ಶನಿವಾರ, ನವೆಂಬರ್ 23, 2019
18 °C

ದಯವೇ ಇಲ್ಲಿನ ಧರ್ಮ: ನಿರ್ಗತಿಕರ ಕೇಂದ್ರದ ಬಾಗಿಲು ಸದಾ ಮುಕ್ತ!

Published:
Updated:
Prajavani

ಮನೆಯವರ ಅನಾದರದಿಂದ ಮನೆ ತೊರೆದ ವೃದ್ಧರು, ವ್ಯಾಪಾರದಲ್ಲಿ ನಷ್ಟ ಅನುಭವಿಸಿ ದೇಶಾಂತರ ಹೊರಟವರು, ಸಾಲ ಮಾಡಿ ಊರು ಬಿಟ್ಟವರು, ಪತ್ನಿ ಸಾವಿನಿಂದ ಏಕಾಂಗಿಯಾದವರು, ಅಲೆಮಾರಿಗಳು, ಅನಾಥರು.. ಇವರೆಲ್ಲರಿಗೂ ನಗರದಲ್ಲಿ ಉಚಿತ ಅನ್ನ ಮತ್ತು ಆಶ್ರಯದ ಜತೆಗೆ ಮಾನಸಿಕ ನೆಮ್ಮದಿ ನೀಡುವ ತಾಣವೊಂದಿದೆ. ಅದುವೇ ‘ಅರ್ಬನ್‌ ಹೋಮ್‌ಲೆಸ್‌ ಶೆಲ್ಟರ್‌’. 

ನಿರ್ಗತಿಕರು ಮತ್ತು ನಿರಾಶ್ರಿತರು ರಾತ್ರಿ ಹೊಟ್ಟೆ ತುಂಬಾ ಊಟ ಮತ್ತು ಕಣ್ತುಂಬ ನಿದ್ದೆ ಮಾಡುವಂತಾಗಬೇಕು ಎಂಬ ಮಹದಾಸೆಯೊಂದಿಗೆ ಡ್ರೀಮ್ ಇಂಡಿಯಾ ನೆಟ್‌ವರ್ಕ್‌ ಸರ್ಕಾರೇತರ ಸಂಸ್ಥೆ ‘ಅರ್ಬನ್‌ ಹೋಮ್‌ಲೆಸ್‌ ಶೆಲ್ಟರ್‌’ ಎಂಬ ನಿರ್ಗತಿಕರ ಕೇಂದ್ರ ಆರಂಭಿಸಿದೆ.

ಈಸ್ಟರ್‌ ಹಬ್ಬದಂದು (ಏಪ್ರಿಲ್‌ 21) ಆರಂಭವಾಗಿರುವ ಆಶ್ರಮದಲ್ಲಿ ಇದುವರೆಗೂ ನೂರಾರು ಜನರು ಆಶ್ರಯ ಪಡೆದಿದ್ದಾರೆ. ಮಳೆ, ಗಾಳಿ, ಚಳಿಯಲ್ಲಿ ಬಸ್‌ ತಂಗುದಾಣ, ಫುಟ್‌ಪಾತ್‌ ಮೂಲೆಗಳಲ್ಲಿ ಮಲಗುತ್ತಿದ್ದ ಹಲವಾರು ನಿರ್ಗತಿಕರು ಈ ಕೇಂದ್ರದಲ್ಲಿ ಉಚಿತವಾಗಿ ಹೊಟ್ಟೆ ತುಂಬ ರಾತ್ರಿಯೂಟ ಮತ್ತು ಕಣ್ತುಂಬ ನಿದ್ದೆ ಮಾಡುತ್ತಿದ್ದಾರೆ. 


ಡಾರ್ಮಿಟರಿಯಲ್ಲಿಯೇ ಪುಟ್ಟದೊಂದು ವಾಕ್‌...

ನಂದಿದುರ್ಗ ಮತ್ತು ಮಿಲ್ಲರ್ಸ್‌ ರಸ್ತೆಯ ಆರ್ಚ್‌ ಬಿಷಪ್ ನಿವಾಸದ ಆವರಣದಲ್ಲಿರುವ ಈ ಕೇಂದ್ರದ ಬಾಗಿಲು ದೀನರಿಗಾಗಿ ಸದಾ ತೆರೆದಿರುತ್ತದೆ. ಬಾಗಿಲು ಬಳಿ ಕರೆಗಂಟೆಯೊಂದಿದೆ. ದಿನದ 24 ಗಂಟೆಯಲ್ಲಿ ಯಾವಾಗ ಬೇಕಾದರೂ ಈ ಕರೆಗಂಟೆ ಒತ್ತಿದರೆ ಸಾಕು. ಇಲ್ಲಿಯ ಸಿಬ್ಬಂದಿ ಸೇವೆ ಸಿದ್ಧರಾಗಿರುತ್ತಾರೆ.  

ಇದಕ್ಕಾಗಿ ಸಂಸ್ಥೆ ನಿರ್ಗತಿಕರಿಂದ ಯಾವುದೇ ಶುಲ್ಕ ಪಡೆಯುತ್ತಿಲ್ಲ! ಇದರ ಸಂಪೂರ್ಣ ಶ್ರೇಯ ಆರ್ಚ್‌ ಬಿಷಪ್‌ ಡಾ. ಪೀಟರ್‌ ಮಚಾಡೊ ಮತ್ತು ಡ್ರೀಮ್‌ ಇಂಡಿಯಾ ನೆಟ್‌ವರ್ಕ್‌ ನಿರ್ದೇಶಕ ಫಾದರ್‌ ಎಡ್ವರ್ಡ್‌ ಥಾಮಸ್‌ ಅವರಿಗೆ ಸಲ್ಲುಬೇಕು.

ಸ್ವಚ್ಛ ಹಾಸಿಗೆ, ಹೊದಿಕೆ, ಸ್ನಾನಕ್ಕೆ ಬಿಸಿನೀರು
ಡಾರ್ಮಿಟರಿಯಲ್ಲಿ 20 ಮಂಚಗಳಿವೆ. ಗಾದಿ, ಸ್ವಚ್ಛ ಹೊದಿಕೆ, ಕುಡಿಯಲು ನೀರು, ಫ್ಯಾನ್‌, ಸುಸಜ್ಜಿತ ಶೌಚಾಲಯಗಳಿವೆ. ಸ್ನಾನಕ್ಕೆ ಬಿಸಿನೀರು!

ಬಟ್ಟೆ ತೊಳೆದುಕೊಳ್ಳಲು ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಪ್ರತಿಯೊಬ್ಬರಿಗೂ ಪ್ರತ್ಯೇಕ ಲಾಕರ್‌ ಇದ್ದು, ಬೀಗ ನೀಡಲಾಗುತ್ತದೆ. ಸಾಕಷ್ಟು ಗಾಳಿ, ಬೆಳಕು ಇರುವ ವಿಶಾಲವಾದ ಹಾಲ್‌ನಲ್ಲಿ ಸಂಜೆ ಹೊತ್ತು ಕುಳಿತು ಹರಟೆ ಹೊಡೆಯಬಹುದು. ಬೇಸರವಾದರೆ ಓದಲು ಪತ್ರಿಕೆಗಳಿರುತ್ತವೆ. ವೃದ್ಧರು, ಅನಾರೋಗ್ಯಪೀಡಿತರಿಗೆ ಆಸ್ಪತ್ರೆಗೆ ಕರೆದೊಯ್ಯಲು ಸಂಸ್ಥೆಯ ಆಂಬುಲೆನ್ಸ್‌ ಸದಾ ಸಿದ್ಧವಾಗಿರುತ್ತದೆ.


ಕೇಂದ್ರದಲ್ಲಿರುವ ನಿರ್ಗತಿಕರ ಜತೆ ಸಂಯೋಜಕ ಚಂದ್ರು (ಮಧ್ಯದಲ್ಲಿರುವವರು)

ರಾತ್ರಿ ಹೊತ್ತು ಪಕ್ಕದ ಹೋಟೆಲ್‌ನಿಂದ ಊಟ ಬರುತ್ತದೆ. ಪ್ರತಿ ರಾತ್ರಿ ಊಟಕ್ಕೆ ಅನ್ನ, ಸಾಂಬಾರ್, ರಸಂ, ಚಪಾತಿ, ಪಲ್ಯ,  ಹಪ್ಪಳ, ಉಪ್ಪಿನಕಾಯಿ ಇರುತ್ತದೆ. ಕೆಲವೊಮ್ಮೆ ಚಪಾತಿ ಬದಲು ಪರೋಟಾ, ಮುದ್ದೆ, ಸೆಟ್‌ ದೋಸೆ, ಪಾಯಸ, ನೂಡಲ್ಸ್‌ ವಿಭಿನ್ನ ಖಾದ್ಯಗಳಿರುತ್ತವೆ.

‘ಸದ್ಯ ಈ ನಿರ್ಗತಿಕರ ಕೇಂದ್ರದಲ್ಲಿ 18 ಜನರಿದ್ದಾರೆ. ಮುಂದಿನ ದಿನಗಳಲ್ಲಿ ಮಹಿಳೆಯರಿಗೂ ಪ್ರತ್ಯೇಕ ಕೇಂದ್ರ ತೆರೆಯುವ ಯೋಚನೆ ಇದೆ. ರಾತ್ರಿ ಮಿಕ್ಕಿ ಉಳಿದ ಆಹಾರ ಚೆನ್ನಾಗಿದ್ದರೆ ಬೆಳಿಗ್ಗೆ ಉಪಾಹಾರ ಮಾಡುತ್ತಾರೆ. ನಿತ್ಯ ಉಪಾಹಾರ ಮತ್ತು ಮಧ್ಯಾಹ್ನದ ಊಟ ನೀಡುವ ಆಲೋಚನೆ ಇದ್ದು, ಯಾರಾದರೂ ಪ್ರಾಯೋಜಕರು ಮುಂದೆ ಬಂದರೆ ಅನುಕೂಲವಾಗುತ್ತದೆ’ ಎನ್ನುತ್ತಾರೆ ಆಶ್ರಮದ ಮೇಲುಸ್ತುವಾರಿ ಹೊತ್ತಿರುವ ಡ್ರೀಮ್‌ ಇಂಡಿಯಾ ನೆಟ್‌ವರ್ಕ್‌ ಸಂಯೋಜಕ ಚಂದ್ರು.

ಭಗ್ನಪ್ರೇಮಿಗಳೂ ಬರುತ್ತಾರೆ!
ಇಲ್ಲಿಗೆ ಬರುವ ಪ್ರತಿಯೊಬ್ಬರ ಕತೆಗಳೂ ವಿಭಿನ್ನ. ಪ್ರತಿಯೊಬ್ಬರೂ ನೋವು ಉಂಡವರೇ!

ಜಗಳ ಮಾಡಿಕೊಂಡು ಮನೆ ಬಿಟ್ಟು ಬಂದವರು, ವ್ಯವಹಾರದಲ್ಲಿ ನಷ್ಟ ಅನುಭವಿಸಿದವರು, ಮನೆಯವರ ಅನಾದರಕ್ಕೆ ಒಳಗಾದವರು, ಪತ್ನಿ ಸತ್ತ ನಂತರ ಏಕಾಂಗಿಯಾದವರು ಮತ್ತು ಭಗ್ನಪ್ರೇಮಿಗಳು ಇಲ್ಲಿಗೆ ಬಂದಿದ್ದಾರೆ. ಇಷ್ಟವಾದಷ್ಟು ದಿನ ಇದ್ದು, ಮರಳಿ ಹೋಗಿದ್ದಾರೆ. ಇರುವಷ್ಟು ದಿನ ಅವರನ್ನು ಚೆನ್ನಾಗಿ ನೋಡಿಕೊಳ್ಳಲಾಗಿದೆ. ಹೊರಟು ನಿಂತಾಗ ಸಂತೋಷದಿಂದ ಕಳಸಿಕೊಡಲಾಗಿದೆ. 

ಇಲ್ಲಿಗೆ ಬಂದು ಹೋದವರ ಎಲ್ಲ ದಾಖಲೆಗಳನ್ನು ಸಂಸ್ಥೆ ಸಂಗ್ರಹಿಸಿದೆ. ಇಲ್ಲಿಗೆ ಬಂದು ಹೋದ ಶೇ 60ರಷ್ಟು ಜನರು 40–60 ವರ್ಷ ವಯೋಮಾನದೊಳಗಿನವರು. ಶೇ 5–10ರಷ್ಟು ಜನರು 25–30 ವರ್ಷದೊಳಗಿನವರು.

ಏಪ್ರಿಲ್‌ನಿಂದ ಇಲ್ಲಿಯವರೆಗೂ ನಿರ್ಗತಿಕರ ಕೇಂದ್ರದಲ್ಲಿ 50–55 ಜನರು ಆಶ್ರಯ ಪಡೆದು ಹೋಗಿದ್ದಾರೆ. ಆ ಪೈಕಿ 18 ಜನರು ಇಲ್ಲಿಯೇ ಉಳಿದುಕೊಂಡಿದ್ದಾರೆ. ಮದ್ಯ ವ್ಯಸನಿಗಳು, ಖಿನ್ನತೆಯಿಂದ ಬಳಲುತ್ತಿರುವವವರು, ಮನೋರೋಗಿಗಳು ಹೆಚ್ಚು ದಿನ ಒಂದೇ ಕಡೆ ನೆಲೆ ನಿಲ್ಲುವುದಿಲ್ಲ ಎನ್ನುವುದು ಸಂಯೋಜಕ ಚಂದ್ರು ಅನುಭವದ ಮಾತು.
ಸಂಪರ್ಕ: 8123656021


ಡ್ರೀಮ್ ಇಂಡಿಯಾ ನೆಟ್ ವರ್ಕ್‌ನ ಅರ್ಬನ್ ಹೋಮ್‌ಲೆಸ್‌ ಶೆಲ್ಟರ್‌ನಲ್ಲಿ ವೃದ್ಧರು ಮತ್ತು ಅಂಗವಿಕಲರಿಗೆ ನೆರವು ನೀಡುತ್ತಿರುವ ಕೇಂದ್ರದ ಸಿಬ್ಬಂದಿ ಪ್ರಜಾವಾಣಿ ಚಿತ್ರ: ರಂಜು ಪಿ.

ಆಶ್ರಯದ ಜತೆ ಉದ್ಯೋಗ
ಇಲ್ಲಿ ಆಶ್ರಯ ಪಡೆದವರಲ್ಲಿ ಸೆಕ್ಯುರಿಟಿ ಗಾರ್ಡ್‌ಗಳು, ಕೇಟರಿಂಗ್‌, ಪೇಂಟಿಂಗ್‌, ಇಂದಿರಾ ಕ್ಯಾಂಟೀನ್‌ನಲ್ಲಿ ಕೆಲಸ ಮಾಡುವವರು, ನಿವೃತ್ತ ನೌಕರರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. 

ಹೆಚ್ಚಿನವರು ರಾತ್ರಿ ಮರಳುತ್ತಾರೆ.ಊಟ ಮಾಡಿ ಮಲಗಿ, ಬೆಳಿಗ್ಗೆ ಸ್ನಾನ ಮಾಡಿ ಕೆಲಸಕ್ಕೆ ಹೊರಟು ಹೋಗುತ್ತಾರೆ.ಇನ್ನೂ ಕೆಲವರು ಬೀದಿ ಬದಿ ವ್ಯಾಪಾರ ಮಾಡುತ್ತಾರೆ.

ನಿರುದ್ಯೋಗಿಗಳು ಆಶ್ರಮ ದಲ್ಲಿಯೇ ಉಳಿಯವುದಾದರೆ ಅವರಿಗೆ ಇಷ್ಟದ ಉದ್ಯೋಗ ಹುಡುಕಿಕೊಡಲಾಗುತ್ತದೆ. ಉದ್ಯೋಗ ಹುಡುಕುವವರಿಗೆ ಅಗತ್ಯ ನೆರವು, ಮಾರ್ಗದರ್ಶನ ನೀಡಲಾಗುತ್ತದೆ. ಮಾನಸಿಕ ಸಮಸ್ಯೆಗಳು ಕಂಡು ಬಂದರೆ  ತಜ್ಞರಿಂದ ಆಪ್ತ ಸಮಾಲೋಚನೆ ಮಾಡಿಸಲಾಗುತ್ತದೆ.

ರಾತ್ರಿ ಹೊತ್ತು ನಿರ್ಗತಿಕರ ಸಮೀಕ್ಷೆ
ಆರ್ಚ್ ಬಿಷಪ್‌ ಮಚಾಡೊ ಮತ್ತು ಡ್ರೀಮ್ ಇಂಡಿಯಾ ನೆಟ್‌ವರ್ಕ್‌ ಸಂಸ್ಥೆ ನಿರ್ದೇಶಕ ಫಾದರ್‌ ಎಡ್ವರ್ಡ್‌ ಥಾಮಸ್‌ ಕಳೆದ ವರ್ಷ ಎನ್‌ಜಿಒ ಮತ್ತು ಆಪ್ತರ ನೆರವಿನಿಂದ ರಾತ್ರಿಹೊತ್ತು ಬೀದಿಯಲ್ಲಿ ಮಲಗುವ ನಿರ್ಗತಿಕರ ಸಮೀಕ್ಷೆ ನಡೆಸಿದ್ದರು. ಅದರ ಫಲವಾಗಿ ಜನ್ಮತಾಳಿದ್ದೇ ಈ ಅರ್ಬನ್‌ ಹೋಮ್‌ಲೆಸ್‌ ಶೆಲ್ಟರ್‌.

ಪ್ರಾಯೋಗಿಕವಾಗಿ ತೆರೆಯಲಾಗಿರುವ ಈ ಕೇಂದ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದರಿಂದ ಪ್ರೇರಿತರಾಗಿರುವ ಎಡ್ವರ್ಡ್‌ ಥಾಮಸ್‌ ಅವರು ಬಿಬಿಎಂಪಿ ಸಹಯೋಗದಲ್ಲಿ ವರ್ಷಾಂತ್ಯದ ವೇಳೆಗೆ ನಗರದಲ್ಲಿ 40ಕ್ಕೂ ಹೆಚ್ಚು ಇಂತಹ ನಿರ್ಗತಿಕರ ಕೇಂದ್ರಗಳನ್ನು ತೆರೆಯುವ ಯೋಚನೆ ಮಾಡಿದ್ದಾರಂತೆ. 

ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಿಬಿಎಂಪಿಗೆ ಯೋಜನಾ ವರದಿ ಸಲ್ಲಿಸಲಾಗಿದೆ. ಎಲ್ಲವೂ ಅಂದುಕೊಂಡಂತೆ ನಡೆದರೆ ವರ್ಷದಲ್ಲಿ ರಾಜ್ಯದಾದ್ಯಂತ ನೂರಕ್ಕೂ ಹೆಚ್ಚು ನಿರ್ಗತಿಕರ ಕೇಂದ್ರ ತಲೆ ಎತ್ತಲಿವೆ.

 **

ಅನಾಥರು ಮತ್ತು ನಿರ್ಗತಿಕರಿಗೆ ಈ ಕೇಂದ್ರದ ಬಾಗಿಲು ಸದಾ ತೆರೆದಿರುತ್ತದೆ. ಅದೇ ರೀತಿ ನಮ್ಮ ಹೃದಯದ ಬಾಗಿಲು ಕೂಡ ತೆರೆದಿರುತ್ತದೆ.
–ಫಾದರ್‌ ಎಡ್ವರ್ಡ್‌ ಥಾಮಸ್‌ 

**
ನೋವುಂಡು ಇಲ್ಲಿಗೆ ಬರುವವರನ್ನು ಮನೆಯವರಂತೆ ಆದರ, ಆತಿಥ್ಯದಿಂದ ನೋಡಿಕೊಳ್ಳಲಾಗುತ್ತದೆ. ಮನೆಗೆ ಹೋಗಬೇಕು ಎನ್ನುವವರನ್ನು ಸಂತೋಷದಿಂದ ಬೀಳ್ಕೊಡಲಾಗುತ್ತದೆ.
– ಚಂದ್ರು, ಅರ್ಬನ್‌ ಹೋಮ್‌ಲೆಸ್‌ ಶೆಲ್ಟರ್‌ ಉಸ್ತುವಾರಿ

**
ಬಿ.ಎ. ಓದಿದ್ದೇನೆ. ಊರಿನಲ್ಲಿ ಕೆಲಸ ಇರಲಿಲ್ಲ. ಸ್ನೇಹಿತ ಪುರುಷೋತ್ತಮ ಮತ್ತು ನಾನು ಬೆಂಗಳೂರಿಗೆ ಬಂದು ಕೆಟರಿಂಗ್ ಕೆಲಸ ಮಾಡಿಕೊಂಡಿದ್ದೇವೆ. ಮಲಗಲು ಜಾಗ ಇರಲಿಲ್ಲ.ಯಾರೋ ಈ ಕೇಂದ್ರದ ಬಗ್ಗೆ ತಿಳಿಸಿದರು. ಇಬ್ಬರೂ ಇಲ್ಲಿಗೆ ಬಂದು ಸೇರಿದ್ದೇವೆ. ಹಗಲು ಹೊತ್ತು ಕೆಟರಿಂಗ್‌ ಕೆಲಸ ಮಾಡುತ್ತೇವೆ. ಕೆಟರಿಂಗ್‌ ಕೆಲಸ ಇಲ್ಲದಿದ್ದರೆ ಮಧ್ಯಾಹ್ನ ದೇವಸ್ಥಾನ, ಗುರುದ್ವಾರಗಳಲ್ಲಿ ಊಟವಾಗುತ್ತದೆ. ರಾತ್ರಿ ಇಲ್ಲಿಗೆ ಬಂದು ಊಟ ಮಾಡಿ ಮಲಗುತ್ತೇವೆ.
– ಜಗದೀಶ್‌, ಚಿಕ್ಕಮಗಳೂರು

ಪ್ರತಿಕ್ರಿಯಿಸಿ (+)