ಳುವೆ ಬಾಪ ಎಂದು ಹಟಮಾಡಿದರೂ ಪ್ರಯೋಜನವಾಗಲಿಲ್ಲ. ಅವನಿಗೆ ಅಜ್ಜಿ ಎಂದರೆ ಅದಮ್ಯ ಪ್ರೀತಿ. ಅವರನ್ನು ಬಿಟ್ಟು ಹೋಗುವಾಗ ಅಯಾನ್ ಅತ್ತಿದ್ದು ಅಷ್ಟಿಷ್ಟಲ್ಲ. ಅಯಾನ್ ಹೋದ ಅದೇ ವರ್ಷ ನನ್ನ ಅತ್ತೆ –ಅಯಾನ್‍ನ ಅಜ್ಜಿ– ಅವನಿಲ್ಲದ ಕೊರಗಿನಿಂದಲೇ ತೀರಿಕೊಂಡರು. ಅವನೂ ಬಂದಿದ್ದ ಮಯ್ಯತ್‍ನ ಬಳಿಯಿಂದ ಕದಲದೆ ಬಿಕ್ಕಿಬಿಕ್ಕಿ ಅಳುತ್ತಿದ್ದ. ಆ ಹೊತ್ತು ಅವನ ದುಃಖವನ್ನು ತಡೆದಿಡಲು ಯಾರಿಂದಲೂ ಸಾಧ್ಯವಾಗಲಿಲ್ಲ. ಅದಾದ ಮೇಲೆ ವರ್ಷದಿಂದ ವರ್ಷಕ್ಕೆ ಅವನ ಮಾತು ಚುರುಕುತನ, ತುಂಟಾಟ ಕಡಿಮೆಯಾಯಿತು. ಅದು ಅವನ ಶಾಲೆಯ ಪರಿಸರ ಮತ್ತು ಅಜ್ಜಿಯ ಅಗಲಿಕೆಯ ಕಾರಣದಿಂದಲೂ ಇರಬಹುದು ಎಂದು ಒಮ್ಮೆಲೆ ನಿಟ್ಟುಸಿರು ಬಿಟ್ಟರು.

ಆ ದಿನ ರಾತ್ರಿ ಅಯಾನ್‍ನನ್ನು ಹೇಗಾದರೂ ಮಾಡಿ ಮತ್ತಷ್ಟು ಅರ್ಥಮಾಡಿಕೊಂಡು ಆವನ ಬಾಳಿನೊಳಗೆ ಪ್ರವೇಶಿಸಬೇಕೆಂಬ ಆಕಾಂಕ್ಷೆಯಲ್ಲಿ ‘ನಿನ್ನ ಬಾಲ್ಯದ ಬಗ್ಗೆ ಒಂದಿಷ್ಟು ಇಂಟ್ರೆಸ್ಟಿಂಗ್ ವಿಚಾರ ಹೇಳೋ? ಈ ರಾತ್ರಿ ಪೂರ್ತಿ ನಿನ್ನ ಬಾಲ್ಯಜಗತ್ತಿನಲ್ಲಿ ಪಯಣಿಸಬೇಕೆಂಬ ಆಸೆ. ಆದರೆ ಕೆಲವು ಷರತ್ತುಗಳಿವೆ;ಯಾವುದೇ ಕಾರಣಕ್ಕೂ ನಮ್ಮ ನಡುವೆ ಸುಳ್ಳಿನ ಸಹವಾಸವಾಗಲಿ, ಮುಚ್ಚುಮರೆಯ ಗೋಡೆಗಳಾಗಲಿ ಇರಬಾರದು. ಮಧ್ಯೆಮಧ್ಯೆ ನಾನು ಕೇಳುವ ಕೆಲವು ಪ್ರಶ್ನೆಗಳನ್ನು ಇಗ್ನೋರ್ ಮಾಡದೆ ಸರಿಯಾದ ಉತ್ತರವನ್ನೂ ನೀಡಬೇಕು. ಎಲ್ಲಕ್ಕಿಂತಲೂ ಮುಖ್ಯ ಕ್ಲಾಸ್‍ನಲ್ಲಿ ನೀನು ಕೊಡೊ ಬೋರಿಂಗ್ ಲೆಕ್ಚರ್‌ನಂತಿರದೆ ಅರೇಬಿಯನ್ ನೈಟ್‌ನಂತಿರಬೇಕು. ಮೊದಲು ಕೈಮೇಲೆ ಕೈಯನ್ನಿಟ್ಟು ಪ್ರಮಾಣಮಾಡು ಎಂದು ಬಲಗೈಯನ್ನು ಮುಂದುಮಾಡಿದೆ. ಆಯಾನ್ ಮಾತ್ರ ಒಮ್ಮಲೇ ದಿಗಿಲಾದವನಂತೆ ಕಂಡರೂ ನನ್ನ ಮೇಲಿನ ಪ್ರೀತಿಯಿಂದ ಮುಗ್ಧ ಹಿನ್ನೋಟಗಳನ್ನು ತೆರೆದಿಡಲು ಅನುಮತಿಯನ್ನು ಕೈಕೈಗಳ ಮೃದು ಸ್ಪರ್ಶದ ಮೂಲಕ ಚಾಲ್ತಿಯನ್ನಿತ್ತ.

ಇಶಾನ ಈ ಜಗತ್ತಿನಲ್ಲಿ ನಾನು ಇಷ್ಟಪಟ್ಟದ್ದು ದಕ್ಕಿದು ತೀರಾ ವಿರಳ, ನಿನ್ನನ್ನು ಹೊರತುಪಡಿಸಿ. ಈ ಮನೆಯಲ್ಲಿ ನನ್ನಿಷ್ಟದ ಅಜ್ಜಿ ಇದ್ದಳು. ಆಕೆಗೆ ನಾನೆಂದರೆ ಜೀವ. ಸದಾ ಕಥೆ ಹೇಳುವ, ಪ್ರೀತಿ ಉಣಿಸುವ, ನವಿರಾಗಿ ತಲೆ ಸವರಿ ಸಾಂತ್ವನ ಹೇಳುವ ಹಿರಿಜೀವದ ಬಗ್ಗೆ ನನಗೂ ಅಷ್ಟೇ ಪ್ರೀತಿ. ಬಾಪ ವ್ಯಾಪಾರದ ಒತ್ತಡದಲ್ಲಿ ನಮ್ಮನ್ನ ಮರೆತ. ಉಮ್ಮನಿಗೆ ಇಷ್ಟು ದೊಡ್ಡ ಕುಟುಂಬದ ನಿರ್ವಹಣೆ. ನನ್ನ ವಾರಿಗೆಯಲ್ಲಿ ನಾನೇ ಸಣ್ಣವ. ಅಕ್ಕ ಅಣ್ಣದಂದಿರೆಲ್ಲರೂ ಅವರವರ ವಯಸ್ಸಿಗೆ ಸರಿಹೊಂದುವ ಸ್ನೇಹಿತರನ್ನ ಸಂಪಾದಿಸಿಕೊಂಡರು. ನನಗೆ ಆ ಹೊತ್ತು ಯಾರೂ ಇಲ್ಲದ ಸ್ಥಿತಿ. ಅಜ್ಜಿಯೇ ಸರ್ವಸ್ವವಾಗಿ ಬದುಕಿನ ಖಾಲಿ ಪುಟಗಳಿಗೆ ಬಣ್ಣವನ್ನಚ್ಚಿ ಚಿತ್ತಾರ ಮೂಡಿಸಿದಳು. ಗೆಳತಿಯಾಗಿ, ಉಮ್ಮಳಾಗಿ, ನನ್ನಜ್ಜಿ ಎಲ್ಲವನ್ನೂ ಪ್ರೀತಿಪೂರ್ವಕವಾಗಿ ಹೇಳಿಕೊಟ್ಟಳು. ಸಂಭ್ರಮದ ಆ ದಿನಗಳಿಗೆ ಸರಿಸಾಟಿಯಾದ ವಸ್ತು ಜಗತ್ತಿನಲ್ಲಿರಲಿಲ್ಲ.

ಆದರೆ ನನ್ನ ಖುಷಿಗೆ ಬಿರುಗಾಳಿಯಂತೆ ಬಾಪನ ಹಟ ಅಡ್ಡಿಯಾಯಿತು. ಎಷ್ಟೇ ಗೋಗರೆದರೂ ರೆಸಿಡೆನ್ಸಿಯಲ್ ಸ್ಕೂಲಿಗೆ ನನ್ನನ್ನು ಸೇರಿಸಿ ಬಾಲ್ಯದ ಕನಸುಗಳನೂ ಮಂಜಿನಂತೆ ಕರಗಿಸಿಬಿಟ್ಟರು. ಮನುಷ್ಯ ಪ್ರೀತಿಗಾಗಿ, ಮನುಷ್ಯರ ಸನಿಹಕ್ಕಾಗಿ ಹಾತೊರೆಯುತ್ತಿದ್ದ ನಾನು ಮನುಷ್ಯರನ್ನು ಕಂಡರೆ ಭಯಪಡುವ ಸಂಕಟವನ್ನು ಆ ಸ್ಕೂಲ್ ನನಗೊದಗಿಸಿತ್ತು. ಮುಂದೆ ಓದಿನ ಕಡೆ ಗಮನಕೊಡುತ್ತಾ ಹಂತಹಂತವಾಗಿ ಇಲ್ಲಿಯವರೆಗಿನ ಪಯಣವನ್ನು ಸವೆಸಿದ್ದೇನೆ. ಭಯ ನಿವಾರಣೆಗೆ ಪುಸ್ತಕಗಳ ಮೊರೆಹೋದೆ. ಅದೇ ಪುಸ್ತಕಗಳು ನನ್ನನ್ನು ಒಬ್ಬ ಇಂಗ್ಲಿಷ್‌ ಅಧ್ಯಾಪಕನನ್ನಾಗಿ ಮಾಡಿದೆ. ಇವಿಷ್ಟು ನನ್ನ ಕಥೆ. ಇದಕ್ಕಿಂತ ಹೆಚ್ಚಿನದ್ದೇನೂ ಇಲ್ಲ.

ತಡೆ ಅಯಾನ್ ನಾನು ಈಗಾಗಲೇ ಹೇಳಿದ್ದೇನೆ. ನಮ್ಮ ನಡುವೆ ಯಾವುದೇ ಕಾರಣಕ್ಕೂ ಮರೆಮಾಚಲ್ಪಟ್ಟ ಘಟನೆಗಳಿರಬಾರದೆಂದು. ನೀನು ಏನನ್ನೋ ಮುಚ್ಚಿಡುವ ಪ್ರಯತ್ನ ಮಾಡ್ತಾ ಇರೋದು ನಿನ್ನ ಮಾತಿನಿಂದಲೇ ಸ್ಪಷ್ಟವಾಗುತ್ತಿದೆ. ದಯಮಾಡಿ ಮುಚ್ಚಿಡಬೇಡ. ಸದಾ ನೀನು ನನ್ನ ಸನಿಹದಿಂದ ಕಳಚಿಕೊಳ್ಳಲು ಯತ್ನಿಸುತ್ತಿರುತ್ತೀಯ. ನಿಜ ಹೇಳು ಅಜ್ಜಿಯ ಅಗಲಿಕೆಯೊಂದೇ ನಿನ್ನ ವ್ಯಕ್ತಿತ್ವವನ್ನು ರೂಪಿಸಿಲ್ಲ. ಮತ್ತಿನ್ನೇನೋ ಇದೆ. ಮಾತನಾಡಿ ಹಗುರವಾಗುವುದನ್ನು ಬಿಟ್ಟು ಮತ್ತೆ ಮತ್ತೆ ಒಂಟಿಯಾಗಿ ನರಕಯಾತನೆ ಅನುಭವಿಸುವ ಅಗತ್ಯವಾದರೂ ಏನಿದೆ? ಈ ಭೂಮಿಯಲ್ಲಿ ನಿನ್ನ ಮೇಲೆ ಅಪಾರ ನಂಬಿಕೆ ಇಟ್ಟವಳು ನಾನು. ನನ್ನ ಅಯಾನ್ ಎಲ್ಲವನ್ನೂ ಬಲ್ಲವನು ಎಂಬ ಅಹಂಕಾರದ ಜೊತೆಗೆ ದೌರ್ಬಲ್ಯ ಮುಕ್ತನೆಂಬ ಗರ್ವ ನನಗಿದೆ. ಆ ಗರ್ವಕ್ಕೆ ಕೊಡಲಿ ಏಟು ಕೊಡಬೇಡ.

ನನ್ನ ಮಾತು ಅಯಾನ್‍ನಲ್ಲಿ ಮತ್ತಷ್ಟು ಆತಂಕ ತಲ್ಲಣಗಳನ್ನು ಉಂಟುಮಾಡಿತ್ತು. ಗತಕಾಲದ ನರಕಯಾತನೆಯ ಕಥೆಯೊಂದರ ಅಂತ್ಯಕ್ಕೆ ಇದೇ ಸರಿಯಾದ ಸಮಯ ಎಂಬಂತೆ ಅಯಾನ್‍ನ ಮುಖ ಸ್ಪಂದಿಸುತ್ತಿತ್ತು. ಹೇಗೆ ಹೇಳಲಿ ಇಶಾನ ನನ್ನ ನೋವನ್ನು. ಈವರೆಗೆ ಒಡಲ ಉರಿಯಾಗಿ ಸುಡುತ್ತಿದ್ದ ಕಹಿಯನ್ನು; ಹೇಳದಿದ್ದರೆ ನಿನ್ನ ಪ್ರೀತಿಗೆ ನಾನು ಮಾಡುವ ವಿದ್ರೋಹ. ಹೇಳಿದರೆ ನನ್ನ ಬಗ್ಗೆ ನಿನ್ನಲ್ಲಿ ಮೂಡುವ ಜಿಗುಪ್ಸೆ, ಅಸಹ್ಯ. ಎರಡರಲ್ಲೂ ನೊಂದುಕೊಳ್ಳುವುದು ನನ್ನ ಹೃದಯವೆ. ನನ್ನೆಲ್ಲಾ ನೋವುಗಳಿಗೆ ಸಾಂತ್ವನವಾಗಿರುತ್ತೀಯ ಎಂಬ ನಂಬಿಕೆಯಲ್ಲಿ ನನ್ನೊಡಲ ಯಾತನೆಯನು ಅರಹುತ್ತೇನೆ.

ರೆಸಿಡೆಸ್ಸಿಯಲ್ ಸ್ಕೂಲ್‍ನ ವಾತಾವಾರಣದಲ್ಲಿ ಜೀವವನ್ನು ಹಿಂಡಿಹಿಪ್ಪೆ ಮಾಡುತ್ತಿದ್ದ ಜಾಗವೇ ನಮ್ಮ ಹಾಸ್ಟೇಲ್. ಆಗ ನನಗೆ ಹತ್ತು ವರ್ಷ. ನೋಡಲು ಮುದ್ದಾಗಿದ್ದೆ. ನೀನು ಗಮನಿಸಿರಬೇಕು ಆಲ್ಬಮ್‍ನಲ್ಲಿರುವ ಹಳೆಯ ಫೋಟೊಗಳನ್ನು. ಒಂದು ಕೊಠಡಿಯಲ್ಲಿ ನಾವು ನಾಲ್ಕು ಮಂದಿ ಗೆಳೆಯರು ಒಂದರೊಳಗೊಂದಾಗಿ ಕಲೆತು ಆಟವಾಡಿ ನಮ್ಮನಮ್ಮ ನೋವುಗಳಿಗೆ ಸಾಂತ್ವನ ಹೇಳುತ್ತಿದ್ದ ದಿನಗಳವು. ರಾತ್ರಿಯಾಯಿತೆಂದರೆ ನಮಗೆ ಭಯ. ಕಾಳಕಗ್ಗತ್ತಲೆಯ ದೆವ್ವ ಭೂತದ ಬಗೆಗಿನ ಭಯವಲ್ಲ. ಈ ಜಗದ ಅತ್ಯಂತ ನೀಚ ಕೃತ್ಯಗಳಿಗೆ ಸರತಿಯಲ್ಲಿ ಸಾಕ್ಷಿಯಾಗುತ್ತಿದ್ದೇವೆಂಬ ಭಯ. ನಮ್ಮ ವಾರ್ಡನ್ ತನ್ನ ಕಾಮತೃಷೆ ತಣಿಸಿಕೊಳ್ಳಲು ಬಳಸಿಕೊಳ್ಳುತ್ತಿದ್ದದ್ದು ನಮ್ಮ ಎಳೆಯ ದೇಹವನ್ನು. ಅವನ ಕೌರ್ಯಕ್ಕೆ ನಮ್ಮದೇಹ ಮನಸ್ಸು ನಜ್ಜುಗುಜ್ಜಾಗುತ್ತಿದ್ದವು. ವಾಕರಿಕೆ ಬರುತ್ತಿತ್ತು ನಮ್ಮ ಬಾಯಿಯೊಳಗೆ ಯಾರಬ್ಬೆ.. ಕೆಲವು ರಾತ್ರಿಗಳಲ್ಲಿ ನೋವಿನ ವಿಕಾರತೆ ಎಷ್ಟಿತ್ತೆಂದರೆ ಎದ್ದು ನಡೆಯಲು ಅಸಾಧ್ಯವಾದಷ್ಟು. ಯಾರ ಬಳಿಯಾದರೂ ನಮ್ಮ ಅಳಲನ್ನು ತೋಡಿಕೊಳ್ಳುವಾ ಎಂದರೆ ಆತ ಒಡ್ಡುವ ಚಿತ್ರಹಿಂಸೆಯ ಭಯ. ದಿನಂಪ್ರತಿ ಒಬ್ಬೊಬ್ಬರನ್ನ ಬಳಸಿ ಬಿಸುಡುವ ಅವನ ವಿಕಾರಕ್ಕೆ ಬಲಿಯಾದ ನನಗೆ ಸತ್ತುಬಿಡಬೇಕೆಂದೆನ್ನಿಸುತ್ತಿತ್ತು. ಆದರೂ ವಯಸ್ಸಿನ ಕಾರಣವೋ ಏನೋ ನಮ್ಮನ್ನ ನಮ್ಮ ಗೆಳೆತನವೇ ಉಳಿಸಿಕೊಂಡಿತು.

ಇಶಾನ ನನ್ನ ಬಗ್ಗೆ ಅಸಹ್ಯ ಪಡಬೇಡ. ನನ್ನ ತಪ್ಪು ಏನೂ ಇಲ್ಲ. ಅರಿವಿಲ್ಲದ ದಿನಗಳಲ್ಲಿ ನಡೆದ ಆ ನೋವು ಇಲ್ಲಿಯವರೆಗೂ ಭೂತದಂತೆ ಬೆನ್ನತ್ತಿ ಬರುತ್ತಿದೆ. ಒಮ್ಮೆ ಮದುವೆಗೂ ಮುಂಚೆ ಕ್ವಾರ್ಟರ್ಸ್‌ನಲ್ಲಿ ನಿನ್ನನ್ನು ತಬ್ಬಿಕೊಂಡಾಗಲೂ ಆ ರಾತ್ರಿಯ ಕೆಟ್ಟ ಗಳಿಗೆಯೇ ಕಣ್ಣ ಮುಂದೆ ಬಂದಿತ್ತು. ಒಮ್ಮೆಲೇ ನನ್ನ ನೋವೆಲ್ಲವೂ ಸ್ಫೋಟಗೊಂಡು ನಿನ್ನನ್ನು ದೂರ ತಳ್ಳುವಂತೆ ಮಾಡಿತ್ತು. ಮದುವೆಯಾದ ಮೇಲಂತೂ ನೀನು ಸನಿಹಕ್ಕೆ ಸುಳಿವಾಗ ನಾನು ಮತ್ತೆಮತ್ತೆ ಓಡುತ್ತಿದ್ದೆ; ಆ ರಾತ್ರಿಯ ಕರಾಳ ನೋವುಗಳಿಂದ ಕಳಚಿಕೊಳ್ಳಲು. ಕಾರಣ ನಾನು ಅನುಭವಿಸಿದ ನೋವ ನಿನ್ನ ಶರೀರದ ಮೇಲೆ ಹೇರಲಾರೆ ಎಂದು ಬಿಕ್ಕಿಬಿಕ್ಕಿ ಅತ್ತ. ಸಮಾಧಾನಿಸುವ ನನ್ನ ಮನಸ್ಸು ಕನಿಕರದಿಂದ ಕರಗಿತ್ತು. ಅಯಾನ್‍ನ ತಲೆಯನ್ನು ಸವರುತ್ತಾ ಎದೆಯಮೇಲಿಟ್ಟು ಎದೆಯ ಬಡಿತವನ್ನು ಕೇಳಿಸಿ ಮುತ್ತಿಕ್ಕಿ ಸಮಾಧಾನಿಸಿದೆ.

ಹುಚ್ಚಪ್ಪ ಆ ವಾರ್ಡನ್ ಪ್ರಕೃತಿಯ ವಿರುದ್ಧದ ನೀಚತನಕ್ಕೆ ನಿನ್ನ ದೇಹವನ್ನು ನೋವಿಸಿ ಪುಟ್ಟ ಹೃದಯಕ್ಕೆ ಹಾನಿಮಾಡಿದ. ನಮ್ಮ ಸಂಬಂಧ ಹಾಗಲ್ಲ. ನಾನು ಹೆಣ್ಣು. ನನ್ನ ದೇಹದ ಶಕ್ತಿ ಸಾಮರ್ಥ್ಯದ ಬಗ್ಗೆ ಅಪಾರ ನಂಬಿಕೆ ಇದೆ. ನಿನ್ನ ನೋವಿಗೆ ನಾನು ನನ್ನ ನೋವಿಗೆ ನೀನು ಎಂಬಂತಿರಬೇಕು ಬದುಕು. ನಿನ್ನ ಮನಸ್ಸಿನಲ್ಲಿ ಇಷ್ಟು ನೋವುಗಳಿದ್ದು ಕಾಮದ ಬಗ್ಗೆ ಜಿಗುಪ್ಸೆ ಇದ್ದು ನೀನು ನನ್ನನ್ನು ಪ್ರೀತಿಸಿದ್ದೀಯ ಎಂದಾದರೆ ಅದು ನಿಜವಾದ ಪ್ರೀತಿಯಲ್ಲದೆ ಮತ್ತಿನ್ನೇನು? ದೇಹಕ್ಕಿಂತಲೂ ಮನಸ್ಸನ್ನ ನೋಡಿದ ನಿನ್ನ ಬಗ್ಗೆ ಅಭಿಮಾನ ಮೂಡುತ್ತದೆ. ನಿಧಾನಕ್ಕೆ ಸಾಧ್ಯವಾದರೆ ನೀನು ನನ್ನ ಸೇರು. ಇಲ್ಲವಾದರೆ ಈ ಜೀವ ನಿನ್ನ ಜೊತೆ ಹೀಗೆ ಬೆಸೆದುಕೊಂಡಿರುತ್ತದೆ. ಈಗ ಮಲಗು ನಾಳಿನ ಸೂರ್ಯ ನಮ್ಮ ಬದುಕಿನಲ್ಲಿ ಹೊಸಬಗೆಯ ಹೊಂಗಿರಣ ತರಲಿದೆ. ಗುಡ್ ನೈಟ್ ಮೈ ಡಿಯರ್. ಲವ್ ಯು ಎಂದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT