ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಊರಿಗೆ ಉಪಕಾರಿ

ಅಕ್ಷರ ಗಾತ್ರ

ಬಹಳ ವರ್ಷಗಳ ಹಿಂದೆ ಗುರುಪುರ ಎಂಬ ಊರಿನಲ್ಲಿ ಗೋಪಾಲ ಎಂಬ ಗೋವುಗಳನ್ನು ಕಾಯುವ ಯುವಕನಿದ್ದ. ಇವನು ಬಹಳ ಒಳ್ಳೆಯವನೂ ಹಾಗೂ ಅತ್ಯಂತ ಪ್ರಾಮಾಣಿಕನೂ ಆಗಿದ್ದ. ಹಾಗಾಗಿ ಊರಿನ ಜನರಿಗೆ ಬಹಳ ಅಚ್ಚು ಮೆಚ್ಚಿನವನಾಗಿದ್ದ. ಅವಿದ್ಯಾವಂತನಾಗಿದ್ದ ಇವನಿಗೆ ಗೋವುಗಳನ್ನು ಕಾಯುವ ಕೆಲಸ ಬಿಟ್ಟರೆ ಬೇರೇನೂ ಗೊತ್ತಿರಲಿಲ್ಲ. ಆದರೂ ಅವನ ಮನಸ್ಸಿನಲ್ಲಿ ಮಹದಾಸೆ ಒಂದಿತ್ತು. ಅದೇನೆಂದರೆ ಬಡತನವೇ ತುಂಬಿದ್ದ ತನ್ನ ಊರನ್ನು ಹೇಗಾದರೂ ಮಾಡಿ ಶ್ರೀಮಂತಗೊಳಿಸಬೇಕೆಂಬುದು. ಒಂದು ಚೂರೂ ಸ್ವಾರ್ಥವಿರದೆ ತನ್ನೂರಿಗೆ ಉಪಕಾರ ಮಾಡಬೇಕೆಂಬ ತನ್ನೀ ಮಹದಾಸೆಯನ್ನು ಯಾರಿಗಾದರೂ ಹೇಳಿದರೆ ನಕ್ಕು ಗೇಲಿ ಮಾಡಿ ಬಿಟ್ಟಾರೆಂದು ಯಾರಿಗೂ ಹೇಳದೆ ಇವನು ಮನಸ್ಸಿನಲ್ಲೇ ಇಟ್ಟುಕೊಂಡಿದ್ದ.

ಹೀಗಿರುವಾಗ ಒಮ್ಮೆ ಎಂದಿನಂತೆ ಗೋಪಾಲ ತನ್ನ ವೃತ್ತಿಯಾದ ಗೋವುಗಳನ್ನು ಕಾಯಲು ಊರಿನ ಪಕ್ಕದ ಕಾಡಿಗೆ ಹೋದ. ಗೋವುಗಳನ್ನು ಮೇಯಲು ಬಿಟ್ಟು ಅವುಗಳನ್ನು ಕಾಯುತ್ತಾ ಒಂದು ಮರದ ಕೆಳಗೆ ಇವನು ಕುಳಿತ. ಸ್ವಲ್ಪ ಹೊತ್ತಿನಲ್ಲೇ ಅಲ್ಲಿಗೊಬ್ಬ ಮಂತ್ರವಾದಿ ಬಂದ. ಚಿನ್ನವನ್ನು ಮಾಡುವ ಅಪೂರ್ವ ವಿದ್ಯೆಯನ್ನು ಕಲಿತಿದ್ದ ಆ ಮಂತ್ರವಾದಿ ಇದಕ್ಕಾಗಿ ಕೆಲವು ಮೂಲಿಕಾ ಸಸ್ಯಗಳನ್ನು ಹುಡಿಕಿಕೊಂಡು ಅಲ್ಲಿಗೆ ಬಂದಿದ್ದ. ಗೋವುಗಳು ಮೇಯುತ್ತಿದ್ದ ಜಾಗದಲ್ಲಿ ಅವನು ಹುಡುಕುತ್ತಿದ್ದ ಸಸ್ಯಗಳನ್ನು ಕಂಡ. ಕೂಡಲೇ ಮಂತ್ರವಾದಿ ಗೋವುಗಳ ನಡುವೆ ನುಗ್ಗಿ ಆ ಸಸ್ಯಗಳನ್ನು ಕೀಳಲು ಮುಂದಾದ. ಆದರೆ ಗೋವುಗಳು ಇದಕ್ಕೆ ಅವಕಾಶ ಕೊಡದೆ ಕೊಂಬಿನಿಂದ ತಿವಿದು ಅವನನ್ನು ಓಡಿಸಿದವು.

ಇದನ್ನು ಕಂಡ ಗೋಪಾಲ ಕೂಡಲೇ ಓಡಿ ಬಂದು ಮಂತ್ರವಾದಿಯ ಸಹಾಯಕ್ಕೆ ನಿಂತು ಏನಾಯಿತೆಂದು ವಿಚಾರಿಸಿದ. ‘ಇಲ್ಲಿ ಬಹಳ ವಿಶೇಷವಾದ ಸಸ್ಯಗಳಿವೆ. ಇವು ಔಷಧಿ ತಯಾರಿಸಲು ನನಗೆ ಬೇಕು. ಗೋವುಗಳನ್ನು ಸ್ವಲ್ಪ ನೀನು ಅತ್ತ ಓಡಿಸಿದರೆ ನಾನು ಅವುಗಳನ್ನು ತೆಗೆದುಕೊಳ್ಳುತ್ತೇನೆ’ ಎಂದ. ಅದರಂತೆ ಮಂತ್ರವಾದಿಗೆ ಗೋಪಾಲ ಸಹಾಯ ಮಾಡಿದ. ಅವನು ಗೋಪಾಲನ ಸಹಾಯದಿಂದ ತನಗೆ ಬೇಕಾದಷ್ಟು ಸಸ್ಯಗಳನ್ನು ಕಿತ್ತುಕೊಂಡ.

ಮಂತ್ರವಾದಿಗೆ ಚಿನ್ನವನ್ನು ತಯಾರಿಸಲು ಬೇಕಾದ ಅಮೂಲ್ಯ ಸಸ್ಯಗಳೇನೋ ಸಿಕ್ಕಿದವು. ಆದರೆ ಅವುಗಳನ್ನು ಹೋಮಕುಂಡಕ್ಕೆ ಹಾಕಿ ಉರಿಸಿ ಅದಕ್ಕೆ ನರಬಲಿ ಕೊಡಬೇಕಾಗಿತ್ತು. ಇದಕ್ಕೆ ತನಗೆ ಸಹಾಯ ಮಾಡಿದ ಗೋಪಾಲನನ್ನೇ ಬಳಸಿಕೊಳ್ಳಲು ಮಂತ್ರವಾದಿ ತೀರ್ಮಾನಿಸಿದ. ತಕ್ಷಣವೇ ಅವನು ``ಲೋಕ ಕಲ್ಯಾಣಕ್ಕಾಗಿ ನಾನೀಗಲೇ ಇಲ್ಲಿ ಹೋಮವನ್ನು ಮಾಡುತ್ತೇನೆ. ಇದರಿಂದ ನಿನಗೆ ಮತ್ತು ನಿನ್ನೂರಿಗೆ ಬಹಳ ಒಳ್ಳೆಯದಾಗುತ್ತದೆ. ಆದ್ದರಿಂದ ನಾನು ಹೇಳಿದಂತೆ ನೀನು ಕೇಳುತ್ತಾ ನನಗೆ ಸಹಾಯ ಮಾಡು’’ ಎಂದು ಮಂತ್ರವಾದಿ ಗೋಪಾಲನಿಗೆ ಹೇಳಿದ. ತನ್ನೂರಿಗೆ ಒಳ್ಳೆಯದಾಗುತ್ತದೆಂಬ ಮಾತು ಕೇಳಿ ರೋಮಾಂಚನಗೊಂಡ ಗೋಪಾಲ ಇದಕ್ಕೆ ಸಂತಸದಿಂದ ಒಪ್ಪಿದ.

ಮಂತ್ರವಾದಿ ಹೇಳಿದಂತೆ ಒಣ ಮರಗಳನ್ನು ಮುರಿದು ಕಟ್ಟಿಗೆಗಳನ್ನಾಗಿ ಮಾಡಿ ಬೆಂಕಿ ಹೊತ್ತಿಸಿ ಗೋಪಾಲ ಹೋಮ ಕುಂಡವನ್ನು ಸಿದ್ಧಗೊಳಿಸಿಕೊಟ್ಟ. ಅಲ್ಲಿ ಧಗ ಧಗನೆ ಬೆಂಕಿ ಉರಿಯ ತೊಡಗಿತ್ತು. ``ನಾನು ಒಂದೊಂದೇ ಮಂತ್ರ ಹೇಳುತ್ತಾ ಹೇಳುತ್ತಾ ಹೋಗುತ್ತೇನೆ. ನೀನು ಈ ಅಮೂಲ್ಯ ಸಸ್ಯಗಳನ್ನು ಈ ಹೋಮ ಕುಂಡಕ್ಕೆ ಹಾಕುತ್ತಾ ಮೂರು ಸುತ್ತು ಬಾ’’ ಎಂದು ಮಂತ್ರವಾದಿ ಗೋಪಾಲನಿಗೆ ಹೇಳಿದ. ಅದರಂತೆ ಗೋಪಾಲ ಚಾಚೂ ತಪ್ಪದೆ ನಡೆಯ ತೊಡಗಿದ. ಇದರಿಂದ ತನ್ನೂರಿಗೆ ಒಳ್ಳೆಯದಾಗುತ್ತದೆಂಬ ನಿಸ್ವಾರ್ಥದ ಸಂತಸ ಗೋಪಾಲನ ತಲೆಯಲ್ಲಿ ತುಂಬಿ ತುಳುಕುತ್ತಿತ್ತು. ಆದರೆ ಸ್ವಾರ್ಥಿ ಮಂತ್ರವಾದಿಯ ತಲೆಯಲ್ಲಿ ಮೂರನೇ ಸುತ್ತಿಗೆ ಬರುತ್ತಿದ್ದಂತೆಯೇ ಗೋಪಾಲನನ್ನು ಹೋಮ ಕುಂಡಕ್ಕೆ ತಳ್ಳಿ ಬಲಿ ಕೊಡಬೇಕೆಂಬ ಕ್ರೂರತನ ತುಂಬಿ ತುಳುಕುತ್ತಿತ್ತು.

ಮಂತ್ರವಾದಿಯ ಮಂತ್ರಪಟಣದೊಡನೆ ಗೋಪಾಲ ಹೆಜ್ಜೆ ಹಾಕುತ್ತಾ ಮೂರನೇ ಸುತ್ತಿಗೆ ಬಂದ. ಇನ್ನೇನು ಹೋಮ ಕುಂಡಕ್ಕೆ ಗೋಪಾಲನನ್ನು ಮಂತ್ರವಾದಿ ನೂಕಬೇಕೆನ್ನುವಷ್ಟರಲ್ಲಿ ಅದುವರೆಗೆ ಇದನ್ನೆಲ್ಲಾ ಸೂಕ್ಷ್ಮವಾಗಿ ಗಮನಿಸುತ್ತಿದ್ದ ಗೋವೊಂದು ಓಡಿಬಂದು ಮಂತ್ರವಾದಿಯ ಬೆನ್ನಿಗೆ ಗುದ್ದಿತು. ತಕ್ಷಣವೇ ಅವನು ಹೋಮ ಕುಂಡದಲ್ಲಿ ಬಿದ್ದು ಧಗ ಧಗನೇ ಉರಿದು ಅವನೇ ಬಲಿಯಾಗಿ ಹೋದ. ಸ್ವಲ್ಪ ಹೊತ್ತಿನಲ್ಲಿ ಹೋಮ ಕುಂಡದಲ್ಲಿದ್ದ ಅಗ್ನಿ ಆರಿ ತಣ್ಣಗಾಯಿತು. ಅಲ್ಲಿ ಚಿನ್ನದ ಗೋವಿನ ವಿಗ್ರಹವೊಂದು ಕಾಣಿಸಿತು. ಗೋಪಾಲ ಸುತ್ತಲೂ ನೋಡಿದ ಮಂತ್ರವಾದಿ ಕಾಣಲಿಲ್ಲ. ಅವನು ಅಲ್ಲಿ ಬಲಿಯಾಗಿ ಬೂದಿಯಾಗಿರುವುದು ಅವನಿಗೆ ಗೊತ್ತೇ ಆಗಲಿಲ್ಲ. ತನಗಾಗಿ ಈ ಚಿನ್ನದ ಗೋವಿನ ವಿಗ್ರಹವನ್ನು ಕೊಟ್ಟು ಮಂತ್ರವಾದಿ ಎಲ್ಲಿಯೋ ಹೋಗಿರಬಹುದೆಂದು ಗೋಪಾಲ ಚಿನ್ನದ ಗೋವಿನ ವಿಗ್ರಹದೊಡನೆ ಮನೆಗೆ ಬಂದ.

ಗೋಪಾಲ ಮನಗೆ ಬಂದವನೇ ಚಿನ್ನದ ಗೋವಿನ ವಿಗ್ರಹವನ್ನು ಕುತೂಹಲದಿಂದ ನೋಡುತ್ತಾ ಅದರ ಕೊರಳಲ್ಲಿದ್ದ ಗಂಟೆಯನ್ನು ಅಲ್ಲಾಡಿಸಿದ ಕೂಡಲೇ ಮತ್ತೊಂದು ಚಿನ್ನದ ಗೋವಿನ ವಿಗ್ರಹ ಬಂತು. ಮತ್ತೊಮ್ಮೆ ಅದೇ ಗಂಟೆಯನ್ನು ಅಲ್ಲಾಡಿಸಿದ ಇನ್ನೊಂದು ಚಿನ್ನದ ಗೋವಿನ ವಿಗ್ರಹ ಅಲ್ಲಿ ಬಂತು. ಹೀಗೆ ಗಂಟೆ ಸದ್ದು ಮಾಡಿದಂತೆಲ್ಲಾ ಒಂದೊಂದು ಚಿನ್ನದ ವಿಗ್ರಹಗಳು ಪ್ರತ್ಯಕ್ಷವಾಗ ತೊಡಗಿದವು. ಖುಷಿಗೊಂಡ ಗೋಪಾಲ ವಿಷಯವನ್ನು ಊರಿನವರಿಗೆಲ್ಲಾ ತಿಳಿಸಿ ಎಲ್ಲರಿಗೂ ಒಂದೊಂದು ಚಿನ್ನದ ಗೋವಿನ ವಿಗ್ರಹವನ್ನು ನೀಡಿದ. ಎಲ್ಲರೂ ಇದರಿಂದ ಶ್ರೀಮಂತರಾದರು. ಇದರಿಂದ ಬಡತನದಲ್ಲಿದ್ದ ತನ್ನೂರನ್ನು ಶ್ರೀಮಂತಗೊಳಿಸಬೇಕೆಂಬ ಗೋಪಾಲನ ಮಹದಾಸೆ ಕೂಡ ನೆರವೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT