ಮತ್ತೆ ಸೈನಿಕನಾಗುವೆ...

7

ಮತ್ತೆ ಸೈನಿಕನಾಗುವೆ...

Published:
Updated:
Deccan Herald

ನನಗೆ ಪರಿಚಯ ಇರುವ ಹಿರಿಯ ದಂಪತಿಯೊಬ್ಬರು ಕೆಲವು ವರ್ಷಗಳ ಹಿಂದೆ ವಿಶೇಷ ಹೋಮ ನಡೆಸಿದರು. ಅವರ ಅಳಿಯನಿಗೆ ಕಾಶ್ಮೀರಕ್ಕೆ ವರ್ಗ ಆಗಿತ್ತು. ವರ್ಗಾವಣೆ ಆದೇಶ ರದ್ದುಪಡಿಸಲು ದೇವರನ್ನು ಸಂತೃಪ್ತಿಗೊಳಿಸಲು ಈ ಹೋಮ ಆಯೋಜಿಸಲಾಗಿತ್ತು. ಅವರ ಅಳಿಯ ಕೇಂದ್ರ ಸರ್ಕಾರದ ಹಣಕಾಸು ಸಚಿವಾಲಯದಲ್ಲಿ ಹಿರಿಯ ಅಧಿಕಾರಿಯಾಗಿ ಕೆಲಸ ಮಾಡುತ್ತಿದ್ದರು.

ಪಾಕಿಸ್ತಾನ ಆಕ್ರಮಿಸಿಕೊಂಡಿದ್ದ ಪ್ರದೇಶಗಳನ್ನು ತಾಯ್ನಾಡಿಗಾಗಿ ಪುನಃ ಗೆದ್ದುಕೊಡುವ ಉದ್ದೇಶದಿಂದ ಸಾವು ಖಚಿತ ಎನ್ನುವ ಮಾರ್ಗದಲ್ಲಿ ಹೆಜ್ಜೆ ಹಾಕಿದ 22 ವರ್ಷ ವಯಸ್ಸಿನ ಕ್ಯಾಪ್ಟನ್ ವಿಜಯಂತ್ ಥಾಪರ್ ಅವರ ಜೊತೆ ಮೇಲಿನ ಪ್ರಸಂಗವನ್ನು ಹೋಲಿಕೆ ಮಾಡಿ ನೋಡಿ. ಪಾಕಿಸ್ತಾನ ಆಕ್ರಮಿಸಿಕೊಂಡಿದ್ದ ಟೊಲೊಲಿಂಗ್‌ ಪ್ರದೇಶವನ್ನು ವಶಪಡಿಸಿಕೊಳ್ಳಲು ಮುನ್ನಡೆದ ಸೇನಾ ತುಕಡಿಯ ನೇತೃತ್ವವನ್ನು ಈ ಯುವ ಅಧಿಕಾರಿ ವಹಿಸಿಕೊಂಡಿದ್ದರು. ಟೊಲೊಲಿಂಗ್‌ ಪ್ರದೇಶವನ್ನು ವಶಪಡಿಸಿಕೊಂಡಿದ್ದು, ಕಾರ್ಗಿಲ್ ಯುದ್ಧದಲ್ಲಿ ಭಾರತೀಯ ಸೇನೆಯ ಪಾಲಿಗೆ ಮೊದಲ ಜಯ ಆಗಿತ್ತು. ಈ ಜಯ ಇಡೀ ಯುದ್ಧದ ಗತಿಯನ್ನು ಬದಲಿಸಿತು.

1998ರ ಡಿಸೆಂಬರ್‌ 12ರಂದು ರಜಪುತಾನಾ ರೈಫಲ್ಸ್‌ ರೆಜಿಮೆಂಟ್‌ಗೆ ನಿಯೋಜನೆಗೊಂಡ ತಕ್ಷಣ ಕ್ಯಾಪ್ಟನ್ ವಿಜಯಂತ್ ಮತ್ತು ಅವರ ತಂಡವನ್ನು ಭಯೋತ್ಪಾದನಾ ವಿರೋಧಿ ಕಾರ್ಯಾಚರಣೆಗಳಲ್ಲಿ ತೊಡಗಿಸಿಕೊಳ್ಳಲು ಕುಪ್ವಾರಾ ಜಿಲ್ಲೆಗೆ ಕಳುಹಿಸಲಾಯಿತು. ವಿಜಯಂತ್ ಅವರು ಎರಡು ಉಗ್ರ ಕಾದಾಟಗಳಲ್ಲಿ ಭಾಗಿಯಾಗಿದ್ದರು. ಕಾದಾಟದ ವೇಳೆ ತಮ್ಮತ್ತ ಮೂವತ್ತು ಗುಂಡುಗಳು ಹಾರಿಬಂದರೂ ಪ್ರಾಣ ಉಳಿದದ್ದು ಹೇಗೆ ಎಂಬುದನ್ನು ಅವರು ತಮ್ಮ ಅಮ್ಮನಿಗೆ ಕರೆ ಮಾಡಿ ವಿವರಿಸಿದ್ದರು. ಇದಾದ ನಂತರ ಅವರ ತಂಡವನ್ನು ಕಾರ್ಗಿಲ್‌ ಯುದ್ಧ ಕಾರ್ಯಾಚರಣೆಗೆ ನಿಯೋಜಿಸಲಾಯಿತು.

‘ಅಮ್ಮಾ, ನಾವು ಟೊಲೊಲಿಂಗ್‌ ಪ್ರದೇಶವನ್ನು ವಶಪಡಿಸಿಕೊಂಡಿದ್ದೇವೆ ಎಂದು ಅವನು ಪರ್ವತದ ತುದಿಯಿಂದ ಕರೆ ಮಾಡಿದ್ದಾಗ ಖುಷಿಯಿಂದ ಹೇಳಿಕೊಂಡಿದ್ದ. ತಾನು ಇನ್ನೊಂದು ಕಾರ್ಯಾಚರಣೆಗೆ ಹೋಗುತ್ತಿದ್ದು, ಇನ್ನು ಇಪ್ಪತ್ತು ದಿನ ದೂರವಾಣಿ ಕರೆ ಮಾಡಲು ಸಾಧ್ಯವಾಗುವುದಿಲ್ಲ ಎಂದೂ ಮಗ ಹೇಳಿದ್ದ’ ಎಂದು ನೆನಪಿಸಿಕೊಳ್ಳುತ್ತಾರೆ ವಿಜಯಂತ್ ಅವರ ತಾಯಿ ತೃಪ್ತಾ ಥಾಪರ್.

ಆದರೆ, ಸಾವು ನಿಶ್ಚಿತ ಎನ್ನುವಂಥ ಹಾದಿಯತ್ತ ವಿಜಯಂತ್‌ ಹೆಜ್ಜೆ ಹಾಕಿರುವುದು ಅವರ ಕುಟುಂಬದ ಸದಸ್ಯರಿಗೆ ಗೊತ್ತಿರಲಿಲ್ಲ. ಪಾಕಿಸ್ತಾನ ಆಕ್ರಮಿಸಿಕೊಂಡಿರುವ ‘ಥ್ರೀ ಪಿಂಪಲ್’, ಲೋನ್‌ ಹಿಲ್‌ ಹಾಗೂ ನಾಲ್‌ ಪ್ರದೇಶಗಳನ್ನು ವಶಪಡಿಸಿಕೊಳ್ಳಲು ಮುಂದಿನ 17 ದಿನಗಳ ಅವಧಿಯಲ್ಲಿ ರಾತ್ರಿ ಕಾರ್ಯಾಚರಣೆಯಲ್ಲಿ ಪಾಲ್ಗೊಳ್ಳಲು ತಾವೂ ಹೋಗುತ್ತಿರುವ ವಿಚಾರವನ್ನು ವಿಜಯಂತ್ ತಮ್ಮ ಕುಟುಂಬದ ಸದಸ್ಯರಿಗೆ ತಿಳಿಸಿರಲಿಲ್ಲ.

ಈ ಪ್ರದೇಶಗಳು ದೈತ್ಯರೂಪಿ ಪರ್ವತಗಳಿಂದ ಆವೃತವಾಗಿವೆ. ಪರ್ವತಗಳು ಸರಿಸುಮಾರು ಲಂಬಕೋನದಂತೆ ಎದ್ದು ನಿಂತಿವೆ. ಸಮುದ್ರಮಟ್ಟದಲ್ಲಿ 16 ಸಾವಿರ ಅಡಿ ಎತ್ತರದಲ್ಲಿ ಇರುವ ಈ ಪ್ರದೇಶ, ಕಡಿದಾದ ಇಳಿಜಾರುಗಳನ್ನು ಹೊಂದಿದೆ. ಇಂತಹ ಪರ್ವತಗಳನ್ನು ರಾತ್ರಿ ಹೊತ್ತಿನಲ್ಲಿ, ಶಸ್ತ್ರಾಸ್ತ್ರಗಳನ್ನು ಹೊತ್ತುಕೊಂಡು ಏರುವುದು, ಎತ್ತರಕ್ಕೆ ಹೋದಂತೆಲ್ಲ ಉಸಿರಾಟದ ಸಮಸ್ಯೆ ಎದುರಿಸುವುದು ಇವೆಲ್ಲ ಬಹಳ ಸವಾಲಿನವು. ಶತ್ರುಗಳು ಅಲ್ಲೆಲ್ಲ ಸಿಡಿಮದ್ದುಗಳನ್ನು ಹುದುಗಿಸಿ ಇಟ್ಟಿದ್ದರು– ಅಲ್ಲಿ ಪ್ರಾಣ ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿತ್ತು.

ಜೂನ್‌ 28ರ ಹುಣ್ಣಿಮೆಯ ದಿನ ವಿಜಯಂತ್ ಅವರ ತುಕಡಿ ಚೂಪಾದ ಪರ್ವತಶ್ರೇಣಿಯಲ್ಲಿ ತಮ್ಮ ರಕ್ಷಣೆಗೆ ಏನೂ ಇಲ್ಲದಿದ್ದರೂ ಆಕ್ರಮಣ ಶುರು ಮಾಡಿತು. ಆದರೆ, ಈ ಹೊತ್ತಿನಲ್ಲಿ ಶತ್ರುಗಳ ಕಡೆಯಿಂದ ತೀವ್ರವಾದ ಶೆಲ್‌ ದಾಳಿ ಹಾಗೂ ಗುಂಡಿನ ದಾಳಿ ನಡೆದೇ ಇತ್ತು. ಶತ್ರುವಿಗೆ ಮೊದಲ ಬಲಿಯಾದವರು ವಿಜಯಂತ್ ಅವರ ಆಪ್ತ ಸ್ನೇಹಿತ ಸಿಪಾಯಿ ಜಗ್ಮಲ್ ಸಿಂಗ್. ಅಲ್ಲದೆ, ಕಮಾಂಡರ್ ಮೇಜರ್ ಪಿ. ಆಚಾರ್ಯ ಅವರೂ ಇದರಲ್ಲಿ ಹುತಾತ್ಮರಾದರು. ಆದರೆ, ವಿಜಯಂತ್ ಅವರು ದೃಢ ನಿಶ್ಚಯದೊಂದಿಗೆ ಹೋರಾಟ ನಡೆಸಿದರು. ಶತ್ರು ಸೇನೆಯ ಎರಡು ಮೆಷಿನ್‌ ಗನ್ನುಗಳು ತಮ್ಮತ್ತ ಗುಂಡಿನ ಮಳೆ ಸುರಿಸುತ್ತ ಇದ್ದರೂ, ಶತ್ರುವಿನಿಂದ ಕೇವಲ 15 ಮೀಟರ್‌ಗಳ ಅಂತರದಲ್ಲಿ ಕಾದಾಟ ನಡೆಸಿದರು ವಿಜಯಂತ್. ಕಾದಾಟ ಆರಂಭವಾಗಿ ಒಂದೂವರೆ ಗಂಟೆ ಕಳೆದಿತ್ತು. ಆಗ ವಿಜಯಂತ್ ಅವರ ತಲೆಗೆ ಗುಂಡು ಹೊಕ್ಕಿತು. ಆದರೆ, ವಿಜಯಂತ್ ಅವರ ಎದೆಗಾರಿಕೆ ಮತ್ತು ನಾಯಕತ್ವದ ಗುಣದಿಂದ ಪ್ರೇರಣೆ ಪಡೆದಿದ್ದ ಅವರ ತುಕಡಿ, ಶತ್ರುವಿನತ್ತ ಪ್ರತಿದಾಳಿ ನಡೆಸಿ ನಾಲ್‌ ಪರ್ವತವನ್ನು 1999ರ ಜೂನ್‌ 29ರಂದು ಮರಳಿ ವಶಪಡಿಸಿಕೊಂಡಿತು.

ನಾಲ್‌ ಪರ್ವತವನ್ನು ಪುನಃ ವಶಕ್ಕೆ ತೆಗೆದುಕೊಂಡಿದ್ದು ಭಾರತದ ಪಾಲಿಗೆ ಬಹಳ ಮಹತ್ವದ್ದು. ‘ಮತ್ತೆ ಕರೆ ಮಾಡುತ್ತೇನೆ’ ಎಂದು ಅಮ್ಮನಿಗೆ ನೀಡಿದ್ದ ಭರವಸೆಯನ್ನು ಈಡೇರಿಸಲು ತಾನು ಬದುಕಿರುವುದೇ ಇಲ್ಲ ಎಂಬುದು ವಿಜಯಂತ್ ಅವರಿಗೆ ಗೊತ್ತಿತ್ತು. ಕಾರ್ಯಾಚರಣೆಗೆ ಇಳಿಯುವ ಮುನ್ನ ವಿಜಯಂತ್ ಅವರು ತಮ್ಮ ಕುಟುಂಬದ ಸದಸ್ಯರನ್ನು ಉದ್ದೇಶಿಸಿ ಒಂದು ಚೀಟಿ ಬರೆದು ಇಟ್ಟಿದ್ದರು. ‘ನಾನು ಮನುಷ್ಯನಾಗಿ ಮತ್ತೊಮ್ಮೆ ಜನಿಸಿದರೆ, ನಾನು ಭಾರತೀಯ ಸೇನೆಯನ್ನು ಸೇರುತ್ತೇನೆ’ ಎಂದು ಅವರು ಅದರಲ್ಲಿ ಬರೆದಿದ್ದರು. ರಾಷ್ಟ್ರೀಯ ಮನೋಭಾವ ಅವರಲ್ಲಿ ಎಷ್ಟು ತೀವ್ರವಾಗಿ ಇತ್ತೆಂದರೆ, ಬಾಲ್ಯದಿಂದಲೂ ಅವರು ತಾಯ್ನಾಡನ್ನು ಹೊರತುಪಡಿಸಿ ಬೇರೆ ಏನನ್ನೂ ಆಲೋಚಿಸುತ್ತಿರಲಿಲ್ಲ. ‘ಹರೆಯದಲ್ಲಿ ಅವನಿಗೆ ಅಮೆರಿಕದ ಒಂದು ಟಿ–ಶರ್ಟ್‌ ಉಡುಗೊರೆಯಾಗಿ ಬಂದಿತ್ತು. ಆದರೆ ಅದನ್ನು ತೊಡಲು ಆತ ನಿರಾಕರಿಸಿದ. ಇದಕ್ಕೆ ಕಾರಣ ದೇಶಭಕ್ತಿ’ ಎಂದು ನೆನಪಿಸಿಕೊಳ್ಳುತ್ತಾರೆ ತೃಪ್ತಾ ಥಾಪರ್.

ವಿಜಯಂತ್ ಅವರ ತಂದೆ ಸೇರಿದಂತೆ ಅವರ ಕುಟುಂಬದ ಹದಿನೈದಕ್ಕೂ ಹೆಚ್ಚು ಜನ ಸೇನೆಯಲ್ಲಿ ಸೇವೆ ಸಲ್ಲಿಸಿದವರು. ವಿಜಯಂತ್ ಅವರ ಮುತ್ತಜ್ಜ ಬ್ರಿಟಿಷ್ ಸೇನೆಯಲ್ಲಿ ಸೇವೆ ಸಲ್ಲಿಸಿದವರು.

ವಿಜಯಂತ್ ತಂದೆ ಕರ್ನಲ್ ಥಾಪರ್ ಅವರು 1965 ಹಾಗೂ 1971ರಲ್ಲಿ ಪಾಕಿಸ್ತಾನದ ವಿರುದ್ಧ ನಡೆದ ಯುದ್ಧದಲ್ಲಿ ಭಾಗಿಯಾಗಿದ್ದವರು. ವಿಜಯಂತ್‌ ಅವರಿಗೆ ತಂದೆಯೇ ರೋಲ್‌ ಮಾಡೆಲ್‌.

ಥಾಪರ್ ಕುಟುಂಬ ನೊಯಿಡಾದಲ್ಲಿ ಹೊಂದಿರುವ ನಿವಾಸದಲ್ಲಿ ಇರುವ ನಮ್ಮ ಹೀರೊ ವಿಜಯಂತ್‌ ಅವರ ಭಾವಚಿತ್ರದತ್ತ ನೆಟ್ಟಿದ್ದ ನನ್ನ ಕಣ್ಣನ್ನು ಬೇರೆಡೆ ಹೊರಳಿಸಲು ನನ್ನಿಂದ ಸಾಧ್ಯವಾಗಲಿಲ್ಲ. ವಿಜಯಂತ್‌ ಕಣ್ಣುಗಳಲ್ಲಿ ಸಹಸ್ರಾರು ಸಂದೇಶಗಳಿವೆ. ಅವರ ಕೋಣೆಯನ್ನು ಅವರಿದ್ದಾಗ ಹೇಗಿತ್ತೋ ಹಾಗೆಯೇ ಇಟ್ಟುಕೊಳ್ಳಲಾಗಿದೆ. ಕಾರ್ಗಿಲ್‌ ಯುದ್ಧಕ್ಕೆ ಸಂಬಂಧಿಸಿದ ಹಾಗೂ ಥಾಪರ್‌ ಕುಟುಂಬದ ಪೂರ್ವಿಕರು ಸೇನಾ ಸಮವಸ್ತ್ರದಲ್ಲಿ ಇರುವ ಚಿತ್ರಗಳಿಂದ ಆ ಕೋಣೆಯನ್ನು ಅಲಂಕರಿಸಲಾಗಿದೆ. ಕೋಣೆಯ ಬಾಗಿಲಿನ ಮೇಲೆ ಇರುವ ಬೇರೆ ಬೇರೆ ದೇವರುಗಳ ಚಿತ್ರದ ಕೊಲಾಜ್, ವಿಜಯಂತ್ ಅವರು ದೇವರನ್ನು ಪ್ರೀತಿಸುತ್ತಿದ್ದ ವ್ಯಕ್ತಿ ಎನ್ನುವುದನ್ನು ಸಂಕೇತಿಸುತ್ತದೆ. ಅವರ ದೇಹವನ್ನು ಹೊಕ್ಕಿ, ಅವರಿಗೆ ಹುತಾತ್ಮನ ಸ್ಥಾನ ನೀಡಿದ ಗುಂಡನ್ನು ಅವರ ತಂದೆ– ತಾಯಿ ಕಾಪಿಟ್ಟುಕೊಂಡಿದ್ದಾರೆ.

ಟೊಲೊಲಿಂಗ್‌ ಮತ್ತು ನಾಲ್‌ನಲ್ಲಿನ ಕಾರ್ಯಾಚರಣೆ ಮಾತ್ರವಲ್ಲದೆ, ವಿಜಯಂತ್ ಅವರು ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿ ಮೂರು ವರ್ಷ ವಯಸ್ಸಿನ ಪುಟಾಣಿ ರುಕ್ಸಾನಾ ಎನ್ನುವವಳಿಗೆ ಹೊಸ ಜೀವನ ಕೊಟ್ಟರು. ಆಕೆ ಮಿಲಿಟರಿಯವರು ಇದ್ದ ಪ್ರದೇಶದ ಹೊರಗಡೆ ವಾಸಿಸುತ್ತಿದ್ದಳು. ರುಕ್ಸಾನಾಳ ಎದುರೇ ಆಕೆಯ ತಂದೆಯ ತಲೆಯನ್ನು ಉಗ್ರಗಾಮಿಗಳು ಕಡಿದಿದ್ದರು. ಇದನ್ನು ಕಂಡು ಆಘಾತಕ್ಕೆ ಒಳಗಾಗಿ ಆಕೆ ಮಾತು ಕಳೆದುಕೊಂಡಿದ್ದಳು.
‘ಆಕೆಯ ಬಗ್ಗೆ ತಿಳಿದ ನಂತರ ವಿಜಯಂತ್‌ ಆಕೆಯಲ್ಲಿಗೆ ಪ್ರತಿದಿನ ಸಂಜೆ ಹೋಗುತ್ತಿದ್ದ. ಆಕೆಯ ಜೊತೆ ಆಟ ಆಡುತ್ತಾ, ಆಕೆಯನ್ನು ಮಾತನಾಡಿಸಲು ಪ್ರಯತ್ನಿಸುತ್ತಿದ್ದ. ನಂತರ, ರುಕ್ಸಾನಾ ನಿಧಾನವಾಗಿ ಸಹಜ ಸ್ಥಿತಿಗೆ ಮರಳಿದಳು. ರುಕ್ಸಾನಾಳಿಗಾಗಿ ಪ್ರತಿ ತಿಂಗಳೂ ₹ 50 ಕೊಡುವಂತೆ ವಿಜಯಂತ್‌ ನಮಗೆ ಬರೆದ ಕಡೆಯ ಪತ್ರದಲ್ಲಿ ತಿಳಿಸಿದ್ದ’ ಎಂದು ಹೇಳಿದರು ಕರ್ನಲ್ ಥಾಪರ್.

ಈ ಪತ್ರ ಬಂದ ನಂತರ ಥಾಪರ್‌ ಕುಟುಂಬವು ರುಕ್ಸಾನಾಳ ಶಿಕ್ಷಣ, ಆಕೆಯ ಇತರ ಅಗತ್ಯಗಳ ವೆಚ್ಚ ಭರಿಸುವುದು ಸೇರಿದಂತೆ ಎಲ್ಲ ರೀತಿಯಿಂದಲೂ ಆಕೆಗೆ ನೆರವಾಗುತ್ತಿದೆ. ‘ಆಕೆ ನಮ್ಮ ಮಗಳಿದ್ದಂತೆ. ವಿಜಯಂತ್ ಆಕೆಯನ್ನು ದತ್ತು ತೆಗೆದುಕೊಂಡಿದ್ದ’ ಎನ್ನುತ್ತಾರೆ ತೃಪ್ತಾ. ಜೀವನದ ವ್ಯಂಗ್ಯವೆಂದರೆ, ರುಕ್ಸಾನಾಳಿಗೆ ಈಗ ವಿಜಯಂತ್ ನೆನಪು ಇಲ್ಲ. ಅವರು ಮೃತಪಟ್ಟಾಗ ಆಕೆ ಮೂರು ವರ್ಷದ ಬಾಲೆ.

ದೇಶದಲ್ಲಿ ಈಗ ನಡೆಯುತ್ತಿರುವ ವಿದ್ಯಮಾನಗಳ ಬಗ್ಗೆ ಥಾಪರ್ ದಂಪತಿಯ ಅನಿಸಿಕೆ ಏನು? ರಾಜಕೀಯ ತಿಕ್ಕಾಟಗಳು ಅವರಲ್ಲಿ ಬೇಸರ ಮೂಡಿಸುತ್ತವೆಯೇ? ತಮ್ಮ ಪುತ್ರನ ತ್ಯಾಗ ವ್ಯರ್ಥವಾಯಿತು ಎಂದು ಅವರು ಮರುಗುತ್ತಾರೆಯೇ? ‘ಖಂಡಿತ ಇಲ್ಲ. ನಾನು ಎಂದಿಗೂ ಆ ರೀತಿ ಅಂದುಕೊಳ್ಳುವುದಿಲ್ಲ’ ಎಂದು ಸ್ಪಷ್ಟವಾಗಿ ಹೇಳುತ್ತಾರೆ ಕರ್ನಲ್ ಥಾಪರ್. ‘ಎಲ್ಲದಕ್ಕಿಂತ ಹೆಚ್ಚಿನ ಆದ್ಯತೆಯನ್ನು ದೇಶಕ್ಕೆ ನೀಡಬೇಕು. ನಾನು ಶಾಶ್ವತ ಅಲ್ಲ. ಆದರೆ, ದೇಶ ಮುಂದೆಯೂ ಇರುತ್ತದೆ’ ಎಂದು ಅವರು ಹೇಳುತ್ತಾರೆ.

‘ನಾವು ಸಶಸ್ತ್ರ ಪಡೆಗಳನ್ನು ನಿರ್ಲಕ್ಷಿಸಿದ್ದೇವೆ. ನಮಗೆ ಎರಡೂ ಕಡೆ ಶತ್ರುಗಳು ಇದ್ದಾರೆ. ಅಪಾಯಗಳ ಬಗ್ಗೆ ನಾವು ಕಣ್ಣುಮುಚ್ಚಿ ಕೂರುವಂತಿಲ್ಲ. ಪರಿಸ್ಥಿತಿ ಹೇಗಿರುತ್ತದೆ ಅಂದರೆ, ಎಲ್ಲ ಸಂದರ್ಭಗಳಲ್ಲೂ ನಾವು ನಮ್ಮಲ್ಲಿ ಇರುವ ಶಸ್ತ್ರಾಸ್ತ್ರಗಳನ್ನು ಎತ್ತಿಕೊಂಡು ಹೋರಾಟ ನಡೆಸುತ್ತೇವೆ. ನಾನು ಸೇನೆಗೆ ಸೇರಿದ ದಿನದಿಂದ ಕೊನೆಯ ದಿನದವರೆಗೂ 746 ರೈಫಲ್‌ ಮಾತ್ರ ಬಳಸಿದೆ. ಅದು ಈಗಲೂ ಮುಂದುವರಿದಿದೆ. ನಾವು ಇಂದಿಗೂ ಟೈಪ್‌ 63 ರೈಫಲ್‌ ಬಳಸುತ್ತಿದ್ದೇವೆ. ಮಿಗ್‌ ವಿಮಾನಗಳು 1963ರಲ್ಲಿ ಬಂದವು. ಅವು ಇಂದಿಗೂ ಬಳಕೆಯಲ್ಲಿವೆ. ಮಿಲಿಟರಿಗೆ ಸಂಬಂಧಿಸಿದ ವಿಷಯಗಳಿಗೆ ಹೆಚ್ಚಿನ ಪ್ರಾಮುಖ್ಯ ನೀಡುತ್ತಿಲ್ಲ. 1971ರ ಯುದ್ಧದಲ್ಲಿ ನಾವು ಜಯ ಸಾಧಿಸಿದ್ದು ಸುವರ್ಣ ಅಧ್ಯಾಯ. ಆದರೆ, ಬಹಳ ಕಷ್ಟದ ಸನ್ನಿವೇಶದಲ್ಲಿ ಆ ಗೆಲುವು ನಮಗೆ ದಕ್ಕಿತು. ಕಾರ್ಗಿಲ್‌ ಯುದ್ಧದ ಸಂದರ್ಭದಲ್ಲಿ, ನಮ್ಮ ಕೈಯಲ್ಲಿ ಏನಿತ್ತೋ ಅದನ್ನೇ ಎತ್ತಿಕೊಂಡು ಹೋರಾಟ ನಡೆಸಿದೆವು. ಯುದ್ಧ ನಡೆಯುತ್ತಿದ್ದ ಹೊತ್ತಿನಲ್ಲಿ ನಮ್ಮಲ್ಲಿನ ಮದ್ದುಗುಂಡುಗಳು ಖಾಲಿಯಾದವು. ಆಗ ನಾವು ಮದ್ದುಗುಂಡುಗಳನ್ನು ದಕ್ಷಿಣ ಆಫ್ರಿಕಾ ಮತ್ತು ಇತರ ಕಡೆಗಳಿಂದ ಕಾಳಸಂತೆಯಲ್ಲಿ ಖರೀದಿಸಿದೆವು. ಇಂತಹ ಸ್ಥಿತಿ ಎಂದಿಗೂ ಬರಬಾರದು’ ಎಂದು ಕರ್ನಲ್ ಥಾಪರ್ ಬೇಸರದಿಂದ ಹೇಳಿದರು.

ಸಶಸ್ತ್ರ ಪಡೆಗಳಲ್ಲಿ ಇರುವವರ ತ್ಯಾಗದ ಬಗ್ಗೆ ದೇಶದಲ್ಲಿ ಅಷ್ಟೊಂದು ಅರಿವು ಇಲ್ಲ ಎಂದು ಥಾಪರ್ ಅವರ ಕುಟುಂಬ ಬೇಸರದಿಂದ ಹೇಳುತ್ತದೆ. ‘ನಮ್ಮ ನಾಯಕರು ಹಾಗೂ ಸಾರ್ವಜನಿಕರು ಸಶಸ್ತ್ರ ಪಡೆಗಳ ಬಗ್ಗೆ ತೀರಾ ಸಡಿಲ ಮಾತುಗಳನ್ನು ಆಡುತ್ತಾರೆ. ಕೀಳುಮಟ್ಟದ ಹೇಳಿಕೆಗಳನ್ನೂ ನೀಡುತ್ತಾರೆ. ಇಂದಿನಿಂದ ಇಪ್ಪತ್ತು ವರ್ಷಗಳ ನಂತರ ದೇಶದ ರಕ್ಷಣಾ ವ್ಯವಸ್ಥೆ ಹೇಗಿರಬೇಕು ಎಂಬ ವಿಚಾರದಲ್ಲಿ ನಮಗೆ ಸ್ಪಷ್ಟತೆಯೇ ಇಲ್ಲ. ಪಾಕಿಸ್ತಾನದ ಜೊತೆ ಒಮ್ಮೆ ದೋಸ್ತಿಯ ಮಾತು, ಇನ್ನೊಮ್ಮೆ ಅವರ ಜೊತೆ ಜಂಟಿ ಸಮರಾಭ್ಯಾಸದ ಮಾತು ಕೇಳಿಬರುತ್ತದೆ. ಇದರಲ್ಲಿ ಸ್ಪಷ್ಟತೆ ಇಲ್ಲ. ಇದರ ಜೊತೆಯಲ್ಲೇ, ಕೆಲವು ವಿಷಯಗಳನ್ನು ವೈಭವೀಕರಿಸುವ ಪ್ರವೃತ್ತಿಯೂ ನಮ್ಮಲ್ಲಿ ಇದೆ. ಬುರ್ಹಾನ್ ವಾನಿಯನ್ನು ಹೀರೊ ರೀತಿಯಲ್ಲಿ ಬಿಂಬಿಸಿದ್ದಕ್ಕೆ ಕಾರಣರು ಯಾರು’ ಎಂದು ಅವರು ಕೇಳುತ್ತಾರೆ.

ದೇಶಕ್ಕಾಗಿ ಹೋರಾಟ ನಡೆಸಿದ ಸೈನಿಕರಿಗೆ ಗೌರವ ಸಲ್ಲಿಸಲು ಕರ್ನಲ್ ಥಾಪರ್ ಅವರು ಈಗಲೂ ಪ್ರತಿವರ್ಷ ಕಾರ್ಗಿಲ್ ಜಿಲ್ಲೆಯ ದ್ರಾಸ್‌ ಪಟ್ಟಣಕ್ಕೆ ಹೋಗುತ್ತಾರೆ. ಅಂದಹಾಗೆ, ಅವರಿಗೆ ಎಪ್ಪತ್ತು ವರ್ಷ ವಯಸ್ಸಾಗಿದೆ. ‘ಇದಕ್ಕಿಂತ ಹೆಚ್ಚು ಪವಿತ್ರವಾದ ತೀರ್ಥಯಾತ್ರೆ ಬೇರೊಂದಿಲ್ಲ’ ಎನ್ನುವುದು ಅವರ ಅನಿಸಿಕೆ.

ದೇಶಕ್ಕೆ ಹಾಗೂ ದೇಶದ ತಾಯಂದಿರಿಗೆ ತೃಪ್ತಾ ಅವರು ಎಚ್ಚರಿಕೆ ಮಾತೊಂದನ್ನು ಹೇಳುತ್ತಾರೆ: ‘ದೇಶವಾಸಿಗಳಿಗೆ ನಾನೊಂದು ಮಾತು ಹೇಳಬೇಕು. 529 ಜನ ಯೋಧರು ಕಾರ್ಗಿಲ್ ಯುದ್ಧದಲ್ಲಿ ಮಡಿದರು. ಇವರೆಲ್ಲ ಹಣದಾಸೆಗೋ, ಭೌತಿಕ ಸುಖಕ್ಕಾಗಿಯೋ ಪ್ರಾಣ ಕೊಟ್ಟವರಲ್ಲ. ಅವರು ಮಾಡಿದ್ದೆಲ್ಲ ದೇಶದ ಗೌರವ ಕಾಯಲು. ದೇಶದ ಅಷ್ಟೂ ಜನ ತಾಯಂದಿರು ತಮ್ಮ ಮಕ್ಕಳಲ್ಲಿ ಮೌಲ್ಯಗಳನ್ನು ಬೆಳೆಸಬೇಕು. ನಿಮ್ಮ ಮಗ ವಿಜಯಂತ್ ಆಗಬೇಕೋ ಅಥವಾ ಬುರ್ಹಾನ್ ವಾನಿ ಆಗಬೇಕೊ ಎಂಬುದನ್ನು ನೀವೇ ತೀರ್ಮಾನಿಸಿ.’

ವಿಜಯಂತ್ ಅವರಿಗೆ ಈ ಹೆಸರು ಇಟ್ಟಿದ್ದು ವಿಜಯಂತ್‌ ಯುದ್ಧ ಟ್ಯಾಂಕ್‌ಗಳನ್ನು ಕಂಡು. ವಿಜಯಂತ್ ಅಂದರೆ ‘ಕೊನೆಯವರೆಗೂ ಗೆಲುವು’ ಅಥವಾ ‘ಅಂತ್ಯದಲ್ಲಿ ಗೆಲುವು’. ‘ವಿಜಯಂತ್ ಕರ್ತವ್ಯ ನಿಭಾಯಿಸಿದ ರೆಜಿಮೆಂಟ್‌ನ ಧ್ಯೇಯ ಎಂದೆಂದಿಗೂ ವಿಜಯಿ ಎಂಬುದಾಗಿತ್ತು. ನಮ್ಮ ಮಗ ಆ ಧ್ಯೇಯವಾಕ್ಯಕ್ಕೆ ತಕ್ಕುದಾಗಿ ಬದುಕಿದ’ ಎಂದು ಕರ್ನಲ್ ಥಾಪರ್ ಸ್ಮರಿಸಿಕೊಂಡರು.

ಕ್ಯಾಪ್ಟನ್ ವಿಜಯಂತ್ ಥಾಪರ್ ಅವರ ಶೌರ್ಯ ಹಾಗೂ ಅವರ ಅಪ್ರತಿಮ ತ್ಯಾಗವನ್ನು ಕಂಡು, ‘ವೀರ ಚಕ್ರ’ ಪದಕ ನೀಡಿ ಗೌರವಿಸಲಾಗಿದೆ. 


-ವಿಜಯಂತ್ ಥಾಪರ್

 

ಬರಹ ಇಷ್ಟವಾಯಿತೆ?

 • 2

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !