ಇಷ್ಟು ಅವಸರ ಏನಿತ್ತು ತುಳಸಿ...

ಬುಧವಾರ, ಮೇ 22, 2019
24 °C
ನೆನಪು ನಂದಾದೀಪ

ಇಷ್ಟು ಅವಸರ ಏನಿತ್ತು ತುಳಸಿ...

Published:
Updated:
Prajavani

ಆಧುನಿಕ ಕನ್ನಡ ಸಾಹಿತ್ಯದಲ್ಲಿ ಮುಂಬಯಿ ಕನ್ನಡಿಗರ ಒಂದು ಹೊಳಪಿನ ಸಾಲಿದೆ. ‘ಮುಂಬೈ ಕನ್ನಡಿಗರು’ ಕೆಟಗರಿಯನ್ನು ಮೀರಿ ಕನ್ನಡದ ಅತ್ಯುತ್ತಮ ಕಥೆಗಾರರ ಸಾಲಿಗೆ ಸೇರಿದವರು ತುಳಸಿ ವೇಣುಗೋಪಾಲ್‌ (ನಿಧನ: ಏಪ್ರಿಲ್ 8). ಹೊರನಾಡಿನಲ್ಲಿ ಇದ್ದುದರಿಂದಲೋ ಹೆಚ್ಚು ಮಾತನಾಡದ ಕಾರಣದಿಂದಲೋ ತುಳಸಿ ಅವರ ಕಥೆಗಳು ಸಾಹಿತ್ಯವಲಯದಲ್ಲಿ ಚರ್ಚೆಗೊಳಗಾದುದು ಕಡಿಮೆಯೇ. ಕನ್ನಡದ ಈ ಸಶಕ್ತ ಕಥೆಗಾರ್ತಿಯ ವ್ಯಕ್ತಿತ್ವ–ಸಾಧನೆಯ ಕುರಿತು ಮತ್ತೊಬ್ಬ ಕಥೆಗಾರ್ತಿ ಜಯಶ್ರೀ ಕಾಸರವಳ್ಳಿ ಬರೆದ ಆಪ್ತಚಿತ್ರಣ ಇಲ್ಲಿದೆ. 

ಕೆಲ ದಿನಗಳ ಹಿಂದಷ್ಟೇ ತುಳಸಿ ವೇಣುಗೋಪಾಲ್ ಅವರಿಗೆ ತುಂಬಾ ಹುಷಾರಿಲ್ಲವೆಂಬ ಆತಂಕದ ಸುದ್ದಿ ಬಂದು ತಲುಪಿ, ಚೇತರಿಸಿಕೊಳ್ಳುವಷ್ಟರಲ್ಲೇ ‘ಅವರಿಲ್ಲ!’ ಎಂಬ ಮತ್ತೊಂದು ಚಿರನೋವಿಗೆ ಸರಿದುಹೋಗುವಂತಹ ಆಘಾತಕಾರಿ ಸುದ್ದಿ ತಲುಪಿದೆ. ನನಗೆ ವಿಷಯ ತಿಳಿಯುವಷ್ಟರಲ್ಲಿ, ಕಡೆಯದೊಂದು ಸಂವಹನಕ್ಕೂ ಆಸ್ಪದವಿಲ್ಲದಂತೆ ಅವರಾಗಲೇ ಕೋಮಾಕ್ಕೆ ಜಾರಿ ಆಗಿತ್ತು. ಲಿವರ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಅವರು ಚಿಕಿತ್ಸೆ ಪಡೆದು ಮಂಗಳೂರಿನ ತಂಗಿ ಮನೆಯಲ್ಲಿದ್ದಾರೆಂದು ತಿಳಿದು, ಹೋಗಿ ನೋಡಿ ಬರೋಣವೆನ್ನುವಷ್ಟರಲ್ಲಿ ಅವರು ವಿಧಿವಶರಾದ ಸುದ್ದಿಯನ್ನು ಜೀರ್ಣಿಸಿಕೊಳ್ಳುವುದು ಅವರನ್ನು ಹತ್ತಿರದಿಂದ ಕಂಡವರಿಗೆ ತುಂಬಾ ಕಷ್ಟ.

ಹಾಗೆ ನೋಡಿದರೆ, ತುಳಸಿಯವರು ವೈಯಕ್ತಿಕವಾಗಿ ಪರಿಚಯವಾಗುವುದಕ್ಕೂ ಮುಂಚಿನಿಂದಲೂ, ಆಗೊಮ್ಮೆ ಈಗೊಮ್ಮೆ ಪ್ರಕಟಗೊಳ್ಳುತ್ತಿದ್ದ ಅವರ ಅಲ್ಲೊಂದು ಇಲ್ಲೊಂದು ಕತೆಗಳನ್ನು ನಾನು ಅಪಾರ ಆಸ್ಥೆಯಿಂದ ಓದಿ, ಇನ್ನಿಲ್ಲದಷ್ಟು ಮೆಚ್ಚಿಕೊಂಡವಳು. ಎಲ್ಲೋ ದೂರದ ಮುಂಬಯಿಯಲ್ಲಿ ಕುಳಿತು ಬರೆವ ಅವರ ಕತೆಗಳು ನನಗರಿವಿಲ್ಲದ ಹಾಗೆ ನನ್ನನ್ನು ಆರ್ದ್ರಗೊಳಿಸಿದ್ದಿದೆ; ಅಲ್ಲಿ ಮಿಡಿದ ಯಾವುದೋ ಸ್ಪಂದನ ನನ್ನ ಹೃದಯವನ್ನು ಕರಗಿಸಿ ಹನಿಗಣ್ಣಾಗಿಸಿದ್ದಿದೆ. ಕ್ರಮೇಣ ಅವರ ಪರಿಚಯವಾಗಿ, ಅವರ ಕತೆಗಳ ಜೊತೆಗೆ ಅವರ ಆತ್ಮೀಯತೆಯೂ ದಕ್ಕಿ, ಅವರ ಪ್ರೀತಿಯ ಬೆಚ್ಚಗಿನ ಬಿಸುಪಿನಲ್ಲಿ ನಾ ಕರಗಿದರೂ ಅವರ ಕತೆಗಳ ಪ್ರಭಾವ ಮತ್ತು ಅವು ನನ್ನ ಮೇಲೆ ಮೂಡಿಸಿದ ಪರಿಣಾಮಗಳನ್ನು ಕುರಿತು ಪದಗಳಲ್ಲಿ ಜೋಡಿಸಿ ಅವರ ಮುಂದಿಡುವ ಸಾಹಸಕ್ಕೆ ನಾನೆಂದೂ ಕೈ ಹಾಕಿರಲಿಲ್ಲ.


ತುಳಸಿ ವೇಣುಗೋಪಾಲ್ ಅವರೊಂದಿಗೆ ಲೇಖಕಿ ಜಯಶ್ರೀ ಕಾಸರವಳ್ಳಿ

ಆದರೆ ಎರಡು ವರುಷಗಳ ಹಿಂದೆ ಉಮಾರಾವ್ ಅವರು, ‘ಮುಂಬಯಿ ಲೇಖಕರು’ ಎಂಬ ಸರಣಿ ಉಪನ್ಯಾಸಗಳ ಕಾರ್ಯಕ್ರಮವೊಂದನ್ನು ಸುಚಿತ್ರಾದಲ್ಲಿ ಏರ್ಪಡಿಸಿದ್ದರು. ಆ ಸಂದರ್ಭದಲ್ಲಿ ತುಳಸಿ ವೇಣುಗೋಪಾಲ್ ಅವರ ಕತೆಗಳ ಕುರಿತು ಮಾತನಾಡಲು ನನ್ನನ್ನು ಕೇಳಿಕೊಂಡರು. ಅಲ್ಲಿಯವರೆಗೆ ಅವರ ಕತೆಗಳ ಭಾವುಕ ಪ್ರಪಂಚಕ್ಕೆ ಮಾತ್ರ ಸ್ಪಂದಿಸಿದ್ದ ನನಗೆ, ಆ ಕತೆಗಳ ಮರು ಓದು, ಕತೆಯಾಚೆಗಿನ ಮತ್ತೊಂದು ಮಗ್ಗುಲಿಗೆ ಸಹಜವಾಗಿ ತೆರೆದುಕೊಳ್ಳಲು ಅನುವು ಮಾಡಿಕೊಡುತ್ತಾ ಮತ್ತೊಂದು ಅಚ್ಚರಿಗೆ ನನ್ನನ್ನು ದೂಡಿದ್ದು ನಿಜ. ಅಲ್ಲಿಯವರೆಗೂ ಕೇವಲ ಒಳ್ಳೆಯ ಕತೆಗಳಾಗಿ ಮಾತ್ರ ಆ ಕತೆಗಳನ್ನು ಓದಿದ್ದ ನನಗೆ, ಒಟ್ಟಾರೆ ಕತೆಗಳ ಮೂಲಕ ಅವರು ಅನಾವರಣಗೊಳಿಸಲೆತ್ನಿಸಿದ ಹೆಣ್ಣು ಮನಸ್ಸಿನ ಅತ್ಯಂತ ಸೂಕ್ಷ್ಮಾತಿಸೂಕ್ಷ್ಮ ಸಂಗತಿಗಳನ್ನು ಅದೆಷ್ಟು ಆಳವಾಗಿ ಸ್ಪರ್ಶಿಸಿದ್ದರೆಂದರೆ, ಓದುತ್ತಾ ನಾನು ದಂಗು ಬಡಿದಿದ್ದೆ. ಹಾಗೆ ಒಳ ಇಣುಕಿ, ಅವರು ಪೋಷಿಸಿದ ಕಥಾಜಗತ್ತಿನ ಭಾವಕೋಶವೊಂದು ಮತ್ತಷ್ಟು ದಟ್ಟವಾಗಿ ನನ್ನನ್ನು ಅವರಿಸಿಕೊಳ್ಳುತ್ತಿದ್ದ ಹಾಗೆ, ತನ್ಮೂಲಕ ಮಾನವೀಯ ಸಂಬಂಧಗಳ ಜಟಿಲತೆಯನ್ನು ಸ್ಪರ್ಶಿಸುವ, ಮುಟ್ಟಿ ನೋಡಿ ಅನುಭವಿಸುವ ಅಗಾಧ ನೋವಿನ ಆಗರದ ಪರಿಚಯವನ್ನೂ ಅವು ನನಗೆ ನೀಡುತ್ತಾ ಹೋದವು.

ತದನಂತರ, ಅವರ ಪ್ರತಿ ಕತೆಯೂ ತನ್ನದೇ ಆದ ರೀತಿಯಲ್ಲಿ ನನ್ನನ್ನು ಇನ್ನಿಲ್ಲದಷ್ಟು ಕಾಡತೊಡಗಿದ್ದುಂಟು, ಅರ್ಥವಾಗದ ಒಂದು ವಿಚಿತ್ರ ಕ್ಷೋಭೆಗೆ ಒಳಪಡಿಸಿದ್ದುಂಟು. ಅವರ ಕತೆಗಳನ್ನು ಓದುತ್ತಾ ಹೋದ ಹಾಗೆ, ಯಾಕೋ ಪ್ರಪಂಚದ ಮತ್ತ್ಯಾವುದೋ ಮೂಲೆಯಲ್ಲಿ ನನ್ನ ಹಾಗೇ ಮತ್ತೊಂದು ಹೆಣ್ಣು ಹೇಳಿಕೊಳ್ಳಲಾಗದ ತಳಮಳಗಳಿಂದ, ತನ್ನೊಳಗಿನ ತುಮುಲಗಳಿಂದ ಆಚೆ ಬರುವ ರಹದಾರಿ ತಿಳಿಯದೆ, ಬರವಣಿಗೆಯಲ್ಲೇ ಸ್ವಗತವೆಂಬಂತೆ ತನ್ನಂತರಂಗವನ್ನು ತೋಡಿಕೊಳ್ಳುತ್ತಿರುವರೇನೋ ಎಂದು ನನಗ್ಯಾಕೆ ಅನ್ನಿಸುತ್ತಿತ್ತೋ ಗೊತ್ತಿಲ್ಲ. ಪ್ರಾಯಶಃ ಅವರ ಕತೆಗಳನ್ನು ಓದಿದ ಯಾರಿಗಾದರೂ ಆ ರೀತಿಯ ಒಂದು ತಾದಾತ್ಮ್ಯತೆಯನ್ನು ಪಡೆಯಲು ಸಾಧ್ಯವಿತ್ತೇನೋ? ಬಾ ಇಲ್ಲಿ, ನಿನ್ನ ಹಾಗೆ ನಾನೂ ನೊಂದಿದ್ದೇನೆ ಎಂಬ ಆತ್ಮಸಖಿಯ ಅಂತರಂಗದ ಪಿಸುನುಡಿಯಂತೆ, ಕೇಳಿಯೂ ಕೇಳಿಸದಷ್ಟು ಮೆಲುವಾಗಿ ಮೂಡಿ ಬಂದ ನಿಟ್ಟುಸಿರಿನಂತೆ, ಕೈ ಹಿಡಿದು ಒಟ್ಟಿಗೆ ಕುಳಿತು ಮತ್ತೆ ಚಂದದಲ್ಲಿ ಬದುಕು ಕಾಣಲು ಹಂಬಲಿಸುವ ಭರವಸೆಯಂತೆ...

ಬಹುಶಃ ತುಳಸಿ ಅವರ ಕತೆಯಲ್ಲಿ ಸೆಳೆದಂತಹ ಈ ಎಲ್ಲಾ ಅಂಶಗಳೇ ಮುಂದೊಮ್ಮೆ ಅವರ ವ್ಯಕ್ತಿತ್ವದೆಡೆಗೂ ಸೆಳೆಯಲು ಕಾರಣವಾಗಿರಬೇಕು. ಆತ್ಮೀಯರಾಗುತ್ತಾ ಹೋದಹಾಗೆ ಅವರಲ್ಲಿನ ಮಗು ಮನಸ್ಸು, ಇನ್ನೊಬ್ಬರನ್ನು ನೋಯಿಸಬಾರದೆನ್ನುವ ಕಟು ಎಚ್ಚರ, ಕತೆಯ ಪಾತ್ರ ಕೂಡಾ ನೋಯಬಾರದೆನ್ನುವ ಅವರ ಹೂವಿನಂತಹ ಅಂತರಂಗ, ಹೇಳುವುದಕ್ಕಷ್ಟೇ ನಾನಿದ್ದೇನೆ, ನೀವು ಆಲಿಸಿಯಷ್ಟೇ ಎಂದು ನೇಪಥ್ಯದಲ್ಲುಳಿದು ಕತೆ ಹೇಳುವ ಅವರ ಪರಿ, ಕೇಳಿದ ನಂತರ ನನ್ನ ಕತೆಯ ಪಾತ್ರಗಳನ್ನು ನೀವೂ ಒಮ್ಮೆ ನೇವರಿಸಿಬಿಡಿ ಎಂಬ ಕಕ್ಕುಲಾತಿ, ಹಾಗಂತಾ ಅವೆಲ್ಲೂ ಭಾವತೀವ್ರತೆಯನ್ನು ಸ್ಫೋಟಿಸುವ ಉತ್ಕಟ ಭಾವೋದ್ರೇಕವನ್ನು ಪ್ರದರ್ಶಿಸಬಾರದೆನ್ನುವ ತಣ್ಣಗಿನ ನಿರ್ಲಿಪ್ತ ಧ್ವನಿ – ಇವೆಲ್ಲವೂ ನನ್ನನ್ನು ಅವರಿಸಿಕೊಂಡ ರೀತಿಗೆ ಏನನ್ನಲಿ?

ತುಳಸಿಯವರು ಹೆಚ್ಚು ಬರೆಯಲಿಲ್ಲ, ನಿಜ. ಅವರು ತಂದಿದ್ದು ಒಂದು ಕವನ ಸಂಕಲನ ಮತ್ತು ಎರಡು ಕಥಾಸಂಕಲನವಷ್ಟೇ. ಅದೂ ಎರಡನೆಯದ್ದು ಅವರೂ ಮತ್ತು ಅವರ ಲೇಖಕ–ಪತ್ರಕರ್ತ ಪತಿ ಟಿ.ಕೆ. ವೇಣುಗೋಪಾಲ್ ಅವರ ಕತೆಗಳೊಂದಿಗೆ ಸೇರಿ ತಂದ ‘ಜುಗುಲುಬಂದಿ’ ಎಂಬ ಕಥಾಸಂಕಲನ.

‘ಮುಂಜಾವಿಗೆ ಕಾದವಳು’ ಆವರ ಪ್ರಥಮ ಕಥಾಸಂಕಲನ. ಸ್ತ್ರೀಯೇ ಪ್ರಧಾನ ಭೂಮಿಕೆಯಲ್ಲಿರುವ ಈ ಸಂಕಲನದಲ್ಲಿ ಒಟ್ಟು ಹತ್ತು ಕತೆಗಳಿವೆ. ಹತ್ತು ಕತೆಗಳನ್ನೂ ಒಟ್ಟಿಗೆ ಓದಿದಾಗ, ವಸ್ತು ಹಾಗೂ ವಿಷಯ ಪ್ರಸ್ತುತತೆಯ ದೃಷ್ಟಿಯಿಂದ ತುಳಸಿ ಅವರು ಬೇರೆ ಲೇಖಕರಿಗಿಂತ ಹೇಗೆ ಭಿನ್ನರೆನ್ನಿಸಿಕೊಳ್ಳುತ್ತಾರೆನ್ನುವುದು ಮೊದಲ ನೋಟಕ್ಕೆ ಗಮನ ಸೆಳೆಯುವಂತಹ ಸಂಗತಿ. ಭಾಷಾ ಬಳಕೆ, ಕಟ್ಟುವಿಕೆಯಲ್ಲಿನ ಕಲಾಗಾರಿಕೆ, ನಿರ್ಲಿಪ್ತ ಧಾಟಿ ಮತ್ತು ಭಾವನೆಗಳ ನಿಯಂತ್ರಣ – ಅವರ ಕತೆಗಳಿಗೆ ಒಂದು ವಿಶಿಷ್ಟ ಧ್ವನಿಯನ್ನು ಕೊಟ್ಟಿದೆ. ಭಾವಾವೇಶದ ಭಾವ ತೀವ್ರತೆಯನ್ನಾಗಲಿ, ಉದ್ರಿಕ್ತ ಮನಸ್ಸಿನ ಉತ್ಕಟ ಸ್ಥಿತಿಯನ್ನಾಗಲಿ ಭಾಷೆಯಲ್ಲೆಲ್ಲೂ ಢಾಳಾಗಿ ಪ್ರದರ್ಶಿಸದೆ ಅತ್ಯಂತ ಸಂಯಮದಿಂದ ಕಟ್ಟಿರುವುದಲ್ಲದೇ, ಕತೆಯೊಳಗಿನ ಮೆಲುಮಾತು ಹಾಗೂ ಕೆಲವೊಂದು ಮೌನ ಸಂವಾದಗಳೂ ಕೂಡಾ ಕತೆಯ ಅಶಯದೊಂದಿಗೆ ಬಿಚ್ಚಿಕೊಳ್ಳುತ್ತಾ ‘ಹೆಣ್ಣಿನ ಅವಜ್ಞಾ ಸ್ಥಿತಿ’ಯನ್ನು ಮಾರ್ಮಿಕವಾಗಿ ನಮ್ಮ ಮುಂದೆ ತೆರೆದಿಡುತ್ತಾ ಹೋಗುತ್ತಾರೆ.

ಯಶವಂತ ಚಿತ್ತಾಲರು ತುಳಸಿ ಅವರ ಸಂಕಲನಕ್ಕೆ ಮುನ್ನುಡಿ ಬರೆಯುತ್ತಾ, ‘ಸ್ತ್ರೀಗೇ ವಿಶಿಷ್ಟವಾದ ಅನುಭವ ಲೋಕವೊಂದರಲ್ಲಿ ಬೇರು ಬಿಟ್ಟವುಗಳು ಇಲ್ಲಿನ ಕತೆಗಳು’ ಎಂದು ಹೇಳಿರುವ ಮಾತು ಅಕ್ಷರಶಃ ಸತ್ಯ. ಏಕೆಂದರೆ ಈ ಹತ್ತು ಕತೆಗಳೂ, ಒಂದು ಮತ್ತೊಂದಕ್ಕೆ ಪೂರಕವಾಗಿ ಮೂಡಿಬಂದಂತಹ ಉಪಕತೆಯಂತೆ ಕೆಲವೊಮ್ಮೆ ಗೋಚರಿಸಿದರೂ, ಹಲವು ಮಜಲುಗಳಲ್ಲಿ ಪದರ ಪದರವಾಗಿ ವಿಸ್ತರಿಸಿ ಅವರಿಸಿಕೊಳ್ಳುತ್ತಾ ಹೋಗುವ ಇಲ್ಲಿನ ‘ಸ್ತ್ರೀ ಮನಸ್ಸು’ ತನ್ನನ್ನು ತಾನೇ ಹತ್ತಾರು ಮಗ್ಗುಲುಗಳಲ್ಲಿ ಇಟ್ಟುಕೊಂಡು ಪರಿಶೀಲಿಸುತ್ತಾ, ಏಕಕಾಲಕ್ಕೆ ಹತ್ತೂ ಒಂದೇ ಹೆಣ್ಣಾಗಿಯೂ, ಹತ್ತು ವಿಭಿನ್ನ ಹೆಣ್ಣಾಗಿಯೂ ನಮ್ಮ ಮುಂದೆ ಅನಾವರಣಗೊಳ್ಳುತ್ತಾ ಹೋಗುವುದೇ ಈ ಸಂಕಲನದ ವಿಶಿಷ್ಟ.

ಈ ಸಂಕಲನದಲ್ಲಿ ಬರುವಂತಹ ಪ್ರತಿ ಹೆಣ್ಣೂ ಅತ್ಯಂತ ಭಾವಜೀವಿ. ಸೂಕ್ಷ್ಮಪ್ರಜ್ಞೆಯುಳ್ಳವಳು. ಎಲ್ಲಕ್ಕಿಂತಾ ಹೆಚ್ಚಾಗಿ ಸಂವೇದನಾಶೀಲಳು. ಅವಳಿಗೆ ಅವಳದ್ದೇಯಾದ ಮನಸ್ಸಿದೆ, ಒಳಮನಸ್ಸಿದೆ. ಹೊರಗೆ ಗೋಚರಿಸದ ಸುಪ್ತಪ್ರಜ್ಞೆಯಿದೆ. ತನ್ನ ದೈಹಿಕಕ್ಕೂ ಮಾನಸಿಕ ಸ್ಥಿತಿಗತಿಗೂ ಅಜಗಜಾಂತರ ವ್ಯತ್ಯಾಸವನ್ನು ಕಾಯ್ದಿರಿಸಿಕೊಂಡಿರುವ ಹೆಣ್ಣಿಗೆ ಒಂದು ಸಣ್ಣ ಆಕ್ರಮಣ ಕೂಡಾ ಆಘಾತವನ್ನು ಕೊಡುವಂತಹದ್ದು. ಅದು ನಮ್ಮ ಸುತ್ತಮುತ್ತಲಿನ ಹೊರ ಪ್ರಪಂಚದಲ್ಲಿ ಘಟಿಸುವಂತಹ ಘಟನೆಗಳಾಗಿರಬಹುದು, ಗಂಡು–ಹೆಣ್ಣು ಸಂಬಂಧದಲ್ಲಿ ಹುಟ್ಟಿಕೊಳ್ಳುವ ಘರ್ಷಣೆಯಿಂದ ಸ್ಫೋಟಗೊಂಡ ಅಪನಂಬಿಕೆಯಾಗಿರಬಹುದು ಅಥವಾ ಅವ್ಯಾವುದೂ ಆಗಿರದೇ ತನ್ನದೇ ಭಾವಲೋಕದಲ್ಲಿ ಸಂಚರಿಸುತ್ತಿರುವ ಹೆಣ್ಣಿಗೆ ಯಾರೋ ಎಸೆದ ಒಂದು ಚಿಕ್ಕ ಕಲ್ಲು ಎಬ್ಬಿಸಿದ ಅಲೆಗಳ ಹೊಡೆತವಾಗಿರಬಹುದು – ತಾನು ನಂಬಿದ ಸುಭದ್ರ ಬದುಕಿಗೆ ಅಸ್ಥಿರತೆ, ಅತಂತ್ರ, ಅನಿಶ್ಚಿತತೆಯೊಂದಿಗೆ ಅಲ್ಲಿಯವರೆಗೂ ಅರಿವಿಗೆ ಬಾರದ ಅವ್ಯಕ್ತ ಭಯವೊಂದನ್ನು ತಂದೊಡ್ಡಲು.

ಅತ್ಯಂತ ಸಂಕೀರ್ಣ ಸಮಸ್ಯೆಗಳನ್ನು, ಮಾನವೀಯ ಸಂಬಂಧಗಳ ಸೂಕ್ಷ್ಮಾತಿ ಸೂಕ್ಷ್ಮಗಳನ್ನು ತುಳಸಿಯವರು ತಮ್ಮ ಕತೆಗಳಲ್ಲಿ ನೇಯ್ದ ರೀತಿ ಮಾತ್ರ ನಿಜಕ್ಕೂ ಸೋಜಿಗ ತರುವಂತಹದ್ದು. ಅವರ ಯಾವ ಕತೆಯಲ್ಲೂ ಅನವಶ್ಯಕ ಪದಗಳಾಗಲಿ, ಆಡಂಬರವಾಗಲಿ, ವೈಭವೀಕರಣವಾಗಲಿ ಕಾಣುವುದಿಲ್ಲ.

ಹೇಳಬೇಕಾದನ್ನು ಅತ್ಯಂತ ನಾಜೂಕಾಗಿ, ಕೆಲವೇ ಅರ್ಥಗರ್ಭಿತ ಪದಗಳಲ್ಲಿ ಸೂಚ್ಯವಾಗಿ, ಕಾವ್ಯಾತ್ಮಕ ಭಾಷೆಯಲ್ಲಿ ಕತೆ ಕಟ್ಟುವ ಕಲೆ ಅವರಿಗೆ ಸಿದ್ಧಿಸಿತ್ತು. ಪ್ರತಿ ಪದವನ್ನೂ ಅದೆಷ್ಟು ಜಾಗರೂಕರಾಗಿ ಬಳಸುತ್ತಾರೋ ಅಷ್ಟೇ ಜಾಗರೂಕರಾಗಿ ತಮ್ಮ ಭಾವನೆಗಳನ್ನೂ ನಿಯಂತ್ರಣದಲ್ಲಿಟ್ಟುಕೊಳ್ಳುವ ಕಲೆಯೂ ಅವರಿಗೆ ಲಭಿಸಿದ್ದರಿಂದಲೇ ಕತೆಗೆ ಅತ್ಯಗತ್ಯವಾದ ನಿರ್ಲಿಪ್ತತೆಯನ್ನು ಹುಟ್ಟಿಸುವುದರ ಮೂಲಕ, ಅತ್ಯಂತ ತಣ್ಣಗಿನ ಧ್ವನಿಯಲ್ಲಿ ವಿಷಯದ ಅಗಾಧತೆಯನ್ನು ಮೆಲ್ಲಗೆ ನಮ್ಮ ಭಾವಕೋಶವನ್ನು ಪ್ರವೇಶಿಸುವುದಕ್ಕೆ ಅನುವು ಮಾಡಿಕೊಡುತ್ತಾರೆ.

ತುಳಸಿಯವರ ಕತೆಗಳನ್ನು ಓದುವಾಗ ಪಾಕಿಸ್ತಾನ್ ಸಂಜಾತ ಬ್ರಿಟಿಷ್ ಲೇಖಕಿ, ಇಮ್ತಿಯಾರ್ ಧರ್ಕರ್ ಹೇಳಿದ ಮಾತು ನೆನಪಾಗುತ್ತದೆ: ‘ನಾನು ಕವನಗಳನ್ನು ಬರೆಯುವಾಗ ಯಾವ ಆವೇಶ, ಆಕ್ರೋಶಗಳಲ್ಲಿ ಪದ್ಯದ ಸಾಲುಗಳು ಮೂಡಿ ಬರುತ್ತೋ, ಅದೇ ರೀತಿಯಲ್ಲಿ ಎಲ್ಲವನ್ನೂ ಬರೆದಿಡುತ್ತೇನೆ. ಆಮೇಲೆ ಶಾಂತ ಮನಃಸ್ಥಿತಿಯಲ್ಲಿರುವಾಗ, ನಾನೇ ಅಂಟಿಸಿದ ಅನವಶ್ಯಕ ರೆಕ್ಕೆಪುಕ್ಕಗಳನ್ನೆಲ್ಲಾ ಒಂದೊಂದಾಗಿ ಕತ್ತರಿಸುತ್ತಾ ಬರುತ್ತೇನೆ. ಕಡೆಗೆ ಉಳಿವ ಸಾಲುಗಳಷ್ಟೇ ನಿಮ್ಮ ಅಂತರಂಗದಿಂದ ಮೂಡಿದ ನಿಜ ಕವಿತೆ.’ ಬಹುಶಃ ತುಳಸಿಯವರಿಗೆಂದೇ ಹೇಳಿದಂತಹ ಮಾತುಗಳಿವು. ತುಳಸಿ ಅವರ ಬರವಣಿಗೆಯ ಕೌಶಲ್ಯದ ಬಗ್ಗೆ ಬರೆಯುತ್ತಾ ಚಿತ್ತಾಲರು ಫ್ರೆಂಚ್ ಕಾದಂಬರಿಗಾರ ಜಾರ್ಜ್ ಸ್ಟಾಮೆನೊನ್‌ ಮಾತನ್ನು ಉಲ್ಲೇಖಿಸಿದ್ದಾರೆ: I always cut adjectives, adverbs and every word which is there just to make an effect. Every sentence is which is there just for the sentence, you have a beautiful sentence cut it.

ಎಷ್ಟು ನಿಜ ಅಲ್ಲವೇ? ತುಳಸಿಯವರು ಇನ್ನೂ ಅನೇಕ ಕತೆಗಳನ್ನು, ಕವನಗಳನ್ನು ಬರೆಯುತ್ತಾ ನಮ್ಮ ನಡುವೆ ಇರಬೇಕಿತ್ತು. ಬರೆಯದ ಇನ್ನೂ ಅದೆಷ್ಟೋ ಕತೆಗಳು ಅವರ ಬಳಿಯಿದ್ದವು. ಪ್ರತಿ ಸಲ ಫೋನ್ ಹಾಯಿಸಿದಾಗಲೂ ಬರೆಯಬೇಕೆಂದು ಇರುವ ಕೆಲ ಕತೆಗಳ ಬಗ್ಗೆ ಹೇಳುತ್ತಿದ್ದರು. ಇಷ್ಟು ಅವಸರವೇನಿತ್ತು ತುಳಸಿ...?

ಚಿತ್ರ: ನಿನಾದ್‌ ದಿವಾಕರ್‌

ಕೃಪೆ: ಸುಧಾ 

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 3

  Happy
 • 1

  Amused
 • 1

  Sad
 • 0

  Frustrated
 • 0

  Angry

Comments:

0 comments

Write the first review for this !