ಇದು ಆಮೆಗಳ ಕೊಳ!

7

ಇದು ಆಮೆಗಳ ಕೊಳ!

Published:
Updated:
Deccan Herald

ಹುಬ್ಬಳ್ಳಿಯ ಸಿದ್ಧಾರೂಢ ಮಠದ ಕೊಳದ ಬಳಿ ಒಂದು ಕ್ಷಣ ನಿಂತು ಅದರೊಳಗಿನ ನೀರನ್ನು ಗಮನಿಸುತ್ತಿರಿ. ತುಸು ಹೊತ್ತಿನಲ್ಲೇ ಆಮೆಯೊಂದು ಕೊಳದ ದಡದ ಬಳಿ ಬರುತ್ತದೆ. ಸ್ವಲ್ಪ ದೃಷ್ಟಿಯನ್ನು ದೂರಕ್ಕೆ ಹರಿಸಿ. ಮೀನುಗಳ ನಡುವೆ ಈಜಾಡುವ ಆಮೆಗಳು ಕಾಣುತ್ತವೆ. ಹಾಗೆ ಕೊಳದ ಸುತ್ತಾ ಸುತ್ತು ಹಾಕುತ್ತಿದ್ದರೆ, ಇಂಥ ಹತ್ತಾರು ಆಮೆಗಳು ಕಾಣುತ್ತವೆ. ಇದೇ ಕಾರಣಕ್ಕೋ ಏನೋ, ಈ ಕೊಳವನ್ನು ‘ಆಮೆಯ ಕೊಳ’ ಎಂದು ಕರೆಯಬೇಕೆನ್ನಿಸುತ್ತದೆ.

ಕೊಳವನ್ನು ಮೇಲ್ನೋಟಕ್ಕೆ ಗಮನಿಸಿದರೆ 50 ರಿಂದ 60 ಆಮೆಗಳನ್ನು ಗುರುತಿಸಬಹುದು. ಆದರೆ, ಕೊಳದೊಳಗೆ ಅಂದಾಜು 200ಕ್ಕೂ ಹೆಚ್ಚು ಆಮೆಗಳಿರುವ ಸಾಧ್ಯತೆ ಇದೆ ಎನ್ನುತ್ತಾರೆ ಮಠದಲ್ಲಿ ಕೆಲಸ ಮಾಡುವವರು.

ಈ ಕೊಳದಲ್ಲಿರುವ ಬಹುತೇಕ ಆಮೆಗಳು ಮಳೆ ನೀರಿನೊಂದಿಗೆ ತೇಲಿಬಂದಿವೆ. ಶ್ರೀಮಠದ ಭಕ್ತರು ತಮ್ಮ ಗ್ರಾಮಗಳಲ್ಲಿ ಸಿಕ್ಕಿದ ಆಮೆಗಳನ್ನೂ ಇಲ್ಲಿ ತಂದು ಬಿಟ್ಟಿದ್ದಾರೆ. ಒಟ್ಟಾರೆ ಇದೊಂದು ಆಮೆ ಆವಾಸಸ್ಥಾನದ ಕೊಳವಾಗಿದೆ. ‘ಆಮೆ ಸಂತತಿ ರಕ್ಷಣೆಯಾಗಬೇಕು. ಜನರಿಗೆ ಪ್ರಾಣಿ–ಪಕ್ಷಿಗಳ ಬಗ್ಗೆ ಅರಿವು ಮೂಡಿಸಬೇಕು. ಅದಕ್ಕಾಗಿಯೇ ಈ ಕೊಳದಲ್ಲಿ ಆಮೆ, ಮೀನುಗಳನ್ನು ಬಿಟ್ಟಿದ್ದೇವೆ. ಇಲ್ಲಿಗೆ ಬಂದ ಭಕ್ತರು ಅವುಗಳೊಂದಿಗೆ ಕಾಲ ಕಳೆಯುವುದನ್ನು ನೋಡುವುದೇ ಚಂದ’ ಎನ್ನುತ್ತಾರೆ ಶ್ರೀಮಠದ ವೈ.ಎಸ್. ಸಂತೋಷ.

ಸ್ವಚ್ಛ ಕೊಳವೂ ಕಾರಣ
ನದಿ, ಜಲಾಶಯದ ಹಿನ್ನೀರಿನಲ್ಲಿ ಆಮೆಗಳು ಹೆಚ್ಚಾಗಿ ವಾಸಿಸುತ್ತವೆ. ಸ್ವಚ್ಛವಾದ, ತಿಳಿ ನೀರಿನಲ್ಲೂ ಇರುತ್ತವೆ. ಮಠದ ಕೊಳ ಸ್ವಚ್ಛವಾಗಿದ್ದು ಹಾಗೂ ನೀರು ತಿಳಿಯಾಗಿರುವ ಕಾರಣ ಆಮೆಗಳು ಹೆಚ್ಚಿನ ಸಂಖ್ಯೆಯಲ್ಲಿ ಇರಬಹುದು. ಪ್ರತಿ ವರ್ಷ ಈ ಕೊಳದಲ್ಲಿ ಶಾವಣದ ಕೊನೆಯ ಸೋಮವಾರದಂದು ತೆಪೋತ್ಸವ ನಡೆಯುತ್ತದೆ. ಈ ಉತ್ಸವ ಬಹಳ ವರ್ಷಗಳಿಂದ ಚಾಲ್ತಿಯಲ್ಲಿದೆ. ಆ ಕಾರಣಕ್ಕೆ ಕೊಳ ಸ್ವಚ್ಛವಾಗಿದೆ.

ಮಠಕ್ಕೆ ಭೇಟಿ ನೀಡುವ ಭಕ್ತರು, ಮೊದಲು ಸಿದ್ಧಾರೂಢರ ದರ್ಶನ ಪಡೆದು, ನಂತರ ಕೊಳಕ್ಕೂ ಭೇಟಿ ನೀಡುತ್ತಾರೆ. ತಾವು ತಂದಿರುವ ಆಹಾರವನ್ನು ಕೊಳಕ್ಕೆ ಹಾಕುತ್ತಾರೆ. ನಂತರ ಮೆಟ್ಟಿಲುಗಳ ಮೇಲೆ ಕುಳಿತು ಆಮೆ, ಮೀನುಗಳು ಆಹಾರ ತಿನ್ನುವುದನ್ನು ನೋಡುತ್ತಾ ಸಂತಸಪಡುತ್ತಾರೆ. ಮಕ್ಕಳೂ ತುಂಬಾ ಸಂಭ್ರಮದಿಂದ ಈ ದೃಶ್ಯವನ್ನು ವೀಕ್ಷಿಸುತ್ತಾರೆ. ಇದೇ ವೇಳೆ ಆಮೆಗಳು ಆಹಾರ ಸೇವಿಸಿದ ನಂತರ ಕೊಳದ ದಂಡೆಯ ಮೇಲೆ ಕುಳಿತು ಬಿಸಿಲು ಕಾಯಿಸಿಕೊಳ್ಳುತ್ತವೆ.

ಮೃದು ಚಿಪ್ಪಿನ ಆಮೆ
ಆಮೆಗಳಲ್ಲಿ ಅಪರೂಪದ ತಳಿ ಎನ್ನುವ ಮೃದು ಚಿಪ್ಪಿನ ಆಮೆ ಮಠದ ಕೊಳದಲ್ಲಿದೆ. ಉತ್ತರಭಾರತದ ನದಿ ತೀರಗಳಲ್ಲಿ ಈ ತಳಿ ಹೆಚ್ಚಾಗಿ ಇದೆಯಂತೆ. ಇದರ ಜತೆಗೆ ಒರಟು ಚಿಪ್ಪಿನ ಆಮೆಗಳೂ ಕೊಳದ ದಡದಲ್ಲಿ ಒಡಾಡುತ್ತಿರುತ್ತವೆ. ಇನ್ನೂ ಬೇರೆ ತಳಿಗಳು ಇರಬಹುದೇನೋ. ಆದರೆ, ಗಮನಕ್ಕೆ ಬಂದಿದ್ದು, ಕ್ಯಾಮೆರಾಕ್ಕೆ ಸೆರೆ ಸಿಕ್ಕಿದ್ದು ಮಾತ್ರ ಈ ಎರಡು ತಳಿಗಳು.

ಮೃದುಚಿಪ್ಪಿನ ಆಮೆಯ ವೈಜ್ಞಾನಿಕ ಹೆಸರು ನಿಲ್ಸೋನಿಯಾ ಗ್ಯಾಂಗೆಟಿಕ (Nilssonia gangetica or Indian Soft shell Turtle)). ಈ ಆಮೆಯ ಚಿಪ್ಪು ಮೃದುವಾಗಿರುವ ಕಾರಣ ಇದಕ್ಕೆ ಆ ಹೆಸರಿನಿಂದ ಕರೆಯುತ್ತಾರೆ. ಮಠದ ಕೊಳಕ್ಕೆ ಆಹಾರ ಹಾಕಿ, ಮೆಟ್ಟಿಲ ಮೇಲೆ ಕುಳಿತು ಸ್ವಲ್ಪ ಹೊತ್ತು ಕಾಯುತ್ತಿದ್ದರೆ, ಎರಡೂ ತಳಿಯ ಆಮೆಗಳು ದಡಕ್ಕೆ ಬಂದು ಬಿಸಿಲು ಕಾಯಿಸುವುದನ್ನು ನೋಡಬಹುದು.

*

–ಸಿದ್ಧಾರೂಢಮಠದಲ್ಲಿರುವ ಕೊಳಕ್ಕೆ ಆಹಾರ ಹಾಗುತ್ತಿರುವ ಭಕ್ತರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !