ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಂಕಲ್‌ ಶಾಮ್‌’ಗೆ 75ರ ಸಂಭ್ರಮ

Last Updated 20 ನವೆಂಬರ್ 2018, 20:00 IST
ಅಕ್ಷರ ಗಾತ್ರ

‘ಅಂಕಲ್‌ ಶ್ಯಾಮ್‌’ ಹೆಸರು ಗೊತ್ತಿಲ್ಲದ ರಂಗಕಲಾವಿದರಿಲ್ಲ. ಪುಟಾಣಿಗಳಿಗೂ, ದೊಡ್ಡವರಿಗೂ ಪ್ರೀತಿಯ ‘ಅಂಕಲ್‌ ಶ್ಯಾಮ್‌’ ಆಗಿರುವ ಅವರ ಪೂರ್ಣ ಹೆಸರು ಎಂ.ಎಸ್‌. ಶ್ಯಾಮ್‌ ಸುಂದರ್‌. ನೇಪಥ್ಯ ಕಲಾವಿದರಾಗಿ ರಂಗಕ್ಷೇತ್ರದಲ್ಲಿ 38 ವರ್ಷ ಸೇವೆ ಸಲ್ಲಿಸಿರುವ ಅವರು ರಂಗಪ್ರೇಕ್ಷಕರಿಗೂ ಅಷ್ಟೇ ಪರಿಚಿತರು.

1980ರಲ್ಲಿ ಅವರು ಹುಟ್ಟುಹಾಕಿದ ‘ಅಂತರಂಗ’ ತಂಡ ಇಲ್ಲಿಯವರೆಗೂ 41 ರಂಗಪ್ರಯೋಗ ಹಾಗೂ ಆರು ಬೀದಿ ನಾಟಕಗಳನ್ನು ಪ್ರದರ್ಶಿಸಿದೆ. ಇದರ ಸೃಷ್ಟಿಕರ್ತರಿಗೀಗ 75 ವರ್ಷ. ಇದನ್ನು ಸ್ಮರಣೀಯವಾಗಿಸಲು ‘ಅಂಕಲ್‌ ಶ್ಯಾಮ್‌ 75 ಅಭಿನಂದನಾ ಬಳಗ’ ಇದೇ 22ರಿಂದ 25ರವರೆಗೆ ಜಯನಗರದ ನ್ಯಾಷನಲ್‌ ಕಾಲೇಜಿನಲ್ಲಿರುವ ಎಚ್‌.ಎನ್‌. ಕಲಾಕ್ಷೇತ್ರದಲ್ಲಿ ‘ರಂಗ ಉತ್ಸವ ಮತ್ತು ಸಾಂಸ್ಕೃತಿಕ ಸಮಾಗಮ’ ಕಾರ್ಯಕ್ರಮ ಆಯೋಜಿಸಿದೆ.

ತೀರ್ಥಹಳ್ಳಿ ಸಮೀಪದ ಮಾಳೂರಿನ ಶಂಕರಪ್ಪ ಮತ್ತು ಸಂಗೀತ ಸುಬ್ಬಮ್ಮರ ಅವರ ಕಿರಿಯ ಪುತ್ರ ಶ್ಯಾಮ್ ಸುಂದರ್‌. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಬಾಲ್ಯವನ್ನು ಕಳೆದ ಅವರಿಗೆ ಅಮ್ಮ ಮತ್ತು ಅಕ್ಕ ಕಮಲಾ ಜೋಯಿಸ್‌ (ಶಾಸ್ತ್ರೀಯ ಸಂಗೀತಗಾರ್ತಿ) ಅವರ ಹಾಡುಗಳು ರಂಗಕ್ಕೆ ಬೇಕಾದ ತಾಳಜ್ಞಾನವನ್ನು ಕಲಿಸಿತು.

ರಂಗಭೂಮಿಯತ್ತ ಅಂಕಲ್‌: ಮೈಸೂರಿನಲ್ಲಿ ಬಿ.ಕಾಂ ಪದವಿ ಪಡೆದ ಅವರು, ಕಾಲೇಜು ದಿನಗಳಲ್ಲಿ ರಂಗಚಟುವಟಿಕೆಗಳಲ್ಲಿ ಸಕ್ರಿಯವಾಗಿದ್ದರು. 1968ರಲ್ಲಿ ಬೆಂಗಳೂರಿನ ಹೆಬ್ಬಾಳ ಕೃಷಿ ವಿಶ್ವವಿದ್ಯಾಲಯದಲ್ಲಿ ಸಹಾಯಕರಾಗಿ ಕೆಲಸ ಸಿಕ್ಕಿತು.

1980ರಲ್ಲಿ ಜಿಕೆವಿಕೆಗೆ ಸಹಾಯಕ ಪ್ರಾಧ್ಯಾಪಕರಾಗಿ ಧಾರವಾಡದಿಂದ ಬಂದ ಬಿ.ಎನ್‌.ವಿಶ್ವನಾಥ್‌ ಅವರು ಶ್ಯಾಮ್‌ ಅವರಿಗೆ ರಂಗ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಹೊಸ ಹುರುಪು ಮೂಡಿಸಿದರು. ಇದು ‘ಅಂಕಲ್‌’ ಅವರ ರಂಗಭೂಮಿಯ ಬದುಕಿಗೆ ತಿರುವು ನೀಡಿತು.

ಅವರು ತಮ್ಮ ಸಮಾನ ಮನಸ್ಕಾರದ ಬಿ.ಸಿ.ಕೆ. ಅಯ್ಯಂಗಾರ್‌, ಎಸ್‌.ಕೇಶವಮೂರ್ತಿ, ಬಿ.ಎನ್‌.ಸತ್ಯನಾರಾಯಣ್‌, ಎ. ನಾಗರಾಜ್‌, ಎ.ಆರ್‌.ಗುರುಪ್ರಸಾದ್‌, ಬಿ.ಎನ್‌.ವಿಶ್ವನಾಥ್‌ ಅವರೊಡನೆ ಸೇರಿ 1980ರಲ್ಲಿ ‘ಅಂತರಂಗ’ ತಂಡ ಕಟ್ಟಿದರು.

ಆಗ ಸಂಪಿಗೆ ತೋಂಟದಾರ್ಯ ಅವರ ನಿರ್ದೇಶನದಲ್ಲಿ ‘ನಾಯಕ’ ಎಂಬ ನಾಟಕಕ್ಕೆ ತಾಲೀಮು ಆರಂಭವಾಗಿತ್ತು. ರಂಗದ ಮೇಲೆ ಅಭಿನಯಿಸಲು ಹಲವರು ಒಲವು ತೋರಿದರು. ‘ನೇಪಥ್ಯದಲ್ಲಿ ಯಾರು ಕೆಲಸ ಮಾಡುತ್ತೀರಾ?’ ಎಂಬ ಪ್ರಶ್ನೆಗೆ ಕೈಯೆತ್ತಿದ್ದು ಅಂಕಲ್‌ ಒಬ್ಬರೇ.

‘ನನ್ನ ಎತ್ತರ ಮತ್ತು ಮೈಕಟ್ಟಿಗೆ ಯಾರೂ ಪಾತ್ರ ಕೊಡಲ್ಲ ಅನ್ನೋ ನಂಬಿಕೆ ನನ್ನಲ್ಲಿ ಮೂಡಿತ್ತು. ಹಾಗಾಗಿ ನೇಪಥ್ಯದಲ್ಲಿ ತೊಡಗಿಕೊಂಡೆ. ನಾನು ಇಷ್ಟಪಟ್ಟು ಆಯ್ಕೆ ಮಾಡಿಕೊಂಡೆ. ಅದು ನನ್ನ ಜೀವನದ ಇನ್ನೊಂದು ದೊಡ್ಡ ತಿರುವು’ ಎಂದು ಸ್ಮರಿಸುತ್ತಾರೆ ಅಂಕಲ್‌ ಶ್ಯಾಮ್‌.

ಕಚೇರಿ ಕೆಲಸದ ನಂತರ ರವೀಂದ್ರ ಕಲಾಕ್ಷೇತ್ರದಲ್ಲಿ ಸುತ್ತಾಡುತ್ತಾ, ರಂಗಭೂಮಿಯನ್ನು ಅವರು ಪರಿಚಯಿಸಿಕೊಳ್ಳುತ್ತಿದ್ದರು. ‘ಅಂತರಂಗ’ವನ್ನು ಬೆಳೆಸಬೇಕು, ಅದು ಎಲ್ಲಕಡೆ ಹೆಸರು ಮಾಡಬೇಕು ಎಂಬ ಆಸೆ ಅವರದಾಗಿತ್ತು. ವೃತ್ತಿಯಲ್ಲಿ ಮಂಡ್ಯಕ್ಕೆ ವರ್ಗಾವಣೆಯಾಗಿ 10 ವರ್ಷ ಅಲ್ಲಿಯೇ ಇರಬೇಕಾಗಿ ಬಂದರೂ, ಅವರ ರಂಗದ ಕೆಲಸಗಳು ನಿಲ್ಲಲಿಲ್ಲ. ಆಗೆಲ್ಲಾ ಬೀದಿ ನಾಟಕಗಳನ್ನು ಅವರು ಮಾಡುತ್ತಿದ್ದರು.

ಅವರಿಗೆ ವೃತ್ತಿಯಲ್ಲಿ ಆಡಳಿತಾಧಿಕಾರಿಯಾಗಿ ಬಡ್ತಿ ಸಿಕ್ಕಿದ ಸಮಯದಲ್ಲಿ, ‘ಅಂತರಂಗ’ ಪ್ರದರ್ಶಿಸಿದ ಡಾ. ಬಿ.ವಿ.ರಾಜಾರಾಂ ನಿರ್ದೇಶನದ, ಸಿ.ಜಿ.ಕೆ ಬೆಳಕಿನ ವಿನ್ಯಾಸ ಮಾಡಿದ ‘ಬೇಟೆ’ ನಾಟಕ ಅಪಾರ ಜನಮನ್ನಣೆ ಪಡೆಯಿತು.

‘‘ಇದೇ ವೇಳೆ ‘ಮೇಕಪ್‌ ನಾಣಿ’ಯವರ ಪರಿಚಯವಾಗಿ ಕೈಲಾಸಂ ನಾಟಕಗಳ ಬಗ್ಗೆ ಒಲವು ಬೆಳೆಸಿಕೊಂಡೆ. ಕೈಲಾಸಂ ನಾಟಕಗಳೂ ಯಶಸ್ಸು ಕಂಡವು. ಶ್ರೀನಿವಾಸ ಜಿ. ಕಪ್ಪಣ್ಣ, ಕೆ.ವಿ.ನಾಗರಾಜ ಮೂರ್ತಿ, ಸಿ.ಕೆ.ಗುಂಡಣ್ಣ ಎಲ್ಲರೂ ಅಂತರಂಗದ ಬೆಳವಣಿಗೆಗೆ ಕೈಜೋಡಿಸಿದರು’’ ಎನ್ನುವುದನ್ನು ಅವರು ಮರೆಯಲಿಲ್ಲ.

‘ಅಂಕಲ್‌’ ಆದದ್ದು ಹೇಗೆ: ಅಣ್ಣನ ಮಕ್ಕಳು ಅವರನ್ನು ‘ಅಂಕಲ್‌’ ಎಂದೇ ಕರೆಯುತ್ತಿದ್ದರು. ಅದು ರಂಗಭೂಮಿ ವೃತ್ತದಲ್ಲಿಯೂ ಚಾಲ್ತಿಗೆ ಬಂದಿತು. ಕ್ರಮೇಣ ಅವರ ಕಚೇರಿಯ ಸಹೋದ್ಯೋಗಿಗಳೂ ಅವರನ್ನು ‘ಅಂಕಲ್‌’ ಎಂದೇ ಕರೆಯಲಾರಂಭಿಸಿದರು. ಇದು ಹೆಚ್ಚು ಪ್ರಚಾರ ಪಡೆದು ಪುಟಾಣಿಗಳು, ಯುವ ಸಮುದಾಯ, ಸಮ ವಯಸ್ಕರು ಹಾಗೂ ಅವರಿಂಗಿಂತ ಹಿರಿಯರೂ ಅವರನ್ನು ‘ಅಂಕಲ್‌ ಶ್ಯಾಮ್‌’ ಎಂದೇ ಕರೆಯುವುದನ್ನು ರೂಢಿಸಿಕೊಂಡರು. ಆ ಹೆಸರಿನಿಂದಲೇ ಅವರು ‘ಫೇಮಸ್‌’ ಆದರು.

‘ಪತ್ನಿ ಹೇಮಾ, ಮಗ ಅಜಯ್‌ ಶ್ಯಾಮ್‌, ಮಗಳು ಅರ್ಚನಾ ಶ್ಯಾಮ್‌, ಅಳಿಯ ರಾಮ್‌ ಮಂಜುನಾಥ್‌, ರಂಗಕರ್ಮಿಗಳಾದ ಎಚ್‌.ವಿ.ನಟರಾಜ್‌, ಗುಂಡೂರಾವ್‌, ಅಚ್ಯುತರಾವ್ ಪದಕಿ ಸೇರಿದಂತೆ ಹತ್ತಾರು ಕಲಾವಿದರ ಸಹಕಾರ, ಪ್ರೋತ್ಸಾಹದಿಂದ ಅಂತರಂಗ ಸಕ್ರಿಯವಾಗಿದೆ’ ಎಂದು ನೆನೆಯುತ್ತಾರೆ ಅವರು.

ಅಂತರಂಗದಿಂದ ಇತ್ತೀಚೆಗೆ ಪ್ರದರ್ಶನವಾದ ಶಾಲಭಂಜಿಕೆ, ಧರ್ಮಸ್ತಂಭ, ಉತ್ತರಭೂಪ ಬೀಚಿ, ಸೂರ್ಯಾಸ್ತ, ಶಾಪುರದ ಸೀನಿಂಗಿ ಸತ್ಯ, ಲೋಕ ಶಾಕುಂತಲ, ಹೊರಟು ಉಳಿದವನು ಪ್ರೇಕ್ಷಕರನ್ನು ಸೆಳೆಯುವಲ್ಲಿ ಯಶಸ್ವಿಯಾಗಿವೆ. ಅವರ ಲೋಕಶಾಕುಂತಲ ನಾಟಕ ಇತ್ತೀಚೆಗೆ ಅಂತರರಾಷ್ಟ್ರೀಯ ಥಿಯೇಟರ್‌ ಒಲಿಂಪಿಕ್‌ನಲ್ಲಿ ಪ್ರದರ್ಶನ ಕಂಡಿದೆ.

ಅಂಕಲ್‌ ಶ್ಯಾಮ್‌ ಅವರ 75ರ ಅಭಿನಂದನಾ ಸಂಭ್ರಮ ಕಾರ್ಯಕ್ರಮ ಇದೇ 22ರಂದು ಎಚ್‌.ಎನ್‌. ಕಲಾಕ್ಷೇತ್ರದಲ್ಲಿ ಸಂಜೆ 6.30ಕ್ಕೆ ಉದ್ಘಾಟನೆಯಾಗಲಿದೆ. ಕವಿ ಡಾ. ಎಚ್‌.ಎಸ್‌.ವೆಂಕಟೇಶಮೂರ್ತಿ, ನಿರ್ದೇಶಕ ಟಿ.ಎಸ್‌.ನಾಗಾಭರಣ, ರಂಗಕರ್ಮಿ ಲಕ್ಷ್ಮಿ ಚಂದ್ರಶೇಖರ್‌ ಪಾಲ್ಗೊಳ್ಳುವರು.

ಇದೇ 22ರಿಂದ 24ರವರೆಗೆ ನಾಟಕ ಪ್ರದರ್ಶನ ನಡೆಯಲಿದೆ. 25ರಂದು ಸಾಂಸ್ಕೃತಿಕ ಸಮಾಗಮ ಹಾಗೂ 26ರಂದು ಅಂಕಲ್‌ ಶ್ಯಾಮ್‌ ಅವರ ಅಭಿನಂದನಾ ಕೃತಿ ಬಿಡುಗಡೆ ಕಾರ್ಯಕ್ರಮ ಆಯೋಜಿಸಿದ್ದೇವೆ ಎನ್ನುತ್ತಾರೆ ಕಾರ್ಯಕ್ರಮದ ಸಂಯೋಜಕ ರಾಮ್‌ ಮಂಜುನಾಥ್‌.

**

ನಾಟಕ ರಚಿಸಿದ್ದು

ಒಮ್ಮೆ ರಂಗಭೂಮಿ ಗೆಳೆಯರೊಬ್ಬರು ನಾಟಕ ರಚನೆ ನಿನ್ನ ಕೈಲಾಗೋದಿಲ್ಲ ಎಂದು ಛೇಡಿಸಿದರು. ಇದನ್ನು ಸವಾಲಾಗಿ ತೆಗೆದುಕೊಂಡ ಅಂಕಲ್‌ ಶ್ಯಾಮ್‌ ‘ಸಮಯ ಸಾಧಕರು’ ಎಂಬ ನಾಟಕ ರಚಿಸಿದರು. ಅದರ ಪ್ರಯೋಗಗಳು ಯಶಸ್ವಿಯಾದವು. ಆಕಾಶವಾಣಿಗಾಗಿ ‘ಅಕ್ಕರೆ’ ಎಂಬ ನಾಟಕವನ್ನೂ ಬರೆದರು. ಅದು ಆಕಾಶವಾಣಿಯಲ್ಲಿ ಬಿತ್ತರವಾಗಿತ್ತು. ಬಳಿಕ ‘ಮೌಲ್ಯಗಳು’ ಎಂಬ ನಾಟಕದಲ್ಲಿ ಮೂಗನ ಪಾತ್ರ ನಿರ್ವಹಿಸಿದ್ದರು.

ಅದಕ್ಕೆ ಸಿಜಿಕೆ ಅವರಿಂದ ಮೆಚ್ಚುಗೆಯೂ ಬಂದಿತ್ತು. ನೇಪಥ್ಯದಲ್ಲಿ ದುಡಿಯುತ್ತಿದ್ದ ಅಂಕಲ್‌ ಶ್ಯಾಮ್‌ ಅವರು, ಕಲಾವಿದರು ಕೈಕೊಟ್ಟಾಗಲಷ್ಟೇ ಆ ಪಾತ್ರವನ್ನು ನಿರ್ವಹಿಸುತ್ತಿದ್ದರು. ಶಂಕರ್‌ನಾಗ್‌ ನಿರ್ದೇಶನದ ‘ಮೆಕ್ಯಾನಿಕ್‌ ಮುದ್ದ’ ಧಾರಾವಾಹಿ ಹಾಗೂ ‘ಸಿನಿಮಾ ಮೈ ಡಾರ್ಲಿಂಗ್‌’ ಚಲನಚಿತ್ರದಲ್ಲಿ ಅವರು ಪುಟ್ಟ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT