ಸರ್ಕಾರಕ್ಕೆ ಶತದಿನೋತ್ಸವ...

7

ಸರ್ಕಾರಕ್ಕೆ ಶತದಿನೋತ್ಸವ...

Published:
Updated:
Deccan Herald

ಸಮ್ಮಿಶ್ರ ಸರ್ಕಾರಕ್ಕೆ ನೂರು ದಿವಸಗಳಾದ ಪ್ರಯುಕ್ತ ಸಂಪಾದಕರು ಓದುಗಪ್ರಭುಗಳಿಂದ ಅನಿಸಿಕೆಗಳನ್ನು ಆಹ್ವಾನಿಸಲು ನಿರ್ಧರಿಸಿ ಪ್ರಕಟಣೆ ನೀಡಿದ್ದೇ ತಡ, ರಾಶಿ ರಾಶಿ ಅಕ್ಷರಗಳು ಸಂಪಾದಕರ ಎದೆಗೆ ಬಂದು ಬಿದ್ದವು. ಕೆಲವು ಸ್ಯಾಂಪಲ್ಲುಗಳು ಇಲ್ಲಿವೆ ನೋಡಿ...

ಮೊತ್ತ ಮೊದಲನೆಯದಾಗಿ ಈ ಸರ್ಕಾರಕ್ಕೆ ನೂರು ದಿವಸಗಳಾಗಿವೆ ಎಂದು ನಿಮಗೆ ಯಾರು ಹೇಳಿದ್ದು ಸ್ವಾಮಿ? ಪ್ರಮಾಣ ವಚನ ಸ್ವೀಕರಿಸಿ ನೂರು ದಿನಗಳಾಗಿರಬಹುದು. ಆದರೆ ಆಡಳಿತ ನಡೆಸುವುದಕ್ಕೆ ಒಂದು ತಿಂಗಳು ತೆಗೆದುಕೊಂಡಿರುವುದು ಸಮಸ್ತ ಕನ್ನಡಿಗರಿಗೆ ಗೊತ್ತಿಲ್ಲವೇ? ಅದರಲ್ಲೂ ನಮ್ಮ ಎಂಟನೇ ಕ್ಲಾಸಿನ ಮಿನಿಸ್ಟ್ರು ಕೆಲಸ ಆರಂಭಿಸಲು ಒಂದು ತಿಂಗಳಿಗಿಂತಲೂ ಹೆಚ್ಚು ಸಮಯ ತೆಗೆದುಕೊಂಡಿದ್ದಾರೆ. ಲಕಾಲಕಾಪಯೋಗಿ ಮಂತ್ರಿ ಇನ್ನೂ ಕೆಲಸ ಶುರು ಮಾಡಿದ್ದಾರೋ ಇಲ್ಲವೋ ಎಂದು ಸಂಶಯ.

ಕಂತ್ರೀಶ, ಚಿತ್ರದುರ್ಗ

ಮುಖ್ಯಮಂತ್ರಿಯವರು ತಮ್ಮ ಸಮ್ಮಿಶ್ರ ಸರ್ಕಾರ ‘ಶತದಿನೋತ್ಸವ’ ಆಚರಿಸುತ್ತದೆ ಎಂದು ಕನಸು ಮನಸಿನಲ್ಲೂ ಎಣಿಸಿರಲಿಕ್ಕಿಲ್ಲ. ಹಿಂದೆ ಸಿನಿಮಾ ವಿತರಕರಾಗಿದ್ದಾಗ ಅನೇಕ ಚಿತ್ರಗಳು ಶತದಿನೋತ್ಸವ ಆಚರಿಸಿ ಅನುಭವವಿದ್ದ ಅವರು ತಮ್ಮ ಸರ್ಕಾರ ನೂರು ದಿನ ಓಡಲಿಕ್ಕಿಲ್ಲ ಎಂದು ಮೊದಲ ಬಾರಿಗೆ ಕಣ್ಣೀರು ಕೂಡಾ ಹಾಕಿದ್ದರು. ಮಾಜಿ ಸಿಎಮ್ಮಯ್ಯರು ಸದ್ಯಕ್ಕೆ ಈ ಸರ್ಕಾರವನ್ನು ನಿಧಾನಸೌಧ ಥಿಯೇಟರ್‌ನಲ್ಲಿ ಒಂದು ವರ್ಷವಾದರೂ ಓಡಲು ಬಿಡಬೇಕೆಂದು ನನ್ನ ವಿನಂತಿ.

ಕುಮಾರಿ ಸುಮ್ಮಿ, ಹಾಸನ

ಈ ನೂರು ದಿವಸಗಳಲ್ಲಿ ಸಮ್ಮಿಶ್ರ ಸರ್ಕಾರ ಏನು ಮಾಡಿದೆ ಎಂದು ಸ್ವತಃ ಸಿ.ಎಂ. ಸಾಹೇಬ್ರಿಗೇ ಗೊತ್ತಿರಲಿಕ್ಕಿಲ್ಲ. ಇನ್ನು ನಮ್ಮಂತಹ ಬಡಪಾಯಿ ಜನತೆಗೆ ಹೇಗೆಗೊತ್ತಾಗಬೇಕು? ಆದರೆ ಸಿ.ಎಂ. ಸಾಹೇಬ್ರು ಈ ನೂರುದಿವಸಗಳಲ್ಲಿ 40 ದಿವಸ ದೇವಾಲಯ ದರ್ಶನ ಮಾಡಿದ್ದುಚೆನ್ನಾಗಿ ಗೊತ್ತು. ಕರ್ನಾಟಕದ ಎಲ್ಲಾ ದೇವಾಲಯಗಳ ದರ್ಶನ ಮುಗಿಸಿ ಮುಂದೆ ಉತ್ತರ ಭಾರತದಲ್ಲಿರುವ ದೇವಾಲಯಗಳಿಗೂ ಭೇಟಿ ನೀಡುತ್ತಾರೆ ಎಂದು ಕೇಳಿದ್ದೇನೆ. ಜನತೆಯ ಸಮಸ್ಯೆಗಳನ್ನು ಪರಿಹರಿಸಲು ದೇವರೊಬ್ಬರಿಂದಲೇ ಸಾಧ್ಯ ಎಂದು ಸೋದರ ಮೂಢಣ್ಣ ಸಿ.ಎಂ. ತಲೆಯನ್ನು ಹಾಳು ಮಾಡಿರಲಿಕ್ಕೂ ಸಾಕು!

ಲಂಬೋದರ, ಮೈಸೂರು

ಒಬ್ಬ ಮುಖ್ಯಮಂತ್ರಿಯಾಗಿ ಸ್ವಾಮಿ ಅವರು ಸಂಪುಟ ರಚನೆಯಲ್ಲೇ ಎಡವಿದ್ದಾರೆ. ಉದಾಹರಣೆಗೆ ಎಂಟನೇ ಕ್ಲಾಸಿನವರನ್ನು ಉನ್ನತ ಶಿಕ್ಷಣ ಮತ್ತು ಎಂ.ಎ. ಮಾಡಿದವರನ್ನು ಪ್ರಾಥಮಿಕ ಶಿಕ್ಷಣ ಮಂತ್ರಿ ಮಾಡಿಬಿಟ್ಟಿದ್ದಾರೆ! ತಮ್ಮ ಸೋದರನನ್ನು ಕೆಲವು ಪ್ರಮುಖ ಖಾತೆಗಳ ಅನಧಿಕೃತ ಮಂತ್ರಿಯನ್ನಾಗಿ ನೇಮಿಸಿದ್ದಾರೆ. ಇದರಿಂದ ಆಡಳಿತ ಯಂತ್ರಕ್ಕೆ ತೊಂದರೆಯಾಗಿದೆ.

ಅತೃಪ್ತಿ, ಧಾರವಾಡ

ಈ ಸಮ್ಮಿಶ್ರ ಸರ್ಕಾರ ನೂರು ದಿವಸಗಳಲ್ಲಿ ಏನಾದರೂ ಸಾಧನೆ ಮಾಡಿದೆಯಾ ಎಂದು ಯೋಚಿಸುವಾಗ ನೆನಪಾಗುವುದು ₹ 26,000 ಕೋಟಿ ಮೊತ್ತದ ರೈತರ ಸಾಲ ಮನ್ನಾ! ಆದರೆ ಭೂತಗನ್ನಡಿಯಲ್ಲಿ ನೋಡಿದರೆ ಅದೂ ಅವರ ಸಾಧನೆಯಲ್ಲ ಎಂದು ಹೇಳಬೇಕಾಗುತ್ತದೆ. ಯಾಕೆಂದರೆ ಅದೊಂದು ದುಸ್ಸಾಹಸ! ನಿಜ ಹೇಳಬೇಕೆಂದರೆ ಅದು ವಿರೋಧ ಪಕ್ಷದವರ ಸಾಧನೆ. ಯಾಕೆಂದರೆ ಅವರು ಮುಖ್ಯಮಂತ್ರಿಯ ಕಿವಿ ಹಿಂಡಿ ಆ ಕೆಲಸ ಮಾಡಿಸಿರುವುದು ಎಲ್ಲರಿಗೂ ಗೊತ್ತಿರುವ ವಿಚಾರ.

ಮಣ್ಣಿನ ಮಗ, ಬೀದರ್

ನೂರು ದಿವಸಗಳಾದರೂ ಮುಖ್ಯಮಂತ್ರಿಯವರು ಇನ್ನೂ ದ್ವಂದ್ವದಲ್ಲಿದ್ದಾರೆ. ಅವರಿಗೆ ಅಧಿಕಾರ ಕೊಟ್ಟದ್ದು ಜನತೆಯೋ, ಕಾಂಗ್ರೆಸ್ಸೋ ಅಥವಾ ದೇವರೋ ಎಂಬ ಭಾರಿ ಗೊಂದಲ. ಮಾಜಿ ಸಿಎಮ್ಮಯ್ಯರು ಆಗೊಮ್ಮೆ ಈಗೊಮ್ಮೆ ‘ದಾಹ… ದಾಹ…’ ಎಂದು ಕೂಗುವಾಗ ಮಾತ್ರ ಭಯದಿಂದ ಸ್ವಾಮಿಗೆ ಅಧಿಕಾರ ಕೊಟ್ಟ ಕಾಂಗ್ರೆಸ್ಸು ನೆನಪಾಗುತ್ತದೆ. ಅದು ಬಿಟ್ಟರೆ ಬಾಕಿ ದಿವಸಗಳು ಅವರಿಗೆ ನೆನಪಾಗುವುದು ದೇವರು ಮಾತ್ರ. ನಮಗೀಗ ಬೇಕಾಗಿರುವುದು ಸ್ಥಿರ ಸರ್ಕಾರಕ್ಕಿಂತಲೂ ಹೆಚ್ಚಾಗಿ, ಸ್ಥಿರ ಮನಸ್ಸಿನ ಮುಖ್ಯಮಂತ್ರಿ.

ಆಟೋ ಚಕ್ರವರ್ತಿ, ಬೆಂಗಳೂರು

‘ಸ್ವಾಮಿ ಪರ್ವ’ ಆರಂಭವಾದ ಮೇಲೆ ದೊಡ್ಡ ಸುಧಾರಣೆಯಾದದ್ದು ಬೆಂಗಳೂರು ಮಹಾನಗರದಲ್ಲಿ! ಆದರೆ ಇದಕ್ಕಾಗಿ ಸರ್ಕಾರಕ್ಕೆ ಶಹಬ್ಬಾಸ್ ಗಿರಿ ಕೊಡುವ ಹಾಗಿಲ್ಲ. ಯಾಕೆಂದರೆ ಒಬ್ಬ ಮುಖ್ಯಮಂತ್ರಿ ಮಾಡಬೇಕಾದ ಕೆಲಸ
ವನ್ನು ಹೈಕೋರ್ಟ್ ನ್ಯಾಯಮೂರ್ತಿ ಮಾಡಿ ತೋರಿಸಿದ್ದಾರೆ. ಅವರಿಂದಾಗಿ ನಗರ ಈಗ ಫ್ಲೆಕ್ಸ್ ಮುಕ್ತವಾಗಿದೆ.

ಸೌಂದರ್ಯ, ಬೆಂಗಳೂರು

ನನ್ನ ಪ್ರಕಾರ ನೂರು ದಿನಗಳ ಸ್ವಾಮಿ ಆಡಳಿತದ ಮಹಾಸಾಧನೆ ಏನೆಂದರೆ ಅತ್ಯಂತ ಯಶಸ್ವಿಯಾಗಿ ಜನರಿಗೆ ಮನರಂಜನೆ ನೀಡುತ್ತಿರುವುದು. ಅದಕ್ಕಾಗಿ ಸಚಿವ ಮೂಢಣ್ಣ ಅವರನ್ನು ಅಭಿನಂದಿಸಲೇ ಬೇಕು. ವಾಸ್ತು, ಜೋತಿಷ ವಿಚಾರದಲ್ಲಿ ಅವರದ್ದು ಎತ್ತಿದ ತಲೆ. ಬಿಸ್ಕತ್ತು ಬಿಸಾಕುವುದರಲ್ಲಿ ಎತ್ತಿದ ಕೈ. ಇಂಥವರೊಬ್ಬರು ಸಮ್ಮಿಶ್ರ ಸರ್ಕಾರದಲ್ಲಿದ್ದಾರಲ್ಲ ಎಂದು ಮುಖ್ಯಮಂತ್ರಿಯವರು ಹೆಮ್ಮೆ ಪಡಬೇಕು.

ಕಿ. ತಾಪತಿ, ರಾಣೆಬೆನ್ನೂರು

ಸ್ವಾಮಿ ಅವರಿಗೆ ನೂರರಲ್ಲಿ ಒಂದು ಅಂಕ ಕೊಡುತ್ತೇನೆ. ಆ ಒಂದು ಅಂಕ, ಅವರು ಗದ್ದೆಗೆ ಇಳಿದು ನಾಟಿ ಮಾಡುವ ಪೋಸ್ ಕೊಟ್ಟಿದ್ದಕ್ಕೆ.

ನಾಟಿ ಕೋಳಿರಾಮ, ಮಂಡ್ಯ

ನಿಜ, ಸ್ವಾಮಿ ಶತಕ ಬಾರಿಸಿದ್ದಾರೆ. ಈ ಶತಕದಲ್ಲಿ ಒಂದೇ ಒಂದು ಬೌಂಡರಿ ಇಲ್ಲ. ‘ಸಾಲ ಮನ್ನಾ’ದ ಒಂದೇ ಒಂದು ಸಿಕ್ಸರ್ ಬಿಟ್ಟರೆ ಉಳಿದಂತೆ ಸಿಂಗಲ್ ರನ್ ಗಳನ್ನಷ್ಟೇ ತೆಗೆದಿದ್ದಾರೆ. ಒಟ್ಟು 350 ಬಾಲ್ ಗಳನ್ನು ಎದುರಿಸಿದ್ದಾರೆ!

ಬಾಲಣ್ಣ, ಬ್ಯಾಟ್ ರಾಯನಪುರ

ಬರಹ ಇಷ್ಟವಾಯಿತೆ?

 • 8

  Happy
 • 1

  Amused
 • 2

  Sad
 • 0

  Frustrated
 • 0

  Angry

Comments:

0 comments

Write the first review for this !