ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೃಜನೇತರ ಸಾಹಿತ್ಯದ ಭರವಸೆ ವೆಂಕಟಗಿರಿ ದಳವಾಯಿ

Last Updated 1 ಸೆಪ್ಟೆಂಬರ್ 2018, 19:30 IST
ಅಕ್ಷರ ಗಾತ್ರ

ಸಮೂಹ ಮಾಧ್ಯಮಗಳು ಮೇಲುಗೈ ಪಡೆಯುತ್ತಿರುವ ಇಂದಿನ ದಿನಮಾನದಲ್ಲಿ ಸೃಜನೇತರ ಸಾಹಿತ್ಯವು ಪಡೆದುಕೊಳ್ಳುತ್ತಿರುವ ಹಿರಿತನ ಗಮನಾರ್ಹವಾದುದು. ಅಂಕಣ ಬರಹಗಳು, ಲೇಖನಗಳು, ಗದ್ಯ, ಪ್ರಬಂಧಗಳು, ವಿಮರ್ಶೆಗಳು, ಸಾಮಾಜಿಕ ಚಿಂತನೆಯ ವಿಚಾರಗಳು, ಸಂಶೋಧನಾ ನಿಬಂಧಗಳು ಕನ್ನಡ ಸಾಹಿತ್ಯವನ್ನು ಈಗ ಶ್ರೀಮಂತಗೊಳಿಸುತ್ತಿವೆ. ಸಮಾಜದ ವಿವಿಧ ರಂಗಗಳನ್ನು ಪ್ರತಿನಿಧಿಸುವ ಬರಹಗಾರರು ಕನ್ನಡ ಸಾಹಿತ್ಯಕ್ಕೆ ಹೊಸ ಬರವಣಿಗೆಯ ಮೂಲಕ ವಿಭಿನ್ನ ಆಯಾಮಗಳನ್ನು ನೀಡುತ್ತಿದ್ದಾರೆ. ಸೃಜನೇತರ ಸಾಹಿತ್ಯಕ್ಕೂ ಮನ್ನಣೆ ಲಭಿಸಬೇಕಾದ ತುರ್ತಿದೆ.

ಬೆಂಗಳೂರಿನ ಡಾ.ನರಹಳ್ಳಿ ಪ್ರತಿಷ್ಠಾನವು ಈ ನಿಟ್ಟಿನಿಂದ ಚರ್ಚಿಸಿ 2018ರ ಸಾಲಿನ ನರಹಳ್ಳಿ ಪ್ರಶಸ್ತಿಯನ್ನು ವಿಮರ್ಶಾ ವಲಯಕ್ಕೆ ನೀಡುತ್ತಿದೆ. ಈಗಾಗಲೇ, ಕವಿಗಳಾದ ಟಿ. ಎಲ್ಲಪ್ಪ (2014), ಪಿ. ಚಂದ್ರಿಕಾ (2015), ಕವಯತ್ರಿ ಹಾಗೂ ಕತೆಗಾರ್ತಿ ಡಾ.ವಿನಯಾ ಒಕ್ಕುಂದ (2016) ಹಾಗೂ ಕಾದಂಬರಿಕಾರರಾದ ಎಂ.ಆರ್. ದತ್ತಾತ್ರಿ(2017) ಅವರಿಗೆ ನರಹಳ್ಳಿ ಪ್ರಶಸ್ತಿ ಲಭಿಸಿದೆ. ಈ ಸಾಲಿನ ನರಹಳ್ಳಿ ಪ್ರಶಿಸ್ತಿಗೆ ಭಾಜನರಾಗುತ್ತಿರುವವರು ಡಾ.ವೆಂಕಟಗಿರಿ ದಳವಾಯಿಯವರು. ಸಂಶೋಧನಾತ್ಮಕ ಪ್ರವೃತ್ತಿ ಉಳ್ಳ ಭರವಸೆಯ ವಿಮರ್ಶಕರು. ವಿಮರ್ಶಾ ಲೇಖನಗಳಲ್ಲಿ ಸಂಶೋಧನೆಯ ಅಂಶಗಳನ್ನು ಮೇಳೈಸುವ ಇವರ ಪರಿ ವಿಶಿಷ್ಟವಾದದ್ದು, ಕನ್ನಡದ ಹಳೆಯ ಸಾಹಿತ್ಯ ಕೃತಿಗಳ ಬಗ್ಗೆ ಗೌರವ, ಶ್ರದ್ಧೆ ಹಾಗೇ ಹೊಸದಾಗಿ ಬರುತ್ತಿರುವ ಸಾಹಿತ್ಯ ಕೃತಿಗಳ ಬಗ್ಗೆ ಒಲವು, ಮೆಚ್ಚುಗೆಗಳು ಇವರ ಓದಿನ ಧೋರಣೆ. ವಿಭಿನ್ನ ಮನೋಧರ್ಮದಿಂದ, ವಿಶಿಷ್ಟ ಚಿಂತನೆಗಳಿಂದ ಹಾಗೂ ವಿನೂತನ ಬರವಣಿಗೆಯ ಮಾದರಿಗಳಿಂದ ದಳವಾಯಿಯವರು ಖ್ಯಾತರಾಗಿದ್ದಾರೆ.

ವೆಂಕಟಗಿರಿ ದಳವಾಯಿಯವರು ಹತ್ತಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಅವುಗಳಲ್ಲಿ ವಿಮರ್ಶೆಗಳದ್ದೇ ಸಿಂಹಪಾಲು. ‘ನಾನು ನೀನು ಆನು’, ‘ಮೇಲೊಂದು ಗರುಡ’, ‘ಇದು ಹೇಳಲು ಬಾರದು’, ‘ಅಪ್ರಮಾಣ’, ‘ಕಪ್ಪು ವ್ಯಾಕರಣ’ ಇವರ ವಿಮರ್ಶಾ ಸಂಕಲನಗಳು. ಇವರ ಕನಕದಾಸರ ಜೀವನ ಚರಿತ್ರೆ ಎಂಬುದು ಶ್ರೀಕಾಗಿನೆಲೆ ಮಹಾಸಂಸ್ಥಾನದವರ ಅಧಿಕೃತ ಪ್ರಕಟಣೆ. ಸಂಶೋಧನೆ ಹಾಗೂ ವಿಮರ್ಶೆಯ ಸಮಪಾಕ ಅಲ್ಲಿದೆ. ಬಳ್ಳಾರಿ ಜಿಲ್ಲೆಯ ಸಮಕಾಲೀನ ಕಾವ್ಯ ಇವರ ಸಂಪ್ರಬಂಧವಾದರೆ ‘ಕನ್ನಡ ರಂಗಭೂಮಿ ಮತ್ತು ಮಹಿಳೆ’ ಎಂಬುದು ಪ್ರೌಢಪ್ರಬಂಧವಾಗಿದೆ.

ಇವೆರಡೂ ಕೃತಿಗಳಲ್ಲಿ ಅಕಾಡೆಮಿಕ್‌ ಶಿಸ್ತನ್ನು ಹಾಗೂ ತಲಸ್ಪರ್ಶಿ ಅಧ್ಯಯನ ಕಾಣಬಹುದು. ಗದ್ಯ ಮಾತ್ರವಲ್ಲದೆ ಪದ್ಯದಲ್ಲೂ ಕೃಷಿ ಮಾಡಿರುವ ದಳವಾಯಿಯವರು ‘ಅಪಮಾನಗಳಿಗಿಲ್ಲ ವಿರಾಮ’ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಇದಕ್ಕೆ ಕನ್ನಡ ಸಾಹಿತ್ಯ ಅಕಾಡೆಮಿಯ ಯುವಕವಿ ಪ್ರಶಸ್ತಿ ಹಾಗೂ ಬಿ.ಎಂ.ಶ್ರೀ ಕಾವ್ಯಪ್ರಶಸ್ತಿ ಲಭಿಸಿದೆ. ಮನುಜ ಪರ ಕಾಳಜಿಯೇ ಇವರ ಕವನಗಳ ಹಿಂದಿರುವ ಸತ್ವವಾಗಿದೆ. ಹಾಗೆ ನೋಡ ಹೋದರೆ ವೆಂಕಟಗಿರಿ ದಳವಾಯಿಯವರ ಲೇಖನಗಳಲ್ಲೂ ಈ ಮಿಡಿತಗಳನ್ನು ಗುರುತಿಸಬಹುದು. ಶೋಷಿತರ, ದಮನಿತರ ಬಗ್ಗೆ ಪ್ರೀತಿ, ತುಡಿತಗಳು, ಅಲ್ಲಿ ಢಾಳಾಗಿ ಕಂಡು ಬರುತ್ತವೆ. ಸಕಾರಾತ್ಮಕವಾದ ದೃಷ್ಟಿಯನ್ನು ಇಟ್ಟುಕೊಂಡು, ಸಹೃದಯ ಭಾವದಿಂದ ವಿಶ್ಲೇಷಣೆಗೆ ಹೊರಡುವುದು, ಅರಿವಿನ ಶೋಧವನ್ನು ನಡೆಸುವುದು ವೆಂಕಟಗಿರಿಯವರ ಜಾಯಮಾನ.

ಕೃತಿ ವಿಮರ್ಶೆಗೆ ಮೊದಲು ಸಂಗತಿಯನ್ನು ಗ್ರಹಿಸುವಲ್ಲೇ ಸಮಾಧಾನ ಚಿತ್ತವನ್ನು ಇಟ್ಟುಕೊಂಡು, ಆಕ್ರೋಶವಿಲ್ಲದೆ, ಹದವಾದ ನುಡಿಗಟ್ಟುಗಳ ಮೂಲಕ ತಿಳಿಯಾದ ಭಾಷೆಯಲ್ಲಿ ನಿರೂಪಿಸುವ ಶಕ್ತಿ ಇವರ ಬರಹಗಳಿಗೆ ಲಭಿಸಿದೆ. ಅವರು ಆರಿಸಿಕೊಳ್ಳುವ ವಸ್ತುಗಳು ಕೂಡ ವೈವಿಧ್ಯಮಯ. ರನ್ನ ಕವಿಯಿಂದ ಹಿಡಿದು ಸತ್ಯಾನಂದ ಪಾತ್ರೋಟರ ವರೆಗಿನ ಕಾವ್ಯ ವಿಶೇಷಗಳು, ವಚನ ಮತ್ತು ದಾಸ ಸಾಹಿತ್ಯಗಳಿಂದ ಪ್ರಾರಂಭಿಸಿ ಬಂಡಾಯ ಸಾಹಿತ್ಯದವರೆಗಿನ ಸಾಹಿತ್ಯ ಚಳವಳಿಗಳು ಇವರ ವಿಮರ್ಶೆಗಳಿಗೆ ವಸ್ತುವಾಗಿವೆ.

ಇದೇ ರೀತಿ ವಾಲ್ಮೀಕಿ, ಕನಕದಾಸ, ವಿವೇಕಾನಂದ, ಅಂಬೇಡ್ಕರ್, ಲೋಹಿಯಾ, ಸಂಸ, ಚಂಪಾ ಎಲ್ಲರ ವಿಚಾರಗಳನ್ನು ಸಮತ್ವದ ಮನಸ್ಸಿನಿಂದ ಪರಿಭಾವಿಸಿ ಅಲ್ಲಿನ ತತ್ವ ಹಾಗೂ ಸತ್ಯಗಳನ್ನು ಮರು ಪ್ರಜ್ವಲಿಸುವ ಕಾಯಕವನ್ನು ಇವರು ನಡೆಸಿದ್ದಾರೆ. ದಲಿತ ಹಾಗೂ ಬಂಡಾಯ ಚಳವಳಿಗಳ ಕುರಿತ ಚರ್ಚೆಗಳಲ್ಲಿ ಅವರು ಎತ್ತುವ ಪ್ರಶ್ನೆಗಳು, ಸಮದರ್ಶನವಾದ ನಿಲುವುಗಳು ಕನ್ನಡ ವಿಮರ್ಶಾವಲಯಕ್ಕೆ ನಾವೀನ್ಯವನ್ನು ತಂದಿದೆ. ನಿತ್ಯದ ಬದುಕಿನ ಸಂಕಟಕ್ಕೆ ರಸ ಸಿದ್ಧಾಂತವು ಪರಿಹಾರವಾಗಬೇಕಾದರೆ ದೇಸಿ ಮಿಮಾಂಸೆ ಅಗತ್ಯವಿದೆ ಎಂಬ ಚಿಂತಕರ ನಿಲುವುಗಳ ಹಿನ್ನೆಲೆಯಲ್ಲಿ ದಳವಾಯಿಯವರ ವಿಮರ್ಶೆಯ ಮಹತ್ವದ ಅರಿವಾಗುತ್ತದೆ.

ದಳವಾಯಿ ವೀರಣ್ಣ ಹಾಗೂ ಗಿರಿಯಮ್ಮನವರ ಮಗನಾಗಿ ಜನಿಸಿರುವ ವೆಂಕಟಗಿರಿಯವರ ಮನೆಮಾತು ತೆಲುಗು. ಆದರೆ, ಸಾಹಿತ್ಯ ಕೃಷಿ ಮಾಡುತ್ತಿರುವುದು ಕನ್ನಡದಲ್ಲಿ. ಬಳ್ಳಾರಿ ಇವರ ತವರು ನೆಲ. ಅಲ್ಲಿನ, ಅದರಲ್ಲೂ ಗಣಿನಾಡಿನ ಸಾಂಸ್ಕೃತಿಕ ತಲ್ಲಣ, ಅಲ್ಲಿನ ಕಾವ್ಯ ವೈಶಿಷ್ಟ್ಯ, ಕನ್ನಡದ ಅಭಿಮಾನಕ್ಕೆ ಅವರುದನಿಯಾಗಿದ್ದಾರೆ.

ದಟ್ಟ ಅನುಭವಗಳ ಮೂಲಕ ಸ್ಪಷ್ಟ ವಿಚಾರಧಾರೆಯನ್ನು ಬಳ್ಳಾರಿ ಸೀಮೆಯ ಬಗ್ಗೆ ತಮ್ಮ ಲೇಖನಗಳಲ್ಲಿ ಪಡಿಮೂಡಿಸಿದ್ದಾರೆ. ಇವರ ಸ್ತ್ರೀಪರವಾದ ಚಿಂತನೆಗಳು, ಸಾಮಾಜಿಕ ಅಸಮಾನತೆ ಬಗೆಗಿನ ಚಿಂತನೆಗಳು ಒಳನೋಟಗಳಿಂದ ಕೂಡಿದ್ದು ಸಮಸ್ಯೆಯ ಭಿನ್ನ ಮಗ್ಗುಲುಗಳನ್ನು ಪರಿಚಯಿಸುತ್ತವೆ. ವಿಮರ್ಶಾ ಲೇಖನಗಳನ್ನು ಮಾತ್ರವಲ್ಲದೆ ಹಲವಾರು ರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ, ಸಾಹಿತ್ಯದ ಚರ್ಚೆಗಳಲ್ಲಿ ಭಾಗವಹಿಸಿ ಉತ್ತಮ ವಾಗ್ಮಿಯಾಗಿ ಹೆಸರು ಮಾಡಿದ್ದಾರೆ. ಪ್ರಸಕ್ತ ಹಂಪಿಯ ಕನ್ನಡ ವಿಶ್ವವಿದ್ಯಾಲಯದ ಸಾಹಿತ್ಯ ಅಧ್ಯಯನ ವಿಭಾಗದಲ್ಲಿ ಸಹಪ್ರಾಧ್ಯಾಪಕರಾಗಿ ದುಡಿಯುತ್ತಿದ್ದಾರೆ. ಹೀಗೆ ಸಂಶೋಧಕರಾಗಿ ಲೇಖನಿ ಹಿಡಿದ ವೆಂಕಟಗಿರಿ ದಳವಾಯಿಯವರು ಸೋಪಜ್ಞ ವಿಮರ್ಶಕರಾಗಿ, ಹರಿತ ಚಿಂತಕರಾಗಿ ಬೆಳೆದು ಕನ್ನಡ ಸಾಹಿತ್ಯವಲಯದಲ್ಲಿ ಚಿರಪರಿಚಿತರಾಗಿದ್ದಾರೆ.

**

ಮಹಿಳೆಯರ ನೋವು, ಸಂಕಟಗಳ ಬಗ್ಗೆ, ಅವರ ಪರಿಶ್ರಮಗಳ ಬಗ್ಗೆ ಸಹಾನುಭೂತಿಯಿಂದ ಕೂಡಿದ ಲೇಖನಗಳು ಇವರ ಲೇಖನಿಯ ಮೂಸೆಯಲ್ಲಿ ಅರಳಿವೆ.

ಹಾಗೆ ನೋಡ ಹೋದರೆ ಇವರ ಪ್ರೌಢಪ್ರಬಂಧದ ವಸ್ತುವೇ ರಂಗಭೂಮಿ ಮತ್ತು ಮಹಿಳೆಯಾಗಿದ್ದು ಮಹಿಳೆಯರ ನಾನಾ ಶೋಷಣೆಗಳ ಬಗ್ಗೆ ಬರೆದ ಇವರ ಬರಹಗಳು ಪುರುಷಶ್ರೇಷ್ಠರ ಕಣ್ಣು ತೆರೆಸುವಂತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT