ಶುಕ್ರವಾರ, ಡಿಸೆಂಬರ್ 6, 2019
21 °C

ಅವನಿ ಹುಲಿಯ ‌ಹತ್ಯೆ ನ್ಯಾಯವೆ?

Published:
Updated:

ಮಹಾರಾಷ್ಟ್ರದ ಯವತ್‌ಮಾಲ್‌ ಜಿಲ್ಲೆಯ ಪಂಢರಕಾವಾಡ ಕಾಡನ್ನು ‌ತನ್ನ ಮನೆಯಾಗಿ ಮಾಡಿಕೊಂಡು ಸಂಸಾರ ನಡೆಸಿ ಎರಡು ಪುಟ್ಟ ಮರಿಗಳ ಜೊತೆ ಓಡಾಡುತ್ತಿದ್ದ ಹೆಣ್ಣು ಹುಲಿ ಅವನಿ ‘ಹತ್ಯೆ’ ರಾಷ್ಟ್ರಮಟ್ಟದಲ್ಲಿ ದೊಡ್ಡ ಸುದ್ದಿಯಾಯಿತು. ನ್ಯಾಯಾಲಯದ ಆದೇಶದ ಮೇಲೇ ಈ ಹತ್ಯೆ ನಡೆದರೂ, ಕಾಡು, ಕಾಡಿನ ರಾಜನನ್ನು ಕಾಯಬೇಕಾದ ಕೇಂದ್ರ ಮತ್ತು  ಮಹಾರಾಷ್ಟ್ರ ರಾಜ್ಯ ಸರ್ಕಾರ ಪ್ರತಿಕ್ರಿಯೆಯನ್ನೂ ನೀಡದೆ ಅಪರಾಧಿ ಸ್ಥಾನದಲ್ಲಿ ಕೈಕಟ್ಟಿ ನಿಂತಿವೆ.

ಶಾರ್ಪ್‌ಶೂಟರ್‌ ಎಂದು ಹೇಳಿಕೊಳ್ಳುವ ಹೈದರಾಬಾದ್‌ ಮೂಲದ ನವಾಬ್‌ ಶಫತ್‌ ಅಲಿ ಖಾನ್‌ ಮತ್ತವನ ಮಗ ಅಜ್ಗರ್‌ ಅಲಿ, ಹತ್ಯೆ ಮಾಡಿದ ನಂತರ ಹುಲಿ ಶವದ ಜೊತೆ ಸಂಭ್ರಮಿಸಿದ್ದಾರೆ. ಈ ಶೂಟರ್‌ ಯಾರು? ಈತನಿಗೆ ಗುಂಡು ಹೊಡೆಯಲು ಅನುಮತಿ ನೀಡಲು ಕಾರಣವೇನು? ಇದರಲ್ಲಿ ಕಾನೂನು ಉಲ್ಲಂಘನೆಯಾಗಿದೆ ಎಂದು ವನ್ಯಜೀವಿ ಕಾರ್ಯಕರ್ತರು ಕಿಡಿ ಕಾರುತ್ತಿದ್ದಾರೆ. ಆದರೆ, ಹುಲಿ ನರಭಕ್ಷಕವಾದ ಪಕ್ಷದಲ್ಲಿ ಕಾಡು ಪ್ರಾಣಿ ಮತ್ತು ಸುತ್ತಲ ಗ್ರಾಮಸ್ಥರ ಸಹಬಾಳ್ವೆಯ ಉದ್ದೇಶದಿಂದ ಹತ್ಯೆ ಮಾಡಬೇಕಾಗುತ್ತದೆ ಎನ್ನುವ ವಾದವೂ ಇದೆ.

ಈ ಹುಲಿ ಕಾಡಿನ ಸುತ್ತಲ 13 ಗ್ರಾಮಸ್ಥರನ್ನು ಕೊಂದು ಹಾಕಿತು ಎಂದು ನರಭಕ್ಷಕ ಹಣೆಪಟ್ಟಿ ಕಟ್ಟಲಾಯಿತು. ಪಂಢರಕಾವಾಡ ಅರಣ್ಯ ಪ್ರದೇಶದ ಸುತ್ತಮುತ್ತ ಕಾಡಿನಂಚಿನಲ್ಲಿ ಗ್ರಾಮಸ್ಥರು ಎರಡು ವರ್ಷಗಳಿಂದ ಹುಲಿಯ ಭೀತಿಯಲ್ಲಿ ನರಳಿದ್ದರು. ಮೊದಲೇ ಈ ಭಾಗ ಸತತ ಬರದಿಂದ ತತ್ತರಿಸಿದೆ. ಕೃಷಿ ವಿಫಲವಾಗಿದೆ. ಸಾಲ ಬಾಧೆಯಿಂದ ರೈತರು ನರಳುತ್ತಿದ್ದಾರೆ. ಸಾಲ ತೀರಿಸಲಾಗದೆ ಸಾಯುವುದಕ್ಕಿಂತ, ಹುಲಿಯಿಂದ ಸಾಯುವುದೇ ಲಾಭದಾಯಕ ಎಂದು ಜನ ಭಾವಿಸಿದಂತಿದೆ. ಗ್ರಾಮಸ್ಥರ ಸಾವಿಗೆ ಹುಲಿ ಕಾರಣ ಎನ್ನುವ ಗುಲ್ಲು ಹೆಚ್ಚಾದಾಗ, ನರಭಕ್ಷಕ ಹುಲಿಯನ್ನು ಗುಂಡಿಕ್ಕಿ ಕೊಲ್ಲುವಂತೆ ಕಳೆದ ಸೆಪ್ಟೆಂಬರ್‌ನಲ್ಲಿ ಸುಪ್ರೀಂಕೋರ್ಟ್‌ ಆದೇಶ ನೀಡಿತ್ತು. ಆದೇಶ ಸಿಕ್ಕಿದ್ದೇ ತಡ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್‌) ಎ.ಕೆ. ಮಿಶ್ರ ಹುಲಿ ಕೊಲ್ಲುವಂತೆ ಲಿಖಿತ ಆದೇಶ ನೀಡಿದರು. ಆದೇಶವನ್ನು ತುರ್ತಾಗಿ ಜಾರಿ ಮಾಡುವಂತೆ ಅರಣ್ಯ ಸಚಿವ ಸುಧೀರ್‌ ಮುಂಗಟಿವಾರ್‌ ಒತ್ತಡ ಹೇರಿದರು. ಈ ಎಲ್ಲಾ ಘಟನೆಗಳನ್ನು ಅವಲೋಕಿಸಿದರೆ ಹತ್ಯೆ ಒಂದು ರೀತಿ ಸುಪಾರಿ ಕೊಲೆಯ ರೀತಿಯಲ್ಲಿದೆ.

ಕಾಡಿನ ಹುಲಿಯೇ ಆಗಲಿ, ನರಿಯ ಬೇಟೆಯೇ ಆಗಲಿ ವನ್ಯಜೀವಿ ಸಂರಕ್ಷಣಾ ಕಾಯ್ದೆಯ ಅಡಿಯಲ್ಲಿ ಶಿಕ್ಷಾರ್ಹ. ವ್ಯಕ್ತಿಯ ಹತ್ಯೆ ನಡೆದಾಗ ಪ್ರತ್ಯಕ್ಷ ಸಾಕ್ಷಿ ಇದ್ದರೂ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಅಪರಾಧ ಸಾಬೀತಾದ ನಂತರವೇ ಶಿಕ್ಷೆ ಪ್ರಕಟವಾಗುತ್ತದೆ. ಆದರೆ, ಅವನಿ ಪ್ರಕರಣವನ್ನು ತೆಗೆದುಕೊಂಡರೆ 13 ಜನರನ್ನು ಇದೇ ಹುಲಿಯೇ ಸಾಯಿಸಿತು ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲ. ಇವರ ಪೈಕಿ ಇಬ್ಬರು ಮಾತ್ರ ಹುಲಿಯ ದಾಳಿಯಿಂದ ಸತ್ತಿದ್ದಾರೆ ಎನ್ನುವುದು ಡಿಎನ್‌ಎ ಪರೀಕ್ಷೆಯಿಂದ ಪತ್ತೆಯಾಗಿದೆ.

ಆದರೆ ಇಬ್ಬರ ಸಾವಿಗೆ ಅವನಿಯೇ ಕಾರಣವೇ ಎನ್ನುವುದು ಸಹ ಖಚಿತವಾಗಿ ಗೊತ್ತಿಲ್ಲ. ನೂರು ಅಪರಾಧಿಗಳು ತ‍ಪ್ಪಿಸಿಕೊಂಡರೂ ಒಬ್ಬ ನಿರಪರಾಧಿಗೆ ಶಿಕ್ಷೆಯಾಗಬಾರದು ಎನ್ನುವ ನ್ಯಾಯಾಲಯ, ಅವನಿ ಪ್ರಕರಣದಲ್ಲಿ ದಾರಿ ತಪ್ಪಿರಬಹುದೇ ಎನ್ನುವ ಪ್ರಶ್ನೆ ಕಾಡುತ್ತದೆ. ಆದರೆ, ಈ ಪ್ರಕರಣದಲ್ಲಿ ಮಹಾರಾಷ್ಟ್ರ ಸರ್ಕಾರ ದಾರಿ ತಪ್ಪಿರುವುದು ಜಗಜ್ಜಾಹೀರಾಗಿದೆ. ಸುಣ್ಣದ ಕಲ್ಲು ಅಡಗಿರುವ ಕಾಡಿನ 500 ಹೆಕ್ಟೇರ್‌ ಭೂಮಿಯನ್ನು ಪ್ರಭಾವಿ ವ್ಯಕ್ತಿಯ ಮಾಲೀಕತ್ವದ ಸಿಮೆಂಟ್‌ ಕಾರ್ಖಾನೆಗೆ ಧಾರೆ ಎರೆದಿದ್ದಾರೆ. ಅವರು ಭೂಮಿಯನ್ನು ನೂರು ಪಟ್ಟು ಬೆಲೆಗೆ ಮಾರಾಟ ಮಾಡಿದ್ದಾರೆ ಎನ್ನುವ ಅನುಮಾನ ಹರಡುತ್ತಿದೆ. ಕಾರ್ಖಾನೆ ಸ್ಥಾಪಿಸಲು ಇರುವ ತೊಡಕೆಂದರೆ ಹುಲಿ ಮಾತ್ರ. ಅದಕ್ಕೆ ನರಭಕ್ಷಕ ಪಟ್ಟ ಕಟ್ಟಿ ಕೊಲೆ ಮಾಡಲಾಗಿದೆ ಎನ್ನುವ ಅನುಮಾನ ಮೂಡುತ್ತಿದೆ. ಸಂಜೆ ಹುಲಿಗೆ ಗುಂಡಿಕ್ಕಿದ್ದು ಮಾತ್ರವಲ್ಲದೇ, ಹುಲಿ ಹೊಡೆದ ನಂತರ ಅರಿವಳಿಕೆ ಚುಚ್ಚಲಾಗಿದೆ ಎನ್ನುವ ಆರೋಪ ಸಹ ಕೇಳುತ್ತಿದೆ. ಜೀವಂತವಾಗಿರುವಾಗ ಅರಿವಳಿಕೆ ಚುಚ್ಚಿದರೆ ಸೂಜಿ ಬಿದ್ದ ಜಾಗ ಊದುತ್ತದೆ. ಆದರೆ ಅವನಿ ಪ್ರಕರಣದಲ್ಲಿ ಈ ರೀತಿ ಆಗಿಲ್ಲ.

ಪಿಸಿಸಿಎಫ್‌ ಹುಲಿ ಹತ್ಯೆಗೆ ಆದೇಶ ನೀಡಿದರು ಎಂದರೆ ಗುಂಡಿಟ್ಟು ಹೊಡೆಯಲೇಬೇಕು ಎಂದರ್ಥವಲ್ಲ. ಹುಲಿಯನ್ನು ಬೋನಿನ ಮೂಲಕ ಜೀವಂತವಾಗಿ ಹಿಡಿಯಬಹುದು. ಇಲ್ಲವೇ ಅರಿವಳಿಕೆಯನ್ನು ಸಿರಿಂಜ್‌ ಮೂಲಕ ಸಿಡಿಸಿ ಪ್ರಜ್ಞೆ ತಪ್ಪಿಸಿ ಸೆರೆಹಿಡಿಯುವುದು ಇಲ್ಲವೇ ಗುಂಡಿಕ್ಕಿ ಸಾಯಿಸುವ ನಿರ್ಧಾರವೂ ಆದೇಶದಲ್ಲಿ ಸೇರಿರುತ್ತದೆ. ಆದರೆ, ಈ ಪ್ರಕರಣದಲ್ಲಿ ಖಾಸಗಿ ಶೂಟರ್‌ ನವಾಬ್‌ ಮತ್ತವನ ಮಗ ಅಜ್ಗರ್‌ ಅಲಿ ನಡವಳಿಕೆ ಅನುಮಾನದ ಹುತ್ತವನ್ನೇ ಹುಟ್ಟುಹಾಕಿದೆ. ಶಫತ್‌ಗೆ ರಾಜ್ಯ ಸರ್ಕಾರವೇ ಹುಲಿ ಹತ್ಯೆಗೆ ಆದೇಶ ನೀಡಿತ್ತು. ಆದರೆ ಇವರು ರಾತ್ರಿ ವೇಳೆ ಬೇಟೆ ಕಾಣುವಂತಹ ‘ನೈಟ್‌ ವಿಷನ್‌’ ಇರುವ ಗನ್‌ ತೆಗೆದುಕೊಂಡು ಅರಣ್ಯಕ್ಕೆ ಹೋಗಿದ್ದಾರೆ. ಇದರ ಉದ್ದೇಶ ರಾತ್ರಿ ವೇಳೆಯೂ ಕಾರ್ಯಾಚರಣೆ ನಡೆಸುವುದು. ಹುಲಿ ಹಿಡಿಯುವ ಕಾರ್ಯಾಚರಣೆಯನ್ನು ಸೂರ್ಯ ಮುಳುಗಿದ ನಂತರ ನಡೆಸಬಾರದು. ಇದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ನಿಯಮಗಳಿಗೆ ವಿರುದ್ಧ. ರಾತ್ರಿ ಕಾರ್ಯಾಚರಣೆಯನ್ನು ನಿಲ್ಲಿಸಲು ಅರಣ್ಯ ಇಲಾಖೆ ಯತ್ನಿಸದೆ ಅವನಿ ಹತ್ಯೆ ನಡೆದಿದ್ದನ್ನು ಗಮನಿಸಿದರೆ, ಹುಲಿ ಕೊಲೆಗೆ ಮಹಾರಾಷ್ಟ್ರ ಸರ್ಕಾರ ನವಾಬ್‌ಗೆ ಮುಕ್ತ ಅನುಮತಿ ನೀಡಿದಂತೆ ಕಾಣುತ್ತದೆ.

ಅವನಿಗೆ ಅರಿವಳಿಕೆ ನೀಡಿ ಹಿಡಿಯುವ ಎರಡು ಚಿನ್ನದಂತಹ ಅವಕಾಶವನ್ನು ಅರಣ್ಯ ಇಲಾಖೆ ಕಳೆದುಕೊಂಡಿತು ಎಂದು ಪಂಢರಕಾವಾಡದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಂ. ಆಭರಣ ಪಿಸಿಸಿಎಫ್‌ (ವನ್ಯಜೀವಿ) ಅವರಿಗೆ ವರದಿ ನೀಡಿದ್ದಾರೆ. ಸೆಪ್ಟೆಂಬರ್‌ 15ರಂದು ಹುಲಿಯ ಹೆಜ್ಜೆ ಗುರುತನ್ನು ಪತ್ತೆ ಮಾಡಲಾಗಿತ್ತು. ನಂತರ ಸೆ. 18ರಂದು ಹುಲಿ ಕೊಂದಿದ್ದ ಹಸುವೊಂದರ ಶವ ದೊರಕಿತ್ತು. ಅಂದು ಸಂಜೆಯಾದ ಕಾರಣದಿಂದ ಹುಲಿ ಮತ್ತೆ ಶವದತ್ತ ಬರಬಹುದು. ಆ ದಾರಿಯಲ್ಲಿ ಕಾಯುವಂತೆ ನವಾಬ್‌ಗೆ ಸೂಚಿಸಲಾಗಿತ್ತು. ಆದರೆ ನವಾಬ್‌, ಡಿಸಿಎಫ್‌ ಸೂಚನೆಯನ್ನು ಬದಿಗೆ ತಳ್ಳಿ, ದಾರಿಯಲ್ಲಿ ಕಾಯುವ ಬದಲು ಹಸುವಿನ ಕಳೇಬರದ ಬಳಿ ಕಾದು ಕುಳಿತಿದ್ದಾರೆ. ಹೀಗಾಗಿ ಮನುಷ್ಯರ ವಾಸನೆಯಿಂದ ಹುಲಿ ಶವದತ್ತ ಸುಳಿಯಲಿಲ್ಲ. ಹುಲಿ ಬರುವ ದಾರಿಯಲ್ಲೇ ಕಾದು ಕುಳಿತಿದ್ದರೆ ಅರಿವಳಿಕೆ ಪ್ರಯೋಗಕ್ಕೆ ನವಾಬ್‌ಗೆ ಅವಕಾಶ ಸಿಗುತ್ತಿತ್ತು.

ಸಂಜೆ ವೇಳೆ ಇರಲಿ ಬೆಳಿಗ್ಗೆ ಸಹ ಅರಿವಳಿಕೆ ಪ್ರಯೋಗ ಸುಲಭವಲ್ಲ ಎನ್ನುವ ಕರ್ನಾಟಕ ರಾಜ್ಯ ವನ್ಯಜೀವಿ ಮಂಡಲಿ ಸದಸ್ಯರಾದ ಸಂಜಯ್‌ ಗುಬ್ಬಿ ರಾಜ್ಯದಲ್ಲಿ ನಡೆದ ಕೆಲ ಅರಿವಳಿಕೆ ಪ್ರಯೋಗದಲ್ಲಿ ನೇರವಾಗಿ ಭಾಗಿಯಾಗಿದ್ದಾರೆ. ಅವರ ಪ್ರಕಾರ ‘ಬುಲೆಟ್‌ ಆದರೆ ನೇರವಾಗಿ ಗಾಳಿಯಲ್ಲಿ ಹೋಗಿ ನಂತರ ಬೀಳಲು ಆರಂಭವಾಗುತ್ತದೆ. ಆದರೆ ಪುಕ್ಕ ಕಟ್ಟಿರುವ ಅರಿವಳಿಕೆ ಸಿರೆಂಜ್‌ ವ್ಯಾಪ್ತಿ ಕೇವಲ 30 ಮೀಟರ್‌ ಮಾತ್ರ. ಪೊದೆಯಲ್ಲಿ ಹುಲಿ ಅಡಗಿದ್ದರೆ ಅರಿವಳಿಕೆ ಪ್ರಯೋಗ ಸಾಧ್ಯವಾಗುವುದಿಲ್ಲ. ಒಂದು ಪಕ್ಷ ಬಯಲಿನಲ್ಲಿ ಪ್ರಾಣಿಗೆ ಅರಿವಳಿಕೆ ಪ್ರಯೋಗಿಸಿದರೂ ಖಂಡವಿರುವ ತೊಡೆ ಅಥವಾ ಭುಜಕ್ಕೆ ಮಾತ್ರ ಬೀಳಬೇಕು. ಇಲ್ಲವಾದರೆ ಪ್ರಯೋಗ ವ್ಯರ್ಥವಾಗುತ್ತದೆ. ಹುಲಿ ಮೊದಲೇ ಸೂಕ್ಷ್ಮ ಬುದ್ಧಿಯ ಪ್ರಾಣಿ. ಮರಿಗಳಿದ್ದರಂತೂ ಮತ್ತಷ್ಟು ಹುಷಾರಾಗಿರುತ್ತದೆ. ಮರಿಗಳಿರುವ ಹುಲಿಗೆ ಅರಿವಳಿಕೆ ಪ್ರಯೋಗ ಮಾಡಿದರೂ ಮರಿಗಳ ಬಗ್ಗೆ ಅರಣ್ಯಾಧಿಕಾರಿಗಳು ಯೋಚಿಸಬೇಕಿತ್ತು’ ಎನ್ನುತ್ತಾರೆ.

ಈಗ ಮರಿಗಳ ಸ್ಥಿತಿ ಕಷ್ಟಕರ. ಹತ್ತು ತಿಂಗಳ ಮರಿಗಳು ತಾಯಿಯ ಆರೈಕೆಯಿಲ್ಲದೆ ಬದುಕುವುದು ಕಷ್ಟ. ಇವಕ್ಕೆ ಬೇಟೆಯಾಡುವುದು ಗೊತ್ತಿರುವುದಿಲ್ಲ. ತಾಯಿ ಬೇಟೆಯಾಡಿದರೆ ಮಾತ್ರ ಆಹಾರ. ಈ ಪ್ರಾಯದಲ್ಲಿ ತಾಯಿ ಬೇಟೆಯಾಡುವುದನ್ನು ನೋಡಿ ಕಲಿಯುವ ವಯಸ್ಸು ಮರಿಗಳದು. ತಾಯಿ ಸತ್ತ ನಂತರ ಕಾಡಿನಲ್ಲಿ ಮಾಂಸವನ್ನು ಇಲಾಖೆ ಸಿಬ್ಬಂದಿ ಕಟ್ಟುತ್ತಿದ್ದಾರೆ. ಒಂದೆರಡು ಸಲ ಮರಿಗಳು ಸಿಬ್ಬಂದಿ ಕಣ್ಣಿಗೆ ಬಿದ್ದಿವೆ. ಆದರೆ ಮಾಂಸ ಕಟ್ಟುವ ಕೆಲಸ ಎಷ್ಟು ದಿನ ನಡೆಯುತ್ತದೆ? ಆಹಾರ ಸಿಕ್ಕರೂ ಇವಕ್ಕೆ ತಾಯಿಯ ರಕ್ಷಣೆ ಇಲ್ಲವಲ್ಲ! ಇವಕ್ಕೆ ಪುನರ್ವಸತಿ ಅಗತ್ಯ.

ಪಂಢರಕಾವಾಡ ಕಾಡಿನಲ್ಲಿ ಹುಲಿಯಿದೆ ಎಂದರೆ ಅದಕ್ಕೆ ಆಹಾರವಾಗುವ ಪ್ರಾಣಿಗಳು ಸಾಕಷ್ಟು ಸಂಖ್ಯೆಯಲ್ಲಿವೆ ಎಂದರ್ಥ. ಅವನಿ ಹತ್ಯೆ ವಿಷಯದಲ್ಲಿ ಕೇಂದ್ರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಅವರು ಮಹಾರಾಷ್ಟ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪ್ರಾಧಿಕಾರದ ನಿಯಮವನ್ನು ಉಲ್ಲಂಘಿಸಲಾಗಿದೆ ಎಂದಿದ್ದಾರೆ. ಇಂತಹ ಕಾರ್ಯಾಚರಣೆಯಲ್ಲಿ ಖಾಸಗಿ ಶೂಟರ್‌ಗಳನ್ನು ಸರ್ಕಾರ ಯಾವ ಕಾರಣಕ್ಕೆ ಅವಲಂಬಿಸುತ್ತದೆ ಎನ್ನುವುದೇ ಅರ್ಥವಾಗುತ್ತಿಲ್ಲ. ನವಾಬ್‌ ಮೇಲೆ ಚಿರತೆ, ಹುಲಿ, ಆನೆ, ಕಾಡುಹಂದಿ ಕೊಂದ ಹಾಗೂ ರಾಷ್ಟ್ರವಿರೋಧಿ ಶಕ್ತಿಗಳಿಗೆ ಬಂದೂಕು ನೀಡಿದ ಆರೋಪವಿದೆ ಎಂದು ಮೇನಕಾ ಕಿಡಿಕಾರಿದ್ದಾರೆ. ಅರಣ್ಯ ಇಲಾಖೆಗಳು ಇಂತಹ ಸಂದರ್ಭದಲ್ಲಿ ಸೇನೆಯ ನಿವೃತ್ತ ಸ್ನೈಪರ್‌ಗಳ ಸಹಾಯ ಪಡೆಯಬಹುದು. ಇಲ್ಲವೇ ಇಲಾಖೆಯ ಸಿಬ್ಬಂದಿಗೇ ಶೂಟಿಂಗ್‌ ತರಬೇತಿ ನೀಡಬಹುದು.

ಅವನಿ ಹತ್ಯೆ ರಾಷ್ಟ್ರಮಟ್ಟದಲ್ಲೇ ದೊಡ್ಡ ಸುದ್ದಿಯಾದರೂ ಕೇಂದ್ರ ಸರ್ಕಾರ ಮೌನವಾಗಿರುವುದು ಆಶ್ಚರ್ಯ. ಕಾಡನ್ನು ನುಂಗುವ ಸಿಮೆಂಟ್‌ ಕಾರ್ಖಾನೆ, ಹುಲಿಗೆ ನರಭಕ್ಷಕ ಪಟ್ಟ ಕಟ್ಟಿ ಮಾಡಿದ ಹತ್ಯೆ, ಎನ್‌ಟಿಸಿಎ ನಿಯಮ ಉಲ್ಲಂಘನೆಯನ್ನು ಪರಿಗಣಿಸಿ ಸಿಬಿಐ ತನಿಖೆ ಮಾಡಿಸಿದರೂ ತಪ್ಪೇನಿಲ್ಲ. 


ಅವನಿಯನ್ನು ಗುಂಡಿಕ್ಕಿ ಕೊಲ್ಲುವಂತೆ ಕಳೆದ ಸೆಪ್ಟೆಂಬರ್‌ನಲ್ಲಿ ಸುಪ್ರೀಂಕೋರ್ಟ್‌ ಆದೇಶ ನೀಡಿತ್ತು. ಆ ಸಂದರ್ಭದಲ್ಲಿ ಮುಂಬೈನಲ್ಲಿ ಬಾಲಕನೊಬ್ಬ ಆದೇಶದ ವಿರುದ್ಧ ಪ್ರಟಿಭಟಿಸಿದ್ದು ಹೀಗೆ.

 

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು