ಮಗನ ಸ್ಮರಣೆಯಲ್ಲಿ ಸಾಮಾಜಿಕ ಸೇವೆ

7

ಮಗನ ಸ್ಮರಣೆಯಲ್ಲಿ ಸಾಮಾಜಿಕ ಸೇವೆ

Published:
Updated:
Prajavani

ಚಿಕ್ಕ ವಯಸ್ಸಿನ ಮಗನನ್ನು ಕಳೆದುಕೊಂಡ ನಾಗರಬಾವಿಯ ನಿವಾಸಿ ಎಸ್‌.ಪಿ. ಸ್ವಾಮಿ ಅವರು, ಮಗನ ಹೆಸರಿನಲ್ಲಿ ವಿವಿಧ ಸಾಮಾಜಿಕ ಮತ್ತು ಸಾಂಸ್ಕೃತಿಕ ಕಾರ್ಯಗಳನ್ನು ನಡೆಸಿಕೊಂಡು ಬರುತ್ತಿದ್ದಾರೆ. ಇದಕ್ಕಾಗಿ ಅವರು ಮಗನ ಹೆಸರಿನಲ್ಲಿ ‘ಶ್ರೀನಿಧಿಗೌಡ ಸಾಮಾಜಿಕ ಹಾಗೂ ಸಾಂಸ್ಕೃತಿಕ ಸೇವಾ ಟ್ರಸ್ಟ್‌’ ಆರಂಭಿಸಿದ್ದಾರೆ.

ಮದ್ದೂರಿನ ಸೋಮೇಶ್ವರ ಫರ್ಟಿಲೈಸರ್ಸ್‌ ಕಂಪನಿಯ ಮಾಲೀಕರಾದ ಸ್ವಾಮಿ ಅವರ ಪುತ್ರ ಶ್ರಿನಿಧಿಗೌಡ 12 ವರ್ಷದ ಬಾಲಕನಾಗಿದ್ದಾಗ ಅನಾರೋಗ್ಯಕ್ಕೆ ಒಳಗಾಗಿ ಕೊನೆಯುಸಿರೆಳೆದ. ಮಗನನ್ನು ಅತಿಯಾಗಿ ಪ್ರೀತಿಸುತ್ತಿದ್ದ ಅವರು, ಮಗನ ಹೆಸರಿನಲ್ಲಿ ವಿವಿಧ ಸೇವಾ ಕಾರ್ಯಗಳನ್ನು ಕೈಗೊಂಡಿದ್ದಾರೆ.

ಮಗನ ಹುಟ್ಟುಹಬ್ಬದ ಸಂದರ್ಭದಲ್ಲಿ ಸರ್ಕಾರಿ ಶಾಲೆಗಳ 10 ಸಾವಿರ ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕ, ಪೇಪರ್‌, ಪೆನ್ನು, ಜಾಮಿಟ್ರಿ ಬಾಕ್ಸ್‌ ಅನ್ನು ಟ್ರಸ್ಟ್‌ ವಿತರಿಸಿಕೊಂಡು ಬಂದಿದೆ. ಅದರ ಜತೆಗೆ ಅನಾಥಾಶ್ರಮವೊಂದರ ಇಡೀ ತಿಂಗಳ ಊಟೋಪಚಾರದ ಖರ್ಚು ವೆಚ್ಚವನ್ನು ಟ್ರಸ್ಟ್‌ ಭರಿಸುತ್ತದೆ. ಉದ್ಯೋಗ ಮೇಳವನ್ನೂ ಹಮ್ಮಿಕೊಂಡು ಬಡ, ಗ್ರಾಮೀಣ ಪ್ರತಿಭಾವಂತ ಯುವ ಸಮುದಾಯಕ್ಕೆ ಉದ್ಯೋಗಾವಕಾಶಗಳು ಸಿಗುವಂತೆ ಟ್ರಸ್ಟ್‌ ಮಾಡಿಕೊಂಡು ಬಂದಿದೆ.

ನೇತ್ರ ತಪಾಸಣೆಯ ಜತೆಗೆ ಆರೋಗ್ಯ ತಪಾಸಣೆಯನ್ನೂ ಕಾಲ ಕಾಲಕ್ಕೆ ನಡೆಸಿಕೊಂಡು ಬಂದಿರುವ ಟ್ರಸ್ಟ್‌ ಈ ಬಾರಿ ರಕ್ತದಾನ ಶಿಬಿರವನ್ನೂ ಹಮ್ಮಿಕೊಳ್ಳಲು ಉದ್ದೇಶಿಸಿದೆ. ಶ್ರೀನಿಧಿಗೌಡ ಇದ್ದಿದ್ದರೆ ಅವರಿಗೆ ಗುರುವಾರಕ್ಕೆ 24 ವರ್ಷವಾಗುತ್ತಿತ್ತು. ಮಗನ ಹುಟ್ಟು ಹಬ್ಬದ ಪ್ರಯುಕ್ತ ಸ್ವಾಮಿ ಅವರು, ಮದ್ದೂರಿನಲ್ಲಿ ಮಕ್ಕಳಿಗೆ ಉಚಿತ ನೋಟ್‌ ಪುಸ್ತಕ, ಬರವಣಿಗೆ ಸಾಮಗ್ರಿಗಳು, ಬೃಹತ್‌ ರಕ್ತದಾನ, ನೇತ್ರದಾನ, ಅನ್ನದಾನ ಕಾರ್ಯಕ್ರಮ ಆಯೋಜಿಸಿದ್ದಾರೆ.

ಅಲ್ಲದೆ ಆರೋಗ್ಯ ತಪಾಸಣಾ ಶಿಬಿರ, ಕ್ಯಾನ್ಸರ್‌ ತಪಾಸಣಾ ಶಿಬಿರ, 60 ವರ್ಷ ಮೇಲ್ಪಟ್ಟ ಸಾವಿರ ಮಹಿಳೆಯರಿಗೆ ಉಚಿತ ಕಂಬಳಿ ವಿತರಣೆ ನಡೆಯಲಿದೆ. ಈ ಟ್ರಸ್ಟ್‌ ಮದ್ದೂರು ತಾಲ್ಲೂಕಿನ ಸಾದೊಳಲಿನ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಳ್ಳಲು ಉದ್ದೇಶಿಸಿದ್ದು, ಅದನ್ನು ಮಾದರಿ ಶಾಲೆಯನ್ನಾಗಿಸಲು ಯೋಜಿಸಿದೆ. ಸ್ವಾಮಿ ಅವರ ಪತ್ನಿ ಮಂಡ್ಯ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಎಸ್‌. ನಾಗರತ್ನಸ್ವಾಮಿ ಅವರು ಟ್ರಸ್ಟ್‌ನ ಕಾರ್ಯಗಳಿಗೆ ಬೆನ್ನೆಲುಬಾಗಿದ್ದಾರೆ.

Tags: 

ಬರಹ ಇಷ್ಟವಾಯಿತೆ?

 • 12

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !