ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಕ್ಕುಗಳ ಸಂಸಾರ

Last Updated 24 ನವೆಂಬರ್ 2018, 19:31 IST
ಅಕ್ಷರ ಗಾತ್ರ

ಧರೆಯ ಪ್ರಾಣಿ ಸಾಮ್ರಾಜ್ಯದಲ್ಲಿ ಸ್ತನಿ ವರ್ಗಕ್ಕೇ ಸೇರಿದ ಒಂದು ವಿಶಿಷ್ಟ ಕುಟುಂಬ ಬೆಕ್ಕುಗಳದು. ‘ಫೆಲಿಡೇ’ ಎಂಬ ವೈಜ್ಞಾನಿಕ ಹೆಸರಿನ ಈ ಕುಟುಂಬಕ್ಕೇ ಹುಲಿ, ಸಿಂಹಗಳಿಂದ ತೊಡಗಿ ಮನೆ ಬೆಕ್ಕಿನವರೆಗಿನ ಸಕಲ ಮಾರ್ಜಾಲಗಳೂ ಸೇರಿವೆ. ಫೆಲಿಡೇ ಕುಟುಂಬದಲ್ಲಿ ನಾಲ್ಕು ವಂಶಗಳಿವೆ; ಈ ವಂಶಗಳಲ್ಲಿ ಒಟ್ಟು ಮುವ್ವತ್ತೇಳು ಪ್ರಭೇದಗಳಿವೆ; ಕೆಲ ಪ್ರಭೇದಗಳು ಹಲವಾರು ಉಪ ಪ್ರಭೇದಗಳನ್ನೂ ಹೊಂದಿವೆ. ಉದಾಹರಣೆಗೆ ಹುಲಿಗಳಲ್ಲಿ ಆರು, ಸಿಂಹಗಳಲ್ಲಿ ಮೂರು, ಚೀತಾಗಳ ಐದು ಮತ್ತು ಚಿರತೆಗಳ ಒಂಬತ್ತು ಉಪ ಪ್ರಭೇದಗಳು ಅಸ್ತಿತ್ವದಲ್ಲಿವೆ. ಒಟ್ಟಿನಲ್ಲಿ ಬೆಕ್ಕುಗಳದು ಭಾರಿ ವೈವಿಧ್ಯದ ಕುಟುಂಬ.

ಬೆಕ್ಕುಗಳ ಈಗಿನ ಒಟ್ಟು ಮುವ್ವತ್ತೇಳು ಪ್ರಭೇದಗಳಲ್ಲಿ ಎಂಟು ಪ್ರಭೇದಗಳನ್ನು ‘ದೊಡ್ಡ ಬೆಕ್ಕುಗಳು (ಬಿಗ್ ಕ್ಯಾಟ್ಸ್)’ ಎಂದೇ ವರ್ಗೀಕರಿಸಲಾಗಿದೆ: ಹುಲಿ (ಚಿತ್ರ 3,4,5), ಸಿಂಹ (ಚಿತ್ರ 1,2), ಚೀತಾ (ಚಿತ್ರ-6), ಲೆಪರ್ಡ್ (ಚಿತ್ರ-7), ಜಾಗ್ವಾರ್ (ಚಿತ್ರ-8), ಪ್ಯೂಮಾ, ಸ್ನೋ ಲೆಪರ್ಡ್ ಮತ್ತು ಕ್ಲೌಡೆಡ್ ಲೆಪರ್ಡ್. ಉಳಿದೆಲ್ಲ ಪ್ರಭೇದಗಳೂ (ಉದಾಹರಣೆಗೆ ಚಿತ್ರ- 9 ರಿಂದ 12) ಚಿಕ್ಕ ಬೆಕ್ಕುಗಳು (ಸ್ಮಾಲ್ ಕ್ಯಾಟ್ಸ್) ಎಂದೇ ಹೆಸರಾಗಿವೆ.

ಬೆಕ್ಕುಗಳ ಶರೀರದ ವಿಶೇಷ ಲಕ್ಷಣಗಳು ಮತ್ತು ಸಾಮರ್ಥ್ಯಗಳು ಹಲವಾರು. ಸಿಂಹ ಮತ್ತು ಪ್ಯೂಮಾ - ಇವೆರಡನ್ನು ಬಿಟ್ಟು ಉಳಿದೆಲ್ಲ ಬೆಕ್ಕುಗಳದೂ ಬಗೆ ಬಗೆಯ ಪಟ್ಟೆ, ಮಚ್ಚೆ ಅಥವಾ ಚುಕ್ಕಿ ಚಿತ್ತಾರಗಳ ಸಡಿಲ ಚರ್ಮ. ಎಲ್ಲ ಬೆಕ್ಕುಗಳದೂ ಅದ್ಭುತ ಬಳುಕು ಶರೀರ; ಬಲಿಷ್ಠ ಬೆನ್ನೆಲೆಬು; ಬೇಕೆನಿಸಿದಾಗ ಮಾತ್ರ ಚಾಚಬಲ್ಲ ಚೂಪಾದ ಉಗುರುಗಳಿಂದ ಕೂಡಿದ ಮೆತ್ತನೆಯ ಪಾದಗಳು.

ಹಾಗಾಗಿ ಸಕಲ ಮಾರ್ಜಾಲ ಪ್ರಭೇದಗಳದೂ ವೇಗದ ಓಟ; ತರಗೆಲೆಗಳ ಮೇಲೂ ಸದ್ದೇ ಮಾಡದೆ ನಡೆಯಬಲ್ಲ, ಎತ್ತರಕ್ಕೆ ಜಿಗಿಯಬಲ್ಲ, ಬಹು ಎತ್ತರಗಳಿಂದಲೂ ಕಿಂಚಿತ್ತೂ ಘಾಸಿಯಾಗದಂತೆ ಧುಮುಕಬಲ್ಲ ಸಾಮರ್ಥ್ಯ. ಅಷ್ಟೇ ಅಲ್ಲದೆ ಎಲ್ಲ ಬೆಕ್ಕುಗಳದೂ ಅಗಲವಾದ ಮುಖ, ಹರಿತವಾದ ಕೋರೆದಾಡೆಗಳು, ಮುವ್ವತ್ತು ಹಲ್ಲುಗಳು, ಒರಟು ನಾಲಿಗೆ, ಅತ್ಯುತ್ತಮವಾದ - ಮನುಷ್ಯರ ಏಳು ಮಡಿಯಷ್ಟು ತೀಕ್ಷ್ಣವಾದ - ದೃಷ್ಟಿ ಶಕ್ತಿ. ನೈಸರ್ಗಿಕವಾಗಿಯೇ ಸಕಲ ವಿಧ ಬೆಕ್ಕುಗಳೂ ಬೇಟೆಗಾರರಾಗಲೆಂದೇ ಸೃಷ್ಟಿಗೊಂಡಿವೆ. ಆದ್ದರಿಂದಲೇ ಎಲ್ಲ ಮಾರ್ಜಾಲಗಳೂ ಶುದ್ಧ ಮಾಂಸಾಹಾರಿಗಳೇ ಆಗಿವೆ. ವಿಶೇಷ ಏನೆಂದರೆ, ಸಿಂಹಗಳನ್ನು ಬಿಟ್ಟು ಉಳಿದೆಲ್ಲ ಬೆಕ್ಕುಗಳೂ ಏಕಾಂಗಿ ಜೀವನ ನಡೆಸುತ್ತವೆ. ಸಿಂಹಗಳದು ಮಾತ್ರವೇ ಗುಂಪು ಜೀವನ ಕ್ರಮ.

ಬೆಕ್ಕುಗಳು ಆಸ್ಟ್ರೇಲಿಯಾ ಮತ್ತು ಅಂಟಾರ್ಕ್ಟಿಕಾ ಭೂ ಖಂಡಗಳನ್ನು ಬಿಟ್ಟು ಉಳಿದ ಐದೂ ಭೂ ಖಂಡಗಳ ಎಲ್ಲ ನೆಲಾವಾರಗಳಲ್ಲೂ - ಎಂದರೆ ಅಡವಿ, ಹುಲ್ಲು ಬಯಲು, ಮರುಭೂಮಿ ಮತ್ತು ಪರ್ವತ ಪ್ರದೇಶಗಳಲ್ಲೂ - ನೈಸರ್ಗಿಕವಾಗಿ ನೆಲೆಗೊಂಡಿವೆ. ಆಸ್ಟ್ರೇಲಿಯಾದಲ್ಲಿ ಮನುಷ್ಯರ ಮುದ್ದಿನ ಸಾಕುಪ್ರಾಣಿಗಳಾಗಿ ಮನೆ ಬೆಕ್ಕುಗಳು ವಲಸೆಹೋಗಿವೆ; ಭಾರೀ ಸಂಖ್ಯೆಗೆ ವರ್ಧನೆಗೊಂಡಿವೆ; ಅಲ್ಲಿನ ನೈಸರ್ಗಿಕ ನೆಲೆಗಳಿಗೂ ಹರಡಿ ಪಿಡುಗಿನ ಪ್ರಾಣಿ ಆಗಿವೆ.

ಪೃಥ್ವಿಯಲ್ಲಿ ಬೆಕ್ಕುಗಳದು ಸುಧೀರ್ಘ ಇತಿಹಾಸ. ಪಳೆಯುಳಿಕೆಗಳಿಂದ ಸ್ಪಷ್ಟವಾಗಿರುವಂತೆ ಧರೆಯಲ್ಲಿ ಬೆಕ್ಕುಗಳ ಅವತರಣವಾದದ್ದು ಈಗ್ಗೆ 23.5 ದಶಲಕ್ಷ ವರ್ಷದಿಂದ 35.5 ದಶಲಕ್ಷ ವರ್ಷ ಹಿಂದಿನ ಅವಧಿಯ ಆಲಿಗೋಸೀನ್ ಯುಗದಲ್ಲಿ. ಆ ಕಾಲದಲ್ಲಿ ಜನ್ಮತಳೆದ ಕಪ್ಪು-ಹಳದಿ ಚರ್ಮ ಚಿತ್ತಾರದ, ವೃಕ್ಷವಾಸೀ ಬೇಟೆಗಾರ ಆಗಿದ್ದ ಪ್ರೋಐಲ್ಯೂರಸ್ ಎಂಬ ಮಾರ್ಜಾಲವೇ ಬೆಕ್ಕುಗಳ ಕುಟುಂಬದ ಮೂಲ ಜೀವಿ. ಅಲ್ಲಿಂದ ಮುಂದೆ ಈಗ್ಗೆ 10 ರಿಂದ 15 ದಶಲಕ್ಷ ವರ್ಷ ಹಿಂದಿನ ಅವಧಿಯಲ್ಲಿ ಸೋಡೋಲ್ಯೂರಸ್‌ ವರ್ಗದ ಬೃಹದ್ದೇಹಿ ಬೆಕ್ಕುಗಳು ಅವತರಿಸಿದುವು. ಅದೇ ವರ್ಗದ ಬೆಕ್ಕುಗಳು ಹೇರಳ ಹಂತಗಳ ಜೈವಿಕ ಮಾರ್ಪಾಡುಗಳನ್ನು ಪಡೆದು ಈಗ್ಗೆ 12 ಸಾವಿರ ವರ್ಷಗಳಿಂದ 2.6 ದಶಲಕ್ಷ ವರ್ಷ ಹಿಂದಿನ ಅವಧಿಯ ಪ್ಲಿಯೋಸೀನ್ ಮತ್ತು ಪ್ಲೀಸ್ಟೋಸೀನ್ ಯುಗಗಳಲ್ಲಿ ಸದ್ಯದಲ್ಲಿರುವ ಮತ್ತು ಈಗಾಗಲೇ ಅಳಿದಿರುವ ಸರ್ವ ವಿಧ ಮಾರ್ಜಾಲ ಪ್ರಭೇದಗಳು ಮೈದಳೆದು ಬಾಳತೊಡಗಿದ್ದುವು.

ಬೆಕ್ಕುಗಳದು ಭಾರೀ ಗಾತ್ರಾಂತರ. ಈಗಿರುವ ಇಡೀ ಮಾರ್ಜಾಲ ಕುಟುಂಬದ ಅತ್ಯಂತ ಬೃಹದ್ದೇಹಿ ಹುಲಿ. ಸಿಂಹಗಳದು ದ್ವಿತೀಯ ಸ್ಥಾನ. ಹುಲಿಗಳ ಒಂದು ಉಪ ಪ್ರಭೇದವಾದ ಸೈಬೀರಿಯನ್ ಹುಲಿಯದು 11 ಅಡಿ ಉದ್ದದ ಶರೀರ; 300 ರಿಂದ 350 ಕಿಲೋ ತೂಕ. ತದ್ವಿರುದ್ಧವಾಗಿ ಮನೆ ಬೆಕ್ಕುಗಳದೇ ಅತ್ಯಂತ ಕುಬ್ಜ ಗಾತ್ರ . ಅವುಗಳದು 1.5 ಅಡಿ ಮೀರದ ಉದ್ದ; ನಾಲ್ಕರಿಂದ ಐದು ಕಿಲೋ ತೂಕ. ಬೆಕ್ಕುಗಳ ಕುಟುಂಬದಲ್ಲೇ ಇರುವ ಚೀತಾ ಅತ್ಯಂತ ವೇಗದ ನೆಲ ಪ್ರಾಣಿ ಎಂಬ ವಿಶ್ವ ದಾಖಲೆ ಹೊಂದಿದೆ. ಈ ಬೆಕ್ಕುಗಳು ತಾಸಿಗೆ 110 ರಿಂದ 120 ಕಿಲೋಮೀಟರ್ ವೇಗದಲ್ಲಿ ಓಡಬಲ್ಲವು. ದೊಡ್ಡ ಬೆಕ್ಕುಗಳ ಆಯುರ್ಮಾನ 10 ರಿಂದ 15 ವರ್ಷ; ಚಿಕ್ಕ ಬೆಕ್ಕುಗಳದು 2 ರಿಂದ 15 ವರ್ಷ.

ನಿಸರ್ಗದ ಸ್ವಾಸ್ಥ್ಯ ಸಂರಕ್ಷಣೆಯಲ್ಲಿ ಬೆಕ್ಕುಗಳದು ತುಂಬ ಮಹತ್ವದ ಪಾತ್ರ. ವಿಶೇಷವಾಗಿ ಸಸ್ಯಾಹಾರೀ ಪ್ರಾಣಿಗಳ, ಹೇರಳ ವಿಧ ಹಕ್ಕಿಗಳ ಮತ್ತು ಬಿಲವಾಸಿಗಳ ಸಂಖ್ಯಾ ನಿಯಂತ್ರಣದಲ್ಲಿ ಬೆಕ್ಕುಗಳದು ನಿರ್ಣಾಯಕ ಪಾತ್ರ. ಉದಾಹರಣೆಗೆ ಆಫ್ರಿಕದ ಹುಲ್ಲು ಬಯಲುಗಳಲ್ಲಿ ಭಾರೀ ಸಂಖ್ಯೆಯಲ್ಲಿರುವ ಕಾಡೆಮ್ಮೆ (ಬಫೆಲೋ), ಜೀಬ್ರಾ, ಜಿರಾಫ್, ವೈಲ್ಡ್ ಬೀಸ್ಟ್, ನೂ, ಇಂಪಾಲಾ, ಸ್ಪ್ರಿಂಗ್ ಬಾಕ್ ಇತ್ಯಾದಿ ಹತ್ತಾರು ವಿಧ ಪ್ರಾಣಿಗಳ ಸಂಖ್ಯೆಯನ್ನು ಅಲ್ಲಿನವೇ ಬೆಕ್ಕುಗಳಾದ ಸಿಂಹ, ಚೀತಾ ಮತ್ತು ಲೆಪರ್ಡ್ ಗಳು ನಿಯಂತ್ರಣದಲ್ಲಿ ಇರಿಸಿವೆ. ತದ್ವಿರುದ್ಧವಾಗಿ, ಬೆಕ್ಕುಗಳ ಒಂದೇ ಒಂದು ಪ್ರಭೇದ - ಮನೆ ಬೆಕ್ಕು - ನಿಸರ್ಗ ಸಮತೋಲನವನ್ನು ಹಾಳುಗೆಡಹುತ್ತಿದೆ. ಮನುಷ್ಯರೊಡನೆ ಎಲ್ಲೆಡೆಗೂ ಪಯಣಿಸಿ, ಜಗದಾದ್ಯಂತ ನಗರ-ಗ್ರಾಮಗಳಲ್ಲಿ ನೆಲೆಸಿ, ಅಲ್ಲಿಂದಾಚೆಗೆ ಅಡವಿಗಳಿಗೂ ದ್ವೀಪಗಳಿಗೂ ಹರಡಿ, ಎಲ್ಲೆಡೆಗಳಲ್ಲೂ ಭಾರೀ ಸಂಖ್ಯೆಗೆ ವರ್ಧನೆಗೊಂಡು ಪುಟ್ಟ ಪ್ರಾಣಿಗಳ ಹಾಗೂ ವಿಶೇಷವಾಗಿ ಹಕ್ಕಿಗಳ ಮತ್ತು ಸರೀಸೃಪಗಳ ಹೇರಳ ಪ್ರಭೇದಗಳನ್ನು ಬೇಟೆಯಾಡಿ ನಿರ್ನಾಮ ಮಾಡಿದೆ.

ಆತಂಕದ ಸಂಗತಿ ಏನೆಂದರೆ, ಜಗತ್ತಿನ ಎಲ್ಲೆಡೆ ಮನೆ ಬೆಕ್ಕನ್ನು ಬಿಟ್ಟು ಉಳಿದೆಲ್ಲ ಮಾರ್ಜಾಲ ಪ್ರಭೇದಗಳೂ ಅಪಾಯದ ಹಾದಿ ಹಿಡಿದಿವೆ; ಅಲ್ಪ ಸಂಖ್ಯೆಗೆ ಇಳಿಯುತ್ತಿವೆ. ಮನುಷ್ಯರ ದುರಾಕ್ರಮಣದಿಂದಾಗಿ ಅವುಗಳ ವಾಸ ಕ್ಷೇತ್ರಗಳು ಕ್ಷಿಪ್ರವಾಗಿ ಕುಗ್ಗುತ್ತಿವೆ ; ಆಕರ್ಷಕ ಚರ್ಮಕ್ಕಾಗಿ ಅವು ಬಲಿಯಾಗುತ್ತಿವೆ; ನಾನಾ ವಿಧ ಮೂಢ ನಂಬಿಕೆಗಳಿಗಾಗಿ, ಅವೈಜ್ಞಾನಿಕ ಕಲ್ಪನೆಗಳಿಂದಾಗಿ ಅವುಗಳ ಮೂಳೆ, ಹಲ್ಲು ಮತ್ತು ದೇಹ ಭಾಗಗಳಿಗಾಗಿ ಕಳ್ಳ ಬೇಟೆಗೆ ಗುರಿಯಾಗುತ್ತಿವೆ (ಚಿತ್ರ 13, 14). ಒಟ್ಟಾರೆ ಬದುಕಲು ಭದ್ರ ನೆಲೆ ಇಲ್ಲದೆ ಎಲ್ಲ ಬೆಕ್ಕುಗಳೂ ವಿನಾಶದ ಹಂತ ತಲುಪಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT