ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಥೆ | ಪರೀಕ್ಷಿತನ ಆತ್ಮಾವಲೋಕನ

Last Updated 24 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ತಕ್ಷಕ ನನ್ನ ಕಣ್ಣೆದುರಿಗೆ ತನ್ನ ಬೃಹದಾಕಾರದ ಹೆಡೆ ಬಿಚ್ಚಿ, ಸೀಳು ನಾಲಿಗೆ ಮುಂದಕ್ಕೆ ಚಾಚಿ ಸಂಭ್ರಮದಿಂದ ಕಾಯುತ್ತಾ ನಿಂತಿದ್ದ. ಅವನಿಗೋ, ಬಹುದಿನಗಳ ನಿರೀಕ್ಷೆಯ ತನ್ನ ಪೂರ್ವಜರ ಸಾವಿನ ಸೇಡು ತೀರಿಸಿಕೊಳ್ಳುವ ಮಹಾ ಆತುರ. ಆದರೆ... ಅದರಲ್ಲಿ ನನ್ನ ತಪ್ಪೇನು?... ಬಿಡಿಸಿ ಹೇಳುವವರು ಯಾರು? ಅವನೇ ಊರೆಲ್ಲಾ ಹೇಳಿಕೊಂಡು ಬಂದಂತೆ, ಅವನ ವಂಶಸ್ಥರನ್ನು ಸಾಯಿಸಿದ್ದು ನನ್ನ ಅಜ್ಜ ಅರ್ಜುನ. ನಿಜ. ಆದರೆ...ಅವನೇನು ಉದ್ದೇಶಪೂರ್ವಕವಾಗಿ ಮಾಡಿದನೆಂದು ನನಗನಿಸುವುದಿಲ್ಲ. ಮನುಷ್ಯ ಜಗತ್ತಿನ ನಿಯಮವೇ ಹಾಗಲ್ಲವೇ? ಅವನು ತನ್ನ ಅಸ್ತಿತ್ವ ವಿಸ್ತರಿಸಿಕೊಂಡು ಬಂದಿರುವುದೇ ಅನ್ಯರ ಮಸಣದ ಮೇಲೆ. ಇದನ್ನು ನಿಷ್ಕರುಣೆ ಎನ್ನಲಾಗದು. ತಾನು ಬದುಕಬೇಕೆಂಬ ಹೋರಾಟ ಅಷ್ಟೇ. ಹುಟ್ಟಿದ ಪ್ರತಿ ಮನುಷ್ಯ ತಾನು ಹೇಗಾದರೂ ಚೆನ್ನಾಗಿ ಬದುಕಬೇಕೆಂದುಕೊಳ್ಳುತ್ತಾನೆ. ಈ ಹೋರಾಟದಲ್ಲಿ, ಆಕಸ್ಮಿಕವಾಗಿಯೋ ಅಥವಾ ಉದ್ದೇಶ ಪೂರ್ವಕವಾಗಿಯೋ ಸಹಜೀವಿಗಳು ನಮ್ಮಿಂದ ಸಾಯಬಹುದು, ನೋವು ತಿನ್ನಬಹುದು, ಹತಾಶೆ ಅನುಭವಿಸಬಹುದು, ನಿರ್ವಸತಿಗರಾಗಬಹುದು. ಇಲ್ಲಿ ನನಗೆ ಅರ್ಥವಾಗದ್ದು, ಮನುಷ್ಯ ಮಾಡುವ ಒಳಿತು-ಕೆಡುಕು, ಸೇಡು-ಪ್ರಾಯಶ್ಚಿತ, ಜನ್ಮಾಂತರದ್ದೇ? ಹೀಗೆಯೇ ಆದಲ್ಲಿ, ಇವುಗಳಿಂದ ಯಾರಿಗೂ ಮುಕ್ತಿ ಇಲ್ಲ. ಈ ಬಂಧಗಳಿಂದ ಬಿಡಿಸಿಕೊಳ್ಳುವುದು ಹೇಗೆ? ನನ್ನದಲ್ಲದ ತಪ್ಪಿಗೆ, ಪಿತ್ರಾರ್ಜಿತರು ಮಾಡಿದ ಲೋಪದೋಷಗಳಿಗೆ ನನ್ನ ಹೊಣೆಯಾಗಿಸುವುದು ಎಷ್ಟು ಸರಿ? ಹಾಗಂದ ಮಾತ್ರಕ್ಕೆ, ಅವರ ಪುಣ್ಯ ಕಾರ್ಯಗಳ ಪಾಲೂ ನನಗೆ ಬೇಕೆಂಬ ಹಂಬಲವಿಲ್ಲ. ನಾನು ಮಾಡುವ ಕಾಯಕಕ್ಕೆ ತಕ್ಕ ಫಲ ಸಿಕ್ಕರೆ ಸಾಕೆನಗೆ.

ಈ ಎಲ್ಲಾ ಪ್ರಶ್ನೆಗಳ ನಡುವೆ ಸಿಲುಕಿ ಒದ್ದಾಡಿದ ನನಗೀಗ, ಸಾವಿನ ಭಯ ನನಗರಿವಿಲ್ಲದೆ ಕಡಿಮೆಯಾಗುತ್ತಾ ಬಂದಿದೆ. ನಾನದನ್ನು ಎದುರಿಸಲು ಮಾನಸಿಕವಾಗಿ ಸಿದ್ಧನಾಗಿದ್ದೇನೆ. ಈ ಏಳು ದಿನಗಳಲ್ಲಿ, ರಾಜಕಾರಣದ ಒತ್ತಡಗಳಿಂದ ದೂರವಾಗಿ, ನನ್ನ ನಾನು ಸಂಪೂರ್ಣವಾಗಿ ಅರಿತುಕೊಳ್ಳಲು ಸಾಧ್ಯವಾಯಿತೆನ್ನಬಹುದು. ಈ ಅರಿವು ಮನಸ್ಸನ್ನು ಸಾಕಷ್ಟು ಹಗುರ ಮಾಡಿತು. ಮನಸ್ಸು ಮತ್ತು ದೇಹ ಸ್ಥಿತಪ್ರಜ್ಞೆ ಕಂಡುಕೊಳ್ಳಲಾರಂಭಿಸಿತು. ಈಗ, ನನ್ನ ದೇಹದ ಉಸಿರು ನಿಲ್ಲಿಸಲು ಎದುರಿರುವ ತಕ್ಷಕ ಹಾತೊರೆಯಬೇಕಾಗಿಲ್ಲ. ನನ್ನ ಆತ್ಮ, ದೇಹದ ವ್ಯಾಮೋಹ ತ್ಯಜಿಸಿ ಹೊರಡಲು ಸಿದ್ಧವಾಗಿದೆ.

ಹಾಗಂತ ಇದೇನೂ, ನಾನು ಸುಲಭವಾಗಿ ದಕ್ಕಿಸಿಕೊಂಡ ಸಾಧನೆಯೇನಲ್ಲ. ನಾನು ಇನ್ನು ಕೇವಲ ಏಳು ದಿನಗಳಷ್ಟೇ ಈ ಭೂಮಿಯ ಮೇಲೆ ಬದುಕಿರುತ್ತೇನೆ ಎಂದು ಗೊತ್ತಾದ ತಕ್ಷಣ ಸಂಪೂರ್ಣ ಕುಸಿದು ಹೋಗಿದ್ದೆ. ನನಗೆ ಯಾಕೆ ಹೀಗಾಯಿತು? ನನಗೆ ನೆನಪಿರುವ ಹಾಗೆ, ನಾನು ಯಾವುದೇ ತಪ್ಪು ಮಾಡಿರಲಿಲ್ಲ. ಅಷ್ಟೊಂದು ಎಚ್ಚರಿಕೆಯಿಂದಲೇ ರಾಜ್ಯಭಾರ ಮಾಡುತ್ತಾ ಬಂದಿದ್ದೆ. ಯಾಕೆಂದರೆ, ನಾನು ಪ್ರತಿನಿಧಿಸುತ್ತಿರುವುದು ಪ್ರಸಿದ್ಧ ಪರಂಪರೆ ಹೊಂದಿದ ಕುರುವಂಶ. ದಾಯಾದಿಗಳು ಅಧಿಕಾರಕ್ಕಾಗಿ ಒಬ್ಬರನೊಬ್ಬರು ಕಿತ್ತಾಡಿ ಸಾಯಿಸಿ, ಅಪಾರ ಕಷ್ಟ ನಷ್ಟ ಅನುಭವಿಸಿದ ಮೇಲೆ ಪಡೆದುಕೊಂಡ ಈ ರಾಜ್ಯವನ್ನು, ನನ್ನ ಅಜ್ಜ ಯುಧಿಷ್ಠಿರ ಹಲವಾರು ವರ್ಷಗಳ ಕಾಲ ಸಮರ್ಥವಾಗಿ ನಿಭಾಯಿಸಿದ್ದ. ಅಂದು, ನನ್ನ ಐದು ಜನ ಅಜ್ಜಂದಿರು ಮತ್ತು ಅಜ್ಜಿ ದ್ರೌಪದಿ ಸ್ವರ್ಗಾರೋಹಣಕ್ಕೆಂದು, ತಮ್ಮ ಪ್ರಾಪಂಚಿಕ ಹಂಗುಗಳನ್ನೆಲ್ಲಾ ತೊರೆದು ಹೋಗಲು ಸಿದ್ಧತೆ ನಡೆಸಿದ ನಂತರ, ನನ್ನನ್ನು ಕರೆಸಿ ಹೇಳಿದಿಷ್ಟೇ: ‘ಮಗು, ಪರೀಕ್ಷಿತ... ಕುರುವಂಶದಲ್ಲಿ ಉಳಿದಿರುವ ಏಕೈಕ ಕುಡಿ ನೀನು. ಅದರ ಉತ್ತರಾಧಿಕಾರಿಯಾದ ನಿನ್ನ ಜವಾಬ್ದಾರಿ ಮಹತ್ತರವಾದದ್ದು. ನಿನ್ನ ಆಳ್ವಿಕೆಯಲ್ಲಿರುವ ಜನರ ಪ್ರೀತಿ ಗಳಿಸು. ಅವರ ಯೋಗಕ್ಷೇಮ ವಿಚಾರಿಸುತ್ತಾ ಇರು. ವಿವೇಚನೆಯಿಂದ ಸರಿಯಾದ ಮಾರ್ಗದಲ್ಲಿ ನಡೆ. ಎಲ್ಲಿಯೂ ತಪ್ಪು ಹೆಜ್ಜೆ ಇಡಬೇಡ. ವಂಶದ ಹೆಸರು ಉಳಿಸು.’

ಆಗ ನನಗೆ ಮೂವತ್ತಾರು ವರುಷ ಪ್ರಾಯ. ಆದರೆ, ಅರಮನೆಯಲ್ಲಿ ಒಬ್ಬನೇ ವಾರಸುದಾರನಾಗಿ ಬಹಳ ಮುದ್ದಾಗಿ ಬೆಳೆಸಿದ್ದರಿಂದೇನೊ ಗೊತ್ತಿಲ್ಲ, ಏನೂ ಜವಾಬ್ದಾರಿಯಿಲ್ಲದ ಜೀವನ ನಡೆಸುತ್ತಿದ್ದೆ. ಒಮ್ಮೆಲೇ ಎಲ್ಲಾ ಜವಾಬ್ದಾರಿ ಭುಜಕ್ಕೇರಿಸಿಕೊಂಡು ಪ್ರಬುದ್ಧನಾಗಿ ಕಾರ್ಯನಿರ್ವಹಿಸಬೇಕಿತ್ತು. ಸವಾಲೆನಿಸಿದರೂ ಧೈರ್ಯ ತಂದುಕೊಂಡೆ. ನನಗೆ ಸೂಕ್ತ ಸಲಹೆ ನೀಡುತ್ತಾ ಮುನ್ನಡೆಸಲು ಮಾರ್ಗದರ್ಶಕರಾಗಿ ಕೃಪಾಚಾರ್ಯರಿದ್ದರು. ಅಂದಿನಿಂದ ನನ್ನ ಮುಂದೆ ಇದ್ದ ಗುರಿಯೊಂದೇ, ವಂಶದ ಘನತೆಗೆ ಚ್ಯುತಿಬಾರದಂತೆ ಕೆಲಸ ಮಾಡಿ, ಈ ಆದರ್ಶ ಪರಂಪರೆಯನ್ನು ಮುಂದಿನ ಜನಾಂಗಕ್ಕೆ ದಾಟಿಸುವುದು. ಬಹುಶಃ, ನಾನು ಹಾಗೆಯೇ ಮಾಡುತ್ತಾ ಬಂದೆ ಎನ್ನುವ ವಿಶ್ವಾಸವಿದೆ. ನನಗೀಗ ಅರವತ್ತು ವರ್ಷ ಪ್ರಾಯ. ಕಳೆದ ಇಪ್ಪತ್ನಾಲ್ಕು ವರ್ಷಗಳಿಂದ ಅಧಿಕಾರದ ಕಿರೀಟ ಎಚ್ಚರಿಕೆಯಿಂದ ಹೊತ್ತುಕೊಂಡು ಬಂದಿದ್ದೇನೆ. ನನಗೆ ಈ ಜವಾಬ್ದಾರಿ ಎಂದಿಗೂ ಭಾರವೆನಿಸಿರಲಿಲ್ಲ. ಯಾಕೆಂದರೆ, ಆ ಕೆಲಸದಲ್ಲಿ ನನ್ನ ಪ್ರೀತಿಯಿತ್ತು, ಕಾಳಜಿಯಿತ್ತು. ನನ್ನ ಆಳ್ವಿಕೆಯಲ್ಲಿ ಜನರು ಸಂತೋಷವಾಗಿದ್ದರೆಂದೂ ಕೇಳಿಬಲ್ಲೆ. ಹೀಗೆ ಸರಳರೇಖೆಯಲ್ಲಿ ಚಲಿಸುತ್ತಿದ್ದ ನನ್ನ ಜೀವನದಲ್ಲಿ, ಇದೊಂದು ಸಂಪೂರ್ಣ ಕುಸಿದ ಅನುಭವ. ನಾನು ಗಳಿಸಿದ ಅಲ್ಪಸ್ವಲ್ಪ ಪುಣ್ಯ ನನ್ನ ಕಾಪಾಡಲಾರದೆ ಹೋಯಿತೇ, ಎಂದು ಕಳೆದ ಏಳು ದಿನಗಳಲ್ಲಿ ನನ್ನನ್ನೇ ನಾನು ಹಲವಾರು ಬಾರಿ ಪ್ರಶ್ನಿಸಿದ್ದೆ. ಆ ಘಟನೆಯಿಂದ ನಾನು ನಿಜವಾಗಿಯೂ ತಪ್ಪಿಸಿಕೊಳ್ಳಬಹುದಿತ್ತೇ?... ಬಹುಶಃ, ಮನುಷ್ಯನ ಅಂತ್ಯಕ್ಕೊಂದು ನೆಪ ಬೇಕಷ್ಟೆ.

ಸರಿಯಾಗಿ ಎಂಟು ದಿನಗಳ ಹಿಂದೆ, ನಾನು ನನ್ನ ಸೈನ್ಯದೊಂದಿಗೆ ಮೃಗಗಳ ಬೇಟೆಗೆ ಹೋಗಬೇಕಾದ ಸಂದರ್ಭ ಒದಗಿ ಬಂದಿತ್ತು. ಕೌಶಿಕಿ ನದಿ ಪರಿಸರದ ಜನರು, ನಮಗೆ ಕಾಡು ಪ್ರಾಣಿಗಳಿಂದ ವಿಪರೀತ ತೊಂದರೆ ಆಗುತ್ತಿದೆ, ದಯವಿಟ್ಟು ನಮ್ಮನ್ನು ರಕ್ಷಿಸಿ ಎಂದು ಮೊರೆಯಿಟ್ಟಿದ್ದರು. ಅತಿಯಾದ ಹುಮ್ಮಸ್ಸಿನಿಂದ ಬೇಟೆಯಾಡುತ್ತಾ ಮುಂದುವರಿದಂತೆ, ದಟ್ಟ ಅರಣ್ಯದಲ್ಲಿ ನನಗೆ ದಿಕ್ಕು ತಪ್ಪಿ ಹೋದಂತೆ ಅನ್ನಿಸತೊಡಗಿತು. ನಿಂತು ಹಿಂದಿರುಗಿ ನೋಡಿದರೆ, ನನ್ನ ಸೈನಿಕರು ಅಲ್ಲಿರಲಿಲ್ಲ. ನಾಡಿನ ದಾರಿ ಹುಡುಕುತ್ತಾ ಹುಡುಕುತ್ತಾ ಒಂದು ಆಶ್ರಮದ ಹತ್ತಿರ ಬಂದೆ. ಅಬ್ಬಾ, ಅಂತೂ ಜನ ವಸತಿಯಿರುವ ಒಂದು ಸ್ಥಳ ತಲುಪಿದೆ ಎಂದು ಸಂತಸ ಪಟ್ಟೆ. ಅಲ್ಲಿ ಸಂಪೂರ್ಣ ನಿಶ್ಯಬ್ದ ಆವರಿಸಿತ್ತು. ನಿರಾಶೆಯಾದರೂ, ಅತ್ತ ಮುಂದುವರಿದೆ. ಅಲೆದಾಡಿ ಅಲೆದಾಡಿ ತೀವ್ರ ಬಾಯಾರಿಕೆಯಾಗಿತ್ತು. ಕುಡಿಯಲು ಸ್ವಲ್ಪ ನೀರು ಸಿಕ್ಕರೆ ಸಾಕೆನಿಸಿತ್ತು. ಅದೇ ನಿರೀಕ್ಷೆಯಲ್ಲಿ ಆಶ್ರಮವನ್ನು ಪ್ರವೇಶಿಸಿದೆ. ಒಳಗೆ ಯಾರು ಕಾಣಿಸಲಿಲ್ಲ.

‘ಯಾರಿದ್ದೀರಾ?... ಕುಡಿಯಲು ಸ್ವಲ್ಪ ನೀರು ಸಿಗಬಹುದೇ?...’ ಎಂದು ಒಣಗಿದ ಗಂಟಲಲ್ಲಿ ಮೆಲುಧ್ವನಿಯಲ್ಲಿ ಕೇಳಿದೆ. ಉತ್ತರ ಬರಲಿಲ್ಲ. ಗಂಟಲು ಸರಿಪಡಿಸಿಕೊಳ್ಳುತ್ತಾ ಜೋರಾಗಿ ಕೇಳಿದೆ. ಅಸಹನೀಯ ನಿಶ್ಯಬ್ದ ಮುಂದುವರಿಯಿತು. ಅಂತೂ, ಕೊನೆಗೆ ಅಲ್ಲೊಂದು ಮೂಲೆಯಲ್ಲಿ ಮುನಿಯೊಬ್ಬ ಧ್ಯಾನ ಮಾಡುತ್ತಿದ್ದುದು ಕಾಣಿಸಿತು. ಆ ವ್ಯಕ್ತಿ ಕಣ್ಣು ಮುಚ್ಚಿ ಕುಳಿತಿದ್ದರು. ಬಹುಶಃ, ಕೇಳಿಸಿರಲಿಕ್ಕಿಲ್ಲವೆಂದು ಅವರ ಹತ್ತಿರ ಹೋಗಿ ಪುನಃ ಹೇಳಿದೆ.

‘ಕುಡಿಯಲು ಸ್ವಲ್ಪ ನೀರು ಬೇಕಿತ್ತು...’

ಅವರ ದೇಹ ಮಿಸುಕಾಡಲಿಲ್ಲ. ಮತ್ತೊಮ್ಮೆ ಕೇಳಿದೆ. ಉತ್ತರವಿಲ್ಲ. ಹೀಗೆ, ನಾಲ್ಕು ಬಾರಿ ಏರಿದ ಧ್ವನಿಯಲ್ಲಿ ಕೂಗಿ ಕರೆದೆ. ಅವರು ಪ್ರತಿಕ್ರಿಯಿಸಲಿಲ್ಲ. ತೀವ್ರ ದಣಿದಿದ್ದ ನನಗೆ ಅಸಹಾಯಕತೆಯೊಂದಿಗೆ ಕೋಪ ನೆತ್ತಿಗೇರಿತು. ಎದುರಿಗಿರುವ ಮನುಷ್ಯನ ತುರ್ತು ಅಗತ್ಯಗಳನ್ನು ಕಡೆಗಣಿಸಿ ಮಾಡುವ ಧ್ಯಾನ ಅರ್ಥಹೀನವಲ್ಲವೇ? ಈ ಅರ್ಥವಿಲ್ಲದ ಆಚರಣೆಗಳ ವಿರುದ್ಧ ಒಮ್ಮೆಲೇ ಸಿಟ್ಟು ಬಂತು. ಆಗಲೂ ಒಂದು ಮನಸ್ಸು, ‘ಹೋಗಲಿ ಬಿಟ್ಟುಬಿಡು’ ಎಂದರೆ, ಇನ್ನೊಂದು ಮನಸ್ಸು, ಇವರಿಗೆ ತಕ್ಕ ಪಾಠ ಕಲಿಸಬೇಕೆಂದು ಕಿವಿ ಚುಚ್ಚತೊಡಗಿತು. ಬಹುಶಃ, ಅವರವರ ಬದುಕುವ ಮಾರ್ಗ ಅವರಿಷ್ಟ, ನಾನ್ಯಾರು ಅದನ್ನು ಪ್ರಶ್ನಿಸಲು, ಎಂದು ಸುಮ್ಮನಿರಬೇಕಿತ್ತು ಎಂದು ಈಗ ಅನ್ನಿಸುತ್ತಿದೆ.

ಆ ಕೋಪದಿಂದಲೇ ಆಶ್ರಮದಿಂದ ರಭಸವಾಗಿ ಹೊರಗೆ ಬಂದರೆ, ಅಂಗಳದಲ್ಲಿ ಸತ್ತು ಬಿದ್ದಿದ್ದ ಒಂದು ನಾಗರಹಾವನ್ನು ಇರುವೆಗಳು ಮುತ್ತಿದ್ದುದನ್ನು ಕಂಡೆ. ತಕ್ಷಣ ಒಂದು ದುರಾಲೋಚನೆ ಮೂಡಿತು. ದಣಿದ ನನಗೆ ನೀರು ಕೊಡದೇ, ತನ್ನ ಅಧ್ಯಾತ್ಮ ಸುಖದಲ್ಲಿ ಮೈಮರೆತ ಆ ಮುನಿಗೆ, ಪಾರಿತೋಷಕವಾಗಿ ಕೊರಳಿಗೆ ಅದನ್ನು ಹಾರವಾಗಿ ತೊಡಿಸಬಾರದೇಕೆ?... ಹೆಚ್ಚು ಯೋಚಿಸದೆ ಹಾಗೆಯೆ ಮಾಡಿ, ಒಂದು ಸಲವೂ ಹಿಂದಿರುಗಿ ನೋಡದೇ ಊರಿನತ್ತ ಮುನ್ನೆಡೆದೆ. ಅಂತೂ ಅರಮನೆ ತಲುಪಿದವನಿಗೆ, ರಾಜಕಾರಣದ ನಡುವೆ ಆ ಘಟನೆ ಬಹುತೇಕ ಮರೆತೇ ಹೋಗಿತ್ತು.

ಆದರೆ ಹೆಚ್ಚು ಹೊತ್ತು ಮರೆಯಲಾಗಲಿಲ್ಲ. ಮಾರನೆಯ ದಿನ ಮುಂಜಾನೆಯೇ ನನ್ನ ಭೇಟಿಯಾಗಲು ಕೆಲವು ಋಷಿ ಕುಮಾರರು ಬಂದಿದ್ದರು. ತಮ್ಮನ್ನು ಶಮೀಕ ಮುನಿಯ ಶಿಷ್ಯರೆಂದು ಪರಿಚಯಿಸಿಕೊಂಡು, ನಾನು ಹಿಂದಿನ ದಿನ ಕುತ್ತಿಗೆಗೆ ಹಾವು ಸುತ್ತಿದ್ದು ಸ್ವತಃ ಶಮೀಕ ಮುನಿಗೆಂದು ಹೇಳಿದರು. ಅನಂತರ ನಡೆದ ಘಟನೆಗಳನ್ನು ಹೇಳಿ, ನನ್ನನ್ನು ಸಂಪೂರ್ಣವಾಗಿ ತಲ್ಲಣಗೊಳಿಸಿದರು. ನಾನು ಬಂದ ನಂತರ ಶಮೀಕ ಮುನಿಯ ಮಗ ಶೃಂಗಿ, ತನ್ನ ತಂದೆಯ ಸ್ಥಿತಿ ನೋಡಿ ಕೋಪಗೊಂಡು ಶಾಪ ಹಾಕಿದನಂತೆ: ‘ಧ್ಯಾನ್ಯಸ್ತನಾಗಿದ್ದ ನನ್ನ ಅಪ್ಪನ ಕೊರಳಿಗೆ ಸತ್ತ ಹಾವನ್ನು ಹಾಕಿ ಅವಮಾನ ಮಾಡಿದವನು ಯಾರೇ ಆಗಿರಲಿ, ಇಂದಿನಿಂದ ಏಳು ದಿನಗಳ ಒಳಗೆ ಹಾವು ಕಡಿದೇ ಸತ್ತು ಹೋಗಲಿ’.

ಸ್ವಲ್ಪ ಸಮಯದ ನಂತರ ಧ್ಯಾನದಿಂದ ಎಚ್ಚೆತ್ತುಕೊಂಡ ಶಮೀಕ ಮುನಿ ವಿಷಯ ಗೊತ್ತಾಗಿ ಮಗನನ್ನು ತರಾಟೆಗೆ ತೆಗೆದುಕೊಂಡರಂತೆ. ಅವರ ದಿವ್ಯದೃಷ್ಟಿಗೆ ಗೊತ್ತಾಗಿ ಹೋಗಿತ್ತು, ತನ್ನ ಮಗನಿಂದ ಶಾಪಗ್ರಸ್ತನಾದವನು ನಾನೇ ಎಂದು. ಸಾವಧಾನದಿಂದ ಮಗನಿಗೆ ತಿಳಿ ಹೇಳಿದರಂತೆ- ‘ರಾಜ ಪರೀಕ್ಷಿತ ಒಬ್ಬ ಉತ್ತಮ ಆಡಳಿತಗಾರ. ಅವನು ಅಧಿಕಾರದಲ್ಲಿರುವುದರಿಂದಲೇ ನಾವಿಂದು ಸುರಕ್ಷಿತರಾಗಿದ್ದೇವೆ. ಅವನು ಸದಾ ಚೆನ್ನಾಗಿರಬೇಕು. ಸಮಯಕ್ಕೆ ಸರಿಯಾಗಿ ನೀರು ಸಿಗದೇ ಕೋಪದ ಆವೇಶದಲ್ಲಿ, ಏನೋ ಕ್ಷುಲ್ಲಕ ಕೆಲಸ ಮಾಡಿರಬಹುದು. ಅವನೇನು ಜೀವಂತ ಹಾವನ್ನು ನನ್ನ ಕುತ್ತಿಗೆಗೆ ಸುತ್ತಲಿಲ್ಲವಲ್ಲ. ಅಂದರೆ, ಅವನಿಗೆ ನನ್ನ ಕೊಲ್ಲುವ ಉದ್ದೇಶ ಇರಲಿಲ್ಲ. ಆದರೆ, ನೀನು ಅವನ ಸಾವಿಗೆ ಮುಹೂರ್ತ ಇಟ್ಟೆಯಲ್ಲ! ಇದು ಸರಿಯಿಲ್ಲ. ಒಬ್ಬ ಋಷಿ ಅನ್ನಿಸಿಕೊಂಡವನು ಮೊದಲು ಜಯಿಸಬೇಕಾದುದು ತನ್ನ ಕೋಪವನ್ನು. ನಿನ್ನಲ್ಲಿ ಆ ಪ್ರಬುದ್ಧತೆ ಇನ್ನೂ ಬಂದಿಲ್ಲ. ಹಾಗಾಗಿ, ನಿನ್ನ ಶಿಕ್ಷಣ ಅಪೂರ್ಣ. ಮೊದಲು ಕಠಿಣ ಅಭ್ಯಾಸ ಮಾಡಿ ನಿನ್ನನ್ನು ನೀನು ಗೆಲ್ಲು. ನಿನ್ನ ವಿದ್ವತ್ ಶಕ್ತಿಯನ್ನು ಪ್ರದರ್ಶಿಸುವ ಮೊದಲು, ನೂರು ಬಾರಿ ಯೋಚಿಸು. ನಿನ್ನ ವಿದ್ಯೆ ಸಮಾಜಕ್ಕೆ ಒಳಿತನ್ನು ಮಾಡಬೇಕೆ ಹೊರತು, ಸೇಡು ತೀರಿಸಿಕೊಳ್ಳಲು ಅಲ್ಲ’.

ಅಷ್ಟಕ್ಕೇ ನಿಲ್ಲದೆ, ಶಮೀಕ ಮುನಿ ತನ್ನ ಆಪ್ತ ಶಿಷ್ಯ ಗುರುಮುಖನ ನೇತೃತ್ವದಲ್ಲಿ ಋಷಿಕುಮಾರರು ನನ್ನ ಭೇಟಿಯಾಗುವಂತೆ ತಿಳಿಸಿ ಪರಿಹಾರ ಮಾರ್ಗವನ್ನೂ ಸೂಚಿಸಿದ್ದರು.

‘ತಕ್ಷಣ ರಾಜ ಪರೀಕ್ಷಿತನನ್ನು ಭೇಟಿಯಾಗಿ ಶಾಪದ ವಿಷಯ ಹೇಳಿ, ಆಗಿರುವ ಪ್ರಮಾದಕ್ಕೆ ನನ್ನ ಕ್ಷಮಾಪಣೆ ಕೇಳಿ. ಅದರ ವಿಮುಕ್ತಿಗಾಗಿ ಮುಂದಿನ ಏಳು ದಿನಗಳ ಕಾಲ ನಿರಂತರ ಭಾಗವತ ಪಠಣ ಮಾಡಲು ಸೂಕ್ತ ಗುರುವನ್ನು ಕೂಡಲೇ ಹುಡುಕಲು ತಿಳಿಸಿ. ಇದರಿಂದ ಶಾಪದ ಪ್ರಭಾವ ಕಡಿಮೆಯಾದರೂ ಆಗಬಹುದು.’

ಋಷಿ ಕುಮಾರರ ಮಾತು ಕೇಳಿ ನನಗೆ ನನ್ನ ಪರಿಸ್ಥಿತಿಯನ್ನು ಅರ್ಥ ಮಾಡಿಕೊಳ್ಳಲು ಸ್ವಲ್ಪ ಸಮಯ ತಗುಲಿತು. ಆದರೆ, ನಾನು ಮಾಡಿದ ಅಚಾತುರ್ಯದ ಪರಿಣಾಮವನ್ನು ನಾನೇ ಸ್ವತಃ ಅನುಭವಿಸಬೇಕಲ್ಲವೇ?...ಸಾವು ಎಲ್ಲರಿಗೂ ಬರುತ್ತದೆಯೆನ್ನುವುದು ನಿಜ. ಆದರೆ, ಅದಕ್ಕಾಗಿ ನಾವೆಂದೂ ಪೂರ್ವಸಿದ್ಧತೆ ಮಾಡುವುದಿಲ್ಲ. ನಮ್ಮ ತಯಾರಿ ಏನಿದ್ದರೂ ಚೆನ್ನಾಗಿ ಬದುಕುವುದಕ್ಕೆ ಹೊರತು, ಸಾಯುವುದಕ್ಕಲ್ಲ. ನಾಳಿನ ಕನಸುಗಳನ್ನು ಬೆನ್ನಟ್ಟಿ ಹೋಗುವಾಗ ಸಾವು ಆಕಸ್ಮಿಕವಾಗಿ ಬರುತ್ತದೆ. ಅದರ ಅರಿವು, ಸಾಯುತ್ತಿರುವವನಿಗೆ ಹೆಚ್ಚಾಗಿ ಇರುವುದಿಲ್ಲ. ಉಳಿದವರ ಕಣ್ಣೀರಿನಲ್ಲಿಯಷ್ಟೇ ಲೋಕ ಅದನ್ನು ಕಾಣಬಹುದು.

ಆದರೆ, ಇಷ್ಟೇ ದಿನದಲ್ಲಿ ಬರುತ್ತದೆ, ಹೀಗೆಯೇ ಬರುತ್ತದೆ ಎಂದು ಗೊತ್ತಾದ ಮೇಲೆ, ಸಾವನ್ನು ಬರಮಾಡಿಕೊಳ್ಳಲು ಮಾನಸಿಕ ಸಿದ್ಧತೆ ನಡೆಸುವುದು ಅಷ್ಟು ಸುಲಭದ ಮಾತಲ್ಲ. ನನಗೆ ಎಷ್ಟೊಂದು ಜವಾಬ್ದಾರಿಗಳಿದ್ದವು! ಎಷ್ಟೊಂದು ಕೆಲಸ ಬಾಕಿಯಿತ್ತು! ಸ್ವಲ್ಪವೇ ಸಮಯಾವಕಾಶ ಇದ್ದುದರಿಂದ ತಕ್ಷಣ ಕಾರ್ಯೋನ್ಮುಖನಾಗಬೇಕಿತ್ತು. ಯೋಚಿಸುತ್ತಾ ಮನಸ್ಸು ತಟಸ್ಥವಾದಂತೆ ಭಾಸವಾಗಿ ಏನೂ ಮಾಡಲಾರದಾದೆ. ನನ್ನ ಮಗ ಜನಮೇಜಯ ಇನ್ನೂ ಚಿಕ್ಕ ಹುಡುಗ. ಆದರೂ ಅವನನ್ನು ಪಟ್ಟಕ್ಕೇರಿಸುವುದು ಅನಿವಾರ್ಯವಾಗಿತ್ತು. ಅವನನ್ನು ದಕ್ಷ ಮತ್ತು ನಿಷ್ಠ ಮಂತ್ರಿಗಳ ಸುಪರ್ದಿಯಲ್ಲಿ ಬಿಟ್ಟು ನಾನು ಸಾವಿಗೆ ಸಿದ್ಧನಾಗಬೇಕಿತ್ತು.

ಆ ನನ್ನ ಜವಾಬ್ದಾರಿ ಕಳಚಿಕೊಳ್ಳುವುದನ್ನು ಬಿಟ್ಟು, ನನಗಾಗಿ ಬೇರೇನೂ ಮಾಡಲಾಗದೆ ಮೂಕಪ್ರೇಕ್ಷಕನಾದೆ. ನನ್ನ ಆಸ್ಥಾನದಲ್ಲಿದ್ದ ಸನ್ಮಿತ್ರರು ಮಾತ್ರ ತಕ್ಷಣ ಕಾರ್ಯೋನ್ಮುಖರಾಗಿ ನನ್ನನ್ನು ಸಾವಿನಿಂದ ಪಾರು ಮಾಡಲು ಏನೇನು ಮಾಡಬಹುದೋ ಅದನ್ನೆಲ್ಲಾ ಮಾಡಿದರು. ಸರ್ಪಗಳು ನುಸುಳಲಾಗದಂತೆ, ನೀರಿನ ಮೇಲೆ ಕಂಬಗಳನ್ನು ನೆಟ್ಟು ಅದರ ಮೇಲೆ ಸುಭದ್ರ ವಾಸಸ್ಥಾನ, ಕ್ಷಣಮಾತ್ರದಲ್ಲಿ ನಿರ್ಮಿಸಿದರು. ಅಲ್ಲಿಗೆ ನನ್ನನ್ನು ಕ್ಷೇಮವಾಗಿ ಬಿಟ್ಟು, ಹಾವಿನ ವಿಷ ತೆಗೆಯುವ ಪಂಡಿತರನ್ನು ಬಹುಮಾನ ಘೋಷಿಸಿ ಕರೆಸಿಕೊಂಡು ಜೊತೆಗಿರಿಸಿದರು. ಆ ಪರಿಸರದ ನಿರಂತರ ಕಾವಲಿಗೆ, ನನ್ನ ಹಿತೈಷಿ ಜನರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಸಿದ್ಧರಾಗಿ ನಿಂತಿದ್ದರು. ಇನ್ನು, ನನ್ನ ಪಾಪ ಪರಿಹಾರಕ್ಕಾಗಿ ಕೇವಲ ಏಳು ದಿನಗಳಲ್ಲಿ ಶ್ರೀಮದ್ ಭಾಗವತವನ್ನು ಪಠಣ ಮಾಡಲು ಸಾಮರ್ಥ್ಯವಿದ್ದುದು ವಿದ್ವಾಂಸ ಸುಖದೇವರಿಗೆ ಮಾತ್ರ. ಅವರು ಮಹಾನ್ ಪಂಡಿತ ವೇದವ್ಯಾಸರ ಮಗ. ವಯಸ್ಸಿನಲ್ಲಿ ಇನ್ನೂ ಅಪ್ರಬುದ್ಧ, ಆದರೆ ವಿಧ್ವತ್ತಿನಲ್ಲಿ ಅಷ್ಟೇ ಮೇಧಾವಿ. ನನ್ನ ಆಸ್ಥಾನದವರು ಅವರನ್ನು ವಿನಮ್ರತೆಯಿಂದ ಕರೆಸಿಕೊಂಡರು. ನನ್ನ ಜೀವ ಭದ್ರತೆಗಾಗಿ ಎಲ್ಲಾ ಸಮರ್ಪಕ ವ್ಯವಸ್ಥೆಗಳು ಕ್ಷಣಮಾತ್ರದಲ್ಲಿ ಸಿದ್ಧಗೊಂಡವು. ನಾನು ಮೌನವಾಗಿ ಎಲ್ಲವನ್ನು ಗಮನಿಸುತ್ತಾ ಬಂದೆ, ಆದರೆ ಪ್ರತಿಕ್ರಿಯಿಸಲಿಲ್ಲ. ಬದಲಾಗಿ, ನನ್ನ ನಾನು ಪ್ರಶ್ನಿಸತೊಡಗಿದೆ, ಇಲ್ಲಿ ನಾನು ನಿರ್ವಹಿಸಬೇಕಾದ ಪಾತ್ರವೇನಾದರೂ ಇದೆಯೇ? ಮನುಷ್ಯ ತನ್ನ ಸಾವನ್ನು ಪ್ರತಿಭಟಿಸಲು ಸಾಧ್ಯವೇ? ಸಾವನ್ನು ನಿಜವಾಗಿಯೂ ಗೆಲ್ಲಬಹುದೇ? ಇನ್ನೊಂದಿಷ್ಟು ವರ್ಷ ಹೆಚ್ಚು ಬದುಕಿ, ಏನಾದರೂ ಮಹತ್ವದ್ದು ಸಾಧಿಸುವುದು ಬಾಕಿಯಿದೆಯೇ? ಅಥವಾ, ಈ ಸಾವನ್ನು ಇನ್ನಷ್ಟು ಮುಂದಕ್ಕೆ ತಳ್ಳಬೇಕೆನ್ನುವ ಮನುಷ್ಯನ ಆಸೆಗೆ ಎಲ್ಲೆಯಿದೆಯೇ? ಎಂದಾದರೂ ಎದುರಿಸಲೇಬೇಕಾದ ಸಾವಿಗೇಕೆ ಈ ತರಹದ ಭಯ? ನನ್ನ ಮನಸ್ಸು ಗೊಂದಲಕ್ಕೀಡಾಯಿತು.

ಆಗ ನನ್ನ ಜೊತೆಗಿದ್ದ ಹಿರಿಯ ಸಾಧುಗಳೊಬ್ಬರು ನನ್ನ ವಂಶವೃಕ್ಷದ ಕಥೆ ಹೇಳಿದ್ದರು. ಅಂದು ನನ್ನ ಅಜ್ಜ ಅರ್ಜುನ, ಪಾಂಡವರ ಹೊಸ ರಾಜಧಾನಿ ಇಂದ್ರಪ್ರಸ್ಥ ಕಟ್ಟುವ ಸಲುವಾಗಿ ಕಾಡೊಂದನ್ನು ನಾಶಮಾಡಬೇಕಿತ್ತು. ಅದಕ್ಕೆ ಅವನು ಆಯ್ಕೆ ಮಾಡಿಕೊಂಡ ಸ್ಥಳ, ಖಾಂಡವವನ. ಆ ದಟ್ಟ ಅರಣ್ಯವನ್ನು ಮತ್ತು ಅದರಲ್ಲಿದ್ದ ಜೀವವೈವಿಧ್ಯಗಳನ್ನು ಸುಟ್ಟು ಹಾಕಿ ವೈಭವದ ಮಾನವ ಒಡ್ಡೋಲಗ ಸ್ಥಾಪಿಸಬೇಕಿತ್ತು. ಅಂದು ಅರ್ಜುನ, ಹೀಗೆ ನಿಷ್ಕರುಣೆಯ ದೃಢ ಚಿತ್ತದಿಂದ ಕಾಡಿಗೆ ಬೆಂಕಿ ಇಟ್ಟಾಗ, ಅದರೊಳಗೆ ಸಹಸ್ರ ಪ್ರಾಣಿಗಳು ಸತ್ತು ಕರಕಲಾದರೆ, ಇನ್ನಷ್ಟು ಜೀವಿಗಳು ಬದುಕು ಕಳೆದುಕೊಂಡವು ಅಥವಾ ಅನಾಥರಾದವು. ಹೀಗೆ ತನ್ನ ವಂಶಸ್ಥರನ್ನು ಕಳೆದುಕೊಂಡು ಅನಾಥರಾದವರಲ್ಲಿ ಈಗ ನನ್ನ ಕಣ್ಣೆದುರಿಗೆ ನಿಂತಿರುವ ತಕ್ಷಕನೂ ಒಬ್ಬ.

ನಾನು ಒಂದು ಕ್ಷಣ ಯೋಚಿಸಿದೆ. ವರ್ತಮಾನದಲ್ಲಿ ನಾನು ಅನುಭವಿಸುವ ಹೊಡೆತಗಳಿಗೆ, ಮೂರು ತಲೆಮಾರು ಹಳೆಯ ಘಟನೆಗಳ ಜೋಡಣೆ ನನಗೆ ಅಷ್ಟು ಸಮರ್ಥನೀಯ ಅನ್ನಿಸಲಿಲ್ಲ. ನಾವು ಈ ಜನ್ಮದಲ್ಲಿ ಮಾಡುವ ಪಾಪಕ್ಕೆ ನಾವೇ ಶಿಕ್ಷೆ ಅನುಭವಿಸಬೇಕು ಎಂದರೆ ಒಪ್ಪಬಹುದೇನೋ? ಆದರೆ, ತಲೆಮಾರುಗಳ ಹಿಂದೆ ರಕ್ತ ಹಂಚಿಕೊಂಡವರು ಮಾಡಿರುವ ತಪ್ಪುಗಳಿಗೆ ನಾವು ಈಗ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದರೆ ಅದೆಷ್ಟು ಸಮಂಜಸವಾದೀತು? ಈ ಭೂಮಿಯಲ್ಲಿ ಪ್ರತಿನಿತ್ಯ ತಕ್ಷಕನಂತೆ ಎಷ್ಟೋ ಜೀವಿಗಳು ವಿಭಿನ್ನ ಕಾರಣಗಳಿಗೆ ತಬ್ಬಲಿಗಳಾಗುತ್ತಲೇ ಇರುತ್ತವೆ. ಹೀಗೆ ಸೇಡು ತೀರಿಸಿಕೊಳ್ಳುತ್ತಾ ಹೋದರೆ, ಜಗತ್ತಿನಲ್ಲಿ ಬರಿ ಹೆಣಗಳೇ ಬಿದ್ದಿರುತ್ತವೆ. ಇದೆಂತಹ ತಾರ್ಕಿಕ ನ್ಯಾಯ? ಇದಕ್ಕೆ ಕೊನೆಯಿಲ್ಲವೇ?

ನನಗೆ ಕಾಡಿದ ಈ ತಾರ್ಕಿಕ ಪ್ರಶ್ನೆಯನ್ನು ನನ್ನೊಂದಿಗಿದ್ದ ವಿದ್ವಾಂಸರ ಮುಂದಿಟ್ಟೆ. ಆಗ ಒಬ್ಬ ಸಾಧುಗಳು ನನ್ನ ಹುಟ್ಟಿನ ವಿಸ್ಮಯ ಕಥೆಯನ್ನು ಹೇಳಿದರು. ಅಂದು, ನನ್ನ ಅಪ್ಪ ಅಭಿಮನ್ಯು ಕುರುಕ್ಷೇತ್ರ ಯುದ್ಧಭೂಮಿಯಲ್ಲಿ ಚಕ್ರವ್ಯೂಹದಲ್ಲಿ ಸಿಲುಕಿ ವೀರಮರಣ ಪಡೆಯುತ್ತಿರುವಾಗ, ನಾನು ಅಮ್ಮ ಉತ್ತರೆಯ ಗರ್ಭದಲ್ಲಿದ್ದೆಯಂತೆ. ವಿಸ್ಮಯವೆಂದರೆ, ಆಗಲೇ ನನ್ನ ಹತ್ಯೆಯ ಸಂಚು ನಡೆದಿತ್ತಂತೆ. ಅದರಿಂದ ಬದುಕಿ ನಾನು ಪ್ರಪಂಚ ನೋಡುವಂತೆ ಆಗಿದ್ದು ಒಂದು ಪವಾಡವೇ ಸರಿ. ಅಶ್ವತ್ಥಾಮ, ತನ್ನ ಅಪ್ಪ ದ್ರೋಣಾಚಾರ್ಯರನ್ನು ಪಾಂಡವರು ಮೋಸದಿಂದ ಕೊಂದರೆಂದು ಕೋಪಗೊಂಡು, ಅವರ ವಂಶದಲ್ಲಿ ಉಳಿದಿರುವ ಏಕೈಕ ವಾರಸುದಾರನಾದ ನನ್ನನ್ನು ಗರ್ಭದಲ್ಲಿಯೇ ಸಾಯಿಸುವ ಮೂಲಕ ಪಾಂಡವರ ವಂಶವನ್ನೇ ನಿರ್ನಾಮ ಮಾಡಬೇಕೆಂದು ನಿಶ್ಚಯಿಸಿದ್ದ. ಆ ಕೋಪದಲ್ಲಿ ನನ್ನ ಅಮ್ಮನ ಗರ್ಭಕ್ಕೆ ಬ್ರಹ್ಮಾಸ್ತ್ರ ಉಪಯೋಗಿಸಿದ್ದನಂತೆ. ಆಗ ನಿಂತು ಹೋಗಿದ್ದ ನನ್ನ ಉಸಿರಿಗೆ ಮರುಜೀವ ತುಂಬಿದ್ದು, ನಮ್ಮ ವಂಶದ ಆಪ್ತರಕ್ಷಕ ಕೃಷ್ಣ. ಅಂದು, ಅವನು ನನ್ನ ಜೀವ ಉಳಿಸದೆ ಹೋಗಿದ್ದರೆ, ನಾನು ಅರವತ್ತು ಸಂವತ್ಸರಗಳನ್ನು ಕಾಣಲಾಗುತ್ತಿರಲಿಲ್ಲ. ಇದೂ ಕೂಡ ಸೋಜಿಗವಲ್ಲವೇ?

ಋಷಿ ಸುಖದೇವರ ಭಾಗವತ ಪ್ರವಚನದ ಮಧ್ಯೆ ನಡೆದ ಈ ವಿಚಾರ ವಿನಿಮಯದಲ್ಲಿ, ಅಲ್ಲಿಯವರೆಗೆ ಮೌನವಾಗಿದ್ದ ಸಾಧುವೊಬ್ಬರು ಹೀಗೆಂದರು. ‘ಬಹುಶಃ, ದ್ವಾಪರಯುಗ ಅಂತ್ಯವಾಗುತ್ತಿದೆ ಅನ್ನಿಸುತ್ತಿದೆ. ಮುಂದೆ ಬರಲಿರುವ ಕಲಿಯುಗದ ಪ್ರವೇಶಕ್ಕೆ ನೀನು ಅಡ್ಡಿಯಾಗಿದ್ದೆ. ನಿನ್ನ ಪ್ರಜಾಪ್ರಗತಿ ಆಡಳಿತಕ್ಕೆ ಕಲಿ ಮಹಾಶಯನ ಯುಗದಲ್ಲಿ ಸ್ಥಾನವಿಲ್ಲ. ಇತ್ತೀಚೆಗೆ ನಮ್ಮ ನಡುವೆ ಹೆಚ್ಚಾಗಿ ಕಾಣಿಸಿಕೊಳ್ಳಲಾರಂಭಿಸಿದ ನಿಷ್ಕರುಣ ವ್ಯವಹಾರಗಳಾದ ಜೂಜು, ಹೆಂಡ, ವೇಶ್ಯಾವಾಟಿಕೆ, ಪ್ರಾಣಿವಧೆ ಮತ್ತು ಬಂಗಾರದ ಮೋಹ ಇತ್ಯಾದಿಗಳು, ಕಲಿಯ ಆಗಮನವನ್ನು ಸೂಚಿಸುತ್ತದೆ. ನೀನು ಕೂಡ ಅದಕ್ಕೆ ಬಲಿಯಾಗಿದ್ದೆ. ಒಮ್ಮೆ ನೆನಪು ಮಾಡಿಕೋ, ನೀನು ಹೊಸದಾಗಿ ಮಾಡಿಸಿಕೊಂಡ ಚಿನ್ನದ ಕಿರೀಟದ ಮೇಲೆ ನಿನಗೆ ವಿಪರೀತ ವ್ಯಾಮೋಹ ಉಂಟಾಗಿತ್ತು. ಅದನ್ನು ತಲೆಗೇರಿಸಿಕೊಂಡಾಗ ನೀನು ತೆಗೆದುಕೊಂಡ ಎಲ್ಲಾ ನಿರ್ಧಾರಗಳು ಅನರ್ಥವಾಗಿತ್ತು. ಅಂದು ನೀನು ಬೇಟೆಗೆ ಹೋದಾಗಲೂ ಅದೇ ಕಿರೀಟ ತಲೆಯ ಮೇಲಿತ್ತು. ಬಹುಶಃ, ಅದೇ ನಿನಗೆ, ಸತ್ತ ಹಾವನ್ನು ಶಮೀಕ ಋಷಿಗಳ ಕುತ್ತಿಗೆಗೆ ಮಾಲೆಯಂತೆ ಹಾಕಿಬಿಡು ಎಂದು ಪ್ರೇರೇಪಿಸಿರಬೇಕಲ್ಲವೇ? ಸರಿಯಾಗಿ ನೆನಪಿಸಿಕೋ. ಒಂದು ಕ್ಷಣದ ಕೋಪಕ್ಕೆ ಬುದ್ಧಿ ಕೊಟ್ಟು ಸಾವನ್ನು ಬರಸೆಳೆದುಕೊಂಡೆ. ಅಂತೂ, ನಿನ್ನ ಅಂತ್ಯ, ಕಲಿಯುಗದ ಆರಂಭಕ್ಕೆ ನಾಂದಿ’.

ಹೊರಗಿನ ಧ್ವನಿಗಳ ಆಲಿಸುತ್ತಾ, ಆಲಿಸುತ್ತಾ ನಾನು ಮೌನಕ್ಕೆ ಸಂಪೂರ್ಣ ಶರಣಾದೆ. ಗಾಢವಾದ ಮೌನದ ನಡುವೆ ನನ್ನ ಹೃದಯ ನನ್ನಲ್ಲಿ ಪಿಸುಗುಟ್ಟಲಾರಂಭಿಸಿತು. ‘ಸಾವಿಗೇಕೆ ಭಯ?... ಹುಟ್ಟಿದ ಮನುಷ್ಯ ಅದರಿಂದ ತಪ್ಪಿಸಿಕೊಳ್ಳಲು ಸಾಧ್ಯವೇ? ಭೂಮಿಯಲ್ಲಿ ಜನ್ಮ ತಳೆದ ದೇವರುಗಳೇ ಸಾವಿಗೆ ಶರಣಾಗಬೇಕಾಯಿತು. ನನ್ನ ಹೆಸರು ‘ಪರೀಕ್ಷಿತ’ ಅಂದರೆ ಅನ್ವೇಷಣೆ, ಹುಡುಕಾಟವೆಂದು ಅರ್ಥ. ಕಳೆದ ಏಳು ದಿನಗಳಲ್ಲಿ ನಿದ್ರೆಯಿಲ್ಲದೆ ಸಾವಿನ ಜಾಡಿನ ಅನ್ವೇಷಣೆ ಮಾಡುತ್ತಾ ಬರುತ್ತಿದ್ದೇನೆ. ಅಂತೂ, ನನಗಿಂದು ಸಾವು ಸಹನೀಯವೆನಿಸುವಷ್ಟು ಅರ್ಥವಾಗಿದೆ. ಸುಂದರ ನೆನಪುಗಳಿಲ್ಲದ ದೀರ್ಘ ಜೀವನಕ್ಕಿಂತ, ಸ್ಮರಣೀಯ ಕೆಲವು ದಿನಗಳ ಬದುಕು ಮಿಗಿಲು. ಹಿಂದಿರುಗಿ ನೋಡಿದರೆ, ನನ್ನ ಜೀವನ ಸಾರ್ಥಕವಾಗಿತ್ತು ಎನ್ನುವಷ್ಟು ಆತ್ಮತೃಪ್ತಿಯಿದೆ. ಈಗ, ಹೃದಯಪೂರ್ವಕವಾಗಿ ಸಾವನ್ನು ಎದುರುಗೊಳ್ಳುತ್ತಿದ್ದೇನೆ. ನನ್ನ ಸಾವಿನ ಆಗಮನದ ಅರಿವು ನನಗಿದ್ದುದ್ದಕ್ಕಾಗಿ ದೇವರಿಗೆ ಕೃತಜ್ಞತೆ ಹೇಳಬೇಕು. ಈ ಭಾಗ್ಯ ಎಲ್ಲರಿಗೂ ಸಿಗುವುದಿಲ್ಲವಲ್ಲ. ಈ ಅಪೂರ್ವ ಮಾಹಿತಿಯಿಂದಾಗಿ, ಸಾಯುವ ಮೊದಲು ನಾನು ಸಾಕಷ್ಟು ಪೂರ್ವ ತಯಾರಿ ನಡೆಸಲು ಸಾಧ್ಯವಾಯಿತು.’.

(ಇದು ಮಹಾಭಾರತದ ಪರೀಕ್ಷಿತನ ಪಾತ್ರಕ್ಕೊಂದು ಮರುನೋಟ)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT