ಭಾನುವಾರ, ಜುಲೈ 3, 2022
25 °C

ಕೈಗೆ ಬಂದ ತುತ್ತು...!

ಕೇಶವ ಜಿ. ಝಿಂಗಾಡೆ Updated:

ಅಕ್ಷರ ಗಾತ್ರ : | |

Prajavani

ಟೀವ್ಯಾಗ್‌ ಯಾವ ಚಾನೆಲ್‌ ತಿರುಗಿಸಿದ್ರೂ ‘ಅರ್ಥ’, ಅಪಾರ್ಥ, ಅನರ್ಥ, ಅಸಹಾಯಕ, ಅನರ್ಹ ವಗೈರೆ ಬಿರುದಾಂಕಿತ ಅತೃಪ್ತ ಶಾಸಕರ ಮಾರಿ ನೋಡಿ, ವಿಧಾನಸೌಧದಾಗ್‌ ನಿಧಾನವಾಗಿ ಚರ್ಚೆ ನಡೆ ಯೋದನ್ನ ಕೇಳಿ ಕೇಳಿ ತಲೆ ಚಿಟ್ ಹಿಡಿದಿತ್ತು. ಇವ್ರ ಉಸಾಬರೀನ ಬ್ಯಾಡಾ ಅಂತ ತಲೆಕೊಡವಿಕೊಂಡು ಏಳ್‌ಬೇಕ್ ಅನ್ನುದರೊಳ್ಗ, ‘ಏಯ್‌ ದೋಸ್ತ, ದೋಸ್ತಿ ಗಳ ಕತಿ ಏನಾಯ್ತು’ ಅಂತ ಕೇಳ್ಕೋತ್‌ ಪ್ರಭ್ಯಾ ಭಾರಿ ಹುರುಪಿನಿಂದ ಒಳಗ್‌ ಬಂದ.

‘ಏಯ್‌ ಮಳ್ಳ, ರಾಜೀನಾಮೆ ಕೊಟ್ಟ ಎಂಎಲ್‌ಎ ಗೋಳು ದೊಡ್ಡ ಹೀರೋಗಳ ಥರಾ ಝೀರೊ ಟ್ರಾಫಿಕ್‌ನ್ಯಾಗ್‌ ಬಂದು ವಿಧಾನಸೌಧದ ಒಳಗ್‌ ಸಭಾಧ್ಯಕ್ಷರನ್ನ ಭೆಟ್ಟಿ ಆಗಾಕ್‌ ಏದುಸಿರು ಬಿಡುತ್ತ ಓಡಿದವ್ರಂಗ್‌ ಓಡಿ ಬಂದಿಯಲ್ಲ. ನಾಯಿ ಬೆನ್ನ ಹತ್ತಿತ್ತ ಏನ್‌ ಸಮ್ಮಿಶ್ರ ಸರ್ಕಾರದ ದೋಸ್ತಿಗಳು ಬೆನ್ನಬಿದ್ದಿದ್ರ’ ಅಂತ ಛೇಡಿಸಿದೆ.

ತಮ್ಮ ಮಾನಾನ್ನ ಮೂರು ಕಾಸಿಗೆ ಹರಾಜ್‌ ಕೂಗತಿದ್ರೂ ಕಮಲ ಪಕ್ಷದ ಕಲಿಗಳು ವಿಧಾನಸಭೆಯೊಳ್ಗ ತುಟಿ ಪಿಟಕ್‌ ಅನ್ದ ಕುತ್ಕೊಂಡವ್ರ ಥರಾ ನನ್ನ ಮಾತಿಗೆ ಕಿವಿಗೊಡದ ಪ್ರಭ್ಯಾ, ಕಿಟಕಿಯಿಂದ ಹೊರಗ್‌ ನೋಡಾಕತ್ತಿದ್ದ. ‘‌ಅತೃಪ್ತರೇನ್‌ ಕಾಣ್ಸಾಕತ್ತಾರೇನ್‌’ ಎಂದೆ.

‘ಬಾಂಬೆ, ಪುಣೆ, ಅಂಬೆವ್ಯಾಲೆದಾಗ್‌ ಮಜಾ ಮಾಡಾಕತ್ತಾರ್‌ ಇಲ್ಯಾಕ್‌ ಕಾಣ್ಸತಾರ್. ಸಂಗ್ಯಾ ಹೊಂಟಾನ್ ಕರಿಲೇನ್‌’ ಎಂದ. ‘ಹ್ಞೂಂ’ ಎಂದೆ. ‘ಏಯ್‌ ಸಂಗ್ಯಾ’ ಅಂತ ಕರದ್ರೂ ಅಂವಾ ತಿರುಗಿ ನೋಡಲಿಲ್ಲ. ‘ಏಯ್‌ ಗಡಿಬಿಡಿ ಸಂಗ್ಯಾ’ ಅಂತ ಜೋರ್‌ ಮಾಡ್‌ತಿದ್ಹಂಗ್‌ ಹೊಳ್ಳಿ ನೋಡಿ ಮನಿ ಒಳ್ಗ ಬಂದಾ. ‘ಇಬ್ರೂ ಚೆಡ್ಡಿ ದೋಸ್ತ್ರು ಸೇರ್ಕೊಂಡ್‌ ಏನೋ ಹಿಕ್ಮತ್‌ ಮಾಡಾಕ್‌ ಕುತ್ಕೊಂಡ್ಹಂಗ್‌ ಕಾಣಸ್ತೈತಿ’ ಅಂದ.

‘ಚೆಡ್ಡಿ ದೋಸ್ತ್ರ ಕಥಿ ಮುಗದ್ಹಂಗ್‌ ಏಳ್‌. ನೀ ಏನ್‌ ಎಷ್ಟ ಅವ್ಸರದಾಗ್ ಹೊಂಟಿದ್ಯಲ್ಲ. ರಾಜಭವನದ ಕಡೆ ಹೊಂಟಿದ್ದಿ ಏನ್‌’ ಎಂದೆ.

‘ನೀ ಯಾವ್‌ ಚಡ್ಡಿ ದೋಸ್ತ್ರ ಬಗ್ಗೆ ಮಾತಾಡಾಕತ್ತಿ ಅನ್ನೋದು ತಿಳಿವಲ್ದು. ನಂಗೇನ್‌ ಅವಸರದ ಆಡಿಯೋರಪ್ಪ ಅಂತ ತಿಳ್ಕೊಂಡಿ ಏನೊ ಮಳ್ಳ. ಸಿದ್ರಾಮಣ್ಣ ಹೇಳ್ದಂಗ್‌, ಅತೃಪ್ತರು ಸದ್ದೇಕ ಖರೇನs ತ್ರಿಶಂಕು ಸ್ವರ್ಗದಾಗ್‌ ಅದಾರ್‌. ಇಕಾಡೆ ಮನೀಗೂ ಬಂದಿಲ್ಲ. ಅಕಾಡೆ ವಿಧಾನಸೌಧಕ್ಕೂ ಬಂದಿಲ್ಲ. ತಲಿಮ್ಯಾಲೆ ಅನರ್ಹತೆ ತೂಗುಕತ್ತಿ ಬ್ಯಾರೆ ತೂಗಾಡಾಕತ್ತೈತಿ. ಇನ್ನ ಮಂತ್ರಿ ಆಗೋದು ದೂರದ ಮಾತು. ಧೋಬಿಕಾ ಕುತ್ತಾ ನಾ ಘರ್‌ ಕಾ, ನಾ ಘಾಟ್‌ ಕಾ ಅಂದಂಗ್ಹಾತು’ ಎಂದ ಸಂಗ್ಯಾ.

‘ಪಾಪ ಟೀವ್ಯಾಗ್‌ ಆಡಿಯೋರಪ್ಪನೋರ್‌ ಮುಖಾ ನೋಡಾಕ್‌ ಆಗಾಕತ್ತಿಲ್ಲ. ಬಾಂಬೆ ಮಿಠಾಯಿ ತಿಂದ್ರೂ ಹಾಗಲ್‌ಕಾಯಿ ತಿಂದೋರ್‌ ಥರಾ ಕಾಣಾಕತ್ತೈತಿ. ಬಾಡಿದ ಕಮಲದ ಥರಾ ಮಾರಿ ಮ್ಯಾಲಿನ ಕಳೇನ ಬತ್ತಿ ಹೋಗೈತಿ. ಪಾಪ ಹೀಂಗಾಗಬಾರದಿತ್ತು ಬಿಡು’ ಅಂತ ಲೊಚಗುಟ್ಟಿದ. ‘ನಿಂಗೂ ಗಡಿಬಿಡಿ ಸಂಗ್ಯಾ ಅಂತಾರಲ್ಲ, ಯಾಕ್‌’ ಎಂದು ಕಾಲೆಳೆದೆ. ‘ನನಗ್‌ ಸುಮ್ನ ಅಡ್‌ ಹೆಸ್ರು ಇಟ್ಟಾರ. ಆಡಿಯೋರಪ್ಪ ಥರಾ ನಾ ಯಾವತ್ತೂ ಅವ್ಸರಾ ಮಾಡಿಲ್ಲ, ಮುಂದೂ ಮಾಡೋ ದಿಲ್ಲ. ನಂದೇನಿದ್ರೂ ನಿಧಾನವೇ ಪ್ರಧಾನ. ದೋಸ್ತಿ ಸರ್ಕಾರನ ಬೀಳುಸ್ರೊ, ಜಲ್ದಿ ಇಳುಸ್ರೊ ಕೂಗಿನ ನಡುವೆ ಇಸ್ರೊ ಸಾಧನೆಯೂ ಮಂಕಾಗಿಬಿಟ್ಟಿತಲ್ಲ’ ಎಂದು ಸಂಗ್ಯಾ ನಿಟ್ಟುಸಿರಬಿಟ್ಟ.

‘ಇವ್ರೆಲ್ ಹೊಟ್ಟಿಗೆ ಏನ್‌ ತಿಂತಾರ್‌. ಹೊಟ್ಯಾಗಿನ ಹೊಲಸೆಲ್ಲ ಹೊರಗ್‌ ಬರ‍್ಲಿ ಅಂದ ರಮೇಶಣ್ಣನ ಮಾತಿಗೆ ಓಗೊಟ್ಟು ಒಬ್ಬೊಬ್ಬರು ಒಂದೊಂದ್‌ ಆರೋಪ ಮಾಡತಿದ್ರೂ, ಭಾಜಪದವರು ಮೌನದ ಭಜನೆ ಮಾಡುದನ್ನ ನೋಡಿ ಇಡೀ ರಾಜ್ಯಕ್ಕ ದಂಗ್‌ ಬಡ್ದೈತಿ. ಮಾತ್‌ ಮಾತಿಗೆ ಸಭಾತ್ಯಾಗ ಮಾಡ್‌ತ್ತಿ ದ್ದೋರು ಕಮಕ್‌ಕಿಮಕ್‌ ಅನ್ದ ಹೆಂಗ್‌ ಸುಮ್ನ ಕುಂತಾರ್‌ ನೋಡ್‌’.

‘ಸಾಲಿ ಮಾಸ್ತರ್‌ ಮಕ್ಳನ್ನ ಜಬರಿಸಿ ಬಾಯಿ ಮುಚ್ಕೊಂಡ್‌ ದೇವ್ರಂಗ್‌ ಕುಂದ್ರಬೇಕ್‌ ಅಂತ ಹೇಳ್ದಂಗ್‌, ಕಮಲದ ಕಲಿಗಳು ವಿಧಾನಸಭೆ ಒಳ್ಗ ಕುತ್ಕೊಂಡಿದ್ದು ನೋಡಿ ನಗು ಬರಾಕತ್ತೈತಿ. ಬಾಂಬೆದಾಗ್‌ ಇರಾಕ್‌ ಅತೃಪ್ತರಿಗೆ ಸಕಲ ವ್ಯವಸ್ಥೆ ಮಾಡಿದ್ಹಂಗ್‌, ಸದನದಾಗ್‌ ಬೊಗಳೆ ಬಾಯಿ ಬಿಚ್ಚಿ, ತೋಳ್‌ ಏರಿಸಿ, ಅಂಗಿ ಹರ್ಕೊಂಡು ರಂಪ ಮಾಡದ್ಹಂಗ್ ಇರಾಕ್‌ ಏನ್‌ ಮಾಟಾ ಮಂತ್ರ ಮಾಡ್ಯಾರಲೇ’ ಎಂದು ಕಿಚಾಯಿಸಿದೆ. ‘ಹೆ ಹೆ ಹೆ ಹಂಗೆಲ್ಲ ಅನಬ್ಯಾಡ. ಹಕ್ಕುಚ್ಯುತಿ ಆಗ್ತದ ಮಗನ ಹುಷಾರ್‌’ ಅಂತ ಹೆದರ್‌ಸಾಕ್ ನೋಡ್ದ ಪ್ರಭ್ಯಾ.

‘ಸದನದ ಒಳ್ಗ  ‘ಸಾರಾ’ ಸಗಟಾಗಿ ಮಾನಾ ಕಳದ್ರೂ, ಹಳ್ಳಿ ಹಕ್ಕೀನ ಹಕ್ಕುಚ್ಯುತಿ ಮಂಡಿಸಲಾರ‍್ದ, ಹೊರಗ್‌ ಬಾ ನೋಡ್ಕೊತೀನಿ ಅಂತ ಗುಟುರ್‌ ಹಾಕೇದ್‌. ಬಾಂಬೆದಾಗ್‌ ಇದ್ಕೊಂಡು ಆವಾಜ್‌ ಹಾಕು ಬದ್ಲಿಗೆ ಇಲ್ಲಿಗೆ ಬಂದು ಕಚ್‌ಬೇಕಾಗಿತ್ತಲ್ಲ’ ಎಂದೆ. ಅಡ್ಡ ಬಾಯಿ ಹಾಕಿದ ಸಂಗ್ಯಾ, ‘ನೀನೇ ಸಾಕಿದಾ ಗಿಣಿ, ಹದ್ದಾಗಿ ಕುಕ್ಕಿತಲ್ಲೋ...’ ಎಂದು ಗುನುಗುನಿಸತೊಡಗಿದ.

‘ಏಯ್‌, ಅಲ್ನೋಡ್‌, ಬ್ರೆಕಿಂಗ್‌ನ್ಯೂಸ್‌ಅಪ್ನೋರ್‌ಗೆ ರಾಜಭವನದಿಂದ ಆಹ್ವಾನ ಬಂದಿರೋ ಬ್ರೆಕಿಂಗ್‌ ಸುದ್ದಿ ಬರಾಕತ್ತದ್‌. ಇನ್‌ ಕಮಲ ಅರಳೋದು ಗ್ಯಾರಂಟಿ. ಶಿರಡಿ ಸಾಯಿಬಾಬಾ, ವೈಷ್ಣೋದೇವಿ, ತಿಮ್ಮಪ್ಪ ನಿಮ್ಮೆಲ್ಲರ ಮಹಿಮೆ ಅಪಾರ’ ಅಂತ ಪ್ರಭ್ಯಾ ದೈವಭಕ್ತಿಯಿಂದ ಗಲ್ಲಗಲ್ಲ ಬಡಿದುಕೊಂಡು ‘ಜೈ ಶ್ರೀರಾಂ’ ಅಂತ ಕೂಗಿದ.

ಟೀವಿ ನೋಡುತ್ತಿದ್ದ ನಾನು, ಗಡಿಬಿಡಿ ಸಂಗ್ಯಾ ಗರಬಡಿದಂತೆ ಸುದ್ದಿ ನೋಡತಿದ್ರ, ಪ್ರಭ್ಯಾ ಓಡು ನಡಿಗೆಯಲ್ಲಿ ಡಾಲರ್ಸ್‌ ಕಾಲನಿಯತ್ತ ಪೇರಿಕಿತ್ತ. ದೂರದಲ್ಲೆಲ್ಲೋ ‘ಬಂದದ್ದೆಲ್ಲ ಬರಲಿ... ಗೋವಿಂದನ ದಯೆ ಇರಲಿ...’ ಹಾಡು ಕೇಳಿಬರಾಕತ್ತಿತ್ತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು