ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಜಯ್ ಕುಮಾರ್ ಎಂ. ಗುಂಬಳ್ಳಿ ಬರೆದ ಕಥೆ: ಹೆಣ್ಣು ನೋಡು

Last Updated 30 ಜುಲೈ 2022, 19:30 IST
ಅಕ್ಷರ ಗಾತ್ರ

‘ಊರಿಗೆ ಹೋಗೋದೋ, ಬೇಡ್ವೋ’ ಪ್ರಶಾಂತ್ ಗೊಂದಲದಲ್ಲಿದ್ದ. ಮೋಡದ ವಾತಾವರಣ. ಮಳೆ ಬೀಳುವ ಸಾಧ್ಯತೆ ಹೆಚ್ಚಿತ್ತು. ‘ಹೋಗೋದೆ ಸರಿ’ ಎಂದು ಬಟ್ಟೆ ಬದಲಿಸಿ ಹೆಲ್ಮೆಟ್ ಎತ್ಕೊಂಡು ಹೊರಕ್ಕೆ ನಡೆದ. ಸೊಯ್ಯನೆ ಗಾಳಿ ಬೀಸಿದಾಗ ಚಳಿ ಮೈ ತಟ್ಟಿತು. ರೂಮಿಗೆ ಹೋಗಿ ಸ್ವೆಟರ್ ಹಾಕೊಂಡು ‘ಇನ್ನೇನಾದರು ಮರೆತಿದ್ದೆನಾ?’ ಆಲೋಚಿಸಿ ಆಚೆಗೆ ಬಂದು ‘ಹಾಳಾದ ಮರೆವು’ ಗೊಣಗಿ ಮತ್ತೆ ರೂಮಿಗೆ ಹೋಗಿ ಬೈಕ್ ಕೀ ಎತ್ತಿಕೊಂಡ. ಮೂರು ದಿನಗಳಿಂದ ಮಧ್ಯಾಹ್ನದ ಮೇಲೆ ಮಳೆ ಬೀಳುತ್ತಿತ್ತು. ಬೈಕ್ ಮಳೆಯಲ್ಲಿ ನೆನೆದಿದ್ದರಿಂದ ತಕ್ಷಣಕ್ಕೆ ಸ್ಟಾರ್ಟ್ ಆಗಲಿಲ್ಲ. ಗಾಡಿ ಅಲುಗಾಡಿಸಿ ಪೆಟ್ರೋಲ್ ಇರುವುದ ಖಾತ್ರಿ ಮಾಡಿಕೊಂಡು ಕಿಕ್ಕರನ್ನು ಜೋರಾಗಿ ತುಳಿದ.

ಮೊಬೈಲ್ ರಿಂಗಣಿಸಲು ಅಸಹನೆಯಿಂದ ‘ಹೊರ್ಟಿದೀನಿ ಕಣೇ’ ಅಂದ. ಬೈಕ್ ಚಂಗನೆ ಮುಂದಕ್ಕೆ ಜಿಗಿಯಿತು.

ಮಗನ ಆಗಮನದ ನಿರೀಕ್ಷೆಯಲ್ಲಿದ್ದ ದೇವಮ್ಮ ‘ಅಣ್ಣಯ್ಯ ಏನಂದ ಕೂಸು’ ಹೊರಗಿನಿಂದ ಕೇಳಿದಳು.

‘ಬತ್ತವ್ನಿ ಅಂದ’ ಸುಲೋಚನ ಅವ್ವಂಗೆ ಹೇಳಿ ಟಿ.ವಿ ಆನ್ ಮಾಡಿದಳು.

ನಡುಮನೆಗೆ ಬಂದ ದೇವಮ್ಮ ‘ಅದೈ ನಿಂಗ ಯಾವಾಗ್ಲೂ ಇದೆ ಕೆಲುಸ್ವಾ? ಮಾವನ ಮನೆಗೆ ಹೋಗಿ ಒಂದೆರಡು ದಿನ ಬಿಡುವು ಮಾಡ್ಕಳೀ ಅಂತ ಹೇಳ್ಬುಟ್ಟು ಬರೋಗು’ ಅಂದಾಗ

‘ನಾನು ಹೇಳುದ್ರ ಅವ್ರು ಕೇಳಿರಾ. ನಿನ್ ತಮ್ಮಂಗೆ ನೀನೆ ಹೇಳು ಹೋಗು’ ಸುಲೋಚನ ಸಿಡಿದಳು.

‘ಇಪಾಟಿ ಬಾಯಿ ಒಳ್ಳೆದಲ್ಲ ಕವ್ವ’ ಅನ್ನುತ್ತ ದೇವಮ್ಮ ಚಾವಡಿ ದಿಕ್ಕಿಗೆ ನಡೆದಳು. ಇತ್ತಗೆ ಸುಲೋಚನ ಟಿ.ವಿ ವೀಕ್ಷಣೆಯಲ್ಲಿ ಮಗ್ನಳಾದಳು.

ದುಂಬಿನಂತೆ ಮಳೆ ಉದುರುತ್ತಿದ್ದುದು ಈಗೀಗ ಜೋರಾಯಿತು. ಮಳೆಗೆ ಸಿಲುಕಿಕೊಂಡದ್ದಕ್ಕೆ ಪ್ರಶಾಂತ ಮತ್ತಷ್ಟು ಗೊಣಗುತ್ತ ಎಕ್ಸಲೇಟರ್ ತಿರುವಿ, ಬಸ್ ನಿಲ್ದಾಣದ ಬಳಿ ಬೈಕ್ ನಿಲ್ಲಿಸಿದ. ಆಗಲೇ ಅಲ್ಲಿ ಸುಮಾರು ಜನರಿದ್ದರು. ಮೊಬೈಲ್ ತೆಗೆದು ವಾಟ್ಸಾಪ್ ನೋಡತೊಡಗಿದ. ಫೋನ್ ರಿಂಗಣಿಸಲು ರಿಸೀವ್ ಮಾಡಲಿಲ್ಲ. ‘ಈ ಸಾರಿಯಾದರೂ ಹೆಣ್ಣು ಸಿಕ್ಕರೆ ಸಾಕು’ ಎಂದು ‘ಸಿಕ್ಕರೂ ಶಾಸ್ತ್ರ ಸರಿಬರಬೇಕು. ಮನೆಯವರಿಗೆ ಹಿಡಿಸಬೇಕು. ಎಷ್ಟೆಲ್ಲ ಕಷ್ಟಗಳು’ ಎಂದುಕೊಳ್ಳುತ್ತಿದ್ದವನಿಗೆ ಇಪ್ಪತ್ತೈದರ ಹೆಣ್ಣೊಬ್ಬಳು ಕಾಣಿಸಿದಳು. ಒಂದೆರಡು ನಿಮಿಷ ನೆನಪಿಗೆ ಮರಳಿದ ಪ್ರಶಾಂತ್ ‘ಅರೆ, ನೀನು ಸವಿತಾ ಅಲ್ವಾ?’ ಕೇಳಿದಾಗ ನಗುತ್ತಾ ‘ಹೌದು’ ಅಂದಳು. ‘ನಾನು ಪ್ರಶಾಂತ್’ ಹೇಳಿದಾಗ ‘ಗೊತ್ತು ಬಿಡು’ ಅನ್ನುತ್ತ ಮಾದಕ ನಗು ಚೆಲ್ಲಿದಳು. ‘ಓದು ಮುಗಿತಾ’ ಕೇಳಿದ ಪ್ರಶಾಂತ್. ‘ಹೌದು’ ಎಂದಳು. ‘ಕೆಲಸಾ’ ಅಂದ. ‘ಕಂಪ್ಯೂಟರ್ ಆಪರೇಟರ್ ಆಗಿದ್ದೀನಿ’ ಎಂದಳು. ‘ನೀನೇನ್ ಮಾಡ್ತಿದ್ದೀಯ’ ಎಂದ ಸವಿತಾಳಿಗೆ ‘ಹಾಸ್ಟೆಲ್‍ನಲ್ಲಿ ಅಡುಗೆ ಭಟ್ರು’ ಅಂದು ‘ಮದ್ವೆ’ ಅಂದ. ಅವಳು ನಗುತ್ತಾ ‘ಇನ್ನು ಇಲ್ಲ’ ಅಂದಳು. ಜೊತೆಗೆ ಓದಿದ ಹುಡುಗೀರು ಸಿಕ್ಕಾಗ ಏನೋ ಒಂಥರಾ ಖುಷಿ. ಅದೇ ಖುಷಿ ಪ್ರಶಾಂತ್‍ನಿಗೂ ಆಗಿತ್ತು. ‘ಮಳೆ ಯಾವಾಗ ನಿಲ್ಲುತ್ತದೋ?’ ಸವಿತಾ ಸಣ್ಣಗೆ ಹೇಳಿಕೊಂಡಳು. ‘ಅಪರೂಪಕ್ಕೆ ನೀನು ಸಿಕ್ಕಿದ್ದೀಯಲ್ಲ. ಅದ್ರಿಂದ ಮಳೆ ನಿಲ್ಲಲ್ಲ’ ಅಂದಾಗ ‘ನೀನು ಒಂದುಚೂರು ಬದಲಾಗಿಲ್ಲ’ ಅಂದಳು. ಅಕ್ಕಪಕ್ಕದವರು ತಮ್ಮತ್ತಲೇ ನೋಡತೊಡಗಿದಾಗ ಪ್ರಶಾಂತ್ ಸಂಕೋಚಗೊಂಡ. ಅವನನ್ನೇ ನೋಡುತ್ತಾ ಸವಿತಾ ‘ಆರ್ಟಿಸ್ಟ್ ಆಗ್ಬೇಕು ಅಂತಿದ್ದಲ್ಲ’ ಕೇಳಿದಳು. ‘ಏನ್ ಮಾಡೋದು. ಆಗ್ಲೇ ಇಲ್ಲ’ ಎನ್ನುತ್ತ ಪರಿಸ್ಥಿತಿಗಳನ್ನು ವಿವರಿಸಿದ. ಕ್ಷಣಕಾಲ ಹೈಸ್ಕೂಲಿನ ದಿನಗಳು ಇಬ್ಬರ ಮನಸ್ಸನ್ನು ಹೊಕ್ಕವು. ಇಬ್ಬರ ಮುಖದಲ್ಲು ಮಿಂಚಿನಂತ ನಗು ಮೂಡಿತು. ಮಳೆ ನಿಲ್ಲಲು ಇಬ್ಬರೂ ಹೊರಡಲು ಸಿದ್ಧರಾದರು. ಪ್ರಶಾಂತ್ ‘ನೀನು ಯಳಂದೂರಿಗೆ ಅಲ್ವಾ?’ ಕೇಳಿದಾಗ ‘ಹೌದು’ ಎನ್ನುತ್ತ ಅವಳು ಸ್ಕೂಟರ್ ಸ್ಟ್ಯಾಂಡ್ ತೆಗೆದು ಸ್ಟಾರ್ಟ್ ಮಾಡಿದಳು. ಇಬ್ಬರೂ ಮಾತನಾಡುತ್ತ ಸಾಗುತಲಿದ್ದರು.

ಮದುವೆಯ ಬಗ್ಗೆ ಸವಿತಾ ಹೇಳುತ್ತ ‘ಮನೇಲಿ ರೆಡಿಯಿದ್ದಾರೆ. ನಾನೇ ಸ್ವಲ್ಪ ಹಿಂದೇಟು ಹಾಕ್ತಾ ಇದ್ದೀನಿ’ ಎಂದಳು. ‘ಹೌದಾ, ಒಳ್ಳೆ ಹುಡುಗ ಅಂತ ನಿಂಗೆ ಅನ್ಸುದ್ರೆ ಮದ್ವೆ ಆಗು’ ಎಂದವನಿಗೆ ಒಳಗೆ ಸಣ್ಣಗೆ ಬೇಜರಾಯ್ತು. ನಿಸ್ಸಂಕೋಚವಾಗಿ ಮಾತನಾಡುತ್ತಿದ್ದ ಸವಿತಾ ಮೇಲೆ ಅವನಿಗೆ ಸಣ್ಣಗೆ ಪ್ರೇಮ ಏಳುತ್ತಿತ್ತು. ಚಂದ-ಅಂದ ಅವನಿಗೆ ಬೇಕಿರಲಿಲ್ಲ. ಮನೆಗೆ ಹೊಂದಿಕೊಂಡು ಹೋಗುವ ಹುಡುಗಿ ಬೇಕಿದ್ದರಿಂದ ಸವಿತಾ ಮೇಲೆ ಅವನಿಗೆ ನಂಬಿಕೆ ಹುಟ್ಟಿತ್ತು. ‘ಆದರವಳು ಒಪ್ಪಿಕೊಳ್ಳುವಳೇ?’ ಸಂದೇಹಿಸಿ ತನ್ನ ಬಗ್ಗೆ ಅಸಹ್ಯ ಪಟ್ಟರೆ ಎಂದುಕೊಂಡ. ಜೊತೆಗೆ ಓದುವಾಗ ಅವಳನ್ನು ಸರಿಯಾಗಿ ನೋಡದ ಪ್ರಶಾಂತ್ ಈಗ ಅವಳ ಕಡೆಗೆ ವಾಲುತ್ತಿದ್ದ. ವಯಸ್ಸೇ ಹಾಗೇ. ಹುಚ್ಚುಮನಸ್ಸು ನನ್ನದೂ ಎಂದುಕೊಂಡು ‘ಹುಡುಗಿ ಇದ್ರೆ ತೋರ್ಸು’ ಕೇಳಿದ. ‘ಯಾತಕ್ಕೆ’ ಅಂದಳು ಸವಿತಾ. ‘ಮದ್ವೆ ಆಗೋಕೆ’ ಅಂದೇ ಬಿಟ್ಟ. ಜೋರಾಗಿ ನಗುತ್ತಾ ಅವಳು ‘ನಿಂಗೆ ಮದ್ವೆನಾ’ ಎಂದಳು. ಅವಳು ಹೇಳಿದ್ದ ರೀತಿ ತಿಳಿಯದ ಪ್ರಶಾಂತ್ ‘ಯಾಕೆ ಆಗ್ಬಾರ್ದಾ’ ಅಸಹನೆಯನ್ನು ತೋರಿಸದೇ ಕೇಳಿದ. ‘ಆಗು ಮಾರಾಯ’ ಅನ್ನುತ್ತ ಸವಿತಾ ‘ನೀ ಯಾರನ್ನು ಲವ್ ಮಾಡಿಲ್ವಾ’ ಕೇಳಿದಳು. ಅವನೂ ಒಂದೇ ಮಾತಿಗೆ ‘ಇಲ್ಲ’ ಎಂದಾಗ ‘ಈಗಿನ ಕಾಲದಲ್ಲಿ ಲವ್ ಮಾಡದವರ್ಯಾರು’ ಪ್ರಶ್ನಿಸಿದಳು. ‘ಹಿಂದಿನದು ಬೇಡ ಮಾರಾಯ್ತಿ’ ಎನ್ನುತ್ತ ಮದ್ವೆ ವಿಷಯವನ್ನೇ ಮರೆಸಲು ಹೆಣಗಾಡುತ್ತಿದ್ದಾಗ ‘ಹೋಗ್ಲಿ ಬಿಡು’ ಎಂದು ಸವಿತಾ ‘ಅಂತೊರು ಇದ್ರೆ ಹೇಳ್ತಿನಿ’ ಅಂದಳು. ಅವನು ‘ಅಬ್ಬಾ! ಥ್ಯಾಂಕ್ಯೂ’ ಎಂದಾಗ ಇಬ್ಬರೂ ಯಳಂದೂರಿಗೆ ಬಂದಿದ್ದರು. ಫೋನ್ ನಂಬರ್ ವಿನಿಮಯ ಮಾಡಿಕೊಂಡು ‘ಬೈ’ ಹೇಳಿ ದೂರವಾದರು.

ಪ್ರಶಾಂತ್ ಹುಡುಗಿ ಸಿಕ್ಕಬಿಟ್ಟಳೇನೊ ಎಂಬಂತೆ ಸವಿತಾಳ ಗುಂಗಿನಲ್ಲಿದ್ದ. ಮನೆಗೆ ಬಂದು ‘ಅವ್ವ ಎಲ್ಲೋದ’ ತಂಗಿಯನ್ನು ಕೇಳಿದ. ಟಿ.ವಿ ಆಫ್ ಮಾಡಿ ಸುಲೋಚನ ‘ಮಾವನ ಮನೆಗೆ ಹೋಗವ್ಳೆ’ ಎಂದು ‘ನೀನೆ ಎಲ್ಲಾದ್ರು ನೋಡ್ಕೋಬಾರ್ದಾ’ ಅಂದಳು. ತಂಗಿಯ ಮಾತು ಅವನಿಗೆ ಹಿತವೆನಿಸಿದರೂ ‘ನನ್ ಹಣೆ ಬರಹ’ ಅಂದಾಗ ಸುಲೋಚನ ‘ಎಂತೆಂಥೋರು ಎಂಥೆಂತ ಹುಡುಗೀರ್ನ ಮದ್ವೆ ಆಗಿದ್ದಾರೆ ಗೊತ್ತಣ್ಣ. ನೀನು ವೇಸ್ಟ್’ ಅನ್ನುತ್ತ ಅಣುಕಿಸಿದಳು. ಮೊಖಕ್ಕೆ ಹೊಡೆದಂಗೆ ಹೇಳಿದ ತಂಗಿ ಮಾತಿಗೆ ಬದಲು ಹೇಳದೇ ಪ್ರಶಾಂತ್ ಜಾರಿಕೊಳ್ಳುತ್ತ ಬೀದಿಯೊಳಕ್ಕೆ ನಡೆದ. ಮೊದಲು ದುರದುರನೆ ನೋಡುತ್ತಿದ್ದ ಸಿಂಧು ಕೂಡ ಇತ್ತೀಚೆಗೆ ಬೇರೆ ಯಾರನ್ನೋ ಪ್ರೀತಿಸುತ್ತಿದ್ದಳು. ಅನೇಕ ಬಾರಿ ಅವಳು ಪ್ರಶಾಂತ್‍ನ ಭೇಟಿಗಾಗಿ ಕಾದಿದ್ದಳು. ಕಪ್ಪಗೆ ಸಪೂರವಾಗಿದ್ದ ಸಿಂಧು ಕಂಡರೆ ಅವನಿಗೆ ಒಂದುಚೂರು ಇಷ್ಟವಿರಲಿಲ್ಲ. ಈಗ ಇದೆಲ್ಲವನ್ನು ನೆನಪಿಸಿಕೊಳ್ಳುತ್ತ ಕೊರಗುತ್ತಿದ್ದ. ‘ತಾನೆಂಥ ಮೂರ್ಖ’ ಎಂದೂ ಸಹ ತನ್ನನ್ನು ತಾನೇ ಬೈದುಕೊಳ್ಳುತ್ತಿದ್ದ.

ಚಾವಡಿ ಸಮೀಪಿಸುತ್ತಿದ್ದಂತೆ ಸಿಕ್ಕ ಅವ್ವನ ಕಂಡು ವಾಪಸ್ ಹಿಂದಕ್ಕೆ ಬರತೊಡಗಿದ. ದೇವಮ್ಮನ ಮುಖ ಅರಳಿ ಅವಳ ಇಡೀ ದೇಹವೂ ಸಂತಸವನ್ನು ಉಸಿರಾಡಿತು. ಹಟ್ಟಿಗೆ ಬಂದಾಗ ದೇವಮ್ಮ ಬಾಯ್ತೆರೆದು ‘ರಜ ಎಷ್ಟು ದಿವ್ಸ ಹಾಕಿದ್ದಯಪ್ಪ’ ಅಂದಳು. ‘ನಾಲ್ಕು ದಿನ’ ಅಂದ. ‘ಒಂದೆರಡು ಹುಡುಗೀರ್ನ ನೋಡಿವಿ. ನಿಂಗ ಇಷ್ಟವಾದ್ರ ಆಮೇಲಾ ಮುಂದುಲ್ ಮಾತು’ ಎನ್ನುತ್ತ ದೇವಮ್ಮ ಅವರ ಹಿನ್ನೆಲೆಯನ್ನು ವಿವರಿಸತೊಡಗಿದಳು. ಪ್ರಶಾಂತ್ ಅವ್ವನ ಮಾತುಗಳಿಗೆ ತಲೆಯಾಡಿಸಿದ. ಸುಲೋಚನ ಲೋಟಗಳಲ್ಲಿ ಟೀ ತಂದಿಟ್ಟು ಸ್ಟವ್ ಆಫ್ ಮಾಡಿ ತಾನೂ ಅವರ ಮುಂದಕ್ಕೆ ನಿಂತಳು. ಮೂವರು ಮದುವೆ ಬಗ್ಗೆ ಹರಟುತ್ತಿದ್ದರು.

ಬೆಳಿಗ್ಗೆ ಒಂಬತ್ತು ಗಂಟೆಗೆ ಶಿವಣ್ಣ-ಸಾವಿತ್ರಿ ದಂಪತಿ ದೇವಮ್ಮನ ಹಟ್ಟಿ ಬಾಗಿಲಿಗೆ ಬಂದರು. ಪ್ರಶಾಂತ್ ಸ್ನಾನಮಾಡಿ, ಇಸ್ತ್ರಿ ಮಾಡಿದ ಪ್ಯಾಂಟು-ಶರ್ಟು ಹಾಕೊಂಡು ಸುಗಂಧ ದ್ರವ್ಯವನ್ನು ಪೂಸಿಕೊಂಡಿದ್ದ. ಸುಲೋಚನ ಅಣ್ಣನಿಗೆ ‘ಹುಡುಗಿ ಬಂದಾಗ ಹೀಗಿರು-ಹಾಗಿರು’ ಎಂದು ಗೈಡ್ ಮಾಡುತ್ತಿದ್ದಳು. ದೇವಮ್ಮನೂ ಸಹ ಹೊಳಪಿನ ಸೀರೆ ಉಟುಗೊಂಡು ಮಾದಪ್ಪನಿಗೆ ಕಡ್ಡಿ ಹಚ್ಚಿ ‘ಹೋಗವಾ ಕೂಸೆ’ ಅನ್ನುತ್ತ ತಮ್ಮನನ್ನು ಕೇಳಿದಳು. ‘ಬನ್ನಿ ಟೇಮು ಮೀರ್ತಾ ಅದೆ’ ಅನ್ನುತ್ತ ಶಿವಣ್ಣ ಎಲ್ಲರನ್ನೂ ಸಜ್ಜುಗೊಳಿಸಿ ಬೈಕ್ ಸ್ಟಾರ್ಟ್ ಮಾಡಿದ. ಹೊರಟವರಿಗೆ ಕೈ ಬೀಸುತ್ತಾ ಸುಲೋಚನ ಮುಗುಳ್ನಗುತ್ತಾ ನಿಂತುಕೊಂಡಳು. ಪಕ್ಕದ ಮನೆಯ ಸಿದ್ದಕ್ಕ ‘ಹೋದಕಾರ್ಯ ಜಯವಾಗಲಿ ಅನ್ನಬೇಕುಕವ್ವ’ ಅಂದು ಮಾತುಕತೆ ಶುರುಮಾಡಿದಳು.

ಬೈಕ್ ಚಲಾಯಿಸುತ್ತಿದ್ದ ಪ್ರಶಾಂತ್‍ನಿಗೆ ರೋಡಿನತ್ತ ಗಮನವೇ ಇರಲಿಲ್ಲ. ‘ಯಾರ ಪ್ರೇಯಸಿಯನ್ನು ನಾನು ಮದುವೆ ಆಗಬೇಕೋ’ ಎಂದು ಲೆಕ್ಕಾಚಾರ ಹಾಕುತ್ತಿದ್ದ. ಒಟ್ಟಿನಲ್ಲಿ ಅವನಿಗೆ ಅರೆಂಜ್ ಮ್ಯಾರೇಜ್ ಬಗ್ಗೆ ಅಸಮಾಧಾನವಿತ್ತು. ಮನೆಯವರ ಒತ್ತಾಯಕ್ಕೆ ಮಣಿದು ಅವರೊಟ್ಟಿಗೆ ಹೊರಟಿದ್ದ. ಮದ್ದೂರಿಗೆ ಹೋದರು. ದೇವಮ್ಮ ಸರಸರನೆ ನಡೆಯುತ್ತಿದ್ದಳು. ಪ್ರಶಾಂತ್ ಮೆತ್ತಗಾಗಿದ್ದ. ಮೊದಲೇ ತಿಳಿಸಿದ್ದರಿಂದ ಹುಡುಗಿ ಮನೆಯವರು ಸ್ವಲ್ಪ ತಯಾರಿ ಮಾಡಿಕೊಂಡಿದ್ದರು. ಬಂದವರಿಗೆ ನೀರುಕೊಟ್ಟು, ಒಳಕ್ಕೆ ಕರಕೊಂಡು ಛೇರು ಇಟ್ಟರು. ಒಂದೆರಡು ನಿಮಿಷಕ್ಕೆ ಬಿಸ್ಕೆಟ್ ಮತ್ತು ಟೀ ಕೊಟ್ಟು ಹುಡುಗಿ ಕರೆದರು. ಪ್ರಶಾಂತ್ ನಾಚಿಕೊಳ್ಳುತ್ತಲೇ ಹುಡುಗಿಯನ್ನು ನೋಡಿದ. ಚೆನ್ನಾಗಿಯೇ ಇದ್ದಳು. ದೇವಮ್ಮ, ಶಿವಣ್ಣ-ಸಾವಿತ್ರಿ ದಂಪತಿ ಸಹ ನೋಡಿ, ಹುಡುಗಿ ಒಳ ಹೋದ ನಂತರ ಒಂದಷ್ಟು ಮಾತಾಡಿದರು. ಪ್ರಶಾಂತ್‍ನಿಗೆ ಹುಡುಗಿ ಇಷ್ಟವಾಗಿದ್ದರೂ ಅವಳ ಹಿನ್ನೆಲೆ ತಿಳಿಯಬೇಕೆಂಬ ಕುತೂಹಲ ಮತ್ತು ಆಸೆ ಉಂಟಾಗಿತ್ತು. ಒಂದೇ ದಿನಕ್ಕೆ ಮಾತನಾಡುವುದು ಸಾಧ್ಯವಿಲ್ಲ ಎಂದು ಅರಿತು ಸುಮ್ಮನಾಗಿದ್ದ. ಅವ್ವ, ಮಾವ-ಅತ್ತೆ ಎದ್ದು ನಿಂತಾಗ ಪ್ರಶಾಂತ್ ಸಹ ಎದ್ದ. ಅಲ್ಲಿಂದ ಕೊಳ್ಳೆಗಾಲದ ಕಡೆಗೆ ಪ್ರಯಾಣ ಬೆಳೆಸಿ ಒಂದಷ್ಟು ಊರುಗಳನ್ನು ಸುತ್ತಿ ನಾಲ್ಕೈದು ಹುಡುಗಿಯರನ್ನು ನೋಡಿ ಸಂಜೆಗೆ ಊರ ಮುಟ್ಟಿದರು.

ಸವಿತಾಳಿಗೆ ಮೆಸೇಜ್ ಮಾಡಿದ. ‘ಹೇಳು’ ಮರುತ್ತರ ಕಳಿಸಿದಳು. ‘ಹುಡುಗಿ ಹೆಸರು ಶೀಲಾ ಮದ್ದೂರು. ನಿನಗೇನಾದರೂ ಗೊತ್ತಾ ಅವಳ ಬಗ್ಗೆ’ ಮುಜುಗರದಿಂದಲೇ ಕೇಳಿದ.

‘ಅವಳ ಬಗ್ಗೆ ಅಂದ್ರೆ’

‘ಒಳ್ಳೆಯ ಹುಡ್ಗಿನ ಅಂತ’

‘ನೀನು ಒಳ್ಳೆಯವನ’ ಕೇಳಿದಳು.

‘ಇದೇನು ಹೀಗೆ ಕೇಳ್ತೀಯ’

‘ನಿನ್ ಬಗ್ಗೆ ಕೇಳುದ್ರೆ ತಪ್ಪು. ಅದೇ ಹುಡುಗಿ ಬಗ್ಗೆ ನೀನ್ ಕೇಳ್ಬಹುದಾ?’

ತಬ್ಬಿಬ್ಬಾಗಿ ಪ್ರಶಾಂತ್ ‘ಸಾರಿ ಸವಿತಾ’ ಅಂದು ಕರೆ ಕಟ್ಟು ಮಾಡಿದ.

ಸವಿತಾಳೆ ರೀಡಯಲಿಂಗ್ ಮಾಡಿ ‘ಎಲ್ಲರಾ ಜೀವನದಲ್ಲೂ ಏನೇನೋ ನಡೆದಿರುತ್ತವೆ. ಅದನ್ನೆಲ್ಲ ಕೆದಕುತ್ತ ಹೋದರೆ ಜೀವನದ ಸ್ವಾರಸ್ಯ ಉಳಿಯಲ್ಲ. ನೆನ್ನೆ ನೆನ್ನೆಗೆ. ನಾಳೆ ನಾಳೆಗೆ. ಇಂದು ನಮ್ಮದೇ ಚಿಂತೆ ಏತಕೆ?’ ಅಂದು ತಾತ್ವಿಕವಾಗಿ ನುಡಿದಳು.

‘ಅವಳಿಗೆ ಒಪ್ಪಿಗೆ ಇದೆ’ ಪ್ರಶಾಂತ್ ಹೇಳಿದ.

‘ಹೌದಾ. ಇನ್ನೇನು ಮತ್ತೆ’

‘ಆದ್ರೂ ಅವ್ಳು ಲವ್ ಮಾಡಿದ್ದು, ನನ್ ಮದ್ವೆ ಆದಮೇಲು ಮುಂದುವರೆಸಿದರೇ’ ಮಾತುಗಳನ್ನು ನುಂಗಿಕೊಂಡ.

‘ಅತಿ ಮುಂದಾಲೋಚನೆಯು ಒಳ್ಳೆದಲ್ಲ. ಎಲ್ಲರೂ ಕೆಟ್ಟವರಲ್ಲ’

‘ಆದ್ರೂ’ ಅಂದ ಪ್ರಶಾಂತ್.

‘ಮದ್ವೆನೇ ಆಗ್ಬೇಡ. ಒಳ್ಳೆ ಉಪಾಯ’ ನಕ್ಕಳು ಸವಿತಾ.

ಅವಮಾನಕ್ಕೊಳಗಾದವನಂತೆ ಪ್ರಶಾಂತ್ ‘ನಿನ್ನ ಕೇಳಿದ್ದೇ ತಪ್ಪು. ಓಕೆ ಬೈ’ ಅಂದು ಕರೆ ಸ್ಥಗಿತಗೊಳಿಸಿದ.

‘ಸವಿತಾ ತನ್ನ ಬಗ್ಗೆ ಏನಂದುಕೊಂಡಾಳು. ನಾನೇಕೆ ಅವಳೊಟ್ಟಿಗೆ ಹೀಗೆಲ್ಲಾ ಮಾತನಾಡಿದೆ. ತಪ್ಪಾಗಿ ಹೋಯ್ತಲ್ಲಾ’ ಎಂದೆಲ್ಲಾ ತನ್ನಲ್ಲೇ ಕಲ್ಪಿಸಿಕೊಂಡು ಪ್ರಶಾಂತ್ ಕ್ಷಣಕಾಲ ಖಿನ್ನನಾದ. ಮನೆಗೆ ಬಂದ ಅಣ್ಣನ ಮುಖವನ್ನು ಗಮನಿಸಿ ಸುಲೋಚನ ‘ಏನಾಯ್ತಣ್ಣ’ ಅಂದಳು. ‘ಏನಿಲ್ಲ’ ಅಂದ. ದೇವಮ್ಮ ಬಾಯ್ತೆರೆದು ‘ಯಾನ ಯ್ಯೋಳು ಕೂಸು’ ಅಂದಳು. ತನ್ನ ಬುದ್ದಿಹೀನ ತನವನ್ನು ಅವ್ವ-ತಂಗಿಯ ಜೊತೆ ಹೇಳಿಕೊಳ್ಳದೇ ‘ಆ ಹುಡ್ಗಿ ನಿಮ್ಗೆ ಇಷ್ಟ ಆಗಿದ್ದಳಾ?’ ಕೇಳಿದ. ದೇವಮ್ಮ ಏರುದನಿಯಲ್ಲಿ ‘ಊಂ’ ಎಂದು ಮದುವೆ ಸಡಗರವನ್ನು ಕಣ್ಣಲ್ಲಿ ತುಂಬಿಕೊಂಡು ಮಾತಿಗಿಳಿದಳು. ಪ್ರಶಾಂತ್‍ಗೆ ಮದುವೆಯೇ ಬೇಡ ಎನಿಸಿತ್ತು. ‘ಸದ್ಯಕ್ಕೆ ನಂಗೆ ಮದುವೆ ಬೇಡ’ ಎಂದುಬಿಟ್ಟ. ಹಿರೀಕಳಾಗಿದ್ದ ದೇವಮ್ಮ ಮಗನ ಮಾತಿನಿಂದ ವಿಚಲಿತಳಾಗದೇ ಪ್ರೀತಿಯಿಂದ ‘ಹುಡುಗಿ ಇಷ್ಟ ಇಲ್ವಾ’ ಕೇಳಿದಳು. ಅವ್ವನ ಮಾತಿಗೆ ಉತ್ತರಿಸಲು ಪತರುಗುಟ್ಟಿದ. ಸುಲೋಚನ ಕೂಡ ‘ಚೆನ್ನಾಗೆ ಇದ್ದಲ್ಲಣ್ಣ. ಈಗ ಏನಾಯ್ತು’ ಏನೋ ಆಗಿದೆಯೆಂಬಂತೆ ಕೇಳಿದಳು. ‘ಆ ಹುಡುಗಿ ಬೇರೆ ಹುಡುಗನನ್ನು ಇಷ್ಟಪಟ್ಟಿದ್ದಾಳಂತೆ’ ತಳ-ತುದಿ ಒಂದನ್ನೂ ತಿಳಿಯದೇ ಹೇಳಿಬಿಟ್ಟ ಪ್ರಶಾಂತ್. ‘ನಿಂಗ್ಯಾರಪ್ಪ ಹೇಳಿದ್ದು’ ದೇವಮ್ಮ ಕೇಳಲು ‘ನಂಗೆ ನನ್ನ ಫ್ರೆಂಡ್ಸು ಹೇಳುದ್ರು’ ಅಂದು ‘ಅವಳು ನಂಗೆ ಬ್ಯಾಡ’ ಅನ್ನುತ್ತ ಮೇಲಕ್ಕೆದ್ದ. ಮಗನ ಮಾತಿನಿಂದ ದೇವಮ್ಮನಿಗೆ ಅಕ್ಕಪಕ್ಕದವರ ಮೇಲೆ ವೈರ ಎದ್ದಿತು.

‘ನೆರೆಹೊರೆಯವರು ಮಗ್ಗುಲಲ್ಲಿ ಹಾವಿದ್ದಂತೆ’ ಎಂದು ಅನೇಕ ಪ್ರಸಂಗಗಳಲ್ಲಿ ದೇವಮ್ಮನಿಗೆ ಮನದಟ್ಟಾಗಿತ್ತು. ಇದು ಸಹ ಅವರ ಕೈವಾಡವೇ ಅನ್ನಿಸಿತು ಅವಳಿಗೆ. ‘ಗೊತ್ತಿಲ್ದೆ ಮಾತಾಡ್ಬಾರದು ಕಾ ಕೂಸು’ ಮಗನಿಗೆ ಬುದ್ದಿ ಹೇಳಿದಳು. ಪ್ರಶಾಂತ್ ಹೊರನಡೆದು ಸವಿತಾಳಿಗೆ ಕರೆಮಾಡಿದ. ಅವಳು ಫೋನ್ ರಿಸೀವ್ ಮಾಡಲಿಲ್ಲ. ದೇವಸ್ಥಾನದ ಬಳಿಗೆ ಬಂದು ಗೋಪುರದ ಕಳಸವನ್ನು ದಿಟ್ಟಿಸುತ್ತಿದ್ದ. ಫೋನ್ ಸದ್ದು ಮಾಡಲು ರಿಸೀವ್ ಮಾಡಿ ‘ಹೆಲೋ’ ಎಂದ. ‘ಹೇಳು ಪ್ರಶಾಂತ್’ ಅಂದಳು ಸವಿತಾ. ಏನನ್ನಬೇಕು ತಿಳಿಯದೇ ಕಡೆಗೆ ‘ಸಾರಿ’ ಅಂದ. ‘ಸರಿ ಬಿಡು. ಮತ್ತೆ’ ಸವಿತಾ ಪ್ರಶ್ನಿಸಿದಳು. ‘ಗೊತ್ತಿಲ್ದೆ ಇರೋ ಹುಡುಗೀನ ಮದುವೆ ಆಗೋಕಿಂತ ಗೊತ್ತಿರೋ ನಿನ್ನಂಥ ಹುಡುಗೀನ ಮದುವೆ ಆಗಬೇಕು ಅಂದುಕೊಂಡಿದ್ದೀನಿ’ ಅಂದ. ‘ಗೊತ್ತಿದ್ರೆ ಕೇಳ್ಸು’ ಅಂದಳು. ‘ಒಪ್ಕೊತಾರ’ ಮತ್ತೆ ಸಂದೇಹದೇ ನುಡಿದ. ‘ಒಪ್ಕೊಳ್ಳೋದು ಬಿಡೋದು ಅವರಿಗೆ ಬಿಟ್ಟ ವಿಷಯ. ಮೊದಲು ಕೇಳ್ಸು’ ಅಂದು ಐಡಿಯ ಕೊಟ್ಟಳು. ‘ಕೇಳೇ ಬಿಡಲಾ’ ಮತ್ತೊಮ್ಮೆ ಅವಳನ್ನೆ ಕೇಳಿದ. ‘ಓಕೆ’ ಅಂದಳು. ‘ನಾನು ನಿನ್ನೆ ಮದುವೆ ಆಗಬೇಕು ಅಂತ ಇದೀನಿ’ ಅಂದುಬಿಟ್ಟ. ಒಂದೆರಡು ನಿಮಿಷದ ಮೌನದ ನಂತರ ಅವಳು ‘ಈಗ ನೋಡಿರೋ ಹುಡುಗೀನೆ ಮದುವೆ ಆಗು. ಲೈಫ್ ಚೆನ್ನಾಗಿರಲಿ’ ಎಂದು ಗುಡ್ ನೈಟ್ ಹೇಳಿದಳು. ಅವಳ ಉತ್ತರಕ್ಕಿಂತ ಕೋಪಗೊಳ್ಳದಿದ್ದಕ್ಕೆ ಪ್ರಶಾಂತ್ ನಿಟ್ಟುಸಿರುಬಿಟ್ಟಿದ್ದ. ಅವಳ ತಾಳ್ಮೆ ಅವನಿಗೆ ಹಿಡಿಸಿತ್ತು. ತನ್ನ ವ್ಯಕ್ತಿತ್ವದ ಬಗ್ಗೆ ತಾನೇ ಅಸೂಹೆ ಪಟ್ಟುಕೊಂಡು ಮದ್ದೂರಿನ ಹುಡುಗಿ ಬಗ್ಗೆ ಕನಸು ಕಾಣತೊಡಗಿದ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT