ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜಯ್ ಕುಮಾರ್ ಎಂ. ಗುಂಬಳ್ಳಿ ಬರೆದ ಕಥೆ: ಹೆದ್ದಾರಿ ಅಪಘಾತ

Last Updated 17 ಡಿಸೆಂಬರ್ 2022, 19:30 IST
ಅಕ್ಷರ ಗಾತ್ರ

ಇಳಿಸಂಜೆಗೆ ಸಿಟಿಯನ್ನು ಸುತ್ತಾಕುವುದು ಮನಸ್ಸಿಗೆ ಮುದ ನೀಡುತ್ತದೆಂದು, ರೂಮಿನ ಬಾಗಿಲು ಅರ್ಧಕ್ಕೆ ಎಳೆದು ಸಿಮೆಂಟ್ ರೋಡಿಗೆ ಬಿದ್ದ ರವಿ, ಬೀದಿಯಲ್ಲಿ ಬಿದ್ದಿದ್ದ ನಾಯಿಗಳನ್ನು ಲೆಕ್ಕ ಮಾಡುತ್ತ ನಡೆದ. ಯಾವಾಗಲೂ ಕಾಣಿಸುತ್ತಿದ್ದ ಕೆಂದನಾಯಿ ಮೂರ್ನಾಲ್ಕು ದಿನಗಳಿಂದ ಕಣ್ಮರೆಯಾಗಿದ್ದರ ಬಗ್ಗೆ ಅವನಿಗೆ ತೀರ ವಿಷಾದವಿತ್ತು. ಅಪರಿಚಿತ ಊರಿಗೆ ಬಂದು ದಿಕ್ಕೆಟ್ಟವನಂತೆ ನಿಂತಿದ್ದಾಗ ಧೈರ್ಯ ತಂದಿದ್ದ ಆ ನಾಯಿ ರವಿಗೆ ಬಹಳ ಹತ್ತಿರದ್ದಾಗಿತ್ತು. ಅಲ್ಲದೇ ಬಿಟ್ಟುಹೋಗಿದ್ದ ಗೆಳತಿ ಊರ್ಮಿಳಾ ನೆನಪು ಅವನಿಗೆ ಮರುಕಳಿಸಿತು. ಕಾಲೇಜು ದಿನಗಳಲ್ಲಿ ಪ್ರೇಮಕ್ಕಾಗಿ ಹಾತೊರೆಯುತ್ತಿದ್ದಾಗ ಇವನ ಓದಿಗೆ ಮರುಳಾಗಿ ಅವಳೇ ಪ್ರೇಮ ನಿವೇದನೆ ಮಾಡಿದ್ದಳು. ಆಗ ರವಿ ಖುಷಿಯಲ್ಲಿ ತೇಲಾಡಿಹೋಗಿದ್ದ. ಪಾರ್ಕಿಗೆ, ಊರ್ಮಿಳಾ ಜೊತೆ ಆಗಾಗ ಬರುತ್ತಿದ್ದ ನಾಯಿ ನೋಡಿ ಅವನು ಹೆದರುತ್ತಿದ್ದ. ಅವಳಿಗೆ ನಾಯಿಯೆಂದರೆ ಎಲ್ಲಿಲ್ಲದ ಪ್ರೀತಿ. ಇಬ್ಬರ ಪ್ರೇಮ ಗಾಢವಾಗುವ ಹೊತ್ತಿಗೆ ಆ ನಾಯಿ ಅವನಿಗೆ ಒಗ್ಗಿಹೋಗಿತ್ತು. ದಿನಗಳು ಕಳೆಯುತ್ತಿದ್ದಂತೆ ರವಿ ಆ ನಾಯಿಯನ್ನು ತಮ್ಮಿಬ್ಬರ ಪ್ರೇಮದ ಸಂಕೇತ ಎಂದೇ ಭಾವಿಸಿಬಿಟ್ಟಿದ್ದ. ಅಂದಿನಿಂದ ಅವನಿಗೆ ನಾಯಿಗಳ ಬಗ್ಗೆ ಒಲವು ಒಡಮೂಡಿತ್ತು. ಯಳಂದೂರಿನಲ್ಲಿ ನಾಯಿ ಕಂಡು ರವಿ ಹೆದರಿದ್ದು; ಇಲ್ಲಿಯೂ ಪ್ರೇಮ ಅಂಕುರಿಸಿ, ಮಧ್ಯೆ ತೊರೆದು ಹೋದರೆ ಎಂಬ ಭೀತಿಯಿಂದಲೇ. ಹೀಗಿದ್ದರೂ ಕೆಂಚನನ್ನು ತುಂಬಾ ಹಚ್ಚಿಕೊಂಡಿದ್ದ. ಊರ್ಮಿಳಾಗಿಂತ, ನೀಯತ್ತಿದ್ದ ಕೆಂಚುನಾಯಿ ಮೇಲೆ ದಿಗಿಲಾಗಿ ಯಾರಾದರು ಕೊಂದಿರಬಹುದೇ? ಅಂಥ ಕಡುಪಾಪಿಗಳು ಇಲ್ಲದೇ ಏನು? ಮನುಷ್ಯರನ್ನೇ ಸಾಯಿಸುವವರು ಇದ್ದಾರಲ್ಲವೇ? ಏನೇನೋ ಕಲ್ಪಿಸಿಕೊಳ್ಳುತ್ತ ರವಿ ಬಸ್ಟ್ಯಾಂಡಿಗೆ ಹೋದ.

ಟೀ ಅಂಗಡೀಲಿ ಬಹಳ ಮಂದಿ ಇದ್ದರು. ಸುತ್ತಮುತ್ತಲಿನ ಅಂಗಡಿ ಮುಂಗಟ್ಟುಗಳ ಮುಂದೆ ಖಾಲಿ ಗಾಜಿನ ಲೋಟಗಳಿದ್ದವು. ಅವುಗಳಿಗೆ ನೊಣಗಳು ಮುತ್ತುತ್ತಿದ್ದವು. ಅಲ್ಲೆಲ್ಲ ಟೀ ಕುಡಿಯುತ್ತ, ಸಿಗರೇಟು ಸೇದುವವರು ಹರಟುವುದು ಮಾಮೂಲಿ. ಬಸ್ಟ್ಯಾಂಡ್ ಪಕ್ಕದಲ್ಲಿಯೇ ಟೀ ಅಂಗಡಿ ಇದ್ದುದರಿಂದ ಮಂದೆ ಜನರು ಯಾವಾಗಲೂ ಇದ್ದೇ ಇರುತ್ತಿದ್ದರು. ಅಲ್ಲಿ ಹೋಗಿ ರವಿ ನಾಯಿ ಬಗ್ಗೆ ಹೇಳಿದಾಗ ಕೆಲವರಿಗೆ ಅದು ತೀರ ತಮಾಷೆಯ ವಿಷ್ಯ ಎನಿಸಿದರೆ, ಮನಸಿದ್ದ ಕೆಲವರು ಅವನ ಆತಂಕ ಅರಿತರು. ಪ್ರಾಣಿಗೂ ಮನುಷ್ಯನಿಗೂ ಮನಸ್ಸನ್ನು ಸೆಳೆಯುವ ಸಂಬಂಧ ಉಂಟಾಗಬಾರದೇಕೆ? ಜನರ ಗುಸುಗುಸು ನುಡಿಗಳನ್ನು ಕೇಳಿಸಿಕೊಂಡ ನಾಗರಾಜು, ಬೆಳಿಗ್ಗೆ ಥಿಯೇಟರ್ ಹಿಂಬದಿ ನಾಯಿಯೊಂದನ್ನು ಮಣ್ಣು ಮಾಡಿದ್ದನ್ನು ನೆನಪಿಸಿಕೊಂಡ. ‘ಕೆಂಚು ಬಣ್ಣ. ಮೊಂಡು ಬಾಲ. ಬಲಗಿವಿಯಲ್ಲಿ ಗಾಯ ಆಗಿತ್ತು’ ತಾನು ಕಂಡಿದ್ದನ್ನು ರವಿಗೆ ವಿವರಿಸಿದ. ಸತ್ತಿದ್ದ ನಾಯಿ ಕೆಂಚನಲ್ಲದಿದ್ದುದು ಅವನಿಗೆ ನಿರಾಳ ತಂದಿತು. ಲೋಟ ತುಟಿಗಿರಿಸಿ ಟೀ ಗುಟುಕಿಸಿದ. ಬೆಚ್ಚನೆಯ ಅನುಭವ ಮನಸ್ಸಿಗೂ ಆಯಿತು.

ಮಿನಿ ಫೈನಾನ್ಸ್ ಕಂಪನಿ ಸಂದರ್ಶನದಲ್ಲಿ ಆಯ್ಕೆ ಆಗಿ ಯಳಂದೂರಿಗೆ ಬಂದಾಗ ರವಿಗೆ, ಹೊಸ ಊರು ವಿಭಿನ್ನವಾಗಿ ಕಂಡಿತ್ತು. ಕಡೇ ಪಕ್ಷ ಅವನಿಗೆ ಈ ಭಾಗದ ಒಬ್ಬ ಗೆಳೆಯನೂ ಇರಲಿಲ್ಲ. ರೂಮು, ಬಾಡಿಗೆ ಅಂತೆಲ್ಲ ಯೋಚಿಸಿ ‘ಕೆಲಸವೇ ಬೇಡವೆಂದು’ ನಿರ್ಧರಿಸಿ ಹೆದ್ದಾರಿ ಡಿವೈಡರ್ ಬಳಿ ಪೆಚ್ಚಾಗಿ ನಿಂತಿದ್ದಾಗ ನಾಯಿ ಇವನನ್ನೆ ನೋಡುತ್ತಿತ್ತು. ಮೊದಲು ಭಯಗೊಂಡಿದ್ದ ರವಿ. ಕೊನೆಗೆ ಅದು ಬಾಲ ಅಲ್ಲಾಡಿಸಿತು. ಪಂಕ್ಚರ್ ಶಾಪಿನ ಮುಂದೆ ಬ್ಯಾಗ್ ಇಟ್ಟುಕೊಂಡು ಕುಳಿತು, ಮನೆಗೆ ಕರೆ ಮಾಡಿ ತನ್ನ ಅವಸ್ಥೆ ಬಗ್ಗೆ ಅರಚಿಕೊಳ್ಳುತ್ತಿದ್ದ. ಕೆಂಚು ನಾಯಿ ಅವನ ಬಿಟ್ಟು ಹೋಗಲೇ ಇಲ್ಲ. ಲಿಕ್ಕರ್ ಶಾಪಿಗೆ ಹೋಗುತ್ತಿದ್ದ ರಿಟೈರ್ಡ್ ಮೇಷ್ಟ್ರು ಲಿಂಗಣ್ಣ, ಹೊಸ ಮುಖದ ತರುಣನನ್ನು ನೋಡಿ ವಿಚಾರಿಸಲು, ರವಿ ವಿನಯದಿಂದ ತನ್ನ ಅವಸ್ಥೆ ಬಗ್ಗೆ ಕಕ್ಕಿದ. ‘ಬಂದೆ ತಡಿ’ ಎನ್ನುತ್ತ ಮೇಷ್ಟ್ರು ಥಿಯೇಟರ್‍ನತ್ತ ಹೊರಟರು. ಅವರ ಪಂಚೆ ನೆಲವನ್ನು ತಾಗಿಕೊಂಡೇ ಹೋಗುತ್ತಿತ್ತು.

ಹೆದ್ದಾರಿ ಡಿವೈಡರ್‍ನ ಹಳದಿ-ಕಪ್ಪು ಬಣ್ಣ ಅವನನ್ನು ಗತಕಾಲದ ನೆನಪಿಗೆ ಒಯ್ಯುತ್ತಿತ್ತು. ಪ್ರತಿಬಾರಿಯೂ ಮನುಷ್ಯನಿಗೆ, ವಾಸ್ತವಕ್ಕಿಂತ ಹಿಂದಿನ ತನ್ನ ಬದುಕೇ ಸುಂದರವಾಗಿತ್ತು ಎನಿಸುವುದು ಸತ್ಯ. ಅದೇ ಭಾವನೆ ರವಿಗೂ ಬಂತು. ಜೊತೆಗೆ ಸಣ್ಣ ಕಹಿ ಅನುಭವವೂ ಎಳೆಯಾಗಿ ಬರುತ್ತಿತ್ತು. ನಿಷ್ಠೆಯಿಂದ ಪ್ರೀತಿಸಿದ ತನಗೆ ‘ಊರ್ಮಿಳಾ ಮಾಡಿದ್ದು ಎಂಥ ಪಾಪ’ ಎನಿಸಿತು. ಚೆನ್ನಾಗಿಯೇ ಇದ್ದವಳು, ಇದ್ದಕ್ಕಿದ್ದಂತೆ ಕರೆ ಮಾಡುವುದನ್ನು ಬಿಟ್ಟಳು. ಮತ್ತೆ ಮಾತನಾಡಿದ್ದು ರವಿ ಪದೇ ಪದೇ ಕರೆ ಮಾಡುತ್ತಿದ್ದ ಒತ್ತಡಕ್ಕಾಗಿ. ಪ್ರತಿಬಾರಿಯು ಒಂದೊಂದು ಕಾರಣವನ್ನು ನೀಡುತ್ತ ಬ್ರೇಕ್‍ಅಪ್ ಮಾಡಿಕೊಳ್ಳಲು ಕಾದಿದ್ದಳು. ಎಷ್ಟುದಿನ ಅಂತ ಸಹಿಸಿಕೊಳ್ಳಲು ಸಾಧ್ಯ. ರವಿಯೇ ಒಂದಿನ ‘ನೀನು ನಂಗೆ ಬೇಡ. ಯಾರನ್ನಾದ್ರು ಮದುವೆ ಆಗು’ ನುಡಿದುಬಿಟ್ಟ. ಅವನು ಊಹಿಸಿದ್ದು ನಿಜವೇ ಆಗಿತ್ತು. ಅವಳು ಬೇರೊಬ್ಬ ಸರ್ಕಾರಿ ನೌಕರನನ್ನು ಪ್ರೀತಿಸುತ್ತಿದ್ದು, ತುರ್ತು ನಿರ್ಗಮನಕ್ಕೆ ಕಾದಿದ್ದಳು. ‘ಇಂಥವಳನ್ನು ಕಟ್ಟಿಕೊಂಡಿದ್ದರೆ, ನನ್ ಲೈಫು; ಥೂ’ ಎನಿಸಿತು. ಅಂದಿನಿಂದ ಜೀವನ ಪ್ರೀತಿ ಬೆಳೆಸಿಕೊಳ್ಳತೊಡಗಿದ. ಕಾಡುತ್ತಿದ್ದ ಹಳೆಯ ನೆನಪುಗಳ ಮೂಲೆಗೆ ತಳ್ಳಿ ‘ಕಷ್ಟವೋ- ಇಷ್ಟವೋ’ ನಾನಿಲ್ಲಿ ಇರಲೇಕೆಂಬ ಛಲದ ನಿರ್ಧಾರವನ್ನು ಅವನೇ ಮಾಡಿ ಮೇಷ್ಟ್ರಿಗಾಗಿ ಕಾಯುತ್ತಿದ್ದ.

ಥಿಯೇಟರ್ ಹಿಂದಿನ ರಸ್ತೆ ಬಯಲೆಲ್ಲವೂ ಮದ್ಯಪ್ರಿಯರ ತಾಣಗಳು. ಯಾವಾಗ ನಡೆದರೂ ಆ ರಸ್ತೆಯಲ್ಲಿ ಕನಿಷ್ಟ ಇಬ್ಬರಾದರೂ ಎಣ್ಣೆ ಹೊಡೆಯುತ್ತ ಕುಳಿತಿರುವುದು ಕಾಣ ಸಿಕ್ಕೇಸಿಗುತ್ತದೆ. ಅಲ್ಲಿ ಹೆಚ್ಚಾಗಿ ಎಲ್ಲರೂ ಸಂಬಂಧಿಕರಂತೆ ಒಬ್ಬರ ನೀರನ್ನೋ, ಕುರುಕಲು ತಿಂಡಿಯನ್ನೋ ಹಂಚಿಕೊಳ್ಳುವುದು ಸರ್ವೇ ಸಾಮಾನ್ಯ. ಕೆಲವು ಸಾರಿ ಸಣ್ಣ ಪುಟ್ಟ ಗಲಾಟೆಗಳು ಕೂಡ ಸಂಭವಿಸುತ್ತವೆ. ಇವೆಲ್ಲ ಬಾರ್ ಉಂಟು ಮಾಡುವ ಲೀಲೆಗಳು.

ಕಿಂಗ್‍ಫಿಷರ್ ಸಿದ್ರಾಮ ಇಪ್ಪತ್ತು ರೂಪಾಯಿಗೆ ಮೇಷ್ಟ್ರ ಹಿಂದೆ ಗಂಟುಬಿದ್ದಿದ್ದ. ನೈಂಟಿ ಎಣ್ಣೆಗೆ ದುಡ್ಡು ಹೊಂದಿಸುವುದಕ್ಕೆ ದಿನನಿತ್ಯದಲ್ಲಿ ಅವನೂ ಸೇವಕನಂತೆ ಕೆಲಸ ಮಾಡುತ್ತಾನೆ. ಅವರಿವರು ಐದೋ-ಹತ್ತೋ ಕೊಟ್ಟರೆ ಅಷ್ಟೇ ಸಾಕು ಅವನಿಗೆ. ಇವತ್ತಿಗಷ್ಟೇ ಬದುಕುವ ಸಿದ್ರಾಮ ನೆನ್ನೆ-ನಾಳೆ ಬಗ್ಗೆ ಯೋಚಿಸಲ್ಲ. ಅಲ್ಲದೇ ಅವನು ನಿರ್ಗತಿಕನಲ್ಲ. ಹೆಂಡತಿ, ಇಬ್ಬರು ಹೆಣ್ಣು ಮಕ್ಕಳು ಇದ್ದಾರೆ. ‘ತಾನ್ಯಾಕೆ ಹೀಗಾದೆ’ ಎನ್ನುವುದಕ್ಕೆ ಸಿದ್ರಾಮ ಕೊಡುವ ಉತ್ತರ ‘ನನ್ನ ಹೆಂಡ್ತಿಯಿಂದ’ ಎನ್ನುವುದರ ಜೊತೆ ಒಂದು ಕಿರುನಗೆ.

ಮೇಷ್ಟ್ರನ್ನು ಕಾಣುವುದು ಪ್ರಾಮುಖ್ಯ ಎನಿಸಿ ರವಿ ಬಾರ್‍ನತ್ತಲೇ ಕಣ್ಣುನೆಟ್ಟಿದ್ದ. ಸಿದ್ರಾಮನ ಕಾಟದಿಂದ ತಪ್ಪಿಸಿಕೊಳ್ಳುವುದು ಮೇಷ್ಟ್ರಿಗೆ ಹೊಸದೇನು ಆಗಿಲ್ಲದಿದ್ದರೂ ಇಂದು ನಿರಾಯಾಸವಾಗಿ ಜಾರಿಕೊಳ್ಳಲಾಗದೇ ಪರದಾಡುತ್ತಿದ್ದಾಗ ಬಾರ್‍ನ ಕ್ಯಾಶಿಯರ್ ವೆಂಕಿಯ ಒಂದೇ ಒಂದು ಸದ್ದಿಗೆ ಸಿದ್ರಾಮ ಮೇಷ್ಟರನ್ನು ಬಿಟ್ಟುಬಿಟ್ಟ. ಗಿರಾಕಿಗಳು ಸಹ ವೆಂಕಿ ಜೊತೆ ಜೋರು ದನಿಯಲ್ಲಿ ವ್ಯವಹರಿಸುತ್ತಿರಲಿಲ್ಲ. ಒಮ್ಮೆ ಯುವಕನೊಬ್ಬ ಮತ್ತಿನಲ್ಲಿ ವೆಂಕಿಗೆ ಹೊಡೆಯಲು ಕೈಎತ್ತಿ, ಹಿಗ್ಗಾಮುಗ್ಗಾ ಏಟು ತಿಂದಿದ್ದ. ಅದನ್ನು ಪ್ರಶ್ನಿಸಿ ಬಂದಿದ್ದ ಇನ್ನಿಬ್ಬರು ಯುವಕರಿಗೂ ವೆಂಕಿ, ವಿಕೆಟ್‍ನಿಂದ ಮಂಡಿಯ ಕೆಳಕ್ಕೆ ಚೆನ್ನಾಗಿ ಥಳಿಸಿ ಕಳಿಸಿದ್ದ. ಒಳ್ಳೆಯವರಿಗೆ ಒಳ್ಳೆಯವನು-ಕೆಟ್ಟವರಿಗೆ ಅತೀ ಕೆಟ್ಟವನಂತೆ ಅವನ ಸ್ವಭಾವವಿತ್ತು. ಹಾಗಾಗಿ ವೆಂಕಿ ಕಂಡರೆ ಬಾರಿನ ಮಂದಿಗೆ ಮತ್ತು ಗಿರಾಕಿಗಳಿಗೂ ಒಂದು ಭಯವಿತ್ತು.

ಮೇಷ್ಟ್ರು ಹತ್ತಿರಾಗುತ್ತಿದ್ದಂತೆ ರವಿ ಎದ್ದು ನಿಂತ. ‘ಏನಪ್ಪ ನಿನ್ ಕಥೆ. ಏನಾಗಬೇಕು? ನಿನಗೆ’ ಮೇಷ್ಟ್ರು ಕೇಳಿದರು. ‘ಬಾಡಿಗೆಗೆ ಒಂದು ರೂಮು ಬೇಕು. ಅಡ್ವಾನ್ಸು ಜಾಸ್ತಿ ಕೊಡೋಕಾಗಲ್ಲ ನನ್ ಕೈಲಿ. ಇವಾಗ ಕೆಲಸಕ್ಕೆ ಬಂದಿದ್ದೀನಿ’ ರವಿ ವಿನಂತಿಸಿದ. ‘ಜಾಸ್ತಿ ಏನು ಇಲ್ಲ. ಬಾ ಕೊಡುಸ್ತೀನಿ’ ಮೇಷ್ಟ್ರು ಅವನನ್ನು ಜೊತೆಗೆ ಕರೆದುಕೊಂಡು ಬೀದಿಯೊಳಕ್ಕೆ ನಡೆದರು. ಕೆಂಚುನಾಯಿ ಅವರಿಂದೆ ಓಡಿತು.

ರಾಮಜ್ಜಿ ಮನೆಗೆ ಬಂದು ಮೇಷ್ಟ್ರು ‘ತಿಂಗಳಿಗೆ ಎರಡು ಸಾವಿರ’ ಅಂತ ಮಾತಾಡಿ ಮಹಡಿ ಮೇಲಕ್ಕೆ ರವಿ ಕರಕೊಂಡು ಹೋಗಿ ‘ಇದೇ ರೂಮು’ ಎಂದಾಗ ಅವನು ‘ಒಬ್ಬನಿಗೆ ಸಾಕು. ಟಾಯ್ಲೆಟ್, ಬಾತ್‍ರೂಮ್ ಎಲ್ಲಿದೆ’ ಕೇಳಿದ. ‘ಕೆಳಗಿದೆ. ಅಲ್ಲಿ’ ಎನ್ನುತ್ತ ಮೇಷ್ಟ್ರು ಹುಣಸೆ ಮರದತ್ತಿರ ಕೈ ತೋರಿಸಿದರು. ‘ಥ್ಯಾಂಕ್ಯೂ ಸರ್’ ಎಂದ ರವಿಗೆ ಮೇಷ್ಟರ ಬಗ್ಗೆ ಅಭಿಮಾನ ಮೂಡಿತ್ತು. ‘ಮದ್ವೆ ಆಗಿದಿಯ ನಿಂಗೆ’ ಮೇಷ್ಟ್ರು ಕೇಳಿದಾಗ ‘ಇಲ್ಲ ಸರ್’ ಎಂದ. ಹೊಳಪಿನ ಮುಖದ ರವಿ ನೋಡುತ್ತ ಮೇಷ್ಟ್ರು ‘ಬೇಗ ಮದ್ವೆ ಮಾಡ್ಕೋ. ಜೀವನ ಚೆನ್ನಾಗಿರುತ್ತೆ’ ನಗುತ್ತ ‘ಏನಾದ್ರು ಇದ್ರೆ ಫೋನು ಮಾಡು’ ಎಂದು ನಂಬರ್ ಹೇಳಿ ಹೊರಟರು.

ಕೆಳಗಿನಿಂದಲೇ ರಾಮಜ್ಜಿ ‘ಬಾಪ್ಪ ಇಲ್ಲಿ’ ಕರೆದಾಗ ರವಿ ದಿಢೀರನೆ ಓಡಿ ಬಂದು ‘ಏನಜ್ಜಿ’ ಅಂದ. ಅವನು, ಅಜ್ಜಿ ಷರತ್ತುಗಳನ್ನು ವಿಧಿಸಬಹುದೆಂದು ತಿಳಿದಿದ್ದ. ‘ಏನು ಸಂಕೋಚ ಪಟ್ಕಬೇಡಪ್ಪ. ಏನಾದ್ರು ಇದ್ರೆ ಹೇಳು’ ಎಂದು ರಾಮಜ್ಜಿ ತನ್ನ ಒಂಟಿ ಬದುಕಿನ ಬಗ್ಗೆ ಸವಿಸ್ತಾರವಾಗಿ ಅವನಿಗೆ ಹೇಳಿ ‘ಏನಿದ್ರೆ ಏನು ಕೂಸು. ಮಾತಾಡಕ್ಕೂ ಒಂದ್ ಜನ ಇಲ್ಲ ಈ ಮನಲಿ’ ಎನ್ನುತ್ತ ಪಟ್ಟಣಗಳತ್ತ ಹೋಗಿ ಅಲ್ಲೇ ತಳವಾಗಿ ಉಳಿದಿದ್ದ ಮಕ್ಕಳ ಬಗ್ಗೆ ಬೇಸರ ಪಟ್ಟುಕೊಂಡಳು. ‘ಕೂಸು ನಿಂಗ ಮದ್ವ ಆಗಿದ್ದ’ ಅಜ್ಜಿ ಸಹ ಕೇಳಿದಾಗ ‘ಇಲ್ಲ ಅಜ್ಜಿ’ ಅಂದ ರವಿಗೆ ಊರ್ಮಿಳಾ ನೆನಪಾದಳು. ‘ನನಗೆ ಮೊಮ್ಮಗಳು ಇದ್ರೆ ನಿಂಗೆ ಕೊಟ್ಟು ಮದ್ವೆ ಮಾಡಿ, ಈ ಮನೆನೂ ನಿಂಗೆ ಕೊಟ್‍ಬುಡ್ತಾಯಿದ್ದಿ ಕಾ ಕೂಸು’ ಎಂಬ ಅಜ್ಜಿ ನುಡಿಗಳು ಅವನ ಹೃದಯಕ್ಕೆ ಇಳಿದು ಗಂಟಲನ್ನು ಬಿಗಿಗೊಳಿಸಿತು.

ರಿಲ್ಯಾಕ್ಸ್‌ಗಾಗಿ ಟೀ ಅಂಗಡಿಗೆ ಬಂದಿದ್ದ ರವಿ ಮನಸ್ಸಲ್ಲಿ ವಿಷಾದ ಕರಗಲೇ ಇಲ್ಲ. ದುಡ್ಡು ಕೊಟ್ಟು ‘ಬರ್ತಿನಿ’ ಎಂದು ಥಿಯೇಟರ್ ಕಡೆಗೆ ನಡೆದ. ಕೆಂಚನ ಸಂಗಡ ಇರುತ್ತಿದ್ದ ಕಂದು ಬಣ್ಣದ ನಾಯಿ ಬಾರ್ ಪಕ್ಕದ ಕಸದ ಡಬ್ಬಿಗೆ ಒರಗಿದ್ದುದು, ಎದ್ದು ಬಾಲ ಅಲ್ಲಾಡಿಸುತ್ತ ಅವನಿಂದೆ ಓಡಿತು. ಬಯಲ ಸುತ್ತಲೂ ಕಣ್ಣಾಡಿಸಲು ಅಲ್ಲಲ್ಲಿ ಪ್ಲಾಸ್ಟಿಕ್-ಗಾಜಿನ ಬಾಟಲಿಗಳು, ಹಳೆಯ ನಿರುಪಯುಕ್ತ ಸಾಮಾನುಗಳು, ಹರುಕು-ಮುರುಕು ಬಟ್ಟೆಗಳು, ತ್ಯಾಜ್ಯಗಳು ಕಂಡವು. ಅಲ್ಲಿಂದ ರವಿ ಬೇಜಾರಿನಿಂದ ರೂಮಿನತ್ತ ಹಿಂದಿರುಗುತ್ತಿದ್ದ. ಕಂದು ನಾಯಿ ರಸ್ತೆಯೊಳಗೆ ಮರೆಯಾಯ್ತು.

ಕೆಂಚು ನಾಯಿ ಫೋಟೋ ನೋಡುತ್ತ ರವಿ ಅದರ ಕೊನೆ ದಿನದ ಚಟುವಟಿಕೆಯನ್ನು ನೆನೆಸಿದ. ಮುಂಜಾನೆಗೆ ಅದನ್ನು ಕಂಡಿದ್ದ. ತಂಗಳನ್ನ ಹಾಕಿದ್ದನ್ನು ಚೆನ್ನಾಗೇ ತಿಂದಿತ್ತು. ಅವನಿಂದೆ ಆಪೀಸ್ ತನಕವೂ ಹೋಗಿತ್ತು. ಅವನು ಸಾಲ ವಸೂಲಿಗೆ ಪಕ್ಕದ ಹಳ್ಳಿಗೆ ಹೋಗಬೇಕಾಗಿದ್ದರಿಂದ ಅದನ್ನು ಬೆದರಿಸಿ ಎತ್ತಗೋ ಕಳಿಸಿಬಿಟ್ಟಿದ್ದ. ಅದೇ ಕೊನೆ. ಮತ್ತೆ ಕೆಂಚನ ಸುಳಿವೇ ಸಿಗಲಿಲ್ಲ. ಸಾಲಗಾರರ ಡಾಕ್ಯುಮೆಂಟ್ಸ್ ಹುಡುಕುತ್ತಿದ್ದಾಗ ಕೆಳಗಿನ ವರದಿಯಿದ್ದ ಪತ್ರಿಕೆ ಅವನ ಕೈಗೆ ಸಿಕ್ಕಿತು.

‘ಇತ್ತೀಚೆಗೆ ಹೆದ್ದಾರಿಗಳಲ್ಲಿ ಅನೇಕ ನಾಯಿಗಳು ವಾಹನಗಳ ಚಕ್ರಕ್ಕೆ ಸಿಲುಕಿ ಸತ್ತಿವೆ. ಕೆಲವು ಆಕಸ್ಮಿಕವಾಗಿ ನಡದರೆ, ಕೆಲವು ಘಟನೆಗಳು ಚಾಲಕರ ನಿರ್ಲಕ್ಷ್ಯದಿಂದ ನಡೆಯುತ್ತಿವೆ. ವಾಹನ ಸವಾರರು ಸಂಚಾರ ನಿಯಮಗಳನ್ನು ಪಾಲಿಸಬೇಕು’

ಕೆಂಚನೂ ವಾಹನಕ್ಕೆ ಸಿಕ್ಕಿ ಸತ್ತಿರಬೇಕೆನಿಸಿ ರವಿ ಮರುಗಿದ. ಕಡೆಯದಾಗಿ ನೋಡಿದ ಅದರ ಮುಖವೇ ಮತ್ತೆ ಮತ್ತೆ ಅವನ ಚಿತ್ತದಲ್ಲಿ ಮೂಡಿ ಬರುತ್ತಿತ್ತು. ಅದೇನು, ರವಿ ಸಾಕಿದ್ದ ನಾಯಿ ಆಗಿರಲಿಲ್ಲ. ಸಣ್ಣಮರಿಯಿಂದಲೂ ಅವನ ಬಳಿ ಅದಿರಲಿಲ್ಲ. ಅದರ ಒಡನಾಟ ಅವನಿಗೆ ನಾಲ್ಕು ತಿಂಗಳಷ್ಟೇ. ಹೀಗಿದ್ದರು ರವಿಗೆ ಕೆಂಚನ ಮೇಲೆ ಅವ್ಯಕ್ತ ಪ್ರೀತಿ, ಬಂಧನವಿತ್ತು. ಅದ್ಯಾಕೆ? ಅದೇಗೆ? ಎಂಬಂಥ ಪ್ರಶ್ನೆಗಳಿಗೆ ಅವನ ಬಳಿಯೇ ಉತ್ತರವಿರಲಿಲ್ಲ.

ಅದೇಕೋ ಕಳವಳ ಉಂಟಾದಂತೆ ಎದ್ದು ಹೆದ್ದಾರಿಗೆ ಬಂದು ನಾಯಿ ಸತ್ತಿರುವ ಕುರುಹನ್ನು ರಸ್ತೆಯ ಉದ್ದಕ್ಕೂ ಹುಡುಕುತ್ತ ಹೊರಟ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT