ಕೈಲಾಸದಲ್ಲಿ ‘ಕೈ’ನಾಯಕ

7

ಕೈಲಾಸದಲ್ಲಿ ‘ಕೈ’ನಾಯಕ

Published:
Updated:
Deccan Herald

‘ಕೈ’ನಾಯಕರಿಗೆ ಪಾದಯಾತ್ರೆಯೇನೂ ಹೊಸತಲ್ಲ. ಆದರೆ ಈ ಪಾದಯಾತ್ರೆ ಮಾತ್ರ ಒಂದು ರೀತಿಯ ಸವಾಲಾಗಿತ್ತು. ಕೆಲವು ತಿಂಗಳ ಹಿಂದೆ ವಿಮಾನ ದುರಂತದಿಂದ ಇಪ್ಪತ್ತು ಸೆಕೆಂಡಿನ ಅಂತರದಲ್ಲಿ ಪಾರಾ
ಗಿದ್ದಕ್ಕೆ ಅವರು ಕಣ್ಮುಚ್ಚಿ ಯಾವುದೇ ಯೋಚನೆ ಮಾಡದೆ ‘ಕೈಲಾಸ ಮಾನಸ ಸರೋವರ ಯಾತ್ರೆ ಮಾಡುತ್ತೇನೆ’ ಎಂದು ಥೇಟ್ ಹಳ್ಳಿ ಗೌರಮ್ಮಳಂತೆ ಹರಕೆ ಹೊತ್ತಿದ್ದರು. ಅವರಿಗೆ ಅದೊಂದು ಪ್ರಯಾಸದ ಹರಕೆ ಎಂದು ಗೊತ್ತಾದದ್ದು ‘ಅರವತ್ತು ಕಿ.ಮೀ. ನಡೆಯಬೇಕು’ ಎಂದು ಯಾರೋ ಹೇಳಿದಾಗಲೇ!

ಆದರೆ ‘ಕೈ’ನಾಯಕರು ಮೈಕೊಡವಿ ಕೈಲಾಸಕ್ಕೆ ಹೊರಡಲು ಸಿದ್ಧರಾಗಿಯೇಬಿಟ್ಟರು. ಎಷ್ಟೆಂದರೂ ಅವರು, ಈ ‘ಪಪ್ಪುವಿನಿಂದ ರಾಜಕಾರಣ ಸಾಧ್ಯವೇ ಇಲ್ಲ’ ಅಂದ್ಕೊಂಡವರಿಗೆ ಈಗ 56 ಇಂಚಿನ ಎದೆಯ ರಾಜಕಾರಣಿಯೊಂದಿಗೆ ಪೈಪೋಟಿಗೆ ನಿಂತಿಲ್ಲವೇ!

ನಂಬಿದರೆ ನಂಬಿ, ಬಾಜಪ್ಪರಾಗಿದ್ದರೆ ಬಿಟ್ಟರೆ ಬಿಡಿ. ‘ಕೈ’ನಾಯಕರು ಎಷ್ಟು ದೂರ ಪಾದ ಬೆಳೆಸಿದರೆಂದರೆ ಅವರು ಸಾಕ್ಷತ್ ಶಿವನ ಎದುರೇ ನಿಂತಿದ್ದರು! ಮುಂದಿನ ‘ಎಕ್ಸ್ ಕ್ಲೂಸಿವ್’ ದೃಶ್ಯ ಇಲ್ಲಿದೆ ನೋಡಿ.

‘ಅರೆರೆ… ಏನಾಶ್ಚರ್ಯ! ದೇವರು ಪ್ರತ್ಯಕ್ಷವಾಗಬೇಕಿದ್ದರೆ ಅದೆಂತಹ ಘೋರ ತಪಸ್ಸು ಮಾಡಬೇಕೆಂದು ಕೇಳಿದ್ದೆ. ಆದರೆ ನೀನು ಹೀಗೆ... ಐ ಕಾಂಟ್ ಬಿಲೀವ್ ಮೈ ಐಸ್ ಯಾರ್!’

‘ಮಗನೇ, ನಾನು ದೇವಲೋಕ, ಭೂಲೋಕ ಎಂದು ಶಟಲ್ ಮಾಡುತ್ತಿರುತ್ತೇನೆ. ನೀನು ಇಂಡಿಯಾ- ಇಟಲಿ ಎಂದು ಶಟ್ಲಿಂಗ್ ಮಾಡೋದಿಲ್ವೇ… ಹಾಗೆ’.

‘ಕಳೆದ ಗುಜರಾತ್ ಚುನಾವಣೆ ಹೊತ್ತಿಗೆ ‘ಟೆಂಪಲ್ ರನ್‌’ ಮಾಡೋಕೆ ಶುರು ಮಾಡಿ, ಎಂಥೆಂಥ ದೇವರುಗಳ ದರ್ಶನ ಮಾಡಿದ್ದೇನೆ. ಆದರೆ ಹೀಗೆ ಮುಖತಃ ದೇವರ ದರ್ಶನದ ಭಾಗ್ಯ ಸಿಕ್ಕಿರೋದು ಫಸ್ಟ್ ಟೈಮ್!’

‘ಏನದು? ಟೆಂಪಲ್ ರನ್ನು? ಅಂದರೆ ಈವರೆಗೆ ಎಷ್ಟು ಸ್ಕೋರು ಹೊಡೆದಿದ್ದೀಯಾ?’

‘ಕೊಹ್ಲಿ ತರ ದಾಖಲೆ ಮಾಡುವ ಯೋಚನೆ ಇಲ್ಲಪ್ಪಾ’

‘ನೀನು ಇಲ್ಲಿ ಬಂದ ಉದ್ದೇಶ?’

‘ವಿಮಾನ ಅಪಘಾತ ಆಗುವುದರಿಂದ ಪಾರಾಗಿದ್ದಕ್ಕೆ ಹರಕೆ ಹೊತ್ತಿದ್ದೆ. ನೀನೇ ನನ್ನನ್ನು ಕಾಪಾಡಿದ್ದು. ಕೈಲಾಸಕ್ಕೆ ಬಂದು ಥ್ಯಾಂಕ್ಸ್ ಹೇಳಿದರೆ ಖಂಡಿತ ನಿನಗೆ ತಲುಪುತ್ತೆ ಎಂಬ ನಂಬಿಕೆಯಿತ್ತು. ನನ್ನ ಪುಣ್ಯ. ನೀನೇ ಸಿಕ್ಕಿದಿಯಲ್ಲ!’

‘ಆದರೆ ಮಗನೇ, ಇಷ್ಟು ಬೇಗ ಬರಬೇಕಾಗಿರಲಿಲ್ಲ… ಲೋಕಸಭಾ ಚುನಾವಣೆಗೆ ಇನ್ನೂ ಕಾಲವಕಾಶವಿದೆಯಲ್ಲ…’

‘ಶಿವ ಶಿವ! ಈ ಬಾಜಪ್ಪರುಗಳಿಗೂ ಅದೇ ಸಂಶಯ. ನೀನೂ ಹೀಗೆ ನನ್ನನ್ನು ಮೂರನೇ ಕಣ್ಣಿನಿಂದ ನೋಡಿದರೆ ಹೇಗೆ?!’

‘ಬೇಸರ ಮಾಡ್ಬೇಡ, ಸುಮ್ಮನೆ ಕೈನಾಯಕರ ಕಾಲು ಎಳೆಯೋಣಾಂತ ಹೇಳಿದೆ. ಅಲ್ಲಾ ಮಗನೇ, ನಿಮ್ಮ ಹೊಸ ಗೆಳೆಯ ಸಿ.ಎಂ. ಸ್ವಾಮಿ ಕೂಡಾ ‘ಟೆಂಪಲ್ ರನ್ನರ್’ ಅಲ್ಲವೇ? ಅವರನ್ನೂ ಕರ್ಕೊಂಡು ಬರಬೇಕಾಗಿತ್ತು’.

‘ಸ್ವಾಮಿಗೆ ‘ಟೆಂಪಲ್ ಕ್ಲೈಂಬ್’ ಮಾಡಕ್ಕಾಗಲ್ಲ. ಆದರೆ ಅವರಪ್ಪ ಬರುತ್ತಿದ್ದರೇನೋ!’

‘ಓಹ್, ಮಾತನಾಡುವ ಗಡಿಬಿಡಿಯಲ್ಲಿ ನಿನಗೆ ಏನು ಬೇಕೆಂದು ಕೇಳಲು ಮರೆತೆ, ಮಗನೇ’

‘ಈ ಕೊರೆಯುವ ಚಳಿಗೆ ಬಿಸಿ ಚಹಾ ಸಿಕ್ಕಿದರೆ ಚೆನ್ನಾಗಿತ್ತು’

‘ನಾನು ಹೇಳಿದ್ದು… ಯಾವ ವರ ಬೇಕೂಂತ’

‘ಶಿವ ಶಿವ! ನನಗೀಗ ಬೇಕಾಗಿರೋದು ವಧು, ವರ ಅಲ್ಲ!’

‘ನೋಡಪ್ಪಾ, ನನಗೆ ನನ್ನ ಸ್ವಂತ ಪುತ್ರ ಗಣೇಶನಿಗೇ ವಧು ಹುಡುಕುವುದಕ್ಕಾಗಲಿಲ್ಲ. ಇನ್ನು ನಿನಗೆ ಹೇಗೆ ಹುಡುಕಲಿ? ಸದ್ಯಕ್ಕೆ ಮದುವೆಯಾಗುವ ಕೆಟ್ಟ ವಿಚಾರ ಬಿಟ್ಟು, ಬೇರೆ ಏನಾದರೂ ಕೇಳು’.

‘ನೊ, ನೋ ಅದನ್ನು ಹಾಗೆಲ್ಲಾ ಅರ್ಜಂಟಾಗಿ ನಿರ್ಧರಿಸೋಕೆ ಆಗಲ್ಲ. ಪಕ್ಷದ ಕೈಕಮಾಂಡಿನಲ್ಲಿ ಚರ್ಚಿಸಬೇಕು’.

‘ನಿನ್ನಷ್ಟು ಮೃದು ಹಿಂದೂ ಭಕ್ತನನ್ನು ನಾನು ಇದುವರೆಗೆ ನೋಡಿಲ್ಲ ಮಗನೇ. ನೀನು ಏನೂ ಕೇಳದಿದ್ದರೂ ಪರವಾಗಿಲ್ಲ. ನಾನೇ ವರ ಕೊಡ್ತೀನಿ. ಮುಂದಿನ ವರ್ಷ ಪ್ರಧಾನಿ ನೀನೇ!’

‘ಓ-ಮೈ-ಗಾಡ್! ನಾನು ಪ್ರಧಾನಿಯಾಗಲ್ಲಪ್ಪಾ! ನನಗೆ ಪ್ರಧಾನಿಯಾಗುವ ಆಸೆಯೇ ಇಲ್ಲ… ಅಯ್ಯಯ್ಯೋ! ದೇಶ ನಡೆಸೋದು ಪಕ್ಷ ನಡೆಸುವಷ್ಟು ಸುಲಭ ಅಂದ್ಕೊಂಡ್ರೇನು? ದಯವಿಟ್ಟು ಈ ವರವನ್ನು ಹಿಂಪಡೆಯಿರಿ’.

‘ಇದೊಳ್ಳೆ ಕತೆಯಾಯಿತಲ್ಲ! ಸರಿ, ನಿನ್ನಿಷ್ಟ’.

‘ಒಂದ್ನಿಮಿಷ… ನಿನ್ನ ಜತೆ ಸೆಲ್ಫಿ ತೆಗೆಯಬೇಕು. ನಾನು ಕೈಲಾಸ ತಲುಪಿದ್ದಕ್ಕೆ ಇದಕ್ಕಿಂತ ಬೇರೆ ಸಾಕ್ಷಿ ಇನ್ನೇನು ಬೇಕು?’

ಶಿವ– ರಾಹುಲ್ ಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತಿದ್ದಂತೆ, ಅದೊಂದು ಕಂಪ್ಯೂಟರ್ ಕಿತಾಪತಿಯೆಂದು ಬಾಜಪ ಮಂದಿ ಗುಟುರು
ಹೊಡೆಯತೊಡಗಿದರು.

ಬರಹ ಇಷ್ಟವಾಯಿತೆ?

 • 10

  Happy
 • 3

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !