ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಿಸಿಎಂ ಡಿಶ್ಯೂಂ ಡಿಶ್ಯೂಂ!

Last Updated 6 ಸೆಪ್ಟೆಂಬರ್ 2019, 20:00 IST
ಅಕ್ಷರ ಗಾತ್ರ

ಓಣ್ಯಾಗಿನ ಹುಡುಗ್ರು ಕುಂದ್ರಿಸಿದ್ದ ಗಣಪತಿನ್ನ ನೋಡಾಕಂತ ಪೆಂಡಾಲ್‌ ಹತ್ರ ಹೋಗುತ್ತಿದ್ದಂತೆ ಹಿಂಭಾಗದಲ್ಲಿ ಡಿಶ್ಯೂಂ, ಡಿಸಿಎಂ ಡಿಶ್ಯೂಂ ಅಂತ ಸದ್ದ ಕೇಳಿ ಬಂತು. ಗಣಪನಿಗೂ ಡಿಶ್ಯೂಂ, ಡಿಶ್ಯೂಂಗೂ ಎತ್ತಣಿಂದೆತ್ತ ಸಂಬಂಧವಯ್ಯಾ ಅಂತ ಗೊಣಗಿಕೊಳ್ಳುತ್ತ ಹತ್ತಿರ ಹೋದರೆ, ಆರೇಳು ಹುಡುಗ್ರು ಜಗಳಾ ಆಡಾಕತ್ತಿದ್ರು. ‘ನಾ ಡಿಸಿಎಂ ನಂಬರ್‌ 1’ ಅಂತ ಒಬ್ಬಾಂವ್‌ ಹೇಳಿದ್ರ. ‘ನೀ ಯಾಕ್‌ ಮಗ್ನ. ನಂಗೇನ್‌ ಆಗೇದ್‌ ಧಾಡಿ. ನಿನಗಿಂತ ನನ್ನ ಕರಾ(ಳ)ಮತ್ತು ಭಾಳ್‌ ಅದಾವ್‌’ ಅಂತ ಜೋರ್‌ ಮಾಡ್ತಿದ್ದ.

‘ಹ್ಹ ಹ್ಹ ಹ್ಹಾ, ಎಲೆಕ್ಷನ್‌ದಾಗ್‌ ಸೋತಿದ್ದಂವ್ಗ ಕರ‍್ದು ಮಂತ್ರಿ ಮಾಡಿದ್ದಲ್ದ, ಡಿಸಿಎಂ ಪಟ್ಟಾನೂ ಪುಗ್ಸಟ್ಟೆಯಾಗಿ ಕೊಟ್ಟಾರ್‌. ಹೀಂಗಾಗಿ ನಾನs ಡಿಸಿಎಂ 1’ ಅಂತ ಒಬ್ಬಾಂವಾ ಜೋರ್‌ ಮಾಡ್ದಾ. ‘ನಿಮಗಿಂತ ನಾ ಹಿರ‍್ಯಾಂವಾ ಅದೀನಿ. ಹೆಸರಿನ್ಹಂಗ್‌ ನಾ ಗೋವು ಥರಾ ಇದೀನಿ. ಹಿಂದೆ ಬಂದ್ರ ಒದಿಯಲ್ಲ, ಮುಂದೆ ಬಂದ್ರ ಹಾಯಲ್ಲ. ನನ್ಗ ನಂಬರ್‌ 1 ಡಿಸಿಎಂ ಮಾಡ್ಬೇಕು’ ಅಂತ ಒಬ್ಬಾಂವಾ ಗೋಗರೆದ.

‘ಏಯ್‌ ಹುಚಪ್ಯಾಲಿಗಳಾ. ನನ್ನ ಅಶ್ವಮೇಧಯಾಗದ ಪ್ರಭಾವದಿಂದ ಬೆಂದಕಾಳೂರಿನ ಸಾಮ್ರಾಟನಿಗೆ ಮಾಜಿ ಡಿಸಿಎಂ ಪಟ್ಟಾನ ಕಾಯಂ ಆಗೇರೋದನ್ನ ಮರಿಬ್ಯಾಡ್ರಿ. ನಾನs ನಂಬರ್‌ ಒನ್‌ ಡಿಸಿಎಂ’ ಅಂತ ಇನ್ನೊಬ್ಬ ಗುಟುರು ಹಾಕಿದ. ‘ನನ್ನ ಸಾಮ್ರಾಜ್ಯದಾಗ ಹೊಸ ಸಾಮಂತ ಅಶ್ವಮೇಧ ಯಾಗ ಮಾಡಾಕ್‌ ಹೊಂಟಾನಲ್ಲೊ, ನಾನು ಮಾಜಿ ಡಿಸಿಎಂ + ಮಾಜಿ ಸಾಮ್ರಾಟನೂ ಆಗಿಬಿಟ್ನಲ್ಲೊ’ ಅಂತ ಇನ್ನೊಬ್ಬ ತಲಿ ಮ್ಯಾಗ್‌ ಇಲ್ಲದ ಕಿರೀಟ ಸರಿಪಡಿಸಿಕೊಂಡಂತೆ ನಟಿಸುತ್ತ ನುಡಿದ.

‘ನಾನು, ‘ಮಾಮುಮ’ ಮಕ್ಳಾ. ನನಗೂ ಕೈಕೊಟ್ಟಾರಲ್ಲೋ. ಇರ‍್ಲಿ, ಡಿಸಿಎಂ ಹುದ್ದೆಗೆ ಸಾಂವಿಧಾನಿಕ ಮಾನ್ಯತೆ ಇಲ್ಲೇಳ್‌’ ಅಂತ ಸ್ವಗತಕ್ಕೆ ಸಮಾಧಾನ ಮಾಡ್ಕೊಂಡ. ‘ಇವ್ನ ಮಾತ್ ಕೇಳಿದ್ರ ಕೈಗೆಟುಕದ ದ್ರಾಕ್ಷಿ ಹುಳಿ ಅದ ಅಂತ ನರಿ ಹೇಳಿದ ಕತಿ ನೆನಪಾಗ್ತದ’ ಅಂತ ಅವರಲ್ಲೊಬ್ಬ ಹೇಳ್ತಾ ಹ್ಹಿ ಹ್ಹಿ ಹ್ಹಿ ಅಂತ ಹಲ್‌ ಕಿಸಿದ. ‘ನಾನು ಬಳ್ಳಾರಿ ರಿಪಬ್ಲಿಕ್‌ನ ಅನಭಿಷಿಕ್ತ ದೊರೆ. ಚುನಾವಣೆಗೆ ಮೊದ್ಲ ನನ್ನ ಡಿಸಿಎಂ ಅಂತ ಹೇಳ್ತಿದ್ರು. ಈಗ ಮೂಗಿಗೆ ತುಪ್ಪಾ ಸವರ‍್ಯಾರ್‌’ ಅಂತ ಹೇಳುತ್ತಲೇ ಇನ್ನೊಬ್ಬ ಮೈಗೆ ಅಂಟಿದ್ದ ಗಣಿ ದೂಳನ್ನ ಝಾಡಿಸಿದ.

‘ಭಲೆ, ಭಲೆ. ನಿಮ್ಮ ಡಿಶ್ಯೂಂ, ಡಿಶ್ಯೂಂ ನೋಡಿದ್ರ, ಇಂದಿನ ಮಕ್ಕಳೇ, ನಾಳಿನ ಹೊಲಸು ರಾಜಕಾರಣಿಗಳು’ ಎಂದೆ ಬಾಯ್ತಪ್ಪಿ. ‘ಏಯ್‌ ಹಂಗ್‌ ಅನಬ್ಯಾಡ್ರಿ. ಹಲ್ಕಾ, ಹೊಲಸು ರಾಜಕಾರಣಿಗಳಿಗೆ ನಮ್ಮನ್ನ ಹೋಲಸ್‌ಬ್ಯಾಡ್ರಿ’ ಅಂತ ಎಲ್ಲರೂ ನನ್ನ ಮೈಮ್ಯಾಲೆ ಏರಿ ಬಂದ್ರು. ‘ಏನೋ ನಿಮ್ದು ಜಗಳಾ’ ಅನಕೋತ ಪ್ರಭ್ಯಾ ಅಲ್ಲಿಗೆ ಬಂದ. ‘ನೋಡ್‌ ಮಾಂವಾ, ಈ ಕಾಕಾ ಇದಾನಲ್ಲ ನಮಗ ಹೆಂಗೆಂಗೊ ಬೈಯ್ಯಾಕತ್ತಾರ’ ಅಂದ್ರು. ‘ಅವ್ರೆಲ್ಲ ಪರಿವಾರದ ಹು(ತು)ಡುಗ್ರು. ಹೆಂಗರ್‌ ಕಿತ್ತಾಡಕೋತ್ತಾರ್‌. ನೀ ಯಾಕ್‌ ಅವ್ರ ಜಗಳದಾಗ್‌ ಬಾಯಿ ಹಾಕಿದ್ದಿ’ ಅಂತ ನನಗs ಬೈದು, ‘ಭಾಳ್‌ ಶಾಣೆ ಅದಿರೇಳ್‌. ಪ್ರಸಾದ್‌ ಹಂಚಾಕತ್ತಾರ್‌ ಹೋಗ್ರಲ್ಲಿ’ ಎನ್ನುತ್ತಿದ್ದಂತೆ, ಹೋ ಅಂತ ಕೂಗ್ತಾ ಹುಡುಗ್ರು ಓಡಿದ್ರು. ‘ಛಲೋ ಹೊತ್ಯ್ನಾಗ್‌ ಬಂದ್‌ ನನ್ನ ಮಾನಾ ಉಳಿಸಿದಿ ಥ್ಯಾಂಕ್ಸ್‌ಲೇ’ ಎಂದೆ.

‘ವಿಧಾನಸಭೆ ಒಳ್ಗ ಮೊಬೈಲ್‌ನ್ಯಾಗ ಅಶ್ಲೀಲ ದೃಶ್ಯ ನೋಡಿದಂವಾ ಡಿಸಿಎಂ. ಆಹಾ! ನಾವೆಷ್ಟು ಪುಣ್ಯವಂತರು’ ಎಂದೆ ನನ್ನಷ್ಟಕ್ಕೆ. ‘ಹೊಟ್ಟಿಕಿಚ್‌ ಪಡಪ್ಯಾಡಲೇ ವಿಘ್ನ ಸಂತೋಷಿ’ ಅಂತ ಬೈದ. ‘ನಾನ್ಯಾಕ್‌ ವಿಘ್ನ ಸಂತೋಷಿ ಆಗಲಿ ಮಗನ. ಹನಮಂತನಂಗ ತಮ್ಗೂ ಬೆಂಕಿ ಹಚ್ಚಾಕ್‌ ಬರ‍್ತದ ಅಂತ ಹೇಳಿ ಸಂತೋಷ್‌ಪಡೊ ಜನಾ ನಿಮ್ಮ ಪರಿವಾರದಾಗs ಅದಾರ್‌. ಸಂತೋಷಪ್ಪನ ಕರಾಮತ್ತು ಜಾಸ್ತಿ ಆಗಿರೋದು ನೋಡಿ ಆಡಿಯೋರಪ್ನೋರ್‌ ಹೊಟ್ಯಾಗ್‌ ಬೆಂಕಿ ಬಿದ್ದದ. ಅದ್ನ ಹೆಂಗ್‌ ಆರಸ್‌ಬೇಕ್‌ ಅಂತ ಮೊದ್ಲ ಕಲ್ಕೊ. ಆಮ್ಯಾಲೆ ಹೊಸಾ ಬೆಂಕಿ ಹಚ್ಚುದನ್ನ ಕಲ್ಯಾಕ್‌ ಹನಮಪ್ಪನ ಗುಡಿಗೆ ಹೋಗು ಅಂತಿ’ ಎಂದೆ.

‘ನಾನು ಹನಮಪ್ಪನ ಗುಡಿಗೇ ಹೊಂಟೀನಿ. ಬರ‍್ತಿ ಏನ್‌’ ಎಂದ. ‘ತ್ರೇತಾಯುಗದಾಗ ಸೀತೆಯನ್ನ ಉಳಸಾಕ್‌ ಹನಮಪ್ಪ, ಲಂಕೆಗೆ ಬೆಂಕಿ ಹಚ್ಚಿದ್ನಂತ. ಕಲಿಯುಗದಾಗ್‌ ಶ್ರೀರಾಮನ ಜನ್ಮಸ್ಥಳ ಉಳಸಾಕ್‌, ಬೆಂಕಿ ಹಚ್ಚಿ ಸಂತೋಷ್‌ ಪಡವ್ರು ಹುಟ್ಕೊಂಡಾರ್‌. ಇದೇ ಏನ್ಲೆ ನಿಮ್ಮ ವಿಕಾಸ್‌ ಭಾರತ’ ಎಂದು ಬೈದೆ.

‘ಬೆಂಕಿ ಹಚ್ಚೋ ಕೆಲ್ಸಕ್ಕಂತ ಗುಡಿಗೆ ಹೊಂಟಿಲ್ಲೋ ಮಳ್ಳಾ. ಕೊಳ್ಳಾಗ್‌ ತಾಯ್ತಾ ಕಟ್ಟಿಸ್ಕೊಂಡ್‌ ಬರಾಕ್‌ ಹೊಂಟೀನಿ’ ಎಂದ. ‘ಗುಂಡ್‌ಕಲ್‌ನ್ಹಂಗ್ ಅದಿ. ನಿನಗೇನ್‌ ಆಗೇದ ಧಾಡಿ. ಅತೃಪ್ತ– ಅನರ್ಹ ದೆವ್ವಾ ಗಿವ್ವಾ ನೋಡಿ ಹೆದರ್‌ಕೊಂಡಿ ಏನ್‌’ ಎಂದೆ.

‘ನಾ ಅಂಥಾ ಹೆದರುಪುಕ್ಕನಲ್ಲ. ವಿರೋಧಿಗಳು ಮಾಟಾ ಮಂತ್ರ ಮಾಡ್ಸಿದ್ದಕ್ಕs ಪಕ್ಷದ ಕೆಲವರು ಪರಲೋಕದ ಟಿಕೆಟ್‌ ತಗೊಳ್ಳಾಕತ್ತಾರ್‌ ಅಂತ ನಮ್ಮ ಸಾಧ್ವಿ ಪ್ರಜ್ಞಾ ಸಿಂಗ್‌ ಹೇಳ್ಯಾಳ್‌. ಹೀಂಗಾಗಿ ನಂಗೂ ಹೆದ್ರಿಕಿ ಸುರು ಆಗೇತಿ. ಬೂತ್‌ ಮಟ್ಟದಲ್ಲಿ ನಮಗಾಗದ ಭೂತಗಳೂ ನನ್ನಂತವರ ವಿರುದ್ಧ ಮಾಟಾ ಮಾಡಿದ್ರ ಅದು ನಾಟ್‌ಲಾರ್ದಂಗ್‌ ಪ್ರತಿಮಾಟಾ ಮಾಡ್ಸಬೇಕಾಗೈತಿ’ ಎಂದು ಹೇಳ್ತಾ ಅವಸರಿಸಿದ.

‘ಪಕ್ಯಾನ ಅಂಗಡ್ಯಾಗ್‌ ಚಹಾ ಕುಡ್ದು ಹೋಗಂತಿ ಬಾ’ ಎಂದೆ. ಏಯ್‌, ತಾಯ್ತಾ ಕಟ್ಟಸ್‌ಕೊಳ್ಳಾಕ್‌ ನಿರಂಕಾರ್‌ ಉಪವಾಸ ಅದೀನಿ. ಬಾಯ್ಯಾಗ್‌ ಏನೂ ಹಾಕ್ಕೊಳ್ಳುದಿಲ್ಲ’ ಎಂದ.

‘ಹಂಗಿದ್ರ ನೀರರs ಕುಡ್ದು ಹೋಗಂತ ಬಾರೊ’ ಅಂತ ಒತ್ತಾಯಿಸಿದೆ. ‘ನಾ ಏನ್‌ ಉಪ್ಪು ತಿಂದಿಲ್ಲಪ್ಪಾ. ನೀರು ಕುಡಿಯೋ ಹರ್ಕತ್ತೂ ನಂಗಿಲ್ಲ’ ಅಂತ ಹೇಳ್ತಾ ಹನುಮಪ್ಪನ ಗುಡಿ ಕಡೆ ಓಡು ನಡಿಗೆಯಲ್ಲಿ ಪೇರಿಕಿತ್ತ. ನಾನು ಗಣೇಶನ ಪೆಂಡಾಲ್‌ನತ್ತ ಹೆಜ್ಜೆ ಹಾಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT