ಹುಲ್ಲಾಗು ಬೆಟ್ಟದಡಿ

7

ಹುಲ್ಲಾಗು ಬೆಟ್ಟದಡಿ

Published:
Updated:

ಯಾವುದೋ ಗುಂಗಿನಲ್ಲಿ ಕಳೆದು ಹೋಗಿದ್ದ ಶಾರಿಯ ಬಲಗೈ ತುಂಬಾ ಫಾತಿಮಾ ನವಿಲುಗರಿಯ ಮದರಂಗಿಯಿಟ್ಟು ಎಡಗೈಗೆ ಹಕ್ಕಿ ದಂಡಿನ ದಿಬ್ಬಣ ಹೊರಟಂತೆ ಕಾಣುವ ಚಿತ್ರ ಬಿಡಿಸುತ್ತಿದ್ದಳು. 

ಬಾಳೆಕುಳಿಯಲ್ಲಿ ಯಾರದ್ದೇ ಮದುವೆಯಿರಲಿ ಫಾತಿಮಾಳಿಗೆ ಕರೆಯ ಬರುವುದು ನಿಕ್ಕಿಯೇ. ಫಾತಿಮಾ ಹಚ್ಚಿದ ಮದರಂಗಿ ಅಷ್ಟು ರಂಗೇರುತ್ತಿತ್ತು!! ಮದುವೆಯಲ್ಲಿ ಹಚ್ಚಿದ ಮದರಂಗಿ ಒಳ್ಳೆ ರಂಗೇರಿದರೆ ಗಂಡ ಹೆಂಡತಿಯನ್ನು ಬಹಳ ಪ್ರೀತಿಸುತ್ತಾನಂತೆ ಅಂತ ನಂಬಿದ ಹೆಣ್ಣು ಮಕ್ಕಳಿಗೆ ಬರಗಾಲ ಬರುವವರೆಗೂ ಫಾತಿಮಾಳಿಗೆ ಗಿರಾಕಿಗಳ ಕೊರತೆಯಾಗುವುದಿಲ್ಲ ಎಂಬುದು ಖಾತ್ರಿ. ಮದರಂಗಿಯ ರಂಗಿನಲ್ಲಿ ಗಂಡನಾಗುವವನ ಪ್ರೀತಿಯನ್ನು ಒರೆಗೆ ಹಚ್ಚುವ ಕಾತುರದಲ್ಲಿರುತ್ತಿದ್ದರು ಬಾಳೆಕುಳಿಯ ಮದುವಣಗಿತ್ತಿಯರು. ಇಷ್ಟೇ ಅಲ್ಲ, ಫಾತಿಮಾ ಬಿಡಿಸಿದ ಮದರಂಗಿಯಲ್ಲಿ ಎಲ್ಲೋ ಅಡಗಿ ಕುಳಿತ ತಮ್ಮ ಹೆಸರನ್ನು ಹುಡುಕುವ ಮದುಮಗ, ಅವನ ಹುಡುಕಾಟದಲ್ಲಿ  ಮೈಮರೆವ ನವ ವಧು... ಬದುಕಿನುದ್ದಕ್ಕೂ ನೆನೆದರೆ ನವಿರಾಗುವ ಆ ರಾತ್ರಿಗೆ ಫಾತಿಮಾಳ ಮದರಂಗಿ ಮತ್ತಷ್ಟು ಪುಳಕದ ರಂಗೇರಿಸುತ್ತಿತ್ತು. 

‘ಶಾರಕ್ಕಾ, ಗಂಡನಾಗುವವನ ಹೆಸರೇನೆ, ಮದರಂಗಿಯಲ್ಲಿ ಅವನ ಹೆಸರು ಬರೆಯುವುದುಂಟು’ ಎಂದು ಫಾತಿಮಾ ಕೇಳಿದೊಡನೆಯೇ ಯಾವುದೋ ಗುಂಗಿನಿಂದ ಥಟ್ಟನೆ ಎಚ್ಚರಗೊಂಡವಳಂತೆ, ‘ಪುರುಷೋತ್ತಮ...’ ಎಂದು ಹೇಳಿದ್ದಳೋ ಅಷ್ಟರಲ್ಲಾಗಲ್ಲೇ ‘ಇವನ ಹೆಸರೂ ಪುರುಷೋತ್ತಮನೇಯಾ?’ ಎಂದು ಫಾತಿಮಾ ಬಾಯೊಡೆದು ಕೇಳಿಯಾಗಿತ್ತು.

‘ಅಲ್ವೇ, ಸುಧಾಕರ ಹೇಳಿ ಬರ್ಯೇ ಫಾತಿ. ನಿಂಗೆ ಮಂಗಲ ಪತ್ರ ಕೊಟ್ಟು ಕರೆದದ್ದೇ ಅಲ್ವೇನೇ, ಹೆಸ್ರು ಸರಿ ನೋಡಿ ಬರುವುದಲ್ಲವಾ?’ ಇರುಸುಮುರುಸುಗೊಂಡ ಮಹೇಶ್ವರಿ ಅಲ್ಲೇ ನಲ್ಲಿಯ ಕೆಳಗಿದ್ದ ಹಾಲಿನ ಬೋಗಣಿಯನ್ನು ತಿಕ್ಕುತ್ತಾ ಮಗಳನ್ನು ತಿದ್ದಿದರು.

‘ಇವಳಿಗೆ ಇನ್ನೆಷ್ಟು ತಿದ್ದಿ ಬುದ್ಧಿ ಹೇಳುವುದೋ, ಎಲ್ಲಾ ಮುಳುಗಿ ಹೋಯ್ತು ಅಂತ ಎಷ್ಟು ದಿನ ಆಕಾಶವನ್ನು ತಲೆಮೇಲೆ ಹೊತ್ತು ಓಡಾಡಲು ಸಾಧ್ಯ. ಇಂದಲ್ಲ ನಾಳೆ ತಲೆಯ ಮೇಲಣ ಹೊರೆಯನ್ನು ಕೆಳಗಿಳಿಸಲೇ ಬೇಕು.’ ಶಾರಿಗೆ ಕೇಳಿಸಲಿಕ್ಕಾಗೇ ಕಟಗುಡತೊಡಗಿದ್ದಳು ಮಹೇಶ್ವರಿ.

ಇಂತಹ ಎಲ್ಲಾ ಸುತ್ತು ಬಳಸಿ ಆಡುವ ಮಾತುಗಳು ಶಾರಿಯ ಮುಖದಲ್ಲಿನ ಭಾವನೆಗಳನ್ನು ಮಾತ್ರ ಬದಲಾಯಿಸಲು ಸೋತಿದ್ದವು. 

ಖಾಲಿ ಜಾಗವನ್ನು ಹದ ಮಾಡಿ ಹೊಸ ಮನೆಯನ್ನು ನಿರ್ಮಿಸುವುದು ಕಷ್ಟವೇನಲ್ಲ. ಆದರೆ ಹಳೆಯ ಮನೆಯನ್ನುರುಳಿಸಿ ಅಲ್ಲಿ ಬಂಗಲೆಯನ್ನೇ ಕಟ್ಟಿದರೂ ಮನೆಯೊಳಗಿದ್ದ ನಗು, ಕಾಲಿಗೆ ತಡಸಣೆಯಂತೆ ಹರಡಿಬಿದ್ದ ಆಟಿಕೆ, ಹೊಗೆಯ ಕಮಟಿಗೆ ಬಚ್ಚಲು ಮನೆಯಲ್ಲಿ ಒಣಗುತ್ತಿದ್ದ ಪರಿಕಾರಗಳನ್ನೆಲ್ಲ ಮರೆಯಲು ಸಾಧ್ಯವೇ?? ಪುರುಷೋತ್ತಮನಿದ್ದ ಮನದಲ್ಲಿ ಸುಧಾಕರ ನೆಲೆ ನಿಲ್ಲಲು ಬರುತ್ತಿದ್ದಾನೆ ಎಂದು ಕಲ್ಪಿಸಿಕೊಳ್ಳುವುದು ಸುಲಭವೆನಿಸಲಿಲ್ಲ ಶಾರಿಗೆ. 

ಪುರುಷೋತ್ತಮನೊಂದಿಗಿನ ಬದುಕನ್ನು ನೆನಪಿಸುವ ಶಾರಿಯ ಎಲ್ಲಾ ವಸ್ತುಗಳನ್ನು ಮರೆ ಮಾಡಲಾಗಿತ್ತು. ಕೆಂಪು ಸೀರೆಯ ಮೇಲೆ ಎಳೆಬಾಳೆಯ ಬಣ್ಣದ ಉತ್ತರೀಯ ತೊಟ್ಟ ಶಾರಿ ಎಂಬ ಮದುವಣಗಿತ್ತುಯನ್ನು ಎಂಟು ವರ್ಷಗಳ ಹಿಂದೆ ಖುದ್ದು ರಾಜು ಮಾವನೇ ಎತ್ತಿಕೊಂಡು ಹಸೆಮಣೆವರೆಗೆ ಕರೆ ತಂದದ್ದು, ಅದರ ಫೋಟೊದಿಂದ ಹಿಡಿದು, ಪುರುಷೋತ್ತಮ ಸಾಯುವ ಹಿಂದಿನ ದಿನ ತೆಗೆಸಿಕೊಂಡ ಫೋಟೊವನ್ನು ಕೂಡ ಇಲ್ಲವಾಗಿಸಿದ್ದರು. ಶಾರಿಯ ಬಾಳಂತನದಲ್ಲಿ ಅವ ಬರೆದ ಕಾಗೆಕಾಲು ಗುಬ್ಬಿಕಾಲಿನ ಅಕ್ಷರದ ಚುಟಕು ಪತ್ರ, ಅವ ಕೊಡಿಸಿದ ಸೀರೆ... ಬಹುಶಃ ಮದುವೆಯ ಮರುದಿನ ಮನೆಯ ತೊಲೆಗೆ ಹಿಂದೆ ಕಟ್ಟಿದ್ದ ಶಾರಿ- –ಪುರುಷೋತ್ತಮರ ಮದುವೆಯ ಬಾಸಿಂಗವನ್ನೂ ತೆಗೆದಿರಬಹುದು ಮೂರ್ಕೋಡ್ಲಿನಲ್ಲಿ. ಇವರೆಲ್ಲರ ಲೆಕ್ಕದಲ್ಲಿ ನೆನಪನ್ನು ಮರೆಯಲು ಇರುವ ಸುಲಭ ಔಷಧಿ ಅವನಿಗೆ ಸಂಬಂಧಪಟ್ಟಿದ್ದನ್ನೆಲ್ಲ ತೆಗೆದು ಒಗೆದುಬಿಡು, ಇಲ್ಲಾ ಸುಟ್ಟುಬಿಡು. ತನ್ನ ಮಕ್ಕಳ ನೆನಪಾಗಿ ಮತ್ತೆ ನೀರಾದಳು ಶಾರಿ. 

ಶಾರಿ... ವಿಚಿತ್ರ ಶಾರಿಯ ಬಗ್ಗೆ ಹೇಳಿದರೂ ಏನಂತ ಹೇಳುವುದು!! 

ಕಾಲೇಜು ಮುಗಿಯುತ್ತಿದ್ದಂತೆಯೇ ಅಪ್ಪ ಜಾತಕ ಹೊರಹಾಕಿದ, ಶಾರಿಗೆ ಮುಂದೆ  ಓದಬೇಕೆಂಬ ಮನಸ್ಸು ಸ್ವಲ್ಪ ಇದ್ದಂತಿದ್ದರೂ ಮದುವೆಯೇನು ಬೇಡ ಅಂತಿರಲಿಲ್ಲವಾದ್ದರಿಂದ ಮದುವೆಗೆ ಖುಷಿಯಾಗಿಯೇ ಒಪ್ಪಿದ್ದಳು. ಅಪ್ಪ ಮಗಳು ಒಪ್ಪಿದರೆ ಸಾಕೇ, ಶಾರಿಯ ಅಪ್ಪ ಶಂಬಣ್ಣನ ಶರತ್ತುಗಳಿಗೆ ತಕ್ಕಂತಹ ಗಂಡು ಸಿಗಬೇಡವೇ!!

ಒಬ್ಬನೇ ಇರುವ ಮಗನಾಗಿರಬಾರದು, ಯಾಕೆಂದರೆ ತಂದೆ ತಾಯಿಯ ಜವಾಬ್ದಾರಿಯನ್ನು ತನ್ನ ಅಳಿಯನೊಬ್ಬನೇ ಹೊರುವುದಕ್ಕೂ  ನಾಲ್ಕು ಮಕ್ಕಳು ಸೇರಿ ಹೊರುವುದಕ್ಕೂ ವ್ಯತ್ಯಾಸವಿರುತ್ತದೆ ಅಲ್ಲವೇ. ಶಂಬಣ್ಣನಿಗಿನ್ನೂ ಸಿಗದ  ಅಳಿಯನ ಮೇಲೆ ಪ್ರೀತಿ ಅಂತಲ್ಲ, ಮಗಳ ಮೇಲೆ ಅತ್ತೆ ಮಾವನ ಭಾರ ಅತಿಯಾಗಿ ಬಿದ್ದರೆ ಎಂಬ ಸಣ್ಣ ದೂರಾಲೋಚನೆ. ಅದಷ್ಟೇ ಅಲ್ಲ, ಅತ್ತೆ ಮಾವನ ಕೈಕೆಳಗಿರುವ ಸಂಸಾರಕ್ಕಿಂತ ಪೇಟೆ ಮೇಲಿನ ಬದುಕು ಬಹಳ ಒಳ್ಳೆಯದಲ್ಲವೇ? ಯಾರದ್ದೂ ಹಂಗಿರದ ಬದುಕು ಎಂಬ ಊಹೆ ಶಂಬಣ್ಣನದು.. 

ಮದರಂಗಿ ಬಳಿಸಿಕೊಳ್ಳುತ್ತ ಶಾರಿ ಕುಳಿತಿದ್ದರೆ, ಬಾಗಿಲ ಹಿಂಬಯಲ್ಲೆಲ್ಲೋ ಅಡಗಿ ನಿಂತಿದ್ದೇನೆ ಎಂಬ ಭ್ರಮೆಯಲ್ಲಿ ತಾರತ್ತೆ ಪಿಸುಗುಡುತ್ತಿದ್ದ ದನಿ. 

ಒಳ್ಳೆಯವರು ಅಂತ ತೋರಿಸಿಕೊಳ್ಳುವವರ ಕತೆಯೇ ಇಷ್ಟು. ಪರರ ನೋವಿಗೆ ನೊಂದವರಂತೆ ಕಣ್ಣೀರುಗರೆದು ಹಿಂದಾಗಡೆಯಿಂದ ನಕ್ಕು ಹಗುರಾಗುತ್ತಾರೆ. ಮನುಷ್ಯರು ಎಂದ ಮೇಲೆ ಕೋಪ-ತಾಪದ ಜೊತೆ ಮಾತ್ಸರ್ಯ-ದ್ವೇಷವೂ ಇರುತ್ತದೆಯಲ್ಲ. ಅದು ಒಂದಿಲ್ಲೊಂದು ರೂಪದಲ್ಲಿ ಯಾವತ್ತಾದರೊಂದು ದಿನ ಹೊರಬರಲೇಬೇಕು. ಎದುರಿಗಿನ ವ್ಯಕ್ತಿ ಮತ್ತು ವಿಷಯ ಬದಲಾಗಬಹುದು ಆದರೆ ನಮ್ಮೊಳಗಿನ ಭಾವನೆ ಅದೇ ಆಗಿರುತ್ತದೆ, ಒಮ್ಮೆ ದ್ವೇಷ, ಒಮ್ಮೆ ಅಸೂಯೆ ಅಷ್ಟೇ!!
‘ನೋಡಿದ್ಯಾ ಏನಾಯ್ತು ಅಂತ. ಸೋದರದಲ್ಲೇ ಮಾಡಿಸಿಕೊಳ್ಳಿ ಶಾರಿಗೆ, ಕಣ್ಣೆದುರಿಗೇ ಇರ್ತಾಳೆ ಎಂದು ಸಾರಿಸಾರಿ ಎಷ್ಟು ಅಲವತ್ತುಕೊಂಡಿರಲಿಲ್ಲ ನಾನು. ನನ್ನ ಚಿನ್ನದಂತಹ ಮಗ ಮನೇಲಿದ್ದರೇನಾಯ್ತು, ಜಮೀನು, ಕೈಕಾಲಿಗೆ ಆಳು-ಕಾಳುಗಳಿರಲಿಲ್ಲವೇ? ಗುಟಕಾ ಹಾಕಿ ಅಂಗಳದ ತುದಿಗೆ ಪಿಚಕಿ ಹಾಕುತ್ತ, ಊರ ಮೇಲಿನ ಸಮಾರಾಧನೆಗೆ ಬಡಿಸಲು ತಿರುಗುವ ಗಂಡು ನಮ್ಮ ಶಾರಿಗಲ್ಲ ಅಂತ ಕಡ್ಡಿ ಮುರಿದಂತಾಡಿದ್ದ ಶಂಬಣ್ಣ. ಶಾರಿಯ ಎರಡನೇಯ ಮದುವೆ ನೋಡು ಹೇಗೆ ಮನೆಯಲ್ಲಿದ್ದವನಿಗೇ ಆಯ್ತು. ನಮ್ಮನೆಯ ಸಮಾರಾಧನೆಗೆ ಸುಧಾಕರನೂ ಬಡಿಸಲು ಬರುತ್ತಾನೆ ಗೊತ್ತುಂಟೊ’ ಎಂದು ತಾರತ್ತೆ ಕಿವಿಯಿರದ ಗೋಡೆಗಾತು ತನಗೆ ಮಾಡಿದ ಅಪಮಾನಕ್ಕೆ ಶಾರಿಯ ಬದುಕು ಹೀಗಾಯಿತೆಂಬಂತೆ ಹಲಬುತ್ತಿದ್ದಳು. ಬಹುಶಃ ನೆಂಟರು ಅಂತ  ಬಂದವರ ಬಳಿಯೆಲ್ಲ ಹಪಿಸಿಕೊಂಡು ಹೇಳುತ್ತಿದ್ದ ತಾರತ್ತೆಯದು ಶಂಬಣ್ಣ-ಶಾರಿಯ ಎದುರು ತನ್ನ ಅಪಮಾನವನ್ನು ಜರೆಯಲಾಗದಿದ್ದರ ಸಂಕಟವೋ ಅಥವಾ ಅವರು ಪಡುತ್ತಿದ್ದ ಸಂಕಟಕ್ಕೆ  ಸಂಭ್ರಮವೋ !! ಹಿಂದೆ ಆಡಿಕೊಂಬುವವರ ಮುಖಭಾವ ಯಾರಿಗೆ ಗೊತ್ತು.

‘ಹೆಣ್ಮಕ್ಕಳ ಮುಖಕ್ಕೆ ಕರಡ ಕಟ್ಟ, ಮನೆಯಲ್ಲಿರುವ ಗಂಡುಗಳೇನು ಗಂಡಸರಂತೆ ಕಾಣೊಲ್ಲವೆ ಬೆಳೆದ ಈ ಹೆಣ್ಣುಮಕ್ಕಳಿಗೆ’ ಎಂದು ಮನೆಯಲ್ಲಿರುವ ಗಂಡಿಗೆ ಹೆಣ್ಣೇ ಸಿಗದು ಎಂದು ಅರಚಾಡುವ ತಾರತ್ತಿಗೆ ಮಾತ್ರ ತನ್ನ ಮಗಳನ್ನು ಸೋಮನಮನೆಯ ಮೂಲದ ಅಮೆರಿಕದ ಯಾವುದೋ ಜಾಗದಲ್ಲಿರುವ ಗಂಡಿಗೆ ಕೊಟ್ಟು ಮದುವೆ ಮಾಡಿದ್ದಳು. ತಾರತ್ತಿಗೆಯಂಥವರ ಆದರ್ಶದ ಪಾಠ ಬೇರೆಯವರಿಗೆ ಮಾತ್ರ ಎಂಬುದೂ ಗೊತ್ತು.. ಶಾರಿಗೆ ಇಂತಹ ಮಾತುಗಳಿಂದ ತಾನು ದೂರವಿದ್ದಷ್ಟೂ ಒಳ್ಳೆಯದು ಎನ್ನಿಸಿದರೂ ತಾನಾಗಿಯೇ ತೊಡರಿಕೊಳ್ಳುವವರಿಗೇನು ಹೇಳುವುದು ಎಂದು ಮತ್ತೂ ಮಗುಮ್ಮಾಗಿಬಿಟ್ಟಳು. 

ಕಾರ್ತೀಕ ಹುಟ್ಟಿ ಎರಡು ತಿಂಗಳಾಗಿರಬೇಕು, ಬಾಳಂತನದ ನೋವು ಸ್ವಲ್ಪವೇ ಮರೆಯಾಗುತ್ತ ಹಾಕಿದ ಹೊಲಿಗೆಯ ನೋವನ್ನೂ ಹೊರತುಪಡಿಸಿ ಶಾರಿಯ ತಲೆಯಲ್ಲಿ ಬೇರೆಯ ವಿಚಾರವೂ ಹಾದುಹೋಗತೊಡಗಿದ ಕಾಲವೆನ್ನಿ. ಸೀರೆಯನ್ನು ಪಟ್ಟಿಮಾಡಿ ಸೊಂಟಕ್ಕೆ ಸುತ್ತಿ, ಅಮ್ಮನ ಮದ್ದು ಮೆಣಸು, ಜೀರಿಗೆ ಕುಡಿದು ದಿನಕ್ಕೆ ನಾಲ್ಕು ಬಾರಿ ಹೊಟ್ಟೆ ಕರಗಿತಾ, ನೆರಿಗೆ ಹೋಯಿತಾ ಎಂದು ಎಂದು ಪದೇ ಪದೆ ನೋಡತೊಡಗಿದ್ದಳು ಶಾರಿ. 

ನಾಲ್ಕೂವರೆ ಕೇಜಿ ತೂಗುವ ಕಾರ್ತೀಕನಿದ್ದ ಹೊಟ್ಟೆ ಎಷ್ಟು ದೊಡ್ಡದಾಗಿರಬಹುದು! ಒಂದೆರಡು ತಿಂಗಳು ಕಳೆಯುವುದರೊಳಗೆ ಹೊಟ್ಟೆ ಕರಗಿ ಸಪಾಟಾಗಲು ಸಾಧ್ಯವೇ? ಒಂದು ಸೀರೆಯ ಜೊತೆ ಇನ್ನೊಂದು ಸೀರೆಯನ್ನು ಹೊಟ್ಟೆಗೆ ಬಿಗಿಯಾಗಿ ಸುತ್ತಿಕೊಳ್ಳಲು ಶುರು ಮಾಡಿದಳು, ಪುರುಷೋತ್ತಮ ತನ್ನನ್ನು ಹೀಗೆಲ್ಲ ನೋಡಿದರೆ ಎಷ್ಟು ಅಸಹ್ಯಪಟ್ಟಿಕೊಂಡಾನು ಎಂಬ ಆತಂಕವೇ ಜಾಸ್ತಿಯಾಗಿತ್ತು ಶಾರಿಗೆ. 

ಮದುವೆ ಆಗುತ್ತಲೇ ಅಂದ ಚೆಂದದ ವ್ಯಾಖಾನವೆಲ್ಲ ಗಂಡನ ಕಣ್ಣಿಗೆ ತಕ್ಕಂತೆ ಬದಲಾಗತೊಡಗುತ್ತದೆ. ಅಪೇಕ್ಷೆ, ನಿರೀಕ್ಷೆಗಳೂ ಹಾಗೆಯೇ, ಅವನಿಗೆ ಚೆಂದವೆನಿಸಿದ್ದೇ ತಮಗೂ ಸರಿ ಎನ್ನಿಸುತ್ತದೆ. ಪುರುಷೋತ್ತಮನ ಕಣ್ಣುಗಳ ಮೂಲಕವೇ ಜಗತ್ತು ಕಾಣಿಸುತ್ತಿತ್ತು ಶಾರಿಗೆ. ಅಂಥದ್ದರಲ್ಲಿ ಬಾಳಂತನ ಸರಿಯಾಗದೇ ಕಾಯಿ ಹೊಟ್ಟೆಬಿದ್ದು ಐದಾರು ತಿಂಗಳ ಬಸುರಿಯಂತೆ ಕಂಡರೆ ಅವನಿಗೆಲ್ಲಿ ತನ್ನ ಮೇಲೆ ತಾತ್ಸಾರ ಬರುವುದೋ ಎಂಬ ಭಯ.

ಪುರುಷೋತ್ತಮ- ‘ಸ್ವಲ್ಪ ವ್ಯಾಯಾಮ ಮಾಡು, ಬಗ್ಗಿ ನಿಗುರಿ ಮಾಡು ಹೊಟ್ಟೆ ಇಳಿದು, ಕಜ್ಜಿಯಂತಹ ಕಲೆಯೂ ಹೋಗಬಹುದು’ ಎಂಬ ಸಲಹೆಯೊಂದಿಗೆ ಒಂದಿಷ್ಟು ವಾರಪತ್ರಿಕೆಯಲ್ಲಿ ಚೆಂದದ ಸಪಾಟು ಹೊಟ್ಟೆಯ ಸುಂದರಿಯರು ಹೊಟ್ಟೆಯ ಮೇಲಾದ ಕಲೆಯನ್ನು ತೆಗೆಯಲು ಹೇಳಿದ ಮುಲಾಮುಗಳನ್ನೆಲ್ಲ ಪುರುಷೋತ್ತಮ ತಂದುಕೊಟ್ಟಿದ್ದ. 

ಬಾಣಂತನ ಮುಗಿದು ಎರಡು ವರ್ಷ ಕಳೆದರೂ ಕಾಯಿಹೊಟ್ಟೆ ಹಾಗೆಯೇ ಇತ್ತು, ಜೊತೆಗೆ ಗೆರೆಗಳೂ ಕೂಡ... ‘ಎರಡನೇಯದನ್ನು ಹಡೆದಾಗ ಮೊದಲ ದಿನದಿಂದಲೇ ಅರಿವೆಯನ್ನು ಬಿಗಿಯಾಗಿ ಸುತ್ತು, ಕಾಯಿ ಹೊಟ್ಟೆ ಆಗಲಾದರೂ ಹೋಗಬಹುದು, ಈ ಸಲ ಯಾವ ಮುಲಾಮೂ ಹಚ್ಚುವುದು ಬೇಡ, ಬಾದಾಮೆಣ್ಣೆ, ಎಳ್ಳೆಣ್ಣೆ ಹಚ್ಚು ಹೊಟ್ಟೆಗೆ. ಕಲೆ ಹೋಗದಿದ್ದರೆ ಕೇಳು’ ಎಂದು ಹೊಟ್ಟೆ ಬಗ್ಗೆ ಹಳಹಳಿಸಿದಾಗ ಹಲವರು ಸಲಹೆ ನೀಡಿದ್ದರು. ಹೊಟ್ಟೆಯನ್ನು ಕರಗಿಸಲಾದರೂ ಎರಡನೆಯದನ್ನು ಹಡೆಯುವ ಅನಿವಾರ್ಯತೆ ಶಾರಿಗೆ. 

ಶಾರಿಗೆ ಏಳು ತಿಂಗಳು ತುಂಬಿದರೂ ಅಕ್ಕಪಕ್ಕದ ಮನೆಯವರಿಗೂ ಶಾರಿಯ ಬಸಿರೇ ತಿಳಿದಿರಲಿಲ್ಲ. ಹೊಟ್ಟೆಯೇ ಹಾಗಿತ್ತಲ್ಲವೇ!!

ಎರಡನೇಯದನ್ನು ಹಡೆದು, ಎಷ್ಟೇ ತಿಪ್ಪರಲಾಗ ಹಾಕಿದರೂ ಹೊಟ್ಟೆಯ ಮೇಲಿನ ಬರೆ ಹಾಗೂ, ಬಸುರಿಯಂತಹ ಹೊಟ್ಟೆ ಹೋಗಲೇ ಇಲ್ಲ. 

ಇತ್ತ ಪುರುಷೋತ್ತಮನೂ ಪ್ರೀತಿಯಿಂದ ಹಂಗಿಸುತ್ತಿದ್ದನೋ ಇಲ್ಲಾ ಮನಸ್ಸಿನಲ್ಲಿದ್ದಿದನ್ನೇ ಹೊರಹಾಕುತ್ತಿದ್ದನೋ ಯಾರಿಗೆ ಗೊತ್ತು, ‘ನಿನ್ನ ಡೊಳ್ಳಿನಂತಹ ಹೊಟ್ಟೆ ಕಂಡರೆ ಭಯಂಕರ ಹೆದರಿಕೆ ನನಗೆ, ಚರ್ಮ ರೋಗ ಬಂದವರಂತೆ ಕಾಣಿಸುತ್ತದೆ.’ ಎನ್ನುತ್ತಿದ್ದ. ಹಬ್ಬ ಹರಿದಿನ ಎಂದು ದೇವರ ಮುಂದೆ ಕುಳ್ಳಲು ಸೀರೆ ಉಡಲು ಶಾರಿ ಕೈ ಹಚ್ಚಿದರೆ ಸಾಕು, ‘ಮಾರಾಯ್ತಿ ಚೂಡಿದಾರ ಹಾಕ್ಕೊಳ್ಳೆ. ನಿನ್ನ ಹೊಟ್ಟೆ ಕಂಡರೆ ನನಗೆ ಕಲಿತ ಮಂತ್ರವೂ ಬಾಯಿಗೆ ಬರದು.’

ಇಂಥದ್ದೆಲ್ಲ ಕೇಳಿ ಕಿವಿ ಹಿತ್ತಾಳೆಯಾದರೂ ಶಾರಿಗೆ ಮನಸ್ಸಿನ ಮೂಲೆಯಲ್ಲಿ ಒಂದಿಷ್ಟು ಆತಂಕ. ಗಂಡನ ಬಳಿ ಸುಳಿಯಲಿಕ್ಕೂ ಅವಳಿಗೆ ಒಂದು ನಮೂನೆಯಾದರೂ ಗಂಡ ತನ್ನಿಂದ ದೂರವಾದರೆ ಎನ್ನುವ ಸಂಶಯ. ಶಾರಿಯ ಸಂಕಟ ಅತ್ತಲಾಗೆ ಯಾರಬಳಿಯೂ ಹೇಳುವಂತೆಯೂ ಇಲ್ಲ, ಮನಸ್ಸಲ್ಲೇ ಇಟ್ಟುಕೊಂಡು ನೆಮ್ಮದಿಯ ಬದುಕು ಬದುಕುವಂತೆಯೂ ಇಲ್ಲ. 

ಒಂದು ದಿನ ಹಾಗೆಯೇ ಪುರುಷೋತ್ತಮನ ತಾಯಿ ಯಾವತ್ತೂ ಬರದವಳು ಮಗನ ಮನೆಯ ಅನ್ನದ ಬಣ್ಣ ಕಾಣಲು ಬಂದಿದ್ದಳು. ಇಲ್ಲದಿದ್ದರೆ ಹಬ್ಬ ಹರಿದಿನ ಅಂತ ಊರ ಮೇಲೆ ಅಲೆಯುವವರಿಗೆ ಮಗ–-ಮೊಮ್ಮಕ್ಕಳೆಲ್ಲ ಬೇಕಂತಲೇ ಇಲ್ಲ. 
ಶಾರಿಗೆ ಅತ್ತೆಯ ಮೇಲೆ ಹೇಳಿಕೊಳ್ಳುವಂತಹ ದ್ವೇಷವಾಗಲಿ, ಪ್ರೀತಿಯಾಗಲಿ ಇಲ್ಲದ್ದರಿಂದ ಅತ್ತೆಯ ಆಗಮನಕ್ಕೆ ಖುಷಿಯನ್ನೇಪಟ್ಟರಾಯ್ತು ಎಂದು ಅಂದುಕೊಂಡಳು. ಅಲ್ಲದೆ ಕೆಲವು ವರ್ಷಗಳಿಂದೀಚೆ ಪುರುಷೋತ್ತಮನೂ ಕೆಲಸ- ಬೊಗಸ ಅಂತ ಆಫೀಸಿನಲ್ಲಿ ಕಾಲಕಳೆಯುವುದೇ ಆಗಿಹೋಗಿತ್ತು. ಗಂಡನ ಮೇಲೆ ಸಂಶಯಪಡುವುದು ತರವಲ್ಲ ಎಂದುಕೊಂಡರೂ ತನ್ನ ಬಳಿ ಬಾರದ ಗಂಡ ತನ್ನ ಹೊಟ್ಟೆಯ ಮೇಲೆ ಮೂಡಿದ ಬಾಸುಂಡೆಯಂತಹ ಗೆರೆಗಳಿಂದಾಗಿಯೇ ದೂರವಾಗಿದ್ದಾನೆ ಎಂಬ ನೋವು ಒಬ್ಬಂಟಿ ಶಾರಿಯನ್ನು ಯಾವತ್ತೂ ಚುಚ್ಚುತ್ತಿತ್ತು.

ಅಂದು ಬೆಳಿಗ್ಗೆ ಬಿಂಜಲು ತೆಗೆಯುತ್ತಿದ್ದ ಶಾರಿ ತನ್ನ ಪೊತ್ತೆ ಕೂದಲನ್ನು ಮೀಯಲು ಹೊರಟವರಂತೆ ಮೇಲಕ್ಕೆತ್ತಿ ಬಿಗಿದಿದ್ದ ಆ ಗಂಟನ್ನೂ ದಾಟಿ ಕೆಳಗಿಳಿಯುತ್ತಿದ್ದ ಬೆವರ ಹನಿ ಕುತ್ತಿಗೆಯ ಮೇಲ್ದಾಸಿ ಬೆನ್ನ ಹುರಿಯ ನೇರ್ತ ಕೆಳಗೆ ದಳಗುಡುತ್ತ ಇಳಿಯುತ್ತಲಿತ್ತು. ತೊಡೆಸಂಧಿಯಲ್ಲಷ್ಟೇ ಅಲ್ಲ, ಪಲಕದ ಕಂಕುಳು ಒದ್ದೆ ಮುದ್ದೆಯಾಗಿ ಕೈಯಾಡಿಸಿದರೆ ನೋಯುವಷ್ಟು ಕಂಕುಳಲ್ಲೂ ಕೊರೆತ ಕಾಣಿಸುತ್ತಿತ್ತು ಶಾರಿಗೆ. ಶಾರಿಯ ಪಲಕ ಪಿಸಿಯುವುದೂ ಕಂಕುಳಲ್ಲೇ. ಬೆವರಿನ ಹೊಡೆತಕ್ಕೆ ಬಟ್ಟೆಯೆಲ್ಲ ಲಡ್ಡುಬಡಕುಗಳಾಗಿ ತಿಂಗಳೊಪ್ಪತ್ತಲ್ಲಿ ಅಡುಗೆ ಮನೆಯ ಕೈವರೆಸಿಗಳಾಗಿಬಿಡುತ್ತಿದ್ದವು. 

ಅಲವರಿಕೆ, ಎಂತಹದ್ದೋ ಆತಂಕದಲ್ಲಿದ್ದ ಶಾರಿಗೆ, ‘ನೀನೋ, ನಿನ್ನ ಅವತಾರವೋ. ನಿನ್ನ ಹೊಟ್ಟೆಯನ್ನಂತೂ ನೋಡುವಂತಿಲ್ಲ, ನಿನ್ನ ಮುಖವನ್ನಾದರೂ ಸರಿಯಾಗಿಟ್ಟುಕೋ ಮಾರಾಯ್ತಿ. ಒಳ್ಳೆ ಗದ್ದೆ ಹೂಡಲು ಹೊರಟವಳಂತೆ ಕಾಣಿಸುತ್ತಿದ್ದೀಯಾ. ಅವರಾದರೂ ಬೇಕು, ಕೆಲಸಕ್ಕೆ ಹೋಗುವಾಗ ಮಾತ್ರ ಹಳೆ ಬಟ್ಟೆ ತೊಡುತ್ತಾರೆ.’ ಎಂದು ತನ್ನ ತಾಯಿಯ ಎದುರೇ ಅಪಹಾಸ್ಯ ಮಾಡಿದ್ದೇ ನೆಪ. ಎಷ್ಟೊ ವರ್ಷಗಳಿಂದ ಹೇಳಿದ್ದನ್ನೆಲ್ಲಾ ಹೇಳಿಸಿಕೊಂಡು ಬಂದ ಶಾರಿ, ಮೈಮೇಲೆ ಖಬರ್ರೇ ಇಲ್ಲದವರಂತೆ ಕಿರುಚಿದಳು, ಕೈಗೆ ಸಿಕ್ಕ ಪಾತ್ರೆ ಪಗಡೆಗಳನ್ನು ಕುಕ್ಕಿ, ‘ಹೆಂಡತಿ ಕಂಡರೆ ಹೇಕರಿಕೆ ನಿಮಗೆ. ಅದಕ್ಕೇ ಅಲ್ಲವೇ ನನ್ನನ್ನು ದೂರ ಇಡುತ್ತಿರುವುದು. ನನ್ನನ್ನು ಮುಟ್ಟಲೂ ಅಸಹ್ಯ ನಿಮಗೆ’ ಎಂದು ಮನಸೋ ಇಚ್ಛೆ ಕೂಗಿ ಅತ್ತಳು. ಅನ್ನದ ಬಣ್ಣ ಕಾಣಲು ಬಂದ ಅತ್ತೆಗೆ ಇವೆಲ್ಲಾ ಕಾಣದಿದ್ದೀತೆ..!!  

ಚಂಡಿಯ ಅಪರಾವತಾರದ ಸೊಸೆಯ ಕೈಯಲ್ಲಿ ಮಗ ಏಗುತ್ತಿದ್ದುದು ಹೇಗೋ ಅಂತ ಅವಳಿಗೆ ಮಗನ ಮೇಲೆ ಪ್ರೀತಿ-ಕರುಣೆ ಉಕ್ಕಿಹರಿಯುತ್ತಿತ್ತು. 

ಹೆಂಡತಿಯ ಈ ಅವತಾರವನ್ನೇ ಕಂಡಿರದ ಪುರುಷೋತ್ತಮ ಒಂದು ಮಾತನ್ನೂ ಅಡದೆ, ಆಸರಿಯನ್ನೂ ಕುಡಿಯದೆ ಆಫೀಸಿಗೆ ಹೊರಟುಬಿಟ್ಟ. ಆದರೆ ಅಂದು ಆಫೀಸಿಗೆ ಹೊರಟವನು ಮತ್ತೆ ಬರಲಾರ ಎಂದು ಶಾರಿಗೆಲ್ಲಿ ತಿಳಿದಿತ್ತು. ಕೆಮ್ಮುತ್ತ ನೆಲ್ಲಕ್ಕೆ ಬಿದ್ದವನು ಮತ್ತೆ ಮೇಲೇಳಲಿಲ್ಲ ಅಂತ ತಿಳಿದಿದ್ದೇ ಶಾರಿ ಯಾವುದಕ್ಕೆ ಅಳಲಿ ಪುರುಷೋತ್ತಮನನ್ನು ಎಂದೂ ನೋಯಿಸದವಳು ಅಂದು ನೋಯಿಸಿದ್ದಕ್ಕಾಗೋ, ಎರಡು ಮಕ್ಕಳ ತಾಯಿಯ ಬದುಕು ಇನ್ನು ಹೇಗೆ ಅಂತಲೋ, ಪುರುಷೋತ್ತಮ ಮತ್ತೆ ಬರಲಾರ ಅಂತಲೋ... ಪುರುಷೋತ್ತಮನ ಸಾವು ಕಾಡುತ್ತಿತ್ತಾದರೂ ಅಂದು ಜಗಳವಾಗದೇ ಇದ್ದಿದ್ದರೆ ಇಷ್ಟೊಂದು ಕಾಡುತ್ತಿರಲಿಲ್ಲ. ಎಂದೂ ಮಾಡದವಳು ಅಂದೇ ಏಕೆ ಜಗಳ ಮಾಡಿದೆ ಎಂದು ತನ್ನನ್ನೇ ತಾನು ಸಾರಿಸಾರಿ ಕೇಳಿಕೊಂಡಳು ಶಾರಿ. 
ಅತ್ತೆ ಮಾವನ ಕಣ್ಣಲ್ಲೂ, ಸ್ವತಃ ತನ್ನ ಕಣ್ಣಲ್ಲೂ ಆ ಜಗಳ ಶಾರಿಯನ್ನು ಕುಗ್ಗಿಸಿಬಿಟ್ಟಿತ್ತು. ಗಂಡ ಎಂದು ಅವನನ್ನು ಎಷ್ಟು ಪ್ರೀತಿಸಿದ್ದಳೆಂಬುದು ಅವಳಿಗೆ ತಿಳಿದಿಲ್ಲವಾದರೂ ಅವನಿಲ್ಲದೆ ಮನಸ್ಸೆಲ್ಲ ಬಿನ್ನಗಾಗಿತ್ತು. ಮಕ್ಕಳೂ ಅಪ್ಪನನ್ನು ಬಹಳ ನೆನೆಯುತ್ತಿದ್ದರು.
ಶಾರಿಯ ವಯಸ್ಸಿನ್ನು ಚಿಕ್ಕದು ಅಲ್ಲದೆ ಈಗಂತೂ ಹೆಣ್ಣು ಮಕ್ಕಳಿಗೇ ಬರಗಾಲ, ಗಂಡು ಸಿಗುವುದು ತೀರಾ ಕಷ್ಟವೇನಲ್ಲ ಎಂದು ಅವಳಿಗೆ ಎರಡನೇಯ ಮದುವೆ ಮಾಡಲೇಬೇಕೆಂದು ಮನೆಯವರೆಲ್ಲ ಸೇರಿ ಗಂಡು ಹುಡುಕಿದ್ದೇ ಹುಡುಕಿದ್ದು. ಕಡೆಯಲ್ಲಿ ಸಿಕ್ಕವನೇ ಸುಧಾಕರ, ಮನೆಗೊಬ್ಬನೇ ಮಗ. ಊರಿನಲ್ಲೇ ಇದ್ದು ತೋಟ ಮನೆ ಸಂಭಾಳಿಸಿಕೊಂಡು ಹೋಗುತ್ತಿದ್ದವ. ಮದುವೆಯನ್ನೇ ಕಾಣದೆ ಮೂವತ್ತೆಂಟು ದಾಟುತ್ತಿದ್ದವ. ಎರಡು ಮಕ್ಕಳ ಜೋಜಾರ ತನಗಿರಲಿ ಎಂದು ಶಾರಿಯ ಜೊತೆ ಪುರುಷೋತ್ತಮನ ಎರಡು ಮಕ್ಕಳನ್ನೂ ಒಪ್ಪಿಬಿಟ್ಟ ಸುಧಾಕರ ಶಾರಿಯ ಅಪ್ಪ ಅಮ್ಮನ ಕಣ್ಣಲ್ಲಿ ದೇವರಂತೆನಿಸಿಕೊಂಡರೆ ಎಂದರೆ ಬಹಳ ಉತ್ಪ್ರೇಕ್ಷೆಯೇನಾಗಿರಲಿಕ್ಕಿಲ್ಲ. 

ತನ್ನವೇ ಎರಡು ಮಕ್ಕಳನ್ನು ಹೆತ್ತವಳ ಹೊಟ್ಟೆ ಕಂಡರೆ ಅಸಹ್ಯ ಎನ್ನುವುದೋ, ಭಯ ಎನ್ನುವುದೋ, ಒಟ್ಟಿನಲ್ಲಿ ಯಾವುದೋ ಕಾರಣಕ್ಕಾಗಿ ದೂರ ಸರಿಯುತ್ತಿದ್ದ ಪುರುಷೋತ್ತಮ, ಇನ್ನು ಸುಧಾಕರನಿಗೆ ಎಂತಹ ಭಾವನೆ ಬಂದೀತು! ಬಸಿರು-ಬಾಳಂತನ, ಮಕ್ಕಳು-ಮರಿ ಕಾಣದವನಿಗೆ ದೇಹದ ಬದಲಾವಣೆ ಸಹಜ ಎಂದು ಎನ್ನಿಸುವುದಾದರೂ ಹೇಗೆ? ಹೆತ್ತವರಿಗೇ ತನ್ನ ಹಿಂಜರಿಕೆಯನ್ನು ಹೇಳಿಕೊಳ್ಳಲಾಗದಿದ್ದವಳು ಮದುವೆಗೂ ಮುನ್ನ ಸುಧಾಕರನಿಗೆ ಏನಂತ ವಿವರಣೆ ಕೊಟ್ಟು ಉತ್ತರ ಪಡೆದಾಳು!!
ಕಾಲೇಜರ ಹರೆಯದೊಂದು ದಿನ ಮೂರುಸಂಜೆಯ ಬೆಳಕಲ್ಲಿ ಶಾರಿಯ ಎಡಗೈ ಹಿಡಿದು ಗೆಳತಿ ಪೂರ್ಣಿ, ‘ಅಯ್ಯೋ ರಾಮಾ, ನಿಂಗೆ ಎರಡು ಮದುವೆಯ ಭಾಗ್ಯ ಉಂಟು, ಇಲ್ಲಿ ನೋಡು ಎರಡೆರಡು ಕಂಕಣದ ಗೆರೆ’ ಅಂತ ಕಣ್ಣು ಮಿಟುಕಿಸಿದಾಗ, 
‘ಮಕ್ಕಳೂ ನಾಲ್ಕಾಗಿರಬೇಕು ಸರಿಯಾಗಿ ನೋಡು, ಅವನವೆರಡು, ಇವನವೆರಡು’ ಎಂದಿದ್ದಳು ಶಾರಿ. ಹುಡುಗಾಟಿಕೆಯಲ್ಲಿಯೇ ಆದರೂ ಮದುವೆ ಎಂದೊಡನೆ ಮೈ ಝುಮ್ಮೆನ್ನುವ ದಿನಗಳವು, ಒಂದೋ ಎರಡೋ ಎಂಬುದೆಲ್ಲ ಸಂಬಂಧಪಡದವಾಗಿದ್ದವು ಅಷ್ಟೇ. 

ಮದುವೆಯ ಹೊಸತರಲ್ಲಿ ದೈಹಿಕ ಆಕರ್ಷಣೆಯಿದ್ದರೂ ಸಂಬಂಧ ಬಲಿಯುತ್ತ ಅದು ದೇಹವನ್ನು ಮೀರಿ ಬೆಳೆದುಬಿಡುತ್ತದೆ ಎಂದು ಗೋಟಡಿಕೆ ಆರಿಸುತ್ತ ಆಡಿದ ಬೋಳು ಹಣೆಯ ಅಜ್ಜಿಗೆ ಅಜ್ಜನ ಪ್ರೀತಿ ನೆನಪಾಗಿದ್ದಿತ್ತೆ? ಪುರುಷೋತ್ತಮನೊಂದಿಗಿನ ಸಂಬಂಧ ದೇಹವನ್ನು ಬಿಟ್ಟು ಬೆಳೆಯಲಾಗದೆ ಮುರುಟಿದ್ದು ನೆನಪಾಗಿ ತನ್ನ ನಾಳೆಗಳಲ್ಲಿಯೂ ಅಭದ್ರತೆ ಕಾಣತೊಡಗಿದ್ದಳು ಶಾರಿ. 

ಬೆಸೆದುಕೊಳ್ಳುವ ಹೊಸ ಸಂಬಂಧದ ಬಗ್ಗೆ ತನಗೇ ನಂಬಿಕೆಯಿಲ್ಲ, ಮಕ್ಕಳಿಗೆ ಅಪರೂಪಕ್ಕೆ ಕಾಣುವ ಅಪ್ಪನಿಗಿಂತ ಸುಧಾಕರನೆನ್ನುವ ಮನೆಯಲ್ಲೇ ಇರುವ ಅಪ್ಪ ಹೇಗನ್ನಿಸುತ್ತಾನೋ?

ಬಾಯಿ ಸೋಲುವಷ್ಟು ಹುಗುಸಿ ಹಲುಬಿ ಬಂದ ತಾರತ್ತೆ, ‘ಶಾರೀ, ನಿನ್ನ ಹಳೆ ಮಾವನ ಫೋನು ಬಂದಿತ್ತಂತೆ. ಮದುವೆಗೆ ಬರಲಾಗದು ಅಲ್ಲಿಂದಲೇ ಆಶಿರ್ವಾದ ಮಾಡುತ್ತೇವೆ ಎಂದರಂತೆ. ಗಂಡನನ್ನೇನೋ ಬದಲಿ ಮಾಡಬಹುದು, ಮಕ್ಕಳನ್ನ ಬದಲಿ ಮಾಡ್ಕೋಬಹುದಾ!! ಪಾಪ ಬಡೀ ಜನ.’

‘ಕತೆ ಗೊತ್ತಾ, ಒಮ್ಮೆ ದೇವರು ತಾಯಿ ಮತ್ತು ಹೆಂಡತಿಯ ಹೊಟ್ಟೆಯಲ್ಲಿ ಅಕ್ಕಿ ಇಟ್ಟು, ಆ ಮನುಷ್ಯನಿಗೆ ಕಷ್ಟ ಕೊಟ್ಟನಂತೆ. ಮಗನ ಕಷ್ಟಕ್ಕೆ ನೊಂದ ತಾಯಿಯ ತಾಪಕ್ಕೆ  ಹೊಟ್ಟೆಯಲ್ಲಿದ್ದ ಅಕ್ಕಿ ಬೆಂದು ಅನ್ನವಾಗಿತ್ತಂತೆ, ಹೆಂಡತಿಯ ಹೊಟ್ಟೆಯಲ್ಲಿದ್ದ ಅಕ್ಕಿ ಹಾಗೆಯೇ ಇತ್ತಂತೆ ಗೊತ್ತಾ!!’ ತಾರತ್ತೆಗೆ ಸಂದರ್ಭ ಬೇಕಷ್ಟೇ.

ಅತ್ತಲಾಗೇ ಗೆರಶಿ ಹಿಡಿದು ಬಂದ ಮಹೇಶ್ವರಿ ‘ಎಂತಾ ಮಾತು ಅಂತ ಆಡುತ್ತೀರಿ ತಾರತ್ತಿಗೆ, ತಾವು ಬಂದರೆ ಮತ್ತೆ ಹಳೆಯದನ್ನೆಲ್ಲ ನೆನೆದು ನೊಂದಾಳು ಹುಡುಗಿ ಅಂತ ಅವರಾಡಿದ ಮಾತನ್ನೇಕೆ ನುಂಗಿದಿರಿ’ ಎಂದು ತಾರತ್ತಿಗೆಯ ಮಾತನ್ನು ಕತ್ತರಿಸಿದರು. 

‘ಫಾತಿಮಾ, ಕಾರ್ತೀಕ, ಕೀರ್ತಿಯ ಕೈಗೂ ಮದರಂಗಿ ಹಚ್ಚಿಬಿಡು. ಇಲ್ಲದಿದ್ದರೆ ಮಂಕುಬಡಿದ ಈ ಅಮ್ಮನನ್ನ ಗೋಳು ಹೊಯ್ದುಕೊಳ್ಳುತ್ತಾವೆ’ ಎಂದು ಬೇಕಂತಲೇ ಫಾತಿಮಾಳನ್ನು ಅತ್ತ ಕಳಿಸಿ ಸುಧಾಕರ ಕೊಟ್ಟ ಸಣ್ಣ ಚೀಟಿಯನ್ನು ತಾರತ್ತೆಯ ಕಣ್ಣುಗಳನ್ನೂ ತಪ್ಪಿಸಿ ಶಾರಿಯ ಕೈಲಿಟ್ಟಳು ಮಹೇಶ್ವರಿ.

ಸುಧಾಕರನಿಗೆಲ್ಲ ಹೊಸದು ಎಂದು ಒತ್ತಿ ಹೇಳುತ್ತ ಮದುವೆಯನ್ನು ಜೋರಾಗಿಯೇ ಮಾಡಬೇಕು ಎಂದು ಒತ್ತಾಯಿಸಿದವಳು ಅಮ್ಮ, ‘ಅವನಿಗೆಲ್ಲ ಹೊಸದು’ ಎಂಬ ಮಾತು ಮಗಳನ್ನು ಚುಚ್ಚೀತು ಎನ್ನುವ ಕಲ್ಪನೆ ಬೇಡವೇ ಅವಳಿಗೆ ಎಂದುಕೊಳ್ಳುತ್ತ
ಅಸಮಾಧಾನದಿಂದಲೇ ಸುಧಾಕರನ ಪತ್ರ ತೆಗೆದುಕೊಂಡವಳಿಗೆ ಮತ್ತೆ ಪುರುಷೋತ್ತಮನ ಕಾಗೆ ಕಾಲಿನ ಲಿಪಿ ನೆನಪಿಗೆ ಬಂತು ಶಾರಿಗೆ.

‘ಪ್ರೀತಿಯ ನಲ್ಮೆಯ ಶಾರಿಗೆ,

ನಾವಿಬ್ಬರೂ ನಮ್ಮ ನಮ್ಮ ಜಾಗದಲ್ಲಿನ ಅನಿವಾರ್ಯತೆಯಿಂದ ಹತ್ತಿರವಾಗುತ್ತಿರುವವರು. ನಿನ್ನ ಬದುಕಿನಲ್ಲಿ ಕಳೆದುಕೊಂಡ ಪ್ರೀತಿಯನ್ನು ಕೊಡುತ್ತೇನೆಂದು ಹೇಳುವ ಧೈರ್ಯ ನನಗಿಲ್ಲ. ನಿನಗೆ ಬಾಳು ಕೊಡುತ್ತೇನೆ ಎಂದು ಹೇಳುವಷ್ಟು ದೊಡ್ಡವನೂ ನಾನಲ್ಲ... ನಿನ್ನನ್ನು ಮತ್ತು ನಮ್ಮ ಮಕ್ಕಳಾದ ಕಾರ್ತೀಕ, ಕೀರ್ತಿಯರನ್ನು ಎಣೆ ಮೀರಿ ಪ್ರೀತಿಸಲು ನನಗೆ ಸ್ವಲ್ಪ ಸಮಯ ಹಿಡಿಸಬಹುದು ಆದರೆ ನಿಮ್ಮ ಮೇಲಿನ ಗೌರವ ಆದರಗಳಿಗೆ ಯಾವತ್ತೂ ಕೊರತೆಯಾಗದು. ಅದೇ ಮುಂದೆ ನಮ್ಮ ನಡುವೆ ಬಿಡಿಸಲಾಗದ ಅನುಬಂಧವನ್ನು ಹೆಣೆಯುವುದು ಎನ್ನುವ ನಂಬಿಕೆಯಿದೆ. ನನ್ನ ಈ ಭಾವನೆಗಳನ್ನು ನಿಮ್ಮ ಮೇಲಿನ ಕರುಣೆ ಎಂದಾಗಲೀ ನನ್ನ ದೊಡ್ಡತನ ಎಂದಾಗಲೀ ಅರ್ಥೈಸದಿದ್ದರೆ ಅದಕ್ಕೆ ನಾನೆಂದೂ ನಿಮಗೆ ಋಣಿ. 
ಇಂತಿ ನಿನ್ನವ 
ಸುಧಾಕರ’

ಹೌದು ಸುಧಾಕರನೇ... ಊರ ಮೇಲಿನ ಸಮಾರಾಧನೆಗೆ ಬಡಿಸಲು ಹೋಗುವವನೇ... 
ಮನದ ತುಂಬಾ ಭಯವೆಂಬ ಭೂತ ಕುಣಿಯುತ್ತಿದ್ದಾಗ ಸುಧಾಕರನ ಪತ್ರ ನೀಡಿದ ಧೈರ್ಯ ಅವನನ್ನು ಅದೆಷ್ಟು ಹತ್ತಿರ ಕರೆ ತಂದಿತ್ತು, ಢೋಂಗಿಯೆನ್ನಿಸದ ಅವನ ನುಡಿ ಎಷ್ಟೊಂದು ಆಪ್ತತೆ ಮೂಡಿಸಿತ್ತು ಶಾರಿಯಲ್ಲಿ. ಕಾಟು ಹೊಡೆದ ಪದಗಳೆರಡೂ ತನಗಾಗಿಯೇ ಎನ್ನಿಸಿ ಕೈಗೆ ಹಚ್ಚಿದ ಮದರಂಗಿಯಲ್ಲಿ ಸುಧಾಕರನ ಹೆಸರನ್ನು ಹುಡುಕತೊಡಗಿದಳು ಶಾರಿ..

ಮಯೂರ: ಜೂನ್ 2018ರ ಸಂಚಿಕೆ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !