ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟೆ ದೇಗುಲ ಸಜ್ಜು

Last Updated 16 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

ಏಕಾದಶಿಗಳಲ್ಲೇ ವಿಶಿಷ್ಟವಾದ ವೈಕುಂಠ ಏಕಾದಶಿ ಬಂತೆಂದರೆ ವೈಷ್ಣವ ದೇವಾಲಯ ಗಳೆಲ್ಲಾ ಕಳೆಗಟ್ಟುತ್ತವೆ. ದೇವರ ದರ್ಶನಕ್ಕಾಗಿ ಭಕ್ತರು ಸಾಲುಗಟ್ಟಿ ನಿಲ್ಲುತ್ತಾರೆ. ಲಕ್ಷಾಂತರ ಭಕ್ತರು ಭೇಟಿ ನೀಡುವ ನಗರದ ಪ್ರಮುಖ ವಿಷ್ಣು ದೇವಸ್ಥಾನಗಳಲ್ಲಿ ‘ಕೋಟೆ ಶ್ರೀ ಪ್ರಸನ್ನ ವೆಂಕಟರಮಣ ಸ್ವಾಮಿ ದೇವಾಲಯ’ವೂ ಒಂದು. ಈ ದೇವಸ್ಥಾನದ ಅರ್ಚಕರಾದ ವಾಸುದೇವ್ ಭಟ್ಟರ್‌ ಅವರು ವೈಕುಂಠ ಏಕಾದಶಿಯ ಆಚರಣೆ, ಪೂಜಾ ವಿಧಾನ, ದೇವಸ್ಥಾನದಲ್ಲಿ ಮಾಡಿರುವ ವ್ಯವಸ್ಥೆಗಳ ಬಗ್ಗೆ ಮೆಟ್ರೊದೊಂದಿಗೆ ಮಾತನಾಡಿದರು.

* ಏಕಾದಶಿ ಎಂದರೇನು?
ತಿಥಿಗಳ ಅನುಸಾರ ಏಕಾದಶಿ ಎಂದರೆ ಪಕ್ಷದ ಹನ್ನೊಂದನೇ ದಿನ. ಏಕಾದಶಿಯಂದು ಉಪವಾಸ ವ್ರತ ಆಚರಣೆ ಮಾಡುವುದರಿಂದ ಆರೋಗ್ಯವನ್ನು ಸುಸ್ಥಿತಿಯಲ್ಲಿ ಇಟ್ಟುಕೊಳ್ಳಬಹುದು. ಈ ದಿನವೇ ಉಪವಾಸ ವ್ರತ ಆಚರಿಸಲು ಕಾರಣವೂ ಇದೆ. ನಮ್ಮ ದೇಹದಲ್ಲಿ ಪಂಚೇಂದ್ರಿಯಗಳು, ಐದು ಕರ್ಮೇಂದ್ರಿಯಗಳು ಮತ್ತು ಮನಸ್ಸು ಸೇರಿ ಒಟ್ಟು ಹನ್ನೊಂದು ಬಹುಮುಖ್ಯ ಅಂಗಾಂಗಗಳಿವೆ ನಮ್ಮ ಬೆಳವಣಿಗೆಗೆ, ಆರೋಗ್ಯಕ್ಕೆ ಇವೇ ಮುಖ್ಯವಾದವು. ಈ ಹನ್ನೊಂದು ಅಂಗಾಂಗಗಳಿಗೆ ಪಕ್ಷದ ಹನ್ನೊಂದನೇ ದಿನ ವಿರಾಮ ನೀಡುವುದು ಅವಶ್ಯಕ.

* ವೈಕುಂಠ ಏಕಾದಶಿಯ ಮಹತ್ವವೇನು?
ವರ್ಷದಲ್ಲಿ 64 ಏಕಾದಶಿಗಳಿವೆ. ಅದರಲ್ಲಿ ಪ್ರಥಮ ಏಕಾದಶಿ ಮತ್ತು ವೈಕುಂಠ ಏಕಾದಶಿಗೆ ಹೆಚ್ಚು ಮಹತ್ವವಿದೆ. ಮಾರ್ಗಶಿರ ಮಾಸದ ವೈಕುಂಠ ಏಕಾದಶಿಯಂದು ವಿಷ್ಣುವಿನ ದರ್ಶನ ಪಡೆದರೆ ವೈಕುಂಠ ಪ್ರಾಪ್ತವಾಗುತ್ತದೆ. ಇದಕ್ಕೆ ಕಾರಣ, ವಿಷ್ಣುವಿಗೆ ಪ್ರಿಯವಾದ ಮಾಸ ಮಾರ್ಗಶಿರ. ಈ ಮಾಸದ ಶುಕ್ಲಪಕ್ಷ ಏಕಾದಶಿಯಂದರೆ ಇನ್ನೂ ಪ್ರೀತಿ. ಹೀಗಾಗಿ ಈ ದಿನ ಭಕ್ತರ ಇಷ್ಟಾರ್ಥಗಳನ್ನು ವಿಷ್ಣು ಈಡೇರಿಸುತ್ತಾನೆ ಎಂಬುದು ಪ್ರತೀತಿ. ಹೀಗಾಗಿ ವಿಷ್ಣುವಿನ ದರ್ಶನ ಪಡೆಯಬೇಕು.

*ವೈಕುಂಠ ಏಕಾದಶಿಯ ಬಗ್ಗೆ ಯಾವ ಪುರಾಣದಲ್ಲಿ ಉಲ್ಲೇಖವಿದೆ?
ವಿಷ್ಣುವಿನ ಪರಮ ಭಕ್ತರಾದ ತಿರು ಆಳ್ವಾರ್ ಅವರು ಮಾರ್ಗಶಿರ ಮಾಸದ ಶುಕ್ಲಪಕ್ಷ ದಶಮಿಯಂದು ಕತ್ತಲೆಯಲ್ಲಿ ಹೋಗುವಾಗ ಹಾವೊಂದು ಅವರನ್ನು ಕಚ್ಚುತ್ತದೆ. ಪ್ರಾಣಾಪಾಯ ಸ್ಥಿತಿಯಲ್ಲಿ ಅವರು, ವಿಷ್ಣುವಿನ ಪ್ರಾರ್ಥನೆ ಮಾಡಿ ಜೀವ ಉಳಿಸುವಂತೆ ಬೇಡಿಕೊಳ್ಳುತ್ತಾರೆ. ಆಗ ವಿಷ್ಣು ಪ್ರತ್ಯಕ್ಷವಾಗಿ ನಾಳೆ ಏಕಾದಶಿ ಇರುವುದರಿಂದ ಯಾವುದೇ ಆಹಾರ ಸೇವಿಸದೇ ದೇಹಕ್ಕೆ ವಿರಾಮ ನೀಡು. ವಿಷ ದೇಹದಲ್ಲಿ ಹರಡದಂತೆ ನಾನು ನೋಡಿಕೊಳ್ಳುತ್ತೇನೆ ಎಂದು ಅಭಯ ನೀಡುತ್ತಾರೆ. ಈ ಕಥೆ ಮಾರ್ಕಂಡೇಯ ಪುರಾಣದಲ್ಲಿದೆ. ಅಂದರೆ ಇಲ್ಲಿ, ಹಾವು ಕಷ್ಟ–ಕಾರ್ಪಣ್ಯಗಳಿಗೆ ಪ್ರತೀಕವಾದರೆ ತಿರು ಆಳ್ವಾರ್ ಅವರು ಪಾಮರರ ಪ್ರತೀಕ. ಈ ದಿನ ವಿಷ್ಣುವನ್ನು ಸ್ಮರಿಸುವುದರಿಂದ ಯಾವುದೇ ಬಗೆಯ ಸಂಕಷ್ಟಗಳಿಗೆ ತುತ್ತಾಗದಂತೆ ಭಗವಂತ ರಕ್ಷಿಸುತ್ತಾನೆ ಎಂಬುದು ತಾತ್ಪರ್ಯ. ವೈಕುಂಠ ಏಕಾದಶಿಯ ಬಗ್ಗೆ ಭಾಗವತದಲ್ಲೂ ಉಲ್ಲೇಖವಿದೆ.

*ಆರೋಗ್ಯ ಸಮಸ್ಯೆ ಇರುವವರು ಉಪವಾಸ ಮಾಡಬಹುದೇ?
ಯಾರೇ ಆಗಲಿ, ತಮ್ಮ ದೈಹಿಕ ಮತ್ತು ಆರೋಗ್ಯ ಸ್ಥಿತಿ ಗಮನದಲ್ಲಿಟ್ಟುಕೊಂಡೇ ಯಾವುದೇ ವ್ರತ ಆಚರಿಸಬೇಕು. ದೇವರಿಗೆ ಶ್ರದ್ಧೆ, ಭಕ್ತಿ ಮುಖ್ಯ. ಉಪವಾಸ ಇರುವುದು, ಬಿಡುವುದು ಭಕ್ತರ ವಿವೇಚನೆಗೆ ಬಿಟ್ಟಿದ್ದು.

*ವೈಕುಂಠ ಪ್ರಾಪ್ತವಾಗುತ್ತೆ ಅಂತ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ಅವರಿಗೆ ಸ್ವರ್ಗ ಸಿಗುತ್ತಾ?
ಆತ್ಮಹತ್ಯೆ ಮಾಡಿಕೊಳ್ಳುವುದರಿಂದ ಯಾವುದೇ ಕಾರಣಕ್ಕೂ ಸ್ವರ್ಗ ಸಿಗುವುದಿಲ್ಲ. ಆತ್ಮಹತ್ಯೆ ಮಹಾಪಾಪ ಎಂದು ಪುರಣಾಗಳು ಘೋಷಿಸಿವೆ. ವೈಕುಂಠ ಏಕಾದಶಿಯಂದು ತಾನಾಗಿಯೇ ಸಾವು ಬರಬೇಕು, ಆತ್ಮಹತ್ಯೆ ಮಾಡಿಕೊಂಡರೆ ಅದು ಅಕಾಲಿಕ ಸಾವಾಗುತ್ತದೆ. ಆಯಸ್ಸು ಮುಗಿಯುವವರೆಗೆ ಆತ್ಮ ಪ್ರೇತವಾಗಿ ಅಲೆಯುತ್ತಿರುತ್ತದೆ.

ವಾಸುದೇವ ಭಟ್ಟರ್
ವಾಸುದೇವ ಭಟ್ಟರ್

* ಆಚರಿಸುವುದು ಹೇಗೆ?
ಸೂರ್ಯೊದಯಕ್ಕೂ ಮುಂಚೆಯೇ ಏಳಬೇಕು. ನಿತ್ಯ ಕರ್ಮಗಳನ್ನು ಮುಗಿಸಿ ವಿಷ್ಣು ನಾಮ ಸ್ಮರಣೆ ಮಾಡುತ್ತಾ ಧ್ಯಾನದಲ್ಲಿರಬೇಕು. ಮುಖ್ಯವಾಗಿ ಈ ದಿನ ಎಲ್ಲ ವಿಷ್ಣು ದೇವಾಲಯಗಳಲ್ಲೂ ಉತ್ತರ ದಿಕ್ಕಿನಲ್ಲಿ ವೈಕುಂಠ ದ್ವಾರ ನಿರ್ಮಿಸಿರುತ್ತಾರೆ ಅದನ್ನು ಸಂದರ್ಶಿಸಬೇಕು. ಮೌನವ್ರತ ಆಚರಿಸಿದರೆ ಇನ್ನೂ ಒಳ್ಳೆಯದು. ದೇವಸ್ಥಾನದಲ್ಲಾದರೂ ಮೌನವಾಗಿದ್ದರೆ ಪುಣ್ಯ ಸಿಗುತ್ತದೆ.

*ವಿಶೇಷ ಪೂಜೆಗಳು ಏನಾದರೂ ಮಾಡಿಸಬೇಕೆ?
ವೈಕುಂಠ ಏಕಾದಶಿಯಂದು ವಿಶೇಷ ಪೂಜೆಗಳು ಯಾವುದೂ ನಡೆಯುವುದಿಲ್ಲ. ಈ ದಿನ ದೇವರನ್ನು ಮತ್ತು ವೈಕುಂಠ ದ್ವಾರವನ್ನು ದರ್ಶಿಸಿದರೆ ಸಾಕು ಸಹಸ್ರ ಪೂಜೆಗಳಿಗೆ ಸಮನಾದ ಫಲ ದೊರೆಯುತ್ತದೆ.

*ದೇವಸ್ಥಾನದಲ್ಲಿ ಪೂಜಾ ಕೈಂಕರ್ಯಗಳು ಹೇಗಿರುತ್ತವೆ?
ಇದು ಐತಿಹಾಸಿಕ ದೇಗುಲವಾದ್ದರಿಂದ ಪ್ರತಿ ವರ್ಷ ವಿಶೇಷ ಪೂಜೆಗಳು ನಡೆಯುತ್ತವೆ. ಮೊದಲು ನಿತ್ಯಾರಾಧನೆ ನಡೆಯುತ್ತದೆ. ನಂತರ ಸಾಲಿಗ್ರಾಮದ ಅಭಿಷೇಕ ಮಾಡುತ್ತೇವೆ. ತೀರ್ಥ ತಯಾರಿಸಿ ದೇವರಿಗೆ ನೈವೇದ್ಯ ಮಾಡುತ್ತೇವೆ. ನಂತರ ಹಾಲಿನ ನೈವೇದ್ಯವನ್ನು ಸಮರ್ಪಿಸುತ್ತೇವೆ. ನಂತರ ಉತ್ಸವ ಮೂರ್ತಿಯಯನ್ನು ಪೂಜಿಸಿ, ವೈಕುಂಠ ದ್ವಾರದವರೆಗೆ ಮೆರವಣಿಗೆ ಮಾಡುತ್ತೇವೆ. ಮೆರವಣಿಗೆ ಮುಗಿದ ನಂತರ ಮಹಾನೈವೇದ್ಯ ಮಾಡುತ್ತೇವೆ. ಆ ದಿನ ವೈಕುಂಠ ದ್ವಾರದಲ್ಲಿ ಹೆಚ್ಚು ಪೂಜೆ ನಡೆಯುತ್ತವೆ.

*ಭಕ್ತರ ಸಂದಣಿ ಹೇಗಿರುತ್ತದೆ?
ಇಲ್ಲಿ ಬೆಳಿಗ್ಗೆಯಿಂದ ರಾತ್ರಿ 12 ಗಂಟೆವರೆಗೆ ದೇವರನ್ನು ದರ್ಶಿಸಲು ಅವಕಾಶವಿರುತ್ತದೆ. ಒಂದು ಲಕ್ಷಕ್ಕೂ ಅಧಿಕ ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ. ದೇವಸ್ಥಾನದ ಸುತ್ತ–ಮುತ್ತ ಯಾವುದೇ ತೊಂದರೆಯಾಗದಂತೆ ಕೆಲವು ರಸ್ತೆಗಳಲ್ಲಿ ಏಕಮುಖ ಸಂಚಾರ ಮಾಡಲಾಗಿರುತ್ತದೆ. ರಾತ್ರಿ 12ರ ವರೆಗೂ ಪ್ರಸಾದ ವಿನಿಯೋಗ ಇರುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT