ಶುಕ್ರವಾರ, ಏಪ್ರಿಲ್ 10, 2020
19 °C

ಉರಿ

ಡಾ. ಕುರುವ ಬಸವರಾಜ್ Updated:

ಅಕ್ಷರ ಗಾತ್ರ : | |

‘ಜಡ್ಡಿನಕು’ ‘ಜಡ್ಡಿನಕು’ ಮಚ್ಚಿನ ಖಚಿತ ಕಚ್ಚಂತೆ, ಹುರಿಗೊಂಡು ಕೊಬ್ಬಿದ ಹೋರಿಯ ಪುಟಿ ಹೆಜ್ಜೆಯ ಚಬುಕಂತೆ– ಏಟಿನ ಗತ್ತು ತಮಟೆಗಳದು. ಪಳಗಿದ ನುಡಿಸಾಣಿಕೆಯ ಮಜಲಿನ ಹುಯಿಲು. ಎಂದಿನಂತಲ್ಲದ ಬಿರುಸು ಗಸ್ತು ಗಸ್ತುಗಳಲ್ಲಿ. ಎದೆ ಎದೆಗಳ ಒಳಗೊಳಗೆ ಯುದ್ಧಕ್ಕೆ ಹೂಡಿದ ಬಿಲ್ಲಿನ ಝಲ್ಲಂತೆ ಜುಮು ಜುಮುಗೊಂಡ ಗತ್ತು ಜನರ ನರನರಗಳಲ್ಲಿ.

ಜಗ್ಗಿ ಹಿಡಿದವರು ಕೈಸಡಿಲಿಸಿ ಈಚೆ ಬಿಟ್ಟರೆ ಸಾಕು ಎದುರಿಗೆ ಸಿಕ್ಕಿದವರನ್ನೆಲ್ಲಾ ನುಗ್ಗಿ ಗುದ್ದಿಯೇನು ಎನ್ನುವ ಟಗರ ಹೊಗರಂತೆ, ಕಣ್‌ ಕೆದರಿದ ಗೂಳಿಯಂತೆ ಜನ ಏನೆಲ್ಲವ ಮೈಯಲಿ ಹೊಗಿಸಿಕೊಂಡ ಹುರುಪು ಮಾರಿಹಬ್ಬದಲಿ.

ಚಂದ್ರಗೊಡಲಿ, ಕಂದ್ಲಿ, ದೊಡ್ಡ ಮಚ್ಚು, ಕುಡಗೋಲು, ದೊಣ್ಣೆ, ಕಣಿಗೆಗಳು ‘ಹಾ’ ‘ಹೋ’ ‘ಹು‌ರ್ರ್ ರ್ರ್ ರ್ರ್’ ಎಂದು ನೆಗೆನೆಗೆದು ‘ಯಾರನ್ನು ಹರಿಯಲಿ’ ‘ಯಾರನ್ನು ತರಿಯಲಿ’ ಎಂದು ರವಗುಡುವವೋ ಎಂಬಂತೆ ಕೇಕೆಗಳು ಮೊಳಗುತ್ತಿರುವ ಹೊತ್ತು. ಕೋಣ, ಕುರಿ, ಮೇಕೆ, ಕೋಳಿಗಳ ತಲೆ ತರಿಯಲು ತುರುಸುಗೊಂಡವರಂತೆ ಹರಿಹಾಯುತ್ತಿರುವ ಸನ್ನಿವೇಶ. ಎಳೆಯರು, ಹಿರಿಯರು, ಹೆಂಗಸರು ಯಾರು ಯಾರಲಿ ಏನು? ಊರಿಗೆ ಊರೇ ಉಮೇದಿಯ ದುಮುಗುಡುವಿಕೆಯಲಿ ಅದ್ದಿ ಎದ್ದಂತೆ. ನೆಲ ಅದುರುವ ನಡೆ.

ಆಕಾಶದ ಬೆಳಕು ಹಿಂದೆ ಸರಿಯುವ ಹೊತ್ತು.

ಕಟ್ಟುಮಸ್ತಿನ ಹತ್ತಾಳುಗಳು ಕಾಲನ್ನು ನೆಲಕೆ ಒತ್ತಿ ಊರಿ, ದಪ್ಪನೆಯ ಹಗ್ಗವ ಎಷ್ಟೇ ಜಗ್ಗಿಸಿ ಹಿಡಿದರೂ ಬಗ್ಗದೆ ಎತ್ತೆತ್ತಲೋ ಎಳೆದಾಡುತಿದೆ ಮಾರಿಗೆ ಬಿಟ್ಟ ಮಹಾಕೋಣ. ಈ ಮಹಾಜನಗಳ ಮುಂದೆ ಅನ್ನ ಆಹಾರಗಳಿಲ್ಲದೆ ಕೊಂಚ ಸೊರಗಿದಂತಿದ್ದರೂ ಮೈಯೊಳಗಣ ಕ್ಯಾಣ ಪಾಳೇಗಾರನ ಪೊಗರಂತೆ, ಕೊಬ್ಬಿದ ಹುಲಿಯ ಗುಟುರು ಗಾಂಭೀರ್ಯ ಲಾಲಿತ್ಯ ಹೆಜ್ಜೆಯಲಿ. ಮುಂಜಾನೆಗೆ ಕೋಣವ ಕಡಿದು ಬೀಳಿಸುವುದಿದ್ದರೆ ರಾತ್ರಿಯಲ್ಲಿ ಊರ ಮನೆ ಮನೆಗಳ ಮುಂದೆ ಕೋಣನ ಮೆರವಣಿಗೆ.

ಮನೆ ಮನೆಗಳವರೂ ಹಣ್ಣು ಮುರಿದು, ಕಾಯಿ ಒಡೆದು, ತಲೆಗೆ ಎಣ್ಣೆ ಸುರಿದು ಪೂಜಿಸುವರು. ಕೋಣವ ಹಿಡಿದವರು ಗರಡಿ ಆಳಿನಂತಹ ಹತ್ತಾಳಾದರೂ ಲೆಕ್ಕಕಿಲ್ಲ ಇಲ್ಲಿ. ಬಲಕ್ಕೆ ಕತ್ತು ಹೊರಳಿಸಿದರೆ ಎಡದ ಆರಾಳಿನ ನಡ ಪದರುಗುಟ್ಟುತ್ತಿತ್ತು. ಎಡಕ್ಕೆ ಹೊರಳಿದರೆ ಬಲದ ಆರಾಳಿನ ತೊಡೆ ನಡುಗುತ್ತಿದ್ದವು. ಏಳು ವರ್ಷ ಎಗ್ಗಿಲ್ಲದೆ, ಮನ ಬಂದ ಕಡೆ ಬೇಕೆನಿಸಿದ ಹೊಲದಲ್ಲಿ ಎಲ್ಲೆಂದರಲ್ಲಿ ನುಗ್ಗಿ, ಎಳೆ ಚಿಗುರು, ರುಚಿಯ ತೆನೆ ಏನೇ ಮೇಯ್ದರೂ ಯಾರೂ ಕೇಳುವಂತಿಲ್ಲದೆ ಮೇಯ್ದ ಮಹಾಕೋಣ ಇದು.

‘ಕೋಣನ ಕಡಿವವ ಎಂಥಾ ತಾಕತ್ತಿನವನೇ ಆದರೂ ಮೂರು ಏಟಲ್ಲ, ನೂರು ಏಟಿಗೂ ಇದರ ಸಿರ ಹರಿಯಲಾರದು’ ಎಂಬಂಥ ಮಾತು ಎಲ್ಲೆಲ್ಲೂ. ‘ಸಣ್ಣ ಮೈಕಟ್ಟಿನ ತೊಡೆ ಒಣಗಿದ ದುರುಗಣ್ಣ ಅದ್ಹೇಗೆ ಕಡಿದಾನೋ..’ ‘ಅವ್ನೇ ಏನು ಕಡಿಯಬೇಕಿಲ್ಲ. ಅವ್ನು ಕೋಣನ ಕತ್ತಿನ ಸಿರಕ್ಕೆ ಚಂದ್ರಗೊಡಲಿ ಎರಡು ಸಾರಿ ಮುಟ್ಟಿಸಿ ಕೊಟ್ಟರೆ ಸಾಕು. ಬೇರೆ ಬಲದೋರು ಕಡಿದು ಹಾಕ್ತಾರೆ’. ಜನರ ನೂರೊಂದು ಮಾತು ಆಲೋಚನೆಗಳ ಹರದಾಟ.

ಸರಿರಾತ್ರಿ ಕಳೆದರೂ ರಾತ್ರಿಗೆ ನಿದ್ದೆ ಬಾರದೆ ಮಲಗುತ್ತಿಲ್ಲ. ಮಾರಿಕೋಣನ ಮೆರೆಸುವವರ ಅಬ್ಬರ, ಆರ್ಭಟ ಸುತ್ತಿನ ಹತ್ತು ಹಳ್ಳಿಗಳಾಚೆ ನುಗ್ಗುತ್ತಲೇ ಇದೆ. ದೊಂದಿಗಳ ಬೆಳಕಲ್ಲಿ ಜನವೆಂಬೋ ಜನ ಎಣ್ಣೆಗೆಂಪಲಿ ಮತ್ತಿನ ಲಹರಿಯಲಿ ಅದ್ದಿಹೋದವರಂತೆ ಮಿದುಗೆಂಪು. ಹುಲಿಹೊಕ್ಕವರಂತಹ ಬಿರುಸು. ಅಡ್ಡಬಂದವರನ್ನು ಕತ್ತರಿಸಿ ಹಾಕುವ ತುರುಸು. ಮನೆ ಮನೆಗಳವರು ಕೋಣಕ್ಕೆ ಅಕ್ಕಿ, ಜೋಳ ತಿನಿಸುವುದು. ಜನಗಳ ಎಳೆದಾಟ, ಎದೆಗಡಚಿಕ್ಕುವ ಹಲಗೆ ಬಡಿತದ ಸದ್ದು, ಗದ್ದಲವೋ ಗದ್ದಲದ ಮಧ್ಯೆ ಮಹಾಕೋಣವಾದರೂ ಇದೆಲ್ಲಾ ಯಾಕೆ ಏನೊಂದರಿಯದೆ ಬೆದರಿ ಬೆಚ್ಚಿ ಬೆಂಡಾಗಿತ್ತು. ಹಗ್ಗ ಮೂಗುದಾರವಿಲ್ಲದೆ ವರ್ಷಗಟ್ಟಲೇ ಎಲ್ಲೆಂದರಲ್ಲಿ ಬೇಕೆಂದಿದ್ದ ಮೆದ್ದು ಹಾರಬೇಕೆಂದಲ್ಲಿ ಹಾರಿ ಬೆಳೆದ ಕೋಣ.

ಊರಿಂದ ಆರೇಳು ಫರ್ಲಾಂಗ್ ಆಚೆಯಲಿ ಮಾರಿ ಅಮ್ಮನ ಕೂರಿಸಿದ ಚಪ್ಪರ. ಮಾರಿ ಅಂದರೆ ತುಸು ಗುಂಡಾದ ಕಪ್ಪನೆ ಕಲ್ಲು ಅಷ್ಟೆ. ಈಗ ಇಲ್ಲಿ ಆ ಕಲ್ಲಿನ ಮೇಲೆ ಅಮ್ಮನ ಮಣ್ಣಿನ ಮೂರ್ತಿ ಮಾಡಿ, ಅದಕ್ಕೆ ಬಟ್ಟೆಬರೆ ಸೀರೆ– ಕುಬುಸ ತೊಡಿಸಿ ಬಳೆ, ಒಡವೆ ವಸ್ತ್ರ ತೊಡಿಸಿ, ಕಣ್ಣು, ಕಂಕಳ ಕೋರೆ ಮೀಸೆಗಳ ಹದ್ದು, ಚಂದದ ಚೆಲುವಿನ ಹೊಳೆಕಳೆಯ ಅಮ್ಮನಾಗಿಸಿದ್ದಾರೆ. ಕಣ್ಣಾಲಿ ಒಳಗೆಲ್ಲ ಬಕುತಿಯ ಇಬ್ಬನಿಯ ಧೂಮ ಹೊಗಿಸಿಕೊಂಡು ನೋಡುತ್ತಾರೆ ಮೈದುಂಬಿ. ಅಮ್ಮನ ಎದುರಿಗೆ ತುಸು ಅಂತರದಲ್ಲಿ ಹೆಂಡ ತುಂಬಿದ ಮಣ್ಣಿನ ಘಟೆ ಗಡಿಗೆ ಇಟ್ಟು ಬೆಲ್ಲದಚ್ಚು, ಅರಿಷಿನಕೊಂಬು ಏನೆಲ್ಲವ ಇಟ್ಟು ಮಂಡಲ ಮೂಡಿಸಿದ್ದಾರೆ.

ನಾನು ಮಲಗುವುದಿಲ್ಲ ಎಂದು ಎಷ್ಟೇ ಕೊಸರಾಡಿದರೂ ಕತ್ತಲು ಹೊತ್ತು ಕಳೆದಂತೆ ಇಳಿದಂತೆ ಬಿರುಸು ಕುಗ್ಗತೊಡಗಿದಂತೆ ಮುಸುಗುಹೊದ್ದು ಗುಬರಿಹಾಕಿಕೊಂಡು ಮಲಗಿದೆ. ಕೊರಳು ಕೊಯ್ದರೂ ಎಚ್ಚರವಾಗದ ನಿದ್ದೆಯ ಹೊತ್ತು ಊರೆಲ್ಲಾ ಒಂದು ಪ್ರಮಾಣದ ನಿದ್ದೆಯಲಿ ಮುಳುಗಿದೆ. ಕೋಣನ ಮೆರವಣಿಗೆ ಊರು ದಾಟಿದೆ. ತಮಟೆ ಕೇಕೆಗಳ ಸದ್ದು ಒಂದಿಷ್ಟು ದೂರ ಸರಿದಂತೆ ಕೇಳುತ್ತಿದೆ. ಅದು ಬಳುಕಿನ ಬಳ್ಳಿಯಂತಹ ಕೆರೆ ಏರಿಯ ಸುತ್ತಿ ಅಮ್ಮನ ಚಪ್ಪರ ತಲುಪುವ ಅರೆಸುತ್ತಿನ ದಾರಿ.

ಕತ್ತಲು ಜಾರಿ ಬೆಳಕು ಹಣುಕುವ ಮುನ್ನಿನ ಹೊತ್ತು. ಇನ್ನೇನು ಒಂದೆರಡು ಗಂಟೆಯಲ್ಲಿ ಮಾರಿಗೆ ಕೋಣನ ಬಲಿ ಆಗುವುದಿತ್ತು. ಊರಾಚೆ ಯಾರೋ ಗಂಟಲು ಕಿತ್ತು ಅರಚಿದ ಸದ್ದು; ‘ಅಯ್ಯೋ ಬರ‍್ರಪೋ, ಮಾರವ್ವನ ಚಪ್ಪರಕ್ಕೆ ಬೆಂಕಿ ಬಿದ್ದಿದೆ. ಬರ‍್ರಿ ಬರ‍್ರಿ ಬರ‍್ರಪೋ’ ಮನೆ ಮನೆಯ ಮೊಬೈಲ್‌ಗಳು ಚೀರಿ ಬಡಕೊಂಡವು. ನಾನ್ ನೀನ್ ಅನ್ನುವಲ್ಲಿ ಊರಿನಲ್ಲೆಲ್ಲಾ ಸುದ್ದಿ ಹರಿದಾಡಿತು.

ಊರಿಗೆ ಊರೇ ಛಂಗನೆ ಕೊಡವಿ ದಡಬಡಾಯಿಸಿ ಎದ್ದು ಮಾರಮ್ಮನ ಚಪ್ಪರದತ್ತ ಓಟಕಿತ್ತಿತು. ಉಟ್ಟ ಪಂಚೆ ಉದುರಿದುದ ಎಳೆದು ಹೆಗಲಿಗೆ ಒಗೆದುಕೊಂಡು, ಏರುಪೇರಾದ ಸೀರೆ ಪರಿವೆಯಿಲ್ಲದೆ ಓಡಿತು ಜನ. ಕೆಲವರು ಕೊಡ, ತಪ್ಪಲೆ, ಕುಂಭ, ಸಿಕ್ಕಿದ ಪಾತ್ರೆ ಪಡಗಗಳಲ್ಲಿ ನೀರು ಒಯ್ದರು.

ಬಯಲು ಚಪ್ಪರದ ತೊಪ್ಪನೆ ತೊಯ್ದ ಹಸಿರು ಗರಿ ಕೂಡ ಬೆಂಕಿಗೆ ಉರುದು ಹೋಗಿದ್ದವು. ಮಣ್ಣಿನ ಮೂರ್ತಿಗೆ ಉಡಿಸಿದ ಕೆಂಪು ರವ ರವ ಸೀರೆಯೂ ಉರಿದಿತ್ತು. ಅಮ್ಮ ಬಟಾಬತ್ತಲೆ. ಅಷ್ಟಿಷ್ಟು ಬೂದಿ ಮುಖ ಮೈಮೇಲೆ ಬಿದ್ದಿದ್ದರೂ ಇಲ್ಲೇನೂ ಆಗಿಯೇ ಇಲ್ಲ ಎಂಬಂತೆ ಮೂಗಿನ ಮೂಗುತಿ ಕಳಕಳೆಯಾಗಿತ್ತು.

ನೀನ್ ತಾನ್ ಎಂದು ಊರವರೆಲ್ಲಾ ಸೇರುವುದರಲ್ಲಿಯೇ ಚಪ್ಪರವೆಲ್ಲಾ ಉರಿದು ಅಲ್ಲಿ ಇಲ್ಲಿ ಅರೆಬರೆ ಉರಿಯುತ್ತಲಿದ್ದವು ಚಪ್ಪರದ ಕಂಬ, ಗರಿಗಳು. ಬಂದ ಜನ ಬೆದರಿ ಬೆರಗಾಯಿತು. ಕೆಂಡ ತುಳಿದವರಂತೆ ದಿಗಿಲಾಯಿತು. ಬಂಡೆ ಉರುಳಿಬಿದ್ದಂತೆ ಬೆಪ್ಪಾಯಿತು.

‘ಏನು ಕೇಡು ಬಂತೆ ನಮ್ಮವ್ವ! ಅಮ್ಮ ಮಾತಾಯ ಚಪ್ಪರಕ್ಕೆ ಹಿಂಗೆ ಬೆಂಕಿ ಬಿದ್ರೆ ಹೆಂಗೆ?’

‘ಏನೋ ತಪ್ಪು ನಡೆದದೆ. ಅಮ್ಮ ಮುನಿಸಿಕೊಂಡವಳೆ’

‘ಅಮ್ಮನ ಹತ್ರ ನೋಡಿಕೊಳ್ಳೋರು ಯಾರೂ ಇರಲಿಲ್ವಂತೆ. ಅರ್ಧರಾತ್ರೀಲಿ ಊರಾಗಿನ ಎರಡು ಮನೆತನದವರು ಮೆರವಣಿಗೆ ಕೋಣ. ‘ಮೊದಲು ನಮ್ಮ ಮನೆ ಹತ್ರ ಬರಬೇಕಿತ್ತು, ನಮ್ಮ ಮನೆ ಹತ್ರ ಬರಬೇಕಿತ್ತು’ ಅಂತ ಏನೇನೋ ಜಗಳವಂತೆ. ‘ನಾನು, ಹೆಚ್ಚು, ನಾನು ಹೆಚ್ಚು’ ಅನ್ನೊ ಅವರವರ ಜಗಳ, ಗಲಾಟೆ ಮಿತಿಮೀರಿ ಹೊಡೆದಾಟ ಆಗೋವಂಗೆ ಇತ್ತಂತೆ’.

‘ಅಮ್ಮನ ಚಪ್ಪರದ ಹತ್ತಿರ ಪೂಜಾರಿನೂ ಇರಲಿಲ್ವಂತೆ’

‘ಅಮ್ಮನ ನಖದ್ರ ಇಲ್ಲದಂತೆ ತಿರಸ್ಕಾರ ಮಾಡಿದ್ರೆ ಬುಟ್ಟಾಳ ನಂತಾಯಿ. ತನಗೆ ತಾನೆ ಬೆಂಕಿ ಹಚ್ಕೆಂದು ಉರಿದುಹೋದೋ’

‘ಏನು ಕೇಡು ಕಾದಿದೆಯೋ ಏನ್ ಕತೆಯೋ!’

‘ನಮ್ಮಮ್ಮ ಉರಿಕಾರಿದ್ರೆ ನರಮನುಷ್ಯರೆಲ್ಲ ನಾಶ ಆಗಿ ಹೋಗಿಬುಡ್ತಾರೆ’

ನೆರೆದವರೆಲ್ಲರದೂ ಬಾಯಿಗೊಂದು ಮಾತು, ಗಂಟಲಿಗೊಂದು ಲೊಟಕು, ಮನಸಿಗೆರಡು ಆಲೋಚನೆ, ದಿಗಿಲು ದಿಂಗಾಲು, ಭುಗಿಲು ಬುಂಗಾಲು. ಕಂಡವರ ಮನ ಹೌಹಾರಿದವು, ಕಾಣದ ಅಪಾಯಕ್ಕೆ ಬೆಚ್ಚಿ ಬಸವಳಿದವು. ಹಲುಬಿದವು ಸೇರಿದ ಜೀವಗಳು. ಕೇಡನ್ನು ಎದುರುಗೊಂಡವರಂತೆ ಬಿಳುಚಿದವು.

‘ಸೀರಿಯಲ್ ಲೈಟಿನೋನು ವೈರನ್ನು ಹೆಂಗೆಂಗೆ ಎಳೆದಿದ್ದನೋ ಏನೋ. ಎಲ್ಲೋ ಶಾರ್ಟ್ಸ್ ಸರ್ಕ್ಯೂಟ್ ಆಗಿರಬೇಕು. ಇದಕ್ಕೆಲ್ಲಾ ಏನೇನೋ ಗಾಬರಿ ಆಗಬೇಕಾದ್ದು ಏನೂಯಿಲ್ಲ ತಗಿರಿ. ಬೆಂಕಿಗೆ ಏನು ಗೊತ್ತು? ಉರಿಯೋದು ತಾನೆ? ಉರೀತು’

‘ಇಲ್ಲ ಬುಡಣ್ಣ ಈ ಮಾರಮ್ಮ ಜಾತಿ ಸುಳ್ಳು ಹೇಳಿ ಮದುವೆ ಆಗಿದ್ದಾಂತ ನಮ್ಮ ಜನದೋನನ್ನೇ ಕೋಣವಾಗಿ ಬಲಿತಕ್ಕತಾ ಇರೋದು.’

‘ಇಂಥಾ ಹೊಸಕಾಲದ ಹುಡುಗನೇ ಎಲ್ಲೋ ಬೆಂಕಿ ಮಡಗಿದ್ನೋ ಏನೋ’

‘ಕತೆ ಹಿಂಗಿಂಗೆ ಅಂದ್ರೆ ನನ್ನೇ ಬೆಂಕಿ ಮಡಗಿದೋನ್ನ ಮಾಡ್ತೀರಲ್ಲ. ಇದ್ಯಾವ ನ್ಯಾಯ?’

‘ಏ ಬಿಡೋ ತಮ್ಮಾ, ಬಾಯಿಗೆ ಬಂದುದ್ದೆ ಅನಬ್ಯಾಡ. ಬಾಯಿ ಬಿದ್ದೋದಾತು.’

‘ಇದೇನು ಸುಳ್ಳಲ್ಲ ಕಣವ್ವೋ, ಬೇಕಾದರೆ ಆಸಾದಿ ಕರಿಯಣ್ಣನ್ನೇ ಕೇಳಿ. ಮಾರಮ್ಮನ ಕತೆ ಹೇಳ್ತಾನೆ. ಎಲ್ಲಾ ಗೊತ್ತಾಗುತ್ತೆ.’

ಮಾರಿಕೋಣನ ಜೊತೆ ಅಮ್ಮನ ಕೊಂಡಾಡ್ತ ಬರ್‍ತಾಯಿದ್ದ ಆಸಾದಿ ಕರಿಯಣ್ಣ ಓಡಿಯೇ ಬಂದ. ಎಲ್ಲಾ ನೋಡಿ ಗೋಳಾಡಿ, ಮಂಕಾಗಿ ತಲೆಮೇಲೆ ಕೈಹೊತ್ತು ಕೂತ ತುಸು ಹೊತ್ತು. ಸರ್ರಕ್ಕನೆ ಎದ್ದವನೇ ಆಸಾದಿ ತಮಟೆ ಹೆಗಲಿಗೆ ಏರಿಸಿ, ದಿಮಿದಿಮಿಸಿ ನುಡಿಸಿದ. ರಾಗದ ದನಿ ಎತ್ತಿದ. ಸುತ್ತಿನ ಹತ್ತಳ್ಳಿಗೆ ಮುಟ್ಟೊವಂಗೆ–

ಏನೇನೆ ಮಾರಮ್ಮ ಎಲ್ಲೆಲ್ಲು ಉರಿಯಲ್ಲೆ

ಒಡಲೊಡಲ ಕಡಲಾ ಎದೆಯಾಗೆ!

ಒಡಲೊಡಲ ಕಡಲಾ ಎದೆಯಾಗೆ ಮಾಯದ

ಉರಿ ಎಗರಿ ಮುಗಿಬಿದ್ದುವಲ್ಲೆ

 

ಹಬ್ಬದಾಟೆಲ್ಲಾ ಮಬ್ಬಾಯತಲ್ಲವ್ವ

ಒಪ್ಪ ಓರಣವೆಲ್ಲಾ ಚಲ್ಲಾಪಿಲ್ಲಿ

ಒಪ್ಪ ಓರಣ ಚಲ್ಲಾಪಿಲ್ಲಿ ಗಲಿಬಿಲಿ

ಹೊಕ್ಯಾಡೆತಲ್ಲೇ ಎಲ್ಲೆಲ್ಲು

ಕೆಂಪು ಬಣ್ಣವೇ ನಾಚಿಕೊಳ್ಳುವಂತಹ ಕೆಂಪು ಕಂಪಿನ ಬಾಯಿಯ ಜೊಲ್ಲು ಒರೆಸಿಕೊಂಡ ಆಸಾದಿ, ಉರಿದು ಹೊಗೆಯಾಡುವ ಸುಡುವ ಮರದ ತುಂಡುಗಳ ಮಧ್ಯೆ ಚಪ್ಪರದ ಕಡೆ ಹೆಜ್ಜೆಯಿಟ್ಟು ನುಗ್ಗಿ, ನಿಗಿನಿಗಿ ನೋಡಿದ, ಉರಿದುಬಿದ್ದ ಕೊರಡುಗಳ ಸರಿಸಿ, ಅಮ್ಮನ ಮುಂದೆ ರಂಗದಲ್ಲಿನ ಹೆಂಡದ ಘಟೆ ಗಡಿಗೆಯ ಎತ್ತಿ ಗಟ ಗಟ ಗಂಟಲಿಗೆ ಗಳ ಗಳ ಸುರಿದುಕೊಂಡು ಎತ್ತಲೋ ಹೆಜ್ಜೆ ಹಾಕಿದ.

ಕಣ್ಣೊರಸಿ, ಕಣ್ ಪಿಸುರ ಉಜ್ಜಿ, ಕಪೋಲದ ಜೊಲ್ಲು ಒರಿಸಿಕೊಳ್ಳುತಾ ಬಂದ ಮಕ್ಕಳು ಅಪ್ಪನ ಮೊಬೈಲ್ ಈಸಿಕೊಂಡು ಎಲ್ಲವ ವಿಡಿಯೊ ಹಿಡಕೊಂಡವು.

‘ಏ ಮರಿಯ ನೀನು ಇಲ್ಲೇ ಅಮ್ಮಂತಾವ ಚಪ್ಪರದಲ್ಲೇ ಮಲಗಿದ್ಯೋ ಹೆಂಗೋ?’

‘ಹೌದು ಸ್ವಾಮಿ ಇಲ್ಲೆ ಮಲಗಿದ್ದೆ. ಅದೆಂಗಾತೋ ಏನ್ ಕತಿಯೋ! ಮಿಂಚು ಮಾಯ ಸ್ವಾಮಿ. ನಾನು ಹಿಂಗೆ ಕೂತು ಕೂತು ಸಾಕಾಗಿ ಹಿಂಗೆ ಒಂಚೂರು ಒರಗಿದ್ದೆ ಅಷ್ಟೆ. ಅಷ್ಟರಾಗೆ ಚಪ್ಪರದ ಉರಿಯೋ ಗರಿ ಕಾಲಮ್ಯಾಲೆ ಬಿದ್ದು ಎಚ್ಚರಾತು. ನೋಡಿದ್ರೆ ನಿಗಿ ನಿಗಿ ದಿಗಿ ದಿಗಿ ಉರಿತೈತೆ. ನಾನೆ ಕೂಗಿ ಊರಿನೋರ್ನೆಲ್ಲಾ ಕರೆದದ್ದು ಸ್ವಾಮಿ.’

‘ಎಷ್ಟು ಪ್ಯಾಕೇಟ್ ಇಳಿಸಿದ್ದೆ ಗಂಟ್ಲಿಗೆ. ಎತ್ತಲೋ ಗ್ಯಾನಿಲ್ದಂತೆ ಮಲಗಿ, ಕಾಲುಗೀಲಾಗೆ ಒದ್ದು ದೇವರ ದೀಪ ಉರಳಿಸಿದೆಯೋ ಹೆಂಗೆ?’

‘ಎಲ್ಲಿಯಾದರೂ ಉಂಟಾ ಸ್ವಾಮಿ. ಊರಾಗೆ ಕೋಣನ್ನ ಮೆರೆಸೋ ತಮಟೆ ಸದ್ದು ಇನ್ನು ಕೇಳ್ತಾನೆಯಿತ್ತು. ಅದ್ಯಾವಗೋ ಜೊಂಪು ಹತ್ತತೋ ಗೊತ್ತಾಗಲಿಲ್ಲ. ಇದು ಬಯಲು, ದೇವರ ದೀಪದ ಎಣ್ಣೆ ಬತ್ತಿ ಎಳಕಂಡು ಇಲಿಗಳು ಬರೋವು ಸ್ವಾಮಿ, ಶೂ ಶೂ ಅಂತ ಓಡಿಸ್ಗೋತ ಇದ್ದೋನೆ ನಾನು ಸ್ವಾಮಿ.’

‘ಅಮ್ಮನ ತರೋರು ಮಡಿ ಹುಡಿ, ನೇಮ ನಿಷ್ಟೇಲಿ ಇದ್ರೊ ಹೆಂಗೊ. ಮೊದಲಿನಂಗ ಜನ ನಿಷ್ಟವಾಗಿರೋದು ಕಾಣೆ.’

‘ನಮ್ಮ ಜನರೋನನ್ನೇ ತಿಂದುಕೊಂಡಾಳು ಅವಳು ಮಾರಮ್ಮನಾ? ಅವಳಿಗೇನು ನೇಮಗೀಮ.’

‘ಕಾಲೇಜು ಹುಡುಗ ಆದರೆ, ಏನೇನೊ ಮಾತಾಡ್ತಾರೇನೋ ಹುಡುಗ?’

‘ಇದು ಸುಳ್ಳೇನಲ್ಲಕಣವ್ವ, ಇದು ನಿಜ. ನಾ ಎಲ್ಲಾ ಓದಿಕೊಂಡು ತಿಳಕಂಡು, ನಮ್ಮ ಮೇಸ್ಟ್ರು ಯಾರ್‍ಯಾರತ್ರಾನೊ ದಿನಗಟ್ಟಲೆ ಚರ್ಚೆ ಮಾಡಿ ತಿಳಕೊಂಡು ಹೇಳ್ತಾಯಿದೇನಿ. ಇದು ದಿಟ. ನಮ್ಮ ಜನದೋನು ಜಾತಿ ಸುಳ್ಳೇಳಿ ಮದುವೆಯಾಗಿದ್ದ ಅಂತ ಈ ಮಾರವ್ವ ಬಲಿ ತಕ್ಕೋತವ್ಳೆ ಕೋಣನ ಹೆಸರಲ್ಲಿ.’

‘ಅದೇನೊ ಏನೋ ಅಪ್ಪಾ ಹಿಂದ್ಲಿಂದ ಅಮ್ಮನ್ನ ಪೂಜುತಾ ಬಂದೇವಿ. ದೇವರೂಂತ ಪೂಜುತೇವಿ. ಯಾವತ್ತೂ ಕಾಣದ್ದು, ಇದ್ಯಾಕೆ ಹಿಂಗಾತೋ ಕಾಣೆವು.’

‘ಇದರ ಹಿಂದೆ ಬೇರೆ ಏನೋ ಇದ್ದಂಗದೆ. ಅಮ್ಮನ ಹಬ್ಬದ ಯಜಮಾನಿಕೆ ಹೋದಸಾರಿ ಮ್ಯಾಗಳ ಕೇರಿ ಹಿರಿಯಣ್ಣ ಮಾಡಿದ್ದ. ಈ ಸಾರಿ ಚಿಕ್ಕಮಲ್ಲಣ್ಣಗೆ ಬಂತು. ಅವರಿಬ್ರಗೂ ಅಗಬರೋದಿಲ್ಲ. ಯಾವ ಹುತ್ತದಲ್ಲಿ ಯಾವ ಹಾವೋ. ಯಾವ ಬೆಂಕಿಪಟ್ಣ ಎಲ್ಲೆಲ್ಲಿ ಗೀರ್‍ಯಾಡಿದವೋ ಏನು ಕತೆಯೋ!’

ಇತ್ತಲಾಗೆ ಬಲು ಬಿರುಸಲಿ ಕೆರೆ ಏರಿಮ್ಯಾಲೆ ಒನೆದು ಓಲಾಡಿ ಸಾಗಿದ್ದ ಮಾರಿಕೋಣನ ಮೆರವಣಿಗೆಗೆ– ‘ಮಾರಿ ಚಪ್ಪರಕ್ಕೆ ಬೆಂಕಿ ಬಿದ್ದದಂತೆ’ ಅನ್ನೋ ಸುದ್ದಿ ಕೇಳಿದ್ದೇ ಸೈ ಮೆರವಣಿಗೆಯ ಜನರ ಉಮೇದಿ ತುರುಸು ತಟ್ಟನೆ ಅಡಗಿ, ಸರಕ್ಕನೆ ಸೊರಗಿ, ಮಾರಮ್ಮನ ಅಡ್ಡೆಯ ಮೆರದೇವರನ್ನು ನಿಂತಲ್ಲೇ ಕೆಳಗೆ ಇಟ್ಟು ಮಾರಿ ಚಪ್ಪರದತ್ತಲೇ ಓಟ ಹೊಡೆಯಿತು.

ಕೋಣನ ಹಿಡಿದವರ ಕೈಕಾಲು ಆಡದಂತಾಗಿ ಏನೊಂದೂ ತೋಚದೆ ಒದ್ದಾಡಿ, ಅಲ್ಲೆ ಎಲ್ಲೋ ಏರಿಮ್ಯಾಲಿನ ಲಂಟಾನು ಗಿಡದ ಕಂಟಿಗೆ ಕೋಣನ ಕಟ್ಟಿ ಅವರೂ ಮಾರಿ ಚಪ್ಪರದತ್ತಲೇ ಓಟಕಿತ್ತರು. ಜನವೆಲ್ಲಾ ಅತ್ತಿತ್ತ ಎತ್ತಲೋ ಸರಿದದ್ದೇ ಸೈ ಮಾರಿಕೋಣ ಗಿಡಗಂಟಿಯ ಬೇರು ಸಮೇತ ಇತ್ತೆತ್ತಲೋ ಹಾರಿಗ್ಗಾಲುಬಿದ್ದು ಓಟ ಹೊಡಿಯಿತು. ಸಂಜೆಗೆ ಹಟ್ಟಿಗಳ ಮನೆಗಳಲಿ ಮಾಂಸ ಕುದಿಯಿತು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)