ಜೀವಪೋಷಕ ಜಿಜ್ಞಾಸೆಯ ಪ್ರತಿಧ್ವನಿ

7

ಜೀವಪೋಷಕ ಜಿಜ್ಞಾಸೆಯ ಪ್ರತಿಧ್ವನಿ

Published:
Updated:
Prajavani

ಟಾಲ್‌ಸ್ಟಾಯ್‌ನ ‘ಮನುಷ್ಯನಿಗೆಷ್ಟು ಭೂಮಿ ಬೇಕು’ ಎಂಬ ಕಥೆ ಸಾಕಷ್ಟು ಜನಪ್ರಿಯ. ಈ ಕಥೆಯ ಹಂದರವೂ ಸರಳವಾಗಿದೆ.

ಒಂದೂರಿನಲ್ಲಿ ತನ್ನ ಮಿತಿಯಲ್ಲೇ ನೆಮ್ಮದಿಯಾಗಿರುವ ಒಂದು ರೈತ ಕುಟುಂಬ. ಅಲ್ಲೆಲ್ಲೋ ದೂರದ ಇನ್ನೊಂದು ಊರಿನಲ್ಲಿ ಎಷ್ಟು ಬೇಕಾದರೂ ಜಮೀನು ಕೊಡುತ್ತಾರೆ. ಅದೂ ಪುಕ್ಕಟೆ ಎಂದು ಕಿವಿಗೆ ಬಿದ್ದಾಗ, ರೈತನ ಆಸೆ ಗರಿಗೆದರುತ್ತದೆ. ಆತ ಬುತ್ತಿ ಕಟ್ಟಿಕೊಂಡು ಪ್ರಯಾಣ ಹೊರಟೇ ಬಿಡುತ್ತಾನೆ. ಅಲ್ಲಿ ಹೋದರೆ, ಅವನ ಕಿವಿಗೆ ಬಿದ್ದಿದ್ದಷ್ಟೂ ನಿಜ! ಎಷ್ಟು ಬೇಕಾದರೂ ಭೂಮಿ ಸಿಗುತ್ತೆ. ಆದರೆ ಒಂದು ಷರತ್ತು. ಬೆಳಿಗ್ಗೆ ಸೂರ್ಯೋದಯದ ಸಮಯದಲ್ಲಿ ಆತ ನಡೆಯಲು, ಓಡಲು ಆರಂಭಿಸಬೇಕು. ಸಂಜೆಯೊಳಗೆ ನಡಿಗೆಯಲ್ಲೇ ವಾಪಸ್‌ ಬಂದು ತಾನು ಹೊರಟ ತಾಣವನ್ನೇ ಮುಟ್ಟಬೇಕು. ಹಾಗಾದಾಗ ಅವನು ನಡಿಗೆಯಲ್ಲಿ ಕ್ರಮಿಸಿದ ಅಷ್ಟೂ ಭೂಮಿ ಅವನದೇ.

ಸರಿ, ಮಾರನೇ ಬೆಳಿಗ್ಗೆ ರೈತ ನಡೆಯತೊಡಗುತ್ತಾನೆ. ನಡಿಗೆ ಸಾಲದೆಂದು ಓಡತೊಡಗುತ್ತಾನೆ. ಊಟ, ತಿಂಡಿಗೆ ನಿಂತರೆ ಕಾಲಹರಣವೆಂದು ಎಲ್ಲೂ ವಿರಮಿಸದೆ ಸಾಧ್ಯವಾದಷ್ಟೂ ವೇಗವಾಗಿ ಗರಿಷ್ಠ ದೂರ ಕ್ರಮಿಸಲು ಉಧ್ಯುಕ್ತನಾಗುತ್ತಾನೆ. ಹಾಗೇ ನಡೆಯುತ್ತ, ಓಡುತ್ತ ಮಧ್ಯಾಹ್ನ ಕಳೆಯಿತು. ಸಂಜೆ ಸಮೀಪಿಸಿತು. ಈಗ ತಡವಾಗಿಹೋಯಿತೆಂಬ ಆತಂಕದಲ್ಲಿ, ಆರಂಭದ ಬಿಂದು ಮುಟ್ಟಲು ಶಕ್ತಿ ಮೀರಿ ಓಡುತ್ತಾನೆ.

ಕೊನೆಗೆ ಕರಾರುವಕ್ಕಾಗಿ ಸೂರ್ಯಾಸ್ತದ ಸಮಯಕ್ಕೆ ತಾನು ಹೊರಟಿದ್ದ ಜಾಗವನ್ನೇ ಬಂದು ತಲುಪುತ್ತಾನೆ. ಆದರೆ, ಅಲ್ಲಿ ಮುಟ್ಟಿದೊಡನೆ, ಆಯಾಸಕ್ಕೆ ಕುಸಿದು ಬಿದ್ದು ಸತ್ತೇ ಹೋಗುತ್ತಾನೆ. ಈಗ ಅವನನ್ನು ಆರಡಿ ಮೂರಡಿ ಗುಂಡಿಯಲ್ಲಿ ಹೂಳುತ್ತಾರೆ. ಕಡೆಗೆ ಅವನಿಗೆ ತನ್ನದಾಗಿ ದಕ್ಕಿದ ಭೂಮಿ ಅಷ್ಟೇ.

ಇದು ಕಥೆ. ಈ ಕಥೆಯನ್ನು ಲಂಕೇಶರು ಹಲವಾರು ಬಾರಿ ಉಲ್ಲೇಖಿಸಿ ಪತ್ರಿಕೆಯಲ್ಲಿ ಬರೆದರು. ಲಂಕೇಶ್ ಬೆಳೆಯುವ ಹಂತದಲ್ಲಿ, ಅದೂ ಅವರ ವ್ಯಕ್ತಿತ್ವ ರೂಪುಗೊಳ್ಳುವ ಘಟ್ಟದಲ್ಲಿ ಅವರ ಕೈಗೆ ಸಿಕ್ಕಿದ ಈ ಕಥೆ, ಸಾಹಿತ್ಯ ಲೋಕಕ್ಕೆ ಅವರ ಕಣ್ಣು ತೆರೆಯಿಸಿತು. ಅವರೊಳಗಿನ ಬರಹಗಾರನನ್ನೇ ಎಚ್ಚರಿಸಿತು. ತಮ್ಮ ಆತ್ಮಕಥೆ ‘ಹುಳಿಮಾವಿನ ಮರ’ದಲ್ಲಿಯೂ ಲಂಕೇಶ್ ಈ ಕಥೆಯ ಪ್ರಸ್ತಾಪ ಮಾಡುವುದು ಹೀಗೆ:

‘...ನಮ್ಮೂರ ವಯಸ್ಕರ ಶಿಕ್ಷಣದ ಪುಸ್ತಕ ಭಂಡಾರ ಉಪಯೋಗವಾದದ್ದು ನನಗೊಬ್ಬನಿಗೇ ಎಂದು ಕಾಣುತ್ತದೆ. ಆ ಲೈಬ್ರರಿಯಲ್ಲಿನ ಶಾಲು ಸಾಬಿ, ನಮಗೆಷ್ಟು ಭೂಮಿ ಬೇಕು, ಧ್ರುವ ಚರಿತ್ರೆ, ಚಂದ್ರಹಾಸ, ಗರುಡಗಂಬದ ದಾಸಯ್ಯ, ಮಂಕುತಿಮ್ಮನ ಕಗ್ಗ ಮುಂತಾದ ಪುಸ್ತಕಗಳು ನನಗೆ ಕೊಟ್ಟ ಕಾವು ಅಮೂಲ್ಯವಾದದ್ದು. ಇವತ್ತಿಗೂ ನನ್ನ ವ್ಯಕ್ತಿತ್ವದ ಭಾಗವಾಗಿರುವಂಥಾದ್ದು’.

ನನಗೆ ಕಥೆ ಎಂದರೆ ಏನು ಎಂದು ಗೊತ್ತಾದದ್ದೇ ಟಾಲ್‌ಸ್ಟಾಯ್‌ನ ನಮಗೆಷ್ಟು ಭೂಮಿ ಬೇಕು ಎಂಬುದನ್ನು ಓದಿದಾಗ. ಇದರ ಪ್ರಭಾವವನ್ನು ನೀವು ಇವತ್ತಿಗೂ ನನ್ನ ಬರಹಗಳಲ್ಲಿ ಕಾಣಬಹುದು. ಭೂಮಿಯ ಆಸೆಯಿಂದ ಮಾಯಾವಿಯೊಬ್ಬನ ಭರವಸೆಯನ್ನು ನೆಚ್ಚಿ ಹೋಗಿ ಅಸು ನೀಗಿದವನ ಕಥೆ ಇದು. ನೆಮ್ಮದಿಯ ಮಾತುಕತೆಯೊಂದಿಗೆ ಈ ಕಥೆ ಶುರುವಾಗುತ್ತದೆ. ಊಟ, ತಿಂಡಿ, ಪ್ರೀತಿ, ಸ್ನೇಹ ಇವೇ ಮುಖ್ಯ ಎಂಬಂತೆ ಶುರುವಾದ ಕಥೆ ದುರಾಶೆಯಿಂದಾದ ವಿನಾಶವನ್ನು ತೋರಿ ಮುಗಿಯುತ್ತದೆ. ಈ ಕಥೆ ನಿಜಕ್ಕೂ ಸಾಹಿತ್ಯಿಕ ಕೃತಿಯಲ್ಲ. ಬರೀ ತಾತ್ವಿಕ ಕಗ್ಗವೂ ಅಲ್ಲ. ಕಥೆ ಬರೆಯುವ ಗೀಳಿನಿಂದ ಬಂದದ್ದಲ್ಲ. ಈ ಬದುಕಿನಲ್ಲಿ ನೆಮ್ಮದಿ, ಶಾಂತಿ, ಪ್ರೇಮ, ಆಸ್ತಿ ಇವೆಲ್ಲವುಗಳ ಸ್ಥಾನವೇನು ಎಂದು ಕೇಳುತ್ತಲೇ ಈ ಬದುಕಿನ ಉದ್ದೇಶವೇನು? ಎಂದು ಈ ಕಥೆ ಪ್ರಶ್ನಿಸುತ್ತದೆ.

ಈ ಕಥೆ ನನ್ನಲ್ಲಿ ಬಿತ್ತಿದ ಬೀಜ ಮೊಳೆಯುತ್ತಲೇ ಹೋಯಿತು. ಇದರಿಂದಾಗಿ ನಾನು ಕಲಾವಿದನೆಂದುಕೊಂಡಾಗ ಆ ಬಗ್ಗೆ ಅಸಹ್ಯಪಡುವುದು, ತತ್ವಜ್ಞಾನಿಯೆಂದುಕೊಂಡಾಗ ಆ ಬಗ್ಗೆ ಗೇಲಿ ಮಾಡಿಕೊಳ್ಳುವುದು ಸಾಧ್ಯವಾಯಿತು. ಆಮೇಲೆ ಈ ಕಥೆಯ ಮೂಲಕ ಕ್ರಿಯಾಶೀಲ ಬರವಣಿಗೆ ಅತ್ಯಂತ ನೇರ, ಸರಳ ಎಂಬುದು ತಿಳಿಯಿತು. ನಾನು ಈ ಕಥೆಯಿಂದಾಗಿಯೇ ಇವತ್ತಿಗೂ ಅಮೂರ್ತದಲ್ಲಿ ಮುಳುಗಬಲ್ಲ ಬುದ್ಧಿಜೀವಿಯಲ್ಲ, ನನ್ನ ಮನಸ್ಸು ನಾನು ಕಂಡದ್ದನ್ನು ಅನುಸರಿಸಿ ಎಲ್ಲ ತಾಪ ಮತ್ತು ತಪವನ್ನು ಮುಟ್ಟಲು ಯತ್ನಿಸುತ್ತದೆ ಮತ್ತು ಈ ಕಥೆಯಿಂದಾಗಿ ಬರೆಯುವುದರ, ಬದುಕುವುದರ ಘನತೆ ತಿಳಿಯಿತು. ನನ್ನ ಒಳತೋಟಿಯನ್ನು ಒಳಗೊಳ್ಳದ ಘನತೆ ನಿಷ್ಪ್ರಯೋಜಕ. ಹಾಗೆಯೇ ಒಳತೋಟಿಯನ್ನೇ ನೆಚ್ಚಿ ಬಾಹ್ಯದ ಬಗ್ಗೆ ಕಾಳಜಿ ವಹಿಸದಿರುವುದೂ ಒಳ್ಳೆಯದಲ್ಲ. ಇಷ್ಟೆಲ್ಲ ಆಗ ಆಯಿತೆಂದು ನಾನು ಹೇಳುತ್ತಿಲ್ಲ. ಸಾಹಿತ್ಯದ ಯಕ್ಷಿಣಿ ಮತ್ತು ಲೌಕಿಕತೆ ನನ್ನನ್ನು ಮುಟ್ಟಿತ್ತು. ಮನುಷ್ಯರ ಕ್ರಿಯೆಗಳ ಸ್ವಾರಸ್ಯವನ್ನು ಅರಿಯುವುದರ ಬಗ್ಗೆ ಗಮನ ಹರಿಯಿತು...’

ಇದನ್ನು ಬರೆಯುತ್ತಿರುವ ಲಂಕೇಶ್, ಮುಕ್ಕಾಲು ಜೀವನವನ್ನು ಪೂರೈಸಿದ, ಮಾಗಿದ ಲಂಕೇಶ್ ಎಂಬುದನ್ನು ಮರೆಯದಿರೋಣ. ಇರಲಿ. ಈ ಕಥೆಗೆ ಸಂಬಂಧಿಸಿ ಇಲ್ಲಿ ಇನ್ನೊಂದು ಕುತೂಹಲದ ಅಡಿಟಿಪ್ಪಣಿಯಿದೆ.

ಇಡೀ ವಿಶ್ವವನ್ನು ಜಯಿಸಿದ ಅಲೆಕ್ಸಾಂಡರ್ ಭಾರತದ ಮೇಲೆ (ಕ್ರಿಸ್ತಪೂರ್ವ ನಾಲ್ಕನೇ ಶತಮಾನ) ದಂಡೆತ್ತಿ ಬಂದಾಗಿನ ಸಂದರ್ಭ. ಇಲ್ಲಿ ತಾನು ಹೋದ ಬಂದ ಕಡೆ ಸ್ಥಳೀಯ ತತ್ವಜ್ಞಾನಿಗಳು, ಪಂಡಿತರನ್ನು ಕರೆಯಿಸಿ ಅವರೊಂದಿಗೆ ಜೀವನದ ಗಹನ ವಿಚಾರಗಳನ್ನು ಚರ್ಚಿಸುವುದು ಅವನ ಅಭ್ಯಾಸ. ಈ ಪ್ರಸಂಗವನ್ನು ಅಮರ್ತ್ಯ ಸೇನ್ ತಮ್ಮ ‘ದಿ ಆರ್ಗ್ಯುಮೆಂಟೆಟೀವ್ ಇಂಡಿಯನ್’ ಕೃತಿಯಲ್ಲಿ ನಿರೂಪಿಸಿದ್ದಾರೆ.

ಹಾಗೊಮ್ಮೆ ಅಲೆಕ್ಸಾಂಡರ್ ವಾಯವ್ಯ ಭಾರತದ ಜೈನ ಪಂಡಿತರನ್ನು ಭೇಟಿ ಮಾಡುವಾಗ ಅವರು ತನ್ನಂಥ ಮಹಾಯೋಧನಿಗೆ ತೋರುವ ನಿರ್ಲಕ್ಷ್ಯಕ್ಕೆ ಕಸಿವಿಸಿಗೊಂಡು ಅವರನ್ನು ಪ್ರಶ್ನಿಸುತ್ತಾನೆ. ಅದಕ್ಕೆ ಜೈನ ತತ್ವವೇತ್ತರು ನೀಡಿದ ಉತ್ತರ ಕೌತುಕಮಯವಾಗಿದೆ.

ಅವರು ಹೇಳುತ್ತಾರೆ: ‘ಅಲೆಕ್ಸಾಂಡರ್ ದೊರೆಯೇ, ಪ್ರತಿಯೊಬ್ಬ ಮನುಷ್ಯನಿಗೂ ತಾನು ನಿಂತ ಜಾಗದಷ್ಟು ಭೂಮಿ ಮಾತ್ರ ಲಭ್ಯ. ನೀನೂ ನಮ್ಮಂತೆಯೇ ನರಮನುಷ್ಯ. ಏನೆಂದರೆ ನೀನು ಸದಾ ಗಡಿಬಿಡಿಯಲ್ಲಿರುತ್ತೀ. ಅದರಿಂದ ಏನೂ ಉಪಯೋಗವಿಲ್ಲ. ನಿನ್ನ ಊರಿನಿಂದ ಇಷ್ಟೊಂದು ದೂರ ಬಂದು ನಿನಗೂ ಹಿಂಸೆ, ಬೇರೆಯವರಿಗೂ ತೊಂದರೆ... ಶೀಘ್ರದಲ್ಲೇ ನೀನು ಮೃತನಾಗುತ್ತೀ. ಆಮೇಲೆ ನಿನ್ನನ್ನು ಹೂಳಲು ಎಷ್ಟು ಜಾಗ ಬೇಕೋ, ಅಷ್ಟು ಭೂಮಿಗೆ ಮಾತ್ರ ನೀನು ಒಡೆಯ!’ ಎಂಥ ಆಶ್ಚರ್ಯವಿದು!

ಕ್ರಿಸ್ತಪೂರ್ವ ನಾಲ್ಕನೇ ಶತಮಾನದಲ್ಲಿ ಜೈನ ತತ್ವಜ್ಞಾನಿಗಳು ಬೋಧಿಸಿದ್ದೂ ಅದೇ, ಎರಡು ಶತಮಾನಗಳ ಹಿಂದೆ ಟಾಲ್‌ಸ್ಟಾಯ್ ಬರೆದ ಕಥೆಯ ಸಾರವೂ ಅದೇ. ಜೀವಪೋಷಕ ಜಿಜ್ಞಾಸೆಯೊಂದು ಹೀಗೆ ಶತಮಾನಗಳನ್ನು ಹಾಯ್ದು, ಖಂಡಾಂತರ ದಾಟಿ ಮತ್ತೆ ಪ್ರತಿಧ್ವನಿ ಪಡೆದದ್ದು ಎಂಥ ಸೋಜಿಗ.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !