ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿನೇಶ್‌ ಕೆ.ನಾಯ್ಕ್‌ ಅವರ ಕಥೆ 'ದೈವದ ನಗ'

Last Updated 17 ಸೆಪ್ಟೆಂಬರ್ 2022, 19:30 IST
ಅಕ್ಷರ ಗಾತ್ರ

ಎಂಟು ದಿನದ ಗಡುವು ಮುಗಿಯುತ್ತಾ ಬಂದರೂ ಕಂಠೀಹಾರದ ಸುಳಿವಿಲ್ಲ. ಭಕ್ತಗಣಗಳು ಅಂತಹ ಕೌತುಕಮಯ ಸುದಿನವನ್ನು ಕಣ್ತುಂಬಿಕೊಳ್ಳಲು ಕಾತರದಿಂದ ಕಾದುಕೊಂಡಿದ್ದರು. ದೈವದ ಮೇಲೆ ಅವರಿಗೆ ಅಪಾರ ನಂಬಿಕೆ. ‘ಎಂಟು ದಿನದೊಳಗೆ ಕಾಣೆಯಾದ ಕಂಠೀಹಾರವನ್ನು ಸನ್ನಿದಿಗೆ ತರಿಸಿಕೊಳ್ಳುತ್ತೇನೆ......’ಎಂದು ದೈವ ವಾಗ್ದಾನ ಮಾಡಿತ್ತು.

ಆ ದಿನ ಗರಡಿಯಲ್ಲಿ ವಾರ್ಷಿಕ ಕೆಂಡೋತ್ಸವ ಇತ್ತು. ಪಾರುಪತ್ಯಗಾರರು ತಮ್ಮ ಸುಪರ್ದಿಯಲ್ಲಿರುವ ಗರಡಿಯ ಚಿನ್ನದ ನಗಗಳನ್ನು ಆಡಳಿತ ಮಂಡಳಿಯ ಸಮಕ್ಷಮದಲ್ಲಿರಿಸಿ ಕರಾರುವಾಕ್ಕಾಗಿದೆ ಎಂದು ಖಾತ್ರಿಯಾದ ನಂತರ ದೈವಗಳಿಗೆ ತೊಡಿಸಿದ್ದರು. ಕೆಂಡೋತ್ಸವ ಮತ್ತು ಇತರ ವಿಶೇಷ ದಿನಗಲ್ಲಿ ಮಾತ್ರ ಅವುಗಳನ್ನು ದೈವಗಳಿಗೆ ತೊಡಿಸುವುದು ಪದ್ಧತಿಯಾಗಿತ್ತು. ಉಳಿದಂತೆ ಅವುಗಳು ಪಾರುಪತ್ಯಗಾರರ ಸುಪರ್ದಿಯಲ್ಲಿ ಇರುತ್ತಿತ್ತು. ಕೆಂಡೋತ್ಸವ ಮುಗಿದು ಆಡಳಿತ ಮಂಡಳಿಯ ಸಮಕ್ಷಮದಲ್ಲಿ ತೆಗೆದು ನೋಡುವಾಗ ಕಂಠೀಹಾರವೊಂದು ಕಾಣೆಯಾದ ವಿಷಯ ಗಮನಕ್ಕೆ ಬಂತು. ಅದು ಅಂತಿಂಥ ಕಂಠೀಹಾರವಲ್ಲ ಸುಮಾರು ಇನ್ನೂರು ಗ್ರಾಂ ತೂಕದ ಅಪ್ಪಟ ಅಪರಂಜಿ ಚಿನ್ನದ್ದು. ದುಬೈನ ಭಕ್ತರೊಬ್ಬರು ಅಲ್ಲಿನಿಂದಲೇ ಮಾಡಿಸಿಕೊಂಡು ತಂದು ಕಾಣಿಕೆ ನೀಡಿದ್ದರು. ಪಳ ಪಳ ಹೊಳೆಯುವ ದೈವದ ಕೆತ್ತನೆ ಇರುವ ದೊಡ್ಡ ಪದಕದ ಮಿರಿ ಮಿರಿ ಮಿಂಚುವ ಅಪರೂಪದ ಸುಂದರ ಹಾರ. ಅದನ್ನು ಭಾರತೀಯ ಮೂಲದ ಕುಶಲ ಕರ್ಮಿಯೊಬ್ಬರು ತಯಾರಿಸಿದ್ದರು. ಅಲ್ಲಿ ಇಲ್ಲಿ ಹೂವಿನ ರಾಶಿ, ಹಣ್ಣುಗಳ ರಾಶಿ, ಕಸದ ರಾಶಿ ಕೆದಕಿದರೂ ಸಿಗಲಿಲ್ಲ. ಆ ದಿನ ದೈವದ ಉರುಗಳ ಮೇಲೆ ರಾಶಿ ರಾಶಿ ಹೂವನ್ನು ಹೇರುತ್ತಾರೆ. ಹೂವುಗಳನ್ನು ತೆಗೆಯುವಾಗ ಹೋಯಿತೋ, ಯಾರಿಗೋ ಸಿಕ್ಕಿತೋ, ಇನ್ನಾರೋ ಎಗರಿಸಿದರೋ ಉತ್ಸವದ ಗಡಿಬಿಡಿ ಬೇರೆ. ಆಡಳಿತ ಮಂಡಳಿ ಚಿಂತಾಕ್ರಾಂತವಾಯಿತು. ಪೊಲೀಸ್ ದೂರು ಕೊಟ್ಟರೆ ಗರಡಿಯ ವರ್ಚಸ್ಸಿನ ಪ್ರಶ್ನೆ ಎದುರಾಗುತ್ತದೆ. ಆದುದರಿಂದ ಮಾರನೇ ದಿನ ಮತ್ತೆ ದೈವ ದರ್ಶನ ಮಾಡಿಸಿ ಅಹವಾಲನ್ನು ಇಟ್ಟಿದ್ದು.

ಅದು ವನಪುರದ ಕಾರಣಿಕ ರಾಜನ್ ದೈವ ಮತ್ತು ಪರಿವಾರ ದೈವಗಳ ಸಾವಿರಾರು ಭಕ್ತ ಪರಿವಾರ ಹೊಂದಿರುವ ಪ್ರಸಿದ್ಧ ಗರಡಿ. ಗರಡಿಯ ಪಾತ್ರಿ ಸೂರಪ್ಪ ಸಾಚಾ ಮನುಷ್ಯ. ಒಂದೂ ದುರಾಭ್ಯಾಸವೂ ಇಲ್ಲ. ತನ್ನ ಮೇಲೆ ಆವೇಶ ಬಂದಾಗ ದೈವವೇ ನುಡಿಸುತ್ತದೆ ಎಂಬ ಬಲವಾದ ನಂಬಿಕೆಯುಳ್ಳವ. ನಿಯತ್ತಿನ ಮನುಷ್ಯ. ದೈವದ ಹೆಸರಿನಲ್ಲಿ ಪೀಕುವ ಸ್ವಭಾವದವನಲ್ಲ. ಯಾರ ಮನೆಯಲ್ಲಿಯಾದರು ದೈವ ದರ್ಶನ ಮಾಡಿಸಿದರೆ ಅವರು ಕೊಡುವ ಯಥಾಶಕ್ತಿ ಕಾಣಿಕೆಯನ್ನು ಸಂತೋಷದಿಂದ ಸ್ವೀಕರಿಸುತ್ತಿದ್ದ. ಅಷ್ಟು ಕೊಡಿ ಇಷ್ಟು ಕೊಡಿ ಎಂದು ಕಾಡುವವನಲ್ಲ. ಕೊಡಲು ಅಶಕ್ತರಾದವರಿಂದ ಒಂದು ಬಿಡಿಗಾಸು ಕೇಳುತ್ತಿರಲಿಲ್ಲ. ಏನಾದರು ವ್ಯವಸ್ಥೆ ಮಾಡಿ ಕೊಟ್ಟರೂ ನಯವಾಗಿ ತಿರಸ್ಕರಿಸುತ್ತಿದ್ದ. ಅವನದು ಚಿಕ್ಕ ಸಂಸಾರ. ಸ್ವಲ್ಪ ತೋಟ ಮತ್ತು ಗದ್ದೆ ಇದೆ. ಮನೆಯ ತೋಟ ಗದ್ದೆಗಳಲ್ಲಿ ಅಷ್ಟೇನು ಕೆಲಸ ಇಲ್ಲ. ಶ್ರಮ ಜೀವಿಯಾದ ಆತ ಪಾರುಪತ್ಯಗಾರರ ಗದ್ದೆ ಮತ್ತು ತೋಟಗಳಲ್ಲಿ ಕೆಲಸ ಮಾಡುವ ಕಾಯಂ ಕೆಲಸದ ಅಳೂ ಕೂಡ ಹೌದು. ಪಾರುಪತ್ಯಗಾರರ ಬಳಿ ತುಂಬಾ ಹೊಲ, ಗದ್ದೆ, ತೋಟಗಳಿದ್ದವು. ಆದರೂ ತುಂಬಾ ದುರಾಸೆಯ ಮತ್ತು ಕೆಟ್ಟ ಚಾಳೀಯ ಮನುಷ್ಯ.

ಗರಡಿ ಸಂಪೂರ್ಣವಾಗಿ ಪಾರುಪತ್ಯಗಾರರ ಆಡಳಿತಕ್ಕೆ ಒಳಪಟ್ಟಿತ್ತು. ಇತರ ಆಡಳಿತ ಮಂಡಳಿ ಸದಸ್ಯರು ಕೇವಲ ನೆಪ ಮಾತ್ರ ಅಷ್ಟೇ. ಗರಡಿಗೆ ಬರುವ ಆದಾಯದಲ್ಲಿ ಬಹು ದೊಡ್ಡ ಪಾಲು ಪಾರುಪತ್ಯಗಾರರ ಕಿಸೆ ಸೇರುತ್ತಿತ್ತು. ಆ ಖರ್ಚು ಈ ಖರ್ಚು ತೋರಿಸಿ ಲಪಟಾಯಿಸುತ್ತಿದ್ದ. ಗರಡಿಯ ನಗಗಳನ್ನು ಗುಟ್ಟಾಗಿ ಬಾಡಿಗೆಗೆ ಕೊಡುತ್ತಿದ್ದ. ಬಾಡಿಗೆ ಹಣ ಗುಳುಂ ಮಾಡುತ್ತಿದ್ದ. ಗರಡಿಯ ಪಾತ್ರಿ ಸೂರಪ್ಪನನ್ನು ತನ್ನ ಅಂಕುಶದಲ್ಲಿ ಇಟ್ಟುಕೊಳ್ಳುವ ಪ್ರಯತ್ನ ಮಾಡುತ್ತಿದ್ದ. ಪಾತ್ರಿ ಅವನ ಮನೆಯ ಆಳಾಗಿರುವುದು ಕೂಡ ವರದಾನವಾಗಿತ್ತು. ಎಷ್ಟೋ ತಂಟೆ ತಕರಾರುಗಳು ದೈವ ಸನ್ನಿದಿಯಲ್ಲಿ ತೀರ್ಮಾನವಾಗುತಿತ್ತು. ಹಿಂದಿನ ದಿನವೇ ಪಾತ್ರಿಗೆ ತನಗೆ ಇಷ್ಟವಾದವರ ಕಡೆಗೆ ಹೀಗೆ ಹೀಗೆ ವಾಗ್ದಾನ ಕೊಡು ಎಂದು ತಾಕೀತು ಮಾಡುತ್ತಿದ್ದ. ಇದು ಸೂರಪ್ಪನವರಿಗೆ ನುಂಗಲಾರದ ತುತ್ತಾಗಿರುತ್ತಿತ್ತು. ಆದರೂ ತೀರ್ಮಾನ ನ್ಯಾಯವಾಗಿಯೇ ಇರುತ್ತಿತ್ತು. ಮಾರನೇ ದಿನ ಸೂರಪ್ಪನನ್ನು ತರಾಟೆಗೆ ತೆಗೆದುಕೊಂಡರೆ, ನಾನೇನು ಮಾಡಲಿ ಅದು ದೈವದ ನುಡಿ, ನಾನು ನೆಪ ಮಾತ್ರ ಅಷ್ಟೇ. ಆವೇಶ ಬಂದ ಮೇಲೆ ನನ್ನ ಹತೋಟಿಯಲ್ಲಿ ಏನು ಇರೋದಿಲ್ಲ, ಎಲ್ಲ ದೈವದ ಆದೇಶ ಎನ್ನುತ್ತಿದ್ದ. ಶ್ಯಾಮಪ್ಪನವರು ಗರಡಿಯ ಪಾರುಪತ್ಯಗಾರರಾದರೂ ಕೂಡ ದೈವ ಶಕ್ತಿಯನ್ನು ಬಲವಾಗಿ ನಂಬುತ್ತಿರಲಿಲ್ಲ. ನೀನೋ ನಿನ್ನ ದೈವವೊ ಎಂದು ತಿರಸ್ಕಾರದ ಕೊಂಕಿನ ಮಾತು ಬೇರೆ.

ಎಂಟನೇ ದಿನ ಸನ್ನಿದಿಯಲ್ಲಿ ಮತ್ತೆ ದೈವದ ದರ್ಶನ ಹಮ್ಮಿಕೊಳ್ಳಲಾಗಿತ್ತು. ವಾಗ್ದಾನ ಮಾಡಿದಂತೆ ಕಂಠೀಹಾರವನ್ನು ತರಿಸಿಕೊಂಡು ದೈವ ತನ್ನ ಪ್ರತಾಪವನ್ನು ತೋರಿಸಲಿತ್ತು. ಅಂತಹ ಸೋಜಿಗಕ್ಕೆ ಸಾಕ್ಷಿಯಾಗಲು ಭಕ್ತರ ಜನ ಜಾತ್ರೆ ಸೇರಿತ್ತು. ಹೂ, ಹಣ್ಣು ಕಾಯಿಗಳ ಬುಟ್ಟಿಗಳು ಸಾಲು ಸಾಲು ಗರಡಿಯ ಮುಂದೆ ಸರತಿಗಟ್ಟಿ ರಾರಾಜಿಸುತ್ತಿತ್ತು. ಸೂರಪ್ಪನ ಮೇಲೆ ದೈವದ ಆವೇಶವೇರಿತು. ಆ ದಿನ ದೈವದ ವರ್ತನೆ ತುಂಬಾ ಗಡುಸಾಗಿತ್ತು. ಉಗ್ರವಾಗಿ ತನ್ನ ಪ್ರತಾಪವನ್ನು ಪ್ರಕಟಪಡಿಸುತ್ತಿತ್ತು. ಒಮ್ಮೆ ಹೂಂಕರಿಸಿದ ದೈವ ತನ್ನ ಪಾದವನ್ನು ಜೋರಾಗಿ ನೆಲಕ್ಕೆ ಅಪ್ಪಳಿಸಿ ಪೀಠದ ಮೇಲಿನಿಂದ ಎದ್ದು ನಿಂತಿತು. ಎಲ್ಲೆಡೆ ಕೆಂಗಣ್ಣು ಬೀರುತ್ತಾ ಇಮ್ಮಡಿ ಆವೇಶದಿಂದ ಅಂಗಳದ ಸುತ್ತ ಕುಣಿದಾಡಿತು. ಒಂದು ಹೂವಿನ ಬುಟ್ಟಿ ಕಡೆಗೆ ಕೈ ತೋರಿಸುತ್ತ, ಅದನ್ನು ತೆರೆಯುವಂತೆ ಸೂಚಿಸುತ್ತದೆ. ಆಶ್ಚರ್ಯ, ಹೂಗಳ ನಡುವೆ ಕೆಂಪು ಬಟ್ಟೆಯಲ್ಲಿ ಸುತ್ತಿಟ್ಟ ಕಂಠೀಹಾರ ಪಳ ಪಳ ಹೊಳೆಯಿತು. ಭಕ್ತ ಕುಲ ಕೋಟಿ ದೈವಶಕ್ತಿಗೆ ಅಡ್ಡ ಬಿದ್ದರು. ದೈವದ ಕಾರಣಿಕವನ್ನು ಕಣ್ತುಂಬಿಕೊಂಡು ಪುನೀತರಾದರು. ಕಳವು ಮಾಡಿದ್ದೋ? ಅಥವಾ ಕಾಣೆಯಾಗಿ ಯಾರಿಗೋ ಸಿಕ್ಕಿದ್ದೋ?. ಅದು ಯಾರು? ಅಂಥವರಿಗೆ ದೈವದ ಶಿಕ್ಷೆ ಏನು? ಜನರ ಕುತೂಹಲದ ಪ್ರಶ್ನೆ. ಈಗ ದೈವದ ಆವೇಶ ಒಂದು ತಹಬಂದಿಗೆ ಬಂದಿತ್ತು. ‘ಇದನ್ನು ಮಾಯಾ ಮಾಡಿದವರು ಯಾರೆಂದು ನನ್ನ ಚಿತ್ತಕ್ಕೆ ತಿಳಿದಿದೆ, ಆದರೆ ಅವರಿಗೆ ನಾನು ಈಗ ಏನೂ ಶಿಕ್ಷೆ ಕೊಡಲಾರೆ. ಅವರಿಗೆ ಒಂದು ಅವಕಾಶವನ್ನು ನೀಡಿ, ತಮ್ಮ ಅವಿವೇಕದಿಂದ ಮಾಡಿದ ತಪ್ಪನ್ನು ಒಪ್ಪಿಕೊಂಡು ತಪ್ಪು ಕಾಣಿಕೆ ಹಾಕಲಿ. ಅದು ಎಲ್ಲರ ಸಮಕ್ಷಮದಲ್ಲಿ ಬೇಡ. ಅದು ಅವರ ಮತ್ತು ಗರಡಿಯ ವರ್ಚಸ್ಸಿನ ಪ್ರಶ್ನೆ. ಆದುದರಿಂದ ಗುಟ್ಟಾಗಿ ಬಂದು ತಪ್ಪನ್ನು ಒಪ್ಪಿಕೊಂಡು ತಪ್ಪು ಕಾಣಿಕೆ ಹಾಕಲಿ, ಮೂರ್ಖತನದಿಂದ ನನ್ನ ವಾಗ್ದಾನವನ್ನು ತಿರಸ್ಕರಿಸಿದರೆ ಶಿಕ್ಷೆ ಕೊಡದೆ ಬಿಡಲಾರೆ......’ ಹೂಂಕರಿಸಿ ತನ್ನ ಸ್ವಸ್ಥಾನ ಸೇರಿತು. ದೈವದ ತೂಕದ ನಿರ್ಣಯ ಎಲ್ಲರ ಮನ ಗೆದ್ದಿತು. ಬಿರುಗಾಳಿಯಂತೆ ಬಂದದ್ದು ಮಂಜಿನಂತೆ ಕರಿಗಿ ಹೋಯಿತು. ಭಕ್ತ ಗಣಗಳೆಲ್ಲ ನೆಮ್ಮದಿಯ ನಿಟ್ಟುಸಿರು ಬಿಟ್ಟರು. ಆದರೂ ಅಸಲಿ ಕಳ್ಳರ ಮಾಹಿತಿ ಗುಟ್ಟಾಗಿ ಉಳಿಯಿತು. ಅಂದಿನ ಗರಡಿಯ ಕಾರಣಿಕದ ಸುದ್ದಿ ಎಲ್ಲೆಲ್ಲೂ ಹರಡಿ, ಗರಡಿಗೆ ಬರುವ ಭಕ್ತರ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕಂಡಿತು. ಗರಡಿಯ ಕಳಶಕ್ಕೊಂದು ಚಿನ್ನದ ಗರಿ ಸೇರಿತು. ಗರಡಿಯ ಕೀರ್ತಿ ಪತಾಕೆ ಮೇಲೆ ಮೇಲಕ್ಕೆ ನೆಗೆದು ಎಲ್ಲಡೆ ಹಾರಿ ವಿಜೃಂಭಿಸಿತು.

ಗರಡಿಯ ಕಂಠೀಹಾರ ಕಾಣೆಯಾದ ಮತ್ತು ಅದು ತಿರುಗಿ ಸನ್ನಿಧಾನಕ್ಕೆ ತಲುಪಿದುದರ ಹಿಂದೆ ಕೌತುಕಮಯ, ರೋಚಕ ಮತ್ತು ಸ್ವಾರಸ್ಯಕರ ಸಂಗತಿಯೊಂದಿದೆ.

ಈತನ್ಮಧ್ಯೆ ಸೂರಪ್ಪ ಯಾವುದೋ ಕೆಲಸದ ನಿಮಿತ್ತ ಪೇಟೆಗೆ ಹೋಗಿದ್ದ. ಹೀಗೆ ನಡೆದುಕೊಂಡು ಹೋಗುತ್ತಿರಬೇಕಾದರೆ ಎದುರಿಗೆ ಬರೋವವರನ್ನು ನೋಡು ಎಂದಂತಾಯಿತು. ಎದುರಿನಿಂದ ಒಬ್ಬ ಹೆಂಗಸು ಬರುತ್ತಿದ್ದಳು. ಅವಳ ಕುತ್ತಿಗೆಯಲ್ಲಿ ನೇತಾಡುವ ಸರ ಪಳಕ್ಕನೆ ಹೊಳೆದಂತಾಯಿತು. ಅರೆ ಅದೇ ಕಂಠೀಹಾರ. ಆ ಹಾರವನ್ನು ಒಮ್ಮೆ ನೋಡಿದವರು ಸುಲಭವಾಗಿ ಗುರುತಿಸಬಲ್ಲರು. ಅಲ್ಲದೆ ಅದರ ಪದಕದಲ್ಲಿ ದೈವದ ರೂಪದ ಕೆತ್ತನೆ ಬೇರೆ ಇದೆ. ಸೂರಪ್ಪ ಅವಳನ್ನು ಮಾತಿಗೆ ಎಳೆದು ಸರದ ಬಗ್ಗೆ ವಿಚಾರಿಸಿದ. ಅದು ತನ್ನವರು ಮಾಡಿಸಿ ತಂದ ಉಡುಗೊರೆ ಎಂದು ಅವಲತ್ತುಕೊಂಡಳು. ಸೂರಪ್ಪ ನಿಜ ವಿಷಯ ತಿಳಿಸಿದಾಗ ಹೌಹಾರಿ ದೈವ ಭಯದಿಂದ ಕಂಪಿಸುತ್ತ ಅಳತೊಡಗಿ ನಿಜ ವಿಷಯ ಅರುಹಿದಳು. ಶ್ಯಾಮಪ್ಪನವರು ಆಗಾಗ ಪೇಟೆ ಕಡೆಗೆ ಯಾಕೆ ಹೋಗುತ್ತಾರೆ ಎಂದು ತಿಳಿಯಿತು. ಕೆಲವು ಸಲ ಎರಡೆರೆಡು ದಿನ ನಾಪತ್ತೆಯಾಗುತ್ತಿದ್ದರು. ಪೇಟೆಯಲ್ಲಿ ವಿಧವೆಯೊಬ್ಬಳ ಸ್ನೇಹ ಬೆಳೆಸಿದ್ದರು. ಕರಾಮತ್ತು ತೋರಿಸಿ ಉತ್ಸವದ ದಿನ ಕಂಠೀಹಾರವನ್ನು ಎಗರಿಸಿ ಆಕೆಗೆ ಉಡುಗೊರೆ ನೀಡಿದ್ದರು. ಅದು ತಾನೇ ಅವಳಿಗಾಗಿ ಖರೀದಿಸಿ ತಂದದ್ದು ಎಂದು ಸುಳ್ಳು ಸೇರಿಸಿದ್ದರು. ಶ್ಯಾಮಪ್ಪನ ಕುಕೃತ್ಯ ಹೇಸಿಗೆ ಹುಟ್ಟಿಸಿತು. ಸೂರಪ್ಪ ನಿಜವಾಗಿಯೂ ಇಕ್ಕಟ್ಟಿಗೆ ಸಿಲುಕಿದ. ಒಂದು ಗರಡಿಯ ಪ್ರತಿಷ್ಠೆಯ ಪ್ರಶ್ನೆ, ಎರಡನೇಯದು ಶ್ಯಾಮಪ್ಪನವರ ಗೌರವದ ಪ್ರಶ್ನೆ. ಅವರು ಕೇವಲ ಗರಡಿಯ ಪಾರುಪತ್ಯಗಾರರಲ್ಲ, ಅವನ ಧಣಿ ಕೂಡ. ಆದುದರಿಂದ ಅವನು ಎಂಥವನಾದರೂ ಕೂಡ ಅವನನ್ನು ಉಳಿಸಿಸಬೇಕಾದ್ದು ತನ್ನ ಕರ್ತವ್ಯ ಎಂದು ಬಗೆದ. ಮೂರನೆಯದು ಈಕೆ ಅಮಾಯಕ ಹೆಂಗಸು. ಇದರಲ್ಲಿ ಅವಳ ತಪ್ಪು ಏನೇನೂ ಇಲ್ಲ.

ಸೂರಪ್ಪ ಯೋಚಿಸಿದ. ಹೀಗೆ ಹೀಗೆ ಮಾಡು ಎಂದು ಸಲಹೆ ನೀಡಿದ. ಆಕೆ ಸೂರಪ್ಪನ ಸಲೆಹೆಯಂತೆ ಆ ದಿನ ಹೂವಿನ ಬುಟ್ಟಿಯ ಒಳಗಡೆ ಕಂಠೀಹಾರವನ್ನು ಕೆಂಪು ಬಟ್ಟೆಯಲ್ಲಿ ಸುತ್ತಿ ಹುದುಗಿಸಿ ಯಾರಿಗೂ ತಿಳಿಯದಂತೆ ಹೂವಿನ ಬುಟ್ಟಿಗಳ ಸಾಲಿನಲ್ಲಿ ಇರಿಸಿದ್ದಳು. ಬುಟ್ಟಿಯನ್ನು ಗುರುತಿಸುವ ಸಲುವಾಗಿ ಕೆಂಪು ದಾರವನ್ನು ಬುಟ್ಟಿಯ ಮೇಲೆ ಸುತ್ತಿದ್ದಳು. ಶ್ಯಾಮಪ್ಪನವರು ಕೇಳಿದರೆ ಏನು ಉತ್ತರ ನೀಡಬೇಕೆಂದು ಕೂಡ ಸಲಹೆ ನೀಡಿದ್ದ. ರಾತ್ರಿ ಕನಸಿನಲ್ಲಿ ದೈವ ಬಂದು ಹೆದರಿಸಿ ‘ನೀನು ಧರಿಸಿದ ಕಂಠೀಹಾರ ನನ್ನ ಸನ್ನಿದಿಯಿಂದ ಕಳವು ಮಾಡಿದ್ದು ಅದನ್ನು ಕೂಡಲೇ ಸನ್ನಿದಿಗೆ ತಲುಪಿಸು ತಪ್ಪಿದರೆ ಕಳವು ಮಾಡಿದವರಿಗೂ ಮತ್ತು ನಿನಗೂ ನನ್ನ ಶಕ್ತಿ ಏನೆಂದು ತೋರಿಸುತ್ತೇನೆ......’ ಎಂದಿತು ಎಂದು ಹೇಳು ಎಂದಿದ್ದ. ಇದಕ್ಕೆ ಹೆದರಿದ ನಾನು ಕಂಠೀಹಾರವನ್ನು ಸನ್ನಿದಿಗೆ ತಲುಪಿಸಿ ನಮ್ಮಿಬ್ಬರನ್ನು ದೈವ ಕೋಪದಿಂದ ಬಚಾವು ಮಾಡಿದ್ದೇನೆ ಎಂದು ಹೇಳು.

ಎಲ್ಲ ದೇವೇಚ್ಛೆ. ಸೂರಪ್ಪ ಪೇಟೆಗೆ ಹೋಗಿದ್ದು. ಗೌರಮ್ಮ ಸಿಕ್ಕಿದ್ದು. ಅವಳ ಕೊರಳನ್ನು ನೋಡು ಎಂದಂತೆ ಆಗಿದ್ದು. ಅವಳಿಗೆ ತಾನು ನೀಡಿದ ಸಲಹೆ. ಶ್ಯಾಮಪ್ಪನವರಿಗೆ ನೀಡಬೇಕಾದ ಉತ್ತರ ಹೇಳಿಕೊಟ್ಟಿದ್ದು. ಎಲ್ಲ ದೈವದ ಸೂಚನೆಯಂತೆ ನಡೆದಿದೆ ಎಂಬುದು ಸೂರಪ್ಪನ ತೀರ್ಮಾನ. ತನಗೆ ಈ ರೀತಿ ಮಾಡುವಂತೆ ಪ್ರಚೋದನೆ ನೀಡಿದ್ದೆ ದೈವ. ಕಲಿಗಾಲದಲ್ಲಿ ದೈವಗಳು ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ತಮ್ಮ ಮಹಿಮೆಯನ್ನು ತೋರಿಸುತ್ತವೆ ಎಂಬುದು ಭಕ್ತರ ನಂಬಿಕೆ.

ಪೂರ್ವ ದಿಗಂತ ಅರುಣೋದಯದ ಕೆಂಬಣ್ಣದಿಂದ ಮಿಂಚುತ್ತಾ ದಿನಮಣಿ ಕ್ಷಿತಿಜದಿಂದ ಮೇಲೇರಿ ಬಂದ. ಖಗಕುಲಗಳುಲಿದು ದಿನಾಗಮನದ ಸೂಚನೆ ನೀಡಿದವು. ಎಲೆಗಳ ಮೇಲೆ ಮುತ್ತಿನ ಮಣಿ ಪೋಣಿಸಿಟ್ಟಂತೆ ತುಷಾರ ಬಿಂದುಗಳು ಥಳಗುಟ್ಟುತ್ತಿತ್ತು. ಅಂಬರ ಮಾರ್ಗದಲ್ಲಿ ದಿನದೂಟದ ಸಂಪಾದನೆ ಮಾಡಲು ಹೊರಟಿರುವ ಹಕ್ಕಿಗಳ ಸಾಲು ಸುಂದರ ಚಿತ್ತಾರದಂತೆ ಮನೋಹರವಾಗಿತ್ತು. ದನಕರುಗಳೆಲ್ಲ ಕೊರಳ ಘಂಟೆಯ ಕಿಣಿ ಕಿಣಿ ನಾದದೊಡನೆ ಗುಡ್ಡದ ಕಡೆಗೆ ಮೇಯಲು ಹೊರಟ್ಟಿದ್ದವು. ದೂರದಲ್ಲೆಲ್ಲೋ ಕೌಶಲ್ಯ ಸುಪ್ರಜಾ ರಾಮ ಸಂಧ್ಯಾ ಪ್ರವರ್ತತೇ... ಎಂಬ ಸುಪ್ರಭಾತ ಸುಮಧುರವಾಗಿ ತೇಲಿ ಬರುತ್ತಿತ್ತು. ನಿಕಟ ಭವಿಷ್ಯದಲ್ಲಿ ರಂಗಪ್ರವೇಶ ಮಾಡಲಿರುವ ವರ್ಷ ಕಾಲ ಪೀಠಿಕೆ ಹಾಕಿತ್ತು. ಪರಿಸರದಲ್ಲಿ ಅಸಂಖ್ಯ ಕಾರ್ಯಚಟುವಟಿಕೆಗಳು ಆರಂಭಗೊಂಡು ಅಬ್ಬರದ ವರ್ಷಾರಂಗ ಪ್ರವೇಶಕ್ಕೆ ವೇದಿಕೆ ಅಣಿಗೊಳ್ಳುತ್ತಲಿತ್ತು. ಅದಕ್ಕೆ ಪೂರಕವಾದ ಚೌಕಿ, ವೇಷಭೂಷಣ, ಪ್ರಸಾದನ, ವಸನ, ಹಿಮ್ಮೇಳ, ಮುಮ್ಮೇಳ, ಪೂರ್ವರಂಗ, ಉತ್ತರರಂಗ ಸಜ್ಜುಗೊಳ್ಳುತಿತ್ತು. ಮಂಡೂಕಗಳು ವಟಗುಟ್ಟತೊಡಗಿದ್ದವು. ಮಳೆ ಹಾತೆಗಳು ನೆಲ ಬಗೆದು ಹೊರಬಂದು ದಂಡು ದಂಡಾಗಿ ಹಾರುತ್ತಿದ್ದವು. ಅವುಗಳನ್ನು ಮುಕ್ಕುವ ಸಲುವಾಗಿ ಸರ್ಕಸ್ ನಡೆಸುತ್ತಿರುವ ಖಗಕುಲ. ವರ್ಷಾಘಾತದ ಭೀಕರ ಹೊಡೆತದ ಭೀಷಣತೆಯನ್ನು ಸಹಿಸಲಸಕ್ತವಾದ ಅನೇಕ ಪಕ್ಷಿಗಳು ವಲಸೆ ಹೊರಡುವ ತರಾತುರಿಯಲ್ಲಿದ್ದವು. ವರ್ಷಧಾರೆಯ ಆನಂದ ಅನುಭವಿಸ ಬಯಸುವ ಮುಂಗಟೆ ಮುಂತಾದ ಹಕ್ಕಿಗಳು ವಲಸೆ ಬರಲಾರಂಭಿಸಿದ್ದವು. ಮೊದಲ ಮಳೆಗೆ ಮುದಗೊಂಡರಳಲು ಕಾತರಿಸುತ್ತಿರುವ ಮಲ್ಲಿಗೆಯ ಮೊಗ್ಗು ಎಲ್ಲೆಲ್ಲೂ ನಿಮಿರಿ ನಿಂತ್ತಿತ್ತು. ಅಲ್ಲೊಂದು ಇಲ್ಲೊಂದು ಕಾರ್ಮೋಡಗಳು ಬಾನಿನಲ್ಲಿ ಚಲ್ಲಾಟವಾಡುತ್ತಿದ್ದವು. ರೈತಾಪಿ ಜನರು ಮುಂಗಾರು ಪೂರ್ವ ಕೆಲಸ ಕಾರ್ಯವನ್ನು ಚುರುಕುಗೊಳಿಸಿ ಸಮೃದ್ಧ ಹೊನ್ನಿನ ಫಸಲಿನ ಕನಸು ಕಾಣತೊಡಗಿದ್ದರು.

ಅವರ ಸಂಭಾಷಣೆಗಳಲ್ಲಿ ದೈವದ ಕಾರಣಿಕದ ವಿಷಯವೇ ಮುಖ್ಯವಾಗಿತ್ತು. ಹೂಟೆ ಹೊಡೆಯುವವರ ಹುಯಿಲು ಗುಡ್ಡಕ್ಕೆ ಬಡಿದು ಪ್ರತಿಧ್ವನಿಸುತ್ತ ಕಲಸುಮೇಲೋಗರವಾಗಿತ್ತು. ಶ್ವೇತ ಹಚ್ಚಡವನೊದ್ದ ಬಕ ಪಕ್ಷಿಗಳು ಬೆಳ್ನೊರೆಯ ಕಡಲಿನಲೆಯಂತೆ ಹೂಟೆ ಹೊಡೆಯುವವರನ್ನು ಹಿಂಬಾಲಿಸುತ್ತ ಕ್ರಿಮಿ ಕೀಟಗಳ ಬೇಟೆಯಲ್ಲಿ ತೊಡಗಿದ್ದವು. ಸೂರಪ್ಪ ಭತ್ತದ ಪಾತಿ ತಯಾರಿಸುವಲ್ಲಿ ನಿರತನಾಗಿದ್ದ. ಎತ್ತಲೋ ಹೊರಟಿದ್ದ ಶ್ಯಾಮಪ್ಪನವರು ಸೂರಪ್ಪನನ್ನು ಮಾತಿಗೆ ಎಳೆದು ಏನೋ ದೈವ ಕಂಠೀಹಾರ ಕದ್ದವರ ಹೆಸರು ಹೇಳಲೇ ಇಲ್ಲ ಎಂದಾಗ ನನಗೆ ಏನು ತಿಳಿಯದು ಎಲ್ಲ ದೈವೇಚ್ಛೆ ಎಂದು ಅವಲತ್ತುಕೊಂಡ. ಅವರು ಎಲ್ಲಿಗೆ ಹೊರಟ್ಟಿದ್ದಾರೆ ಎಂದು ಸೂರಪ್ಪನಿಗೆ ಚೆನ್ನಾಗಿ ತಿಳಿದಿತ್ತು. ಹೋಗಿ ಹೋಗಿ ಮುಂದೆ ಇದೆ ನಿಮಗೆ ಮಾರಿ ಹಬ್ಬ ಎಂದು ಮನಸ್ಸಿನಲ್ಲೇ ಅಂದುಕೊಂಡ.

ಅಸಲಿ ವಿಷಯ ಮುಚ್ಚಿಟ್ಟು ಗೌರಮ್ಮ ತನ್ನ ಕನಸಿನಲ್ಲಿ ದೈವ ಬಂದು ಹೆದರಿಸಿದ ಕಟ್ಟು ಕಥೆ ಹೇಳಿದಳು. ದೈವದ ನಗ ತನಗೆ ನೀಡಿದ್ದಕ್ಕಾಗಿ ಚೆನ್ನಾಗಿ ಉಗಿದಳು. ಗೌರಮ್ಮನ ಕನಸಿನ ವಿಷಯ ಕೇಳಿ ಶಾಮಪ್ಪನಿಗೆ ದೈವ ಭೀತಿ ಅವಾರಿಸಿ ನಡುಗಿ ಹೋದ. ಇಷ್ಟು ದಿನ ದೈವ ಎಂದರೆ ಕೇವಲವಾಗಿ ಗಣನೆಗೆ ತೆಗೆದುಕೊಂಡಿದ್ದ. ಏನು ಹೆದರ ಬೇಡಿ ತಪ್ಪೊಪ್ಪಿಕೊಂಡು, ತಪ್ಪು ಕಾಣಿಕೆ ಹಾಕಿ. ಇನ್ನು ಮುಂದೆ ಇಂತ ಕೆಲಸ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿರಿ ಎಲ್ಲ ಸರಿ ಹೋಗುತ್ತೆ ಎಂದು ಸಲಹೆ ನೀಡಿದಳು.

ದಿನಕರ ತನ್ನ ಕಾರ್ಯಕ್ರಮ ಮುಗಿಸಿ ಪಡುಕಡಲಿಗೆ ಉರುಳುವ ಸನ್ನಾಹದಲ್ಲಿ ಇದ್ದ. ಅಂಬಾ ಎನ್ನುತ್ತ ಕೊಟ್ಟಿಗೆಯತ್ತ ಹೊರಟ ರಾಸುಗಳ ಖರಪುಟದ ಟಪ ಟಪ ಸದ್ದು, ಅವುಗಳ ಗೊರಸಿನ ಬಿರುಸಿನ ಚಲನದಿಂದ ಎದ್ದ ಗೋಧೂಳಿ. ಸೂರಪ್ಪ ತನ್ನ ಕೆಲಸ ಮುಗಿಸಿ ಮರಳುವ ಸನ್ನಾಹದಲ್ಲಿದ್ದ, ಆಗ ಎದುರಿನಿಂದ ಶ್ಯಾಮಪ್ಪನವರ ಸವಾರಿ ಬರುವುದನ್ನು ಗಮನಿಸಿ ಮರಳುವ ಕಾರ್ಯಕ್ರಮವನ್ನು ಸ್ವಲ್ಪ ಮುಂದೂಡಿದ. ಮಾರಿ ಹಬ್ಬ ಮಾಡಿಸಿಕೊಂಡು ಬಂದ ಅವರಿಗೆ ಮಜುಗರ ಪಡಿಸಲು ಮನಸಿಲ್ಲದ ಕಾರಣ ಹಾಗೆ ಮಾಡಿದ್ದ. ನೋಡಿದರೆ ಶ್ಯಾಮಪ್ಪನವರು ಅವನನ್ನು ಮಾತನಾಡಿಸದೆ ಅದಾಗಲೇ ಮುಂದೆ ಹೋಗಿದ್ದರು.

ಶ್ಯಾಮಪ್ಪನಿಗೆ ನಟ್ಟಿರುಳು ಕಳೆದರೂ ನಿದ್ದೆ ಸಮೀಪಿಸಲಿಲ್ಲ. ಪದೇ ಪದೇ ಮಗ್ಗುಲು ಬದಲಾಯಿಸುತ್ತಿರುವ ಅವನ ಪರಿ ಕಂಡು ಹೆಂಡತಿ ಏನಾಗಿದೆ ಎಂದು ಕೇಳಿದಾಗ ಏನು ಇಲ್ಲ ಎಂದು ಜಾರಿಕೆಯ ಉತ್ತರ ನೀಡಿದ. ಅಲ್ಪ ಸ್ವಲ್ಪ ನಿದ್ದೆ ಬಂದರೂ ಕೂಡ ಕೆಂಗಣ್ಣು ಬಿಟ್ಟು ಹೆದರಿಸುತ್ತಿರುವ ದೈವದ ರೂಪವೇ ಕಣ್ಣೆದುರು ನಿಂತಂತೆ ಭಾಸವಾಗುತ್ತಿತ್ತು. ಎದ್ದು ಕಿಟಿಕಿಯ ಬಳಿ ನಿಂತ. ತಂಗಾಳಿ ಬಿಸಿ ಹಾಯೆನಿಸಿತು. ಗಾಡಾಂಧಕಾರದ ಕಾಳರಾತ್ರಿ ಭಯಾನಕವಾಗಿತ್ತು. ಆಕಾಶದಲ್ಲಿ ಕಾರ್ಮೋಡಗಳ ಸಾಲಿನ ದಿಬ್ಬಣ ಹೊರಟ್ಟಿತ್ತು. ಮೋಡಗಳ ನಡುವೆ ಆಗೀಗ ಕೋಲ್ಮಿಂಚು ಪಳ್ಳನೆ ಹೊಳೆದು ಪ್ರಕಾಶ ಬೀರುತ್ತಿತ್ತು. ಅಲ್ಲೊಂದು ಇಲ್ಲೊಂದು ತಾರೆಗಳು ಮಿನುಗುತ್ತಿದ್ದವು. ತಿಂಗಳಿನ ಸುಳಿವಿಲ್ಲ. ತರುಲತೆ ಮತ್ತು ಪೊದೆಗಳ ಮೇಲೆ ಅಗಣಿತ ಮಿಂಚುಳುಗಳು ಬೆಳಕು ಚೆಲ್ಲುತ್ತಾ ದೀಪಾಲಂಕಾರ ಮಾಡಿದಂತೆ ಭಾಸವಾಗುತ್ತಿತ್ತು. ಆಲದ ಮರದ ಮೇಲೆ ಗೂಬೆಯೊಂದು ಹೂಂಗುಡುತ್ತಿತ್ತು. ದಿನಾಲೂ ಕೇಳಿ ಅನುಭವಿಸುತ್ತಿರುವ ಇಂತಹ ಅಸಂಖ್ಯ ಇರುಳಿನ ಚಟುವಟಿಕೆಗಳು ಇಂದು ಶ್ಯಾಮಪ್ಪನ ಎದೆ ಒಳಗೆ ಭೀತಿ ಹುಟ್ಟಿಸತೊಡಗಿದ್ದವು. ತಾನಂದು ಎಲ್ಲರ ಗಮನ ಬೇರೆಡೆ ಇರುವಾಗ ಕೈಚಳಕ ತೋರಿಸಿ ಕಂಠೀಹಾರವನ್ನು ಎಗರಿಸಿದ್ದು, ಹೂವಿನ ಬುಟ್ಟಿಯೊಳಗಿಂದ ಕಂಠೀಹಾರ ಪ್ರತಕ್ಷವಾದಾಗ ಹೌಹಾರಿ ಹೆದರಿ ತರಗುಟ್ಟಿದ್ದು ಎಲ್ಲರ ಗಮನ ಅತ್ತ ಕಡೆ ಇರುವುದರಿಂದ ಯಾರು ನನ್ನ ತಳಮಳ ಗಮನಿಸದೆ ಹೋಗಿದ್ದು, ಅಲ್ಲಿಂದ ಕಾಲ್ಕಿಳುವ ಮನಸ್ಸು ಕೂಡ ಮಾಡಿದ್ದೂ, ಪ್ರಕರಣ ಸುಖಾಂತವಾಗಿ ತಾನು ಬಚಾವಾಗಿದ್ದು ನೆನಪಿಗೆ ಬಂತು. ಅಲ್ಲದೆ ಸೂರಪ್ಪನಿಗೆ ತಾಕೀತು ಮಾಡಿ ಕಂಠೀಹಾರದ ಕಳ್ಳತನವನ್ನು ರಾಮಪ್ಪನ ಮೇಲೆ ಹಾಕುವ ಹುನ್ನಾರು ಕೂಡ ನಡೆಸಿದ್ದ. ಆದರೆ ಅದರಿಂದ ತನ್ನ ಮೇಲೆ ಸಂಶಯ ಬರುವ ಸಾಧ್ಯತೆ ಇತ್ತು ಮತ್ತು ಸೂರಪ್ಪನ ಮೇಲೆ ಬರುವ ದೈವ ಇವನ ಆದೇಶವನ್ನು ಪಾಲಿಸುವ ನಂಬಿಕೆ ಇರಲಿಲ್ಲ. ರಾಮಪ್ಪ ಶ್ಯಾಮಪ್ಪನ ಬದ್ಧ ವೈರಿ. ಒಮ್ಮೆ ಜಮೀನಿನ ವಿಚಾರದಲ್ಲಿ ಇಬ್ಬರಿಗೂ ಜಟಾಪಟಿ ನಡೆದಿತ್ತು. ಅವನ ಮೇಲೆ ಸೇಡು ತೀರಿಸಿಕೊಳ್ಳಲು ಸಮಯ ಕಾಯುತ್ತಿದ್ದ.

ತಳಮಳದಿಂದ ಶ್ಯಾಮಪ್ಪ ಮನೆಯ ಪ್ರಾಗಂಣದಲ್ಲಿ ಶತಪಥ ಹೆಜ್ಜೆ ಹಾಕುತ್ತಿದ್ದ. ಹೆಂಡತಿ ಏನಾಗಿದೆ ಇವರಿಗೆ ಕಂಠೀಹಾರದ ಪ್ರಕರಣಕ್ಕೂ ಇವರ ತಳಮಳಕ್ಕೂ ಏನಾದರು ಸಂಬಂಧ ಇದೆಯೋ ಎಂದು ಯೋಚಿಸಿದಳು. ಹಾಗೆ ಇರಲಿಕ್ಕಿಲ್ಲ ಎಂದು ತನಗೆ ತಾನೇ ಸಮಾಧಾನ ಮಾಡಿಕೊಂಡಳು. ಶ್ಯಾಮಪ್ಪನ ಹೀನ ಕೃತ್ಯದ ಒಳಗುಟ್ಟು ಅವಳಿಗೆ ತಿಳಿಯಲೇ ಇಲ್ಲ. ಒಂದು ವೇಳೆ ತಿಳಿದುಹೋಗಿದ್ದರೆ ದೊಡ್ಡ ಹಗರಣವೇ ನಡೆದು ಹೋಗುತಿತ್ತು. ಅವನನ್ನು ಸಾಚಾ ಮನುಷ್ಯ ಎಂದು ತಿಳಿದುಕೊಂದು ದೊಡ್ಡ ತಪ್ಪು ಮಾಡಿದ್ದಳು.

ಬೈಗಪ್ಪು ಇಳಿದು ತಿಮಿರವನೊದ್ದ ನಿಶೆಯ ನಶೆ ಆವರಿಸಿತು. ಸುಮಾರು ರಾತ್ರಿ ಕಳೆದು ಜನ ಸಂಚಾರ ಸ್ಥಗಿತಗೊಂಡ ಮೇಲೆ ಶ್ಯಾಮಪ್ಪ ದೈವ ಗರಡಿಗೆ ಗುಟ್ಟಾಗಿ ಹೋದ. ಎಂದೂ ದೈವಕ್ಕೆ ಕೈ ಮುಗಿಯದವ ಉದ್ದಂಡವಾಗಿ ಅಡ್ಡ ಬಿದ್ದು ತಪ್ಪೊಪ್ಪಿಕೊಂಡು, ತಪ್ಪು ಕಾಣಿಕೆ ಹಾಕಿದ. ಬಾರಿ ಬಾರಿಯಾಗಿ ಕ್ಷಮೆ ಕೇಳಿದ. ಇನ್ನು ಮುಂದೆ ಇಂತಹ ಹೀನ ಕೆಲಸ ಮಾಡುವುದಿಲ್ಲ ಎಂದು ಪ್ರಮಾಣ ಮಾಡಿದ. ತುಸು ನಿರಾಳನಾಗಿ ಮನೆಗೆ ಹಿಂದುರುಗಿದ. ಅವರು ಇಷ್ಟು ರಾತ್ರಿ ಹೊತ್ತಿಗೆ ಎಲ್ಲಿಗೆ ಹೋಗಿದ್ದರು ಎಂದು ಹೆಂಡತಿಗೆ ಮತ್ತೊಮ್ಮೆ ಸಂಶಯ ಬಂತು. ಕೇಳಿದರೆ ತೋಟದ ಕಡೆ ಏನೋ ಸದ್ದಾಯಿತು ಅದಕ್ಕೆ ನೋಡಿ ಬರಲು ಹೋದೆ ಎಂದು ಹಾರಿಕೆಯ ಉತ್ತರ ಕೊಟ್ಟ.

ಅಂದಿನಿಂದ ಶ್ಯಾಮಪ್ಪನ ನಡವಳಿಕೆಗಳಲ್ಲಿ ಬದಲಾವಣೆ ಕಾಣ ತೊಡಗಿತು. ಭಯ ಭಕ್ತಿಯಿಂದ ದೈವಗಳನ್ನು ಆರಾದಿಸತೊಡಗಿದ. ಗರಡಿಯ ಆದಾಯದ ಒಂದು ಪೈಸೆ ಕೂಡ ಮುಟ್ಟುವ ಗೋಜಿಗೆ ಹೋಗಲಿಲ್ಲ. ಗರಡಿಯ ನಗಗಳನ್ನು ಬಾಡಿಗೆಗೆ ಕೊಟ್ಟು ಬಾಡಿಗೆ ವಸೂಲಿ ಮಾಡಿ ಗುಳುಂ ಮಾಡುವ ಕಾರ್ಯಕ್ರಮ ನಿಲ್ಲಿಸಿದ. ಆಡಳಿತ ಮಂಡಳಿಯ ಒಪ್ಪಿಗೆ ಪಡೆದು ಗರಡಿಯ ನಗಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಇಟ್ಟು ನಿಟ್ಟುಸಿರು ಬಿಟ್ಟು ನಿರಾಳನಾದ. ನಗಗಳನ್ನು ತನ್ನ ಬಳಿ ಇರಿಸಿಕೊಂಡರೆ ಮತ್ತೆ ಮಾನವ ಸಹಜ ದುರಾಸೆಯ ಕೂಪಕ್ಕೆ ಬೀಳಬಹುದು ಎಂದು ಹೆದರಿದ್ದ. ಹಾಗೆ ಮಾಡಲು ಇತ್ತೀಚಿಗೆ ನಡೆದ ಕಂಠೀಹಾರದ ಪ್ರಕರಣದ ನೆಪ ಒಡ್ಡಿದ. ಹಿಂದೊಮ್ಮೆ ಆಡಳಿತ ಮಂಡಳಿ ನಗಗಳನ್ನು ಬ್ಯಾಂಕ್ ಲಾಕರ್‌ನಲ್ಲಿ ಇಡುವ ಪ್ರಸ್ತಾಪ ಮಾಡಿದಾಗ: ಇದೆ ಶಾಮಪ್ಪ ಏನೇನೋ ಕುಂಟು ನೆಪ ಹೇಳಿದ್ದ. ಆಗ ನಿಜ ಕಾರಣ ಬೇರೆ ಇತ್ತು ಬ್ಯಾಂಕ್ ಲಾಕರ್‌ನಲ್ಲಿ ಇಟ್ಟರೆ ತನ್ನ ಬಾಡಿಗೆ ದಂದೆಗೆ ಕೊಕ್ಕೆ ಬೀಳುತ್ತದೆ. ಹಾಗೆ ಸೂರಪ್ಪನನ್ನು ಗೌರವ ಆದರಗಳಿಂದ ನೋಡ ತೊಡಗಿದ. ಸೂರಪ್ಪನ ದೈವ ನಿರ್ಣಯದ ವಿಷಯದಲ್ಲಿ ಮೂಗು ತೂರಿಸುವ ಕಾರ್ಯಕ್ಕೂ ಕೂಡ ಸಂಪೂರ್ಣ ತಿಲಾಂಜಲಿ ಇತ್ತ.

ಮೇಲೆ ನಡೆದ ಘಟನೆಗಳು ವಿಚಾರವಂತರಿಗೆ ಕಾಕತಾಳೀಯವಾಗಿ ಕಂಡರೂ, ದೈವ ಭಕ್ತರಿಗೆ ಅದು ಕಾರಣಿಕ. ಅದರಿಂದ ಎಲ್ಲ ಒಳ್ಳೇದೇ ಆಯಿತು. ಒಂದು ಗರಡಿಯ ವರ್ಚಸ್ಸು ಉಳಿದು ಕೀರ್ತಿ ಹೆಚ್ಚಿದ್ದು, ಮುಖ್ಯವಾಗಿ ಶ್ಯಾಮಪ್ಪ ಸುಧಾರಿಸಿದ್ದು. ಗೌರಮ್ಮನನ್ನು ಅಪಾದನೆಯಿಂದ ಕಾಪಾಡಿದ್ದು. ಸೂರಪ್ಪ ಬಯಸಿದ್ದರೆ ಶ್ಯಾಮಪ್ಪ ಮತ್ತು ಗೌರಮ್ಮನ ಮಾನ ಹರಾಜು ಮಾಡಬಹುದಿತ್ತು. ಆದರೆ ಹಾಗೆ ಮಾಡದೇ ಸಮಯ ಪ್ರಜ್ಞೆ ಮರೆದಿದ್ದ.

ದೈವದ ಭಯವೇ ಧರ್ಮದ ಮೂಲ ಎಂಬುದು ಸರ್ವ ವಿದಿತ ಮತ್ತು ಸಾರ್ವಕಾಲಿಕ ಸತ್ಯ. ಶ್ಯಾಮಪ್ಪನ ಪ್ರಕರಣ ಅದಕೊಂದು ಸ್ಪಷ್ಟ ಉದಾಹರಣೆಯಾಗಿದೆ. ಶ್ಯಾಮಪ್ಪ ಧರ್ಮವಂತನಾಗಲು ದೈವದ ಭಯವೇ ಕಾರಣ ಅಲ್ಲವೇ?.

ಆ ದಿನ ನೋಡ ನೋಡುತ್ತಾ ಬಿರುಸಿನ ಗಾಳಿ, ಮಿಂಚು, ಗುಡುಗುಗಳ ಸಮೇತ ಮೊದಲ ಮಳೆ ಕಾಲಿರಿಸಿತು. ಬಿರುಗಾಳಿಯ ಹೊಡೆತಕ್ಕೆ ತೆಂಗಿನ ಕಂಗಿನ ಮರಗಳು ಗೋಲಾಕರವಾಗಿ ತೋಗುತ್ತ ಮುರಿದು ಬೀಳುವಂತೆ ಕಾಣುತ್ತಿತ್ತು. ತರಗೆಲೆ ಮತ್ತು ದುರ್ಬಲ ರೆಂಬೆಕೊಂಬೆಗಳೆಲ್ಲ ರಪರಪನೆ ಮುರಿದು ಬಿದ್ದವು. ಒಂದೆರೆಡು ಕ್ಷೀಣ ಮರಗಳು ಕೂಡ ಧರೆಶಾಯಿಯಾದವು. ಟಪಟಪನೆ ಬೀಳತೊಡಗಿದ್ದ ಮಳೆಹನಿಗಳು ಬಿರುಸುಗೊಂಡು ದೋ ಎಂದು ಸುರಿಯತೊಡಗಿತು. ಬಣ್ಣದ ವೇಷದ ಆರ್ಭಟದಂತೆ ವರುಣರಾಯ ಅಬ್ಬರದ ವರ್ಷರಂಗ ಪ್ರವೇಶ ಮಾಡಿ ವೀರರಸ ಸನ್ನಿವೇಶ ಸ್ರಷ್ಟಿಸಿದ. ಹಿಮ್ಮೇಳದಲ್ಲಿ ಗುಡುಗಿನ ಸದ್ದು, ಮಿಂಚಿನ ಬೆಳಕು, ಗಾಳಿಯ ಹೊಡೆತ ಜೊತೆಗೂಡಿದವು. ಮಂಡೂಕರಾಯರ ವಟಗುಟ್ಟುವಿಕೆ ತಾರಕಕ್ಕೇರಿತ್ತು. ಘಮ್ಮೆನ್ನುವ ಮಣ್ಣಿನ ಸುವಾಸನೆ ಸುತ್ತಲೂ ಪಸರಿಸಿತು. ಮೊದಲ ಮಳೆಗೆ ಮುದಗೊಂಡು ಅರಳಿ ನಿಂತ ಮಲ್ಲಿಗೆಯ ಪರಿಮಳ ಆಹ್ಲಾದಕರವಾಗಿತ್ತು. ಬೇಸಿಗೆಯ ಬಿಸಿಲಿನ ತಾಪದಿಂದ ಕಾದು ಕಬ್ಬಿಣವಾದ ನೆಲ ಯಥೇಷ್ಟವಾಗಿ ಜಲಪಾನಗೈದಿತು. ಕೆರೆ, ಬಾವಿ, ಹಳ್ಳ, ಕೊಳ್ಳ, ತೋಡು, ತೊರೆಗಳು ಜಲಾವೃತವಾಗಿ ತುಂಬಿ ತುಳುಕತೊಡಗಿದವು. ಒಂದೆರಡು ದಿನಗಳಲ್ಲಿ ದಿಗ್ಗನೆ ಹಸಿರೊಡೆದ ನಯನ ಮನೋಹರ ದ್ರಶ್ಯ ತುಂಬಿಕೊಂಡಿತು. ತರುಲತೆಗಳು ವರ್ಷಧಾರೆಯಲ್ಲಿ ಮಿಂದು ಪುಳಕಗೊಂದವು.

ಮಾರನೇ ದಿನ ಬೆಳ್ಳಂಬೆಳಿಗ್ಗೆ ನವಿರು ಬಿಸಿಲು ಮಳೆ ಬೀಳುತಿತ್ತು. ಪಡುವಣ ಬಾನಿನಲ್ಲಿ ಕಾಮನ ಬಿಲ್ಲು ಬಣ್ಣಗಳ ಚಿತ್ತಾರ ಮೂಡಿಸಿತ್ತು. ಕುಳಿರ್ಗಾಳಿ ಹಿತವಾಗಿ ಬೀಸುತ್ತಿತ್ತು. ಬಿಸಿಲು ಮಳೆ ಬಂದರೆ ನರಿಯಣ್ಣನ ದಿಬ್ಬಣ ಹೋಗುತ್ತಿದೆ ಎಂಬುದು ಜನರ ಅಂಬೋಣ. ರೈತಾಪಿ ಜನರು ಹೊಲ ಗದ್ದೆಗಳ ಕೆಲಸದ ವೇಗವನ್ನು ಇಮ್ಮಡಿಗೊಳಿಸಿದ್ದರು. ಸೂರಪ್ಪ ಬಿತ್ತನೆ ಕಾರ್ಯದಲ್ಲಿ ತೊಡಗಿದ್ದ. ಗದ್ದೆಯ ತೆವಲಿನ ಮೇಲೆ ನಿಂತಿದ್ದ ಶ್ಯಾಮಪ್ಪ ಸೂರಪ್ಪನೊಡನೆ ಆತ್ಮೀಯವಾಗಿ, ನಿರ್ಮಲ ಮನಸ್ಸಿನಿಂದ ಮಾತಿಗಿಳಿದಿದ್ದ. ಮೊದಲ ಮಳೆಗೆ ತೊಳೆದು ಹೋದ ಕೊಳೆಯಂತೆ ಶ್ಯಾಮಪ್ಪನ ಗುಣ ಮತ್ತು ವರ್ತನೆಗಳಲ್ಲಿ ಪರಿಶುದ್ಧತೆ ಎದ್ದು ಕಾಣುತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT