ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡ ವಾಹಿನಿಗಳ ನಾಗಾಲೋಟ

ನವೆಂಬರ್‌ 21 ವಿಶ್ವ ದೂರದರ್ಶನ ದಿನ
Last Updated 20 ನವೆಂಬರ್ 2018, 20:00 IST
ಅಕ್ಷರ ಗಾತ್ರ

1990ರ ದಶಕದಲ್ಲಿ ಭಾರತದಲ್ಲಿ ಖಾಸಗಿ ವಾಹಿನಿಗಳು ಚಿಗುರೊಡೆಯಲು ಆರಂಭಿಸಿದ್ದವು. 1995ರಲ್ಲಿ ಪ್ರಾದೇಶಿಕ ಭಾಷಾ ವಾಹಿನಿಗಳು ಶುರುವಾದವು. 1993ರಲ್ಲಿ ಅಂದರೆ 25 ವರ್ಷಗಳ ಹಿಂದೆ ಕನ್ನಡದಲ್ಲಿ ಮೊದಲ ಖಾಸಗಿ ವಾಹಿನಿ ಉದಯ ಟೀವಿ ಕಾರ್ಯಾರಂಭ ಮಾಡಿತು.

ಅದು ತಮಿಳಿನ ಸನ್‌ ಟೀವಿಯ ಸೋದರ ಚಾನೆಲ್‌. ನಂತರ ಈ–ಟೀವಿ ಬಂತು. ಅದು ಹೈದರಾಬಾದ್‌ ಮೂಲದ್ದು. ಈಗ ಹತ್ತಾರು ವಾಹಿನಿಗಳಿವೆ.

ಆರಂಭದಲ್ಲಿ ಮನರಂಜನಾ ವಾಹಿನಿ, ಸುದ್ದಿ ವಾಹಿನಿ ಎಂಬ ಪ್ರತ್ಯೇಕ ಕಾರ್ಯಚರಣೆ ಇರಲಿಲ್ಲ. ಒಂದೇ ವಾಹಿನಿಯೊಳಗೆ ಎರಡೂ ಮಿಳಿತಗೊಂಡಿತ್ತು. 2000ನೇ ಇಸವಿಯ ನಂತರ ಕನ್ನಡದಲ್ಲಿ ಹತ್ತಾರು ಚಾನೆಲ್‌ಗಳು ಹುಟ್ಟಿಕೊಂಡವು. ಸುದ್ದಿ ಮತ್ತು ಮನರಂಜನೆಗೆ ಪ್ರತ್ಯೇಕ ವಾಹಿನಿಗಳು ಕಾರ್ಯಾಚರಿಸಿದವು.

ಸುದ್ದಿ ವಾಹಿನಿಗಳಿಗೆ 24/7 ಕಾರ್ಯಕ್ರಮ ನಡೆಸುವ ಸವಾಲು ಎದುರಾಗಿದ್ದೇ ಅಲ್ಲಿ. ಆಗ ಹುಟ್ಟಿಕೊಂಡಿದ್ದೇ ಸುದ್ದಿಯ ವೈಭವೀಕರಣ, ಸಿನಿಮಾ ನಟರು, ಕ್ರೀಡಾಪಟುಗಳು, ರಾಜಕಾರಣಿಗಳ ವೈಯಕ್ತಿಕ ಬದುಕಿನ ಗಾಸಿಪ್‌,ಪ್ರೀತಿ, ಮದುವೆ, ವಿಚ್ಛೇದನ, ಜಗಳ ಇವೆಲ್ಲವೂ ಸುದ್ದಿಯ ವಸ್ತುವಾಯಿತು.

ಆದರೆ, ಮನರಂಜನೆಯ ವಿಷಯಕ್ಕೆ ಬಂದಾಗ ಕಿರುತೆರೆಯಲ್ಲಿ ಹಲವು ಬಗೆಯ ಪ್ರಯೋಗಗಳಾಗಿವೆ. ವಾರದ ಐದೂ ದಿನವೂ ಪ್ರಸಾರವಾಗುವ ಧಾರಾವಾಹಿಗಳು ಹೊಸ ಅಲೆಯನ್ನೇ ಸೃಷ್ಟಿಸಿದವು. ಕನ್ನಡದಲ್ಲೂ ಹೊಸ ಪ್ರಯೋಗಗಳು ನಡೆದವು. ರಿಮೇಕ್‌ ಧಾರಾವಾಹಿಗಳ ಬದಲಾಗಿ ಸ್ವತಂತ್ರ ನಿರ್ಮಾಣದ ಧಾರಾವಾಹಿಗಳು ಗಮನಸೆಳೆದವು.

ಬೇರೆ ಭಾಷೆಯ ವಾಹಿನಿಗಳಿಗಿಂತ ಕನ್ನಡದ ವಾಹಿನಿಗಳು ಗುಣಮಟ್ಟದಲ್ಲಿ ಮೊದಲ ಸ್ಥಾನದಲ್ಲಿವೆ ಎಂದು ಕಿರುತೆರೆಯ ನಾಡಿಮಿಡಿತ ಬಲ್ಲವರು ಹೇಳುತ್ತಾರೆ. ಕನ್ನಡದಲ್ಲಿ ಬರುತ್ತಿರುವ ಸಂಗೀತ, ನೃತ್ಯದ ರಿಯಾಲಿಟಿ ಕಾರ್ಯಕ್ರಮಗಳು ಸ್ಥಿರ ಪ್ರೇಕ್ಷಕರನ್ನು ಹೊಂದಿವೆ. ಸಂಗೀತ, ನೃತ್ಯ, ಹಾಸ್ಯ ಕಾರ್ಯಕ್ರಮಗಳಿಗೆ ಯಾವತ್ತೂ ಪ್ರೇಕರಿದ್ದಾರೆ ಎಂಬುದಕ್ಕೆ ನಿರಂತರವಾಗಿ ನಿರ್ಮಾಣವಾಗುತ್ತಿರುವ ಕಾರ್ಯಕ್ರಮಗಳೇ ಸಾಕ್ಷಿ.ಕೆಲವು ಧಾರಾವಾಹಿಗಳು ಐದಾರು ವರ್ಷ ಪ್ರಸಾರವಾದ ದಾಖಲೆಯಿದೆ.

ಸಾವಿರಾರು ಯುವಕರಿಗೆ ಅನ್ನ ನೀಡುತ್ತಿರುವ ಕಿರುತೆರೆ ಉದ್ಯಮ ಹಲವು ಏಳುಬೀಳುಗಳ ನಡುವೆಯೂ ಮನರಂಜನೆ ನೀಡುವುದರಲ್ಲಿ ಹಿಂದೆ ಬಿದ್ದಿಲ್ಲ.ಕಿರುತೆರೆಯ ಧಾರಾವಾಹಿಗಳನ್ನು ನಿರ್ಮಾಣ ಮಾಡಲು ಪುನೀತ್‌ ರಾಜ್‌ಕುಮಾರ್, ಸುದೀಪ್‌ ಅವರಂತಹ ಖ್ಯಾತ ನಟರು ಮುಂದಾಗಿದ್ದಾರೆ.

ಈಗಲೂ ಕನ್ನಡದ ಕಾರ್ಯಕ್ರಮಗಳೇ ನಂ.1

ದಕ್ಷಿಣ ಭಾರತದ ಬೇರೆ ಭಾಷೆಗಳ ಮನರಂಜನಾ ವಾಹಿನಿಗಳಿಗೆ ಹೋಲಿಸಿದರೆ ನಾವೇ ದಿ ಬೆಸ್ಟ್‌ ಎಂದು ಉದಯ ಟೀವಿಯ ಕಾರ್ಯಕ್ರಮ ಮುಖ್ಯಸ್ಥ ಸುಧೀಂದ್ರ ಕಂಚಿತೋಟ ಹೇಳುತ್ತಾರೆ.

‘ಹಿಂದಿ ಬಿಟ್ಟರೆ ಬೇರೆ ಪ್ರಾದೇಶಿಕ ಭಾಷೆಯ ಧಾರಾವಾಹಿ, ರಿಯಾಲಿಟಿ ಶೋಗಳ ನಿರ್ಮಾಣ ವೆಚ್ಚ ಕಡಿಮೆ ಇರುತ್ತದೆ. ಆದರೆ, ಕನ್ನಡದಲ್ಲಿ ಬರುತ್ತಿರುವ ಧಾರಾವಾಹಿಗಳ ವಸ್ತು, ನಿರ್ಮಾಣದ ಗುಣಮಟ್ಟ ಶ್ರೀಮಂತವಾಗಿದೆ. ತೆಲುಗು, ತಮಿಳು, ಮಲಯಾಳಂ ಚಾನೆಲ್‌ಗಳಿಗಿಂತ ಕನ್ನಡದ ಚಾನೆಲ್‌ಗಳು ಬಹಳ ಮುಂದೆ ಇವೆ. ಮೂರು ವರ್ಷಗಳಿಂದೀಚೆಗೆ ಕನ್ನಡದಲ್ಲಿ ನಿರ್ಮಾಣವಾಗುತ್ತಿರುವ ಧಾರಾವಾಹಿಗಳಲ್ಲಿ ಪುರಾಣ ಮತ್ತು ಫ್ಯಾಂಟಸಿ ವಸ್ತುಗಳೇ ಹೆಚ್ಚು.

ನಾಗಿನಿ, ನಂದಿನಿ, ನೀಲಿ ಮುಂತಾದ ಅತಿಮಾನುಷ ವಿಷಯಗಳನ್ನು ಜನ ಸ್ವಾಗತಿಸಿದ್ದಾರೆ. ಗ್ರಾಫಿಕ್‌ ಬಳಕೆ ಕಾಟಾಚಾರ ಎನಿಸುತ್ತಿಲ್ಲ. ಅಲ್ಲೂ ಬದ್ಧತೆ ಕಾಣುತ್ತದೆ. ಜೈ ಹನುಮಾನ್‌, ಮಹಾಕಾಳಿ, ಹರಹರ ಮಹದೇವ ಮತ್ತು ಈಗ ಪ್ರಸಾರವಾಗುತ್ತಿರುವ ದಶಾವತಾರ ಮುಂತಾದ ಧಾರಾವಾಹಿಗಳು ನಿರ್ಮಾಣದ ಗುಣಮಟ್ಟಕ್ಕೆ ಸಾಕ್ಷಿಯಾಗಿವೆ.

ಸಾಂಸಾರಿಕ ಧಾರಾವಾಹಿಗಳ ಬದಲಾವಣೆ ಗಮನಿಸಿದರೆ, ಅಲ್ಲಿ ಈಗ ಮನೆಯೊಳಗಿನ ವಿಷಯಗಳಿಗಿಂತ ರೊಮ್ಯಾನ್ಸ್ ಹೆಚ್ಚು ಇರುತ್ತದೆ. ನಾಗಿಣಿ ಧಾರಾವಾಹಿಯಲ್ಲೂ ಅವರಿಬ್ಬರ ಪ್ರೀತಿಯ ದೃಶ್ಯಗಳಿವೆ. ಇದು ಒಳ್ಳೆಯ ಪ್ರಯೋಗ. ಕಮಲಿ, ಜೋ ಜೋ ಲಾಲಿ ಹೀಗೆ ಹಲವು ಧಾರಾವಾಹಿಗಳು ಪ್ರಯೋಗಾತ್ಮಕವಾಗಿವೆ. ಕಿರುತೆರೆಯ ಪ್ರಯೋಗಗಳಲ್ಲಿಯೂ ನಾವೇ ನಂಬರ್‌ 1.

ಹಿಂದೆ ಬರುತ್ತಿದ್ದ ಸಿನಿಮಾಗಳಲ್ಲಿ ಕೌಟುಂಬಿಕ ಮೌಲ್ಯಗಳೇ ಹೆಚ್ಚಾಗಿದ್ದವು. ರಾಜ್‌ಕುಮಾರ್‌ ಕಾಲದ ಸಿನಿಮಾಗಳನ್ನು ಗಮನಿಸಿ. ಆ ಮೌಲ್ಯಗಳನ್ನು ನೋಡಲು ಜನ ಥಿಯೇಟರಿಗೆ ಹೋಗುತ್ತಿದ್ದರು. ಈಗ ಬರುವ ಸಿನಿಮಾಗಳಲ್ಲಿ ಕೌಟುಂಬಿಕ ಮೌಲ್ಯಗಳ ವಸ್ತು ಇಲ್ಲ. ಅಲ್ಲಿ ಕ್ರೈಂ, ನೃತ್ಯ, ಸಂಗೀತ, ನಾಯಕನ ವೈಭವೀಕರಣಕ್ಕೇ ಹೆಚ್ಚು ಗಮನ ನೀಡಲಾಗುತ್ತಿದೆ.

ಆದರೆ, ಆ ನಿರ್ವಾತವನ್ನು ಈಗ ಕಿರುತೆರೆಯ ಧಾರಾವಾಹಿಗಳು ತುಂಬುತ್ತಿವೆ. ಕೌಟುಂಬಿಕ ಮೌಲ್ಯಗಳ ಧಾರಾವಾಹಿಗಳು ಜನರ ಮೆಚ್ಚುಗೆ ಗಳಿಸಿವೆ. ಅಗ್ನಿಸಾಕ್ಷಿಯಂಥ ಧಾರಾವಾಹಿ ಹಲವು ಟೀಕೆಗಳ ಹೊರತಾಗಿಯೂ ಇನ್ನೂ ಓಡುತ್ತಿದೆ ಎಂದರೆ ಅದರ ರೇಟಿಂಗ್‌ ಅಷ್ಟಿದೆ. ಅಗ್ನಿಸಾಕ್ಷಿ ಧಾರಾವಾಹಿ ಈಗ ತಮಿಳಿಗೆ ರಿಮೇಕ್‌ ಆಗುತ್ತಿದೆ.

ಹಿರಿಯ ನಟ ಶ್ರೀನಾಥ್‌ ಅಭಿನಯದ‘ಮಾನಸ ಸರೋವರ’ ಸಿನಿಮಾ ಈಗ ಉದಯದಲ್ಲಿ ಧಾರಾವಾಹಿಯಾಗಿ ಬರುತ್ತಿದೆ. ಸಿನಿಮಾದ ಕತೆಯ ಮುಂದುವರಿದ ಕತೆ ಇದರಲ್ಲಿದೆ. ಹೀಗೆ ಕನ್ನಡ ಕಿರುತೆರೆ ಲೋಕ ಪ್ರಯೋಗಶೀಲವಾಗಿದೆ’ ಎನ್ನುತ್ತಾರೆ ಅವರು.

ಸುದ್ದಿಯ ವ್ಯಾಖ್ಯೆ ಬದಲಿಸಿದ ಕ್ರಾಂತಿ

ಪ್ರಾದೇಶಿಕ ಸುದ್ದಿ ವಾಹಿನಿಗಳ ಸ್ಪರ್ಧೆಯಿಂದಾಗಿ ಸುದ್ದಿಯ ವ್ಯಾಖ್ಯೆಯೇ ಬದಲಾಗಿದೆ ಎಂದು ಕನ್ನಡ ದೂರದರ್ಶನದ ನಿವೃತ್ತ ಅಧಿಕಾರಿ ಚಂದ್ರಮೌಳಿ ಬೇಸರ ವ್ಯಕ್ತಪಡಿಸುತ್ತಾರೆ.ಇವರು ಹಲವು ವರ್ಷಗಳ ಕಾಲ ಚಂದನದ ವೀಕ್ಷಕರ ಸಮೀಕ್ಷೆ ನಡೆಸಿದವರು.

‘ದೂರದರ್ಶನದ ಕ್ಲಾಸಿಕಲ್‌ ಥಿಯರಿಗೆ ಕಷ್ಟವಾಗಿದೆ. ಈ ಕ್ಷೇತ್ರದಲ್ಲಿ ವರ್ಷಕ್ಕೆ ₹20,000 ಕೋಟಿ ರೆವಿನ್ಯೂ ಬರುತ್ತಿದೆ. ಷೇರು ಹೂಡಿಕೆ ಮಾಡಲಾಗುತ್ತಿದೆ. ಯಾವ ಕಾರ್ಯಕ್ರಮಕ್ಕೆ ಹೆಚ್ಚಿನ ವೀಕ್ಷಕರು ಇದ್ದಾರೆ ಎಂಬುದನ್ನು ಸಂಶೋಧನೆ ಮಾಡಿ ಅಂಥಾ ಕಾರ್ಯಕ್ರಮಗಳಿಗೆ ಹೆಚ್ಚು ಹಣ ಹೂಡಲಾಗುತ್ತಿದೆ ಸರ್ಕಾರಿ ಸ್ವಾಮ್ಯದ ದೂರದರ್ಶನ ನಷ್ಟ ಕಂಡಿತು. ಬೇರೆಯವರಂತೆ ದೂರದರ್ಶನ ಸಮಾಜಮುಖಿ, ಜನಮುಖಿ ಕಾರ್ಯಕ್ರಮಗಳನ್ನು ಬಿಡುವಂತಿಲ್ಲ.

ಅವುಗಳನ್ನು ಮುಂದುವರಿಸುತ್ತಲೇ ಇದೆ. ಸರ್ಕಾರದ ಜಾಹೀರಾತು, ಕಾರ್ಯಕ್ರಮಗಳನ್ನು ಹೆಚ್ಚು ಪ್ರಸಾರ ಮಾಡಿದಂತೆ ವೀಕ್ಷಕರ ಸಂಖ್ಯೆ ಇಳಿಯುತ್ತಾ ಹೋಗಿತ್ತು.ಅವುಗಳ ನಡುವೆ ಜನರನ್ನು ಸೆಳೆಯುವ ಕಾರ್ಯಕ್ರಮಗಳನ್ನೂ ಚಂದನ ವಾಹಿನಿ ಮಾಡಿತು. ಥಟ್‌ ಅಂತ ಹೇಳಿ ರಸಪ್ರಶ್ನೆ ಕಾರ್ಯಕ್ರಮಕ್ಕೆ ಈಗಲೂ ಹೆಚ್ಚಿನ ಸಂಖ್ಯೆ ವೀಕ್ಷಕರಿದ್ದಾರೆ.

ಮಧುರ ಮಧುರವೀ ಮಂಜುಳಗಾನ ಅಪಾರ ಮೆಚ್ಚುಗೆ ಗಳಿಸಿತ್ತು. ಅದರ ಮರು ಪ್ರಸಾರವನ್ನೂ ಈಗಲೂ ಜನ ನೋಡುತ್ತಿದ್ದಾರೆ. ಈಗಲೂ ಕನ್ನಡದ ಶೇ 30ರಷ್ಟು ವೀಕ್ಷಕರು ಚಂದನ ವಾಹಿನಿಗಿದ್ದಾರೆ. ಮುಂದೆ ಮತ್ತೆ ಎಲ್ಲವನ್ನೂ ಬಿಟ್ಟು ದೂರದರ್ಶನ ವೀಕ್ಷಿಸುವ ಕಾಲ ಬರಬಹುದು’ ಎಂದು ಅವರು ಹೇಳುತ್ತಾರೆ.

ಪಾರದರ್ಶಕತೆಯ ಉದ್ದೇಶ

ಅದು1990ರ ದಶಕದ ಮಧ್ಯಭಾಗ. ಜಾಗತಿಕ ಮಟ್ಟದಲ್ಲಿ ಶಾಂತಿ ಮತ್ತು ಭದ್ರತೆಯ ವಿಚಾರಗಳಿಗೆ ಸಂಬಂಧಿಸಿದಂತೆ ದೂರದರ್ಶನಗಳು ತೆಗೆದುಕೊಳ್ಳುವ ನಿರ್ಧಾರಗಳು ಸಾರ್ವಜನಿಕ ಅಭಿಪ್ರಾಯದ ಮೇಲೆ ಹೇಗೆ ಪ್ರಭಾವ ಬೀರುತ್ತದೆ ಎಂಬುದನ್ನು ವಿಶ್ಲೇಷಿಸಲು ಮಾಧ್ಯಮ ಕ್ಷೇತ್ರದ ಪ್ರಮುಖ ವ್ಯಕ್ತಿಗಳನ್ನು ಒಳಗೊಂಡ ಸಭೆಯೊಂದನ್ನು ವಿಶ್ವಸಂಸ್ಥೆ ಆಯೋಜಿಸಿತ್ತು. 1996ರಲ್ಲಿ ವಿಶ್ವ ಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನವೆಂಬರ್‌ 21 ದಿನವನ್ನು ವಿಶ್ವ ದೂರದರ್ಶನ ದಿನ ಎಂದು ಘೋಷಿಸಲಾಯಿತು.ವಿಶ್ವವನ್ನು ಸಮಸ್ಯೆಗಳಿಂದ ಮುಕ್ತಗೊಳಿಸುವುದು, ಪಾರದರ್ಶಕತೆ ಕಾಪಾಡುವುದು, ಸಮಕಾಲೀನ ಜಗತ್ತಿನಲ್ಲಿ ಸಂವಹನ ಮತ್ತು ಜಾಗತೀಕರಣವನ್ನು ಪ್ರತಿನಿಧಿಸುವ ಕುರಿತು ದೂರದರ್ಶನ ಗಂಭೀರವಾಗಿ ಚಿಂತಿಸಬೇಕು ಎಂಬುದು ಇದರ ಉದ್ದೇಶವಾಗಿದೆ.

**

ನಾನು ಟೀವಿ ನೋಡೋದೇ ಕಡಿಮೆ. ಕೆಲವೊಮ್ಮೆ ಎನಿಮಲ್‌ ಪ್ಲಾನೆಟ್‌, ಟ್ರಾವೆಲ್‌ ಚಾನೆಲ್‌ಗಳನ್ನು ನೋಡುತ್ತೇನೆ. ರಿಯಾಲಿಟಿ ಶೋ, ಧಾರಾವಾಹಿಗಳನ್ನು ಫಾಲೋ ಮಾಡಲ್ಲ. ನಾನು ನೋಡದೇ ಇರುವ ಹಳೆಯ ಸಿನಿಮಾಗಳನ್ನು ವೀಕ್ಷಿಸುತ್ತೇನೆ. ಮನೆಯಲ್ಲಿ ನನ್ನ ಅತ್ತೆ ಕನ್ನಡ ಧಾರಾವಾಹಿಗಳನ್ನು ನೋಡುತ್ತಿರುತ್ತಾರೆ. ಮಗಳು ಪಿಯುಸಿ ಅವಳಿಗೆ ಟೀವಿ ನೋಡಲು ಸಮಯವೇ ಇಲ್ಲ.

–ಸುಧಾರಾಣಿ, ಹಿರಿಯ ನಟಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT