ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚೌಕೀದಾರ್‌ನೆಂಬ ಗುಂಗೀ ಹುಳ!

Last Updated 22 ಮಾರ್ಚ್ 2019, 20:00 IST
ಅಕ್ಷರ ಗಾತ್ರ

ಪ್ರಭ್ಯಾನ ಮನಿ ಮುಂದ ಹಾದು ಹೋಗ್ತಾ ಇದ್ದಾಗ ಮಗ ಪಕ್ಯಾನ ಅಳು, ‘ಬಾಯಿ ಮುಚ್ಚಲೇ’ ಅಂತ ಅವರಪ್ಪನ ಜೋರ್ ದನಿ ಕೇಳಿಬರಾಕತ್ತಿತ್ತು. ಮಗನಿಗೆ ಇಂವಾ ಇಷ್ಟ್ಯಾಕ್ ಆವಾಜ್ ಹಾಕಾಕತ್ತಾನಂತ ಕೇಳುವ ಕುತೂಹಲದಿಂದ ಮನಿ ಒಳಗ್ ಕಾಲಿಟ್ಟೆ. ‘ದೊಡ್ಡವರು ಮನಿಗಿ ಬಂದಾರ್ ಈಗರs ಅಳು ನಿಲ್ಸೊ’ ಅಂತ ಜಬರಿಸಿದ. ಅವನ ಮಾತನ್ಯಾಗ್ ಎಷ್ಟ್‌ ವ್ಯಂಗ್ಯ ತುಂಬೈತಿ ಅಂತ ತಲಿಕೆಡಿಸಿಕೊಳ್ಳಾಕ್ ಹೋಗದ ನಾನು, ‘ಯಾಕ್‌ ಅಳಾಕತ್ತಾನೊ ಅಂವಾ, ಚಾಕ್ಲೇಟ್‌, ಐಸ್‌ಕ್ರೀಂ ಕೇಳಾಕತ್ತಾನೇನ್‌’ ಎಂದೆ.

‘ಅವೆರಡೂ ಅಲ್ಲೋ ಮಾರಾಯಾ. ಸರ್ಕಾರಿ ಸಾಲಿಗಿ ಹೋಗುದಿಲ್ಲಂತ. ಖಾಸ್ಗಿ ಸಾಲ್ಯಾಗs ಕಲಿತೀನಿ ಅಂತ ಪಟ್‌ ಹಿಡ್ದಾನ್‌. ಕಾನ್ವೆಂಟ್ಗ ಹಾಕೋವಷ್ಟು ರೊಕ್ಕಾ ನನ್ನ ಬಳಿ ಇಲ್ಲ. ಸರ್ಕಾರಿ ಸಾಲಿಗಿ ಹೋಗಿ ಕನ್ನಡಾ ಕಲಿ ಅಂತ ಹೇಳಿದ್ರ ಕೇಳವಲ್ಲ’ ಎಂದ.

ನನ್ನಿಂದ ಏನರs ಉಪಕಾರ್ ಆದೀತೇನೋ ಅಂತ ಪಕ್ಯಾ ಇನ್ನಷ್ಟು ಜೋರಾಗಿ ಅಳಾಕ್‌ ಶುರು ಹಚ್ಕೊಂಡ.

‘ಅಳೋದನ್ನ ಮೊದ್ಲ ನಿಲ್ಸು, ಇಲ್ಲಂದ್ರ ಬೆನ್ನಿಗೆ ಒಂದ್‌ನಾಲ್ಕ್‌ ಬಾರಸ್ತೀನಿ ನೋಡ್‌. ಕಣ್ಣಾಗ್‌ ನೀರಿಲ್ಲ, ಮೂಗಿನ್ಯಾಗ್‌ ಸುಂಬ್ಳಿಲ್ಲ, ನಾಟ್ಕಾ ಆಡ್ತಿ ಏನ್‌ ಮಗ್ನ’ ಅಂದ.

‘ಟೀವ್ಯಾಗ್ ನೋಡಲ್ಲೆ, ಆ ಅಜ್ಜಾ ಯ್ಯಾಕ್ ಅಳಾಕತ್ತಾನಂತ ಕೇಳ್‌. ಹಿರಿ ಮಗಾ, ಸೊಸಿ, ಮೊಮ್ಮಗನೂ ಅಳಾಕತ್ತಾನ್‌. ಮದ್ಲ ಅವ್ರಿಗೆ ಅಳೋದನ್ನ ನಿಲ್ಸಾಕ್‌ ಹೇಳು. ಅವ್ವಾ ಸೆಟಗೊಂಡ್ರ, ಅಳಬೇಡ ಕಣೆ ಸುಮ್ಕಿರೆ ನನ್ನ ಮುದ್ದಿನ ರಾಣಿ... ಅಂತ ಹಾಡ್‌ ಹೇಳ್ತಾ ರಮಸ್ತಾನ. ನಂಗಿದ್ರ ಹೆಂಗ್‌ ಗದರಸ್ತಾನ್ ನೋಡ್‌ ಮಾವಾ’ ಅಂದ.

ಸೋಫಾ ಮ್ಯಾಗ್ ಕುತ್ಕೊಂಡು ಮೊಬೈಲ್‌ದೊಳ್ಗ ಮುಳುಗಿದ್ದ ಪಾರೋತಿ, ಮಗನ ಮಾತ್ ಕೇಳಿ ಮುಖಾ ಕೆಂಪ್ಗ ಮಾಡ್ಕೊಂಡು ನಾಚುತ್ತಲೇ ಅಡಿಗೆ ಮನಿಗೆ ಓಡಿದಳು.

ಹರಳೆಣ್ಣೆ ಕುಡಿದ ಗೌಡರಹಂಗ್ ಮುಖ ಕಿವುಚಿದ ಪ್ರಭ್ಯಾ, ಮಗನ ಬೆನ್ನಿಗೆ ಒಂದ್ ಗುದ್ದು ಹಾಕಿ, ‘ನೀ ಯಾವ್ ಸಾಲಿಗೆ ಹೋಗ್ಬೇಕು ಅನ್ನುದಷ್ಟ ಮಾತಾಡ್ ಮಗ್ನ. ಇಲ್ಲದ ರಾಜಕೀಯ ಮಾತಾಡಬ್ಯಾಡ’ ಅಂತ ದಬಾಯಿಸಿದ.

‘ಅಲ್ಲಲೇ, ಮುತ್ಯಾ, ಮಗಾ, ಸೊಸಿ, ಮೊಮ್ಮಗ ಎಲ್ರೂ ಸೇರ್ಕೊಂಡು ಕಣ್ಣೀರಿನ ರಾಜಕೀಯ ಮಾಡುವಾಗ, ನಿನ್ನ ಮಗಾ ಕೇಳಿದ್ರಾಗ್ ಏನೂ ತಪ್‌ ಇಲ್ಲ. ಹಾಸನದಾಗ್‌ ಅತ್ತ ದೊಡ್ಡ ಗೌಡ್ರು, ಮಂಡ್ಯದಾಗ್‌ ಅಳದಿರುವುದನ್ನು ನೋಡಿ, ಅನಿತಕ್ಕ ವಾರಗಿತ್ತಿಯ ಅದೃಷ್ಟ ಕಂಡು ಭೋರೆಂದು ಅತ್ತಿದ್ದು ಯಾವ ಟಿವ್ಯಾಗೂ ಬಂದಿಲ್ಲ ನೋಡ್‌’ ಎಂದೆ.

ಓಣ್ಯಾಗ್‌ ಹೋಳಿ ಹುಣ್ವಿ ಹಲಗಿ ಸಪ್ಳ, ಹುಡುಗರ ಹೊಯ್ಕೊಳ್ಳೊದು ಕೇಳಿ, ಪಕ್ಯಾ ಲಬೋಲಬೋ ಅಂತ ಬಾಯಿ ಬಡ್ಕೊತ್‌ ಅಳುದನ್ನ ಬಿಟ್ಟು ಹೊರಗ್‌ ಓಡ್ದ.

‘ಈ ಕಣ್ಣೀರ್‌ ರಾಜಕೀಯ ನೋಡಿ ನಂಗಂತೂ ಸಾಕಾಗೇದ್‌. ಇವ್ರ ಉಸಾಬರೀನ ಬ್ಯಾಡಂತ ನಾನೂ ಚೌಕೀದಾರ್‌ ಆಗೀನಿ. ನೀನೂ ಆಗ್ತಿಯೇನ್‌’ ಅಂದ.

‘ನೀ ಯಾವ್‌ ಸೀಮೆ ಚೌಕೀದಾರಲೇ. ಮನ್ಯಾಗ್‌ ಹಂಡೆ ತುಂಬ ರೊಕ್ಕಾ, ಬಂಗಾರ ಇಟ್ಟಿ ಏನ್‌. ಕಾಮಣ್ಣನ ಸುಡಾಕ್‌ ಕಟ್ಟಿಗೆ – ಕುಳ್ಳು ಕಳ್ಳತಾನ ಆಗ್ಲಾರದ್ಹಂಗ್‌ ಕಾಯೋ ಕೆಲ್ಸಕ್‌ ಮಾತ್ರ ನೀ ಲಾಯಕ್‌ ಅದಿ’ ಎಂದೆ.

ನನ್ನ ಮಾತಿಗೆ ಅಡ್ಗಿ ಮನ್ಯಾಗ್‌ನಿಂದ ಪಾರೋತಿ ಕಿಸಕ್ಕನೆ ನಕ್ಕಿದ್ದು ಕೇಳಿಸಿತು.

‘ಏಯ್‌ ಪಾರೀ, ನನ್ನ ಹಂಗ್ಸಾಕ್‌ ಹೀಂಗೆಲ್ಲ ನಗಬ್ಯಾಡ’ ಎಂದ ಪ್ರಭ್ಯಾ. ಅದ್ಕೂ ಪಾರೂ ಫಕಫಕನೆ ನಕ್ಕಿದ್ದು ಕೇಳಿ ನಗೆ ತಡಿಲಾರ್ದ ಗಹಗಹಿಸಿ ನಕ್ಕುಬಿಟ್ಟೆ.

ನಮ್ಮಿಬ್ಬರ ನಗು ನೋಡಿ, ಪ್ರಭ್ಯಾ, ಕಾಮಣ್ಣನ ಸುಡಾಕ್‌ ಶಿವಾ ಮೂರನೇ ಕಣ್ಣು ಬಿಟ್ಟಂಗ್‌ ನನ್ನತ್ತ ಕಣ್ಣಲ್ಲೇ ಉರಿ ಹೊರಹಾಕಿದ.

ಅಂವ್ಗ ಸಮಾಧಾನ ಪಡಸಾಕ್‌, ‘ನಮೋ ಸಾಹೇಬ್ರು 25 ಲಕ್ಷ ಚೌಕಿದಾರರ ಹತ್ರ ಮಾತ್‌ ಆಡ್ಯಾರಂತ. ಅದ್ರಾಗ್‌ ನೀನೂ ಒಬ್ಬ ಬಿಡಪಾ’ ಎಂದು ಬೆನ್ನು ಚಪ್ಪರಿಸಿದೆ. ನನ್ನ ಶಹಬ್ಬಾಸ್‌ಗಿರಿ ನೋಡಿ, ಅವನ ಸಿಟ್ಟು ಸ್ವಲ್ಪ ತಣ್ಣಗಾತು.

‘ಓಣ್ಯಾಗಿನ ಚಡ್ಡಿಧಾರಿಗಳಿಗೆಲ್ಲ ಚೌಕೀದಾರ್‌ ದೀಕ್ಷೆ ಕೊಡುದೈತಿ, ನೀನೂ ಸೇರ‍್ಕೊ’ ಅಂದ.

‘ನಿನ್ನ ದೀಕ್ಷಾನೂ ಬ್ಯಾಡಾ. ಚೌಕೀದಾರ್‌ ಕೆಲ್ಸಾನೂ ಬ್ಯಾಡಾ. ‘ನಮೋಚೌ’ ಉಸಾಬರಿ ನನಗ್‌ ಬ್ಯಾಡ ಮಾರಾಯಾ, ನೀನೆ ಇಟ್ಕೊ’ ಎಂದೆ.

‘ನಮೋ ಚೌಕೀದಾರ್‌ನಾಗಿದ್ರ ರಫೇಲ್‌ ದಾಖಲೆಗಳೇ ಕಳು ಆಗ್ಯಾವಲ್ಲ, ಅದಕ್ಕೇನಂತ್‌ ಹೇಳ್ತಿ. ಅದೆಲ್ಲ ಹೋಗ್ಲಿ ಬಿಡಪಾ. ಒಂದ್‌ ಸರಳ ಪ್ರಶ್ನೆ ಕೇಳ್ತೀನಿ. ಚೌಕೀದಾರ್‌ ಎದಕ್‌ ಬೇಕು. ನಿನ್ನ ಹತ್ರ ದೊಡ್ಡ ಗಂಟ್‌ ಇದ್ರ ಅದ್ನ ಕಾಯಾಕ್‌ ಚೌಕೀದಾರ್‌ ಆಗ್ಬೇಕ್‌. ಇಲ್ಲಂದ್ರ ಇನ್ನೊಬ್ಬರ ಆಸ್ತಿ ಕಾಯಾಕ್‌ ಚೌಕೀದಾರ್‌ ಕೆಲ್ಸಾ ಮಾಡ್ಬೇಕ್‌. ನೀ ಚೌಕೀದಾರ್‌, ನಿನ್ನ ಮಗಾ ಚೌಕೀದಾರ್‌, ಮೊಮ್ಮಗ ಚೌಕೀದಾರ್‌ ಆದ್ರ, ನಿನ್ನ ಕುಟುಂಬ, ನಿನ್ನ ಪಕ್ಷ, ನಮ್ಮ ದೇಶ ಉದ್ಧಾರ್‌ ಆದ್ಹಂಗ್‌ ಬಿಡು. ನಿನ್ನಂಥವರನ್ನ ಕಾಯಂ ಆಗಿ ಬಡ ಚೌಕೀದಾರರನ್ನಾಗಿ ಮಾಡೊ ಹುನ್ನಾರ್ ಇದು ತಿಳ್ಕೊ’ ಎಂದು ಅವ್ನ ತಲ್ಯಾಗ ಹೊಸ ಹುಳಾ ಬಿಟ್ಟೆ.

‘ಇದು ನನ್ನ ಮಡ್ಡ ತಲಿಗೆ ಹೊಳಿದೇ ಇಲ್ಲ ನೋಡ್‌. ನನ್ನ ಹತ್ರ ಮಗನ್ನ ಖಾಸ್ಗಿ ಸಾಲಿಗಿ ಹಾಕಾಕ್‌ ರೊಕ್ಕ ಇಲ್ಲ. ಇನ್ನ ಇನ್ನೊಬ್ರ ಆಸ್ತಿ ಕಾಯಾಕ್‌ ಹೋದ್ರ ನಂಗೇನ್‌ ಬರ್ತೈತಿ. ತಲ್ಯಾಗ್‌ನಿಂದ ನಾನೂ ಚೌಕೀದಾರ್‌ ಗುಂಗಿ ಹುಳಾನ್‌ ತಗದ್‌ ಹಾಕ್ತೀನಿ’ ಅಂದ.

ಚಹಾದ ಕಪ್‌ ತಂದಿಟ್ಟ ಪಾರೋತಿ, ‘ಐದ್‌ ವರ್ಷದ ಹಿಂದಿನ ಚಹಾಪೇ ಚರ್ಚಾ, ಈಗ ಮೈ ಭೀ ಚೌಕೀದಾರ್‌ ತನಕ್‌ ಬಂದ್‌ ಹಿಂಗ್‌ ಗೋತಾ ಹೊಡಿಬಾರದಿತ್‌ ನೋಡ್ರಿ’ ಎಂದಳು. ಕಮಕ್‌ ಕಿಮಕ್‌ ಎನ್ನದೇ ಪ್ರಭ್ಯಾ ಚಹಾದ ಕಪ್‌ ಎತ್ತಿಕೊಂಡರೆ, ನಾನು ‘ಮುತ್ತಿನಂಥಾ ಮಾತ್‌ ಹೇಳ್ದಿ ನೋಡಬೆ’ ಅಂತ ಹೇಳಿ ಚಹಾ ಗುಟುಕರಿಸತೊಡಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT