ತಮ್ಮಣ್ಣ ಸರ್!

ಬುಧವಾರ, ಏಪ್ರಿಲ್ 24, 2019
27 °C

ತಮ್ಮಣ್ಣ ಸರ್!

Published:
Updated:
Prajavani

ಶಾ ಶ್ವತ್ ಏಳನೇ ಕ್ಲಾಸಿನ ಹುಡುಗ. ಮುದ್ದಿನಿಂದ ‘ತಮ್ಮಣ್ಣ’ ಅಂತ ಕರೀತಾರೆ ಅಪ್ಪ-ಅಮ್ಮ. ಅವನದ್ದು ಇತ್ತೀಚೆಗೆ ಒಂದೇ ವರಾತ, ‘ಟಿ.ವಿ ಬೇಕೂ...’ ಅಂತ. ಈಗಲೇ ಟಿ.ವಿ ಹಾಕಿಸುವುದು ಹೆತ್ತವರಿಗೆ ಇಷ್ಟವಿಲ್ಲ. ಇಪ್ಪತ್ತನಾಲ್ಕೂ ಗಂಟೆ ಅದರೆದುರು ಕುಳಿತು ಗೀಳು ಹಿಡಿಸಿಕೊಂಡಿರುವ ಮಕ್ಕಳನ್ನು ಅವರು ಕಂಡಿದ್ದಾರೆ. ಈ ರಜೆಯಲ್ಲಿ ‘ತುಂಬ ಬೋರಾಗುತ್ತೆ’ ಅಂತ ಮಗನ ರಾಗಾಲಾಪ. ಹತ್ತಿರದ ಮನೆಗಳಲ್ಲಿ ಸಣ್ಣ ಮಕ್ಕಳಿದ್ದರೂ ಅವನ ವಯಸ್ಸಿನ ಹುಡುಗರಿಲ್ಲ.

‘ರಜೆಯಲ್ಲಿ ಪಾಠಗಳನ್ನು ಚೆನ್ನಾಗಿ ಓದಿಕೋ. ಕೊಟ್ಟ ಹೋಂವರ್ಕ್ ಮಾಡಿ ಮುಗಿಸು’ ಅನ್ನುತ್ತಾರೆ ಅಮ್ಮ. ಓದಲು, ಬರೆಯಲು ಸೋಮಾರಿತನ ಅವನಿಗೆ. ಅಂಕಗಳು ಬಹಳ ಕಡಿಮೆ ಬಂದಿವೆ. ಗಂಭೀರವಾಗಿ ಓದಿಕೊಂಡರೆ ತಾನೇ? ಅವನು ಬುದ್ಧಿವಂತನೇ. ಗಮನವಿಟ್ಟು ಕೇಳಿಸಿಕೊಂಡರೆ, ಓದಿದರೆ ಅವನಿಗೆ ಸಾಕಾಗುತ್ತದೆ. ಆದರೆ ಅವನು ಪಾಠಗಳನ್ನು ಕೇಳುವುದೂ ಇಲ್ಲ, ಓದುವುದೂ ಇಲ್ಲ. ಇದರ ಮಧ್ಯೆ ರಜಾ ಬೇರೆ ಬಂದಿದೆ! ‘ಬೋರಂದ್ರೆ ಬೋರು! ಟಿ.ವಿ ಬೇಕು’ ಅಂತ ಅವನಿಟ್ಟ ಬೇಡಿಕೆಗೆ ಅಪ್ಪ–ಅಮ್ಮ ಹೂಂ ಅನ್ನದಿದ್ದದ್ದು ಅವನಿಗೆ ಹೆಚ್ಚು ಬೇಸರ ತರಿಸಿದೆ. ಊಟ, ತಿಂಡಿ ಸರಿಯಾಗಿ ಮಾಡದೆ ಅಸಹಕಾರ ತೋರಿಸುತ್ತಿದ್ದಾನೆ.

ಒಂದು ದಿನ ಏಳೆಂಟು ವರ್ಷ ವಯಸ್ಸಿನ ಆರು ಮಕ್ಕಳನ್ನು ಕರೆದುಕೊಂಡು ಬಂದ ಅಮ್ಮ, ‘ತಮ್ಮಣ್ಣ, ಈ ಮಕ್ಕಳಿಗೆ ಕೂಡುವ, ಕಳೆಯುವ ಲೆಕ್ಕಗಳು, ಮಗ್ಗಿ, ಅ ಆ ಇ ಈ, ಎ ಬಿ ಸಿ ಡಿ, ಹಾಡುಗಳು, ಗೊತ್ತಾಗದ ಪ್ರಶ್ನೆಗಳಿಗೆ ಉತ್ತರ ನೀನು ಕಲಿಸಿಕೊಡಬೇಕು ಆಯ್ತಾ?’ ಅಂದರು. ಮಕ್ಕಳಲ್ಲಿ, ‘ಮಕ್ಕಳೇ, ಈ ಅಣ್ಣ ಜಾಣ. ಅವನಿಗೆಲ್ಲ ಗೊತ್ತಿದೆ. ದಿನಾ ಸಂಜೆ ನಾಲ್ಕು ಗಂಟೆಯಿಂದ ಆರು ಗಂಟೆಯ ತನಕ ನಿಮಗೆ ಇವನು ಕಲಿಸುತ್ತಾನೆ ಹಾಂ?’ ಅಂದರು. ತನ್ನನ್ನು ಮಕ್ಕಳೆದುರು ‘ಜಾಣ’ ಅಂದ ಸಂಭ್ರಮದಲ್ಲಿ ಶಾಶ್ವತ್ ಸುಮ್ಮನಿದ್ದ.

ಮಕ್ಕಳು ಅವನನ್ನು ‘ಅಣ್ಣ’ ‘ಶಾಶಣ್ಣ’ ಅಂತ ಕರೆಯುತ್ತಿದ್ದರು. ಅವರಿಗೆ ಅಕ್ಷರಗಳು, ಶಬ್ದಗಳು, ಕೂಡಿಸುವ, ಕಳೆಯುವ ಲೆಕ್ಕಗಳು, ಪ್ರಶ್ನೆಗಳಿಗೆ ಉತ್ತರಗಳು ಎಲ್ಲವನ್ನೂ ಕಲಿಸುತ್ತಿದ್ದ. ಮಕ್ಕಳೆದುರು ತಾನು ಸರ್ವಜ್ಞನಾಗಿರುವುದು ಅವನಿಗೆ ಹೆಮ್ಮೆ ತರಿಸಿತ್ತು. ನಿರಾಸಕ್ತಿಯಿಂದಲೇ ಆರಂಭವಾದ ಪಾಠ ಎರಡು, ಮೂರು ದಿನಗಳಲ್ಲಿ ಅವನಿಗೆ ಉತ್ಸಾಹ ಕೊಟ್ಟಿತ್ತು. ಆ ಮಕ್ಕಳು ‘ಅಣ್ಣಾ..’ ‘ಅಣ್ಣಾ..’ ಅಂತ ತಮ್ಮ ಪುಸ್ತಕಗಳನ್ನು ತಿದ್ದಲು ಕೊಡುವಾಗ ತಾನೂ ಟೀಚರ್ ಆಗಿಬಿಟ್ಟಂಥ ಅನುಭವ!

ಆ ಮಕ್ಕಳ ತಂದೆ, ತಾಯಿಯರು ಕನ್ನಡ ಮಾಧ್ಯಮದಲ್ಲಿ ಕಲಿತವರು. ಹಾಗಾಗಿ ಇಂಗ್ಲಿಷ್ ಮಾಧ್ಯಮದ ತಮ್ಮ ಮಕ್ಕಳಿಗೆ ಇಂಗ್ಲಿಷ್ ಭಾಷೆಯಲ್ಲಿ ಕಲಿಸಲು ಅವರಿಂದಾಗುವುದಿಲ್ಲ. ಕಲಿಸಿದರೂ ಮಕ್ಕಳೇ ‘ಹಾಗಲ್ಲ, ಹೀಗೆ’ ಅಂತ ಸರಿಯಾದ ಉಚ್ಚಾರ ಹೇಳಿ ತೋರಿಸುತ್ತಾರೆ. ಟ್ಯೂಶನ್ ಕೊಡುವ ಶಿಕ್ಷಕರೂ ಆ ಊರಲ್ಲಿ ಇಲ್ಲದಿರುವುದು ಆ ಮಕ್ಕಳ ಹೆತ್ತವರಿಗೆ ಸಮಸ್ಯೆಯಾಗಿದೆ. ಶಾಶ್ವತನ ಅಮ್ಮ ತಮ್ಮ ಮಗನಿಂದ ಟ್ಯೂಶನ್ ಕೊಡಿಸುತ್ತೇನೆ ಅಂದಾಗ ‘ಹುಡುಗ ಏನು ಕಲಿಸ್ಯಾನು?’ ಅಂತ ಸಂಶಯವಿದ್ದರೂ ‘ರಜೆಯಲ್ಲಿ ಗಲಾಟೆ ಮಾಡುವುದಕ್ಕಿಂತ ಏನಾದರೂ ಕಲಿಯಲಿ’ ಅಂತ ಬಿಟ್ಟಿದ್ದರು.

ಮಕ್ಕಳಿಗಾಗಿ ಅವನೂ ಕಲಿಯಬೇಕಿತ್ತು. ಅವರ ಪಾಠಗಳನ್ನು ಓದಿಕೊಳ್ಳಬೇಕಿತ್ತು. ಈ ಮಧ್ಯೆ ಅಮ್ಮ, ‘ನೀನೂ ಓದು ತಮ್ಮಣ್ಣ. ಇಲ್ಲಾಂದ್ರೆ ಕಡಿಮೆ ಅಂಕಗಳು ಬಂದಾಗ ಅಣ್ಣ ದಡ್ಡ ಅಂದಾರು ಮಕ್ಕಳು’ ಅಂದದ್ದು ‘ಹೌದಲ್ಲ?’ ಅನಿಸಿ ಅವನೂ ಓದುತ್ತಿದ್ದ. ಚಿಕ್ಕವರ ಮಧ್ಯೆ ಹಿರಿಯಣ್ಣನಾಗಿರುವ ಶಾಶ್ವತ್ ಅಣ್ಣನಿಗೆ ತಕ್ಕದಾದ ಜವಾಬ್ದಾರಿಯನ್ನೂ ಕಲಿಯಬೇಕಲ್ಲ? ಮಕ್ಕಳೇನಾದರೂ ಜಗಳ ಮಾಡಿಕೊಂಡರೆ, ಕೆಟ್ಟ ಶಬ್ದಗಳನ್ನು ಉಪಯೋಗಿಸಿದರೆ ಬುದ್ಧಿ ಹೇಳುತ್ತಾನೆ, ತಾನೂ ಹಾಗೆಲ್ಲ ಮಾಡದಿರಲು ಯತ್ನಿಸುತ್ತಾನೆ.

ಕೆಲವೊಮ್ಮೆ ಬೇರೆ ಸಮಯದಲ್ಲೂ ಮಕ್ಕಳು ಬರುವುದಿದೆ. ಶಾಶ್ವತ್ ಅವರಿಗೆ ಕಾಗದದಿಂದ ದೋಣಿ, ಹಡಗು, ಅಂಗಿ, ಚಡ್ಡಿ, ತೊಟ್ಟಿಲು, ಪೆಟ್ಟಿಗೆ, ಹಾವು, ಹಕ್ಕಿ, ವಿಮಾನ ಮುಂತಾದವುಗಳನ್ನು ಮಾಡಿಕೊಡುತ್ತಾನೆ. ಆ ಮಕ್ಕಳು ಆಶ್ಚರ್ಯದಿಂದ ಅಣ್ಣನ ಕೈಯಿಂದ ತಯಾರಾಗುವ ಇವನ್ನೆಲ್ಲ ನೋಡ್ತಾ ಅವುಗಳಿಗಾಗಿ ‘ನನಗೆ’ ‘ನನಗೆ’ ಅಂತ ಜಗಳವನ್ನೂ ಮಾಡುತ್ತಾರೆ. ಲೀಡರ್ ಆಗಿರುವ ಶಾಶ್ವತನೇ ಇಲ್ಲಿ ಎಲ್ಲರಿಗೂ ಸಮಾಧಾನವಾಗುವಂತೆ ಮಾಡಬೇಕು.

ಅಂತೂ ಈ ರಜೆ ಕಳೆಯಿತು. ಮಕ್ಕಳಿಗೆ ದಿನವೂ ಉತ್ಸಾಹ ಇತ್ತು. ಮರುದಿನ ಶಾಲೆಗೆ ಹೋಗಿ ತಮ್ಮ ಕ್ಲಾಸಿನ ಮಕ್ಕಳಿಗೆ ತಮ್ಮ ರಜೆಯ ಅನುಭವಗಳನ್ನು ಮಕ್ಕಳು ತುಂಬ ಖುಷಿಯಿಂದ ವಿವರಿಸಿದರು. ಶಾಶ್ವತನೂ ತನ್ನ ಕ್ಲಾಸಿನ ಗೆಳೆಯರಲ್ಲಿ ತನ್ನ ಅನುಭವಗಳನ್ನು ಸಂತೋಷದಿಂದಲೇ ಹಂಚಿಕೊಂಡ. ಶಾಲೆ ಶುರುವಾದ ನಂತರವೂ ಅವನ ಟ್ಯೂಶನ್ ಮುಂದುವರಿಯುತ್ತದೆ, ಆದರೆ ಐದರಿಂದ ಆರು ಗಂಟೆ ತನಕ ಮಾತ್ರ. ಉಳಿದಂತೆ ಅವನೂ ಓದಿಕೊಳ್ಳಬೇಕಲ್ಲ?

‘ನೀನು ಕಲಿಸಿದ ಹುಡುಗರಿಗೆ ಒಳ್ಳೆಯ ಅಂಕಗಳು ಬಂದಿವೆಯಂತೆ. ಅವರ ಮನೆಯವರೆಲ್ಲ ನಿನಗೆ ಥ್ಯಾಂಕ್ಸ್ ಹೇಳಿದ್ದಾರೆ’ ಅಂತ ಒಂದು ದಿನ ಅಮ್ಮ ಅವನಲ್ಲಿ ಹೇಳಿದಾಗ ಅವನೂ ಹಿಗ್ಗಿದ್ದ. ಮಕ್ಕಳೂ ಬಂದು ತಮ್ಮ ಅಂಕಗಳನ್ನು ತೋರಿಸಿ, ಟೀಚರ್ಸ್ ಹೊಗಳಿದ್ದನ್ನು ವಿವರಿಸುವಾಗ ಶಾಶ್ವತನಿಗೆ ತಾನೇ ಗೆದ್ದ ಅನುಭವ. ಅವನಿಗೆ ಈಗ ಹೊಸದನ್ನು ಕಲಿಯುವ ಭರದಲ್ಲಿ, ಮಕ್ಕಳಿಗೆ ಕಲಿಸುವ ಜವಾಬ್ದಾರಿಯಲ್ಲಿ, ತನ್ನ ಪಾಠಗಳನ್ನು ಓದುವ, ಬರೆಯುವ ಗಡಿಬಿಡಿಯಲ್ಲಿ ಕೈಯಲ್ಲಿ ಸಮಯವೇ ಉಳಿಯುವುದಿಲ್ಲ!

‘ತುಂಬಾ ಬೋರ್’ ಅನ್ನುತ್ತಿದ್ದವನಿಗೆ ಈಗ ‘ಬೋರ್’ ಅಂದ್ರೆ ಏನೂಂತಾನೇ ಗೊತ್ತಿಲ್ಲ. ಅಮ್ಮ ಸಂಜೆ ವೇಳೆ ತನಗೂ, ಆಸುಪಾಸಿನ ಆ ಮಕ್ಕಳಿಗೂ ಏನಾದರೂ ತಿಂಡಿ ತಿನ್ನಲು ತಂದುಕೊಟ್ಟಾಗ ಅಮ್ಮನ ಬಗ್ಗೆ ಕೃತಜ್ಞತೆ ಹುಟ್ಟುತ್ತದೆ. ಅಪ್ಪ ತನಗೆ ಪೆನ್ನು, ಪೆನ್ಸಿಲ್ ತಂದಾಗ ಆ ಮಕ್ಕಳಿಗೂ ಒಂದೊಂದು ಪೆನ್ಸಿಲ್ ಕೊಟ್ಟರೆ ‘ಥ್ಯಾಂಕ್ಯೂ ಅಪ್ಪಾ..’ ಅನ್ನುತ್ತದೆ ಅವನ ಮನಸ್ಸು.

‘ಅಣ್ಣಾ, ದೊಡ್ಡ ರಜೆಯಲ್ಲಿ ಏನು ಮಾಡೋಣ?’ ಅಂತ ಈಗಲೇ ಪ್ರಶ್ನಿಸುತ್ತವೆ ಮಕ್ಕಳು. ‘ಗಿಡ ನೆಡೋಣ. ಮನೆಗೆಲಸದಲ್ಲಿ ಸಹಾಯ ಮಾಡೋಣ, ಕತೆ, ಕವಿತೆ ಬರೆಯೋಣ...’ ಅಂತ ಅಂದಿದ್ದಾನೆ ಶಾಶ್ವತ್. ಒಟ್ಟಿನಲ್ಲಿ ಯಾರಿಗೂ ಬೋರ್ ಇಲ್ಲ. ಅಮ್ಮ ಅವನನ್ನು ‘ತಮ್ಮಣ್ಣ ಸರ್...’ ಅಂತ ತಮಾಷೆಗೆ ಕರೆಯುವಾಗ ಲಜ್ಜೆಯಿಂದ ತಲೆ ತಗ್ಗಿಸಿ ನಗುತ್ತಾನೆ ತಮ್ಮಣ್ಣ.

ಬರಹ ಇಷ್ಟವಾಯಿತೆ?

 • 9

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !