ಆಟ–ಪಾಠದ ಉತ್ಸವ ಅಂಡರ್‌ 25

7

ಆಟ–ಪಾಠದ ಉತ್ಸವ ಅಂಡರ್‌ 25

Published:
Updated:
Prajavani

ವಕರ ಉತ್ಸಾಹಕ್ಕೆ, ಕ್ರಿಯಾಶೀಲತೆಗೆ ಪ್ರೋತ್ಸಾಹ ನೀಡುವ ಕನಸಿನ ಒಂದಷ್ಟು ಯುವ ಮನಸುಗಳು ಸೇರಿ ರೂಪಿಸಿದ ವೇದಿಕೆ ’ಅಂಡರ್‌ 25’ ಉತ್ಸವ. ಈ ಉತ್ಸವಕ್ಕೆ ಆರನೇ ವರ್ಷದ ಸಂಭ್ರಮ. ಇದೇ ಫೆಬ್ರುವರಿ 2 ಮತ್ತು 3ರಂದು ಈ ವೇದಿಕೆ ತನ್ನ 6ನೇ ಆವೃತ್ತಿಯ ಕಾರ್ಯಕ್ರಮಗಳನ್ನು, ಜಯಮಹಲ್‌ ಅರಮನೆಯಲ್ಲಿ ಭರ್ಜರಿಯಾಗಿ ಆಯೋಜಿಸುತ್ತಿದೆ.

ಇದಕ್ಕೆ ಪೂರ್ವಭಾವಿಯಾಗಿ ನಗರದ ಎಲ್ಲೆಡೆ ಉತ್ಸವವಕ್ಕೆ ಪೂರಕ ವಾತಾವರಣ ಸೃಷ್ಟಿಸಲು ಮತ್ತು ಆ ಮೂಲಕ ಯುವಕರನ್ನು ಸೆಳೆಯಲು ಪ್ರಮುಖ ಬೀದಿಗಳಲ್ಲಿ ರೋಡ್‌ ಶೋ ಕೂಡ ನಡೆಸುತ್ತಿದೆ. ಭಾನುವಾರ (20ರಂದು) ಸಂಜೆ ರೆಸಿಡೆನ್ಸ್‌ ರಸ್ತೆಯ ಸ್ಯಾಮಸಂಗ್‌ ಒಪೆರಾ ಹೌಸ್‌ನಲ್ಲಿ ಭರ್ಜರಿ ಕಾರ್ಯಕ್ರಮವನ್ನೂ ವೇದಿಕೆ ಆಯೋಜಿಸಿತ್ತು. ಯುವಕರ ಸಿಳ್ಳೆ, ಚಪ್ಪಾಳೆ, ಚೀರಾಟ, ನಗುವಿನ ಕಲರವ ಇಡೀ ಕಾರ್ಯಕ್ರಮಕ್ಕೆ ಲವ ಲವಿಕೆ ತುಂಬಿತ್ತು. ತಾವೆಷ್ಟು ಕ್ರಿಯಾಶೀಲರು ಮತ್ತು ಆರೋಗ್ಯಯುತ ಸಮಾಜದ ಆಕಾಂಕ್ಷಿಗಳು ಎನ್ನುವುದನ್ನು ಎತ್ತಿ ತೋರಿಸುವಂಥ ವಾತಾವರಣ ಅಲ್ಲಿ ನೆಲೆಗೊಂಡಿತ್ತು.

‘ಇನ್ನೂ ಓದುತ್ತಿರುವ ಹುಡುಗರು, ಇವರ ಕೈಯಲ್ಲಿ ಏನಾದೀತು...’ ಎನ್ನುವ ಹಿರಿತಲೆಗಳ ಮಾತನ್ನು ಸುಳ್ಳಾಗಿಸುವ ಪಣ ತೊಟ್ಟಂತಿರುವ ಈ ವೇದಿಕೆಯ ಯುವ ಪಡೆ ತಾನಂದುಕೊಂಡಿದ್ದನ್ನು ಸಾಧಿಸುವ ಸಂಕಲ್ಪ ತಾಳಿದಂತಿದೆ.

ಇಂದಿನ ಯುವಕರು ಪ್ರತಿಭಾವಂತರು. ಆದರೆ, ಪ್ರತಿಭಾ ಕಾರಂಜಿ ಚಿಮ್ಮುವುದಕ್ಕೆ ಸೂಕ್ತ ವೇದಿಕೆಯದೇ ಕೊರತೆ. ಇಂಥ ಅವಕಾಶ ವಂಚಿತ ಯುವ ಸಮೂಹ ಸಾಕಷ್ಟಿದೆ. ಅಲ್ಲದೆ, ಕಲಿಯುವ ಆಸಕ್ತಿ ಹೊಂದಿರುವವರಿಗೆ ಸರಿಯಾದ ಮಾರ್ಗದರ್ಶಕರ ಕೊರತೆಯೂ ಇದೆ. ಇದೆಲ್ಲವನ್ನು ದೃಷ್ಟಿಯಲ್ಲಿಟ್ಟಕೊಂಡು ರೂಪಿಸಿದ ಪರಿಕಲ್ಪನೆಯೇ ಈ ‘ಅಂಡರ್‌ 25’. ಇದನ್ನು ದೇಶದಾದ್ಯಂತ ಪಸರಿಸುವ ಉಮೇದಿಯಲ್ಲಿ ಒಂದು ದೊಡ್ಡ ಯುವ ತಂಡ ಶ್ರಮಿಸುತ್ತಿದೆ.

‘ಅಂಡರ್ 25’ ಎಂಬ ಹೆಸರೇಕೆ?

25 ವರ್ಷದೊಳಗಿನ ಯುವ ಸಮೂಹಕ್ಕೆ ಗುರಿಯಾಗಿಸಿಕೊಂಡು ಈ ಸಂಸ್ಥೆಯನ್ನು ಕಟ್ಟಿರುವುದರಿಂದ ಇದರು ಹೆಸರು ಅಂಡರ್‌ 25 ಎಂದಿದೆ. ಇದೊಂದು ಮಾಧ್ಯಮ ಮತ್ತು ಮನರಂಜನಾ ಸಂಸ್ಥೆಯಾಗಿದೆ. ಆ್ಯಂಟೊ ಫಿಲಿಪ್‌ ಮತ್ತು ಶ್ರೇಯಾನ್ಸ್‌ ಜೈನ್‌ ಎಂಬ 19 ವರ್ಷದ ವಿದ್ಯಾರ್ಥಿಗಳು 2013ರಲ್ಲಿ ಈ ಸಂಸ್ಥೆಯನ್ನು ಹುಟ್ಟುಹಾಕಿದರು. ಅದರ ಮೂಲಕ ಯುವ ಸಮೂಹಕ್ಕಾಗಿ ಅನೇಕ ಕಾರ್ಯಕ್ರಮಗಳನ್ನೂ ರೂಪಿಸುವುದು ಈ ವೇದಿಕೆಯ ಪ್ರಮುಖ ಕಾಳಜಿ. ಇದೇ ಹಾದಿಯಲ್ಲಿ ಅದು ಅಂದುಕೊಂಡಿದ್ದನ್ನು ಮಾಡುತ್ತಿದೆ.

‘ಅಂಡರ್ 25’ ಎಂಬ ಹೆಸರಿನಲ್ಲಿಯೇ ಅತ್ಯಂತ ದೊಡ್ಡ ಯುವ ಉತ್ಸವವನ್ನು ಈ ಸಂಸ್ಥೆ ಆಯೋಜಿಸುತ್ತದೆ. 2013ರಲ್ಲಿ ಮೊದಲ ಬಾರಿಗೆ ಈ ಉತ್ಸವ ಆರಂಭವಾಯಿತು. ಇದೀಗ 6ನೇ ಆವೃತ್ತಿಯ ಭರ್ಜರಿ ಕಾರ್ಯಕ್ರಮ ಫೆಬ್ರುವರಿ 2 ಮತ್ತು 3ರಂದು ಜಯಮಹಲ್ ಅರಮನೆಯಲ್ಲಿ ನಡೆಯಲಿದೆ. ಅದಕ್ಕಾಗಿ ಸಕಲ ಸಿದ್ಧತೆಯನ್ನು ವೇದಿಕೆ ಮಾಡಿಕೊಂಡಿದೆ.

ಮೊದಲ ವರ್ಷದಲ್ಲಿ ಇಲ್ಲಿ ಸೇರಿದ್ದು ಕೇವಲ 100 ಮಂದಿ... ವರ್ಷದಿಂದ ವರ್ಷಕ್ಕೆ ಸಂಖ್ಯೆ ಹೆಚ್ಚುತ್ತಾ ಹೋಗಿ ಕೇವಲ ಆರು ವರ್ಷಗಳಲ್ಲಿ 15 ಸಾವಿರ ಮಂದಿಯನ್ನು ತಲುಪಿದೆ. ಇಷ್ಟು ಮಂದಿ ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿರುವುದು ಇದರ ಜನಪ್ರಿಯತೆಗೆ ಸಾಕ್ಷಿ. ಈ ಸಂಸ್ಥೆ ಯುವಕರಿಂದಲೇ ಕೂಡಿರುತ್ತದೆ ಎನ್ನುವುದು ಮತ್ತೊಂದು ವಿಶೇಷ. 

‘ಈ ಬೃಹತ್‌ ಹಬ್ಬ ಪ್ರತಿ ವರ್ಷ ಬೆಂಗಳೂರಿನಲ್ಲಿ ನಡೆಯುತ್ತದೆ. ಇದಲ್ಲದೆ ಹೆಚ್ಚು ಜನರನ್ನು ತಲುಪುವ ಉದ್ದೇಶದಿಂದ ಹೈದರಾಬಾದ್‌, ಮುಂಬೈ, ದೆಹಲಿ, ಚೆನ್ನೈ, ಮಂಗಳೂರು, ಮಣಿಪಾಲದಲ್ಲಿಯೂ ಉತ್ಸವ ನಡೆಸಿದ್ದೇವೆ. ಈ ಬಾರಿಯ ಉತ್ಸವಕ್ಕೆ 20 ಸಾವಿರ ಯುವ ಸಮೂಹ ಸೇರುವ ನಿರೀಕ್ಷೆ ಇದೆ’ ಎನ್ನುತ್ತಾರೆ ಸಂಸ್ಥಾಪಕರಲ್ಲಿ ಒಬ್ಬರಾದ ಆ್ಯಂಟೊ ಫಿಲಿಪ್‌.

ಏನಿರುತ್ತದೆ ಯುವ ಉತ್ಸವದಲ್ಲಿ?

ವಿವಿಧ ರಾಜ್ಯಗಳಿಂದ 25 ವರ್ಷದೊಳಗಿನ ಯುವಕ-ಯುವತಿಯರು ಸಾವಿರಾರು ಸಂಖ್ಯೆಯಲ್ಲಿ ಈ ಉತ್ಸವದಲ್ಲಿ ಭಾಗವಹಿಸಲಿದ್ದು, ಫ್ಯಾಷನ್, ನೃತ್ಯ, ಹಾಡು, ವಿನೋದ ಕಾರ್ಯಕ್ರಮ, ಆಹಾರ ತಯಾರಿಕೆ ಸೇರಿ ಹಲವು ಸ್ಪರ್ಧೆಗಳು ಇಲ್ಲಿ ನಡೆಯಲಿವೆ. ಅಷ್ಟೇ ಅಲ್ಲದೆ 200ಕ್ಕೂ ಅಧಿಕ ಭಾಷಣಕಾರರು, ಕಲಾವಿದರು ಉತ್ಸವದ ರಂಗನ್ನು ಮತ್ತಷ್ಟು ಹೆಚ್ಚಿಸಲಿದ್ದಾರೆ.

ಯುವ ಜನಾಂಗ ಒಂದು ಕಡೆ ಸೇರಿದ ಮೇಲೆ ಅಲ್ಲಿ ಮನರಂಜನೆಗೆ ಬರವೇ ಇರುವುದಿಲ್ಲ. ಭಾಗವಹಿಸುವ ಯುವ ಜನತೆಗೂ ತಮ್ಮ ಪ್ರತಿಭೆ ಅನಾವರಣಕ್ಕೂ ಇಲ್ಲಿ ಅವಕಾಶ ಇರುತ್ತದೆ. ವಿವಿಧ ರಾಜ್ಯಗಳ ಸಂಸ್ಕೃತಿ ಮತ್ತು ಸಂಗೀತವನ್ನು ಒಂದೇ ಸ್ಥಳದಲ್ಲಿ ಕಣ್ತುಂಬಿಕೊಳ್ಳುವ ಅವಕಾಶ ನಗರದ ಯುವಕರಿಗೆ ಈ ಮೂಲಕ ಸಿಗಲಿದೆ.

ಯಾರೆಲ್ಲ ಮಾತಾಡ್ತಾರೆ?

ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎನ್ನುವುದಕ್ಕೆ ಅನ್ವರ್ಥರಾಗಿರುವವರ ಮಾತುಗಳನ್ನು ನೀವು ಇಲ್ಲಿ ಕೇಳಬಹುದು. ಈ ಬಾರಿ ಬಾಲಿವುಡ್‌ ನಟ ರಣವೀರ್‌ ಸಿಂಗ್, ಕ್ರಿಕೆಟಿಗ ರೋಹಿತ್‌ ಶರ್ಮ, ನೃತ್ಯಗಾರ್ತಿ ನೇಹಾ ಕಕ್ಕಾರ್, ಆಯುಷ್ಮಾನ್ ಖುರಾನ, ಬಾದ್‌ಷಾ, ಕಾರ್ತಿಕ್‌ ಆರ್ಯನ್‌, ಭುವನ್‌ ಭಮ್‌, ಶಿರ್ಲೆ ಸೆಟಿಯಾ, ರಾಫ್ತರ್, ಶಶಿ ತರೂರ್‌, ರಣ್‌ ವಿಜಯ್‌, ಮುಂಬಿಕರ್ ನಿಖಿಲ್, ಮಿಸ್‌ ಮಾಲಿನಿ, ಸವ್ಯಸಾಚಿ, ಸುನೀಲ್‌ ಚೆಟ್ಟೀರ್ ಸೇರಿ ಒಟ್ಟು 40 ಮಂದಿ ಸಾಧಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ತಮ್ಮ ಸಾಧನೆಯ ಹಾದಿಯ ಬಗ್ಗೆ ಮೆಲುಕು ಹಾಕಲಿದ್ದಾರೆ.

ನೆನಪಿರಲಿ: 6ನೇ ಆವೃತ್ತಿ ಉತ್ಸವ ದಿನಾಂಕ: ಫೆಬ್ರುವರಿ 2, 3

ಸ್ಥಳ: ಜಯಮಹಲ್‌ ಪ್ಯಾಲೆಸ್‌

ಯುವ ಹಬ್ಬದ ಬಗ್ಗೆ ಇನ್ನಷ್ಟು

ಹೆಚ್ಚಿನ ಮಾಹಿತಿಗೆ: https://www.instagram.com/under25official/

**

ಈ ಬೃಹತ್‌ ಹಬ್ಬ ಪ್ರತಿ ವರ್ಷ ಬೆಂಗಳೂರಿನಲ್ಲಿ ನಡೆಯುತ್ತದೆ. ಈ 6ನೇ ಆವೃತ್ತಿಯ ‘ಅಂಡರ್‌ 25’ ಉತ್ಸವಕ್ಕೆ 20 ಸಾವಿರಕ್ಕೂ ಹೆಚ್ಚು ಯುವ ಸಮೂಹ ಸೇರುವ ನಿರೀಕ್ಷೆ ಇದೆ.
- ಆ್ಯಂಟೊ ಫಿಲಿಪ್‌, ಸಂಸ್ಥೆಯ ಒಬ್ಬ ಸಂಸ್ಥಾಪಕ

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !