ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವೈಕುಂಠಕ್ಕೆ ಬಾಗಿಲು ಈ ಏಕಾದಶೀ

Last Updated 16 ಡಿಸೆಂಬರ್ 2018, 19:30 IST
ಅಕ್ಷರ ಗಾತ್ರ

‘ದಾರಿ ಯಾವುದಯ್ಯ ವೈಕುಂಠಕೆ ದಾರಿ ತೋರಿಸಯ್ಯಾ’ – ಪುರಂದರದಾಸರ ಈ ಕೀರ್ತನೆಯನ್ನು ನಾವು ಕೇಳಿದ್ದೇವೆ. ಭಕ್ತನಾದವನು ದೇವರನ್ನು ಕೇಳಬಹುದಾದ ದೊಡ್ಡ ವರವನ್ನು ಇಲ್ಲಿ ದಾಸರು ಕೇಳುತ್ತಿದ್ದಾರೆ; ಅದೇ ವೈಕುಂಠವನ್ನು ಸೇರುವುದು. ಇಷ್ಟಕ್ಕೂ ವೈಕುಂಠ ಎಂದರೇನು?

ತ್ರಿಮೂರ್ತಿಗಳಲ್ಲಿ ಒಬ್ಬ ವಿಷ್ಣು; ಬ್ರಹ್ಮ ಮತ್ತು ಮಹೇಶ್ವರರು ಉಳಿದ ಇಬ್ಬರು. ಸೃಷ್ಟಿಯನ್ನು ಮಾಡುವವನು ಬ್ರಹ್ಮನಾದರೆ, ಅದನ್ನು ಕಾಪಾಡುವವನೇ ವಿಷ್ಣು; ಕೊನೆಗೆ ಸಂಹಾರ ನಡೆಸುವವನು ಮಹೇಶ್ವರ. ವಾಸ್ತವವಾಗಿ ಈ ಮೂರು ಪ್ರಕ್ರಿಯೆಗಳೂ ಒಂದೇ ತತ್ತ್ವದ ಬೇರೆ ಬೇರೆ ಆಯಾಮಗಳು ಮಾತ್ರ. ಶಿವನಿರುವ ತಾಣ ಕೈಲಾಸ; ಬ್ರಹ್ಮನದು ಬ್ರಹ್ಮಲೋಕ;ವಿಷ್ಣುವಿನ ನೆಲೆಯೇ ವೈಕುಂಠ. ವಿಷ್ಣುವಿನ ಲೋಕವನ್ನು ಹೊಂದಬೇಕೆಂಬ ತವಕ ಎಲ್ಲ ಆಸ್ತಿಕರದ್ದು. ಏಕೆಂದರೆ ಅಲ್ಲಿ ಕಷ್ಟ–ಕೋಟಲೆಗಳ ಗೊಡವೆ ಇಲ್ಲ; ಇರುವುದೆಲ್ಲವೂ ಬರಿಯ ಆನಂದವೇ.

ಇದು ಸರಿ; ಆದರೆ ವೈಕುಂಠಕ್ಕೆ ಹೋಗುವ ಬಗೆ ಹೇಗೆ?
ಮರಣ ಸಂಭವಿಸಿದ ಮೇಲೆ ಆ ವ್ಯಕ್ತಿಯ ಅವನ ಪಾಪ–ಪುಣ್ಯಗಳಿಗೆ ತಕ್ಕಂತೆ ಅವನ ಮುಂದಿನ ಜನ್ಮ ನಿರ್ಧಾರವಾಗುತ್ತದೆ; ಅವನು ಯಾವ ಲೋಕವನ್ನು ಸೇರುತ್ತಾನೆ ಎನ್ನುವುದಕ್ಕೂ ಇದೇ ಮಾನದಂಡ. ಎಲ್ಲರೂ ಖಂಡಿತವಾಗಿಯೂ ವೈಕುಂಠವನ್ನು ಕೊನೆಗೆ ಮುಟ್ಟಲೇಬೇಕು; ಆದರೆ ಅದು ಯಾವ ಜನ್ಮದಲ್ಲಿ ಎಂದು ಹೇಳಲು ಆಗದು. ಏಕೆಂದರೆ ಇದು ಅವರ ಪಾಪ–ಪುಣ್ಯಗಳ ಎಣಿಕೆಯನ್ನು ಅವಲಂಬಿಸಿರುತ್ತದೆ. ಹೀಗಿದ್ದರೂ ಕೂಡ ಎಲ್ಲರೂ ವರ್ಷದ ಒಂದು ದಿನದಲ್ಲಿ ವೈಕುಂಠವನ್ನು ಮುಕ್ತವಾಗಿ ಸಂದರ್ಶಿಸಬಹುದು. ಈ ದಿನವೇ ‘ವೈಕುಂಠ ಏಕಾದಶೀ’ ಎನ್ನುವುದು ಆಸ್ತಿಕರ ನಂಬಿಕೆ.

ಏಕಾದಶಿಗೂ ವಿಷ್ಣುವಿಗೂ ನಂಟಿದೆ. ಅಂದು ಅವನ ಹೆಸರಿನಲ್ಲಿ ಉಪವಾಸವ್ರತವನ್ನು ಮಾಡುವ ಕ್ರಮವೂ ಉಂಟಷ್ಟೆ. ಏಕಾದಶಿ ಎಂಬ ಶಬ್ದವನ್ನು ಕೇಳಿದರೆ ಯಮದೂತರೂ ಒಂದು ಕ್ಷಣ ಆಲೋಚಿಸುತ್ತಾರೆ – ಎಂಬ ಮಾತಿದೆ. ಎಂದರೆ ಏಕಾದಶಿಯ ದಿನ ವಿಷ್ಣುವಿನ ಭಕ್ತರನ್ನು ಮರಣವೂ ಮುಟ್ಟಲಾರದು ಎನ್ನುವುದು ಇದರ ತಾತ್ಪರ್ಯ. ಈ ತತ್ತ್ವವೇ ವೈಕುಂಠ ಏಕಾದಶಿಯ ಆಚರಣೆಯ ಹಿನ್ನೆಲೆಯಲ್ಲಿರುವುದು. ಅಂದು ವಿಷ್ಣುವಿನ ಭಕ್ತರೆಲ್ಲರೂ ವೈಕುಂಠವನ್ನು ಸೇರುತ್ತಾರೆ ಎನ್ನುವುದೇ ಇಲ್ಲಿರುವ ಶ್ರದ್ಧೆ.

ವೈಕುಂಠ ಏಕಾದಶಿಯಂದು ವೈಕುಂಠವನ್ನು ಮುಟ್ಟುವ ಬಗೆ ಹೇಗೆ?
ವೈಕುಂಠ ಏಕಾದಶಿಯಂದು ಶ್ರೀನಿವಾಸ, ಎಂದರೆ ವೆಂಕಟರಮಣನ ಆಲಯದಲ್ಲಿ ವಿಶೇಷ ಪೂಜೆಗಳು ನಡೆಯುವುದುಂಟು. ಅಂದು ಅಲ್ಲಿ ವೈಕುಂಠದ ಬಾಗಿಲನ್ನು ತೆಗೆಯಲಾಗುತ್ತದೆ ಎನ್ನುವುದನ್ನೂ ಕೇಳಿದ್ದೇವೆ. ವೆಂಕಟರಮಣ(ಅಥವಾ ವೆಂಕಟೇಶ)ನ ಆಲಯಕ್ಕೂ ವೈಕುಂಠಕ್ಕೂ ಏನು ಸಂಬಂಧ? ಈಗ ನಡೆಯುತ್ತಿರುವುದು ಕಲಿಯುಗ. ಈ ಯುಗದ ದೇವರು ಎಂದರೆ ವೆಂಕಟೇಶ. ಅವನು ವಿಷ್ಣುವಿನ ಅವತಾರ. ಹೀಗಾಗಿ ವೈಕುಂಠ ಏಕಾದಶಿಯಂದು ವೆಂಕಟರಮಣನ ಆಲಯಕ್ಕೆ ಹೋಗಿ ಬಂದವರಿಗೆ ಸಾಕ್ಷಾತ್‌ ವೈಕುಂಠಕ್ಕೆ ಹೋಗಿ ಬಂದಷ್ಟು ಪುಣ್ಯವೂ ಆನಂದವೂ ಲಭಿಸುತ್ತದೆ ಎನ್ನುವುದು ಈ ಆಚರಣೆಯ ಹಿಂದಿರುವ ನಿಲುವು.

ವೆಂಕಟೇಶನ ನಿಲಯ ಎಂದರೆ ತಿರುಮಲ ತಿರುಪತಿ ತಾನೆ? ಅವನು ತಿರುಪತಿ ತಿಮ್ಮಪ್ಪ. ಅವನು ನೆಲೆನಿಂತ ಬೆಟ್ಟವನ್ನು ವೆಂಕಟಾದ್ರಿ ಎಂದೂ ಕರೆಯುತ್ತಾರೆ. ಈ ಬೆಟ್ಟವನ್ನು ಪ್ರದಕ್ಷಿಣೆ ಮಾಡಿದವರಿಗೆ ಇಡಿಯ ಭೂಮಿಯನ್ನು ಪ್ರದಕ್ಷಿಣೆ ಮಾಡಿದಷ್ಟು ಪುಣ್ಯ ಲಭಿಸುತ್ತದೆ ಎನ್ನುವ ಪುರಾಣವಾಕ್ಯಗಳಿವೆ. ‘ವೇಂ’ ಎಂದರೆ ಎಲ್ಲ ಪಾಪಗಳು ಎಂದೂ, ‘ಕಟ’ ಎಂದರೆ ಆ ಪಾಪಗಳನ್ನು ಸುಡುವುದು ಎಂದೂ ಪುರಾಣಗಳು ಅರ್ಥಮಾಡಿವೆ. ಹೀಗಾಗಿ ಎಲ್ಲರ ಎಲ್ಲ ಪಾಪಗಳನ್ನೂ ಸುಡುವ ಬೆಟ್ಟವೇ ‘ವೆಂಕಟಾಚಲ’; ಆ ಪಾಪಗಳನ್ನು ಸುಡುವ ದೇವರು ವೆಂಕಟೇಶ ಎಂಬ ಶ್ರದ್ಧೆ ಸಾವಿರಾರು ವರ್ಷಗಳಿಂದ ಬೇರುಬಿಟ್ಟಿದೆ. ಈ ಕಾರಣದಿಂಲದೇ ವೈಕುಂಠ ಏಕಾದಶಿ ಆಚರಣೆಯು ವೆಂಕಟಾಚಲ, ಎಂದರೆ ತಿರುಪತಿಯಲ್ಲಿ ವಿಶೇಷವಾಗಿ ನಡೆದಬಂದಿದೆ. ಅಂದು ಅಲ್ಲಿ ವೈಕುಂಠಕ್ಕೆ ಎಲ್ಲರಿಗೂ ಮುಕ್ತವಾದ ಪ್ರವೇಶಾವಕಾಶ ಒದಗುತ್ತದೆ; ಏಕೆಂದರೆ ಅದರ ಬಾಗಿಲು ಇರುವುದು ತಿರುಪತಿಯ ಆಲಯದಲ್ಲಿಯೇ ಎಂಬುದು ನಂಬಿಕೆ. ವೆಂಕಟೇಶನ ಗರ್ಭಗುಡಿಯ ಶಿಖರವನ್ನು ‘ಆನಂದನಿಲಯ’ ಎಂದಿರುವುದು ಕೂಡ ಗಮನಾರ್ಹ. ಎಲ್ಲ ವೆಂಕಟೇಶನ ಆಲಯಗಳೂ ತಿರುಪತಿ ತಿಮ್ಮಪ್ಪನ ಆಲಯದ ಪ್ರತಿರೂಪಗಳೇ ಆದುದರಿಂದ ಅಂದು ಎಲ್ಲ ಶ್ರೀನಿವಾಸನ ಆಲಯಗಳಲ್ಲೂ ವೈಕುಂಠದ್ವಾರಗಳಿರುತ್ತವೆ.

‘ವಿಷ್ಣು’ ಎಂದರೆ ಯಾರು? ಎಲ್ಲೆಲ್ಲೂ ಎಲ್ಲರಲ್ಲಿಯೂ ಹರಡಿರುವ ಮಹಾತತ್ತ್ವವೇ ‘ವಿಷ್ಣು’. ಅವನ ಆಲಯ ಯಾವುದೆಂದರೆ ಆನಂದನಿಲಯ. ನಮ್ಮ ಒಳಗೂ ಹೊರಗೂ ಇರುವ ಆನಂದವನ್ನು ಕಂಡುಕೊಳ್ಳುವ ಎಲ್ಲ ಆರಾಧಾನೆಗಳೂ ವಿಷ್ಣುಲೋಕಕ್ಕೆ ಸಮ. ವಿಷ್ಣು ಎಂದರೆ ನಮ್ಮ ಸ್ಥಿತಿಯನ್ನು ಕಾಪಾಡುವ ದೈವ. ನಮ್ಮ ಬದುಕಿನಲ್ಲಿ ಸಂತೋಷವನ್ನು ಪಡೆಯಬೇಕೆಂಬ ಅದಮ್ಯ ಉತ್ಸಾಹ–ಶ್ರದ್ಧೆಗಳೇ ವೈಕುಂಠ ಏಕಾದಶಿ ಎಂಬ ಧಾರ್ಮಿಕ ಆಚರಣೆಯ ಮೂಲಸ್ವರೂಪ. ಅದನ್ನು ಸಾಧಿಸುವ ಸಂಕಲ್ಪವನ್ನು ಅಂದು ವೆಂಕಟೇಶನ ದರ್ಶನದ ಸಮಯದಲ್ಲಿ ಅವನ ಆಲಯದಲ್ಲಿಯಾದರೂ ಮಾಡಲಿ ಎಂದು ನಮ್ಮ ಹಿರಿಯರು ಈ ದಿನಕ್ಕೆ ವಿಶೇಷ ಮನ್ನಣೆಯನ್ನು ಕೊಟ್ಟಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT