ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಪದೀಯ ನಂಬಿಕೆ ಮೂಢನಂಬಿಕೆಗಳ ನಡುವೆ

ಜನಪದ
Last Updated 24 ನವೆಂಬರ್ 2018, 19:46 IST
ಅಕ್ಷರ ಗಾತ್ರ

ಜನಪದ ಸಾಹಿತ್ಯದಲ್ಲಿ ತಾಯಿ– ಮಗ, ತಾಯಿ- ಮಗಳು, ಗಂಡ- ಹೆಂಡತಿ ಇವರ ಸಂಬಂಧಗಳನ್ನು ಕುರಿತ ವಿಷಯಗಳು ಚೆನ್ನಾಗಿರುತ್ತವೆ. ಅದರ ಮೌಢ್ಯ ಇತ್ಯಾದಿಗಳು ಬಂದಾಗ ಖಂಡಿಸಬೇಕು ಎಂದು ಕುವೆಂಪು ಎಚ್ಚರಿಸಿದ್ದಾರೆ. ಈ ಮಾತು ಆಚರಣೆ ಇತ್ಯಾದಿ ಸಂಸ್ಕೃತಿ ಅಧ್ಯಯನಕ್ಕೂ ಅನ್ವಯಿಸುತ್ತದೆ. ಮೊನ್ನೆ ದೀಪಾವಳಿ ಮಾರನೆ ದಿನ ಒಂಬತ್ತು ದಿನವಷ್ಟೆ ತೆರೆದಿದ್ದ ಹಾಸನಮ್ಮನ ಗುಡಿ ಬಾಗಿಲು ಮುಚ್ಚಿತು. ಅಮ್ಮನು ವಲ್ಮೀಕ, ಉದ್ಭವಮೂರ್ತಿ. ಆಗಮೋತ್ತರವಾದ ದೇವಸ್ಥಾನವಲ್ಲ. ಪೂರ್ವದ ರಹಸ್ಯವಾದ ಪರಂಪರಾಗತ ಮಂತ್ರ ಗುಪ್ತಮಂತ್ರಗಳಿಂದ ಪೂಜೆ ನಡೆಯುತ್ತದೆ ಎನ್ನುವರು.

ಈ ಅಮ್ಮನ ಕಥನ ಪುರಾಣಗಳಂತೆ ಈಕೆ ಸಪ್ತಮಾತೃಕೆಯರಲ್ಲಿ ಒಬ್ಬಳು. ಈಕೆಯ ಅಕ್ಕತಂಗಿಯರಲ್ಲಿ ಮಲೆನಾಡಿನ ಕೆಂಚಮ್ಮ, ಅರೆಮಲೆನಾಡಿನ ಸೀಗೆದಮ್ಮ ಇದ್ದರೆ ಅದೃಶ್ಯವಾಗಿ ಇದೇ ಹಾಸನ ದೇವಗೆರೆಯಲ್ಲಿ ಉಳಿದವರು ಇದ್ದಾರೆನ್ನುವುದುಂಟು. ಸಿಂಹಾಸನಪುರಿ ಎಂಬುದರಿಂದ ಹಾಸನ ಹೆಸರು ಬಂತು ಎನ್ನುವರು. ಅಸೈ+ಅಣೈ= ಅಡವಿ ಸ್ಥಳ (ಆಸನ=ಹಾಸನ) ಎಂಬುದು ಸರಿಯಾದ ನಿಷ್ಪತ್ತಿ. ಹಾಸನ ಸೀಮೆ ಮಹಾ ಕಾಡಾಗಿತ್ತು. ಮಲ್ಲಿಕಾಫರ್ ಸೇನೆ ಬೀಡು ಬಿಟ್ಟಿತ್ತು.ಹೆಜ್ಜೆ ಸಪ್ಪಳವಾಗಿ ಮಲ್ಲಿಕಾಫರ್ ತಿರುಗಿ ನೋಡಲಾಗಿ ಕಾಣದಾದಳಂತೆ. ಪುನಃ ಆಕೆ ಆತನ ಕನಸಿಗೆ ಬಂದು ಗುಡಿ ಕಟ್ಟಿಸಿಕೊಂಡಳಂತೆ.

ಈ ಮೇಲಿನ ವಿಚಾರಗಳಲ್ಲಿ ಸಾಂಸ್ಕೃತಿಕ ಚರಿತ್ರೆಯಿದೆ. ಜನಪದೀಯ ನಂಬಿಕೆಗಳಿವೆ. ವೇದ, ಆಗಮಗಳ ಪೂರ್ವ ಪಳೆಯುಳಿಕೆಗಳಿವೆ. ಮಾನವ ಇತಿಹಾಸದ ಪೂರ್ವ ಕುರುಹುಗಳಿವೆ. ಚಾರಿತ್ರಿಕ ಅಂಶಗಳಿವೆ. ಕ್ರೂರಿಯಾದರೂ ಮಲ್ಲಿಕಾಫರ್ ಅಮ್ಮನ ಗುಡಿ ಕಟ್ಟಿಸಿದ ಭಾರತೀಯ ಮತೀಯ ಹೊಂದಾಣಿಕೆಗಳಿವೆ. ಯಥಾಪ್ರಕಾರ ಹಿಂದೂ ಸಂಪ್ರದಾಯದ ಪುರೋಹಿತ ಹಿಡಿತಗಳಿವೆ. ಗಾಂಧೀಜಿ ಹೇಳುವಂತೆ ನಂಬಿಕೆ ಎಂಬುದು ಮಾನವನು ಬದುಕಲು ನೆರವಾಗುವ ಶಕ್ತಿ. ಪೂಜೆ, ಪ್ರಾರ್ಥನೆ ಮಾಡದೆ ಇರುತ್ತಿದ್ದರೆ ನಾನು ಎಂದೋ ಹುಚ್ಚನಾಗಿ ಬಿಡುತ್ತಿದ್ದೆನೇನೋ ಎಂಬ ಮಾತಿನ ಎಳೆಯಲ್ಲಿ ಈ ಅಮ್ಮನ ನಿಜಭಕ್ತರನ್ನು ನೋಡಬಹುದು. ಮೂಲತಃ ನಿಸರ್ಗದೊಡನೆ ಬಾಳುವ ಮಾನವ ಸುತ್ತಲಿನ ಅಚ್ಚರಿಗಳನ್ನು ನಂಬತೊಡಗಿದ.

ದ್ರಾವಿಡ ಸಂಪ್ರದಾಯದಲ್ಲಿ ಪೂಜೆ ಎಂಬುದಿತ್ತು. ಇದು ಮಾತೃ ಮೂಲದಲ್ಲಿ ನೆಲೆಗೊಂಡಿತ್ತು. ಆಗಿನ ಪೂಜಾ ವಿಧಾನಗಳೆಲ್ಲವನ್ನೂ ಹೆಣ್ಣೇ ಮಾಡುತ್ತಿದ್ದಳು. ಕಾಲಘಟ್ಟದಲ್ಲಿ ಗಂಡಿನ ಸ್ವತ್ತಾಯಿತು. ನಂಬಿಕೆ ಮನುಷ್ಯನಿಗೆ ಬೇಕು. ಅದು ದೇವರ ನಡಿಗೆಯಷ್ಟು ಸರಳವಾಗಿರಬೇಕು. ಅದರಲ್ಲಿ ಮೌಢ್ಯವನ್ನು ಆಚೆಗಿಡಬೇಕೆಂಬುದು ಗಾಂಧೀಜಿ, ಕುವೆಂಪು ನಂಬಿಕೆ ಕೂಡ.ವರ್ಷಕ್ಕೊಮ್ಮೆ ಭಕ್ತಕುಲಕ್ಕೆ ಮುಖ ತೋರುವ ಈಕೆಯ ಗುಡಿಯ ಸುತ್ತ ಅನೇಕ ವಿಚಾರಗಳಿವೆ.

ಜಾನಪದ ಶಾಸ್ತ್ರದಲ್ಲಿ ಪುರಾವಸ್ತುಶಾಸ್ತ್ರ(ಆ್ಯಂಟಿಕ್ಲೋರ್) ಎನ್ನುವ ವಿಧಾನವಿದೆ. ಇದು ಚರಿತ್ರೆ, ಐತಿಹ್ಯ, ಪುರಾಣಗಳಿಂದ ಜನಪದೀಯ ಅಂಶಗಳನ್ನು ಬಿಡಿಸಿಕೊಳ್ಳುವ ವಿಧಾನ. ಇಲ್ಲಿನ ಗುಡಿ ಆವರಣದಲ್ಲಿ ಸಿದ್ಧೇಶ್ವರನ ಗುಡಿಯಿದೆ. ಅಲ್ಲಿನ ಶಿಲ್ಪದಲ್ಲಿ ಶಿವ ನಗ್ನದೇಹಿ. ಕೈಕಡಗಳು ರುಂಡವುಳ್ಳ ತೋಳ ಬಂದಿಗಳೂ ಅವನವು. ಪಾನಪಾತ್ರೆ ಹಿಡಿದ ಸ್ತ್ರೀ ಅಲ್ಲಿದ್ದಾಳೆ. ಕಿರಾತನಂತೆ ಕಾಣುವ ಪುರುಷ ವಿಗ್ರಹ ಕೂಡ ಅಲ್ಲಿದೆ. ನಾಯಿ ಕೆತ್ತನೆಯಿದೆ. ಇವು ಬೇಟೆಯುಗದ ಕುರುಹುಗಳಾಗಿವೆ. ಇದೆಲ್ಲವೂ ಭೈರವ ರೂಪದ ಸುರಾಶಕ್ತಿ; ಶಿವೋ ಮಾಂಸ ಎಂಬ ಮಾತಿನ ಪ್ರತಿರೂಪಗಳಾಗಿವೆ. ಇದೆಲ್ಲವೂ ತಂತ್ರಮೂಲದ ಜಗತ್ತಿಗೆ ಕೊಂಡೊಯುತ್ತದೆ. ಈಗ ಯಾವ ಅರಿವು ಆಳಗಳೂ ಅಲ್ಲಿ ಉಳಿದಿಲ್ಲದಿರಬಹುದು.

ಹಾಸನಾಂಬೆ
ಹಾಸನಾಂಬೆ

ನಾವು ಕಂಡಂತೆ ದೀವಳಿಗೆ ಹಬ್ಬದ ಹಿಂದಿನ ವಾರ ಹಾಗೂ ದೀವಳಿಗೆ ದಿನದ ಹಾಸನದಮ್ಮ ತೇರಿಗೆ ಸುತ್ತಲಿನ ಜನ ಹೋಗಿ ಅಮ್ಮನ ದರ್ಶನ ಪಡೆಯುತ್ತಿದ್ದರು. ಅದು ಕೇವಲ ಕಾಪಾಡುವ ದೇವರು ಎಂಬುದರ ಸರಳ ನಂಬಿಕೆ ಹಂತದಲ್ಲಿತ್ತು. ಗುಡಿ ಬಾಗಿಲು ಹಾಕುವಾಗ ಹಚ್ಚಿದ್ದ ಹಣತೆ, ಎಡೆ ಹಾಕಿದ ಅನ್ನ, ಮುಡಿಸಿದ ಹೂ, ಮುಂದಿನ ವರ್ಷ ಬಾಗಿಲು ತೆರೆದಾಗಲೂ ಯಥಾರೀತಿ ಹಾಗೇ ಇರುತ್ತವೆ ಎನ್ನುತ್ತಾರೆ. ಈ ಮೌಢ್ಯದ ಬಗೆಯೇ ಈಗ ಕಾಲಕಳೆದಂತೆ ಪ್ರಶ್ನಿತವಾಗುತ್ತಿರುವುದು. ಹಾಸನದಮ್ಮನ ಗುಡಿ ಆವರಣದಲ್ಲಿ ಮತ್ತೆರಡು ವಿಶೇಷಗಳಿವೆ. ಒಂದು ಕಳ್ಳನ ಗುಡಿ; ಮತ್ತೊಂದು ಸೊಸೆಕಲ್ಲು. ಅಮ್ಮನ ಒಡವೆ ಕದಿಯಲು ಬಂದ ಕಳ್ಳನಿಗೆ ಜ್ಞಾನೋದಯವಾಯಿತಂತೆ. ಮುಂದೆ ಅವನು ಕಳ್ಳತನ ಬಿಟ್ಟು ಆಕೆಯ ಭಕ್ತನಾದನಂತೆ. ಹಾಗಾಗಿ ಆ ಕಳ್ಳನಿಗೂ ಪೂಜೆ. ಅತ್ತ ಮನೆಸೊಸೆ ಹಿಂಸೆ ತಡೆಯ–ಲಾರದೆ ಅಮ್ಮನ ಗುಡಿಯ ಮುಂದೆ ಧ್ಯಾನದಲ್ಲಿ ಕುಳಿತಿದ್ದಳಂತೆ. ಅಲ್ಲಿಗೂ ಬಂದ ಅತ್ತೆ ತಲೆ ಮೇಲೆ ಕುಕ್ಕಿದಳಂತೆ. ಸೊಸೆ ಕಲ್ಲಾದಳಂತೆ. ಈ ಮೇಲಿನ ಎರಡು ನಂಬಿಕೆಗಳನ್ನು ಮೌಢ್ಯಕ್ಕೆ ಸೇರಿಸಬೇಕೆ ಎಂಬುದು ಚರ್ಚಿಸುವ ಅಂಶ. ಪಾಪಿಗುದ್ಧಾರಮಿಹುದು ಎಂಬುದು ಕುವೆಂಪು ತತ್ವ. ಕಳ್ಳನಿಗೂ ಪೂಜೆ ಇದನ್ನು ಧ್ವನಿಸುತ್ತದೆ. ಸೊಸೆ ಕಲ್ಲಾದುದರಲ್ಲಿ ಸಹಾ ಪರರ ಮನೆಯ ಹೆಣ್ಣು ತಂದು ಬಾಳಿಸಲಾರದ ಅತ್ತೆಯು ತಿದ್ದಿಕೊಳ್ಳುವ ತತ್ವ ಇದೆಯೆಂದು ಸೂಚಿಸುತ್ತದೆ. ಅಂದರೆ ಪೂಜಾ ವಿಧಾನದಲ್ಲಿ ಹುಟ್ಟುಹಾಕಿರುವ ಉರಿಯುವ ದೀಪ, ಹಳಸದ ಅನ್ನ, ಬಾಡದ ಹೂವು ಇವು ಮೌಢ್ಯ ವರ್ಗಾವಣೆಯ ಕುರುಹುಗಳಾದರೆ ಕಳ್ಳನ ಗುಡಿ, ಸೊಸೆಕಲ್ಲು ನಂಬಿಕೆಯ ವಿಧಾನಗಳಾಗಿವೆ.

ಹಾಸನದಮ್ಮನ ಸುತ್ತಲಿನ ರೈತಾಪಿಯು ಮೇಲಿನ ನಂಬಿಕೆಯಲ್ಲಿ ಇರುತ್ತಿತ್ತೇ ವಿನಃ ಮೌಢ್ಯಗಳನ್ನು ಅಷ್ಟಾಗಿ ಸ್ವೀಕರಿಸುತ್ತಿರಲಿಲ್ಲ. ಮೌಢ್ಯದ ಭಾಗವನ್ನು ಜನ ಹೌದೆ ಎಂದು ಉದಾಸೀನ ಮಾಡುತ್ತಿತ್ತು. ಇತ್ತೀಚಿನ ಅಲ್ಲಿನ ಅರ್ಚಕರೊಬ್ಬರ ಮಾತಿನಂತೆ ನಾವೇನೂ ದೀಪ, ಅನ್ನ, ಹೂವು ಕುರಿತು ಎಲ್ಲೂ ಹೀಗೆ ಹೇಳಿಲ್ಲ. ಮಡಿವಾಳರವನು ಮುನ್ನ ದೀಪ ಹಚ್ಚಿ ಎಡೆ ಮಾಡಿ ಹೂ ಮುಡಿಸಿ ಬರುತ್ತಾನೆ ಎನ್ನುವುದರಲ್ಲಿ ವಾಸ್ತವವಿದೆ. ಇಲ್ಲಿ ಗಮನಿಸಬೇಕಾದ ಸೂಕ್ಷ್ಮವೆಂದರೆ ಕಾಯಕ ಜೀವಿಯಿಂದ ಅಮ್ಮನ ಪೂಜೆ. ಈ ಕೆಳಜಾತಿಯ ಪೂಜಾ ಹಕ್ಕುಗಳು ಬಹುತೇಕ ಗ್ರಾಮ ದೇವತಾ ಮೂಲದಲ್ಲಿ ಈಗಲೂ ಉಂಟು. ವರ್ತಮಾನದಲ್ಲಿ ದೇವರ ಮುಂದೆ ಕುಳಿತು ಧ್ಯಾನದಲ್ಲಿ ನೆಮ್ಮದಿ ತಂದುಕೊಳ್ಳುವ ಗಾಂಧಿ, ಕುವೆಂಪು ಮಾದರಿ ಈಗ ಕಳಚಿದೆ. ಮೌಢ್ಯದ ಬುಟ್ಟಿಯೊಳಗೆ ಧನಿಕರು ಪಾಪ ಪರಿಹಾರಕ್ಕೆಂದು ತುಂಬುವ ಹಣ ನೋಡಿ ಜನಸಾಮಾನ್ಯರೂ ಅನುಸರಿಸುತ್ತಿರುವುದು ಆತಂಕವಾಗಿ ಕಾಣುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT