ಹಬ್ಬಕ್ಕೂ, ಸೀರೆಗೂ ಉಂಟು ನಂಟು

7

ಹಬ್ಬಕ್ಕೂ, ಸೀರೆಗೂ ಉಂಟು ನಂಟು

Published:
Updated:

ಶ್ರಾವಣ ಮಾಸದೊಂದಿಗೆ ಸಾಲು ಸಾಲು ಹಬ್ಬಗಳ ಸಡಗರಕ್ಕೂ ಚಾಲನೆ ಸಿಗುತ್ತದೆ. ಈ ಮಾಸದ ಪ್ರಾರಂಭದಲ್ಲಿಯೇ ಎದುರುಗೊಳ್ಳುವ ವರಮಹಾಲಕ್ಷ್ಮಿ ಎಂದರೆ ಮಹಿಳೆಯರಿಗೆ ವಿಶೇಷ ಪ್ರೀತಿ. ಕಳಸಕ್ಕೆ ಚಂದದ ಅಲಂಕಾರ ಮಾಡುವ ಜೊತೆಗೆ ಹೆಣ್ಮಕ್ಕಳ ಮನದೊಳಗೆ ಸೀರೆ ಕೊಳ್ಳುವ ಸಂಭ್ರಮ ರಿಂಗಣಿಸಲು ಶುರುವಾಗುತ್ತದೆ. 

ಸೀರೆ ವ್ಯಾಪಾರಿಗಳು ಬಂಪರ್‌ ಆಫರ್‌ಗಳ ಜೊತೆಗೆ ನವೀನ ಬಗೆಯ ಸೀರೆಗಳನ್ನು ಮಾರಾಟಕ್ಕೆ ಅಣಿಗೊಳಿಸಿದ್ದಾರೆ. ನಗರದ ಚಿಕ್ಕಪೇಟೆ, ಮಲ್ಲೇಶ್ವರ, ಗಾಂಧಿ ಬಜಾರ್‌ಗಳಲ್ಲಿ ಶಾಪಿಂಗ್‌ ಭರ್ಜರಿಯಾಗಿಯೇ ನಡೆಯುತ್ತಿದೆ. ಹಗುರ ರೇಷ್ಮೆ ಸೀರೆಗಳು, ಹಾಫ್‌ ಆ್ಯಂಡ್‌ ಆಫ್‌ ಸೀರೆ, ಕಲಂಕಾರಿ, ಡಿಸೈನರ್‌ ಕಾಂಟ್ರಸ್ಟ್‌ ಸೀರೆಗಳು ಈ ವರ್ಷ ಸದ್ದು ಮಾಡುತ್ತಿವೆ. ಇವುಗಳ ಜತೆಗೆ ಕಾಟನ್‌, ಕ್ರೇಪ್‌, ಡಿಸೈನ್‌ ಫ್ಯಾನ್ಸಿ ಸೀರೆಗಳು, ದೊಡ್ಡ ಅಂಚಿನ ಸೀರೆಗಳು ಹಬ್ಬದ ಸೀರೆ ಆಯ್ಕೆಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿವೆ.   

ಜರಿ ಸೀರೆ ಎಂದಾಕ್ಷಣ ಬಲು ಭಾರ ಎಂಬ ಯೋಚನೆಯಿಂದ ಅದರಿಂದ ದೂರ ಉಳಿಯುವವರೇ ಹೆಚ್ಚು. ಹಗುರ, ಧರಿಸಲು ಆರಾಮವೆನ್ನಿಸುವ ಸೀರೆಗಳು ಲಭ್ಯವಿವೆ. ಹಂಸ, ನವಿಲು, ಮಾವಿನಕಾಯಿ ಹೀಗೆ ವಿವಿಧ ವಿನ್ಯಾಸಗಳ ಬಾರ್ಡರ್‌ ಸೀರೆಗಳು ಲಭ್ಯವಿವೆ. ಜರಿ ಸೀರೆಗಳಲ್ಲಿ ಈಗ ಅಗಲವಾದ ಅಂಚುಳ್ಳ ಸೀರೆಗಳು ಮತ್ತೆ ಸದ್ದು ಮಾಡುತ್ತಿವೆ. 10– 15 ವರ್ಷಗಳ ಹಿಂದೆ ಅದ್ದೂರಿ ಕಾರ್ಯಕ್ರಮಗಳಲ್ಲಿ  ಅಗಲ ಅಂಚಿನ ಸೀರೆಗಳು ಹೆಚ್ಚು ಪ್ರಚಲಿತದಲ್ಲಿದ್ದವು. ಬಳಿಕ ಸಣ್ಣ ಜರಿಯಂಚಿನ ಸೀರೆಗಳು ಟ್ರೆಂಡ್‌ ಆಗಿದ್ದವು. ಈಗ ಹಬ್ಬಗಳಿಗೆ, ಮದುವೆಗೆ ಅಗಲ ಬಾರ್ಡರ್‌ ಸೀರೆಗಳನ್ನು ಕೊಳ್ಳಲು ಸೀರೆಪ್ರಿಯರು ಹೆಚ್ಚು ಆಸಕ್ತಿ ವಹಿಸುತ್ತಾರೆ ಎನ್ನುತ್ತಾರೆ ಸೀರೆ ಅಂಗಡಿ ಮಾಲೀಕರು.

ರೇಷ್ಮೆ ಸೀರೆಗಳಲ್ಲಿ ಬಾರ್ಡರ್‌ಗಳಿಲ್ಲದ, ನವಿಲು, ಗಂಡಬೇರುಂಡನ ದೊಡ್ಡ ದೊಡ್ಡ ಚಿತ್ರಗಳುಳ್ಳ ಸೀರೆಗಳು ಈಗ ಹೆಚ್ಚು ಜನಪ್ರಿಯವಾಗಿವೆ. ಸಾಂಪ್ರದಾಯಿಕ ನೋಟದ ಈ ಸೀರೆಗಳು ಹಬ್ಬ ಹರಿದಿನ, ಸಣ್ಣ ಹಾಗೂ ಅದ್ದೂರಿ ಎಲ್ಲಾ ಬಗೆಯ ಕಾರ್ಯಕ್ರಮಗಳಿಗೂ ತೊಟ್ಟುಕೊಳ್ಳಬಹುದು. ಇದಲ್ಲದೇ ಈಗ ಹಾಫ್‌ ಆ್ಯಂಡ್ ಹಾಫ್‌ ಸೀರೆಗಳೂ ಹೆಂಗಳೆಯರ ಮನಗೆದ್ದಿವೆ.ಪರಸ್ಪರ ವಿರುದ್ಧ ಬಣ್ಣಗಳಲ್ಲಿ ಲಭ್ಯವಿರುವ ಈ ಸೀರೆ ಉಟ್ಟಾಗ ಲೆಹೆಂಗಾ ತೊಟ್ಟಂತೆ ಕಾಣುತ್ತದೆ. 

‘ಹೊಸತನ ಬಯಸುವವರು ಡಿಸೈನರ್‌ ಕಾಂಟ್ರಸ್ಟ್‌ ಸೀರೆಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಈ ಸೀರೆಗಳಲ್ಲಿ ನೆರಿಗೆ ಬಳಿ ಹೂವಿನ ವಿನ್ಯಾಸಗಳಿದ್ದರೆ, ಸೆರಗನ್ನು ಮುತ್ತು, ಹರಳುಗಳಿಂದ ಅಲಂಕರಿಸುತ್ತಾರೆ. ಸೀರೆಯೂ ಮೂರು– ನಾಲ್ಕು ಬಣ್ಣದಿಂದ ಕೂಡಿರುತ್ತದೆ. ಕಲಂಕರಿ, ಬೂಟಿಕ್‌ ಸೀರೆ, ಬುಟ್ಟಾ, ಚೆಕ್ಸ್‌, ಪ್ಲೋರಲ್‌ ವಿನ್ಯಾಸದ ಸೀರೆ ತುಂಬಾ ಬೇಡಿಕೆಯಲ್ಲಿವೆ’ ಎನ್ನುತ್ತಾರೆ ವಸ್ತ್ರವಿನ್ಯಾಸಕಿ ಶಿಲ್ಪಾ.

ಸೀರೆ ಜೊತೆ ಜಾಕೆಟ್‌ ತೊಡುವುದು ಈಗಿನ ಟ್ರೆಂಡ್‌. ಸಾದಾ ಸೀರೆ ಮೇಲೆ ವಿಭಿನ್ನ ವಿನ್ಯಾಸದ, ಎಂಬ್ರಾಯ್ಡರಿವುಳ್ಳ ಜಾಕೆಟ್‌ ಚಂದ ಕಾಣುತ್ತದೆ. ಇದರಲ್ಲಿ ವಿ– ನೆಕ್‌, ಕಾಲರ್‌ ಹೀಗೆ ನಾನಾ ಬಗೆಯಲ್ಲಿ ಲಭ್ಯ. ಸೀರೆ ಬಣ್ಣಕ್ಕೆ ತದ್ವಿರುದ್ಧ ಬಣ್ಣದ ಜಾಕೆಟ್‌ಗಳನ್ನು ತೊಡಬೇಕು. ಹಾಗೇ ಸಾದಾ ಬಣ್ಣದ ಜಾಕೆಟ್‌ ತೊಟ್ಟಾಗ ಗಾಢ ಬಣ್ಣದ ಸೀರೆ ತೊಟ್ಟರೆ ಒಪ್ಪುತ್ತದೆ.

ಇತ್ತೀಚೆಗೆ ನಟಿ ಶಿಲ್ಪಾ ಶೆಟ್ಟಿ, ಸೋನಂ ಕಪೂರ್‌ ಧೋತಿ ಸೀರೆಯುಟ್ಟು ರ‍್ಯಾಂಪ್‌ ಷೋಗಳಲ್ಲಿ ಮಿಂಚಿದ್ದರು. ಈ ಸ್ಟೈಲ್‌ ಕೂಡ ಈಗಿನ ಹೊಸ ಟ್ರೆಂಡ್‌. ಸರಳ ವಿನ್ಯಾಸದ, ಸಣ್ಣ ಜರಿಯಂಚಿನ ಸೀರೆಗಳನ್ನು ಧೋತಿ ಮಾದರಿಯಲ್ಲಿ ಉಡಬಹುದು. ಪ್ಯಾಂಟ್ ಅಥವಾ ಲೆಗ್ಗಿನ್ಸ್ ಧರಿಸಿ ಅದರ ಮೇಲೆ ಸೀರೆ ಉಡುವ ಸ್ಟೈಲ್‌ ಆರಂಭವಾಗಿದೆ. ಕಾಟನ್, ಜಾರ್ಜೆಟ್, ರೇಷ್ಮೆ ಸೀರೆಗಳು ಇದಕ್ಕೆ ಸೂಕ್ತ.

 *
ಈ ಹಬ್ಬಕ್ಕೆ ಬ್ಲೌಸ್‌ಗಳಲ್ಲಿ ಲಕ್ಷ್ಮಿ ದೇವಿಯ ರೂಪ, ಕಾಸಿನ ಸರದಂತಹ ಡಿಸೈನ್‌ ಹೆಚ್ಚು ಮಾಡಿಸಿಕೊಳ್ಳುತ್ತಾರೆ.
–ಶಿಲ್ಪಾ, ಟೈ ನಾಟ್‌ ಫ್ಯಾಶನ್ಸ್‌ ವಸ್ತ್ರವಿನ್ಯಾಸಕಿ 

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !