ಸ್ಮಾರ್ಟ್ ಫೋನ್‌ ದಾಸರು...

ಬುಧವಾರ, ಜೂನ್ 26, 2019
29 °C

ಸ್ಮಾರ್ಟ್ ಫೋನ್‌ ದಾಸರು...

Published:
Updated:
Prajavani

ಇಂದಿನ ದಿನವನ್ನು ಕಲಿಯುಗ ಎನ್ನುವುದಕ್ಕಿಂತ, ಸ್ಮಾರ್ಟ್ ಫೋನ್‌ಗಳ ಯುಗವೆಂದರೆ ಬಹುಶಃ ತಪ್ಪಾಗಲಾರದೇನೋ. ಯಾರ‌ ಕೈ ನೋಡಿದರೂ ನಾನಾ ಬಗೆಯ ಸ್ಮಾರ್ಟ್ ಫೋನ್‌ಗಳು ಮಿಂಚುತ್ತವೆ. ಎಂಟ್ಹತ್ತು ವರ್ಷಗಳ ಹಿಂದಕ್ಕೆ ಹೊರಳಿದರೆ ಸ್ಮಾರ್ಟ್‌ ಫೋನ್ ನಗರದಲ್ಲಿ ಮಾತ್ರ ವಾಸ್ತವ್ಯ ಹೂಡಿದ್ದವು. ಅಂದು ಸ್ಮಾರ್ಟ್ ಫೋನ್ ಬಳಕೆದಾರರನ್ನು ಇಂದಿನ ಬೆಂಜ್‌ ಕಾರ್ ಮಾಲೀಕನಂತೆ ಬಾಯಿ ‌ಮೇಲೆ ಬೆರಳಿಟ್ಟು‌ ನೋಡುತ್ತಿದ್ದರು.

ಆಗಿನ್ನೂ ಸ್ಮಾರ್ಟ್ ಫೋನ್‌ಗಳೆಂದರೇ ಆಶ್ಚರ್ಯ, ಕುತೂಹಲ, ಶ್ರೀಮಂತಿಕೆ, ಹೊಸತನ. ಆದರೆ ಈಗ! ಇದೊಂದು ಲೇಟೆಸ್ಟ್‌ ಫ್ಯಾಶನ್, ಟ್ರೆಂಡ್, ಶೋಕಿ. ಸ್ಮಾರ್ಟ್ ಫೋನ್‌ ಇಲ್ಲದವರನ್ನು ಜನ ನೋಡುವ ದೃಷ್ಟಿಯೇ ಬದಲಾಗಿದೆ. ಹೊತ್ತಿನ ಕೂಳಿಗೆ ಪರದಾಡಿದರೂ ಚಿಂತೆಯಿಲ್ಲ; ಅಗಲದ ಸ್ಮಾರ್ಟ್ ಫೋನ್‌ವೊಂದು ಅಂಗೈಯಲ್ಲಿರಬೇಕು. ಹಾಲುಹಲ್ಲಿನ ಮಕ್ಕಳಿಂದ ಹಿಡಿದು ಹಲ್ಲು ಬಿದ್ದ ವೃದ್ಧರವರೆಗೂ ಸ್ಮಾರ್ಟ್ ಪೋನ್ ಬಳಕೆದಾರರೇ!

ಸಿಂಹಪಾಲು ಯುವಕರದ್ದು..
ಮೊಬೈಲ್‌ ಕಂಪ್ಯೂಟರ್ ಇಲ್ಲದ ಇಂದಿನ ಯುವಕರ ಜೀವನ ಊಹಿಸಿಕೊಳ್ಳಲು ಸಾಧ್ಯವಿಲ್ಲ. ಸಾಮಾಜಿಕ ಜಾಲತಾಣಗಳಿಗೆ ಬದುಕನ್ನೇ ಗುತ್ತಿಗೆ ಕೊಟ್ಟಿದ್ದೇವೆ. ಸಾಮಾಜಿಕ ಜಾಲತಾಣಗಳನ್ನು ಬಳಸುವಲ್ಲಿ ಸಿಂಹಪಾಲು ಯುವಕರದ್ದು. ಒಂದು ಅಧ್ಯಯನದ ಪ್ರಕಾರ ಶೇ 35ಕ್ಕಿಂತ ಹೆಚ್ಚಿನ ಜನರು ದಿನವೂ ನಾಲ್ಕು ಗಂಟೆಗಿಂತ ಹೆಚ್ಚಿನ ಸಮಯವನ್ನು ಸಾಮಾಜಿಕ ಜಾಲತಾಣಗಳಿಗೆ ವ್ಯಯಿಸುತ್ತಾರೆ. ಇಲ್ಲಿ ಯುವಕರೇ ಹೆಚ್ಚಿನ ಪ್ರಮಾಣದಲ್ಲಿರುವುದರ ಬಗ್ಗೆ ವರದಿಯಾಗಿದೆ. 171 ಶತಕೋಟಿ ಫೇಸ್‍ಬುಕ್ ಬಳಕೆದಾರರಲ್ಲಿ 142 ದಶಲಕ್ಷ ಮಂದಿ ಭಾರತೀಯರೇ ಇರುವುದಾಗಿ ಉಲ್ಲೇಖವಿದೆ

ಅವಶ್ಯಕತೆಗೂ ಮೀರಿದ ಸ್ಮಾರ್ಟ್ ಫೋನ್‌ ಬಳಕೆ, ಮಿತಿಮೀರಿ ಸಾಮಾಜಿಕ ಜಾಲತಾಣ ಬಳಸುವುದರಿಂದ ಮನಸ್ಸಿಗೆ, ದೇಹಕ್ಕೆ ಯಾವ ರೀತಿಯ ಅಡ್ಡಪರಿಣಾಮವಿದೆ ಎಂಬುದು ಗೊತ್ತಿರದಷ್ಟು ದಡ್ಡರಲ್ಲ ನಮ್ಮ ಜನ. ಆದರೂ ಅದರೊಂದಿಗೆ ರಾಜಿ ಬದುಕು ನಡೆಸುತ್ತಿದ್ದಾರೆ. ಇಂದಿನ ಪರಿಸ್ಥಿತಿ ಹೇಗಾಗಿದೆ ಎಂದರೇ ತಂಬಾಕು ಪದಾರ್ಥಗಳ ಮೇಲೆ ತಂಬಾಕು ಸೇವನೆಯಿಂದ ಕ್ಯಾನ್ಸರ್ ಬರುತ್ತದೆ ಎಂದು ಬರೆದಿಟ್ಟಿದ್ದರೂ ಜನ ದುಡ್ಡುಕೊಟ್ಟು ತಿನ್ನುತ್ತಾರೆ. ಇದು ಹಾಗೇಯೇ. ಸ್ಮಾರ್ಟ್ ಫೋನ್ ಬಳಕೆಯಿಂದ ಹಾನಿಯಿದೆ ಎಂಬುದು ಗೊತ್ತಿದ್ದರೂ ಸಹ ಅದನ್ನೇ ಈಡೀ‌ ದಿನ ಬಳಕೆ ಮಾಡುತ್ತೇವೆ.‌ ಇದು ಅನಿವಾರ್ಯತೆಯೋ, ಅವಶ್ಯಕತೆಯೋ, ಚಟವೋ, ದುರಾಭ್ಯಾಸವೋ... ನಮಗೆ ನಾವೇ ಪ್ರಶ್ನೆ ಮಾಡಿಕೊಳ್ಳಬೇಕು. ಇನ್ನೊಂದು ಮಾತು; ಸ್ಮಾರ್ಟ್ ಫೋನ್‌ ದಾಸರು ಯುವಕಷ್ಟೇ ಅಲ್ಲ; ಪಾಲಕರೂ ಇದ್ದಾರೆ.

ನಾನು ಗಮನಿಸಿದ ಹಾಗೇ ಸ್ಮಾರ್ಟ್‌ಫೋನ್, ಸಾಮಾಜಿಕ ಜಾಲತಾಣಗಳ ವಿಷಯ ಬಂದರೇ, ಬೆರಳು ತೋರಿಸುವುದು ಯುವಕರತ್ತ. ಆದರೆ ಇಲ್ಲಿ ಪಾಲಕರ ಪಾತ್ರವೂ ಇದೆ. ಎಷ್ಟೊಂದು ಪಾಲಕರು ತಮ್ಮ ಜವಾಬ್ದಾರಿ, ಕರ್ತವ್ಯ ಮರೆತು ಸ್ಮಾರ್ಟ್ ಫೋನ್ ಗಳ ದಾಸರಾಗಿದ್ದಾರೆ. ಮೊದಲೆಲ್ಲಾ ಅಮ್ಮಂದಿರೂ ಚಂದಮಾಮನನ್ನು ತೋರಿಸಿ ಊಟ ಮಾಡಿಸುತ್ತಿದ್ದರು.‌ ಆದರೆ ಈಗ ವಾಟ್ಸ್‌ಆ್ಯಪ್‌, ವಿಡಿಯೊ, ಟಿಕ್ ಟಾಕ್, ಡಾನ್ಸ್‌ ತೋರಿಸಿ ಊಟ ಮಾಡಿಸುತ್ತಾರೆ.

ಮೊದಲೆಲ್ಲ ಮದುವೆಗೆ ಗಂಡು/ಹೆಣ್ಣು ಹುಡುಕಿ ಮದುವೆ ಮಾಡುವುದೆಂದರೇ ಎಷ್ಟೊಂದು ಖರ್ಚು, ‌ಓಡಾಟ! ಆದರೆ ಇಂದು ಜಾತಕ, ಫೋಟೊವನ್ನು ವಾಟ್ಸ್‌ಆ್ಯಪ್‌ನಲ್ಲಿ ಕಳುಹಿಸುತ್ತಾರೆ. ಹುಡುಗಿ/ಹುಡುಗನ ಬಗ್ಗೆ ವಿಚಾರಿಸಬೇಕೆಂದರೇ ಅಕ್ಕ ಪಕ್ಕದ ಮನೆಯವರನ್ನೋ ಅಥವಾ ಸಂಬಂಧಿಕರನ್ನೋ ಕೇಳುವ ಪ್ರಮೇಯವೇ ಇಲ್ಲ. ಅವರ ಫೇಸ್‍ಬುಕ್ ಅಕೌಂಟ್ ಎಲ್ಲದರ ಬಗ್ಗೆಯೂ ಮಾಹಿತಿ ಕೊಡುತ್ತಿದೆ. ಆನ್‌ಲೈನ್‌ನಲ್ಲಿ ಎಂಗೇಜ್ ಮೆಂಟ್, ಮದುವೆ, ಟೆಕ್ನಾಲಜಿ ಮುಂದುವರೆಯುತ್ತಿದ್ದಂತೆ ಪಾಲಕರು ಆಲಸಿಗಳಾಗುತ್ತಿದ್ದಾರೆ. ಸಂಸ್ಕೃತಿ, ಸಂಬಂಧ, ಸಂಪ್ರದಾಯಗಳನ್ನೇ ಮರೆಯುತ್ತಿದ್ದಾರೆ.

ಕೆಲವೊಂದು ಪಾಲಕರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ಮುಳುಗಿ ಹೋಗಿರುತ್ತಾರೆ. ಇಂಥವರನ್ನ ಗಮನಿಸಿ ನೋಡಿ! ಅವರಲ್ಲಿ ಮಕ್ಕಳು, ಗಂಡ, ಹೆಂಡತಿ, ಕುಟುಂಬ ಎಂಬ ಕಾಳಜಿ, ಪ್ರೀತಿ ಬಹಳ ಕೆಳಮಟ್ಟದಲ್ಲಿ ಇರುತ್ತದೆ. ಗಂಡ, ಹೆಂಡತಿಯ ಮಧ್ಯೆಯು ಅಷ್ಟೊಂದು ಒಳ್ಳೆಯ ಬಾಂಧವ್ಯ ಬೆಸೆದಿರುವುದಿಲ್ಲ. ಅಂಥವರ ತಲೆ‌ ತುಂಬ ಇನ್‌ಸ್ಟಾಗ್ರಾಂ, ಫೇಸ್‍ಬುಕ್, ವಾಟ್ಸ್‌ಆ್ಯಪ್‌, ಕಮೆಂಟ್ಸ್, ಲೈಕ್ಸ್‌ ಗಿರಕಿ‌ ಹೊಡೆಯುತ್ತಿರುತ್ತದೆ. 'ನನ್ನ ಪ್ರೀತಿಯ ಕುಟುಂಬ' ಎಂಬ ಸ್ಟೇಟಸ್ ನೊಂದಿಗೆ ಕುಟುಂಬದ ಪಟ ಕೇವಲ ಪ್ರೊಪೈಲ್‌ ಪಿಕ್ ಆಗಿ ಮಾತ್ರ ಉಳಿದಿರುತ್ತದೆ. ಅಲ್ಲಿ ಭಾವನೆಗಳಿರುವುದಿಲ್ಲ.

ನಾವು ಚಿಕ್ಕವರಿರುವಾಗ ಮುಸ್ಸಂಜೆ ಹೊತ್ತಿನಲ್ಲಿ ಅಜ್ಜಿ ದೇವರಮುಂದೆ ಕೂಡ್ರಿಸಿಕೊಂಡು ಬಾಯಿಪಾಠ, ಶ್ಲೋಕ, ಭಜನೆ, ಹೇಳಿಸುತ್ತಿದ್ದಳು. ಆದರೆ ಇಂದಿನ ದಿನಮಾನಗಳಲ್ಲಿ ಮುಸ್ಸಂಜೆ ವೇಳೆಗೆ ಟಿ.ವಿ ಮುಂದೆ ಅಥಮಾ ಸ್ಮಾರ್ಟ್ ಫೋನ್‌ ಹಿಡಿದು ಮನೆಮಂದಿಯೆಲ್ಲಾ ಒಂದೊಂದು ದಿಕ್ಕಿಗೆ ಕುಳಿತಿರುತ್ತಾರೆ. ಮಕ್ಕಳಿಗೂ ಅವರಷ್ಟೇ ಉದ್ದದ ಫೋನ್ ಕೊಟ್ಟುಬಿಡುತ್ತಾರೆ. ಮಾತು, ಕತೆ, ನಗು‌, ಎಲ್ಲ ಸ್ಮಾರ್ಟ್ ಫೋನ್‌ ಜೊತೆಯಲ್ಲಿಯೇ. ಒಂದೇ ಮನೆಯಲ್ಲಿ ಅಪರಿಚಿತರಂತೆ ಬದುಕುತ್ತಾರೆ.

ಇಂದಿನ ಸ್ಮಾರ್ಟ್ ಫೋನ್‌ ಯುಗದಲ್ಲಿ ಹತ್ತಿರದ ಸಂಬಂಧಿಗಳೆಲ್ಲ ದೂರವಾಗುತ್ತಿದ್ದಾರೆ. ಗುರುತು ಪರಿಚಯವಿಲ್ಲದವರು ಸಂಬಂಧಿಗಳಾಗುತ್ತಿದ್ದಾರೆ. ಟೆಕ್ನಾಲಜಿ ಮುಂದುವರಿಯುತ್ತಿದ್ದಂತೆ ಹಿಂದಿನ ದಿನಮಾನಗಳ ನೆನಪೆಲ್ಲಾ ಯಾವುದೋ ಕನಸಿನಂತೆ ಕಂಡು ಮಾಯವಾಗುತ್ತಿದೆ. ಕುಂಟೆಬಿಲ್ಲೆ, ಚಿನ್ನಿದಾಂಡು ಆಡುವವರಿಲ್ಲಾ. ಅಮೆರಿಕದಲ್ಲಿ ಓದುವ ಮಗನ ಪ್ರೀತಿಯ ಪತ್ರವಿಲ್ಲ, ಪತ್ರಕ್ಕೆ ಕುತೂಹಲದಿಂದ ಕಾಯುವ ತಂದೆ ಇಲ್ಲ. ಬಾನೆತ್ತರದ ಚಂದಮಾಮನನ್ನು ತೋರಿಸಿ ಊಟ ಮಾಡಿಸುವ ತಾಯಿ ಇಲ್ಲ. ಕಿತ್ತಾಟ, ಹೊಡೆದಾಟ, ಜಗಳಕ್ಕೆ ಅಕ್ಕ, ಅಣ್ಣನಿಗೆ‌ ಸಮಯವೇ ಇಲ್ಲ.‌ ನಾವೇ ಬದಲಾಗಿದ್ದೇವೋ ಅಥವಾ ಟೆಕ್ನಾಲಜಿ ನಮ್ಮನ್ನ ಬದಲಾಯಿಸಿದೆಯೋ?‌

ಕೊನೆಯಲ್ಲಿ ಒಂದು ಮಾತು; ಈ ಮೀತಿ ಮೀರಿದ ಸ್ಮಾರ್ಟ್ ಫೋನ್ ಬಳಕೆ ನಾವು ಕಳುಹಿಸುವ ಪಾರ್ವರ್ಡ್ ಮೆಸೇಜ್ ನಂತೆಯೇ. ಕೆಲವೊಮ್ಮೆ ನಾವೇ ಕಳುಹಿಸಿದ ಮೆಸೇಜ್ ‌ಶೇರ್ ಆಗಿ ನಮ್ಮ ಬುಡಕ್ಕೆ ಬರುತ್ತದೆ.‌ ಯಾವುದನ್ನು ನಾವು ಹೂವಿನ ಹಾಸಿಗೆ ಎಂದುಕೊಂಡಿದ್ದೇವೊ ಅದು ಮುಳ್ಳಿನ ದಾರಿಯೂ ಆಗಲಿದೆ. ಎಚ್ಚರವಿರಲಿ.

ಸ್ಮಾರ್ಟ್ ಫೋನ್‌ ಥಂಬ್ ಪ್ರಾಬ್ಲೆಮ್‌
ನಿರಂತರ ಸ್ಮಾರ್ಟ್ ಫೋನ್‌ ಬಳಕೆಯಿಂದಾಗಿ ಮಿದುಳು ಸೇರಿ ಮಾನವನ ವಿವಿಧ ಅಂಗಾಂಗದ ಮೇಲೆ ನಕಾರಾತ್ಮಕ ಪರಿಣಾಮ ಉಂಟಾಗುತ್ತದೆ ಎನ್ನುವುದನ್ನು ಈಗಾಗಲೇ ವಿಜ್ಞಾನಿಗಳು ವೈಜ್ಞಾನಿಕವಾಗಿ ಸಾಬೀತುಪಡಿಸಿದ್ದಾರೆ. ಕಿವಿಗೆ ಹತ್ತಿರವಾಗಿ ಮೊಬೈಲ್ ಹಿಡಿದು ಮಾತನಾಡುವಾಗ ಅದರಿಂದ ಬರುವ ರೇಡಿಯೊ ತರಂಗಗಳು ಮಿದುಳಿನಲ್ಲಿ ವ್ಯಾಪಿಸಿ, ಕಲಿಕಾ ಸಾಮರ್ಥ್ಯವನ್ನು ದುರ್ಬಲಗೊಳಿಸುತ್ತದೆ. ನಿದ್ರಾ‌ಹೀನತೆಗೆ ಕಾರಣವಾಗುತ್ತದೆ. ಸ್ಮರಣಶಕ್ತಿ ಕಡಿಮೆಯಾಗುತ್ತದೆ. ಕಣ್ಣಿನ ತೊದರೆ ಉಂಟಾಗುತ್ತವೆ. ಇತ್ತೀಚೆಗೆ ವಿದ್ಯಾರ್ಥಿಗಳಲ್ಲಿ ಮತ್ತೊಂದು ಹೊಸ ಸಮಸ್ಯೆ ಕಾಣಿಸುತ್ತಿದೆ. ಅದುವೇ ಸ್ಮಾರ್ಟ್ ಫೋನ್‌ ಥಂಬ್ ಸಮಸ್ಯೆ.

ನಿರಂತರವಾಗಿ ಸ್ಮಾರ್ಟ್ ಫೋನ್‌ನಲ್ಲಿ ಮೆಸೇಜ್ ಟೈಪ್ ಮಾಡುವುದರಿಂದ ಬೆರಳುಗಳು ದುರ್ಬಲವಾಗುತ್ತದೆ. ಬೆರಳುಗಳ ಸಂದಿಯಲ್ಲಿ ನೋವು ಕಾಣಿಸಿಕೊಳ್ಳುವುದು ಶಕ್ತಿ ಹೀನವಾಗುವುದು, ಬೆರಳುಗಳ ಮರುಗಟ್ಟುವಿಕೆ, ಸ್ಥೀಮಿತ ಕಳೆದುಕೊಳ್ಳುವುದು, ಇದರಿಂದಾಗಿ ವಿದ್ಯಾರ್ಥಿಗಳಿಗೆ ಪರೀಕ್ಷೆ ಸಮಯದಲ್ಲಿ ತೊಂದರೆಯಾಗುತ್ತದೆ. ಮೂರು ತಾಸು ನಿರಂತರವಾಗಿ ಪರೀಕ್ಷೆ ಬರೆಯಲಾಗದೇ ಆತ್ಮವಿಶ್ವಾಸ ಕಳೆದುಕೊಳ್ಳುತ್ತಿದ್ದಾರೆ. ಮೊಬೈಲ್‌ ಫೋನಿನ ದಾಸರಾದರೂ ಪರೀಕ್ಷಾ ಸಮಯದಲ್ಲಾದರೂ ಮೊಬೈಲ್ ಬದಿಗಿಟ್ಟು ಪರೀಕ್ಷೆ ತಯಾರಿ ಮಾಡುವುದು ಒಳಿತು.

ವಿರಾಟ್ ಕೊಹ್ಲಿ ನಾಯಕತ್ವದ ಭಾರತ ಕ್ರಿಕೆಟ್‌ ತಂಡ ಕಪ್ ಗೆಲ್ಲುತ್ತಾ? ಐಸಿಸಿ ವಿಶ್ವಕಪ್ 2019 ಯಾರು ಗೆಲ್ಲುತ್ತಾರೆ? ಕೋಟ್ಯಂತರ ಕ್ರಿಕೆಟ್ ಪ್ರೇಮಿಗಳ ನಿರೀಕ್ಷೆಗೆ ಉತ್ತರ ಸಿಗುವ ಕಾಲ ಬಂದಿದೆ. ವಿಶ್ವಕಪ್ ಕ್ರಿಕೆಟ್‌ನ ಸ್ಕೋರ್ ಅಪ್‌ಡೇಟ್ಸ್‌, ಮ್ಯಾಚ್‌ಗಳ ವರದಿ, ವಿಶ್ವಕಪ್ ಕ್ರಿಕೆಟ್ ಹೆಜ್ಜೆ ಗುರುತು, ಆಟಗಾರರ ಸಂದರ್ಶನ, ವೇಳಾಪಟ್ಟಿ ತಿಳಿದುಕೊಳ್ಳಲು www.prajavani.net ಜಾಲತಾಣಕ್ಕೆ ಭೇಟಿ ನೀಡಿ. ಕ್ರೀಡಾಪ್ರೇಮಿಗಳ ನೆಚ್ಚಿನ ಆಯ್ಕೆ ‘ಪ್ರಜಾವಾಣಿ’. ಇದು ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 9

  Happy
 • 0

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !