6

ಸಕ್ಕರೆ ಮತ್ತು ಇರುವೆ

Published:
Updated:
ಚಿತ್ರ: ಡಿ.ಕೆ. ರಮೇಶ್

ಪುರುಷೋತ್ತಮ ಹಾಸ್ಟೆಲಿನ ರೂಮಿನಲ್ಲಿ ಕಿಟಕಿಯ ಎದುರಿಗೆ ಕುಳಿತು ಸಿಗರೇಟು ಹೊತ್ತಿಸಿ ಮೊಬೈಲು ಹಿಡಿದು ಫ್ಯಾನು ನಂದಿಸಿದ. ಚಳಿಗೆ ಹೆದರಿ ಮೈಮೇಲಿನ ರಗ್ಗು ತೆಗೆಯಲು ಮನಸ್ಸಾಗಲಿಲ್ಲ. ಎದುರಿಗಿನ ದೇವಸ್ಥಾನದ ಬದಿಗಿನ ಗೋಡೆಗೆ ಮುದುಕಿಯೊಬ್ಬಳು ತಲೆಹಚ್ಚಿ ನಿಂತಿದ್ದಳು. ಸೈಕಲ್ಲು ಬೆಲ್ಲನ್ನು ವಿಪರೀತವಾಗಿ ಒತ್ತುತ್ತ ಹುಡುಗನೊಬ್ಬ ರಸ್ತೆಯಲ್ಲಿ ಸಾಗಿಹೋದ. ಕಾಗೆಯೊಂದು ಕಿಟಕಿಯ ಸರಿ ಎದುರಿಗೆ ಹಾರಿಹೋಯಿತು. ಮತ್ತುಳಿದಂತೆ ಎಲ್ಲವೂ ದಿನದಂತೆಯೇ ಇತ್ತು.

‘ತಿಂಡಿಗೆ ಈಗ ಬರುತ್ತೀಯೋ, ತಡವಿದೆಯೋ?’

‘ನೀನು ಮುಂದಾಗು, ಆಮೇಲೆ ಬರ್ತೇನೆ’ ಬಾಗಿಲು ತೆರೆಯದೆಯೇ ನೆರೆಯ ಕೋಣೆಯ ಮುರುಳಿಯನ್ನು ಕಳುಹಿಸಿದ ಪುರುಷೋತ್ತಮ.
ಬೆಳಿಗ್ಗೆ ಎದ್ದು ಕುಳಿತವನಿಗೆ ಸಿಕ್ಕಿದ್ದು ತಿನ್ನುವ ಹಸಿವಾಗಿದ್ದರೂ ವಸುಂಧರಾ ಇನ್ನೂ ಮೆಸೇಜು ಮಾಡಲಿಲ್ಲ ಎಂಬುದು ಅವನ ಕೊರಗಾಗಿತ್ತು.

ಯೂಟ್ಯೂಬಿನಲ್ಲಿ ಸಿಕ್ಕ ವಿಡಿಯೊಗಳನೆಲ್ಲ ನೋಡುತ್ತಾ ಕಾಲ ದೂಡುತ್ತಿರುವಾಗ ಮೊಬೈಲು ವೈಬ್ರೇಟ್ ಆಯಿತು.

‘ಇವತ್ತು ಒಳ್ಳೆಯ ಪ್ರಾಕ್ಟೀಸು ಆಯಿತು’

ಮತ್ಯಾರು, ವಸುಂಧರಾಳೇ ಹೌದು.

‘ಯಾಕಿಷ್ಟು ಲೇಟು’

ಗಂಭೀರವಾಗಿ ಮಾತುಕತೆ ನಡೆಯಹತ್ತಿತು.

‘ಏನಿಲ್ಲ ಆಡ್ತಾ ಆಡ್ತಾ ಸಮಯ ಗೊತ್ತಾಗಲಿಲ್ಲ, ಬೆವರಿ ಮೈಯೆಲ್ಲಾ ಒದ್ದೆಯಾಗಿದೆ. ಸ್ನಾನ ಮಾಡಿ ಬರುತ್ತೇನೆ’ಎಂದು ಎರಡು ಸಿಹಿಮುತ್ತಿನ ಎಮೋಜಿ ಕಳುಹಿಸಿದಳು ವಸುಂಧರಾ.

‘ಹೌದು, ಈಗ ಬೆವರು ಬಂದದ್ದು ಗೊತ್ತಾಗುತ್ತೆ. ಯಾಕಂದರೆ ನನ್ನ ಹತ್ತಿರ ಮಾತಾಡಬೇಕಲ್ಲ. ಅಲ್ಲಾದರೆ ಪರವಾಗಿಲ್ಲ ಅಲ್ವ’ ಎಂದು ಮೆಸೇಜು ಕಳಿಸಿ ರಿಪ್ಲೈಗೂ ಕಾಯದೆ ಉಳಿದಿದ್ದ ಸಿಗರೇಟನ್ನು ಬಲವಂತವಾಗಿ ಜಗ್ಗಿ ಕೆಳಗಿಳಿದು ಹೋದ ಪುರುಷೋತ್ತಮ.
ಮೊಬೈಲು ಎರಡು ಬಾರಿ ಸುದೀರ್ಘವಾಗಿ ಕಂಪಿಸಿ ಸತ್ತಿತು. ಫ್ಯಾನಿನ ಗಾಳಿಗೆ ಒಣಗಿಸಿದ್ದ ಟವೆಲ್ಲು ಲಟಲಟ ಬಡಿದುಕೊಳ್ಳುತ್ತಲೇ ಇತ್ತು.

ಪುರುಷೋತ್ತಮ ಎಂ.ಎ. ಹಿಸ್ಟರಿ ಎರಡನೇ ವರ್ಷ. ವಸು ಓದುತ್ತಿದ್ದದು ಎಂ.ಎಸ್ಸಿ ಮೊದಲ ವರ್ಷದ ಬಾಟನಿ.

ವಸು ಸುಮಾರು ಹೊತ್ತು ಕಾದಳು, ತಿರುಗಿ ಕರೆ ಬರುತ್ತದೆಂದು. ಬರಲಿಲ್ಲ. ತಳ ಮುಟ್ಟಿದ ಬಾಟಲಿನಲ್ಲಿದ್ದಷ್ಟು ನೀರನ್ನು ಕುಡಿದು ಮೈಗಂಟಿದ್ದ ಟೀ ಶರ್ಟುನ್ನೂ ಸ್ಕರ್ಟನ್ನೂ ಕಳಚಿಟ್ಟು ಸ್ನಾನಕ್ಕೆ ಹೋದಳು. ಅವಳಿಗೆ ಬಿಸಿನೀರೂ ಹಾಯೆನಿಸಲಿಲ್ಲ.
ಚಿತ್ರಾನ್ನದಲ್ಲಿ ಅರೆಬರೆ ಕತ್ತಿದ ಶೇಂಗಾ ಬೀಜವನ್ನಷ್ಟೇ ತಿಂದು ಉಳಿದವನ್ನೆಲ್ಲ ಕೆಲಹೊತ್ತು ಆಡಿ ಕಲೆದು ಆಕಾಶ ಮಾರ್ಗವಾಗಿ ಹಿತ್ತಲಿನಲ್ಲಿ ಬೀರಿ, ಕಾಫಿ ಕುಡಿದು, ಮುಖವನ್ನಷ್ಟೇ ತೊಳೆದು, ಕೈಗೆ ಸಿಕ್ಕಿದ ಅಂಗಿ ಪ್ಯಾಂಟನ್ನು ಸಿಕ್ಕಿಕೊಂಡು ಪುರುಷೋತ್ತಮ ಕಾಲೇಜಿಗೆ ಹೊರಟ. ಜೇಬಲ್ಲಿ ಪೆಟ್ರೋಲಿಗೆಂದು ಐವತ್ತು ರೂಪಾಯಿ ಮಾತ್ರ ಇದ್ದುದರಿಂದ ಇದ್ದೊಂದು ಸಿಗರೇಟು ಸಂಜೆಗೆ ಕಾದಿರಿಸಿದ. 
ಕಾಲೇಜಿಗೆ ಹೋದರೂ ಬಹಳ ಹೊತ್ತು ಅಲ್ಲಿರುವ ಮನಸ್ಸಾಗಲಿಲ್ಲ, ತಿರುಗಿ ಹಾಸ್ಟೆಲ್ಲಿಗೆ ಹೊರಟ. ಹೋದದ್ದಾಗಲೀ ಬಂದದ್ದಾಗಲೀ ಅವನಿಗೆ ಲಕ್ಷ್ಯಕ್ಕಿರಲಿಲ್ಲ. ತಿರುಗಿ ಬಂದವನು ಉಟ್ಟಿದ್ದ ಪ್ಯಾಂಟು ಷರ್ಟಿನಲ್ಲೇ ಕಾಟಿನ ಮೇಲುರುಳಿದ. ವಸುವಿನಿಂದ ಎರಡು ಎರಡು ಮಿಸ್ಡ್‌ಕಾಲ್ ನಂತರ ಮತ್ತೆ ಕರೆ ಬಂದಿರಲಿಲ್ಲ.
ಮುನಿಸಿನಲ್ಲಿ ದಿನ ಕಳೆಯಿತು. ಮಾತಾಡಿದರೂ ಊಟ, ನಿದ್ದೆ ಇವುಗಳ ಬಗ್ಗೆ ಯಾಂತ್ರಿಕ ವಿಚಾರಣೆ ಅಷ್ಟೆ.

ಇಬ್ಬರಿಗೂ ನಾಲ್ಕು ತಿಂಗಳಿನಿಂದ ಪರಿಚಯ, ವಸು ಯೂನಿವರ್ಸಿಟಿಗೆ ಬಂದಮೇಲೆ. ಅವಳು ಶಿರಸಿಯವಳು. ಪುರುಷೋತ್ತಮನದೂ ಶಿರಸಿಯೇ. ಆದರೆ ಅಲ್ಲೇ ಸಮೀಪದ ಹಳ್ಳಿ.
ಮನೆಯ ಸ್ಟೇಟಸ್ಸು, ಜಾತಿ ಎಲ್ಲವುಗಳ ಲೆಕ್ಕಾಚಾರದ ನಂತರವೇ ಪ್ರೀತಿಯ ನಿವೇದನೆ ಮತ್ತು ಒಪ್ಪಿಗೆ ನಡೆದಿದೆ. ನಾಲ್ಕು ತಿಂಗಳುಗಳ ಪ್ರಾಯ ಅದಕ್ಕೆ. ಪುರುಷೋತ್ತಮ ಹಾಸ್ಟೆಲಿನಲ್ಲಿದ್ದಾನೆ. ವಸುಂಧರಾ ಅಲ್ಲಿಂದ ತುಸು ದೂರದಲ್ಲಿ ಬಾಡಿಗೆ ರೂಮು ಮಾಡಿಕೊಂಡಿದ್ದಾಳೆ.

ಬೆಳಗೆದ್ದು ಸಿಗರೇಟು ಹೊತ್ತಿಸಿದ. ತುಸು ಹೊತ್ತಿಗೆ ವಸುವಿನಿಂದ ಮೆಸೇಜು ಬಂದಿತ್ತು. ಕಣ್ಣಿಗೆ ರಾಚುವ ಮೊಬೈಲಿನ ಬೆಳಕನ್ನು ದಿಟ್ಟಿಸಿದ. ಎಂಟು ಗಂಟೆಯಾಗಿತ್ತು.

‘ಇವತ್ತು ಬೇಗ ಬಂದೆ ಅಲ್ಲವೇ’

‘ಹೌದು...’

‘ಯಾಕೆ..? ಮೂಡ್ ಇರಲಿಲ್ಲವೇ ಇವತ್ತು’. ಪುರುಷಿ ಹಂಗಿಸಿದ.

‘ಹಾಗೇನೂ... ಇಲ್ಲ’ ಬೇಸರಿಸಿಕೊಂಡಳು ವಸು.

‘ಹಾಗಾದರೆ ಬೇಕಾದವರು ಬರಲಿಲ್ಲವೇನೋ.’ ಕುಹಕ ಮಾಡಲು ಅಣಿಯಾದಂತಿತ್ತು ಪುರುಷೋತ್ತಮನ ಮನಸ್ಥಿತಿ.
ಮೊಬೈಲನ್ನು ಎತ್ತಿ ಟೇಬಲ್ಲಿನ ಮೇಲೆ ಕುಕ್ಕಿದ. ವಸುವಿನ ಕಣ್ಣಿಂದ ಎರಡು ಹನಿ ಉದುರಿದವು.

‘ಯಾರೂ ಬೇಕಾದವರು ಇಲ್ಲ ಅಲ್ಲಿ. ನಾನು ವಿದ್ಯಾ ಇಬ್ಬರೇ ಪ್ರಾಕ್ಟೀಸು ಮಾಡುವುದು’ ಸಾವರಿಸಿಕೊಂಡು ಹೇಳಿದಳು ಮಾತಿನ ಅರ್ಥ ಗೊತ್ತಾಗದಂತೆ.

‘ಅಲ್ಲ... ಆಡುವವರು ಇದ್ದಮೇಲೆ ನೋಡುವವರು ಬೇಕಲ್ಲ?’

ಪುರುಷೋತ್ತಮನನ್ನು ವಾದದ ಮೇಲೆ ಹಿಡಿತ ಸಾಧಿಸಿದ ಹುಮ್ಮಸ್ಸು ಮಾತನಾಡಿಸಿತು. ತಿಂಗಳ ಹಿಂದೆ ಹಿಡಿದ ರೋಗ ಮತ್ತೆ ಉಲ್ಬಣವಾಗಿದೆ ಎಂದು ಲೆಕ್ಕ ಹಾಕಿದಳು ‘ಏನಾಯ್ತು ಈಗ?’ ಎಂದು ಕೇಳುವಾಗ.

‘ನೀನು ಬ್ಯಾಡ್ಮಿಂಟನ್ ಆಡುವುದು ನನಗೆ ಸುತಾರಾಂ ಇಷ್ಟವಿಲ್ಲ. ಜನರೆದುರು ಸ್ಕರ್ಟು, ಮೈ ಬಿಗಿದ ಟೀ ಷರ್ಟು ಹಾಕಿ ಆಡುವುದೆಲ್ಲ ಬೇಡ’ ಎಂದು ಹೇಳಿದ್ದು ನೆನಪಾಯಿತು. ಆದರೂ ಪೆದ್ದುತನ ನಟಿಸಿದಳು.

‘ಏನಾಯ್ತು ಈಗ ಪುರುಷಿ’ ಮತ್ತೆ ಮೆಸೇಜು ಕಳುಹಿಸಿದಳು.

‘ನೀನು ಇದೆಲ್ಲ ಆಟ ಆಡೂದು ನನಗೆ ಇಷ್ಟ ಇಲ್ಲ. ಸ್ಕರ್ಟಲ್ಲಿ ಆಡ್ತಾ ಇದ್ರೆ ನಂಗೆ ಮೈ ಉರಿಯತ್ತೆ’ ಪುರುಷೋತ್ತಮ ಜೋರಾದ.

‘ಪ್ಲೀಸ್, ನಿಂಗೂ ಗೊತ್ತು ಬಾಡ್ಮಿಂಟನ್ ಅಂದ್ರೆ ನಂಗೆ ಏನು ಅಂತ’ ವಸು ಮತ್ತೊಮ್ಮೆ ಸಂಭಾಳಿಸುವ ಪ್ರಯತ್ನ ಮಾಡಿದಳು.

‘ಮಣ್ಣಾಂಗಟ್ಟಿ... ಬೇಡ ಅಂದ್ರೆ ಅರ್ಥ ಆಗುತ್ತೆ ಅಲ್ವ?’

‘ಹ್ಞೂ ಅಂದ್ರೆ ಮೆಸೇಜ್ ಮಾಡು. ಇಲ್ಲದಿದ್ರೆ ಮಾತು ಬೇಕಾಗಿಲ್ಲ’ ಪುರುಷಿ ಪುರುಸೊತ್ತು ಕೊಡದೆ ಬೆನ್ನು ಬೆನ್ನಿಗೆ ಮೆಸೇಜು ಕಳಿಸಿದ.
ರಿಪ್ಲೈ ಬರಲಿಲ್ಲ. ಅಂದರೆ ಇವಳಿಗೆ ತಾನು ಬೇಡ ಎಂಬ ಸೂಚನೆಯೇ? ಪುರುಷಿಯ ತೊಡೆ ನಡುಗಿತು. ಕಿವಿಯ ಹತ್ತಿರ ಬೆವರ ಗೆರೆ ಚಳ್ಳನೆ ಹರಿಯಿತು.

ವಸು ಆಟದ ಕೋರ್ಟಿನಲ್ಲಿದ್ದಳು. ಕಾಲು ಹಿಂದು ಮುಂದಾಗಿಟ್ಟು ತುಸು ಬಗ್ಗಿ ಎಡಗೈಯಲ್ಲಿ ಬ್ಯಾಡ್ಮಿಂಟನ್ ಶಟಲ್ ಕಾಕ್ ಹಿಡಿದು ಬಲಗೈಲಿದ್ದ ಬ್ಯಾಟಿನಿಂದ ತಳ್ಳುವ ಸನ್ನಾಹದಲ್ಲಿದ್ದಾಗ ಮೊಬೈಲು ರಿಂಗಾಗುತ್ತಿತ್ತು. ಇವಳ ಪರಿವೆಗೆ ಅದು ಬರಲಿಲ್ಲ. ವಿಶಾಲವಾದ ಒಳಾಂಗಣ ಕ್ರೀಡೆಯ ಕಟ್ಟಡದ ಬಾಗಿಲುಗಳು ಮುಚ್ಚಿದ್ದವು. ನಾಲ್ಕೂ ದಿಕ್ಕಿಗೆ ಗೋಡೆಯಲ್ಲಿ ಎರಡು ಆಳಿನ ಎತ್ತರದಲ್ಲಿ ಸಾಲಾಗಿ ಟ್ಯೂಬ್‌ಲೈಟುಗಳು ಹೊತ್ತಿ ಉರಿಯುತ್ತಾ ಬೆಳಕಿನ ತುಂಡು ಇರುವೆಯಾಗಿ ಎಲ್ಲೋ ಹೊರಟಂತಿತ್ತು. ಮತ್ತೊಂದು ಕೋರ್ಟಿನಲ್ಲಿ ಹುಡುಗರಿಬ್ಬರು ಆಡುತ್ತಿದ್ದರು. ಕೆಲವರು ಹರಟುತ್ತಲೂ ಬೆವರು ಊದಿಕೊಳ್ಳುತ್ತಲೂ ಗೋಡೆಗೆ ಆನಿಕೊಂಡು ನಿಂತಿದ್ದರು. ಇವೆಲ್ಲದರ ಧ್ವನಿ ಮೊಳಗುತ್ತಾ ಗೌಜಿನ ಗೂಡಾಗಿತ್ತು. ಒಂದು ಸೆಟ್ಟು ಮುಗಿಸಿ ವಸು ಬ್ಯಾಗಿನತ್ತ ಬಂದಳು ಪುರುಷಿಯ ಕರೆಯ ಬರುವಿಗೆ ಕಾದು.

‘ಹುಡುಗರೂ ಇದ್ದಾರೆ ಅಲ್ಲಿ ಅಲ್ಲವ?’ ಪುರುಷಿಯ ಮೆಸೇಜು.

‘ಇಲ್ಲ’ ಎಂದಳು ಮತ್ತೆ ರಗಳೆ ಬೇಡ ಎಂದು.

‘ಮತ್ತೆ ಸ್ಕರ್ಟು ಹಾಕಿದ್ದೀಯ ಅಲ್ಲವ?’ ಅರೆಗಳಿಗೆಗೆ ಮತ್ತೊಂದು ಮೆಸೇಜು.

‘ಅದು ಕಂಫರ್ಟು ಆಗುತ್ತೆ. ಅಲ್ಲದೇ ಟೂರ್ನಾಮೆಂಟು ಅದರಲ್ಲೇ ಆಡಬೇಕು’ ಎಂದು ಟೈಪಿಸಿದಳು. ಬರೆದುದನ್ನ ಅಳಿಸಿ ‘ಇಲ್ಲ ಚೂಡಿದಾರದಲ್ಲಿ ಇದ್ದೇನೆ’ ಎಂದು ಕಳಿಸಿದಳು.

‘ನಾನು ಬಾಗಿಲ ಹೊರಗೆ ನಿಂತು ನೋಡುತ್ತಿದ್ದೇನೆ, ನಿನ್ನ ಸ್ಕರ್ಟು ಮತ್ತು ಹುಡುಗರು ಎರಡೂ ನನಗೆ ಕಾಣುತ್ತಿದೆ’ ಎಂದು ಪುರುಷಿ ಮೆಸೇಜು ಕಳುಹಿಸಿದಾಗ ವಸುಂಧರಾಳಿಗೆ ಎದೆಬಡಿತ ಜೋರಾಯಿತು. ಪೇಚಿಗೆ ಸಿಲುಕಿದೆ ಅನ್ನಿಸಿ ಮೊಬೈಲು ಹಿಡಿದುಕೊಂಡೇ ಬಾಗಿಲಿಗೆ ಜೋಡಿಸಿದ್ದ ಗಾಜಿನ ಚೌಕಟ್ಟು ದಿಟ್ಟಿಸುತ್ತ ಬಳಿ ಬಂದಳು. ವಿದ್ಯಾ ಏನೊಂದೂ ತಿಳಿಯದೇ ಬಾಯಿಬಿಟ್ಟು ನೋಡುತ್ತ ನಿಂತಳು. ಬಾಗಿಲು ತೆರೆದು ಸುತ್ತೆಲ್ಲ ಹುಡುಕಿದರೂ ಪುರುಷಿ ಕಾಣಲಿಲ್ಲ. ಕರೆ ಮಾಡಿದರೆ ಒಂದೆರಡು ಬಾರಿ ಎತ್ತಲಿಲ್ಲ.

‘ಎಲ್ಲಿದ್ದೀಯ?’

‘ನಾನು ಬಂದಿರಲೇ ಇಲ್ಲ’

‘ಅಂದ್ರೆ ನನ್ನನ್ನು ಪರೀಕ್ಷೆ ಮಾಡ್ತಾ ಇದ್ದೀಯ?’

‘ಹೌದು... ಆದರೆ ನೀನು ಸುಳ್ಳು ಹೇಳಿದೆ. ಹುಡುಗರಿಲ್ಲ... ಸ್ಕರ್ಟು ಹಾಕಿಲ್ಲ ಎಂದು ಸುಳ್ಳು ಹೇಳಿದೆ ಅಲ್ಲವ?’

‘ಪ್ಲೀಸ್... ಟ್ರೈ ಟು ಅಂಡರ್‌ಸ್ಟಾಂಡ್... ಮತ್ತೆ ಜಗಳ ಬೇಡ ಅಂತ ಹಾಗೆ ಹೇಳಿದೆ’

‘ಜಗಳ ಬೇಡ ಅಂತ ಎಂತಹ ವಿಚಾರವನ್ನಾದರೂ ಮುಚ್ಚಿಡುತ್ತೀಯ ಅಲ್ಲವ?’

‘ಸಾರಿ...’

‘...ಕ್... ಯಾರಿಗೆ ಬೇಕು ಸಾರಿ’ ಮುಂತಾದ ಮಾತುಗಳು ಬೇಸರ ಮತ್ತು ಕಣ್ಣೀರಲ್ಲಿ ಕೊನೆಯಾದವು. ಅಸ್ಥಿಮಜ್ಜೆಯಿಲ್ಲದ ಖೇದ ಇಬ್ಬರ ಮೈಮನವನ್ನು ಆವರಿಸಿತು.

ರಾತ್ರಿಯಾಗಿತ್ತು. ಪುರುಷಿ ಗೋಡೆಯ ಮೂಲೆಗೆ ಸಾದಿಕೊಂಡು ಥ್ರಿಲ್ಲರ್ ಕಾದಂಬರಿಯೊಂದನ್ನು ಪುಟ ತಿರುವುತ್ತಾ ಕುಳಿತಿದ್ದ. ಬೇಸರವಾಗಿ ಮೊಬೈಲು ಕೈಗೆತ್ತಿಕೊಂಡ. ಕ್ರಿಕೆಟ್ಟು, ಕಾಮಿಡಿ ಷೋ, ಸೆಕ್ಸ್ ವಿಡಿಯೊ ಯಾವುದನ್ನೂ ಬಹಳ ಹೊತ್ತು ನೋಡಲು ಆಗಲಿಲ್ಲ. ರೇಪುಗಳ ಬಗ್ಗೆ ಕಮೆಂಟುಗಳನ್ನು ನೋಡಿದ. ಬಟ್ಟೆ– ಬರೆ ಹೇಗೆ ಪ್ರಚೋದಿಸುತ್ತವೆ ಮತ್ತು ಎಷ್ಟು ಹೊತ್ತಿನೊಳಗೆ ಹುಡುಗಿ ಮನೆ ಸೇರಿದರೆ ಸೇಫು ಎಂಬಿತ್ಯಾದಿ ಮಾತುಗಳಿದ್ದವು. ಪುರುಷಿಗೆ ದಿಗಿಲಾಯಿತು.

‘ವಸು ರೂಮಿಗೆ ಬಂದಳೇ? ಈಗಲೇ ಎಂಟುಗಂಟೆಯಾಯಿತು. ಅವಳಿಗೇನಾದರೂ ಆದರೆ?’ ಕಣ್ಣು ತುಂಬಿಕೊಂಡಿತು. ಕರೆ ಮಾಡಿದ. ವಸು ಕರೆಗಾಗಿಯೇ ಕಾದಿದ್ದಳೋ ಏನೋ, ಎರಡು ರಿಂಗಿಗೇ ಎತ್ತಿದಳು. ಒಂದು ನಿಮಿಷ ಇಬ್ಬರೂ ಮಾತಾಡಲಿಲ್ಲ. ಪುರುಷಿಯೇ ಮಾತಿಗೆ ಮೊದಲಾದ.

‘ಸಾರಿ... ವಸು, ನಿನಗೆ ನಾನು ಯಾಕೆ ಹೇಳ್ತಾ ಇರೋದು ಅಂತ ಅರ್ಥ ಆಗಲ್ಲ. ನಿಂಗೆ ಏನಾದ್ರೂ ಆದರೆ ಅಂತ ಭಯ ಆಗತ್ತೆ. ನೀನು ನಂಗೆ ಬೇಕು’ ಅಂದ.

ವಸು ಅತ್ತಳು. ಪುರುಷಿಯೂ. ಅಳು ಮಾತಾಗಿ ಮಾತು ಮುದ್ದಾಗಿ ಪರ‍್ಯಾವಸಾನವಾಯಿತು. ಕ್ಷಮೆ ಸಿಕ್ಕಷ್ಟು ಬೇಗ ಮರೆವು ಸಿಗುವುದಿಲ್ಲ. ಪುರುಷಿಯ ಹಣೆಯ ಮೇಲೆ ದುಗ್ಗಾಣಿ ಇರುವೆ ಹರಿದಂತಾಯಿತು. ವಸು ರಾತ್ರಿಯ ಊಟದ ತಯಾರಿಗಾಗಿ ಟೊಮೇಟೊ ಈರುಳ್ಳಿ ಹೆಚ್ಚುವ ಕಾಯಕಕ್ಕೆ ಶುರುವಾದಳು. ಪುರುಷಿ ಊಟಕ್ಕೆ ಹೊರಟ. ಮುರುಳಿ ಅವನಿಗೆ ಜೊತೆಯಾದ. ಹಾಸ್ಟೆಲಿನ ಊಟ ಬೇಸರವಾಗಿ ಖಾನಾವಳಿ ಕಡೆ ಮುಖ ಮಾಡಿದರು.
ಪೇಟೆಯ ದಾರಿಯಲ್ಲಿ ಬೀದಿ ನಾಯಿಗಳು ಗೊತ್ತು ಗುರಿಯಿಲ್ಲದೇ ಓಡಾಡುತ್ತಿದ್ದವು. ದೊಡ್ಡ ಅಂಗಡಿಗಳ ಎದುರು ಬೆಚ್ಚು ನಿಂತಿದ್ದವು. ಹಳದಿ ಬಿಳಿ ನೀಲಿ ಬಣ್ಣದ ಬೆಳಕು ಕಣ್ಣಿಗೆ ರಾಚುತ್ತಿತ್ತು. ಪುರುಷಿ ಜವಳಿ ಅಂಗಡಿಯ ಎದುರು ಹಾಯುವಾಗ ಗೊಂಬೆಯೊಂದಕ್ಕೆ ಲೆಗ್ಗಿನ್ಸು ಟಾಪು ತೊಡಿಸಿದ್ದನ್ನ ನೋಡುತ್ತ ನಿಂತುಬಿಟ್ಟ. ಗಾಡಿಯ ಹಾರ್ನು ಮತ್ತು ಮುರುಳಿ ಕರೆದದ್ದು ಯಾವುದೂ ಅವನಿಗೆ ಕೇಳಿಸಲಿಲ್ಲ. ಗೊಂಬೆಗೆ ಮತ್ತೂ ಸಮೀಪಿಸಿದ, ಸಿಮೆಂಟು ಕಲರಿನ ಲೆಗ್ಗಿನ್ಸು ಗೊಂಬೆಯ ನೀಳವಾದ ಕಾಲಿಗೆ ಅಂಟಿಕೊಂಡಿತ್ತು. ಬಿಳಿಯಾದ ಪಾದ ಬಿಗಿಯಾದ ಮೀನಖಂಡ ಉಬ್ಬಿದ ನಿತಂಬ ಎಲ್ಲವೂ ಸರಿಯಾಗಿ ಕಾಣಿಸಿದವು. ತೆಳುವಾದ ನಡು, ಚೂಪಗಿನ ಸ್ತನ, ಸೆಟೆದು ನಿಂತ ಕೈಗಳು ಪುರುಷಿಗೆ ತನ್ನನ್ನು ಬಾಚಿಕೊಳ್ಳಲು ಬಂದಿವೆ ಎನಿಸಿತು. ಇನ್ನೂ ಹತ್ತಿರ ಹೋದ ಪುರುಷಿ. ಅಂಗಡಿಯ ಮಾಣಿ ಇದನ್ನು ನೋಡುತ್ತಿದ್ದವನು ಮಾಲೀಕನಿಗೆ ತೋರಿಸಿ ನಕ್ಕ. ಮುರುಳಿ ಕಂಗಾಲಾಗಿದ್ದ. ಪುರುಷಿಯನ್ನು ಜಗ್ಗಿ ಎಳೆದೊಯ್ದ.

‘ಏನಾಗಿತ್ತು ನಿನಗೆ’

‘ಗೊತ್ತಿಲ್ಲ’ ಎಂದು ಉದ್ರೇಕವಾಯಿತೆ ತನಗೆ ಅಂತ ಯೋಚಿಸಿದ. ಮೈ ಕೊಡವಿದ.
ವಸುಂಧರಾಳಿಗೆ ಮೆಸೇಜು ಕಳುಹಿಸಿದ, ‘ನಾಳೆಯಿಂದ ಲೆಗ್ಗಿನ್ಸು ತೊಡಬೇಡ. ಚೂಡಿದಾರ ಹಾಕು... ಪ್ಲೀಸ್’.

ವಸು ಊಟ ಮಾಡುತ್ತಿದ್ದವಳು ಎಡಗೈಯಲ್ಲಿ ಮೊಬೈಲು ಎತ್ತಿಕೊಂಡಳು. ಅವಳಿಗೆ ಆಶ್ಚರ್ಯವಾಗಲಿಲ್ಲ.

ಖಾನಾವಳಿಯಲ್ಲಿ ಊಟ ಮಾಡುವಾಗ ಪೇಪರಿನಲ್ಲಿ ನಾಲ್ಕು ವರ್ಷದ ಮಗುವಿನ ಮೇಲೆ ಅತ್ಯಾಚಾರವಾದ ವಿಚಾರ ಓದಿದ. ತನಗೇ ಇದೆಲ್ಲ ಕಾಣುವುದಾದರೂ ಏಕೆ? ಮುರುಳಿಯಾಗಲೀ ಬೇರೆಯವರಾಗಲೀ ಊಟ ಮಾಡುತ್ತಿದ್ದಾರೆ ಆರಾಮವಾಗಿ. ಓದಿಯೂ ಹಾಗೆಯೇ ಊಟ ಮಾಡುತ್ತಾರೆ. ಪೇಪರನ್ನು ದೂರ ತಳ್ಳಿದ. ಟೇಬಲ್ಲಿನಿಂದ ಕೆಳಗೆ ಬಿತ್ತು. ಮುಜುಗರದಿಂದ ಎತ್ತಿಟ್ಟ. ಗಿರಾಕಿಗಳ ಮಾತು, ಫ್ಯಾನಿನ ಸದ್ದು, ಸ್ಟೀಲು ಪಾತ್ರೆಯ ಹಾಡು ಸುತ್ತ ಆವರಿಸಿತು. ಕಿಸೆಯಲ್ಲಿ ದುಡ್ಡಿರಲಿಲ್ಲ. ಪುರುಷಿ ಪೆಚ್ಚು ಮೋರೆ ಹಾಕಿದ. ಮುರುಳಿಯೇ ಬಿಲ್ಲು ಕೊಟ್ಟ. ಬಡೆಸೋಪು ಜಗಿದು ನುಂಗುವಷ್ಟಕ್ಕೆ ಹಾಸ್ಟೆಲು ಸಮೀಪಿಸಿತು.
ಮುರುಳಿಯ ಹತ್ತಿರ ಮೊಬೈಲು ತೆಗೆದುಕೊಂಡ ‘ಕರೆನ್ಸಿ ಇಲ್ಲ, ಒಂದು ಕಾಲ್ ಮಾಡಿ ಕೊಡ್ತೇನೆ’ ಎಂದು.

‘ಸರಿ ತಗೋ...’ ಮುರುಳಿ ಮರುಮಾತಾಡದೇ ಕೊಟ್ಟ.

ಪುರುಷಿ ಟೆರೇಸಿಗೆ ಓಡಿದ. ವಸುಂಧರಾಳಿಗೆ ಕರೆ ಮಾಡಿದ. ಒಂದು ಸುದೀರ್ಘ ಬಡಿತದ ನಂತರ ಕಟ್ ಆಯಿತು. ಪುರುಷಿಯ ಹೊಟ್ಟೆಯೊಳಗೆ ಕುಳುಗುಟ್ಟಿತು, ಉಸಿರಾಟ ಜೋರಾಯಿತು. ಮತ್ತೊಮ್ಮೆ ಕರೆ ಮಾಡಿದ. ನಾಲ್ಕು ಬಾರಿ ರಿಂಗಣಿಸಿದ ನಂತರ ವಸು ಎತ್ತಿದಳು. ಪುರುಷಿ ಕೊನೆಯ ತನಕ ಮಾತಾಡಲಿಲ್ಲ.

‘ಹಲೋ...’

‘ಹಲೋ...ಯಾರ್‍ರೀ...ಮಾತಾಡಿ...’

‘ನಿಮ್ಮ ನಂಬರು ಸೇವ್ ಆಗಿಲ್ಲ...’

‘ಮಾತಾಡದೇ ಇರೋದಾದರೆ ಯಾಕೆ ಕಾಲ್ ಮಾಡ್ತೀರಿ... ಲೋಫರ್...’

ಕಟ್‌ ಆಯಿತು ಕರೆ. ತಿರುಗಿ ತನ್ನ ಮೊಬೈಲಿನಿಂದ ಕರೆ ಮಾಡಿದ ಪುರುಷಿ.

‘ಹಲೋ.. .ಅನ್ನೌನ್ ನಂಬರಿನಿಂದ ಕಾಲ್ ಬಂದರೆ ರಿಸೀವ್ ಮಾಡ್ಬೇಕ...?’ ಧ್ವನಿಯಲ್ಲಿ ಗಡಸಿತ್ತು.

‘ಯಾರು ಅಂತ ನೋಡಿದೆ ಅಷ್ಟೆ...’ ಎಂದಳು.

‘ಅಂದ್ರೆ...’

‘ಅಂದ್ರೇನು... ಏನಿಲ್ಲ...’

‘ಯಾಕೆ... ಕಾಲ್ ಎತ್ತಿದ್ದು..?’

‘ನೀನು ನನ್ನನ್ನು ಟೆಸ್ಟ್ ಮಾಡ್ತಾ ಇದ್ದೀಯಾ..?’ ವಸುಂಧರಾಳ ಉಸಿರುಗಟ್ಟಿತು.

‘ಸಾಯಿ... ನಿನ್ನ ಹಣೆಬರಹ ಇಷ್ಟೆ... ನನಗೆ ಗೊತ್ತಿತ್ತು’‌

ಕರೆ ಕಟ್ ಆಯಿತು. ಪುರುಷಿ ಎರಡು ಮೂರು ಸಿಗರೇಟು ಸೇದಿದ. ಹೊಗೆ ವಾಸನೆ ಕೆಮ್ಮಿದಾಗಲೂ ಬಂದು ಉಸಿರುಗಟ್ಟಿ ಅಲ್ಲಿಂದ ಜಾಗಬಿಟ್ಟ. ಇಳಿದು ಬರುವಾಗ ಮೆಟ್ಟಿಲು ಎಡವಿದವು.
ಮುರುಳಿಯ ರೂಮಿನ ಬಾಗಿಲು ತಟ್ಟಿ ಮೊಬೈಲು ಕೊಟ್ಟ. ನೀರು ಕೇಳಿ ಕುಡಿದ. ಹಾಸಿಗೆಗೆ ಬಂದು ಮಲಗಿದ. ಬಲ್ಬು ಉರಿಯುತ್ತಲೇ ಇತ್ತು. ಬಾಗಿಲ ಚಿಲಕ ಯಾವಾಗ ಹಾಕಿದೆ ಅಂತನೂ ಪುರುಷಿಗೆ ಗೊತ್ತಾಗಲಿಲ್ಲ.

ವಸುಂಧರಾಳಿಗೆ ಬೇಗ ನಿದ್ದೆ ಹತ್ತಲಿಲ್ಲ. ಓದಲೂ ಮನಸ್ಸಿರಲಿಲ್ಲ. ಕಾಲು ಬುಡದ ಮರಳನ್ನು ನೀರು ತೊಯ್ದು ಮರಳು ಹರಿದುಹೋದಂತಾಯಿತು. ಎರಡು ತಿಂಗಳ ಹಿಂದಿನ ಸಲ್ಲಾಪದ ಮೆಸೇಜು ನೋಡುತ್ತ ಕುಳಿತಳು. ತೊಳೆಯಲು ಕೊಟ್ಟಿದ್ದ ಪುರುಷಿಯ ಸ್ವೆಟ್ಟರನ್ನು ಹಾಕಿಕೊಂಡಳು.

ಅಪ್ಪ ಒಂದು ಬದಿಗೆ ಕುಳಿತಿದ್ದಾನೆ ಪಾಪ. ಅಮ್ಮ ಮತ್ತೊಂದು ಬದಿಗೆ. ಮತ್ತೆ ಎದುರಿಗೆ ಆ ಹಾಳಾದವನು. ಯಾರೊಬ್ಬರೂ ಮಾತಾಡುತ್ತಿಲ್ಲ. ಮೌನದ ಮೊಟ್ಟೆಯೊಡೆದು ಮಾತು ಹೊರಬಂತು.

‘ಈ ಮನುಷ್ಯ ಇನ್ನು ನಮ್ಮ ಮನೆಗೆ ಬರಬಾರದು’

‘ಯಾಕೆ...’ ಅಮ್ಮ ಕೇಳಿದಳು.

‘ಬರಬಾರದು ಅಷ್ಟೇ...’ ಪುರುಷಿ ಅವಡುಗಚ್ಚಿದ.

‘ನೀನು ಅಂದುಕೊಂಡ ಹಾಗೆ ಏನೂ ಇಲ್ಲ’ ಅಮ್ಮನ ಸಹೋದ್ಯೋಗಿ ಬಾಯಿಬಿಟ್ಟ.

‘ನೀನು ಮಧ್ಯ ಮಾತಾಡಬೇಡ’ ಪುರುಷಿ ಗುರುಗುಟ್ಟಿದ.
ಅಮ್ಮ ಪುರುಷಿಯ ಕಪಾಳಕ್ಕೆ ಹೊಡೆದಳು. ಅಪ್ಪ ಪುರುಷಿಯನ್ನು ಬಾಚಿ ಹಿಡಿದ.

‘ಈಗ ಮಗ ದೊಡ್ಡವ. ಅವಂಗೂ ಎಲ್ಲ ಗೊತ್ತಾಗತದೆ... ನಿನಗೆ ಬುದ್ಧಿ ಬೇಕು...’ ಅಮ್ಮನ ಕೈ ಹಿಡಿದ ಅಪ್ಪ.

‘ಹೌದು ನನಗೆ ಅವರಿಗೆ ಸಂಬಂಧ ಇದೆ. ನಿಮಗೂ ನಾನೊಬ್ಬಳೇ ಅಲ್ಲ ಎಂಬುದನ್ನ ಹೇಳಿ ಮೊದಲು ಅವನಿಗೆ’ ಅಮ್ಮ ಕಣ್ಣೀರಿಟ್ಟಳು.

ನೆನಪನ್ನು ನೂಕುತ್ತಾ ಮಲಗಿದಲ್ಲೇ ನೆಲಕ್ಕೆ ಗುದ್ದಿ ಪುರುಷಿ ಎದ್ದು ಕುಳಿತ. ತಾನು ಮನೆಬಿಟ್ಟು ಬಂದದ್ದು ಕಣ್ಣೆದುರಿಗೆ ನಡೆದಂತೆ. ಅಮ್ಮ ತಡೆಯಲಿಲ್ಲ. ಅಪ್ಪನೊಬ್ಬನ ತೋಳು ಸಾಕಾಗಲಿಲ್ಲ ನುಗ್ಗಿ ಬಂದ. ಅವನೊಬ್ಬ ನಿಂತೇ ಇದ್ದ ದರಿದ್ರ.

ಪುರುಷಿಯ ಬೆನ್ನುಹುರಿ ಸೆಟೆದುಕೊಂಡಿತು. ಕಾಲು ಬೆರಳನ್ನು ಒಳಮುಖವಾಗಿ ಮಡಚಿದ. ವಸುಂಧರಾಳಿಗೆ ಮತ್ತೆ ಕರೆ ಮಾಡಿದ ಹಸ್ತಮೈಥುನ ಮಾಡಿಕೊಳ್ಳುತ್ತ. ಬಹಳ ತಡವಾಗಿ ರಿಸೀವ್ ಮಾಡಿದಳು. ಮತ್ತು ಮಾತಾಡಲಿಲ್ಲ.

‘ಹಲೋ ವಸು...’ ಎಂದವನೇ ಮುತ್ತಿನ ಮಳೆಗರೆದ.

‘ಯಾಕೆ ಕಾಲ್ ಮಾಡ್ದೆ...’ ಅಂದಳು.

‘ಪ್ಲೀಸ್ ಮಾತಾಡು... ಈಗ ಜಗಳ ಬೇಡ’ ಮುಂದುವರೆದ.

‘ಯಾಕೆ...’ ವಸುಂಧರಾಳ ಮಾತಿನ ದಾಟಿಯಲ್ಲಿ ಬದಲಾವಣೆ ಆಗಲಿಲ್ಲ. ಮುತ್ತಿಡುತ್ತಲೇ ಇದ್ದ.

‘ಓಹೋ... ಗೊತ್ತಾಯಿತು ಬಿಡು... ಈಗ ನಿನಗೆ ನಾನು ಬೇಕು. ನಾಳೆ ಮತ್ತೆ ಇಷ್ಟೊತ್ತಿಗೆ ನಾನು ಬೇಕು... ಅಲ್ಲವ?’ ವಸು ಅಣಕಿಸಿದಳು. ಅವಳ ಕೈ ಬೆರಳು ಕಿಟಕಿಯ ಕಬ್ಬಿಣದ ಸರಳಿನ ಜಂಗನ್ನು ಕೆರೆಯುತ್ತಿತ್ತು.

‘ನನ್ನ ಸಿಟ್ಟನ್ನು ಮತ್ತೂ ಹೆಚ್ಚಿಸಬೇಡ’ ಕೂಗಾಡಿದ. ಹತೋಟಿಯಿಲ್ಲದ ಉಸಿರೊಂದಿಗೆ ಸೇರಿ ಮಾತು ವಿಕಾರವಾಯಿತು.

‘ಸಿಟ್ಟು... ಸಿಟ್ಟು ತಣಿಸೋದಕ್ಕೆ ನನ್ನ ಜೊತೆ ಮಾತಾಡಿದ್ದು... ಸಿಟ್ಟಿಗಾಗಿ ಸೆಕ್ಸು...ಥೂ’ ವಸುಂಧರಾ ಕರೆ ಕತ್ತರಿಸಿದಳು. ಉಸಿರುಗಟ್ಟಿಕೊಂಡು ಪುರುಷಿ ಟಾಯ್ಲೆಟ್ಟಿಗೆ ಓಡಿದ. ನಳದ ನೀರನ್ನು ಜೋರಾಗಿ ಬಿಟ್ಟುಕೊಂಡು ಕಿರುಚಿದ.

ವಸುಂಧರಾ ಮಲಗಿದಲ್ಲೇ ಬಿಕ್ಕುತ್ತಿದ್ದಳು.

‘ನಿನಗೆ ಸ್ಕೂಲಲ್ಲಿ ಯಾರಾದರೂ ತೊಂದರೆ ಕೊಟ್ಟಿದ್ದರ..? ಬಸ್ಸಲ್ಲಿ..? ಏನಾದರೂ ಕೆಟ್ಟ ಅನುಭವ ಆಗಿತ್ತ..?’ ಎಂಬೆಲ್ಲ ಪುರುಷಿಯಾಡಿದ್ದ ಮಾತುಗಳು ತಾನಿನ್ನೂ ವರ್ಜಿನ್ ಹೌದೋ ಅಲ್ಲವೋ ಎಂದು ತಿಳಿಯಲು ಕೇಳಿದ ಪರೋಕ್ಷ ಪ್ರಶ್ನೆಗಳೇ... ಹೇಯವೆನಿಸಿ ತಿರುಗಿ ಕರೆ ಮಾಡಿದಳು. ಅವನು ಹಾಸಿಗೆಯ ಮೇಲೆಯೇ ಮೊಬೈಲು ಬಿಟ್ಟಿದ್ದ.

ಪುರುಷಿಗೆ ಕುಕ್ಕರುಗಾಲಿನಲ್ಲಿ ಕೂತು ಮಂಡಿಯೆಲ್ಲ ನೋಯಹತ್ತಿತು. ನೀರು ತುಂಬಿ ಚೆಲ್ಲುತ್ತಿತ್ತು. ಹೊರಗಿಂದ ಬಾಗಿಲು ಬಡಿದದ್ದು ಅವನಿಗೆ ಗೊತ್ತಾಗಲಿಲ್ಲ. ಕಮೋಡಿನ ಮೂಲೆಗೆ ಹೋಗಿ ಅಲ್ಲೇ ತಳವೂರಿದ.
ಅಪ್ಪ ಅವತ್ತು ಕುಡಿದು ಬಂದಿದ್ದ. ಹೈಸ್ಕೂಲಿನಲ್ಲಿ ಗುಮಾಸ್ತನಿದ್ದ ಅಪ್ಪ ಮುಂಚೆ ಹಾಗೆ ಬಂದದ್ದಿಲ್ಲ. ಸೀದಾ ಬಂದವನೇ ಕೋಣೆ ಹೊಕ್ಕು ಮಲಗಿದ. ಆಗಾಗ ಕೂಗುತ್ತಿದ್ದ, ಕೆಲ ಹೊತ್ತಿನ ನಂತರ ಕೋಣೆಯಿಂದ ಮೂತ್ರದ ವಾಸನೆ ಬರತೊಡಗಿತು. ಪುರುಷಿ ಮತ್ತು ಅಮ್ಮ ಕೋಣೆಗೆ ಹೋದರು. ಅಪ್ಪನ ರಟ್ಟೆ ಹಿಡಿದು ಹೊರಗೆ ಕರೆತಂದರು.
‘ಊಟ ಕೊಡು’ ಎಂದ ಅಪ್ಪ. ಕೊಟ್ಟರೂ ಉಣಲಿಲ್ಲ. ಬಟ್ಟಲು ನೆಲಕ್ಕೆ ಕುಕ್ಕಿದ. ಮಜ್ಜಿಗೆ ಎಂದು ಕೇಳಿ ಪಡೆದು ಸೊರಗುಟ್ಟಿ ನೆಲಕ್ಕೆಲ್ಲ ಚೆಲ್ಲುತ್ತ ಕುಡಿದ. ಓಲಾಡುತ್ತ ಎದ್ದ. ಅಮ್ಮ ಮತ್ತು ಪುರುಷಿ ಕಂಗಾಲಾಗಿದ್ದರು. ಅಪ್ಪ ಅಮ್ಮನ ಕಪಾಳಕ್ಕೆ ಹೊಡೆದ.

‘ಟೀಚರ್, ಎಷ್ಟು ದಿನದಿಂದ ಪ್ರವೀಣ ಸರ್ ಜೊತೆ ಪಾಠ ನಡೀತಾ ಇದೆ..?’

‘ಏನಾಗಿದೆ ನಿಮ್ಗೆ ಹುಚ್ಚು ಹಿಡಿದಿದ್ಯಾ?’

ಅಮ್ಮನ ಮಾತು, ಗೋಳಾಟ, ಚೆಲ್ಲಾಪಿಲ್ಲಿಯಾದ ಪಾತ್ರೆಗಳು, ನಿಂತ ಕುನ್ನಿಮರಿ ಮತ್ತು ನಡುಗುತ್ತ ಇದ್ದ ಪುರುಷಿ.

ಪುರುಷಿಗೆ ಟಾಯ್ಲೆಟ್ಟಿನಿಂದ ಏಳುವ ಮನಸ್ಸಾಗಲಿಲ್ಲ. ಸೊಳ್ಳೆಗಳು ಮನಸೋ ಇಚ್ಛೆ ಕಚ್ಚಿದವು. ಕಿಸೆಯಲ್ಲಿದ್ದ ಸಿಗರೇಟನ್ನು ಹೊತ್ತಿಸಲಿಲ್ಲ.

‘ನೀವು ಹೇಳಿದ ಹಾಗೆ ಮಾಡಿ ತೋರಿಸಿದರೇನೇ ನಿಮ್ಮ ಆಟ ನಿಲ್ಲತ್ತೆ ಅಲ್ವೇನ್ರೀ, ನೀವು ಶುಭಗರು ಅಲ್ವಾ, ನನಗೆ ಇಲ್ಲದ ಪಟ್ಟ ಕಟ್ಟುತ್ತೀರಿ. ನಿಮ್ಮದು ನಾನು ನೂರು ಹೇಳಬಹುದು’ ಅಮ್ಮ ಅಳುವಾಗ ಎದುರಿಗೆ ಅಪ್ಪ ಇರಲಿಲ್ಲ. ಪುರುಷಿ ಇದ್ದ. ಅಮ್ಮನ ತವರಿನವರು ಸೇರಿ ಅಪ್ಪನನ್ನು ಮದ್ಯವರ್ಜನ ಕೇಂದ್ರಕ್ಕೆ ಸೇರಿಸಿದರು. ಮೂರು ತಿಂಗಳು ಅಪ್ಪ ಮನೆಗೆ ಬರಲಿಲ್ಲ.

ಪುರುಷಿಗೆ ನೆನಪುಗಳನ್ನು ಮುಂದುವರಿಸಲು ಮನಸ್ಸಾಗಲಿಲ್ಲ. ಆದರೆ ಅದು ಅವನ ಹತೋಟಿಯಲ್ಲಿರಲಿಲ್ಲ.

ಪುರುಷಿ ಜಗುಲಿಗೆ ಮಲಗಿದ್ದ, ಅಮ್ಮ ಒಳಗೆ ಕೋಣೆಯಲ್ಲಿದ್ದಳು. ರಾತ್ರಿ ಎರಡು ಗಂಟೆಗೆ ಎಚ್ಚರವಾಯಿತು ಪುರುಷಿಗೆ.

‘ಅಪ್ಪ ಯಾಕೆ ಸುಳ್ಳು ಹೇಳ್ತಾನೆ... ಅಮ್ಮ ಯಾಕೆ ಸುಳ್ಳು ಹೇಳ್ತಾಳೆ...’

ಪುರುಷಿ ಎದ್ದು ಹೊರಟ ಕತ್ತಲಲ್ಲಿ. ಕೋಣೆಗೆ ಹೋಗಿ ಮಂಚ ತಡಕಾಡಿದ. ಹಾಸಿಗೆಯಲ್ಲಿ ಚಾದರ ಸಿಂಬೆಯಾಗಿ ಬಿದ್ದಿತ್ತು. ಅಮ್ಮ ಇರಲಿಲ್ಲ. ಲೈಟು ಹೊತ್ತಿಸದೇ ಒಳಗೆ ಹೋದ. ಬಚ್ಚಲಿನ ಲೈಟು ಹೊತ್ತಿಕೊಂಡಿತ್ತು. ಪುರುಷಿ ಬಾಗಿಲಿನ ಸಂದಿಗೆ ಆತು ನಿಂತಿದ್ದ. ಅಮ್ಮ ಬಂದವಳು ಕೈಕಾಲಿನ ನೀರನ್ನು ನೈಟಿಯಲ್ಲಿ ಒರೆಸುತ್ತಾ. ಬಾಗಿಲು ಹಾಕಿ ಲೈಟು ಹೊತ್ತಿಸಿದಳು. ಪುರುಷಿ ನಿಂತಿದ್ದ. ಅಮ್ಮ ಬಾಯಿ ಬಿಡುವ ಮುನ್ನವೇ ‘ಎಲ್ಲೋಗಿದ್ದೆ ನೀನು’ ಮುಖ ಗಂಟಿಕ್ಕಿದ.

‘ನೀನು ನನ್ನ ಮೇಲೆಯೇ ಜಾಸೂಸಿ ಮಾಡ್ತೀಯೇನೋ’ ಪುರುಷಿಯ ಮೈ ಸಿಕ್ಕಲ್ಲೆಲ್ಲ ಹೊಡೆದಳು. ಅಪ್ಪ ಬರುವವರೆಗೂ ಪುರುಷಿ ಅಮ್ಮನೊಂದಿಗೆ ಮುಖಕೊಟ್ಟು ಮಾತಾಡಲಿಲ್ಲ.

‘ನಿಮ್ಮಪ್ಪ ಮಾಡಿದ್ದು ನಾನಲ್ಲ... ಸಾಯ್ತೀನಿ ಹಿಂಗೆ ಮಾಡಿದರೆ ನಾನು...’ ಯಾವ ಮಾತಿಗೂ ಪುರುಷಿ ಉತ್ತರಿಸಲಿಲ್ಲ.

‘ಅಪ್ಪ ಮಾಡಿದ್ದು ಹೌದೇ ಆದರೂ ನನಗೇನು ಅನ್ನಿಸುತ್ತಿಲ್ಲ, ಆದರೆ ನೀನು...’ ಎಂದ ಒಂದು ದಿನ.

‘ಕದಿಯದೇ ಕಳ್ಳಿ ಆಗುವುದೇನು... ಕದ್ದು ಕಳ್ಳಿಯಾಗುವುದೇನು’ ಎಂದಳು.

ಪ್ರವೀಣ ಸರ್ ಮನೆಗೆ ಬಂದು ಹೋಗತೊಡಗಿದರು.

ಪುರುಷೋತ್ತಮನಿಗೆ ಎಚ್ಚರವಾದಾಗ ನೀರು ಹರಿದು ಚಡ್ಡಿಯನ್ನೆಲ್ಲ ತೋಯಿಸಿತ್ತು. ಕಾಲು ಹಿಡಿದುಕೊಂಡಿತ್ತು. ಏಳಲು ಆಗಲಿಲ್ಲ. ಜಿಂಗರಿಕೆ ಬಂದಿತ್ತು. ಚಿವುಟಿದ ಕಾಲನ್ನು. ಗೊತ್ತೇ ಆಗಲಿಲ್ಲ. ಏಳಲು ಹೋಗಿ ಬಿದ್ದ. ಹತ್ತು ನಿಮಿಷದ ನಂತರ ಕಾಲು ಸರಿ ಹೋಯಿತು. ಮುಖಕ್ಕೆ ನೀರು ಹನಿಸಿಕೊಂಡು ಬಂದವಗೆ ಮುರುಳಿ ಎದುರಾದ.

‘ಬೇಗ ಎದ್ದೆ ಅಲ್ವೇನೋ ಪುರುಷಿ’ ನಸುನಕ್ಕ. ಕೋಣೆಗೆ ಬಂದು ಬಟ್ಟೆ ಕಳಚಿದ. ಬಾಗಿಲು ಚಿಲಕ ಹಾಕಿ ಬಂದ. ವಸುಂಧರಾಳಿಗೆ ಕರೆ ಮಾಡಿದ. ರಿಸೀವ್ ಮಾಡಲಿಲ್ಲ. ಬೆತ್ತಲಾಗಿ ಹಾಸಿಗೆಯ ಮೇಲೆ ಮಲಗಿದ. ಕಾಮವೇ ತನ್ನನ್ನು ಆಳುತ್ತಿದೆಯೇ ಅನಿಸಿತು. ಕಾಲು ಸೆಟೆದುಕೊಂಡ, ದುಪಟಿಯ ತೂತಿನಲ್ಲಿ ಕಾಲು ಸಿಕ್ಕಿ ತೂತು ದೊಡ್ಡದಾಯಿತು. ಪಕ್ಕದಲ್ಲಿ ದೊಡ್ಡ ಗಾತ್ರದ ಒಂಟಿ ಇರುವೆ ದಿಕ್ಕಾಪಾಲಾಗಿ ಓಡುತ್ತಿತ್ತು. ತನ್ನದೇ ಬೆತ್ತಲು ಮೈ ನೋಡುತ್ತ ಬಹಳ ಹೊತ್ತು ಕುಳಿತೇ ಇದ್ದ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !