ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಧ್ಯಾತ್ಮ: ಪ್ರತಿಕ್ಷಣದ ಅನುಭವ

Last Updated 22 ಫೆಬ್ರುವರಿ 2019, 19:46 IST
ಅಕ್ಷರ ಗಾತ್ರ

ಇತ್ತೀಚೆಗೆ ಎಲ್ಲೆಲ್ಲೂ ಕಾಣಿಸಿಕೊಳ್ಳುವ 'ಮಂಡಲ ಪೈಂಟಿಂಗ್ ' ಕಾರ್ಯಾಗಾರಕ್ಕೆ ಕಳೆದ ವಾರ ಹೋಗಿದ್ದೆ. ಕೆಲಸ ತುಂಬಾ ಸುಲಭ. ಮಂಡಲಾಕೃತಿಯಲ್ಲಿ ಡಿಸೈನ್‌ಗಳನ್ನು ಮಾಡುತ್ತಾ ಹೋಗುವುದು. ಒಂದು ಹೂವಿಗೆ ಇನ್ನೊಂದು ಹೂವು, ಒಂದು ಎಲೆಗೆ ಮತ್ತೊಂದು ಎಲೆ, ನಾನಾ ವಿನ್ಯಾಸದ ಗೆರೆಗಳು

– ಹೀಗೆ ಮನಸ್ಸಿಗೆ ಬಂದಂತಹ, ಆದರೆ ಒಟ್ಟು ಒಂದಕ್ಕೊಂದು ಸಂಬಂಧವಿರುವಂತಹ ಚಿತ್ತಾರಗಳನ್ನು ಮಾಡುವುದು. ಇವು ಯಾವುದೇ ರೀತಿಯ ಕಲಾ ತರಬೇತಿಯ ಅವಶ್ಯಕತೆ ಇಲ್ಲದ, ಯಾವುದೇ ರೀತಿಯ ವಿಮರ್ಶೆಗೆ ಒಳಪಡಿಸಲಾರದಂತಹ ನಾಲ್ಕು ಗಂಟೆಗಳು ನಮ್ಮ ಗಮನವನ್ನು ಬೇಡುವ ಉಲ್ಲಾಸಕಾರಿ ಕ್ರಿಯೆ. ಮಂಡಲಕ್ಕೆ ನಮ್ಮಿಷ್ಟದ ಬಣ್ಣ ತುಂಬುವ ಸಂಭ್ರಮ. ಕೊನೆಗೆ ನಾವೆಲ್ಲ ನಮಗಾದ ಅನುಭವವನ್ನು ಹಂಚಿಕೊಂಡೆವು. ಒಂದಲ್ಲ ಒಂದು ರೀತಿಯಲ್ಲಿ ಎಲ್ಲರೂ ನಿರಾತಂಕ, ಶಾಂತಿ, ನೆಮ್ಮದಿ, ಆನಂದ – ಹೀಗೆ ಪಾಸಿಟಿವ್ ಅನುಭವಗಳ ಬಗ್ಗೆಯೇ ಮಾತನಾಡಿದರು. ಹೆಚ್ಚಿನವರು ಧ್ಯಾನದಲ್ಲಿ ಆಗುವ ಅನುಭವಗಳ ಬಗ್ಗೆಯೇ ಮಾತನಾಡಿದರು. ಮೌನವಾಗಿ ಮಂಡಲವನ್ನು ರಚಿಸುವಾಗ ತಮ್ಮ ಮನಸ್ಸಿನಲ್ಲಿ ಹಾದು ಹೋದ ಅನೇಕ ವಿಚಾರಗಳು, ಮಂಡಲ ರಚಿಸುವಿಕೆಯಲ್ಲಿ ಸುಪ್ತಮನಸ್ಸಿನ ಕೈವಾಡ – ಇವುಗಳ ಬಗ್ಗೆ ಚರ್ಚಿಸುತ್ತಿದ್ದರು. ಸಮಾನ ಮನಸ್ಕರ ಜೊತೆ ಒಡನಾಡಿ, ಒಬ್ಬರ ವಿನ್ಯಾಸಗಳನ್ನು ಮತ್ತೊಬ್ಬರು ಮೆಚ್ಚುತ್ತಾ, ಏನನ್ನೋ ಕಟ್ಟುವ, ಹಂಚಿಕೊಳ್ಳುವ ಕ್ರಿಯೆಯಲ್ಲಿ ಎಲ್ಲರೂ ಒಂದಾದಂತಹ ಭಾವ ಹಕ್ಕಿಯಂತೆ ಹಗುರಾದ ಅನುಭವ ನೀಡುತ್ತಿತ್ತು. ಇಂತಹ ಅನುಭವ ಎಲ್ಲರಿಗೂ ಯಾವುದಾದರೂ ಕ್ರಿಯೆಯಲ್ಲಿ, ಯಾರದಾದರೂ ಒಡನಾಟದಲ್ಲಿ ಆಗಿಯೇ ಆಗಿರುತ್ತದೆ. ಅಂತಹ ಅನುಭವಗಳಿಲ್ಲದೆ ಬದುಕುವುದಾದರೂ ಹೇಗೆ? ಏಕೆ? ಬಹುಶಃ ಅಧ್ಯಾತ್ಮ ಎಂಬುದಕ್ಕೆ ಅರ್ಥ ಇದೇ ಇರಬೇಕು – 'ಅನುಭವ' ಎಂದು.

ಅಧ್ಯಾತ್ಮ ಎಂದರೆ ಯಾವುದೋ ಅಲೌಕಿಕ ಅನುಭವವೇ ಆಗಿರಬೇಕು ಎಂದೇನಿಲ್ಲ; ಅದರ ಹಿಂದಿರುವ ತತ್ವ ಇಷ್ಟೇ: ಪ್ರತಿ ಮಾನವಜೀವಿಗೂ ಬುದ್ಧಿ–ಭಾಷೆಯ ಹಂಗು ತೊರೆದ, ಭಾವಲೋಕದಲ್ಲಿ ನೆಲೆಯಾಗಿಸುವಂತಹ ಅನುಭವಗಳ ಬಗ್ಗೆ ಹಸಿವಿದೆ, ಅವುಗಳ ಅಗತ್ಯವಿದೆ ಮತ್ತು ಅಂತಹ ಅನುಭವಗಳನ್ನು ಎಷ್ಟೇ ಅಪರಿಪೂರ್ಣವಾಗಿಯಾದರೂ ಸರಿ ದಕ್ಕಿಸಿಕೊಳ್ಳಲೇಬೇಕೆಂಬ ತುಡಿತವಿದೆ. ಅಧ್ಯಾತ್ಮ ಎಂದರೆ ಇಂತಹ ತನ್ಮಯಗೊಳಿಸುವ ಅನುಭವಗಳ ಅರಸುವಿಕೆ.

ಅನುಭವಗಳು ಯಾರಿಗಿಲ್ಲ?ಅನುಭವಗಳು ಉಸಿರಾಟದಂತೆ, ಅದಿಲ್ಲದೆ ಬದುಕಿಲ್ಲ; ಆದರೆ ತಮ್ಮ ಉಸಿರಾಟದ ಕಡೆಗೆ ಒಮ್ಮೆಯೂ ಗಮನ ಕೊಡದೆ ಇದ್ದರೂ ಬದುಕುತ್ತಿರುತ್ತೇವೆ; ಆದರೆ ಬದುಕನ್ನು ಪೂರ್ಣವಾಗಿ ಅನುಭವಿಸುತ್ತಿರುವುದಿಲ್ಲ. 'Not dead' ಮತ್ತು 'feeling alive' ನಡುವೆ ಸಾಗರದಷ್ಟು ಅಂತರವಿದೆ.ತುಂಬಿ ಹರಿಯುವ ನದಿಯಂತೆ, ಮಿಂಚು, ಸಿಡಿಲು ಸಹಿತವಾದ ತಡೆಯಿಲ್ಲದೆ ಸುರಿಯುವ ಮಳೆಯಂತೆ, ಮೈತುಂಬಾ ಹೂವು ಸುರಿಯುವ ಮರದಂತೆ, ಭೋರ್ಗರೆಯುವ ಕಡಲಿನಂತೆ, ಕಣ್ಮನ ತಣಿಸುವ ಹಚ್ಚ ಹಸುರಿನ ಭೂಮಿಯಂತೆ, ದಣಿವರಿಯದೆ ಆಡುವ ಮಗುವಿನಂತೆ, ಅಚ್ಚರಿ, ಬೆರಗು, ಕುತೂಹಲ, ಕಾಮನೆಗಳು ತುಂಬಿದ ಕಣ್ಣುಗಳಂತೆ ಮಿತಿ, ಮೇರೆ ಇಲ್ಲದ ಉತ್ಕಟವಾದ ಬದುಕೇ ಅಧ್ಯಾತ್ಮ. ಉತ್ಕಟವಾಗಿ ಬದುಕುವುದಕ್ಕೆ ಪ್ರತಿಕ್ಷಣವೂ ವರ್ತಮಾನದಲ್ಲಿ ಇರಬೇಕು. ವರ್ತಮಾನದಲ್ಲಿ ಬದುಕುವುದು ಮಾತಿನಲ್ಲಿ ಹೇಳಿದಷ್ಟು ಸುಲಭವಲ್ಲ. ಭೂತಕಾಲದ ನೋವು, ಸಂಕಟ, ದುಃಖಾನುಭವಗಳು; ಭವಿಷ್ಯದ ಚಿಂತೆ, ಆತಂಕಗಳು ನಮ್ಮ ಸದ್ಯದ ಅರಿವು–ಇರವನ್ನು ಘಾಸಿಗೊಳಿಸಿ, ನಮ್ಮನ್ನು ಜಡತ್ವದಲ್ಲಿ ಬಂಧಿಸಿಬಿಡುತ್ತವೆ. ಆಗ ನಮ್ಮ ನೆರವಿಗೆ ಬರುವಂಥದ್ದು ಕಲೆ; ಕಲೆ, ನೃತ್ಯ, ನಾಟಕ, ಸಿನೆಮಾ, ಸಂಗೀತಗಳು ನಮ್ಮನ್ನು ತನ್ಮಯಗೊಳಿಸುತ್ತವೆ; ತಲ್ಲೀನತೆಯ ಅನುಭವಗಳು ಆಪ್ಯಾಯಮಾನ ಎನಿಸುತ್ತವೆ. ಅವು ಜೀವನಕ್ಕೆ ಹೊಸತನವನ್ನು ತುಂಬುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT