ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಾವ ವಯಸ್ಸಿಗೆ ಯಾವ ಕಥೆ? ಹೇಳುವ ಬಗೆ ಹೇಗೆ?

Last Updated 13 ಜನವರಿ 2019, 3:32 IST
ಅಕ್ಷರ ಗಾತ್ರ

ಕ್ಷಣ ಕ್ಷಣಕ್ಕೂ ಹೊಸದಕ್ಕೆ ತುಡಿಯುವ, ಬದಲಾವಣೆಯೇ ಬದುಕು ಅನಿಸುವ, ನಿನ್ನೆಯಷ್ಟೇ ಕಂಡುಹಿಡಿದದ್ದು ಇಂದು ಹೊತ್ತು ಮುಳುಗುವಷ್ಟರಲ್ಲಿ ಹಳತು ಅನಿಸುವ ಶಕೆಯಿದು. ಹಾಗಿದ್ದಾಗ್ಯೂ ಶತಮಾನಗಳಿಂದ ಕಾಲನ ಪರೀಕ್ಷೆಗೆ ಒಡ್ಡಿಕೊಂಡು, ಗೆದ್ದಿರುವಂಥದ್ದು ಜಗತ್ತಿನಲ್ಲಿ ಏನಾದರೂ ಇದ್ದರೆ ಅದು ಕಥೆಯೆಂಬ ಸೋಜಿಗ. ಜನರ ಮನೋಧರ್ಮಕ್ಕೆ ಅನುಗುಣವಾಗಿ ತನ್ನ ಸ್ವರೂಪ ಬದಲಾಯಿಸಿಕೊಳ್ಳುತ್ತ ಬೆಳೆಯುತ್ತಲೇ ಇದೆ. ನಮ್ಮ ಪರಂಪರೆಯಲ್ಲಿ ಕಥೆಗಳಿಗೆ ಮಹತ್ತರ ಸ್ಥಾನವಿದೆ. ಹುಟ್ಟಿ ಬೆರಳೆಣಿಕೆಯಷ್ಟು ತಿಂಗಳಲ್ಲೇ ಕಥೆಗಳಿಗೆ ಕಿವಿಯಾಗುತ್ತ ಬಂದವರು ನಾವು. ಮಕ್ಕಳಿಗಾಗಿಯೇ ಕಥೆಗಳನ್ನು ಸೃಷ್ಟಿಸಿದ ಸಂಸ್ಕೃತಿ ನಮ್ಮದು.

ಮಕ್ಕಳ ಕಥೆ ಎಂದ ಕೂಡಲೇ ಇಂದಿನವರಿಗೆ ಥಟ್ಟನೆ ಹುಟ್ಟುವ ಪ್ರಶ್ನೆ ಯಾವ ಮಗುವಿಗೆ ಯಾವ ಕಥೆ? ಹಿಂದಿನಂತೆ ಅಜ್ಜಿಯಿಲ್ಲದ ಮನೆಗಳಲ್ಲಿ ಮಕ್ಕಳಿಗೆ ಏನೇ ಹೇಳಿದರೂ ಆಯ್ಕೆ ಮುಖ್ಯ. ಅದು ಮಗುವಿನ ದೃಷ್ಟಿಯಿಂದಲೂ ಸೂಕ್ತ. ಹುಟ್ಟಿದಾಕ್ಷಣ ಮಗುವಿಗೆ ನಮ್ಮ ಮಾತು ಅರ್ಥವಾಗುವುದೋ ಇಲ್ಲವೋ ಎಂದೆಲ್ಲ ಯೋಚಿಸದೆ ಸಂಭಾಷಣೆ ನಡೆಸುವ ನಾವು ಕಥೆಯನ್ನು ಹಾಗೆ ಹೇಳುವುದಾಗದು. ಕಥೆಯೆಂದರೆ ಕಂದನ ಸರ್ವತೋಮುಖ ಬೆಳವಣಿಗೆಗೆ ಬೇಕಾದ ಅಂಶಗಳಲ್ಲಿ ಮಹತ್ತರವಾದದ್ದು. ಹಾಗಾಗಿ, ಬಹಳ ಜಾಗರೂಕತೆಯಿಂದ ಕಥೆ ಆಯ್ಕೆ ಮಾಡುವ ಜವಾಬ್ದಾರಿ ಹಿರಿಯರದ್ದು.

ಬೆಳವಣಿಗೆಯ ಮೈಲಿಗಲ್ಲುಗಳ (Developmental milestones) ಆಧಾರದ ಮೇಲೆ ಹೇಳುವುದಾದರೆ ಎಂಟು ವರ್ಷಗಳವರೆಗಿನ ಅವಧಿಯನ್ನು ಪೂರ್ವ ಬಾಲ್ಯಾವಧಿ (Early childhood) ಎನ್ನಲಾಗುತ್ತದೆ. ಎಲ್ಲ ರೀತಿಯಲ್ಲೂ ಮಗುವಿನ ಭವಿಷ್ಯದ ತಳಪಾಯ ಗಟ್ಟಿಗೊಳ್ಳುವ ಸಮಯ ಇದು. ಸ್ಪಂಜಿನಂತಿರುವ ಮಗು ಮನಸ್ಸಿಗೆ ಏನೇ ಬಿದ್ದರೂ ಥಟ್ಟನೇ ಒಳಗೆಳೆದುಕೊಳ್ಳುವ ಘಟ್ಟವಿದು. ಆದ್ದರಿಂದ ಭದ್ರ ಬುನಾದಿಗೆ ಏನೇನು ಬೇಕೋ ಅದನ್ನೇ ಕೊಡುವುದು ಅತೀ ಅವಶ್ಯಕ. ಆಟಗಳಲ್ಲೇ ಪಾಠ ಹೇಳುವ ಈ ಹೊತ್ತಿನಲ್ಲಿ ಕಥೆಗಳ ಮೂಲಕ ಮಕ್ಕಳನ್ನು ಚೆಂದಗೆ ಅರಳಿಸುವುದು ಸಾಧ್ಯ.

ಕಥೆಗಳನ್ನು ಆಯ್ದುಕೊಳ್ಳುವಾಗ ಗಮನದಲ್ಲಿರಬೇಕಾದ ಮುಖ್ಯ ವಿಚಾರ ಮಗುವಿನ ವಯಸ್ಸು. ಅದಕ್ಕನುಗುಣವಾಗಿ ಕೊಟ್ಟರಷ್ಟೇ ಅಪೇಕ್ಷಿತ ಫಲ ದೊರಕುವುದು. ಮಗು ಸ್ವತಂತ್ರವಾಗಿ ಅತ್ತಿಂದಿತ್ತ ಅಂಬೆಗಾಲಿಡುವ ಸಾಮರ್ಥ್ಯ ಪಡೆದ ತಕ್ಷಣವೇ, ಅಂದರೆ ಆರೇಳು ತಿಂಗಳಿಗೇ ಪುಸ್ತಕಗಳನ್ನು ಕೊಡುವ ಪರಿಪಾಠ ಮುಂದುವರಿದ ದೇಶಗಳಲ್ಲಿದೆ. ಇಂದ್ರಿಯಗಳ ಮೂಲಕ ಮಾತ್ರ ಹೆಚ್ಚಿನ ಕಲಿಕೆ ನಡೆಯುತ್ತದೆ ಈ ವಯಸ್ಸಿನಲ್ಲಿ. ಮಗು ಕಾಗದವನ್ನು ಸ್ಪರ್ಶಿಸಿ ಇಂದ್ರಿಯಗಳ ಮೂಲಕ ಕಲಿಯುವ ಅನುಭವ ಪಡೆಯುತ್ತದೆ. ಕ್ರಮೇಣ ಚಿತ್ರಗಳನ್ನು ನೋಡುವುದು ಅಭ್ಯಾಸವಾಗುತ್ತದೆ. ಮಗುವಿಗೆ ಪುಸ್ತಕ ಪ್ರೀತಿ ಬೆಳೆಸುವುದು ಇದರ ಉದ್ದೇಶವೇ ಹೊರತು ನೋಡಿ, ಓದಿ, ಅರ್ಥ ಮಾಡಿಕೊಂಡು ಬೃಹಸ್ಪತಿ ಆಗಲಿ ಎಂದಲ್ಲ.

ಕಥೆಗಳನ್ನು ಮೌಖಿಕವಾಗಿ ಹೇಳುವುದು ಸುಲಭವಾದರೂ ಓದಿನ ಪ್ರೀತಿ ಬೆಳೆಸುವ ನಿಟ್ಟಿನಲ್ಲಿ ಪುಸ್ತಕಗಳನ್ನು ಎದುರಿಟ್ಟುಕೊಂಡು ಕಥೆ ಹೇಳುವುದು ಕೂಡ ಅಗತ್ಯ. ಎರಡು ವರ್ಷಕ್ಕಿಂತ ಪುಟ್ಟ ಮಗುವಿಗೆ ಕಥೆ ಹೇಳುವುದು ಸುಲಭವಲ್ಲ. ಎರಡು ನಿಮಿಷಕ್ಕಿಂತ ಹೆಚ್ಚಿನ ಅವಧಿಗೆ ಏಕಾಗ್ರತೆ ಸಾಧ್ಯವಾಗದ ಮಕ್ಕಳ ಗಮನ ಹಿಡಿದಿಡುವುದೇ ಹರಸಾಹಸ. ರಂಜನೀಯವಾಗಿ, ಧ್ವನಿಯಲ್ಲಿ ಎಲ್ಲಾ ಏರಿಳಿತಗಳನ್ನು ತಂದು ಮಗುವನ್ನೂ ಕಥೆಯ ಭಾಗವಾಗಿಸಿ, ಆಂಗಿಕ ಅಭಿನಯವನ್ನೂ ಸೇರಿಸಿ ಕಥೆ ಹೇಳುವುದು ಸಮಂಜಸ. ಮನೆಯಲ್ಲೇ ಇರುವ ವಸ್ತುಗಳನ್ನು ಕಥಾ ಹಂದರಕ್ಕೆ ಅನುಗುಣವಾಗಿ ಬಳಕೆ ಮಾಡುವುದು ಹೆಚ್ಚು ಮೆರುಗು ತರುತ್ತದೆ. ಮಗುವಿಗೆ ಹೆಚ್ಚು ಅರ್ಥವಾಗುವುದರ ಜತೆಗೇ ತಾನೇ ಕಥೆಯಾಗುವ ಖುಷಿ ಕೂಡ ಸಿಗುತ್ತದೆ. ಇದು ಇನ್ನಷ್ಟು ಕಥಾಸಕ್ತಿ ಹುಟ್ಟಿಸುತ್ತದೆ.

ಎರಡು ವರ್ಷಗಳಾಗುವ ಹೊತ್ತಿಗೆ ಮಗು ತನ್ನ ಬಾಲ ಭಾಷೆಯಲ್ಲೇ ಸಂವಹನ ಮಾಡಿ ಒಂದು ಅಂದಾಜಿನಲ್ಲಿ ದಿನನಿತ್ಯದ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವಷ್ಟು ಸಮರ್ಥವಾಗಿರುತ್ತದೆ. ಕಂಡಿದ್ದೆಲ್ಲವೂ ಹೊಸದೆನಿಸುವ ಮತ್ತು ಪ್ರತಿಯೊಂದರಲ್ಲೂ ಕುತೂಹಲ ಮೂಡುವ ಈ ವಯಸ್ಸಿನಲ್ಲಿ ವರ್ಣಮಯ ಚಿತ್ರಗಳೇ ಹೆಚ್ಚು ಇದ್ದು, ಅಕ್ಷರಗಳು ಕಡಿಮೆ ಇರುವ ಕಥೆ ಪುಸ್ತಕಗಳು ಸೂಕ್ತ. ತನ್ನ ಚಿಗುರು ಬೆರಳುಗಳಲ್ಲಿ ಪುಟ ತಿರುವುತ್ತ ಚಿತ್ರಗಳನ್ನು ನೋಡುವ ಮಗು ಅಲ್ಲಿನ ಚಿತ್ರಗಳಿಗೂ ತನ್ನ ವಾತಾವರಣಕ್ಕೂ ನಿಧಾನವಾಗಿ ಸಂಬಂಧ ಕಲ್ಪಿಸುತ್ತ ಹೋಗುತ್ತದೆ. ವಾಕ್ಯಗಳ ಮೇಲೆ ಕಣ್ಣಾಡಿಸುತ್ತ, ಬೆರಳೋಡಿಸುತ್ತ ಇದ್ದಂತೆಲ್ಲ ಓದಲು ಬಾರದಿದ್ದರೂ ಅಕ್ಷರಗಳೆಲ್ಲ ಚಿತ್ರಗಳ ರೂಪದಲ್ಲಿ ಮೆದುಳಿನ ಕ್ಯಾಮೆರಾದಲ್ಲಿ ಸೆರೆಯಾಗುತ್ತವೆ. ಮುಂದೆ ಅಕ್ಷರ ಗುರುತಿಸುವ ಹಂತದಲ್ಲಿ ಇದು ಸಹಾಯವಾಗುತ್ತದೆ.

ಮಗುವಿಗೆ ಮೂರು ವರ್ಷಗಳಾಗುವ ಹೊತ್ತಿಗೆ ಅದರ ಮಿದುಳಿನ ಬೆಳವಣಿಗೆ ಸುಮಾರು ಶೇ 90ರಷ್ಟು ಆಗಿರುತ್ತದೆ.

ಬರೀ ಮಾತಲ್ಲದೆ, ಭಾಷೆ ಕೂಡ ಸಾಕಷ್ಟು ಬೆಳೆದಿರುತ್ತದೆ. ತನ್ನ ಸುತ್ತಲಿನ ವಾತಾವರಣದ ಕಡೆಗಿರುವ ಬೆರಗಿನ ಜತೆಗೇ ರಾಶಿ ಕುತೂಹಲಗಳ ಕಣಜ ಈ ವಯಸ್ಸಿನ ಕಂದ. ಒಳಗಿನ ಸಾವಿರಾರು ಪ್ರಶ್ನೆಗಳನ್ನು ಹೊರ ತೆಗೆದು ಉತ್ತರ ಹುಡುಕುವ ತವಕ ಹೊರ ಚಿಮ್ಮಲು ಕಾಯುತ್ತಿರುತ್ತದೆ. ಓದುವುದು ಈಗಾಗಲೇ ದಿನಚರಿಯ ಭಾಗ ಆಗಿದ್ದಲ್ಲಿ ಅವವೇ ಪುಸ್ತಕಗಳು ಮಗುವಿಗೆ ‘ಬೋರ್’ ಅನಿಸ ತೊಡಗಿರುತ್ತವೆ.

ಒಂದಿಷ್ಟು ಗೊಂಬೆಗಳ ಜತೆಗೆ ಕಥೆಯ ಸಣ್ಣ ಭಾಗವನ್ನಾದರೂ ಸರಿ ತಾನೇ ಮಾಡುವಂಥ ಅವಕಾಶ ಕೊಟ್ಟರೆ ಮಗು ಕಥೆಯ ಥ್ರಿಲ್ ಅನುಭವಿಸುವುದರಲ್ಲಿ ಸಂದೇಹವಿಲ್ಲ. ಕಾಗೆ ಹೂಜಿಗೆ ಕಲ್ಲು ತುಂಬಿಸಿ ನೀರು ಕುಡಿವ ಕಥೆ ಹೇಳುವುದಾದರೆ ಅಡಿಗೆ ಮನೆಯಿಂದ ಪುಟ್ಟದೊಂದು ಪಾತ್ರೆ ತಂದು ಚೂರೇ ನೀರು ತುಂಬಿಸಿ ಕಥೆಯ ಕಾಗೆ ಕಲ್ಲು ಹಾಕುತ್ತ ಹೋದಂತೆಲ್ಲ ಮಗು ತಾನೂ ಪಾತ್ರೆಯೊಳಗೆ ಒಂದೊಂದು ಕಲ್ಲು ಹಾಕಿ ನೀರು ಮೇಲೇರುವ ಅಚ್ಚರಿಯನ್ನು ಕಂಡು ಖುಷಿ ಪಡುತ್ತದೆ. ಅರಿವೇ ಆಗದಂತೆ ವಿಜ್ಞಾನವೂ ಒಳಗಿಳಿದಿರುತ್ತದೆ.

ನಾಲ್ಕಕ್ಕೆ ಕಾಲಿಡುವ ಹೊತ್ತಿಗೆ ಇಂದಿನ ಮಕ್ಕಳು ಶಾಲೆಯ ಮೆಟ್ಟಿಲೇರಿ ಬಹಳಷ್ಟನ್ನು ಕಲಿತಿರುತ್ತಾರೆ. ಸಿಕ್ಕಾಪಟ್ಟೆ ಚಟುವಟಿಕೆಯ ಈ ವಯಸ್ಸಿನ ಮಗುವಿನಮೆದುಳು ಎಷ್ಟು ಕೊಟ್ಟರೂ ಹೀರಬಲ್ಲ ಸಮುದ್ರ. ಮನೆಯಲ್ಲಿ ಬಳಸುವ ಭಾಷೆ ಒಂದೇ ಆಗಿದ್ದಲ್ಲಿ ಇನ್ನೂ ಒಂದೆರಡು ಭಾಷೆಗಳಲ್ಲಿ ಕಥೆ ಹೇಳುವುದು ಮುಖ್ಯ. ಸಾಧ್ಯವಾದಲ್ಲಿ ಬೇರೆ ಸಂಸ್ಕೃತಿಯ ಕಥೆಗಳನ್ನೂ ಮಕ್ಕಳಿಗೆ ಪರಿಚಯಿಸಲು ಇದು ಸಕಾಲ. ಶಾಲೆಯಲ್ಲಿ ಇತರ ಭಾಷೆಗಳ, ಧರ್ಮಗಳ, ಸಂಸ್ಕೃತಿಗಳ ಮಿತ್ರರ ಜತೆ ಬೆರೆಯಲು, ಭಿನ್ನತೆಯನ್ನು ಸುಲಭವಾಗಿ ಸ್ವೀಕರಿಸಿ ಭೇದ ತೋರದಿರಲು ಇದು ಸಹಕಾರಿ. ಈ ವಯಸ್ಸಿನ ಮಕ್ಕಳಿಗೆ ಪುಸ್ತಕ ಹಿಡಿದು ಒಂದಷ್ಟು ಹೊತ್ತು ಕೂರುವುದನ್ನು ಶಾಲೆ ಹೇಳಿಕೊಟ್ಟಿರುತ್ತದೆ. ಮನೆಯಲ್ಲೂ ಅದರ ಮುಂದುವರಿಕೆ ಅಷ್ಟು ಕಷ್ಟವೇನಲ್ಲ.

ಮಗುವಿಗೆ ಐದು ವರ್ಷ ಆಗುವ ಹೊತ್ತಿಗೆ ಮೊನ್ನೆಯಷ್ಟೇ ಹುಟ್ಟಿದ ಪಾಪುವಿಗೆ ಇಷ್ಟೊಂದೆಲ್ಲ ಗೊತ್ತಾಗಿದ್ದು ಹೇಗೆಂಬ ಯೋಚನೆ ಪಾಲಕರಲ್ಲಿ ಬರುವಷ್ಟು ಬೆಳವಣಿಗೆ ಆಗಿಬಿಟ್ಟಿರುತ್ತದೆ. ಈ ವಯಸ್ಸಿನಲ್ಲಿ ಮಕ್ಕಳಿಗೆ ಎಷ್ಟು ಸಾಧ್ಯವೋ ಅಷ್ಟು ವಿಭಿನ್ನ ವಿಚಾರಗಳಿರುವ, ಯೋಚನೆಗೆ ಹಚ್ಚುವ ಜತೆಗೇ ಖುಷಿಯನ್ನೂ ಕೊಡುವ ಕಥೆಗಳು ಅವಶ್ಯಕ. ಇವೆಲ್ಲವುಗಳ ಜತೆಗೆ ಇಂದಿನ ದಿನಮಾನಕ್ಕೆ ಹೊಂದುವಂಥ ಕಥೆಗಳನ್ನು ಹೆಚ್ಚು ಹೇಳಬೇಕು. ಮಕ್ಕಳು ಕಥೆಗಳ ಮೂಲಕ ಸುತ್ತಲ ಜಗತ್ತಿಗೆ ತಮ್ಮನ್ನು ಬೆಸೆದುಕೊಳ್ಳುತ್ತಾರೆ. ತೀರಾ ಹಳೆಯದು ಅನಿಸುವಂಥವು ಮಕ್ಕಳಿಗೆ ರುಚಿಸುವುದಿಲ್ಲ. ಸರಳ ವಾಕ್ಯಗಳನ್ನು ಸ್ವತಂತ್ರವಾಗಿ ಓದುವುದು ಶುರುವಾಗುವ ಈ ಹಂತದಲ್ಲಿ ಅವರು ಓದಬಲ್ಲ ಸರಳ ಪುಸ್ತಕಗಳನ್ನು ಕೊಟ್ಟು ಓದನ್ನು ಪ್ರೋತ್ಸಾಹಿಸಬೇಕು. ಆಂತರಿಕ ಶಕ್ತಿ ಹೆಚ್ಚಿಸುವುದಲ್ಲದೇ ಆತ್ಮವಿಶ್ವಾಸ ಬೆಳೆಸಲೂ ಇದು ಸಹಕಾರಿ.

ಆರನೇ ವಯಸ್ಸಿಗೆ ಮಗು ಪ್ರಿಸ್ಕೂಲ್ ಮುಗಿಸಿ ದೊಡ್ಡ ಶಾಲೆಯ ಸಮುದ್ರಕ್ಕೆ ಕಾಲಿಟ್ಟಿರುತ್ತದೆ. ಭಾವನಾತ್ಮಕ ಮತ್ತು ಬೌದ್ಧಿಕ ಬೆಳವಣಿಗೆ ತನ್ನದೇ ಆಕಾರ ಪಡೆದುಕೊಳ್ಳುವ ಈ ಹೊತ್ತಿನಲ್ಲಿ ಮಕ್ಕಳನ್ನು ನಮ್ಮ ನೆಲಕ್ಕೆ ಬೆಸೆಯುವುದು ಭವಿಷ್ಯದ ದೃಷ್ಟಿಯಿಂದ ಮುಖ್ಯ. ಆರರಿಂದ ಎಂಟರವರೆಗೂ ಜನಪದ ಕಥೆಗಳು, ಚಂದಮಾಮ, ಬಾಲಮಿತ್ರ ಕಥೆಗಳ ಜತೆಗೆ ಸುತ್ತಲ ಜಗತ್ತಿನ ಬಗ್ಗೆ ಅರಿವು ಮೂಡಿಸುವಂಥ ಕಥೆಗಳು ಅವಶ್ಯಕ. ಇಂದಿನ ಸಾಮಾಜಿಕ ಸ್ಥಿತಿ ನೋಡಿದರೆ ಮುಂದಿನ ಜನಾಂಗಕ್ಕೆ ನಾವು ದಾಟಿಸಬೇಕಿರುವುದು ಜೀವನ ಪ್ರೀತಿ, ನೆಲ ಜಲದ ಪ್ರೀತಿ. ವೀಕೆಂಡ್‌ಗಳಲ್ಲಿ ಹಸಿರು ಗಿರಿಧಾಮಕ್ಕೆ ಚಾರಣ ಹೋಗುವುದು ಪರಿಸರ ಪ್ರೀತಿಯಲ್ಲ. ಬದಲಿಗೆ ಇರುವ ಪ್ರಾಕೃತಿಕ ಸಂಪನ್ಮೂಲಗಳನ್ನು ಉಳಿಸುವ, ಸಾಧ್ಯವಾದಷ್ಟು ಬೆಳೆಸುವ ಭಾವ ಮಕ್ಕಳೊಳಗೆ ಗಟ್ಟಿಯಾಗಿ ಬೇರೂರಬೇಕು. ಮಕ್ಕಳನ್ನು ಮುಂದೆ ಕೂರಿಸಿಕೊಂಡು ಇವನ್ನೆಲ್ಲ ನೀತಿ ಪಾಠದಂತೆ ಹೇಳುವುದಾಗದು. ಹಾಗೆ ಹೇಳಿದರೆ ಅದು ಉಳಿಯುವ ಭರವಸೆಯೂ ಇಲ್ಲ. ಕಥೆಯೊಳಗೆ ಅಡಗಿದ ಗುಟ್ಟುಗಳನ್ನು ಮಕ್ಕಳು ತಾವಾಗಿಯೇ ಅರಿಯುತ್ತಾರೆ.

ಸ್ಪರ್ಧೆಯೇ ಮೂಲ ಮಂತ್ರವಾಗಿರುವ ಇವತ್ತಿನ ಜಗತ್ತಿನಲ್ಲಿ ಗೆಲ್ಲುವ ಛಲದಷ್ಟೇ ಮುಖ್ಯವಾದದ್ದು ಸೋಲನ್ನು ಒಪ್ಪಿಕೊಳ್ಳುವ ತಾಕತ್ತು. ಒಂದು ಸಣ್ಣ ಸೋಲನ್ನೂ ತಾಳಲಾಗದೆ ಹತಾಶೆಯಿಂದ ನೇಣಿಗೆ ಕೊರಳೊಡ್ಡುವ ಮಕ್ಕಳು ಇಂದು ನಮ್ಮ ಮುಂದೆಯೇ ಇದ್ದಾರೆ. ಮಕ್ಕಳಲ್ಲಿ ಜೀವನ ಪ್ರೀತಿಯನ್ನು ಎಳೆಯ ವಯಸ್ಸಿನಲ್ಲೇ ತುಂಬಬೇಕು. ಸವಾಲುಗಳನ್ನು ಎದುರಿಸಿ ಗೆಲ್ಲುವ ಕಥೆ, ಕೊರತೆ, ದೋಷಗಳ ನಡುವೆಯೂ ಆತ್ಮವಿಶ್ವಾಸವನ್ನೇ ಮೆಟ್ಟಿಲಾಗಿಸಿಕೊಂಡು ಗೆದ್ದವರ ಕಥೆಗಳನ್ನು ಮಕ್ಕಳಿಗೆ ಹೇಳಬೇಕು. ಎಲ್ಲದರಲ್ಲೂ ಮೊದಲಿಗನಾಗುವ ಮಗು ಸಂಭ್ರಮ ಪಡಬೇಕಾದದ್ದು ತನ್ನ ಗೆಲುವಿನ ಬಗೆಗೇ ಹೊರತು ಸಹವರ್ತಿಯ ಸೋಲಿಗಲ್ಲ ಎಂಬುದನ್ನು ಮನದಟ್ಟು ಮಾಡುವ ಕಥೆಗಳನ್ನು ಅವರ ಮುಂದಿರಿಸಬೇಕು.

ಜೀವನದ ಸಾರವನ್ನೇ ತಮ್ಮೊಳಗೆ ಇರಿಸಿಕೊಂಡಿರುವ ಪಂಚತಂತ್ರ, ಕಥಾ ಸರಿತ್ಸಾಗರ, ಈಸೋಪನ ಕಥೆಗಳು, ಅರೇಬಿಯನ್ ನೈಟ್ಸ್, ಗಾಂಪರೊಡೆಯರ ಕಥೆ, ಸಿಂಡ್ರೆಲಾ, ಸ್ನೋ ವೈಟ್, ಅಲಿಬಾಬ ಮತ್ತು ಕಳ್ಳರು, ಲಿಲಿಪುಟ್, ಅಲ್ಲಾವುದ್ದೀನನ ದೀಪ, ದಿನಕ್ಕೊಂದು ಕಥೆ ಮುಂತಾದವು ಎಲ್ಲ ಕಾಲಕ್ಕೂ ಸಲ್ಲುವಂಥವು. ಇಂಥವುಗಳ ಕಣಜ ಮಗುವಿರುವ ಪ್ರತಿ ಮನೆಯಲ್ಲೂ ಇರಬೇಕು ಮತ್ತು ಕನಿಷ್ಠ ದಿನಕ್ಕೊಂದು ಕಥೆಯನ್ನು ಮಗುವಿನ ಮುಂದೆ ಹರಡಲೇಬೇಕು.

(ಲೇಖಕಿ ಪೂರ್ವ ಬಾಲ್ಯಾವಧಿ ಶಿಕ್ಷಣ ತಜ್ಞೆ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT