ಎಲ್‌ಎಲ್‌ಬಿ ಹುಡುಗನ ಹಾಸ್ಯ ಲೋಕ

7

ಎಲ್‌ಎಲ್‌ಬಿ ಹುಡುಗನ ಹಾಸ್ಯ ಲೋಕ

Published:
Updated:

* ಸ್ಟ್ಯಾಂಡ್‌ಅಪ್‌ ಕಾಮಿಡಿಯನ್‌ ಕ್ಷೇತ್ರದತ್ತ ಆಕರ್ಷಿತರಾಗಿದ್ದು ಹೇಗೆ? 
ನಾನು ಓದಿದ್ದು ಎಲ್‌ಎಲ್‌.ಬಿ. ಆದರೆ ನನಗೆ ಬರವಣಿಗೆ ಹಾಗೂ ವೇದಿಕೆಗಳ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡುವುದು, ನಟನೆ ಖುಷಿಯ ಸಂಗತಿಯಾಗಿತ್ತು. ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್‌ ಕ್ಷೇತ್ರಕ್ಕೆ ಬಂದರೆ ಬರವಣಿಗೆ ಹಾಗೂ ನಟನೆ ಎರಡನ್ನೂ ಮುಂದುವರಿಸಿಕೊಂಡು ಹೋಗಬಹುದು ಎಂದನ್ನಿಸಿತು. ಇಲ್ಲಿ ಹಾಸ್ಯವೇ ಪ್ರಧಾನವಸ್ತು. ಸುಮುಖಿ, ಕಣ್ಣನ್‌ ಮುಂತಾದವರ ಜೊತೆಯೇ ನಾನು ಈ ಕ್ಷೇತ್ರಕ್ಕೆ ಬಂದೆ. ಅಮೆಜಾನ್‌ ಪ್ರೈಂನಲ್ಲಿ ಪ್ರಸಾರವಾಗುತ್ತಿರುವ ಷೋದಲ್ಲಿ ನಾನು ಸ್ಕೆಚ್‌ ಕಾಮಿಡಿ ರೌಂಡ್‌ನ ಸಲಹೆಗಾರನಾಗಿದ್ದೇನೆ. ತೀರ್ಪುಗಾರನಾಗಿಯೂ ಕೆಲಸ ಮಾಡಲಿದ್ದೇನೆ.

* ಸ್ಟ್ಯಾಂಡ್‌ ಅಪ್‌ ಕಾಮಿಡಿಗಾಗಿ ಮುಂಬೈಗೆ ಹೋಗಿದ್ಯಾಕೆ?
ಐದಾರು ವರ್ಷಗಳ ಹಿಂದೆ ಬೆಂಗಳೂರಿಗಿಂತ ಮುಂಬೈನಲ್ಲಿ ಸ್ಟ್ಯಾಂಡ್‌ ಅಪ್‌ ಕಾಮಿಡಿಗೆ ಹೆಚ್ಚು ಅವಕಾಶಗಳಿದ್ದವು.  ಆಗ ಅಲ್ಲಿ ಹೆಚ್ಚು ಕಾಮಿಡಿ ಷೋಗಳು, ಶೂಟಿಂಗ್‌ಗಳು ನಡೆಯುತ್ತಿದ್ದವು. ಬಹುರಾಷ್ಟ್ರೀಯ ಕಂಪೆನಿಗಳು ಅಲ್ಲೇ ಹೆಚ್ಚಿದ್ದವು. ಆದ್ದರಿಂದ ಸಹಜವಾಗಿಯೇ ಅಲ್ಲಿ ಸ್ಟ್ಯಾಂಡ್‌ಅಪ್‌ ಕಾಮಿಡಿಯನ್‌ಗಳಿಗೆ ಅವಕಾಶಗಳು ಹೆಚ್ಚು ಇದ್ದವು. ನಾನು ಬೆಂಗಳೂರು ಬಿಟ್ಟು ಮುಂಬೈಗೆ ಹೋಗುವುದು ಒಂದು ರೀತಿ ಬ್ಯುಸಿನೆಸ್‌ ನಿರ್ಧಾರವಾಗಿತ್ತು. 

* ನಿಮ್ಮ ಹಾಸ್ಯದ ವಸ್ತುಗಳು?
ನಮ್ಮ ಸುತ್ತಲಿನ ವಸ್ತು, ಜನರ ವೀಕ್ಷಣೆ ಹಾಗೂ ಅವಲೋಕನವೇ ನನ್ನ ಹಾಸ್ಯದ ವಸ್ತುಗಳು. ಸುತ್ತಲಿನ ಯಾವುದಾದರೂ ಒಂದು ವಸ್ತುವನ್ನು ನೋಡಿದಾಗ ಅದರಿಂದ ನಮಗೆ ಹೊಸ ವಿಚಾರ, ಆಲೋಚನೆಗಳು ಹೊಳೆಯುತ್ತವೆ. ಸತ್ಯ ಹಾಗೂ ಕಾಲ್ಪನಿಕ ಎರಡೂ ನನ್ನ ಹಾಸ್ಯದ ಅಂಶಗಳು. ಒಂದು ಕಾಲದಲ್ಲಿ ದ್ವಂದ್ವಾರ್ಥದ ಮಾತುಗಳು ತಮಾಷೆಗೆಳೆನಿಸಿಕೊಳ್ಳುತ್ತಿದ್ದವು. ಆದರೆ ಈಗ ಹಾಗಿಲ್ಲ. ಬೆಂಗಳೂರಿನ ಮುಖ್ಯರಸ್ತೆಗಳಲ್ಲಿ ದನಗಳ ಓಡಾಟ, ಟ್ರಾಫಿಕ್‌ನಲ್ಲಿ ಕಿವಿಗಚ್ಚುವ ಹಾರ್ನ್‌, ಕುಕ್ಕರ್‌ ವಿಷಲ್‌ಗೆ ಬೆಚ್ಚಿಬೀಳುವುದು..ಇಂತಹ ವಿಷಯಗಳೂ ನನಗೇ ಹಾಸ್ಯದ ವಸ್ತು. 

*ರಂಗಭೂಮಿ ನಟ ನೀವು. ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್‌ ಹಾಗೂ ರಂಗಭೂಮಿಗೆ ಏನು ವ್ಯತ್ಯಾಸ?
ನಾನು ‘ಇವಂ’ ಎಂಬ ರಂಗಭೂಮಿ ತಂಡದ ಸದಸ್ಯ. ಈ ಕ್ಷೇತ್ರಕ್ಕೆ ಬಂದ ಹೊಸತರಲ್ಲಿ ನಾನು ಒಂದು ಷೋ ಚಿತ್ರಕತೆ ಬರೆಯಲು ತುಂಬಾ ಸಮಯ ತಗೊತಿದ್ದೆ. ಆದರೆ ರಂಗಭೂಮಿ ತರಬೇತಿಯು ಚಿತ್ರಕತೆ, ಕಥೆ ಹೆಣೆಯುವುದರಲ್ಲಿ ಸಹಾಯ ಮಾಡಿತು. ಸ್ಟ್ಯಾಂಡ್‌ ಅಪ್‌ ಕಾಮಿಡಿಯನ್‌ ಕ್ಷೇತ್ರವೂ ರಂಗಭೂಮಿಯಂತೆ. ಆದರೆ ರಂಗಭೂಮಿಯಲ್ಲಿ ತುಂಬಾ ರಿಹರ್ಸಲ್‌ ಇರುತ್ತದೆ. ಇಲ್ಲಿ ಹಾಸ್ಯಕ್ಕೆ ಹೊಸ ವಿಷಯಗಳನ್ನು ಪ್ರತಿದಿನ ಹುಡುಕಬೇಕು. 

* ನೀವು ಆರಂಭಿಸಿದ ‘ಬೆಟರ್‌ ಲೈಫ್‌ ಫೌಂಡೇಷನ್‌‘ ವೆಬ್‌ಸರಣಿ ಬಗ್ಗೆ ಹೇಳಿ
ಈ ಷೋದ ಎಲ್ಲಾ ಸಂಚಿಕೆಗಳ ಕತೆಯನ್ನು ನಾನು ಬೆಂಗಳೂರಿನಲ್ಲಿಯೇ ಬರೆದಿರೋದು. ಇದರಲ್ಲಿ ಸುಮುಖಿ ಸುರೇಶ್‌, ಕರಣ್‌ ಗಿಲ್‌ ಮೊದಲಾದ ಪ್ರಮುಖರು ನಟಿಸಿದ್ದರು. ನಕಲಿ ದಾಖಲೆಗಳನ್ನು ಸೃಷ್ಟಿಸುವ ಎನ್‌ಜಿಒವೊಂದರ ಕತೆ ಈ ಸರಣಿಯದು. ಈ ಷೋ ಮೂಲಕ ಅನೇಕ ಕಾಮಿಡಿಯನ್ನರು ಮುಖ್ಯವಾಹಿನಿಗೆ ಬಂದಿದ್ದು ನನಗೇ ಖುಷಿ. ಅದಾದ ಬಳಿಕ ‘ಪುಷ್ಪವಲ್ಲಿ’, ‘ಸ್ಟಾರ್‌ ಬಾಯ್ಸ್‌’, ‘ಡೈ ಟ್ರೈಯಿಂಗ್‌’ ಸೇರಿದಂತೆ ಬೇರೆ ಬೇರೆ ವೆಬ್‌ ಸರಣಿಗಳಲ್ಲಿ ನಟಿಸಿದ್ದೇನೆ, ನಿರ್ದೇಶನ ಮಾಡಿದ್ದೇನೆ. ಇವೆಲ್ಲವೂ ನನ್ನನ್ನು ಇಂಟರ್‌ನೆಟ್‌ನಲ್ಲಿ ಜನಪ್ರಿಯವಾಗಿಸಿತು.

* ಈ ಕ್ಷೇತ್ರಕ್ಕೆ ಬಂದ ಹೊಸತರಲ್ಲಿ ನೀವು ಎದುರಿಸಿದ ಸವಾಲು?
ಆರಂಭದಲ್ಲಿ ಜನ ನಮ್ಮನ್ನು ಹೇಗೆ ಸ್ವೀಕರಿಸುತ್ತಾರೆ ಎಂಬ ಭಯವೇ ಮನದಲ್ಲಿರುತ್ತದೆ. ನನಗೆ ಯಾವ ರೀತಿಯ ಹಾಸ್ಯವನ್ನು ಜನರ ಮುಂದೆ ಪ್ರೆಸೆಂಟ್‌ ಮಾಡಬಹುದು ಎಂಬ ಆಯ್ಕೆಯಲ್ಲಿಯೇ ನಾನು ಎಡವುತ್ತಿದ್ದೆ. ಕೆಲ ಜನರಿಗೆ ರಾಜಕೀಯ ಇಷ್ಟ. ಇನ್ನು ಕೆಲವರಿಗೆ ಮನರಂಜನೆ ಅಷ್ಟೇ. ಸಮಾಜದಲ್ಲಿ ಒಬ್ಬೊಬ್ಬರ ಮನಸ್ಥಿತಿ ಭಿನ್ನ ಭಿನ್ನ. ಬೇರೆಯವರ ಮನಸ್ಸಿಗೆ ನೋವಾಗದಂತೆ ಷೋ ಯಶಸ್ವಿಯಾಗಬೇಕು. ಇದೆಲ್ಲಾ ನನ್ನ ಆರಂಭದ ದಿನಗಳಲ್ಲಿ ಅನುಭವವಾಗಿದೆ. 

Tags: 

ಬರಹ ಇಷ್ಟವಾಯಿತೆ?

 • 7

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !