ಕಳ್ಳ ಮನೆಗೆ ನುಗ್ಗಿದಾಗ...

7

ಕಳ್ಳ ಮನೆಗೆ ನುಗ್ಗಿದಾಗ...

Published:
Updated:

ಶತಮಾನ ಕಂಡ ದೊಡ್ಡದಾದ ಮನೆ ಅದು. ಮಣ್ಣಿನ ಗೋಡೆ. ಬೆಳಗಿನಲ್ಲೂ ಕತ್ತಲಾವರಿಸಿಕೊಂಡಿದ್ದ ಕೋಣೆಗಳು. ಕರೆಂಟೂ ಇರಲಿಲ್ಲ ಆಗ. ಮೊದಲ ಬಾರಿಗೆ ನಾನು ಮತ್ತು ಅಕ್ಕ ಇಬ್ಬರೇ ಇದ್ದ ದಿನ ಅದು.

ಅಪ್ಪ–ಅಮ್ಮ ಆಗಷ್ಟೇ ನೆಂಟರ ಮನೆಗೆ ಪೂಜೆಗೆ ಹೋಗಿದ್ದರು. ಅಷ್ಟರಲ್ಲಿ ಆ ಶಬ್ಧ ಡಬ್ ಡಬ್...ಡಬ್ ಡಬ್ ಕೇಳಿಬಂತು. ಎಲ್ಲಿಂದ ಎಂದು ಸೂಕ್ಷ್ಮವಾಗಿ ಗಮನಿಸಿದಾಗ ಗೊತ್ತಾಯ್ತು ಮನೆಯ ಒಳಗಡೆಯಿಂದ ಎಂದು. ಹೊರಗಡೆ ನಿಂತಿದ್ದ ನಮ್ಮ ಎದೆಯೊಳಗೆ ಡವ ... ಡವ...

ನಾವಿಬ್ಬರೇ ಇರುವುದನ್ನು ಗಮನಿಸಿ ಕಳ್ಳ ಒಳಗಡೆ ನುಗ್ಗಿದ್ದಾನೆ ಎಂಬುದು ನಮ್ಮ ಗ್ರಹಿಕೆ. ಆಲೋಚನೆ ಬಂದದ್ದೇ ತಡ ಒಂದು ಕ್ಷಣ ಇಬ್ಬರ ಹೃದಯ ಬಡಿತ ನಿಂತ ಹಾಗಾಯ್ತು. ಫೋನ್ ಮಾಡಿ ಯಾರಿಗಾದರೂ ವಿಷಯ ತಿಳಿಸೋಣ ಎಂದರೆ ಆಗ ಮೊಬೈಲೂ ಇರಲಿಲ್ಲ. ಇದ್ದದ್ದು ಲ್ಯಾಂಡ್‍ಲೈನ್. ಅದೂ ಮನೆಯೊಳಗಡೆ ಇದೆ. ಕೊನೆಗೆ ಹಾಗೂ ಹೀಗೂ ಧೈರ್ಯ ಮಾಡಿ ಇಬ್ಬರೂ ಒಂದು ನಿರ್ಧಾರಕ್ಕೆ ಬಂದೆವು. ಏನು ಬೇಕಾದರೂ ಆಗಲಿ ಮನೆಯೊಳಗಡೆ ಹೋಗಿ ಕಳ್ಳನನ್ನು ಹೊರಗಡೆ ಹಾಕೋದೇ ಅಂತ.

ಸರಿ ತೀರ್ಮಾನವೇನೋ ಆಯಿತು. ಆದರೆ, ಖಾಲಿ ಕೈಯಲ್ಲಿ ಹೋದರೆ ಆದೀತೇ. ಅದಕ್ಕಾಗಿ ಸಶಸ್ತ್ರರಾದೆವು. ಅಲ್ಲೇ ಇದ್ದ ಅಪ್ಪ ದನಗಳಿಗೆ ಹುಲ್ಲು ಮಾಡುತ್ತಿದ್ದ ಕತ್ತಿ, ದೊಣ್ಣೆ, ಲೈಟ್ ಹಿಡಿದುಕೊಂಡು ಧೈರ್ಯ ಮಾಡಿ ಇಬ್ಬರೂ ಕೈ ಕೈ ಹಿಡಿದುಕೊಂಡು ಒಳಗಡೆ ಕಾಲಿರಿಸಿದೆವು. ಮನದಲ್ಲಿ ರಾಮ ಸ್ಮರಣೆ. ಶಬ್ಧ ಜಾಸ್ತಿ ಆಗುತ್ತಾ ಇದ್ದ ಹಾಗೇ ನಮ್ಮ ಎದೆ ಬಡಿತವೂ ಏರುತ್ತಿತ್ತು.

ಹಾಲ್ ಒಳಗಡೆ ಹೋದಾಗ ಗೊತ್ತಾಯ್ತು ಕಳ್ಳ ದೇವರ ಕೋಣೆಯಲ್ಲೇ ಇದ್ದಾನೆ ಅಂತ. ಹೌದು, ಅಪ್ಪ ಹಣ ಇಡುವ ಕಪಾಟಿನ ಒಳಗಡೆಯಿಂದ ಶಬ್ಧ ಬರುತ್ತಿತ್ತು. ಒಳಗಡೆ ಲಾಕ್ ಆಗಿರುವ ಕಳ್ಳ ಹೊರಗಡೆ ಬರಲು ಆಗದೆ ಚಡಪಡಿಸುತ್ತಿದ್ದಾನೆ. ಏನು ಮಾಡುವುದು. ಇಬ್ಬರ ಮನದಲ್ಲೂ ತಳಮಳ. ಕೊನೆಗೆ ಒಂದು ತೀರ್ಮಾನಕ್ಕೆ ಬಂದೆವು. ನಾನು ಕಪಾಟಿನ ಬಾಗಿಲು ತೆಗೆಯುವುದು. ಕಳ್ಳ ಹೊರಗಡೆ ಬಂದ ಕೂಡಲೇ ಅಕ್ಕ ದೊಣ್ಣೆಯಿಂದ ಹೊಡೆಯುವುದು ಎಂದು. ಕಳ್ಳ ಏನಾದರೂ ಕಿತಾಪತಿ ಮಾಡಿದರೆ ಇದ್ದೇ ಇದೆಯಲ್ಲ ಹರಿತವಾದ ಅಪ್ಪನ ಕತ್ತಿ.

ಸರಿ, ಆ ಕ್ಷಣ ಬಂದೇ ಬಿಟ್ಟಿತು. ಬಾಗಿಲು ತೆಗೆದೇ ಬಿಟ್ಟೆ. ದಬಕ್ಕನೇ ನಮ್ಮ ಮೇಲೆ ಎರಗಿದ ಕಳ್ಳ ಕ್ಷಣ ಮಾತ್ರದಲ್ಲಿ ಪರಾರಿಯಾದ! ಭಯದಿಂದ ಮ್ಯಾಂವ್... ಮ್ಯಾಂವ್ ಎನ್ನುವ ಆ ಕೂಗು ಸುಮಾರು ಹೊತ್ತು ನಮ್ಮ ಕಿವಿಗೆ ರಿಂಗಣಿಸುತ್ತಿತ್ತು. ಆಗಲೇ ಗೊತ್ತಾಗಿದ್ದು, ಅದು ಕಳ್ಳ ಅಲ್ಲ, ನಮ್ಮನೆ ಬೆಕ್ಕು ಅಂತ. ಸದ್ಯ ಅಕ್ಕನ ದೊಣ್ಣೆ ಪೆಟ್ಟು ಗುರಿ ತಪ್ಪಿದ್ದರಿಂದ ಬಚಾವ್ ಆಯ್ತು ಅದು.

ಅಪ್ಪ ಅಮ್ಮ ಬಂದ ಮೇಲೆ ನಮ್ಮ ಪಜೀತಿಯ ವಿಷಯ ಹೇಳಿದಾಗ ಬಯಲಾಯ್ತು ನೋಡಿ ನಿಜವಾದ ಸಂಗತಿ. ಅದು ಏನಾಯ್ತು ಅಂದ್ರೆ ಅಮ್ಮ ಬೆಳಿಗ್ಗೆ ಪೂಜೆಗೆ ಹೊರಡಲು ಕಪಾಟಿನಿಂದ ಸೀರೆ ತೆಗೆಯುವಾಗ ಅಲ್ಲೇ ಹತ್ತಿರ ಸುಳಿಯುತ್ತಿದ್ದ ಬೆಕ್ಕು ಒಳ ನುಸುಳಿದೆ. ತರಾತುರಿಯಲ್ಲಿ ಅಮ್ಮ ಗಮನಿಸದೆ ಕಪಾಟು ಲಾಕ್ ಮಾಡಿದ್ದಾಳೆ. ಒಳಗಡೆ ಸಿಲುಕಿದ ಬೆಕ್ಕು ಗಾಬರಿಯಿಂದ ಒಂದೇ ಸಮನೆ ಕೈಯಿಂದ ಹೊಡೆದಿದೆ. ಅದು, ನಮ್ಮೊಳಗೆ ಇಷ್ಟೆಲ್ಲ ಅವಾಂತರ ಸೃಷ್ಟಿಸಿತು. ಒಟ್ಟಿನಲ್ಲಿ ನಾವಿಬ್ಬರೂ ಹೆದರುವಂತಾಯಿತು. ಈ ಘಟನೆ ಕಳೆದು ವರ್ಷಗಳಾದರೂ, ಕಳ್ಳನನ್ನು ಹಿಡಿಯಲು ಹೊರಟ ನಮ್ಮ ಈ ಸಾಹಸಗಾಥೆ ಆಗಾಗ ನೆನಪಾಗುತ್ತದೆ. 

ಬರಹ ಇಷ್ಟವಾಯಿತೆ?

 • 5

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !