ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಪರ್‌ಮ್ಯಾನ್‌ಗೆ @ 80

ಮಿನುಗು ಮಿಂಚು
Last Updated 20 ಅಕ್ಟೋಬರ್ 2018, 19:30 IST
ಅಕ್ಷರ ಗಾತ್ರ

ಸೂಪರ್‌ ಮ್ಯಾನ್! ಹೀಗಂದರೆ ಸಾಕು ಪುಟಾಣಿಗಳ ಕಣ್ಣು ಅರಳುತ್ತದೆ. ಕಣ್ಣು ಸುತ್ತಮುತ್ತ ಹುಡುಕಲು ಶುರುಮಾಡುತ್ತವೆ. ಅಷ್ಟರಮಟ್ಟಿಗೆ ಈ ಸೂಪರ್‌ಹೀರೊ ಜನಪ್ರಿಯ.

2018 ಸೂಪರ್‌ಮ್ಯಾನ್‌ಗೆ 80 ವರ್ಷ ತುಂಬಿದೆ. ಹಾ, ಹಾಗಾದ್ರೆ ಇವನಿಗೆ ವಯಸ್ಸಾಯ್ತಾ? ಊಹೂಂ, ವಯಸ್ಸಾಗಿ, ಎಂಬತ್ತಕ್ಕೆ ಬೆನ್ನುಗೂನಾಗಿ, ಕೋಲು ಹಿಡಿದುಕೊಂಡು ಅಡ್ಡಾಡುವ ಸಾಮಾನ್ಯ ಮನುಷ್ಯನಾಗಿದ್ದರೆ ಅವನು ಸೂಪರ್‌ಮ್ಯಾನ್ ಹೇಗಾದಾನು? ಎಂಬತ್ತು ವರ್ಷದಲ್ಲಿಯೂ ಅವನಲ್ಲಿನ್ನೂ ತಾರುಣ್ಯ ತುಳುಕುತ್ತಲೇ ಇದೆ. ಸುಯ್ಯನೇ ಹಾರುವ, ವೈರಿಗಳಿಗೆ ಚಳ್ಳೆಹಣ್ಣು ತಿನ್ನಿಸುವ, ಮುಷ್ಠಿ ಪ್ರಹಾರ ಮಾಡಿ ಖಳರ ದವಡೆ ಒಡೆಯುವ ಅವನ ಚಾಕಚಕ್ಯತೆ ಕಿಂಚಿತ್ ಕಮ್ಮಿಯಾಗಿಲ್ಲ. ಬದಲಾಗಿ ಹೊಸ ಸಿನಿಮಾಗಳಲ್ಲಿ ಬೇರೆ ಬೇರೆ ಅವತಾರಗಳಲ್ಲಿ ಅವನು ಹಿರಿಯರ ಜಗತ್ತಿನಲ್ಲಿಯೂ ಮೆರೆದಾಡುತ್ತಿದ್ದಾನೆ.

ಸೂಪರ್‌ಮ್ಯಾನ್ ಹುಟ್ಟಿದ್ದು 1938ರಲ್ಲಿ. ಕೆನಡಿಯನ್ ಕಲಾವಿದ ಜೋಯ್ ಶುಸ್ಟರ್ ಮತ್ತು ಅಮೆರಿಕ ಲೇಖಕ ಜೆರ್ರಿ ಸೈಗಲ್ ಈ ಇಬ್ಬರು ಸೂಪರ್‌ಮ್ಯಾನ್‌ನ ಸೃಷ್ಟಿಕರ್ತರು. ಅಳತೆಮಾಡಿ ಕಟೆದಂಥ ಅವನ ಮೈಕಟ್ಟು, ಅದನ್ನು ಬಿಗಿಯಾಗಿ ಅಪ್ಪಿಹಿಡಿದ ನೀಲಿ ಬಣ್ಣದ ಉಡುಪು, ಬೆನ್ನ ಮೇಲೆ ಹರಡಿ ಹಾರಾಡುವ ಚಾದರದಂಥ ಅಗಲ ವಸ್ತ್ರಗಳ ಅವನ ರೂಪ ಎಲ್ಲರಿಗೂ ಚಿರಪರಿಚಿತ. ಇವನು ಕ್ರಿಪ್ಟನ್‌ನ ಕೊನೆಯ ಮಗ. ಅನ್ಯಗ್ರಹದಿಂದ ಭೂಮಿಗೆ ಕಳುಹಿಸಲ್ಪಟ್ಟ ಸೂಪರ್‌ಮ್ಯಾನ್‌ನನ್ನು ಬೆಳೆಸಿದ್ದು ಕ್ಲಾರ್ಕ್‌ ಕೆಂಟ್‌. ಆರಂಭದಲ್ಲಿ ತಾನೆಂಥ ಶಕ್ತಿವಂತ ಎಂಬುದರ ಪರಿವು ಅವನಿಗೂ ಇರಲಿಲ್ಲ. ಯಾವಾಗ ಅವನಿಗೆ ತನ್ನ ಅತಿಮಾನುಷ ಶಕ್ತಿಯ ಪರಿಚಯ ಆಯ್ತೋ ಆಗ ಅವನು ಸೂಪರ್‌ಮ್ಯಾನ್‌ ವೇಷ ಧರಿಸಿ ಒಳ್ಳೆಯ ಕೆಲಸಕ್ಕೆ ತನ್ನ ಶಕ್ತಿಯನ್ನು ಬಳಸಿಕೊಳ್ಳಲು ಶುರುಮಾಡಿದ.

ಸೂಪರ್‌ಮ್ಯಾನ್‌ನನ್ನು ಸೃಷ್ಟಿಸಿದವರು ಆ ಕಾಲದ ಸೈನ್ಸ್‌ ಫಿಕ್ಷನ್‌ಗಳಿಂದ ಮತ್ತು ರಾಬಿನ್‌ಹುಡ್‌ ಸಿನಿಮಾಗಳಿಂದ ತುಂಬ ಪ್ರಭಾವಿತರಾಗಿದ್ದರು. ಹೀಗೆ ಕಾಮಿಕ್ಸ್‌ಗಳಲ್ಲಿ ಮೆರೆಯುತ್ತಿದ್ದ ಇವನು ಬಾಲಿವುಡ್ ಸಿನಿಮಾ ಜಗತ್ತಿಗೆ ಬರಲೂ ತುಂಬ ತಡವೇನೂ ಆಗಲಿಲ್ಲ. ಸೂಪರ್‌ಬಾಯ್ ಎಂಬ ಹೆಸರಿನಲ್ಲಿ ಬಾಲಿವುಡ್‌ನಲ್ಲಿಯೂ ಪ್ರಸಿದ್ಧನಾದ. ಹಲವು ಸೃಜನಶೀಲ ಬರಹಗಾರರು ಮತ್ತು ಕಲಾವಿದರ ಕಲ್ಪನಾಶಕ್ತಿಯಿಂದ ಅವನು ನಂತರದ ದಿನಗಳಲ್ಲಿ ಇನ್ನಷ್ಟು ಶಕ್ತಿಶಾಲಿಯಾಗಿ ಬೆಳೆಯುತ್ತಲೇ ಹೋದ. ಸುಯ್ಯನೇ ಹಾರುವ ಶಕ್ತಿ ಪಡೆದ. ಅವನ ಕಣ್ಣಿಗೆ ಎಕ್ಸ್‌ರೇ ದೃಷ್ಟಿಶಕ್ತಿ ಸಿಕ್ಕಿತು. ಬಾಯಿಂದ ಗಾಳಿ ಊದಿದ ಮಾತ್ರಕ್ಕೆ ಎದುರಿನ ಜೀವಿಯನ್ನು ಸ್ತಬ್ಧಗೊಳಿಸುವ ಮಾಂತ್ರಿಕ ಶಕ್ತಿಯನ್ನೂ ಗಳಿಸಿಕೊಂಡ.

1986ರಲ್ಲಿ ಜಾನ್‌ ಬ್ಯಾರ್ನಿ ಎಂಬಾತ ಸೂಪರ್ ಮ್ಯಾನ್‌ನಿಗೆ ಕೆಲವು ದೌರ್ಬಲ್ಯಗಳನ್ನೂ ಕೊಟ್ಟ. ಸೂಪರ್‌ಮ್ಯಾನ್‌ನಿಗೆ ಸಹಾಯ ಮಾಡುವ ಒಂದಿಷ್ಟು ಪಾತ್ರಗಳೂ ಇವೆ. ಅವು ಇವನ ಕಥೆ, ಸಿನಿಮಾಗಳಲ್ಲಿ ಮತ್ತೆ ಮತ್ತೆ ಬರುತ್ತಲೇ ಇರುತ್ತವೆ. ಲಾಯಿಸ್‌ ಲೇನ್‌ ಎಂಬವಳು ಮೊದಲು ಇವನ ಸಹವರ್ತಿಯಾಗಿದ್ದವಳು ನಂತರ ಹೆಂಡತಿಯೂ ಆದಳು. ಜಿಮ್ಮಿ ಒಸ್ಲೆನ್, ಪೆರ್ರಿ ವೈಟ್, ಲಾನಾ ಲಾಂಗ್, ಲಾಯಿಸ್ ಲೆಮರಿಸ್ ಈ ಎಲ್ಲರೂ ಸದಾ ಸೂಪರ್‌ಮ್ಯಾನ್ ಸಹಾಯಕರಾಗಿರುತ್ತಾರೆ.

ಸೂಪರ್‌ಮ್ಯಾನ್‌ನ ಈ ಜನಪ್ರಿಯತೆ ಅವನಂಥೇ ಇರುವ ಹಲವು ಸೂಪರ್‌ಹೀರೊಗಳ ಸೃಷ್ಟಿಗೂ ಕಾರಣವಾಯ್ತು. ಕಾಮಿಕ್ಸ್‌ಬುಕ್‌ಗಳಲ್ಲಿಯಷ್ಟೇ ಅಲ್ಲ, ರೆಡಿಯೊ, ಟೀವಿ, ಹಲವು ಸಿನಿಮಾಗಳಲ್ಲಿಯೂ ಸೂಪರ್‌ಮ್ಯಾನ್‌ ಸೂಪರ್ ಹಿಟ್ ಆಗಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT